ನನ್ನ ವಿಷಯವಾಗಿ ಸ್ವಾಗತ ಭಾಷಣದಲ್ಲಿ ನಾಲ್ಕು ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಅದಕ್ಕಾಗಿ ನನ್ನ ವಂದನೆಗಳು. ಆ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದಾಗ ಒಂದು ವಿಷಯವನ್ನು ಅವರು ಪ್ರಸ್ತಾಪಿಸುತ್ತಾ, ಕಳೆದ ಸುಮಾರು ೨೦-೨೫ ವರ್ಷಗಳಿಂದಲೂ ನನ್ನನ್ನು ಇಲ್ಲಿಗೆ ಬರಮಾಡಿಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದರೆಂದೂ ಆದರೆ ನಾನು ಬರಲಿಲ್ಲವೆಂದೂ ಅರ್ಥ ಬರುವಂತೆ ಮಾತನಾಡಿದ್ದಾರೆ. ನಾನು ನನ್ನ ಬರವಣಿಗೆಯ ಕಾಲದ ಪ್ರಾರಂಭದ ದಶೆಯಲ್ಲಿ ಕನ್ನಡ ನಾಡಿನ ಅನೇಕ ಕಡೆಗಳಿಗೆ-ಕರೆದಲ್ಲಿಗೆ ಹೋಗಿ ಕವನವಾಚನ, ಸಾಹಿತ್ಯವಿಮರ್ಶೆ-ಇವುಗಳನ್ನೆಲ್ಲಾ ಕುರಿತು ಭಾಷಣಮಾಡಿದ್ದುಂಟು. ಸಾವಿರಾರು ಜನರು ೩-೪ ಗಂಟೆಗಳ ಕಾಲ, ನನಗೆ ಆಯಾಸವಾದರೂ ತಮಗೆ ಆಯಾಸವಾಗಲಿಲ್ಲ ಎಂಬಂತೆ ಅದನ್ನು ಕೇಳಿದ್ದುಂಟು. ಆದರೆ ನಾವು ಯಾವುದಾದರೊಂದು ಶಾಶ್ವತವಾದ ಮಹತ್ಕಾರ್ಯವನ್ನು ಸಾಧಿಸಬೇಕು ಎಂದು ಹೊರಟಾಗ, ನಮ್ಮ ಸಮಸ್ತ ಮನಶ್ಯಕ್ತಿ, ದೇಹಶಕ್ತಿ, ಆತ್ಮಶಕ್ತಿ ಎಲ್ಲವೂ ಆ ಮಹತ್ಕಾರ್ಯ ಸಾಧನೆಯಲ್ಲಿ ಕೇಂದ್ರೀಕೃತವಾಗದಿದ್ದರೆ ಆ ಕಾರ್ಯ ಸಿದ್ಧಿಯಾಗುವುದಿಲ್ಲ. ಸಿದ್ಧಿಯಾದರೂ ಅದರಲ್ಲಿ ‘ಮಹತ್’ ಇರುವುದಿಲ್ಲ. ಆದ್ದರಿಂದ ನಾನು ಎಂದು ‘ಶ್ರೀ ರಾಮಾಯಣ ದರ್ಶನಂ’ ಎಂಬ ಮಹಾಕಾವ್ಯವನ್ನು ಬರೆಯಬೇಕೆಂದು ಈಶ್ವರೀ ಸಂಕಲ್ಪದಿಂದ ನಿಶ್ಚಯಿಸಿದೆನೋ ಅಂದಿನಿಂದ ಸುಮಾರು ೧೦-೧೨ ವರ್ಷಗಳ ಕಾಲ ವಾಲ್ಮೀಕ ಪ್ರವೇಶ ಮಾಡಿದ್ದೆ. ವಲ್ಮೀಕ ಎಂದರೆ ಹುತ್ತ; ಹುತ್ತ ಹೊಕ್ಕಿದ್ದೆ ಎಂದು ಅರ್ಥ.

ರಾಮಾಯಣವನ್ನು ಬರೆದ ವಾಲ್ಮೀಕಿಗೆ ಆ ಹೆಸರು ಬಂದಿದ್ದಕ್ಕೆ ಕಾರಣ: ಅವನು ರಾಮನಾಮದ ಧ್ಯಾನದಲ್ಲಿ ಕುಳಿತಿದ್ದಾಗ, ಅವನ ಮೇಲೆ ವಲ್ಮೀಕ ಬೆಳೆಯಿತು; ಕೊನೆಯಲ್ಲಿ ಆ ವಲ್ಮೀಕದಿಂದ ಆತನು ಹೊರಗೆ ಬಂದದ್ದರಿಂದ ವಾಲ್ಮೀಕಿಯಾದ ಎಂದು ಒಂದು ಜನಸಾಮಾನ್ಯದ ಕಥೆ ಇದೆ. ಈ ಕಥೆ ಅಕ್ಷರಶಃ ನಿಜವೋ ಸುಳ್ಳೋ! ಆದರೆ ಇಷ್ಟು ಮಾತ್ರ ನಿಶ್ಚಯ. ಯಾವ ಮಹಾಕವಿಯಾಗಲಿ ತನ್ನ ಮಹಾಕಾವ್ಯವನ್ನು ಸೃಷ್ಟಿಸುವ ಮುನ್ನ ಆತನು ತನ್ನ ಮನಸಸಿನ, ಹೃದಯದ ವಲ್ಮೀಕವನ್ನು ಪ್ರವೇಶಿಸಿ ಅಲ್ಲಿ ತಲ್ಲೀನನಾಗಿದ್ದರೆ ಆತನು ವಾಲ್ಮೀಕಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಕಲಾವಿದನೂ ಇಂಥ ಮಹಾತ್ಕಾರ್ಯವನ್ನು ಸಾಧಿಸುವಾಗ ಹಾಗೆ ಇರಬೇಕಾಗುತ್ತದೆ.

‘ಶ್ರೀ ರಾಮಾಯಣ ದರ್ಶನಂ’ ಕಾವ್ಯ ಬರೆಯಲು ಸುಮಾರು ೯-೧೦ ವರ್ಷ ಹಿಡಿಯಿತು. ಆ ಹತ್ತು ವರ್ಷಗಳ ಕಾವ್ಯತಪಸ್ಸಿನಲ್ಲಿ ನಾನಿದ್ದಾಗ ಎಷ್ಟು ಟೀಕಿಸಿದರೂ ಆಹ್ವಾನಿಸಿದರೂ ಆಕರ್ಷಿಸಿದರೂ ಮೋಹಿಸಿದರೂಯಾವುದಕ್ಕೂ ನನ್ನನ್ನು ಜಗ್ಗಲು ಬಿಡಲಿಲ್ಲ; ಆ ಶಕ್ತಿ ತನ್ನ ಕೆಲಸವನ್ನು ನನ್ನ ಕೈಯಿಂದ ಸಾಧಿಸಿತು. ಬಹುಶಃ ಇಂಥ ಸಾಧನೆಯ ಕಾಲದಲ್ಲಿ ಇತರರು ಜೀವನದ ಸಂತೋಷಗಳು ಎಂದು ಕರೆಯುವ ಅನೇಕ ವಿಷಯಗಳಿಂದ ಕವಿ ವಂಚಿತನಾಗಬೇಕಾಗುತ್ತದೆ. ಆ ರೀತಿಯಲ್ಲಿ ಒಂದು ತ್ಯಾಗವನ್ನು ಒಪ್ಪಿಕೊಳ್ಳದಿದ್ದರೆ ಶ್ರೇಷ್ಠ ಕೃತಿರಚನೆ ಸಾಧ್ಯವಾಗುವುದಿಲ್ಲ.

ತರುವಾಯ ನಾನು ಅನಿರೀಕ್ಷಿತವಾಗಿ ಮೈಸೂರು ವಿಶ್ವವಿದ್ಯಾನಿಲಯದ ವೈಸ್‌ಛಾನ್ಸೆಲರ್ ಆಗಿ ನೇಮಿಸಲ್ಪಟ್ಟೆ. ಇದ್ದಕ್ಕಿದ್ದ ಹಾಗೆ ನನ್ನ ಸ್ವಭಾವಕ್ಕೂ ಸ್ವಧರ್ಮಕ್ಕೂ ಸ್ವಲ್ಪ ದೂರವಾಗಿರುವ ಮತ್ತೊಂದು ರಂಗಕ್ಕೆ ಕಾಲಿಡಬೇಕಾಯಿತು. ನನ್ನ ಯಶಸ್ಸಿನ ವಿಚಾರದಲ್ಲಿ ಇತರರಿಗೂ, ಅನೇಕ ಮಿತ್ರರಿಗೂ ಕೂಡ, ಬಹಳ ಆಶಂಕೆ ಇತ್ತು. ಅವರೆಲ್ಲರಿಗಿಂತ ಹೆಚ್ಚಾಗಿ ನನಗೇ ಆ ವಿಚಾರದಲ್ಲಿ ತುಂಬಾ ಆಶಂಕೆಯಿತ್ತು. ಆದರೆ ನಮ್ಮಲ್ಲಿರುವ ಶಕ್ತಿ ಯಾವ ಕಾರ್ಯರಂಗಕ್ಕೆ ಮನಃಪೂರ್ವಕವಾಗಿ ಇಳಿದರೂ ತನ್ನ ಕೆಲಸವನ್ನು ಸಾಧಿಸುತ್ತದೆ. ಅದರಲ್ಲಿಯೂ ನಾವು ಎಷ್ಟರಮಟ್ಟಿಗೆ ನಮಗಿಂತಲೂ ಮೇಲಿರುವ ಮತ್ತೊಂದು ಶಕ್ತಿಯನ್ನು ನೆಮ್ಮಿ ಕೆಲಸಕ್ಕೆ ಹೊರಡುತ್ತೇವೆಯೋ ಅಷ್ಟರಮಟ್ಟಿಗೆ ಅದರ ಭಾರವನ್ನೆಲ್ಲಾ ಆ ಶಕ್ತಿಯೇ ವಹಿಸಿಕೊಂಡು ಸೇವೆ ಮಾಡಿಸಿಕೊಳ್ಳುತ್ತದೆ. ಆದಾದ ತರುವಾಯ ಅನಿವಾರ್ಯವಾಗಿ ನಾನು ಸಭೆಗಳಲ್ಲಿ ಸಮಿತಿಗಳಲ್ಲಿ ಪ್ರತಿದಿನವೂ ಭಾಗವಹಿಸಬೇಕಾಗಿ ಬಂತು. ಸುಮಾರು ಮೂರು ಮೂರೂವರೆ ವರ್ಷಗಳಿಂದ ನಾನು ಯಾವ ಗುರುತರವಾದ ಲೇಖನ ಕಾರ್ಯವನ್ನೂ ಮಾಡಿಲ್ಲ. ಇದನ್ನು ಯೋಚನೆ ಮಾಡಿದಾಗ ನನಗೂ ನನ್ನ ಕೆಲವು ಮಿತ್ರರಿಗೂ ಒಮ್ಮೊಮ್ಮೆ ತುಂಬಾ ದುಃಖವಾಗುವುದೂ ಉಂಟು. ಯಾವ ಪರಿಣತ ವಯಸ್ಸಿನಲ್ಲಿ, ಪರಿಪಕ್ವ ಮನಸ್ಸಿನ ಸ್ಥಿತಿಯಲ್ಲಿ, ಎಂಥ ಉತ್ಕೃಷ್ಟ ಕೃತಿಗಳನ್ನು ನಾವು ರಚಿಸಬಹುದಾಗಿತ್ತೋ ಆ ಸಮಯದಲ್ಲಿ, ಒಬ್ಬ ದ್ವಿತೀಯ ವರ್ಗದ ವ್ಯಕ್ತಿಯೂ ಮಾಡಬಹುದಾದ ಈ ಕೆಲಸ ಬಂದಿತು. ಇದಕ್ಕೇನೂ ಅಂಥ ಮಹತ್ತರವಾದ ಪ್ರತಿಭಾಶಕ್ತಿ ಅನಾವಶ್ಯಕ. ಪ್ರತಿಭೆ ದುರ್ವ್ಯಯವಾಗಿ ಹೋಯಿತಲ್ಲಾ ಎಂಬ ದುಃಖ ಒಂದೊಂದು ಸಾರಿ ಇಣುಕುತ್ತದೆ. ಆದರೆ ದೇವರ ಸಂಕಲ್ಪದಲ್ಲಿ ನಂಬಿಕೆ ಇರುವ ಚೇತನಕ್ಕೆ ಒಂದು ಸಮಾಧಾನವೂ ಆಗುತ್ತದೆ. ಇದಕ್ಕೂ ಕೂಡ ಒಂದು ಅರ್ಥವಿದೆ. ನಮ್ಮ ದೇಶ, ಸ್ವಾತಂತ್ರ್ಯ ಬಂದ ತರುವಾಯ ನಾನಾ ದಿಕ್ಕುಗಳಲ್ಲಿ ಮುಂದುವರಿಯುತ್ತಿದೆ. ವಿದ್ಯುಚ್ಛಕ್ತಿ ಉತ್ಪಾದನೆಗಾಗಿ ನದಿಗಳನ್ನು ಅಡ್ಡ ಕಟ್ಟಿದ್ದಾರೆ. ವ್ಯವಸಾಯದ ಕಾರ್ಯಗಳನ್ನು ಸಾಧಿಸುವುದಕ್ಕಾಗಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡುತ್ತಿದ್ದೇವೆ. ಉಕ್ಕು ಮೊದಲಾದುವುಗಳನ್ನು ಸಿದ್ದಮಾಡಲು ಮಹಾಮಹಾ ಕಾರ್ಖಾನೆಗಳನ್ನು ತಯಾರು ಮಾಡುತ್ತಿದ್ದೇವೆ. ಜೀವನದ ಎಲ್ಲ ರಂಗಗಳಲ್ಲಿಯೂ ಒಂದು ಸಾಹಸ ಕಾಣುತ್ತಿದೆ.

ಲೌಕಿಕವಾಗಿ ನಾವು ಒಂದು ಕ್ಷೇಮರಾಜ್ಯವಾಗಬೇಕು; ನಾವೆಲ್ಲರೂ ಲೌಕಿಕ ಕ್ಷೇಮವನ್ನು ಸಾಧಿಸಬೇಕು; ನಮ್ಮದೊಂದು ಲೌಕಿಕ ರಾಜ್ಯ (Secular State) ಎಂಬ ಹಟದಿಂದ ನಾವು ಮುಂದುವರಿಯುತ್ತಿದ್ದೇವೆ. ಆದರೆ ನಾವು ಎಷ್ಟೇ ಕಾರ್ಖಾನೆಗಳನ್ನು ಕಟ್ಟಲಿ, ಎಷ್ಟೇ ನದಿಗಳಿಗೆ ಅಡ್ಡಕಟ್ಟೆಯನ್ನೇ ಹಾಕಲಿ, ಎಷ್ಟೇ ವಿದ್ಯುಚ್ಚಕ್ತಿ ಉತ್ಪಾದಿಸಲಿ, ಅದನ್ನೆಲ್ಲಾ ಬಳಸಿಕೊಳ್ಳುವ ವ್ಯಕ್ತಿಗಳನ್ನು ಸತ್ವ ಪೂರ್ಣರನ್ನಾಗಿ ಮಾಡದಿದ್ದರೆ ಆ ವಿದ್ಯುಚ್ಛಕ್ತಿಯನ್ನು ಬಳಸುವ ವ್ಯಕ್ತಿಯ ಮನಸ್ಸಿನ ಚಿಚ್ಛಕ್ತಿ-ಅದು ನೀರಿನ ಶಕ್ತಿ; ಇದು ಮನಸ್ಸಿನ ಶಕ್ತಿ; -ಈ ಶಕ್ತಿಯನ್ನು ನಾವು ಉದ್ದೀಪನ ಮಾಡದಿದ್ದರೆ, ಅದನ್ನು ಸರಿಯಾದ ದಾರಿಯಲ್ಲಿ ಹೋಗುವಂತೆ ರಚಿಸದಿದ್ದರೆ, ಅದಕ್ಕೆ ಕಾಂತಿಯನ್ನು ಕೊಡದಿದ್ದರೆ, ಅದರ ಅಧೈರ್ಯವನ್ನು ಪರಿಹರಿಹರಿಸದಿದ್ದರೆ, ಅದಕ್ಕೆ ತೇಜಸ್ಸನ್ನು ದಾನ ಮಾಡದಿದ್ದರೆ ನಾವು ಉತ್ಪಾದನೆ ಮಾಡಿದ ವಿದ್ಯುಚ್ಛಕ್ತಿ ದುರ್ವ್ಯಯವಾಗುತ್ತದೆ. ಅದರಿಂದ ಜೀವನ ಅಸಾರ್ಥಕವಾದೀತು. ಲೌಕಿಕ ಕ್ಷೇಮಗಳನ್ನು ಸಾಧಿಸುವುದಕ್ಕೆ ನಾವು ಕೈಗೊಂಡಿರುವ ಎಲ್ಲ ಕೆಲಸಗಳೂ ನಡೆಯಬೇಕು, ನಡೆಯುತ್ತಿವೆ. ಆದರೆ ಅವುಗಳನ್ನೆಲ್ಲಾ ಉಪಯೋಗಿಸಿ ಸುಖ ಶಾಂತಿಗಳನ್ನು ಅನುಭವಿಸುವ ಚೇತನ ಅದಕ್ಕೆ ಸಿದ್ಧವಾಗದಿದ್ದರೆ ಎಷ್ಟು ವಿದ್ಯುಚ್ಛಕ್ತಿ ಇದ್ದರೇನು? ಎಷ್ಟು ಬಟ್ಟೆ ಇದ್ದರೇನು? ಎಷ್ಟು ಊಟ ತಿಂಡಿ ಇದ್ದರೇನು? ಇವನಿಗೆ ಆರೋಗ್ಯವಿಲ್ಲದಿದ್ದರೆ, ಮನಶ್ಯಾಂತಿ ಇಲ್ಲದಿದ್ದರೆ, ಇವನು ಮಾನಸಿಕವಾಗಿ ಹೃದಯದಲ್ಲಿ ಕುಬ್ಜನಾಗಿದ್ದರೆ, ಏನು ದೊಡ್ಡದನ್ನು ತಾನೆ ಸಾಧಿಸಬಲ್ಲನು? ಆದ್ದರಿಂದ ನಮ್ಮ ಕೇಂದ್ರ ಸರ್ಕಾರ, ವಿಶ್ವವಿದ್ಯಾನಿಲಯಗಳು, ಇತರ ವಿದ್ಯಾ ಸಂಸ್ಥೆಗಳು ಎಲ್ಲರೂ ಇದನ್ನು ಮನಗಂಡು ನಮ್ಮ ದೇಶ ಅಣೆಕಟ್ಟುಗಳನ್ನು ಕಾರ್ಖಾನೆಗಳನ್ನು ಎಷ್ಟರ ಮಟ್ಟಿಗೆ ಕಟ್ಟುತ್ತದೆಯೊ, ಅದಕ್ಕಾಗಿ ಎಷ್ಟು ಧನ ವ್ಯಯಮಾಡುತ್ತದೆಯೊ, ಅಷ್ಟಲ್ಲದೆ ಇದ್ದರೂ ಅದರಲ್ಲಿ ಸ್ವಲ್ಪ ಪಾಲನ್ನಾದರೂ ನಾವು ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ ಇವುಗಳ ಬೆಳವಣಿಗೆಗೆ, ಇವುಗಳ ಉದ್ಧಾರಕ್ಕೆ ವೆಚ್ಚ ಮಾಡಬೇಕೆಂದು ನಿರ್ಧರಿಸಿವೆ. ಇದಕ್ಕಾಗಿ ಅನೇಕ ಸಂಸ್ಥೆಗಳನ್ನು ಸೃಷ್ಟಿಸಿವೆ. ನೀವು ಕೇಂದ್ರ ಸರಕಾರ ನಿರ್ಮಿಸಿರುವ ಸಾಹಿತ್ಯ ಅಕಾಡೆಮಿಯ ವಿಚಾರವೆತ್ತಿ ನನಗೆ ದೊರೆತ ಅದರ ಬಹುಮಾನದ ವಿಚಾರವನ್ನು ತಿಳಿಸಿದಿರಿ. ಅದೂ ಕೂಡ ಅಂಥದೆ ಒಂದು ಸಂಸ್ಥೆ. ಈ ರೀತಿಯ ಪ್ರೋತ್ಸಾಹ ಕೊಡುವುದಕ್ಕಾಗಿ ಹುಟ್ಟಿರುವುದು. ಹಾಗೆಯೆ ವಿಶ್ವವಿದ್ಯಾನಿಲಯಗಳು ದೇಶದ ಪುರೋಗಮನದ ಮೋಟಾರುಕಾರಿನ ಮುಂದಿನ ದೀಪಗಳಿದ್ದ ಹಾಗೆ. ಏಕೆಂದರೆ ಆ ರೀತಿಯಲ್ಲಿ ಮುಂದನ್ನು ಬೆಳಗುತ್ತಾ ಹೋಗದಿದ್ದರೆ ನಾವು ಹೋಗುವ ಕಾರು ಎಲ್ಲಿಯೊ ಮಗುಚಿಕೊಳ್ಳಬಹುದು, ಎಲ್ಲಿಯೊ ಕಲ್ಲಿಗೆ ಡಿಕ್ಕಿ ಹೊಡೆಯಬಹುದು, ಏನು ಬೇಕಾದರೂ ಆಗಬಹುದು. ಅದರಿಂದ ವಿದ್ಯೆಯೆಂಬ ದೀಪವನ್ನು ಎಲ್ಲರ ಹೃದಯಗಳಲ್ಲೂ ಹೊತ್ತಿಸಬೇಕು. ಈ ತಿಳಿವಳಿಕೆಯನ್ನು ಎಲ್ಲರಿಗೂ ತಂದು ಕೊಡಬೇಕು ಎನ್ನುವುದು ಉದ್ದೇಶ. ಎಂದರೆ ಈ ವಿಶ್ವವಿದ್ಯೆ ಎಂದು ಣಾವು ಯಾವುದನ್ನು ಕರೆಯುತ್ತೇವೆಯೊ-Education and culture that Universities can give-ಅದು ಜನಸಾಮಾನ್ಯರಿಗೆಲ್ಲಾ ಬೆಳಕಾಗಬೇಕು. ಈ ವಿಶ್ವವಿದ್ಯೆಯಿಂದ ಜನತೆಯ ವಿಶ್ವಪ್ರಜ್ಞೆ ಮೂಡಬೇಕು. ನಾನು ಈ ಸೂತ್ರಪ್ರಾಯವಾಗಿ ಹೇಳುವುದನ್ನು ನಾಲ್ಕು ಮಾತುಗಳಲ್ಲಿ ಆಮೇಲೆ ವಿವರಿಸುತ್ತೇನೆ. ವಿಶ್ವವಿದ್ಯೆ ನಮಗೆ ಬರಬೇಕು. ಆ ವಿದ್ಯೆಯಿಂದ ವಿಶ್ವಪ್ರಜ್ಞೆ ಉಂಟಾಗಬೇಕು. ಜಗತ್ತೆಲ್ಲಾ ಒಂದಾಗುತ್ತಿರುವ ಈ ಸಮಯದಲ್ಲಿ, ಯುದ್ಧವನ್ನು ಯಾವ ದೇಶವಾದರೂ ಬಯಸಿದರೆ ಎಲ್ಲ ದೇಶಗಳೂ ಸರ್ವನಾಶವಾಗುವ ಈ ಸಮಯದಲ್ಲಿ, ಈ ವಿಶ್ವವಿದ್ಯೆ ಅದರಿಂದ ಉಂಟಾಗುವ ವಿಶ್ವಪ್ರಜ್ಞೆ, ಅದರಿಂದ ಉಂಟಾಗುವ ವಿಶ್ವಮೈತ್ರಿ-ಇದು ಎಲ್ಲದಕ್ಕಿಂತಲೂ ಅತ್ಯಂತ ಆವಶ್ಯಕವಾಗಿದೆ. ಎಲ್ಲ ಶಕ್ತಿಗಳಿಗಿಂತಲೂ ಅತ್ಯಂತ ಆವಶ್ಯಕವಾಗಿರುವ ಶಕ್ತಿ, ನಮ್ಮ ಪ್ರಪಂಚವನ್ನು ಬದುಕಿಸುವ ಶಕ್ತಿ ವಿಶ್ವಮೈತ್ರಿ. ಈ ವಿಶ್ವವಿದ್ಯೆಯಿಂದ ವಿಶ್ವಪ್ರಜ್ಞೆ, ಅದರಿಂದ ಈ ವಿಶ್ವಮೈತ್ರಿ. ಅಂಥ ವಿಶ್ವಮೈತ್ರಿಯನ್ನು ಪಡೆದ ಮಾನವ ವಿಶ್ವಮಾನವ. ಇಂಥ ವಿಶ್ವಮಾನವನ್ನು ಸೃಷ್ಟಿಸುವ ನಿಲಯಗಳೆ ವಿಶ್ವವಿದ್ಯಾನಿಲಯಗಳಾಗಬೇಕು. ಇದು ನಮ್ಮ ಆದರ್ಶ; ನಮ್ಮ ಗುರಿ. ಆದರೆ ನಾವು ಎಷ್ಟೇ ಶೀಘ್ರವಾಗಿ ಈ ಆದರ್ಶಗಳನ್ನು ಮುಟ್ಟಬೇಕು, ಈ ಗುರಿಯನ್ನು ಸಾಧಿಸಬೇಕು ಎಂದು ಬಯಸಿದರೂ, ವಾಸ್ತವದಲ್ಲಿ ಇದನ್ನು ನಿಧಾನವಾಗಿ ಕಷ್ಟಪಟ್ಟು ವರ್ಷವರ್ಷಗಳೂ ಬಿಡದೆ, ನಿರಾಶರಾಗದೆ, ಕೆಲಸ ಮಾಡಿ ಕಟ್ಟಬೇಕಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ವಿಶ್ವವಿದ್ಯಾನಿಲಯಗಳೆಂದರೆ ದೊಡ್ಡ ದೊಡ್ಡ ಡಿಗ್ರಿಗಳನ್ನು ಕೊಟ್ಟು ಉತ್ತಮವಾದ ಹುದ್ದೆಗಳಿಗೆ ವ್ಯಕ್ತಿಗಳನ್ನು ತಯಾರು ಮಾಡುವ ಒಂದು ರೀತಿಯಾದ ಕಾರ್ಖಾನೆಗಳು ಎನ್ನುವ ಭಾವನೆ ಇತ್ತು. ಆ ಭಾವನೆಯಿಂದ ಕೆಲಸ ಮಾಡಿದರೂ ನಮ್ಮ ಸುದೈವದಿಂದ ಅಂಥ ಕಾರ್ಖಾನೆಗಳಿಂದಲೂ ನಿಜವಾಗಿಯೂ ಉಜ್ವಲವಾದ ಹಲವಾರು ವ್ಯಕ್ತಿಗಳು-ವಿಜ್ಞಾನದಲ್ಲಿ, ಸಾಹಿತ್ಯದಲ್ಲಿ, ತತ್ತ್ವಶಾಸ್ತ್ರದಲ್ಲಿ, ರಾಜಕೀಯದಲ್ಲಿ ಎಲ್ಲದರಲ್ಲಿಯೂ ಮುಂದುವರಿದು ಪ್ರಪಂಚಕ್ಕೇ ಕೀರ್ತಿಯನ್ನು ತರುವಂಥ ವ್ಯಕ್ತಿಗಳು ನಿರ್ಮಾಣವಾದರು. ಇಂದು ವಿಶ್ವವಿದ್ಯಾನಿಲಯಗಳ ಗುರಿ ಸರಕಾರದ ಅಧಿಕಾರಿವರ್ಗವನ್ನು ತಯಾರಿಸುವುದು ಮಾತ್ರವೆ ಅಲ್ಲ, ಇನ್ನೂ ಮಹತ್ತಾದುದು. ಅದಕ್ಕೋಸ್ಕರವೆ ಕೇಂದ್ರ ಸರಕಾರ ವಿಶ್ವವಿದ್ಯಾನಿಲಯಗಳ ಧನಸಹಾಯದ ಒಂದು ಆಯೋಗವನ್ನು ನಿರ್ಮಿಸಿ, ಅದಕ್ಕೆ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು, ಈ ವಿಶ್ವವಿದ್ಯೆಯನ್ನು ನಾವು ಹೇಗೆ ಪ್ರವರ್ಧಮಾನವನ್ನಾಗಿ ಮಾಡಬೇಕು ಎನ್ನುವುದರ ಕಡೆ ಗಮನ ಹರಿಸಿವೆ.

ಪ್ರಾಥಮಿಕ ಶಾಲೆಗಳಲ್ಲಿ, ಪ್ರೌಢಶಾಲೆಗಳಲ್ಲಿ ಕಷ್ಟಪಟ್ಟು ಓದಿ ತೇರ್ಗಡೆ ಹೊಂದಿ ಅಲ್ಲಿಂದ ವಿಶ್ವವಿದ್ಯಾನಿಲಯಕ್ಕೆ ಹೋಗಬೇಕು. ಅದಕ್ಕೆ ಬೇಕಾದಂಥ ಧನಸಂಪತ್ತಿ ಬೇಕು, ಪ್ರಭಾವಸಂಪತ್ತಿ ಬೇಕು, ಇಂಥವರಿಗೆ ಮಾತ್ರ ವಿಶ್ವವಿದ್ಯಾನಿಲಯದ ಓದು ಸಾಧ್ಯ. ಕಾಲೇಜುಗಳು ಎಲ್ಲ ಕಡೆಯಲ್ಲಿಯೂ ಇಲ್ಲ, ಕೆಲವು ಕೇಂದ್ರಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ-ಕೆಲವು ನಗರಗಳಲ್ಲಿ ಮಾತ್ರ ಅಂಥ ಕಾಲೇಜುಗಳು, ವಿಶ್ವವಿದ್ಯಾನಿಲಗಳು ಇವೆ. ಅಲ್ಲಿಗೆ ಹೋಗಬೇಕು. ನಾವೇನೋ ವಿಶ್ವವಿದ್ಯಾನಿಲಯಗಳಲ್ಲಿ ನೂಕುನುಗ್ಗಲು ಜಾಸ್ತಿಯಾಗಿದೆಯೆಂದು ಗೊಣಗುತ್ತಿದ್ದೇವೆ. ಏಕೆಂದರೆ ಸರಿಯಾದ ಸ್ಥಳವಿಲ್ಲ; ಸರಿಯಾದ ಸಾಧನ ಸಂಪತ್ತುಗಳಿಲ್ಲ; ಸರಿಯಾದ ಸಲಕರಣೆಗಳಿಲ್ಲ. ಆದ್ದರಿಂದ ನಾವು ಹಾಗೆ ಹೇಳುತ್ತೇವೆ. ಆದರೆ ನಮ್ಮ ದೇಶದ ಜನಸಂಖ್ಯೆಯನ್ನು ನಾವು ಲೆಕ್ಕಕ್ಕೆ ತೆಗೆದುಕೊಂಡರೆ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಸಂಖ್ಯೆ ಅತ್ಯಲ್ಪವಾದ ಸಂಖ್ಯೆ. ವಾಸ್ತವವಾಗಿ ಜನಸಂಖ್ಯೆಗೂ ವಿದ್ಯಾರ್ಥಿ ಸಂಖ್ಯೆಗೂ ಇರುವ ಒಂದು ತಾರತಮ್ಯವನ್ನು ನಾವು ಗಮನಿಸುತ್ತಿಲ್ಲ. ಇತರ ದೇಶಗಳನ್ನು ನಾವು ನೋಡಿದಾಗ ನಮ್ಮ ವಿದ್ಯಾವಂತರ ಸಂಖ್ಯೆ ಬಹುಕಡಿಮೆಯೆಂದು ಅರ್ಥವಾಗುತ್ತದೆ. ನಮ್ಮಲ್ಲಿ ಲಕ್ಷೋಪಲಕ್ಷ ಜನ ಎಂದೆಂದಿಗೂ ವಿಶ್ವವಿದ್ಯಾನಿಲಯದ ಮೆಟ್ಟಲನ್ನೂ ಕೂಡ ಹತ್ತಲಾರರು. ಅನೇಕರಿಗೆ ವಿದ್ಯೆ ಬರಿಯ ನೈವೇದ್ಯ. ಹೀಗಿರುವಾಗ ವಿಶ್ವವಿದ್ಯಾನಿಲಯಕ್ಕೆ ಬರತಕ್ಕವರೆಷ್ಟು? ಅವರೆಲ್ಲಾ ಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ತಂತಮ್ಮ ಉದ್ಯೋಗಗಳಲ್ಲಿ ಬೆರೆಯುತ್ತಾರೆ. ಈಗ ಅವರಲ್ಲಿ ಅನಕ್ಷರಸ್ಥರಿಗೆ ಅಕ್ಷರವನ್ನಾದರೂ ಕಲಿಸಿ ಸ್ವಲ್ಪಮಟ್ಟಿಗೆ ಓದುಬರಹ ಕಲಿಸಬೇಕೆಂಬ ಪ್ರಯತ್ನ ವಯಸ್ಕರ ಶಿಕ್ಷಣ ಸಂಸ್ಥೆ ಎಂಬ ಹೆಸರಿನಿಂದ (ಬಹುಶಃ ಕೊಡಗಿನಲ್ಲಿಯೂ ಇದೆ) ನಡೆಯುತ್ತಿದೆ. ವಯಸ್ಸಾದವರಿಗೆ ಏನೋ ಒಂದು ನಾಲ್ಕು ಅಕ್ಷರ ಕಲಿಸಿ ಸಹಾಯ ಮಾಡೋಣ ಎಂಬ ಈ ಪ್ರಯತ್ನ ಬಹಳ ಕೆಳಗಡೆ ನಡೆಯತಕ್ಕಂಥದ್ದು. ವಿಶ್ವವಿದ್ಯಾನಿಲಯ ಈ ಕೆಲಸವನ್ನು ಹೇಗೆ ಮಾಡಬಲ್ಲದು?

ನಾನು ನಮ್ಮ ವಿಶ್ವವಿದ್ಯಾನಿಲಯವನ್ನು ಮೂರು ಮುಖ್ಯ ಅಂಗಗಳನ್ನಾಗಿ ಭಾವಿಸಿದ್ದೇನೆ. ಒಂದು ಸಂಶೋಧನಾಂಗ, ಇನ್ನೊಂದು ಬೋಧನಾಂಗ, ಮತ್ತೊಂದು ಪ್ರಸಾರಾಂಗ.

ಈ ಸಂಶೋಧನಾಂಗ ಎನ್ನುವುದು, ಎಲ್ಲಿಯೊ ಕೆಲವು ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ವಿಜ್ಞಾನ ವಿಷಯಗಳನ್ನು, ಸಾಹಿತ್ಯ ವಿಷಯಗಳನ್ನು ಅಧ್ಯಯನ ಮಾಡಿ, ಎಂ.ಎ., ಪಿಎಚ್.ಡಿ. ಮುಂತಾದ ಡಿಗ್ರಿಗಳನ್ನು ತೆಗೆದುಕೊಂಡವರು, ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯತಕ್ಕದ್ದು; ಜ್ಞಾನದ ದಿಗಂತವನ್ನು ವಿಸ್ತರಿಸತಕ್ಕದ್ದು; ಮನುಷ್ಯನ ಜ್ಞಾನದ ಮಟ್ಟವನ್ನು ಮೇಲಕ್ಕೆ ಕೊಂಡೊಯ್ಯತಕ್ಕದ್ದು. ಈ ಸಂಶೋಧನಾಂಗದಲ್ಲಿ ಕೆಲಸಮಾಡತಕ್ಕವರು ಬಹು ಸ್ವಲ್ಪ ಜನ ಮಾತ್ರ. ಹೆಚ್ಚು ಜನ ಕೆಲಸ ಮಾಡತಕ್ಕದ್ದೆಂದರೆ ಬೋಧನಾಂಗ. ಬೋಧನಾಂಗದ ಕೆಲಸ, ಸಾಮಾನ್ಯವಾಗಿ ಹೇಳುವುದಾದರೆ, ಪಾಠ ಹೇಳಿಕೊಡುವುದು. ಸಂಶೋಧನಾಂಗದ ಕೆಲಸ ವಿಶ್ವಜ್ಞಾನವನ್ನು ಬೆಳೆಯುವುದು, ತಿಳಿಯುವುದು. ಬೋಧನಾಂಗದ ಕೆಲಸ ಆಗಲೆ ಸಂಗ್ರಹವಾಗಿರುವ ಜ್ಞಾನವನ್ನು ಹಂಚತಕ್ಕದ್ದು. ಈ ಬೋಧನಾಂಗದ ಕೆಲಸವನ್ನು ಬಿಟ್ಟರೆ ನಾವು ಮತ್ತೊಮ್ಮೆ ಪ್ರಾಚೀನ ಮಾನವನ ಮಟ್ಟಕ್ಕೆ ಹೋಗಬೇಕಾಗುತ್ತದೆ. ಮೂರನೆಯದೆ ಈ ಪ್ರಸಾರಾಂಗದ ಕೆಲಸ. ಇವೆರಡಕ್ಕೂ ಮಿಗಿಲಾದದ್ದು.  ನಮಗೆ ಈಗತಾನೆ ಸ್ವಾತಂತ್ರ್ಯ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ಜನ ಮುಂದುವರಿಯಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಹಾಗೆ ಮುಂದೆ ಹೋಗಬೇಕಾದರೆ ಅದಕ್ಕೆ ತಕ್ಕ ಪರಿಜ್ಞಾನ ಆವಶ್ಯಕ. ಉದಾಹರಣೆಗಾಗಿ ಒಬ್ಬ ರೈತನು ಉತ್ತಮವಾದ ಬೆಳೆಯನ್ನು ತೆಗೆಯಬೇಕಾದರೆ ಅವನಿಗೆ ವೈಜ್ಞಾನಿಕ ಜ್ಞಾನ ಅಗತ್ಯ. ಆ ಜ್ಞಾನವನ್ನು ಪಡೆದಾಗ ಹೊರದೇಶದಿಂದ ತಂದ ಸಲಕರಣೆಗಳನ್ನೆಲ್ಲಾ ಉಪಯೋಗಿಸಿಕೊಂಡು ಉತ್ತಮವಾದ ಬೆಳೆಯನ್ನು ತೆಗೆಯುತ್ತಾರೆ. ಇಂದು ನಮ್ಮ ಜೀವನದಲ್ಲಿ ವಿಜ್ಞಾನ ಅನಿವಾರ್ಯವಾಗುತ್ತಾ ಇದೆ. ಇದನ್ನು ಜನಸಾಮಾನ್ಯರಿಗೆ ದೊರಕಿಸಿಕೊಡಬೇಕು. ಇದು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಸಾಧ್ಯವಾಗುತ್ತದೆಯೆಂದು ನನ್ನ ಭಾವನೆ. ಯಾವ ದೃಷ್ಟಿಯಿಂದ ವಿದ್ಯೆಯನ್ನು ನಾವು ಕಲಿತೆವೋ ಆ ದೃಷ್ಟಿಯಿಂದ ಆ ವಿದ್ಯೆಯನ್ನು ವಿಶ್ವವಿದ್ಯಾನಿಲಯ ಮನೆಮನೆಗೆ ತೆಗೆದುಕೊಂಡು ಹೋಗಬೇಕು; ಹಳ್ಳಿಹಳ್ಳಿಗಳಿಗೆ, ಸಣ್ಣ ಸಣ್ಣಗ್ರಾಮಗಳಿಗೆ ತೆಗೆದುಕೊಂಡು ಹೋಗಬೇಕು; ಯಾರು ಯಾರು ಕರೆದರೆ ಅಲ್ಲಲ್ಲಿಗೆ ಹೋಗಬೇಕು-ವಿಷಯಗಳನ್ನು ಹೇಳಬೇಕು. ಜನತೆಯ ಚೇತನವನ್ನು ವೈಜ್ಞಾನಿಕವನ್ನಾಗಿ ಮಾಡುವುದಕ್ಕೆ, ಇಡೀ ಜನತೆಯ ಚೇತನಕ್ಕೆ ಒಂದು ಶಕ್ತಿಯನ್ನು ಕೊಡುವುದಕ್ಕೆ ಈ ಬಗೆಯ ಕೆಲಸವನ್ನೆಲ್ಲಾ ಮಾಡಬೇಕಾಗುತ್ತದೆ. ವಿಶ್ವವಿದ್ಯಾನಿಲಯವನ್ನು ಮನೆ ಮನೆಗೆ ಕೊಂಡೊಯ್ಯಬೇಕಾಗಿದೆ. ಪವಿತ್ರವಾದ ಈ ಕೆಲಸವನ್ನು ನಮ್ಮ ವಿಶ್ವವಿದ್ಯಾನಿಲಯ ೨೦ ವರ್ಷಗಳ ಹಿಂದೆಯೆ ಕೈಗೊಂಡಿತು. ಆದರೆ ಆಗ ಅತ್ಯಂತ ಸಣ್ಣ ಪ್ರಮಾಣದಲ್ಲಿದ್ದ ಈ ಪ್ರಸಾರಂಗ ಈಗ ಬೆಳೆದು ೨-೩ಲಕ್ಷ ರೂಪಾಯಿಗಳನ್ನು ಖರ್ಚುಮಾಡುವ ಒಂದು ದೊಡ್ಡ ಸಂಸ್ಥೆಯಾಗಿದೆ. ಪ್ರಾಚಾರೋಪನ್ಯಾಸಗಳನ್ನು ಏರ್ಪಡಿಸುವುದು, ಪ್ರಚಾರಮಾಲೆಯ ಗ್ರಂಥಗಳನ್ನು ಪ್ರಕಟಿಸುವುದು, ಅದಕ್ಕೆ ಅಗತ್ಯವಾದ ಮುದ್ರಣಾಲಯವನ್ನು ನಡೆಸುವುದು-ಇತ್ಯಾದಿ ಕೆಲಸಗಳನ್ನು ಕ್ರಮಬದ್ಧವಾಗಿ ಮಾಡುತ್ತಿದೆ. ನಮ್ಮ ಅಧ್ಯಾಪಕ ವರ್ಗದವರು ಈ ಇಪ್ಪತ್ತು ವರ್ಷಗಳಲ್ಲಿ ಭರತಖಂಡದ ಇನ್ನಾವ ವಿಶ್ವವಿದ್ಯಾನಿಲಯವೂ ಸಾಧಿಸದೆ ಇರುವ ಕೆಲಸವನ್ನು ಸಾಧಿಸಿದ್ದಾರೆ. ಎಂದರೆ ಗಹನವಾದ ವೈಜ್ಞಾನಿಕ ವಿಷಯಗಳನ್ನು ಸಾಮಾನ್ಯ ಜನ ತಿಳಿಯುವಂತೆ ಕನ್ನಡದಲ್ಲಿ ಹೇಲಿ, ಪುಸ್ತಕಗಳನ್ನು ಬರೆದುಕೊಟ್ಟಿದ್ದಾರೆ. ಆ ಪುಸ್ತಕಗಳು ಸುಮಾರು ನೂರಾರು ಅಚ್ಚಾಗಿ ಲಕ್ಷಾಂತರ ಖರ್ಚಾಗಿವೆ. ಈ ಕೆಲಸ ಕ್ರಮಬದ್ಧವಾಗಿ ನಡೆಯುತ್ತಿದೆ. ಜನತೆ ಅದಕ್ಕೆ ಬೆಂಬಲ ಕೊಡಬೇಕು. ಯಾವುದು ಪೂರ್ವದಲ್ಲಿ ವಿಶ್ವವಿದ್ಯಾನಿಲಯದ ವಿದ್ಯೆಯಾಗಿತ್ತೋ ಅದು ಈಗ ಜನತೆಗೆ ದೊರಕುತ್ತಿದೆ. ಆ ವಿದ್ಯೆ ವಿಜ್ಞಾನದ ರೀತಿಯಲ್ಲಿ ದೊರಕುತ್ತಿದೆ, ಸಾಹಿತ್ಯದ ರೂಪದಲ್ಲಿ ದೊರಕುತ್ತಿದೆ. ಏಕೆಂದರೆ ನಾನು ಹೇಳಿದ ಹಾಗೆ ವಿಜ್ಞಾನ ನಮ್ಮ ಲೌಕಿಕ ಕ್ಷೇಮಕ್ಕೆ ಅತ್ಯಂತ ಆವಶ್ಯಕವಾದುದು. ಆದರೆ ಆ ಲೌಕಿಕ ಕ್ಷೇಮಕ್ಕಿಂತಲೂ ಹೆಚ್ಚಿನ ಕ್ಷೇಮ ಮತ್ತೊಂದು ಇದೆ. ಅದು ಆಧ್ಯಾತ್ಮಿಕ ಕ್ಷೇಮ. ಆ ಆಧ್ಯಾತ್ಮಿಕ ಕ್ಷೇಮಕ್ಕಾಗಿ ಉತ್ತಮ ಸಾಹಿತ್ಯಜ್ಞಾನ ಬೆಳೆಯಬೇಕು. ಆದ್ದರಿಂದ ವಿಜ್ಞಾನ ಶಕ್ತಿ, ಕಲಾಶಕ್ತಿ ಇವೆರಡೂ ನಮ್ಮಲ್ಲಿ ಬೆಳೆಯಬೇಕು. ಆ ರೀತಿಯಲ್ಲಿ ಕೆಲಸವನ್ನು ಕೈಕೊಂಡಿದೆ. ನಾನು ಆಗಲೆ ಹೇಳಿದಂತೆ ಈ ವಿಶ್ವವಿದ್ಯಾನಿಲಯದಲ್ಲಿ ವಿಶ್ವಪ್ರಜ್ಞೆ ಪ್ರಕಾಶಗೊಳ್ಳಬೇಕು. ನಮ್ಮಲ್ಲಿ ಈ ಜ್ಞಾನ ವಿಕಾಸವಾಗಬೇಕು.

ನಮ್ಮಲ್ಲಿ ಈ ಪ್ರಜ್ಞೆ ಹೇಗೆ ವಿಕಾಸವಾಗುವುದು? ಯಾರು ಯಾರು ಈ ವಿಶ್ವವಿದ್ಯೆಯನ್ನು ಪಡೆಯಲು ಗಮನಿಸುತ್ತಾರೋ ಅವರಿಗೆ ಅದು ಗೊತ್ತಾಗುತ್ತದೆ. ಮೊಟ್ಟಮೊದಲು ಯಾವನಾದರೂ ಒಬ್ಬ ಮಹಾಕವಿಯ ಒಂದು ಮಹಾಕಾವ್ಯವನ್ನು ಯಾರಿಂದಲೊ ಓದಿಸುತ್ತಾನೆ ಅಥವಾ ಓದುತ್ತಾಣೆ. ಅವನು ಒಬ್ಬ ವಡ್ಸ್‌ವರ್ತ್‌ನನ್ನೊ, ಒಬ್ಬ ಕಾಳಿದಾಸನನ್ನೊ, ಒಬ್ಬ ಗಯಟೆಯನ್ನೊ ಮೊದಲನೆ ದಿನ ಪರಿಚಯ ಮಾಡಿಕೊಂಡಾಗ, ಕಾವ್ಯದಲ್ಲಿನ ಚಿಂತನಾಂಶವನ್ನು ಗ್ರಹಿಸಿದಾಗ, ಅದರ ರಸಾನುಭವವನ್ನು ಅನುಭವಿಸಿದಾಗ ಚೇತನೆ ಅರಳುತ್ತದೆ. ಒಂದು ನೂತನ ಜಗತ್ತಿಗೆ ಪ್ರವೇಶಿಸಿದಂತೆ ಅನುಭವವಾಗುತ್ತದೆ. ಶಕ್ತಿ ಸ್ಫುರಿಸುತ್ತದೆ. ಆದ್ದರಿಂದ ಅವನ ಚೇತನೆ ವಿಕಾಸವಾಗುತ್ತದೆ. ಹೀಗೆ ಪ್ರಜ್ಞೆ ವಿಕಾಸವಾಗಬೇಕು.

ಈಗಂತೂ ಈ ಪ್ರಜ್ಞೆಯ ವಿಕಾಸಕ್ಕೆ ಬೇಕಾದಷ್ಟು ಅವಕಾಶವಿದೆ. ಪ್ರಕಟವಾಗುತ್ತಿರುವ ಅನೇಕ ಪುಸ್ತಕಗಳಿಂದ, ರೇಡಿಯೋ, ಪತ್ರಿಕೆ ಇವುಗಳ ಮುಖಾಂತರ ಪ್ರಪಂಚದ ಎಲ್ಲಾ ಕಡೆಯ ಸುದ್ದಿ ಸಮಾಚಾರಗಳನ್ನು ತಿಳಿಯಲು ಅವಕಾಶವಿದೆ. ಸೋವಿಯತ್ ಯಾವ ಸ್ಪೊಟ್ನಿಕನ್ನು ಹಾರಿಸಿತು, ವಿಶ್ವಸಂಸ್ಥೆ ಚೀಣಾ ವಿಚಾರದಲ್ಲಿ ಏನು ಮಾಡುತ್ತಿದೆ ಈ ವಿಷಯಗಳನ್ನು ಮಗ್ಗಲು ಮನೆಯಿಂದ ಕೇಳಿದಷ್ಟು ಬೇಗ ಬೇಗ ತಿಳಿಯುತ್ತೇವೆ. ಅದರ ಜೊತೆಗೆ ನಾವು ಓದತಕ್ಕ ಹಲವಾರು ಪುಸ್ತಕಗಳನ್ನು-ಯಂತ್ರಜ್ಞಾನಿಗಳು ತತ್ತ್ವಜ್ಞಾನಿಗಳು ವಿಜ್ಞಾನಿಗಳು, ಇವರ ಕೃತಿಗಳನ್ನು ಓದಿದಾಗ ನಮ್ಮ ಬುದ್ಧಿ ವಿಷಯಗಳನ್ನು ಸಂಗ್ರಹಿಸುತ್ತದೆ. ಹೀಗೆ ಆ ವಿಷಯಗಳನ್ನು ಸಂಗ್ರಹಿಸಿ, ಅದರಿಂದ ವಿಶ್ವಪ್ರಜ್ಞೆ ವಿಕಾಸವಾಗಬೇಕು. ವಿಶ್ವಪ್ರಜ್ಞೆ ವಿಖಾಸವಾದಂತೆ ದೊಡ್ಡ ಭಾವನೆ ಬೆಳೆಯುತ್ತದೆ. ನಾನು ನನ್ನದು ಎಂಬ ಸಂಕುಚಿತ ಭಾವ ಮಾಯವಾಗಿ, ನಾವು ನಮ್ಮದು ಎಂಬ ಭಾವನೆ ಮೂಡುತ್ತದೆ. ನನ್ನ ದೇವತೆಯಂತೆಯೆ ಎಲ್ಲಾ ದೇವತೆಗಳಿದ್ದಾರೆ; ನನ್ನ ಜನ ಇದ್ದ ಹಾಗೆ ಇತರ ಜನರೂ ಇದ್ದಾರೆ; ನನ್ನ ಭಾಷೆ ಇದ್ದ ಹಾಗೆ ನೂರಾರು ಭಾಷೆಗಳಿವೆ; ಈ ತರಹದಲ್ಲಿ ಅವನ ಭಾವ ವಿಸ್ತರಿಸಿ, ಸಹಜವಾದ ವಿಶ್ವಮೈತ್ರಿ ಬೆಳೆಯುತ್ತದೆ. ವಿಶ್ವಪ್ರಜ್ಞೆಯಿಂದಲೇ ಈ ವಿಶ್ವಮೈತ್ರಿ ಬೆಳೆಯಬೇಕು.

ಇಂದು ದೂರಕ್ಕೆ ಬೆಲೆಯಿಲ್ಲದಂತಾಗಿದೆ. ಎಲ್ಲ ದೇಶಗಳೂ ಹತ್ತಿರ ಹತ್ತಿರ ಬರುತ್ತಿವೆ. ಹೀಗೆಯೆ ಇನ್ನು ಹತ್ತು-ಹನ್ನೆರಡು ವರ್ಷಗಳು ಕಳೆಯುವುದರೊಳಗೆ ಎಂಥ ಪರಿಣಾಮವಾಗುವುದೆಂದು ಯಾರು ಹೇಳಬಲ್ಲರು? ಏಕೆಂದರೆ ಮನುಷ್ಯನಿಗೆ ಹಸ್ತಗತವಾಗಿರುವ ಆಸ್ಪೋಟಕ ಸಾಧಾನಾಯುಧಗಳು ಅತ್ಯಂತ ಭಯಂಕರವಾಗಿವೆ. ಮನುಷ್ಯ ಒಂದು ವೇಳೆ ಪಶುತನಕ್ಕೆ ಇಳಿದರೆ ದಿನಾರ್ಧದಲ್ಲಿ ಇಡೀ ಪ್ರಪಂಚವನ್ನು ನಾಶಮಾಡತಕ್ಕ ಶಕ್ತಿ ಅವುಗಳಿಗಿದೆ. ಅದರಿಂದ ಉಳಿದುಕೊಳ್ಳಬೇಕಾದರೆ ಮನುಷ್ಯನ ಪ್ರಜ್ಞೆ ಪರಿವರ್ತಿತವಾಗಬೇಕು, ವಿಶ್ವಪ್ರಜ್ಞೆ ಬಂದು ವಿಶ್ವಮೈತ್ರಿ ಉಂಟಾದೊಡನೆಯೆ ಅವನು ವಿಶ್ವಮಾನವನಾಗುತ್ತಾನೆ. ‘ಜೈ ಜಗತ್’ ಎಂದು ಕೂಗುತ್ತಾನೆ. ಅದೇ ನಮ್ಮ ಪ್ರಪಂಚದ ಆದರ್ಶ. ಆದರೆ ಅಂತಹ ಆದರ್ಶವನ್ನು ಗಳಿಸುವುದರ ಜೊತೆಗೆ ತನ್ನ ಸುತ್ತು ಮುತ್ತಲಿನ ಆವರಣವನ್ನು ಗಮನಿಸಬೇಕು. ಊರನ್ನೆಲ್ಲಾ ಶುಚಿಯಾಗಿ ಇಟ್ಟುಕೊಳ್ಳಬೇಕೆಂದು ಹೇಲ ಹೊರಟವನು ತನ್ನ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕೆಂಬುದನ್ನು ಮರೆಯಬಾರದಷ್ಟೆ? ಹಾಗೆಯೆ ಈ ವಿಶ್ವಪ್ರಜ್ಞೆಯೆಂಬುದು  ತನ್ನ ಸುತ್ತಮುತ್ತಲಿನವರಿಂದ ಪ್ರಾರಂಭವಾಗಿ, ಅನಂತರ ವಿಶ್ವವನ್ನೆಲ್ಲಾ ವ್ಯಾಪಿಸಬೇಕು. ಹೀಗೆ ವಿಶ್ವಜ್ಞಾನವನ್ನು ಪಡೆದವನು ವಿಶ್ವಮಾನವನಾಗುತ್ತಾನೆ. ವಿಶ್ವವಿದ್ಯೆಗೆ ಆಗರವಾಗಬೇಕಾಗಿರುವ ವಿಶ್ವವಿದ್ಯಾನಿಲಯಗಳು ಯಾವಾಗ ಪ್ರಾರಂಭವಾಗುತ್ತವೆ ಎಂದರೆ ವಿಶ್ವಪ್ರೇಮದ ಆದರ್ಶದಿಂದ ಪ್ರೇರಣೆಗೊಂಡು ಎಲ್ಲರೂ ಅದನ್ನು ಬಯಸುವುದಾದರೆ. ಆ ಬಯಕೆಯಿಂದಲೆ ಅದು ಹತ್ತಿರ ಹತ್ತಿರವಾಗಿ ಬರುತ್ತದೆ.

ಭಾರತರಾಷ್ಟ್ರ ಅನಾದಿಕಾಲದಿಂದಲೂ ವಿಶ್ವಮೈತ್ರಿಗಾಗಿ ದುಡಿಯುತ್ತಾ ಬಂದಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಬಂದ ಹಾಗೆ ನಮ್ಮವರು ‘ಲೋಕಾಸ್ಸಮಸ್ತಾಃ ಸುಖಿನೋ ಭವಂತು’ ಎಂಬ ಶಾಂತಿ ಮಂತ್ರವನ್ನು ಘೋಷಿಸಿ ತಮ್ಮ ಆದರ್ಶವನ್ನು ಸಾರಿದ್ದಾರೆ. ಈ ಮೈತ್ರಿಯ ವಾತಾವರಣವಿಲ್ಲದಿದ್ದರೆ ಇಂದು ನಮ್ಮ ಹಿಮಾಲಯವೂ ಕೂಡ ‘ಭಗ್’ ಎಂದು ಹೊತ್ತಿಕೊಳ್ಳುತ್ತಿತ್ತು. ಆದರೆ ಈ ಮೈತ್ರಿಯ ಭಾವನೆ ಜಗತ್ತನ್ನು ವ್ಯಾಪಿಸುತ್ತಿರುವುದರಿಂದ ಹಿಮಾಲಯ ಇನ್ನೂ ತಣ್ಣಗೆ ಉಳಿದುಕೊಂಡಿದೆ. ನಮ್ಮ ಜನ ವಿಶ್ವಪ್ರಜ್ಞೆಯನ್ನು ಪಡೆದವರಾಗಿದ್ದರು. ಆ ವಿಶ್ವಮೈತ್ರಿ ಮತ್ತು ಆ ವಿಶ್ವಮಾನವತೆ ನಮ್ಮೆಲ್ಲರ ಹೃದಯದಲ್ಲೂ ಇರಬೇಕು. ಆದ್ದರಿಂದಲೆ ನಾವು ಇಂದಿಗೂ ಜಗತ್ತಿನ ಎಲ್ಲರೊಡನೆಯೂ ಮೈತ್ರಿಯಿಂದ ಬಾಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ರಾಷ್ಟ್ರದ ನಾಯಕರು ಈ ದಿಕ್ಕಿನಲ್ಲಿಯೆ ದುಡಿಯುತ್ತಿದ್ದಾರೆ. ಇದು ಭಾರತೀಯರ ಸಂಸ್ಕೃತಿ.

ಆದ್ದರಿಂದ ಜನತೆ ಈ ವಿಶ್ವವಿದ್ಯೆ, ಈ ವಿಶ್ವಪ್ರಜ್ಞೆ, ಈ ವಿಶ್ವಮೈತ್ರಿಗಳಿಂದ ಕೂಡಿ ವಿಶ್ವಮಾನವರಾಗುವಂತೆ ನಮ್ಮ ವಿಶ್ವವಿದ್ಯಾನಿಲಯಗಳು ವ್ಯವಹರಿಸಬೇಕು. ಅದಕ್ಕಾಗಿಯೆ ವಿಶ್ವವಿದ್ಯಾನಿಲಯದಲ್ಲಿ ಓದಬೇಕೆಂಬುದು. ಈ ಆದರ್ಶ ಸಾಧನೆಗೆ ಪ್ರಸಾರಾಂಗ ಅತ್ಯಂತ ಆವಶ್ಯಕವಾದ ಅಂಗ. ವಿಶ್ವವಿದ್ಯಾನಿಲಯದ ಜ್ಞಾನಸಾರ ಜನಸಾಮಾನ್ಯರಲ್ಲಿ ಪ್ರಸಾರಗೊಳ್ಳಬೇಕು. ಸಾಮಾನ್ಯವಾಗಿ, ನಮಗೆ ತಿಳಿದಿರುವ ಜ್ಞಾನ ಜನಸಾಮಾನ್ಯರಿಗೆ ತಿಳಿಯಬೇಕಾದರೆ ಆಯಾ ನಾಡುಗಳು ಆಯಾ ನುಡಿಯಿಂದಲೆ ಅದನ್ನು ಗೊತ್ತುಮಾಡಿಕೊಳ್ಳಬೇಕು. ವೈಜ್ಞಾನಿಕ ವಿಷಯಗಳನ್ನೆಲ್ಲಾ ಜನರ ಭಾಷೆಯಲ್ಲಿ ಹೇಳುವುದು ಹೇಗೆ ಸಾಧ್ಯ-ಎಂದು ಶಂಕೆಗೊಳ್ಳುವವರು ನಮ್ಮ ಅಧ್ಯಾಪಕರು ಮಾತನಾಡುವುದನ್ನು ಕೇಳಬೇಕು, ನೋಡಬೇಕು. ವಿಶ್ವವಿದ್ಯಾನಿಲಯದಲ್ಲಿ ಬೋಧಿಸುವ ಎಲ್ಲ ವಿಷಯಗಳ ಮೇಲೂ ಲೀಲಾಜಾಲವಾಗಿ, ಸಾಮಾನ್ಯನಿಗೂ ಅರ್ಥವಾಗುವಂತೆ, ಅತ್ಯಂತ ಕ್ಲಿಷ್ಟವಾದ ಗಹನವಾದ ವಿಷಯಗಳನ್ನು ಸರಳವಾಗಿ ಸುಲಭವಾಗಿ ತಿಳಗನ್ನಡದಲ್ಲಿ ವಿವರಿಸಿ ಹೇಳಬಲ್ಲರು. ಪ್ರಪಂಚದಲ್ಲಿ ಸಾಮಾನ್ಯ ಮಾನವ ಏನೇನು ವಿಷಯಗಳನ್ನು ತಿಳಿದುಕೊಳ್ಳಬೇಕೆಂದು ಆಶೆಪಡುತ್ತಾನೆಯೊ ಅದೆಲ್ಲವನ್ನೂ ಅವರು ತಿಳಿಸಬಲ್ಲರು. ನಾವು ಜನತೆಗೆ ನಮ್ಮ ಭಾಷೆಯ ಮುಖಾಂತರವಾಗಿಯೆ ಗಹನವಾದ ವಿಷಯಗಳನ್ನು ಹೇಳಲು ಸಾಧ್ಯವಿಲ್ಲದಿದ್ದರೆ ನಮ್ಮ ಜ್ಞಾನ ಕೇವಲ ಪೊಳ್ಳು. ಸ್ವಭಾಷಾಭಿಮಾಣದಿಂದ ಮಾತ್ರವೇ ಈ ಪ್ರಸಾರಾಂಗವನ್ನು ಇಷ್ಟು ಬೆಳೆಸಬೇಕೆಂಬ ಛಲವನ್ನೇನೂ ನಾವು ಕೈಗೊಳ್ಳುತ್ತಿರಲಿಲ್ಲ. ಬೇರೆ ಭಾಷೆಯಲ್ಲಿ ಶತಮಾನಗಳಲ್ಲಿ ಕಲಿತ ವಿಷಯಗಳನ್ನು ಅವರವರ ಭಾಷೆಯಲ್ಲಿಯೆ ಹೇಳುವುದಾದರೆ ಹತ್ತಾರೇ ವರ್ಷಗಳಲ್ಲಿ ಕಲಿಯಬಹುದು. ಆದ್ದರಿಂದ ಸ್ವಭಾಷೆಯ ಮುಖಾಂತರವಾಗಿಯೇ ಕಲಿಸಬೇಕು. ನಿಜ. ಹೀಗೆಂದು ಮಾತ್ರಕ್ಕೆ ಜಗತ್‌ಪ್ರಸಿದ್ಧವಾದ ಯಾವ ಭಾಷೆಯನ್ನೂ ನಾವು ಅಲ್ಲಗಳೆಯಬಾರದು. ಜಗತ್‌ಪ್ರಸಿದ್ಧವಾದ ಹಲವು ವ್ಯಕ್ತಿಗಳು ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ವ್ಯವಹರಿಸುವವರಾಗಿರಬಹುದು. ಅವರನ್ನು ನಾವು ಅರಿತುಕೊಳ್ಳಬೇಕು. ನಮಗೂ ಸಾಮಾನ್ಯ ಜಗತ್ತಿಗೂ ಒಂದು ಸೇತುವೆಯನ್ನು ಕಟ್ಟಬೇಕಾಗುತ್ತದೆ; ಕಾಲುವೆಯನ್ನು ತೆಗೆಯಬೇಕಾಗುತ್ತದೆ. ಅಂತಹ ಕಾರ್ಯಕ್ಕೆ ಆಯಾ ಭಾಷೆಗಳು ಸಹಾಯವಾಗುತ್ತವೆ. ಈಗ ಸದ್ಯಕ್ಕೆ ನಮ್ಮ ದೇಶದಲ್ಲಿ ಇಂಗ್ಲಿಷ್ ಅಂತಹ ಸ್ಥಾನದಲ್ಲಿದೆ. ನಮಗೂ ನಮ್ಮ ದೇಶದ ಪ್ರಾಚೀನ ಸಂಸ್ಕೃತಿಗೂ ಒಂದು ಸಂಬಂಧವನ್ನು ಕಲ್ಪಿಸುವುದಕ್ಕೆ ಕೆಲವು ಜನಗಳಿಗಾದರೂ ಸಂಸ್ಕೃತ ಬರಬೇಕು. ಹಾಗೆಯೆ ಇನ್ನು ಮುಂದೆ ವಿಜ್ಞಾನದಲ್ಲಿ ತುಂಬಾ ಮುಂದುವರಿದಿರುವ ಬೇರೆ ಬೇರೆ ದೇಶಗಳ ಭಾಷೆಗಳನ್ನೂ ನಾವು ಕಲಿಯಬೇಕಾಗಬಹುದು. ನಾವು ಈಗ ರಷ್ಯನ್ ಭಾಷೆಯನ್ನು ಕಲಿಯುವುದಕ್ಕೆ ಅವಕಾಶ ದೊರಕುತ್ತದೆ. ಆ ಮೂಲಕ ಅವರ ವೈಜ್ಞಾನಿಕ ಪ್ರಜ್ಞೆ ನಮಗೆ ದೊರೆತು ನಮ್ಮ ಜ್ಞಾನ ಮುಂದುವರಿದಂತಾಗುತ್ತದೆ. ಹಾಗೆಯೆ ಚೀನೀ ಭಾಷೆಯನ್ನು ಅಥವಾ ಬೇರೆ ಭಾಷೆಯನ್ನು ಕಲಿಯಬೇಕಾಗುತ್ತದೆ. ನಾವು ಯಾವ ಭಾಷೆಗಳನ್ನೂ ದ್ವೇಷಿಸುವುದಿಲ್ಲ. ಎಲ್ಲ ಭಾಷೆಗಳೂ ನಮಗೆ ಮಾನ್ಯ. ಆದರೆ ಕಟ್ಟಡ ಕಟ್ಟಬೇಕಾದರೆ ನಮ್ಮ ಭಾಷೆಯಿಂದಲೇ ಕಟ್ಟಡ ಕಟ್ಟಿ. ಅದು ಗಟ್ಟಿ. ಅದಕ್ಕಾಗಿ ವಿಶ್ವವಿದ್ಯಾನಿಲಯ ಪ್ರಚಾರೋಪನ್ಯಾಸಗಳನ್ನು, ಸಪ್ತಾಹಗಳನ್ನು ಏರ್ಪಡಿಸಿನುರಿತ ಅಧ್ಯಾಪಕರಿಂದ ಉಪನ್ಯಾಸಗಳನ್ನು ಮಾಡಿಸಿ ಜನತಾ ಜನಾರ್ದನನ ಸೇವೆಯನ್ನು ಸಲ್ಲಿಸುತ್ತಿದೆ. ಜನತೆ ಇದನ್ನು ಸ್ವಾಗತಿಸಬೇಕು ಎಂದು ಪ್ರಾರ್ಥಿಸುತ್ತೇನೆ.

* * *


[1] ಮಡಿಕೇರಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದವರು ದಿನಾಂಕ ೧೧-೧೧-೫೯ರಂದು ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಉಪ-ಕುಲಪತಿಗಳಾದ ಡಾ||ಕೆ.ವಿ.ಪುಟ್ಟಪ್ಪ, ಎಂ.ಎ.ಡಿ.ಲಿಟ್, ರವರು ಮಾಡಿದ ಆರಂಭ ಭಾಷಣದ ಸಾರಾಂಶ.