ಭಗವಾನ್ ಸೌಮ್ಯಕೇಶವನಿಗೆ ಅನಂತಾನಂತ ನಮಸ್ಕಾರಗಳನ್ನು ಅರ್ಪಿಸಿ, ನಾಗಮಂಗಲದ ಮತ್ತು ಅದರ ಸುತ್ತಮುತ್ತಲಿಂದ ಬಂದಿರುವ ಎಲ್ಲ ಸಹೃದಯರಿಗೂ ನನ್ನ ವಂದನೆಗಳನ್ನು ನಿವೇದಿಸುತ್ತೇನೆ.

ಮಹನೀಯರೇ, ವಿಶ್ವವಿದ್ಯಾನಿಲಯವು ಕೈಕೊಂಡಿರುವ ಒಂದು ಮಹತ್ ಕಾರ್ಯದಲ್ಲಿ ಭಾಗಿಯಾಗುವುದಕ್ಕಾಗಿ ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ನಾಗಮಂಗಲದ ಪುರಜನರು ನನಗೆ ಸನ್ಮಾನ ಪತ್ರವನ್ನು ಅರ್ಪಿಸಲು ಬಯಸಿದುದರಿಂದ ಇಷ್ಟೊಂದು ವಿಶ್ವಾಸದ ಕೋರಕೆಗೆ ‘ಇಲ್ಲ’ ಎನ್ನಲಾರದೆ ಅದಕ್ಕೂ ಒಪ್ಪಿದ್ದೇನೆ.

ನಾನು ಇಂದು ಮೈಸೂರಿನಿಂದ ಹೊರಟು ಇಲ್ಲಿಗೆ ಬರುವಾಗ, ದಾರಿಯಲ್ಲಿ ಮೇಲುಕೋಟೆಯ ದೇವಾಲಯದ ಗೋಪುರ ಆಕಾಶಕ್ಕೆದುರಾಗಿ ದಿಗಂತಭವ್ಯವಾಗಿ ಗೋಚರಿಸಿತು. ಅದನ್ನು ಕಂಡು ನಾನು ಅಂತಹ ದಿವ್ಯ ಸಾನ್ನಿಧ್ಯದ ಆಶ್ರಯದಲ್ಲಿರುವ ಎಲ್ಲ ನಗರಗಳೂ ಆ ದಿವ್ಯ ಸಾನ್ನಿಧ್ಯವನ್ನು ಪಡೆದಿರಬೇಕೆಂದುಕೊಂಡೆ. ಇಲ್ಲಿ ನನ್ನನ್ನು ಮತ್ತು ತಮ್ಮೆಲ್ಲರನ್ನು ಸ್ವಾಗತಿಸಿದವರು ಹೇಳಿದ ವಿಚಾರಗಳಿಂದ ಆ ಭಾವನೆಗೆ ಮತ್ತಷ್ಟು ಪೋಷಣೆ ದೊರೆತಂತಾಯಿತು. ನಾಗಮಂಗಲವೆಂಬುದು ನನಗೆ ಯಾವುದೋ ಒಂದು ಯಃಕಶ್ಚಿತ ಊರಾಗಿ ಮಾತ್ರ ಗೋಚರಿಸದೆ, ಭವ್ಯ ಇತಿಹಾಸದ ಒಂದು ಪವಿತ್ರ ಕೋಶವನ್ನೊಳಗೊಂಡ ನಗರ ಎಂದು ಗೋಚರಿಸಿತು. ಇಲ್ಲಿ ಮಂಟಪಕ್ಕೆ ಬಂದೊಡನೆಯೆ ನನ್ನನ್ನು ಮೊದಲು ಇದಿರುಗೊಂಡುದು ಈ ಜಗತ್ ಪೂಜ್ಯವಾದ ಜಗನ್ನೇತ್ರಾದ್ಭುತಕರವಾದ ನಟರಾಜ ವಿಗ್ರಹ. ಈ ನಾಗಮಂಗದ ಊರಿನಲ್ಲಿಯೆ ಈ ಮಹತ್ತಾದ ಶಿಲ್ಪಕಲೆ ಇತ್ತು, ಇದೆ ಮತ್ತು ಮುಂದೆಯೂ ಮುಂದುವರಿಯುತ್ತದೆ – ಎಂಬ ಸೂಚನೆಯನ್ನು ಕೇಳಿದೊಡನೆಯೆ, ನಾಗಮಂಗಲದ ರೂಪವೆ ಬದಲಾಯಿಸಿತು ನನ್ನ ಕಣ್ಣಿಗೆ. ಮುರುಕು ಮನೆಗಳೂ ಓಡುಹೆಂಚಿನ ಮನೆಗಳೂ ಕಲ್ಲು ಕಟ್ಟಣೆಗಳೂ ಕೊರಕಲು ದಾರಿಗಳೂ ಕಿರುಗಲ್ಲಿಗಳೂ ಇರುವ, ಅಸಹ್ಯವಾಗಿ ಹೇಸಿಗೆಯಿಂದ ತುಂಬಿದವುಗಳಾಗಿರುವ ಊರುಗಳು ನಮ್ಮಲ್ಲಿ ಎಲ್ಲೆಲ್ಲಿ ಹೋದರೂ ಗೋಚರಿಸುತ್ತವೆ. ಇವೆಲ್ಲ ಹೊರಗಣ್ಣಿಗೆ ಕಾಣುವ ಊರುಗಳು. ಒಳಗಣ್ಣಿಗೆ ಕಾಣುವ ಊರುಗಳನ್ನು ಆ ಊರಿನ ಜನರ ಕಲ್ಪನೆ, ಆಶೆ, ಪ್ರಾರ್ಥನೆ – ಇವು ಸೂಚಿಸುತ್ತವೆ. ಅವರ ಆದರ್ಶವೇನು? ಅವರು ಏನನ್ನು ಅಪೇಕ್ಷಿಸುತ್ತಾರೆ? ಏನನ್ನು ಪ್ರೀತಿಸುತ್ತಾರೆ? ಏನನ್ನು ಬಯಸುತ್ತಾರೆ? ಅವರ ಆತ್ಮ, ಚೇತನ ಯಾವುದರ ಕಡೆ ಹೋಗುತ್ತದೆ? ಇವುಗಳಿಂದ ಆ ಪುರವನಿತೆಯ ಅಂತರಂಗ ರೂಪ ಗೋಚರಿಸುತ್ತದೆ. ನನಗೆ ಈಗ ಗೋಚರಿಸುತ್ತಿರುವುದು ನಾಗಮಂಗಲದ ಬಹಿರಂಗದ ಮೃಣ್ಮಯರೂಪವಲ್ಲ; ಇಲ್ಲಿನ ಜನ ಶತಶತಮಾನಗಳಿಂದ ಬಾಳಿದ, ಆಶಿಸಿದ, ಸಾಧಿಸಿದ, ಸಿದ್ಧಿಪಡೆದ, ಸಿದ್ಧಿಪಡೆಯಲು ಆಶಿಸುತ್ತಿರುವ – ಈ ಸಂಕಲ್ಪಕೋಟಿಗಳಿಂದ ಉತ್ಪನ್ನವಾದ ಚಿನ್ಮಯಶ್ರೀ ನಗರ. ಇಲ್ಲಿಗೆ ಸಮೀಪದ ಬೆಳ್ಳೂರಿನಲ್ಲಿದ್ದವರು ಶ್ರೀ ಬಿ.ಎಂ.ಶ್ರೀ ಯವರು; ಇಲ್ಲಿಗೆ ಸಮೀಪದ ಬಿಂಡಿಗನವಲೆಯವರು ಕಾದಂಬರಿಕಾರರಾದ ಶ್ರೀ ಬಿ. ವೆಂಕಟಾಚಾರ್ಯರು. ಈ ಮಾತುಗಳನ್ನು ಹೇಳುತ್ತಿರುವಾಗ ನಾಗಮಂಗಲವು ಇತರ ಅನೇಕ ನಗರಗಳಂತೆ, ಊರುಗಳಂತೆ ಒಂದಲ್ಲ; ನಮ್ಮ ಕನ್ನಡನಾಡಿನ ಸಾಹಿತ್ಯದ ಜೀವಕೇಂದ್ರಗಳಲ್ಲಿ ಇದೂ ಒಂದು – ಎಂದು ನಾನು ಭಾವಿಸುತ್ತೇನೆ.

ನನ್ನನ್ನು ಸ್ವಾಗತಿಸುತ್ತಾ ಮತ್ತು ನನಗೆ ಮಾನಪತ್ರವನ್ನು ಅರ್ಪಿಸುತ್ತಾ ಇಬ್ಬರು ಮಹನೀಯರು ಕೆಲವು ಸೌಹಾರ್ದದ, ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಆ ಒಂದೊಂದು ಶ್ಲಾಘನೆಯ ಮಾತಿನ ಗೌರವ ಭಾರದಿಂದ ನಾನು ಕುಗ್ಗಿ ಕುಸಿದು ಹೋಗಿದ್ದೇನೆ, ನನ್ನ ಮಿತ್ರರು ಹಾಕಿದ ಈ ದೊಡ್ಡ ಹೂವಿನ ಹಾರದಿಂದ ಎಂತೊ ಅಂತೆ. ಆದರೆ ನೀರಿನಲ್ಲಿ ಮುಳುಗಿದ ಕಲ್ಲು ಹೇಗೆ ಭಾರವಾಗುವುದಿಲ್ಲವೊ, ಹಾಗೆಯೆ ಅಹಂಕಾರವನ್ನು ಭಗವಂತನ ಪದತಲದಲ್ಲಿ ಅರ್ಪಿಸಿದ ಚೇತನಕ್ಕೆ ಹೊಗಳಿಕೆಯ ಚಪ್ಪಡಿ ಭಾರವಾಗಲಾರದು. ನಾನು ಇಲ್ಲಿ ನಿಂತಾಗ ಹೂವಿನ ಹಾರಗಳನ್ನು ತಂದು ತಂದು ಹಾಕುತ್ತಿದ್ದರು. ಇದನ್ನೆಲ್ಲ ನಾನೆಲ್ಲಿಯಾದರೂ ಈ ಸಣ್ಣ ಅಹಂಕಾರದ ‘ನಾನಾಗಿ’ ಸ್ವೀಕರಿಸಿದರೆ, ಒಂದೊಂದು ಹಾರವೂ ನನ್ನ ಕತ್ತನ್ನು ಕೊಯ್ದೀತು. ಈ ಒಂದೊಂದು ಹಾರವೂ ಭಗವಂತನ ಪಾದಾರವಿಂದಕ್ಕೆ ಈ ರೂಪದಿಂದ ಅರ್ಪಿತವಾಗಿದೆ-ಎಂಬುದನ್ನು ನಾನು ಮನಸ್ಸಿನಲ್ಲಿ ಆಲೋಚಿಸುವುದರಿಂದ ಈ ಭಾರವನ್ನು ನಾನು ಸ್ವಲ್ಪವೂ ಭಯವಿಲ್ಲದೆ ವಹಿಸಿದ್ದೇನೆ. ನಮ್ಮ ಎಲ್ಲರ ಚೇತನಗಳಲ್ಲಿಯೂ ಭಗವಂತನು ದೇವಸ್ಥಾನ ಕಟ್ಟಿಸಿಕೊಂಡಿದ್ದಾನೆ. ಒಂದೊಂದು ಚೇತನವೂ ಆ ಭಗವಂತನ ಪೂರ್ಣತ್ವವನ್ನು ಒಳಗೆ ಬೀಜರೂಪವಾಗಿ ಪಡೆದಿದೆ. ‘ಈ ಪ್ರಪಂಚದಲ್ಲಿ ನಾವು ಹುಟ್ಟಿಬರುವುದು ಆ ಬೀಜರೂಪವಾದ ಭಗವಂತ ಅರಳಿ, ಬೆಳೆದು, ವೃಕ್ಷರೂಪವಾಗಿ ಗೋಚರಿಸಲಿ ಎಂದೇ’- ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದಲೆ ನಮಗೆ ದೊಡ್ಡವನ್ನು ಕಾಣುತ್ತಲೆ ಗೌರವ ಮೂಡುತ್ತದೆ; ಉತ್ತಮವಾದುದನ್ನು ಕಾಣುತ್ತಲೆ ಆಸೆ ಉದಿಸುತ್ತದೆ. ಅದರ ಅರ್ಥವೇನೆಂದರೆ ಬಡವನಾದವನಿಗೆ ಐಶ್ವರ್ಯವಂತನಾದವನನ್ನು ಕಾಣುತ್ತಲೆ ಅವನ ಐಶ್ವರ್ಯದ ವಿಚಾರದಲ್ಲಿ ಹೇಗೆ ಆಸೆ ಉದಿಸುತ್ತದೆಯೊ ಹಾಗೆಯೆ ಉತ್ತಮರನ್ನೂ ಉತ್ತಮವಾದುದನ್ನೂ ಕಾಣುತ್ತಲೆ ನಮ್ಮಲ್ಲಿ ಅದರ ಪವಿತ್ರತೆಯ ವಿಚಾರವಾಗಿ ಅದರ ಹುಟ್ಟುತ್ತದೆ. ಇದರ ಅರ್ಥವೇನೆಂದರೆ-ಈ ಚೇತನ ಆಗಲೆ ತನ್ನ ನಾಲಗೆಯನ್ನು ಚಾಚಿದೆ, ಆ ಅಮೃತವನ್ನು ಸವಿಯುವುದಕ್ಕೆ; ಆದ್ದರಿಂದ ಆ ಚೇತನದ ಉದ್ದಾರದ ಬಾಗಿಲು ತೆರೆದಿದೆ; ಅದು ಮುಂದೆ ಧನ್ಯವಾಗುತ್ತದೆ-ಇದು ಅದರ ಅರ್ಥ. ನನ್ನ ಮೂಲಕವಾಗಿ ಸರಸ್ವತೀದೇವಿ ಜನತೆಗೆ ಅರ್ಪಿಸಿರುವ ಕೃತಿಗಳನ್ನು ನೀವು ಓದಿ, ಸಂತೋಷಪಟ್ಟು, ನನಗೆ ಗೌರವ ತೋರಿದ್ದೀರಿ. ವಾಸ್ತವವಾಗಿ ನೀವು ಈ ಗೌರವ ತೋರುತ್ತಿರುವುದು ಈ ಮನುಷ್ಯವ್ಯಕ್ತಿಗೆ ಅಲ್ಲ. ಸರಸ್ವತಿಯ ತತ್ವಕ್ಕೆ, ಚೇತನಕ್ಕೆ, ಆ ದಿವ್ಯತೆಗೆ ನಿಮ್ಮ ಗೌರವ ಸಲ್ಲುತ್ತಿದೆ. ಆದ್ದರಿಂದಲೆ ಆ ಶಕ್ತಿ ನಿಮ್ಮ ನಮಸ್ಕಾರದ, ಪೂಜೆಯ, ಪ್ರಾರ್ಥನೆಯ ಮುಖಾಂತರ ನಿಮ್ಮೆಲ್ಲರ ಹೃದಯಗಳಿಗೂ ಇಳಿಯುತ್ತದೆ. ಈ ಗೌರವ, ಸಂಭಾವನೆಯೆಲ್ಲವೂ ಅದರ ಪ್ರತೀಕ. ಹಿಂದಿನ ಮಹಾಕವಿಗಳೆಲ್ಲರೂ-ಅವರು ಯಾವ ದೇಶದವರಾದರೂ ಆಗಲಿ, ಯಾವ ಭಾಷೆಯಲ್ಲಿಯೆ ಬರೆದಿರಲಿ, ಯಾವ ಮತಕ್ಕೆ ಸೇರಿರಲಿ, ಯಾವ ದೇವರನ್ನೆ ಪೂಜಿಸುತ್ತಿರಲಿ-ತಮ್ಮ ಕೃತಿಗಳ ಪ್ರಾರಂಭದಲ್ಲಿಯೆ ಒಂದು ಮಾತನ್ನು ಹೇಳುತ್ತಾರೆ. ಅದೇನೆಂದರೆ-‘ನಾನು ಬರಿಯ ಲೇಖನಿ, ಬರೆಯುವವನು ಭಗವಂತ.’ ಇದು ಸರಿ. ಮಹತ್ ಕಾರ್ಯಗಳನ್ನು ಮಹತ್ ಪ್ರಮಾಣದಲ್ಲಿ ಸಾಧಿಸುವುದು ಅಲ್ಪ ಚೇತನಗಳಿಗೆ ಅಸಾಧ್ಯ. ಮಹಾಕಾರ್ಯವನ್ನು ಮಾಡಿದೊಡನೆಯೆ ಗೊತ್ತಾಗುತ್ತದೆ-ಅದನ್ನು ಸಾಧಿಸಿರುವ ಶಕ್ತಿ ಮತ್ತೊಂದು, ನಾನಲ್ಲ; ಆ ಶಕ್ತಿ ಇದನ್ನು ಎತ್ತದಿದ್ದರೆ, ಯಾರುತಾನೆ ಈ ಭಾರವನ್ನು ಎತ್ತಲು ಸಾಧ್ಯವಾಗುತ್ತದೆ? ಎಂದು. ಆದ್ದರಿಂದ ನನ್ನ ಕೃತಿಗಳಿಂದ ಜನತೆಯ ಜನಾರ್ದನನಿಗೆ ಏನಾದರೂ ಪುಷ್ಪಾಂಜಲಿ ಅರ್ಪಿತವಾಗಿದ್ದರೆ ಅದರಿಂದ ನಾನು ನಿಜವಾಗಿಯೂ ಧನ್ಯ. ನನ್ನ ಮೂಲಕವಾಗಿ ಹೊರಗೆ ಬಂದಿರುವ ಕೃತಿಗಳನ್ನು ಓದಿ, ಓದಿಸಿ ಕೇಳಿ-ನೀವು ಯಾರೇ ಆಗಲಿ, ಎಲ್ಲೇ ಆಗಲಿ-ಆನಂದ ಪಡುತ್ತಿದ್ದರೆ, ಆ ಆನಂದದ ಅಂಶ ಯಾವುದೊ ಒಂದು ರೀತಿಯಲ್ಲಿ ನನ್ನ ಚೇತನಕ್ಕೂ ತಾಕುತ್ತದೆ; ನನ್ನನ್ನು ಉದ್ಧಾರ ಮಾಡುತ್ತದೆ. ಅದು ಭಗವಂತನಿಗೆ ಸಮರ್ಪಿತವಾಗುತ್ತದೆ-ಎಂದು ನಾನು ಭಾವಿಸುತ್ತೇನೆ.

ನನ್ನನ್ನು ನಾನಾ ವಿಧವಾಗಿ ಪ್ರಶಂಸಿಸುತ್ತಾ, ಕೀರ್ತಿಯನ್ನು ಬೆನ್ನಟ್ಟಿದವನಲ್ಲ-ಎಂದು ಸೂಚಿಸಿದ್ದೀರಿ. ನನ್ನ ವಿದ್ಯಾಗುರುಗಳಲ್ಲಿ ಒಬ್ಬರಾದ ಶ್ರೀಮಾನ್ ಕೃಷ್ಣಶಾಸ್ತ್ರಿಗಳು ಒಮ್ಮೆ ಬೆಂಗಳೂರಿನಲ್ಲಿ ಮಾತನಾಡುತ್ತಾ ‘ಇವರು ಕೀರ್ತಿಯನ್ನು “ಶನಿ” ಎಂತ ಕರೆದು ಅಟ್ಟಿದರು; ಈಗ ಆ ಶನಿ ಬೆನ್ನು ಹತ್ತಿದೆ’-ಎಂದು ವಿನೋದಕ್ಕಾಗಿ ಹೇಳಿದರು. ಆದರೆ ಸಾಮಾನ್ಯ ಕೀರ್ತಿಗೂ, ನಾನು ಯಾವುದನ್ನು ಯಶೋಲಕ್ಷ್ಮಿಯೆಂದು ಕರೆಯುತ್ತೇನೆಯೊ ಅದಕ್ಕೂ ಬಹಳ ವ್ಯತ್ಯಾಸವಿದೆ. ಸಾಮಾನ್ಯ ಕೀರ್ತಿ ನಮ್ಮ ಅಹಂಕಾರವನ್ನು ಪೋಷಿಸುತ್ತದೆ. ಈ ಅಹಂಕಾರವನ್ನು ಪೋಷಿಸುವುದಕ್ಕಾಗಿಯೆ ನಾವು ಅದನ್ನು ಪಡೆಯ ಯತ್ನಿಸಿದಲ್ಲಿ ಅದು ನಮ್ಮ ಅಹಂಕಾರವನ್ನು ಹೆಚ್ಚಿಸಿ, ನಮ್ಮನ್ನು ಮತ್ತೆ ಮತ್ತೆ ಅಧೋಗತಿಗೆ ಕರೆದೊಯ್ಯುತ್ತದೆ. ಆದರೆ ನಾವು ನಮ್ಮ ಅಹಂಕಾರವನ್ನು ಬಿಟ್ಟು, ಭಗವದರ್ಪಣ ಬುದ್ದಿಯಿಂದ ಸಾಗುತ್ತಿದ್ದರೆ, ಆಗ ಬರುವುದು ಯಶೋಲಕ್ಷ್ಮಿ. ಅದರಿಂದ ನಮಗೂ ಕಲ್ಯಾಣವಾಗುತ್ತದೆ, ಲೋಕಕ್ಕೂ ಉಪಕಾರವಾಗುತ್ತದೆ. ನನಗೆ ಬಂದಿರುವ ಈ ಯಶೋಲಕ್ಷ್ಮಿ ಭಗವಂತನ ಆಶೀರ್ವಾದದಿಂದ ನನ್ನ ಉದ್ಧಾರಕ್ಕೂ ಕಾರಣವಾಗಲಿ, ಜನತೆಗೂ ಆ ಉದ್ಧಾರ ಸಿದ್ಧವಾಗಲಿ-ಎಂದು ನಾನು ಹಾರೈಸುತ್ತೇನೆ. ಮತ್ತೊಮ್ಮೆ ನಾಗಮಂಗಲದ ಪುರಜನರಿಗೂ ಸುತ್ತಮುತ್ತಿನ ಊರುಗಳ ಮಾನ್ಯ ಮಹನೀಯರಿಗೂ, ಅವರು ತೋರಿರುವ ಈ ಗೌರವಕ್ಕಾಗಿ ನನ್ನ ಅನಂತ ವಂದನೆಗಳು.

ಇಂದು ನಾನಿಲ್ಲಿಗೆ ಬಂದಿರುವುದು ವಿಶ್ವವಿದ್ಯಾನಿಲಯದ ಈ ವರ್ಷದ ಪ್ರಚಾರೋನ್ಯಾಸ ಮಾಲೆಯನ್ನು ಪ್ರಾರಂಭಿಸಲೆಂದು. ಆ ವಿಚಾರವಾಗಿ ಒಂದೆಡರು ಮಾತುಗಳನ್ನು ನಿವೇದಿಸಿಕೊಳ್ಳಲು ನಾನು ಬಯಸುತ್ತೇನೆ. ಈ ಊರಿನಲ್ಲಿ ಒಂದು ಹೈಸ್ಕೂಲಿದೆ, ಇದರ ಸುತ್ತಮುತ್ತಲ ಇನ್ನು ಕೆಲವು ಊರುಗಳಲ್ಲಿ ಇನ್ನೂ ಎರಡು ಮೂರು ಹೈಸ್ಕೂಲುಗಳಿವೆ ಎಂದು ನೀವು ಹೇಳಿದ್ದೀರಿ. ದೇಶದಲ್ಲಿ ಈಗ ಪ್ರಾಥಮಿಕ ಶಾಲೆಗಳು ಮಾಧ್ಯಮಿಕ ಶಾಲೆಗಳು ಹೈಸ್ಕೂಲುಗಳೂ ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಕೂಡ ಮೇಲೇಳುತ್ತಿವೆ. ಎಂದರೆ, ವಿದ್ಯೆಯನ್ನು ಆಶಿಸುವ, ಅಪೇಕ್ಷಿಸುವ ಜನ ಹೆಚ್ಚಾಗುತ್ತಿದ್ದಾರೆ. ನಮ್ಮ ಕಾಲೇಜುಗಳಲ್ಲಿ ಕೂಡ ಹಿಂದೆ ನೂರಿದ್ದ ಕಡೆ ಈಗ ಐನೂರು ವಿದ್ಯಾರ್ಥಿಗಳಿದ್ದಾರೆ. ಇಂಟರ್ ಮೀಡಿಯಟ್ ಮತ್ತು ಫಸ್ಟ್‌ಗ್ರೇಡ್ ಕಾಲೇಜುಗಳೂ ಈಗ ದೇಶದ ಮೂಲೆ ಮೂಲೆಗಳಲ್ಲಿಯೂ ಪ್ರಾರಂಭವಾಗುತ್ತಿವೆ. ಬಹುಶಃ ಬಹಳ ಮುಂದಿರುವ ದೇಶಗಳನ್ನು ಗಮನಕ್ಕೆ ತೆಗೆದುಕೊಂಡರೆ ನಮ್ಮಲ್ಲಿನ ವಿದ್ಯಾಸಂಸ್ಥೆಗಳ, ವಿದ್ಯಾರ್ಥಿಗಳ ಸಂಖ್ಯೆ ಅತ್ಯಲ್ಪವೆಂದೇ ಹೇಳಬೇಕು. ಆ ದೇಶಗಳಲ್ಲಿ ಊರೂರಿಗೆ ಒಂದೊಂದು ಯೂನಿವರ್ಸಿಟಿ ಇದ್ದೀತು. ಈ ವಿಚಾರದಲ್ಲಿ ನಮ್ಮ ದೇಶ ಈಗ ತಾನೆ ಕಣ್ಣು ತೆರೆಯುತ್ತಿದೆ.

ನೀವು – ಎಂದರೆ ರೈತವರ್ಗದವರು – ಸರಕಾರಕ್ಕೆ ಕಂದಾಯವನ್ನು ಕೊಡುತ್ತೀರಿ. ಅದಕ್ಕೆ ಪ್ರತಿಫಲವಾಗಿ ಸರ್ಕಾರ ರಸ್ತೆ, ಬಾವಿ ಮೊದಲಾದ ಅನುಕೂಲ್ಯಗಳನ್ನು ಕಲ್ಪಿಸಿಕೊಡುತ್ತದೆ. ಇದಕ್ಕೂ ಹೆಚ್ಚಾಗಿ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಜನರು ಈ ಅನುಕೂಲ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾವಂತರಾಗಬೇಕು. ‘ವಿದ್ಯೆ’ ಎನ್ನುವುದು ಸಾಮಾನ್ಯ ಮನುಷ್ಯನನ್ನು ಮೃಗತ್ವದಿಂದ ದೇವತ್ವಕ್ಕೆ ಎತ್ತುವ ಒಂದು ಸಾಧನ ಮತ್ತು ವಿಧಾನ. ನಮಗೆ ಅಂತಹ ವಿದ್ಯೆ ಬೇಕು ಎಂದು ಹೇಳುವ ಕಾಲ ಈಗ ಬಂದಿದೆ. ನಮ್ಮಲ್ಲಿ ಎಷ್ಟೇ ಹೈಸ್ಕೂಲುಗಳಿರಲಿ, ಏನೇ ಮಾಡಲಿ, ಸದ್ಯಕ್ಕೆ ನಮ್ಮ ದೇಶದಲ್ಲಿ ಎಲ್ಲರಿಗೂ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರೆಯುವುದೆಂದು ನಾನು ಹೇಳಲಾರೆ. ಪ್ರವೇಶ ಸಿಕ್ಕುವುದಿರಲಿ; ನಮ್ಮಲ್ಲಿ ಶೇ, ೮೦ ರಷ್ಟು ಜನ ಪ್ರಾಥಮಿಕ ವಿದ್ಯಾಭ್ಯಾಸದ ಕೊನೆಯಲ್ಲಿಯೆ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಡುತ್ತಾರೆ. ಉಳಿದಿಪ್ಪತ್ತರಲ್ಲಿ ಅಷ್ಟು ಜನ ಮಾಧ್ಯಮಿಕರ ಮಧ್ಯದಲ್ಲಿಯೊ ಕೊನೆಯಲ್ಲಿಯೊ ಕೈಬಿಡುತ್ತಾರೆ; ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿದೊಡನೆಯೆ ಮತ್ತಷ್ಟು ಜನ ಓದು ನಿಲ್ಲಿಸುತ್ತಾರೆ. ಹೀಗಾಗಿ ಕಾಲೇಜು ಮಟ್ಟಕ್ಕೆ ಬರಲು ಅರ್ಹತೆ ಪಡೆಯುವವರೆ ವಿರಳ. ಇವರಲ್ಲಿಯೂ ಎಷ್ಟೋ ಜನ ಓದು ನಿಲ್ಲಿಸುತ್ತಾರೆ. ಇವರಲ್ಲಿಯೂ ಎಷ್ಟೋ ಜನ ದೂರದ ಕಾರಣದಿಂದಲೊ, ಮನೆಯ ಕ್ಲೇಶ ಸಂಕಟಗಳ ಕಾರಣದಿಂದಲೊ ವಿಶ್ವವಿದ್ಯಾನಿಲಯಕ್ಕೆ ಸೇರಲಾಗುವುದಿಲ್ಲ. ಹೀಗೆ ದೇಶದ ಬಹುಜನ ವಿಶ್ವವಿದ್ಯಾನಿಲಯವನ್ನು ಪ್ರವೇಶಮಾಡಿ, ಸಂಸ್ಕೃತಿ ವಿಜ್ಞಾನಗಳಲ್ಲಿ ಪರಿಣತರಾಗಲು ಸಾಧ್ಯವಿಲ್ಲ. ಇಂತಹರಿಗಾಗಿ; ಮೈಸೂರು ವಿಶ್ವವಿದ್ಯಾನಿಲಯ ೧೯೩೩ನೆ ಇಸವಿಯಲ್ಲಿ ಎಂದರೆ ಈಗ ಸುಮಾರು ೨೫ ವರ್ಷಗಳ ಕೆಳಗೆ ಪ್ರಚಾರೋಪನ್ಯಾಸಗಳನ್ನು ಪ್ರಾರಂಭಿಸಿತು.

ಏನು ಈ ಪ್ರಚಾರೋಪನ್ಯಾಸ? ದೇಶದಲ್ಲಿರುವ ಎಲ್ಲರೂ ವಿಶ್ವವಿದ್ಯಾನಿಲಯಕ್ಕೆ ಹೋಗಲಾರರಷ್ಟೆ! ಆದರೆ ವಿಶ್ವವಿದ್ಯಾನಿಲಯ ಎಲ್ಲರ ಮನೆಯ ಬಾಗಿಲಿಗೂ ಹೋಗಬಲ್ಲುದು. ದೇಶದಲ್ಲಿ ಎಲ್ಲೆಲ್ಲಿ ಈ ಅಪೇಕ್ಷೆ ಮೂಡುತ್ತದೆಯೊ ಅಲ್ಲಿಗೆ, ಯಾರು ಆಹ್ವಾನಿಸುತ್ತಾರೋ ಅವರಲ್ಲಿಗೆ, ವಿಶ್ವವಿದ್ಯಾನಿಲಯದ ಉಪಾಧ್ಯಾಯ ವರ್ಗದವರು ಮೂರು ನಾಲ್ಕು ಜನ ಬಂದು ಒಂದೆರಡು ದಿನ ಅಲ್ಲಿಯೆ ತಂಗಿ, ಉಪನ್ಯಾಸಗಳನ್ನು ಕೊಡುತ್ತಾರೆ. ಮಧ್ಯೆ ಮಧ್ಯೆ ಮನರಂಜನೆಯ ಕಾರ್ಯಕ್ರಮಗಳು – ಕಾವ್ಯವಾಚನ, ನಾಟಕ ವಾಚನ – ಇತ್ಯಾದಿಗಳಿಂದ ಜನತೆಯನ್ನು ಆಕರ್ಷಿಸಿ, ಉತ್ತಮವಾದ ಉಪನ್ಯಾಸಗಳನ್ನು ಕೊಡುತ್ತಾರೆ. ಮೊದಮೊದಲು ಜನರು ಅಪೇಕ್ಷಿಸಿ, ಕರೆದಲ್ಲಿಗೆ ಹೋಗುವ ಪದ್ಧತಿ ಇತ್ತು. ಬರಬರುತ್ತಾ ಈ ಕರೆ ಬರುವುದು ಹೆಚ್ಚಾಯಿತು. ಆದ್ದರಿಂದ ವಿಶ್ವವಿದ್ಯಾನಿಲಯ ಈ ಪ್ರಚಾರೋಪನ್ಯಾಸಗಳನ್ನು ಮುಂದುವರಿಸಲು ಸಾಕಷ್ಟು ಹಣವನ್ನು ಮೀಸಲಾಗಿರಸಬೇಕಾಯಿತು. ಇದರ ಜೊತೆ ಉಪನ್ಯಾಸಗಳನ್ನು ಸಣ್ಣ ಸಣ್ಣ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಅತ್ಯಂತ ಅಲ್ಪ ಬೆಲೆಗೆ ಅವುಗಳನ್ನು ಮಾರಲು ಏರ್ಪಡಿಸಲಾಯಿತು. ಮೊದಲು ಇವುಗಳ ಬೆಲೆ ಕೇವಲ ಎರಡಾಣೆ ಇತ್ತು. ಈಗ ಮೂರು ಅಥವಾ ನಾಲ್ಕು ಆಣೆ ಆಗಿರಬಹುದು. ಇವುಗಳ ಅಚ್ಚಿನ ವೆಚ್ಚ ಕೂಡ ಇವುಗಳ ವಿಕ್ರಯದಿಂದ ಹುಟ್ಟುವುದಿಲ್ಲ. ಇವುಗಳ ಉದ್ದೇಶ ದುಡ್ಡು ಮಾಡುವುದಲ್ಲ, ಜನತೆಯಲ್ಲಿ ಜ್ಞಾನ ಪ್ರಸಾರ ಮಾಡುವುದು. ಇನ್ನುಮುಂದೆ ಇಲ್ಲಿ ನಡೆಯುವ ಉಪನ್ಯಾಸಗಳಿಗೆ ನೀವು ಹೋಗುತ್ತೀರಿ; ಆಗ ನಮ್ಮ ಕಾರ್ಯದರ್ಶಿಗಳು ಈ ವಿಚಾರದ ವಿವರಗಳನ್ನು – ಎಷ್ಟು ಲಕ್ಷಾಂತರ ಪುಸ್ತಕಗಳು ಬಿಕರಿಯಾಗಿವೆ, ಜನರಲ್ಲಿ ಇವು ಎಷ್ಟು ಪ್ರಿಯವಾಗಿವೆ – ಎಂಬುದನ್ನು ನಿಮಗೆ ತಿಳಿಸುತ್ತಾರೆ. ಎಷ್ಟು ವಿಚಾರಗಳನ್ನು ಈ ಪುಸ್ತಕಗಳು ಒಳಗೊಂಡಿವೆ – ಆಧುನಿಕ ವಿಜ್ಞಾನದ ವಿಷಯಗಳು, ಕೊನೆಗೆ ವೈದ್ಯಕೀಯ ವಿಷಯಗಳು, ಕಣ್ಣು ಮತ್ತು ಅದರ ರಕ್ಷಣೆ, ಹೆರಿಗೆ ಮತ್ತು ಶಿಶುಸಂರಕ್ಷಣೆ, ರೇಡಾರ್! ಹೀಗೆ ಅತ್ಯಂತ ಗಹನವಾದ ವಿಷಯಗಳನ್ನು ಎಲ್ಲರಿಗೂ ತಿಳಿಯುವಂತೆ ಸುಲಭವಾದ ಭಾಷೆಯಲ್ಲಿ ಉಪನ್ಯಾಸ ಮಾಡಿ, ಪುಸ್ತಕ ರೂಪದಲ್ಲಿ ಪ್ರಕಟಮಾಡಿ, ಜ್ಞಾನಪ್ರಸಾರವನ್ನು ನಡೆಸುತ್ತಿದ್ದಾರೆ. ಹಿಂದಿನಿಂದ ಕನ್ನಡದಲ್ಲಿ ಬಂದಿರುವ ಕಾವ್ಯಗಳನ್ನು ಕುರಿತು ಮಾತ್ರವೆ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ – ಅದು ಪರ್ಷಿಯನ್ ಭಾಷೆಯಾಗಿರಬಹುದು, ಇಂಗ್ಲಿಷ್ ಭಾಷೆಯಾಗಿರಬಹುದು, ಗ್ರೀಕ್ ಭಾಷೆಯಾಗಿರಬಹುದು – ಆಯಾ ಭಾಷೆಗಳಲ್ಲಿ ತಜ್ಞರಾದವರು ಆಯಾ ವಿಷಯಗಳನ್ನು ಕುರಿತು ಉಪನ್ಯಾಸ ಮಾಡುತ್ತಾರೆ. ಇದರಿಂದ ನಮ್ಮ ಜನ ನಮ್ಮ ಸಾಹಿತ್ಯವನ್ನು ಮಾತ್ರವೆ ಅಲ್ಲದೆ ಇತರ ಸಾಹಿತ್ಯಗಳ ಪರಿಚಯವನ್ನೂ ಪಡೆದುಕೊಂಡಂತೆ ಆಗುತ್ತದೆ. ಇಂದು ಪ್ರಪಂಚ ಹತ್ತಿರ ಹತ್ತಿರವಾಗುತ್ತಿದೆ. ಕನ್ನಡಿಗನಾದವನು ಭರತಖಂಡದ ಇತರರನ್ನು ಅರಿಯಬೇಕು. ಇಷ್ಟೇ ಅಲ್ಲ, ಬೇರೆ ಬೇರೆ ಹೊರದೇಶಗಳವರನ್ನೂ ಅರಿತುಕೊಳ್ಳಬೇಕು. ಸಂಪರ್ಕಾನುಕೂಲ್ಯದಿಂದ ವಿಶಾಲ ಜಗತ್ತು ಇಂದು ಚಿಕ್ಕದಾಗಿ ಹೋಗಿದೆ. ಆದ್ದರಿಂದ ಇಡೀ ಪ್ರಪಂಚದ ವಿಸ್ತಾರವಾದ ಮತ್ತು ವಿವರವಾದ ಜ್ಞಾನವನ್ನು ಸಾಮಾನ್ಯ ಜನತೆಗೆ ಮಾಡಿಕೊಡಬೇಕಾದುದು ಅತ್ಯಗತ್ಯ. ಹಾಗೆ ಕೊಡುವುದಕ್ಕೋಸ್ಕರವೆ ವಿಶ್ವವಿದ್ಯಾನಿಲಯ ಈ ಪ್ರಕಟನೆ ಮತ್ತು ಪ್ರಚಾರೋಪನ್ಯಾಸ ಶಾಖೆಯನ್ನು ತೆರೆದಿದೆ. ಈ ಶಾಖೆಯಲ್ಲಿ ಎರಡಾಣೆ ಮೂರಾಣೆ ಪುಸ್ತಕಗಳಿವೆ, ಹನ್ನೆರಡಾಣೆ ಒಂದು ರೂಪಾಯಿ ಮಟ್ಟದ ಪುಸ್ತಕಗಳಿವೆ; ಅದಕ್ಕೂ ಮೇಲಿನ ಮಟ್ಟದ ಪುಸ್ತಕಗಳೂ ಇವೆ. ಅವರವರ ಅರ್ಹತೆಗೆ, ಯೋಗ್ಯತೆಗೆ, ಆಢ್ಯತೆಗೆ ತಕ್ಕಹಾಗೆ ಅವುಗಳನ್ನು ತೆಗೆದುಕೊಂಡು ಓದಬಹುದು.

ನಮ್ಮ ವಿಶ್ವವಿದ್ಯಾನಿಲಯವನ್ನು ನಾನು ಈ ಮೂರು ಅಂಗಗಳಲ್ಲಿ ಆಲೋಚಿಸುತ್ತೇನೆ. ಅವುಗಳಲ್ಲಿ ಒಂದು ಸಂಶೋಧನೆ. ಅದು ಎಂ.ಎ., ಎಂ.ಎಸ್.ಸಿ., ಮತ್ತು ಅವಕ್ಕೂ ಮುಂದಿನ ವ್ಯಾಸಂಗಕ್ಕೆ ಸಂಬಂಧಿಸಿದ ಕೆಲಸ. ಅದು ಮೇಲ್ಮಟ್ಟದ ಕೆಲಸ. ವಿಶ್ವವಿದ್ಯಾನಿಲಯದ ತಲೆಯಿದ್ದಂತೆ. ಇನ್ನೊಂದು, ವಿದ್ಯಾರ್ಥಿಗಳಿಗೆ ಬೋಧಿಸತಕ್ಕದ್ದು. ವಿಶ್ವವಿದ್ಯಾನಿಲಯದ ಕೈ ಇದ್ದಂತೆ. ಇಂದಿನ ಪೀಳಿಗೆಯವರು ಸುಸಂಸ್ಕೃತರಾಗಿ, ನಾಗರಿಕರಾಗಿ, ವಿದ್ಯಾವಂತರಾಗಿ, ಪ್ರಪಂಚದ ಇತರ ಜನರೊಡನೆ ಸಮಸ್ಪರ್ಧಿಗಳಾಗಿ ಹೇಗೆ ಬಾಳಬೇಕೆಂದು ಕಲಿಸುವುದು ಇದರ ಕೆಲಸ. ಇದರಲ್ಲಿ ಪೋಸ್ಟ್ ಗ್ರಾಜುಯೇಟ್ ಸ್ಟಡೀಸ್ ಅಂಡ್ ಟೀಚಿಂಗ್‌ ಒಂದು ಭಾಗವಾದರೆ ಅಂಡರ್ ಗ್ರಾಜುಯೇಟ್ ಸ್ಟಡೀಸ್ ಅಂಡ್ ಟೀಚಿಂಗ್ ಮತ್ತೊಂದು ಭಾಗ. ಈ ಸಂಶೋಧನೆ ಬೋಧನೆಗಳಿಗಿಂತಲೂ ನನ್ನ ಮನಸ್ಸಿಗೆ ಮುಖ್ಯವಾದ, ಮೂಲಭೂತವಾದ, ಅತ್ಯಂತ ಆವಶ್ಯಕವೆಂದು ತೋರುತ್ತಿರುವ ಅಂಗ ಈ ಪ್ರಚಾರೋಪನ್ಯಾಸ ಮತ್ತು ಪ್ರಕಟನೆಯ ಅಂಗಃ ಪ್ರಸಾರಾಂಗ. ಇದೇ ವಿಶ್ವವಿದ್ಯಾನಿಲಯದ ಜೀವನಾಡಿ ಮಿಡಿಯುತ್ತಿರುವ ಹೃದಯ. ಏಕೆಂದರೆ ನಮ್ಮ ಜನ ಬೆವರು ಸುರಿಸಿ ದುಡಿದುಕೊಟ್ಟ ಹಣದಿಂದ ನಮ್ಮ ಸರ್ಕಾರ ವಿಶ್ವವಿದ್ಯಾನಿಲಯವನ್ನು ನಡೆಸುತ್ತಿದೆ. ವಿಶ್ವವಿದ್ಯಾನಿಲಯ ಮೇಲ್ಮಟ್ಟದ ಜನಕ್ಕೆ ಬೋಧಿಸುತ್ತಿದೆ. ಜನಸಾಮಾನ್ಯನಿಗೆ ಏನು ಬಂತು? ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಶಾಖೆ ಜನತೆಯ ಅಂಗ. ವಿಶ್ವವಿದ್ಯಾನಿಲಯ ಹಿಂದಿನಿಂದಲೂ ಇದಕ್ಕೆ ಮಾನ್ಯತೆಯನ್ನು ಕೊಡುತ್ತಾ ಬಂದಿದೆ. ಅದಕ್ಕೂ ಸಮಧಿಕವಾಗಿ ಜನತೆಯಲ್ಲಿ ಜ್ಞಾನ ಪ್ರಸಾರ ಮಾಡುವ ಕಾರ್ಯವನ್ನು ಈಗ ಮತ್ತೊಮ್ಮೆ ವಿಶ್ವವಿದ್ಯಾನಿಲಯ ಕೈಗೊಳ್ಳುತ್ತದೆ; ಕೈಗೊಂಡಿದೆ. ಅದಕ್ಕೆ ಜನತೆಯ ಬೆಂಬಲ ಬೇಕು. ಉಪನ್ಯಾಸಗಳಿಗೆ ಜನರು ಬಂದು ನೆರೆಯಬೇಕು. ನಿಮಗೆ ಬೇಕಾದ ವಿಷಯಗಳೇನೆಂಬುದನ್ನು ತಿಳಿಸಬೇಕು. ಕಾರ್ಯದರ್ಶಿಗಳಿಗೆ ಕಾಗದ ಬರೆಯಬೇಕು. ಅವರು ಏರ್ಪಡಿಸುವ ಉಪನ್ಯಾಸಗಳನ್ನು ಕೇಳಬೇಕು.

ನಮ್ಮ ವಿಶ್ವವಿದ್ಯಾನಿಲಯ ಕೈಕೊಂಡಿರುವ ಈ ಬಗೆಯ ಕಾರ್ಯ, ಈ ರೂಪದಲ್ಲಿ, ಭರತಖಂಡದ ಮತ್ತಾವ ವಿಶ್ವವಿದ್ಯಾನಿಲಯದಲ್ಲೂ ಕಂಡು ಬಂದಿಲ್ಲ. ನಮ್ಮ ಮಹಿಮೆ, ಮಹತ್ತು ನಮಗೇ ಗೊತ್ತಿರಲಿಲ್ಲ. ಹೊರಗಿನಿಂದ ಇಲ್ಲಿಗೆ ಬಂದವರು – ಹೊರಗಿನ ದೊಡ್ಡ ಗವರ್ನರುಗಳು ಗ್ರಾಂಟ್ಸ್ ಕಮೀಷನ್ನಿನವರು ನಮ್ಮ ವಿಶ್ವವಿದ್ಯಾನಿಲಯಕ್ಕೆ ಬಂದು ಕ್ರಾಫರ್ಡ್‌ಹಾಲಿನ ಪ್ರಕಟನ ಶಾಖೆಯನ್ನೂ ಅಲ್ಲಿನ ಪುಸ್ತಕಗಳನ್ನೂ ನೋಡಿ, ಉಪನ್ಯಾಸಗಳ ವಿಚಾರವನ್ನು ಕೇಳಿ ತಿಳಿದುಕೊಂಡು, ಮೂಗಿನ ಮೇಲೆ ಬೆರಳಿಟ್ಟು ‘ಇದೇನು ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ! ನಿಮ್ಮ ಜನತೆಗೆ ಈ ವಿಶ್ವವಿದ್ಯಾನಿಲಯ ಇಷ್ಟೊಂದು ಉಪಕಾರವನ್ನು ಮಾಡುತ್ತಿದೆ! ಭರತಖಂಡದ ಮತ್ತಾವ ವಿಶ್ವವಿದ್ಯಾನಿಲಯದಲ್ಲೂ ಈ ಪ್ರಚಾರೋಪನ್ಯಾಸದ ರೀತಿ, ಈ ಪ್ರಕಟನೆಯ ವಿಧಾನ – ಇವೆರಡೂ ಇಲ್ಲ’ – ಎಂದು ಪ್ರಶಂಸಿಸಿ, ನಮಗೆ ಹೇಳಿ, ಬರೆದೂ ತಿಳಿಸಿದ್ದಾರೆ. ಹೀಗೆ ಅವರು ಹೇಳಿದ ಮೇಲೆ ನಮಗೆ ಗೊತ್ತಾಯಿತು – ಓಹೋ. ನಾವೂ ಬಹಳ ಕೆಲಸ ಮಾಡುತ್ತಿದ್ದೇವೆ – ಅಂತ. ಆದರೆ ಆ ಕೆಲಸ ಬರಿಯ ವಿಶ್ವವಿದ್ಯಾನಿಲಯದ ಅಧ್ಯಾಪಕ ವರ್ಗದವರಿಂದ ಮಾತ್ರ ಅಗತಕ್ಕದ್ದಲ್ಲ. ಜನತೆಯ ಸಹಕಾರದಿಂದ ಮಾತ್ರವೆ ಇದು ಸಾರ್ಥಕವಾಗಬೇಕಾದರೆ. ಆದ್ದರಿಂದ ನಾನು ಈ ವರ್ಷದ ಪ್ರಚಾರೋಪನ್ಯಾಸಮಾಲೆಯನ್ನು ಪ್ರಾರಂಭಿಸುತ್ತಾ ನಾಗಮಂಗಲದ ಜನತೆಯ ಮುಖಾಂತರವಾಗಿ ಕರ್ಣಾಟಕದ ಎಲ್ಲ ಜನತೆಯನ್ನೂ ಕೇಳಿಕೊಳ್ಳುತ್ತೇನೆ. ಈ ಪ್ರಚಾರೋಪನ್ಯಾಸಗಳನ್ನು ಅಲ್ಲಲ್ಲಿ ಏರ್ಪಡಿಸಿ, ಪ್ರಚಾರೋಪನ್ಯಾಸ ಶಾಖೆಯ ಕಾರ್ಯದರ್ಶಿಯವರಿಗೆ ಬರೆದರೆ ಅವರು ನೀವು ಕೇಳಿದ ಕಡೆ ಸಂತೋಷದಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಾರೆ. ನೀವು ತಿಳಿದುಕೊಳ್ಳಬೇಕೆಂದಿರುವ ವಿಷಯಗಳನ್ನು ಸೂಚಿಸಿದರೆ ಆಯಾ ವಿಷಯಗಳಲ್ಲಿ ತಜ್ಞರಾದವರನ್ನು ಕರೆದುಕೊಂಡು ಬಂದು ನಿಮಗೆ ಬೇಕಾದ ಮನರಂಜನೆಯ ವಿಷಯಗಳನ್ನೊ ವಿಜ್ಞಾನ ವಿಷಯಗಳನ್ನೊ ತಿಳಿಸಿ ಕೊಡುತ್ತಾರೆ.

ವಿಶ್ವವಿದ್ಯಾನಿಲಯದಲ್ಲಿ ಬೋಧಿಸುವುದು ಜನತೆಗೆ ಗೊತ್ತಾಗದ ಅನ್ಯ ಭಾಷೆಯಲ್ಲಿ. ಅದರಲ್ಲಿಯೆ ವಿಶೇಷ ಅಧ್ಯಯನ ಮಾಡಿದವರಿಗೆ ಮಾತ್ರ ಅದು ಅರ್ಥವಾಗುತ್ತದೆ. ಆದರೆ ಇಲ್ಲಿ ಬಂದು  ನಿಮಗೆಲ್ಲರಿಗೂ ತಿಳಿಯುವ ಕನ್ನಡ ಭಾಷೆಯಲ್ಲಿ ಉಪನ್ಯಾಸಕೊಟ್ಟು, ನಿಮ್ಮಡೊನೆ ನಿಮ್ಮಂತೆಯೆ ಇದ್ದು ಕೊಂಡು, ನೀವು ಕೇಳುವ ಪ್ರಶ್ನೆಗಳಿಗೆಲ್ಲ ನೇರವಾಗಿ ಉತ್ತರ ಕೊಟ್ಟು ಸರಸ್ವತಿಯ ಸೇವೆ ಮಾಡಲು ಅವರು ಸಿದ್ಧರಾಗಿದ್ದಾರೆ, ಉತ್ಸುಕರಾಗಿದ್ದಾರೆ. ಆ ಪೂಜೆಯಲ್ಲಿ ತಾವೆಲ್ಲರೂ ಭಾಗಿಗಳಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ.

ಕಡೆಯದಾಗಿ ಮತ್ತೊಂದು ವಿಷಯ. ನಮ್ಮ ವಿಶ್ವವಿದ್ಯಾನಿಲಯ ಪ್ರಚಾರೋಪನ್ಯಾಸಗಳನ್ನೂ ಇತರ ಗ್ರಂಥಮಾಲೆಗಳನ್ನೂ ಹೊರಡಿಸುತ್ತಿರುವಂತೆಯೆ ತ್ರೈಮಾಸಿಕ ಪತ್ರಿಕೆಯೊಂದನ್ನು ಹೊರಡಿಸುತ್ತಿದೆ. ಅದು ಹಿಂದೆ ವಿಶ್ವ ವಿದ್ಯಾನಿಲಯದ ಪತ್ರಿಕೆ ಆಗುವುದಕ್ಕೆ ಮುನ್ನ ಜನತೆಯ ಮಾಸ ಪತ್ರಿಕೆಯ ಆಗಿತ್ತು. ಇದೇ ‘ಪ್ರಬುದ್ಧ ಕರ್ಣಾಟಕ.’ ಅದು ವರ್ಷಕ್ಕೆ ನಾಲ್ಕು ಸಲ ಬರುತ್ತದೆ. ಒಂದೊಂದು ಸಾರಿಯೂ ಸುಮಾರು ಐನೂರು ಪುಟಗಳನ್ನು ಒಳಗೊಂಡಿರುತ್ತದೆ. ಅದರ ವಾರ್ಷಿಕ ಚಂದಾ ೩|| ರೂಪಾಯಿ. ಸ್ವಲ್ಪ ಹೆಚ್ಚು ಕಡಿಮೆ ಅದರ ಕಾಗದದ ಬೆಲೆಯಾಯಿತು. ಅದರಲ್ಲಿ ಆಧುನಿಕ ಸಾಹಿತ್ಯ, ವಿಜ್ಞಾನಗಳ ಜ್ಞಾನಭಂಡಾರ ತುಂಬಿರುತ್ತದೆ. ನೀವು ಓದಿ ಬಿಸಾಡುವ ಇತರ ಪತ್ರಿಕೆಗಳಂತೆ ಅಲ್ಲ ಅದು. ಶಾಶ್ವತವಾಗಿ ಗ್ರಂಥ ಭಂಡಾರದಲ್ಲಿ ಇಟ್ಟುಕೊಳ್ಳಬೇಕಾದ ಅಮೂಲ್ಯವಾದ ಪತ್ರಿಕೆ ಅದು. ಒಮ್ಮೆ ಚಂದಾದಾರರಾಗಿ ಒಂದು ವರ್ಷ ತರಿಸಿ ನೋಡಿ. ಮುಂದೆ ನಿಮ್ಮ ಇಚ್ಛೆ ತಿಳಿದಂತೆ ನೀವು ಮಾಡಬಹುದು.

ಕೊನೆಯದಾಗಿ, ನನ್ನ ಮಿತ್ರರು ಅನೇಕರು ಇಲ್ಲಿ ನೆರೆದು, ನಾನು, ನನ್ನ ಇತರ ಅನೇಕ ಮಿತ್ರರು ಕೈಕೊಂಡಿರುವಂತೆ, ಕೈಕೊಂಡಿರುವ ಸರಸ್ವತಿಯ ಸೇವೆಯನ್ನು ವಿಶ್ವಾಸದಿಂದ ಸ್ವಲ್ಪ ಹೆಚ್ಚಾಗಿಯೆ ಶ್ಲಾಘನೆಮಾಡಿ, ನನಗೆ ಈ ಮಾನಪತ್ರವನ್ನು ಅರ್ಪಿಸಿ ಗೌರವಿಸಿದ್ದೀರಿ. ನಾನು ಇದಕ್ಕೆ ಎಷ್ಟರಮಟ್ಟಿಗೆ ಅರ್ಹನೋ ನಾನರಿಯೆ. ಆದರೆ ನನ್ನ ಅರ್ಹತೆಗಿಂತಲೂ ಹೆಚ್ಚಾಗಿ ತಮ್ಮ ಹೃದಯದ ವಿಶ್ವಾಸದ ಅರ್ಹತೆ ಅದಕ್ಕಿದೆ ಎಂದು ನಾನು ಬಲ್ಲೆ. ಅದು ನನಗೆ ಒಂದು ವಿಧ್ವಾದ ಆಶೀರ್ವಾದವಾಗಿ ಪರಿಣಮಿಸಿ ನನ್ನ ಶ್ರೇಯಸ್ಸಿಗೆ ಕಾರಣವಾಗಲೆಂದು ಹಾರೈಸುತ್ತೇನೆ. ಅಲ್ಲದೆ, ನನ್ನ ಚೇತನದ ದೇವತೆಯೆ ಮೂರ್ತಿವೆತ್ತಂತೆ ಇರತಕ್ಕ ಈ ನಾಟ್ಯಸರಸ್ವತಿಯ ವಿಗ್ರಹವನ್ನು ನನಗೆ ಇಲ್ಲಿ ಕಾಣಿಕೆಯಾಗಿ ಅರ್ಪಿಸಿದ್ದೀರಿ. ಅದರ ಬೆಲೆ ಅನಘ್ಯವಾದುದು. ಮಾತನಾಡಿ ಅದರ ಬೆಲೆಯನ್ನು ಕಡಮೆ ಮಾಡಲು ನನಗೆ ಇಷ್ಟವಿಲ್ಲ. ಏಕೆಂದರೆ ಮಾತೆಲ್ಲ ಸೋತುಹೋಗುವಷ್ಟು ದೊಡ್ಡದು ಈ ಅರ್ಪಣೆ. ಇದು ನನಗೆ ಬರಿಯ ಕಲಾವಸ್ತು ಮಾತ್ರವಲ್ಲ; ಪೂಜಾ ವಸ್ತು. ಅಂದರೆ ಮನೆಯಲ್ಲಿ ಷೋಕಿಗಾಗಿ ಇಡುವ ಪದಾರ್ಥ ಮಾತ್ರವಲ್ಲ; ಅದು ನಿಜವಾಗಿಯೂ ವಾಗ್ದೇವಿ, ಮಾತಿನ ದೇವತೆ, ಆ ದೇವತಾಶಕ್ತಿ, ಆ ದೇವತಾಶಕ್ತಿಯ ಪ್ರತೀಕ. ಅದನ್ನು ನಾನು ಮನೆಯಲ್ಲಿ ನೋಡಿದಾಗಲೆಲ್ಲ ನಾಗಮಂಗಲವನ್ನೂ ನಾಗಮಂಗಲದ ಮಹಾ ಜನರನ್ನೂ, ಈ ಮಹಾಸೌಮ್ಯಕೇಶವನ ಬೃಹದ್ಗೋಪುರದ ದೇವಾಲಯವನ್ನೂ ನೆನೆನೆನೆದು ನನ್ನ ಅಂತಃಕರಣದ ಪೂಜೆಯನ್ನು ಈ ನಾಟ್ಯಸರಸ್ವತಿಗೆ ಅರ್ಪಿಸುತ್ತೇನೆ – ಎಂದು ತಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ.

ಇಷ್ಟೊಂದು ಜನ ನೆರೆದು ಇಷ್ಟೊಂದು ಸಾವಧಾನವಾಗಿ ಎಲ್ಲವನ್ನೂ ಕೇಳಿ ನಿಜವಾಗಿಯೂ ತಮ್ಮ ಅಂತಃಕರಣಗಳನ್ನು ತೆರೆದುದಕ್ಕಾಗಿ ಮತ್ತೊಮ್ಮೆ ಆ ಸೌಮ್ಯಕೇಶವ ದೇವನಿಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತೇನೆ.

* * *


[1] ತಾ|| ೧೩೧-೬-೧೯೫೮ ರಂದು ನಾಗಮಂಗಲದಲ್ಲಿ ನಡೆದ ಪ್ರಚಾರೋಪನ್ಯಾಸ ಸಪ್ತಾಹದ ಉದ್ಘಾಟನಾ ಮಹೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಮಾಡಿದ ಭಾಷಣ.