ಇಂದಿಗೆ ಸುಮಾರು ಮೂರುನಾಲ್ಕು ದಶಕಗಳ ಹಿಂದೆ ನನ್ನ ಬಾಲ್ಯೋತ್ತರ ತಾರುಣ್ಯ ತನ್ನ ಹೃದಯ ಶುಕ್ತಿಕೆಯನ್ನು ತೆರೆದು ಆಧ್ಯಾತ್ಮಿಕ ಪಿಪಾಸೆಯ ನಿವಾರಣಾರ್ಥವಾಗಿ ಬಾಯಿ ಬಾಯಿ ಬಿಡುತ್ತಿದ್ದಾಗ ಕನ್ನಡ ವಾಙ್ಮಯದಲ್ಲಿ ಅದನ್ನು ತಣಿಸುವ ಸ್ವಾತಿಯ ತೀರ್ಥ ಯಾವುದೂ ಸಿದ್ಧವಾಗಿರಲಿಲ್ಲ. ಅಂತಹ ಪವಿತ್ರ ತೃಪ್ತಿಯ ಸಾಧನೆಗಾಗಿ ನಾನು ಇಂಗ್ಲಿಷ್ ಭಾಷೆಯನ್ನೆ ಆಶ್ರಯಿಸಬೇಕಾಗಿತ್ತು. ಹಳ್ಳಿಯಲ್ಲಿ ಲೋವರ್ ಸೆಕೆಂಡರಿ ಪಾಸುಮಾಡಿ, ಪಟ್ಟಣಕ್ಕೆ ಹೈಸ್ಕೂಲಿನ ಮೊದಲನೆಯ ತರಗತಿಗೆ ಬಂದಿದ್ದ ನಾನು, ನನ್ನ ಕುಂಟು ಕುರುಡು ಇಂಗ್ಲಿಷಿನ ಹೆಗಲನ್ನೇರಿ, ಪಬ್ಲಿಕ್ ಲೈಬ್ರರಿಯಲ್ಲಿ ಬೀರುವಿನಿಂದ ಬೀರುವಿಗೆ ಪ್ರವಸಿಸುತ್ತಿದ್ದಾಗ, ನಾನು ನೀಡಬಹುದಾದ ಗೌರವವನ್ನೆಲ್ಲ ಸೂರೆಗೊಳ್ಳುವಂತೆ, ಲಕ್ಷಣವಾಗಿ ಅಚ್ಚಾಗಿದ್ದ ಸ್ವಾಮಿ ವಿವೇಕಾನಂದರ ಭಾಷಣಗಳ ದೀರ್ಘವಾದ ಪುಸ್ತಕಪಂಕ್ತಿ ಕಣ್ಣಿಗೆ ಬಿತ್ತು. ನಾನು ಅದಕ್ಕೆ ಮರುಳಾದೆ; ಸೆರೆಯಾದೆ. ಅತ್ಯಂತ ಕ್ಲೇಶಕರವಾಗಿದ್ದರೂ ಭಾಷೆಯ ಕೆಂಜಿಗೆಯ ಆ ಹಿಂಡಲಿನಲ್ಲಿ ನುಗ್ಗಿದೆ. ಏಕೆಂದರೆ ನನ್ನ ಚೇತನಕ್ಕೆ ಅಮೃತತ್ವವನ್ನು ನೀಡುವ ಆತ್ಮಶ್ರೀ ಅಲ್ಲಿ ವಿಪುಲ ಪ್ರಮಾಣದಲ್ಲಿ ಸಿದ್ಧವಾಗಿತ್ತು.

ಇಂದು ಪರಿಸ್ಥಿತಿ ತುಂಬ ವ್ಯತ್ಯಸ್ತವಾಗಿದೆ. ಅಂದು ಇಂಗ್ಲಿಷ್ ಭಾಷೆಯ ಮುಖಾಂತರವಲ್ಲದೆ ಪಡೆಯಲಸಾಧ್ಯವಾಗಿದ್ದುದೆಲ್ಲವನ್ನೂ ಇಂದು ಕನ್ನಡದಿಂದಲೆ ಸುಲಭವಾಗಿ ಸುಲಲಿತವಾಗಿ ಪಡೆಯಬಹುದಾದ ಶ್ರೀಮಂತ ಸ್ಥಿತಿ ನಮಗೆ ಒದಗಿದೆ. ಶ್ರೀರಾಮಕೃಷ್ಣ ವಿವೇಕಾನಂದ ಸಾಹಿತ್ಯಸಾಮಗ್ರಿಯೆಲ್ಲದೆ ಪೀಯೂಷವನ್ನೂ ಕನ್ನಡದ ಕಾಮಧೇನುವಿನ ಕೊಡಗೆಚ್ಚಲಿಂದಲೆ ಅನಾಯಾಸವಾಗಿ ಹೀರಿಕೊಳ್ಳುವ ಅವಕಾಶ ಕನ್ನಡಿಗರದಾಗಿದೆ. ಕರ್ಣಾಟಕ ರಾಜ್ಯದಲ್ಲಿರುವ ಶ್ರೀರಾಮಕೃಷ್ಣಾಶ್ರಮಗಳು ಶ್ರೀರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಶ್ರೀಮಾತೆ ಶಾರದಾದೇವಿಯವರು-ಇವರ ಮಹಾ ಜೀವನ ಚರಿತ್ರೆಗಳನ್ನೂ, ಹತ್ತಿಪ್ಪತ್ತು ಹೆಬ್ಬೊತ್ತಗೆಗಳಲ್ಲಿರುವ ಸ್ವಾಮಿ ವಿವೇಕಾನಂದರ ಎಲ್ಲ ಪತ್ರ ಭಾಷಣ ಲೇಖನಗಳನ್ನೂ, ಶ್ರೀರಾಮಕೃಷ್ಣ ಪರಮಹಂಸರ ಮಾತುಕತೆಗಳನ್ನು ಒಳಗೊಂಡಿರುವ ಮಾಸ್ಟರ್ ಮಹಾಶಯನ ಬಂಗಾಳಿಯ ಮಹಾಗ್ರಂಥ ‘ಶ್ರೀರಾಮಕೃಷ್ಣ ವಚನವೇದ’ವನ್ನೂ, ಗುರುದೇವನ ಅಂತರಂಗ ಶಿಷ್ಯರ ಭಾಷಣ ಸಂವಾದಾದಿಗಳನ್ನೊಳಗೊಂಡಿರುವ ಇತರ ಅನೇಕ ಪುಸ್ತಕಗಳನ್ನೂ ಸೊಗಸಾದ ಕನ್ನಡಕ್ಕೆ ಅನುವಾದ ಮಾಡಿ, ಅಚ್ಚುಕಟ್ಟಾಗಿ ಅಚ್ಚುಮಾಡಿ, ಸಾಮಾನ್ಯನಿಗಾಗಿ ಸುಲಭ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಕನ್ನಡ ಮಕ್ಕಳ ಆತ್ಮಶ್ರೀಗಾಗಿ ಆಧ್ಯಾತ್ಮಿಕ  ಸಂಪತ್ತು ಸೂರೆಹೋದಂತಿದೆ. ಅಮೃತಸರೋವರ ಹಿಂದೆಂದೂ ಈ ಪ್ರಮಾಣದಲ್ಲಿ ತುಂಬಿರಲಿಲ್ಲ. ಅದರ ದಿವ್ಯೋದಕ ‘ಸ್ತ್ರೀ ಶೂದ್ರ ಬಾಲಕಾ’ದಿಗಳಿಗೂ ಕೈಗೆಟುಕುವಷ್ಟರ ಮಟ್ಟಿಗೆ ಸಮೀಪವೂ ಸುಲಭವೂ ಆಗಿ ಮೇಲೇರಿದೆ; ತುಳುಕಿ ಹರಿಯುತ್ತಿದೆ ಎಂದರೂ ತಪ್ಪಾಗುವುದಿಲ್ಲ.

ಆ ಅಮೃತ ಸರೋವರ ನೆರೆಯೇರಿ ತುಂಬಿ ತುಳುಕುವಂತೆ ಮೂಡಿದ ಮಹಾನದಿಗಳಲ್ಲಿ ‘ಶ್ರೀರಾಮಕೃಷ್ಣ ಲೀಲಾಪ್ರಸಂಗ’ವೂ ಒಂದು ಅಗ್ರಗಣ್ಯ ದೇವಗಂಗೆ. ಅದರ ಮೂಲಕರ್ತೃ ಸ್ವಾಮಿ ಶಾರದಾನಂದರು ಶ್ರೀ ರಾಮಕೃಷ್ಣರ ಅಂತರಂಗಶಿಷ್ಯರಲ್ಲಿ ಮಹಾ ಶ್ರೇಷ್ಠರೆಂದು ಮಾನ್ಯರಾದವರು. ಸಿದ್ಧ ಸಿದ್ಧೋತ್ತಮರಾಗಿದ್ದ ಪರಮಹಂಸರೆ ಅವರನ್ನು ನಿತ್ಯಸಿದ್ಧರೆಂದೂ ಈಶ್ವರ ಕೋಟಿಯೆಂದೂ ಕರೆದಿದ್ದರು. ಅಂತಹರು ತಮ್ಮ ಪರಿಣತ ವಯಸ್ಸಿನಲ್ಲಿ, ತಮ್ಮ ಪಾಲಿಗೆ ಒದಗಿದ್ದ ಪ್ರತ್ಯಕ್ಷಾನುಭವದ ಆಧಾರದ ಮೇಲೆಯೆ ತಮ್ಮ ಮಹಾಗುರುವರೇಣ್ಯರ ದಿವ್ಯ ಜೀವನಯಾತ್ರೆಯನ್ನು ವಿಚಾರಬುದ್ಧಿಯಕಾಂತಿ ಎಲ್ಲಿಯೂ ಮಸುಳದ ಪೂಜ್ಯಬುದ್ಧಿಯಿಂದಲೂ ಭಾರತೀಯವಾದ ಪ್ರಾಚೀನ ಆಧ್ಯಾತ್ಮ ಶಾಸ್ತ್ರಗಳ ಕೂಲಂಕಷವಾದ ವಿದ್ವತ್ತಿನೊಡನೆ ಸಮನ್ವಯಗೊಂಡ ಪಾರ್ಶಚಾತ್ಯ ತತ್ತ್ವಶಾಸ್ತ್ರ ಮನೋವಿಜ್ಞಾನ ಭೌತಶಾಸ್ತ್ರಾದಿಗಳ ಸತ್ಯನಿಷ್ಠುರ ತೀಕ್ಷ್ಣ ಮೇಧಾ ಸಂಪನ್ನತೆಯಿಂದಲೂ ಸವ್ಯಾಖ್ಯಾನವಾಗಿ ಬರೆದಿದ್ದಾರೆ. ಬಂಗಾಳಿಯಲ್ಲಿ ‘ಮ’ ಅವರು ಬರೆದ ‘ಶ್ರೀರಾಮಕೃಷ್ಣ ಕಥಾಮೃತ’ಕನ್ನಡದಲ್ಲಿ ‘ಶ್ರೀರಾಮಕೃಷ್ಣವಚನವೇದ’ ಎಂಬ ಹೆಸರಿನಲ್ಲಿ ಪ್ರಕಟಿತವಾಗಿರುಷ್ಟೆ ಸಪ್ರಮಾಣ ಮಾತೃಗ್ರಂಥವಾಗಿ ಪರಿಣಮಿಸಿದೆ ಸ್ವಾಮಿ ಶಾರದಾನಂದರು ಬರೆದ ‘ಶ್ರೀರಾಮಕೃಷ್ಣಲೀಲಾ ಪ್ರಸಂಗ’.

ಸುಮಾರು ಮೂವತ್ತೊ ನಾಲ್ವತ್ತೊ ವರ್ಷಗಳ ಹಿಂದೆಯೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ದಿವಂಗತ ಪ್ರೊ.ವೆಂಕಣ್ಣಯ್ಯನವರು (ಆಗ ಬೆಂಗಳೂರು ಸೆಂಟ್ರಲ್  ಕಾಲೇಜಿನ ಅಧ್ಯಾಪಕರಾಗಿದ್ದರು) ಆ ಮಹಾಗ್ರಂಥವನ್ನು ಕನ್ನಡಕ್ಕೆ ಪರಿವರ್ತಿಸಲು ಪ್ರಾರಂಭಿಸಿದ್ದರು. ಬೆಂಗಳೂರು ಶ್ರೀರಾಮಕೃಷ್ಣಾಶ್ರಮದಿಂದ ಅದರ ಸ್ವಲ್ಪ ಭಾಗವು (‘ಪೂರ್ವಕಥೆ ಮತ್ತು ಬಾಲ್ಯಜೀವ’ ಎಂಬ ಮೊದಲನೆಯ ಭಾಗವು) ಒಂದು ಪುಸ್ತಕರೂಪದಲ್ಲಿ ಹೊರಬಂದಿತ್ತು. ಅವರ ಸಮರ್ಥಲೇಖನಿಯೆ ಅದನ್ನು ಪೂರ್ಣಗೊಳಿಸಿದ್ದರೆ ಸಾಹಿತ್ಯದೃಷ್ಟಿಯಿಂದಲೂ ಕನ್ನಡಿಕ್ಕಿಂದು ಒಂದು ಮಹಾದ್ಭುತ ಗ್ರಂಥ ದೊರೆಕೊಳ್ಳುವಂತಾಗುತ್ತಿತ್ತು. ಆದರೆ ಕನ್ನಡಿಗರಿಗೆ ಆ ಪುಣ್ಯ ಲಭಿಸಲಿಲ್ಲ. ಆದರೂ ಒಂದು ರೀತಿಯಲ್ಲಿ ಅವರ ಆ ಪ್ರಯತ್ನ ವ್ಯರ್ಥವಾಗಲಿಲ್ಲ ಎಂದು ಸಮಾಧಾನ ತಂದುಕೊಳ್ಳಬಹುದು. ಏಕೆಂದರೆ ಪ್ರಕೃತ ಗ್ರಂಥಕಾರರು ತಮ್ಮ ಭಾಷಾಂತರದಲ್ಲಿ ಆ ಭಾಗದ ಬೇಕಾದಷ್ಟು ಪ್ರಯೋಜನವನ್ನು ಸಾಕಷ್ಟುಮಟ್ಟಿಗೆ ಪೂರ್ಣವಾಗಿಯೆ ಬಳಸಿಕೊಂಡಿದ್ದಾರೆ.

ಆದರೆ ಇಂತಹ ಗ್ರಂಥದಲ್ಲಿ ನಮ್ಮ ಲಕ್ಷ್ಯವೆಲ್ಲ ವಿಶೇಷವಾಗಿ ವಸ್ತುವಿನ ಕಡೆಗೆ ಇರುತ್ತದೆಯೆ ಹೊರತು ಶೈಲಿಯ ಕಡೆಗಲ್ಲ. ಶೈಲಿಯ ದೃಷ್ಟಿಯಿಂದ ನಾವು ನಿರೀಕ್ಷಿಸುವ ಕನಿಷ್ಠಾಂಶವೆಂದರೆ-ಅರ್ಥಕ್ಕೆ ಬಾಧೆ ಬರದೆ ಅತಿಯಾಗಿ ತೊಡಕಾಗಿರದೆ ಇದ್ದರಾಯಿತು. ಆ ದೃಷ್ಟಿಯಿಂದ ಈ ಭಾಷಾಂತರ ಸಾಕಷ್ಟು ಸಮರ್ಪಕವಾಗಿದೆ ಎಂದು ಭಾವಿಸುತ್ತೇನೆ. ಆದರೆ ಪರಿಪೂರ್ಣತೆ ಸ್ವರೂಪತಃ ಅನಂತವಾದುದಲ್ಲವೆ?

‘ಲೀಲಾಪ್ರಸಂಗ’ದ ಮೂಲಕರ್ತೃ ಸ್ವಾಮಿ ಶಾರದಾನಂದರ ಬಂಗಾಳಿಯ ಶೈಲಿಖಡ್ಗ ವೆತ್ತಿ ಜಯಘೋಷ ಮಾಡುತ್ತ ಮುನ್ನುಗ್ಗುವ ಪಂಕ್ತಿ ಪಂಕ್ತಿ ಪಟುಭಟರಂತೆ ಜಟಿಲ ಪದಪುಂಜಗಳಿಂದಲೂ ದೀರ್ಘಸಮಾಸಭೂಯಿಷ್ಠವಾಗಿಯೂ ಧಾವಿಸುವ ಗೌಡೀರೀತಿಯದು. ಕನ್ನಡ ಭಾಷಾಂತರದಲ್ಲಿಯೂ ಆ ಮಹಾಶೈಲಿಯ ಖಂಡಖಂಡಗಳೂ ತುಂಡುಗಳೂ ಅಲ್ಲಲ್ಲಿ ತಲೆಹಾಕಿ ಓದುಗರನ್ನು ಬೆರಗುಗೊಳಿಸುತ್ತವೆ. ಅಂತಹ ಎಡೆಗಳಲ್ಲಿ ವಾಚಕರು ಧೈರ್ಯದಿಂದಲೂ ಎಚ್ಚರಿಕೆಯಿಂದಲೂ ಮುಂದುವರಿದರೆ ಅದರಿಂದೊದಗುವ ಪ್ರಯೋಜನದ ಸಂತೋಷವು ಸಾಹಸದಲ್ಲಿರಬಹುದಾದ ಕ್ಲೇಶವನ್ನು ಸಾರ್ಥಕಗೊಳಿಸಿ ಅದನ್ನು ಹಿಂದಿಕ್ಕುವುದರಲ್ಲಿ ಸಂದೇಹವಿಲ್ಲ.

‘ಲೀಲಾಪ್ರಸಂಗ’ವು ಇಂಗ್ಲಿಷಿಗೆ ಭಾಷಾಂತರವಾಗಿ The Great Master’ ಎಂಬ ಹೆಸರಿನಲ್ಲಿ ಪಾಶ್ಚಾತ್ಯರಿಗೂ ಲಭ್ಯವಾದಾಗ ನಮ್ಮಲ್ಲಿ ಕೆಲವರು ಅನ್ಯರ ಮುಂದೆ ತಮ್ಮ ಅಶ್ಲೀಲವನ್ನು ಬಿಚ್ಚಿದರೊ ಎಂಬಂತೆ ‘ಕೋಪಗೊಂಡು ಲಜ್ಜಿತರಾಗಿ ಟೀಕೆ ಮಾಡಿದರು. ಅವರ ಅಭಿಪ್ರಾಯದಲ್ಲಿ ‘ಲೀಲಾಪ್ರಸಂಗ’ವನ್ನು ಪಾಶ್ಚಾತ್ಯರಿಗೆ ಬಡಿಸುವಾಗ ಅದನ್ನು ಅವರ ಸಂಸ್ಕೃತಿ ಅಭಿರುಚಿಗಳಿಗೆ ಇಸ್ಸಿ ಎನ್ನಿಸದಂತೆ ಸೋಸಿ ಆಡಬೇಕಾಗಿತ್ತಂತೆ! ಮೈಮುಚ್ಚಿಕೊಂಡಿದ್ದೇವೆ ಎಂದು ತಿಳಿದಿರುವ ಭಾರತೀಯರ ವಸನ ಭೂಷಣಗಳನ್ನೆ ನಗ್ನತೆ ಎಂದು ತಿರಸ್ಕಾರದಿಂದ ಮುಖಮುರಿಯುವ ಪಾಶ್ಚಾತ್ಯರ ಮುಂದೆ ಪರಮಹಂಸರ ಜೀವನಚರಿತ್ರೆಯಲ್ಲಿ ಅಭಿಜಾತರುಚಿಸಮ್ಮತವಾದುದನ್ನು ಮಾತ್ರ ಇಂಗ್ಲಿಷಿಗೆ ಹಾಕಿ ಉಳಿದುದನ್ನು ಬಿಟ್ಟು ಬಿಡಬೇಕಾಗಿತ್ತಂತೆ! ಪರಮಹಂಸನಾದರೂ ನಗ್ನತೆಯನ್ನು ಅವರು ಹೇಗೆ ಸಹಿಸಿಯಾರು? ಭಾರತೀಯರು ಪವಿತ್ರರೆಂದು ಪರಿಗಣಿಸಿದರೂ ತಂತ್ರಶಾಸ್ತ್ರದ ಜುಗುಪ್ಸಾರ್ಹವಾದ ಕೆಲವು ವಾಮಾಚಾರ ಸಾಧನೆಗಳನ್ನುಕುರಿತು ಓದಿದರೆ ಪಾಶ್ಚಾತ್ಯರಿಗೆ ಥೂ ಎಂದು ಓಕರಿಸದಿರುವುದಕ್ಕೆ ಸಾಧ್ಯವಾಗುತ್ತದೆಯೆ? ಉಳಿದ ವಿಷಯಗಳಲ್ಲಿ ಶ್ರೀರಾಮಕೃಷ್ಣರನ್ನು ಮೆಚ್ಚಿ ಸ್ವಾಗತಿಸಿ ಸ್ವೀಕರಿಸಲು ಸಿದ್ಧರಾಗುತ್ತಿದ್ದವರೂ ಇದನ್ನೆಲ್ಲ ಓದಿದರೆ ಅಸಹ್ಯಪಟ್ಟುಕೊಂಡು ದೂರವಾಗುವುದಿಲ್ಲವೆ? ಅಂಥದನ್ನೆಲ್ಲ ಬಿಟ್ಟಿದ್ದರೆ ಶ್ರೀಗುರುವಿನ ಜೀವನ ಚರಿತ್ರೆಗೆ ಏನು ಮಹಾನಷ್ಟವಾಗುತ್ತಿತ್ತು?

ಆದರೆ ‘ಲೀಲಾಪ್ರಸಂಗ’ದ ಮೂಲಕರ್ತೃ ಸ್ವಾಮಿ ಶಾರದಾನಂದರು ಶ್ರದ್ಧಾಂಧರಲ್ಲ; ನಿಷ್ಠುರವಾದರೂ ಕಟುವಾದರೂ ಸತ್ಯವನ್ನೆ ಹೇಳುವ ಗೌರವಮತಿ. ಸತ್ಯದ ಹೊರರೂಪದ ಬೀಭತ್ಸತೆಯಿಂದ ವಂಚಿತರಾಗಿ ದೂರ ಓಡುವ ಅಧೀರ ಹೃದಯವಲ್ಲ ಅವರದು.

ಪರಮಹಂಸರ ಬದುಕು ಎಷ್ಟು ಸರಳವಾದುದೆಂದರೆ ಅದರಲ್ಲಿ ಮುಚ್ಚು ಮರೆ ಮಾಡಬೇಕಾದುದು ಯಾವುದೂ ಇಲ್ಲ. ಅದರ ಸತ್ಯವನ್ನು ವರ್ಣಿಸುವುದರಲ್ಲಿ ಶಿಷ್ಯನು ಅವಮಾನಪಟ್ಟುಕೊಳ್ಳುವಂಥಾದ್ದು ಏನೂ ಇಲ್ಲ. ಅದು ಶ್ರವಣ ಬೆಳ್ಗೊಳದ ಶ್ರೀ ಮಹಾಗೋಮಟೇಶ್ವರನಂತೆ ತನ್ನ ದಿಗಂಬರ ನಗ್ನತೆಯಲ್ಲಿಯೂ ಭೀಮಭವ್ಯ ಮತ್ತು ಪೂಜ್ಯ. ತಾನು ಪ್ರಚೋದಿಸುವ ಭೂಮಾನುಭೂತಿಯಿಂದ ಪ್ರೇಕ್ಷಕನ ಅಲ್ಪತ್ವವನ್ನು ಆಮೂಲವಾಗಿ ಅಪ್ಪಳಿಸಿ ಬಿಡುವಷ್ಟು ರುಂದ್ರಧೀರ! ಅದು ತನ್ನ ಯೋಗ್ಯತೆಗೆ ಯಾವ ನಾಗರಿಕನ ಸರ್ಟಿಫಿಕೇಟನ್ನೂ ಬಯಸುವುದಿಲ್ಲ. ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು. ಸಮರ್ಥನಾದ ಶಸ್ತ್ರ ಚಿಕಿತ್ಸಕನಾಗಬೇಕೆಂದು ಬಯಸುವ ವೈದ್ಯನು ಮನುಷ್ಯನ ಅಂಗಾಂಗಗಳ ನಗ್ನತೆಗಾಗಲಿ ಕುರೂಪಕ್ಕಾಗಲಿ ದುರ್ಗಂಧಕ್ಕಾಗಲಿ ಅಸಹ್ಯಪಟ್ಟುಕೊಂಡಂರೆ ತನ್ನ ವಿದ್ಯೆಯಲ್ಲಿ ಹೇಗೆತಾನೆ ಪಾರಂಗತನಾಗಲು ಸಾಧ್ಯ? ಅದರಲ್ಲಿಯೂ ಮನಃಶಾಸ್ತ್ರ ಸೀಮೆಯಲ್ಲಿ ಈಗತಾನೆ ಕಣ್ಣು ಬಿಡುತ್ತಿರುವ ಪಾಶ್ಚಾತ್ಯರಾಗಲಿ ಅಥವಾ ಅವರ ನಾಗರಿಕತೆಯ ತಳಕಿಗೆ ಮರುಳಾಗಿರುವ ಪ್ರಾಚ್ಯರಾಗಲಿ ಯೋಗಶಾಸ್ತ್ರ ಶಿಖರವನ್ನೇರಿ ನಿಂತಿರುವ ಭಾರತೀಯ ಅಧ್ಯಾತ್ಮ ಮಂದಿರವನ್ನು ಶಿಷ್ಯರಂತೆ ವಿನಯದಿಂದ ಪ್ರವೇಶಿಸಿದರೆ ಮಾತ್ರ ಅತೀಂದ್ರಿಯದ ಅನ್ವೇಷಣೆಯಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ ಸುಶ್ಲೀಲತಾನಾಮಕ ಅಲ್ಪದಲ್ಲಿಯೆ ಸುತ್ತುತ್ತಿರಬೇಕಾಗುತ್ತದೆ.

ಶ್ರೀರಾಮಕೃಷ್ಣರ ಅತ್ಯಂತ ಸಮೀಪದ ಅಂತರಂಗ ಶಿಷ್ಯವರ್ಗಕ್ಕೆ ಸೇರಿದ ಸ್ವಾಮಿ ಶಾರದಾನಂದರು ತಮ್ಮ ಮಹಾ ಗುರುವರ್ಯರ ಜೀವನ ದೇವತೆಯ ಪ್ರತಿಷ್ಠಾಪನೆಗಾಗಿ ನಿಸ್ಸಂದೇಹವಾದ ಶ್ರದ್ಧೆಯ ಅಸ್ತಿಭಾರದ ಮೇಲೆ ಅಳುಕಿಲ್ಲದ ಸಿದ್ಧಾಂತ ಮಂದಿರವನ್ನು ನಿರ್ಮಿಸಿದ್ದಾರೆ. ಗ್ರಂಥ ಪ್ರಾರಂಬದಲ್ಲಿಯೆ ಅವತಾರತ್ವದ ಸ್ವರೂಪದ ಮತ್ತು ಅವತಾರದ ಆವಶ್ಯಕತೆ ಇತ್ಯಾದಿಗಳನ್ನು ಐತಿಹಾಸಿಕವಾಗಿಯೂ ಆಧ್ಯಾತ್ಮಿಕವಾಗಿಯೂ ವಿಚಾರಪೂರ್ವಕವಾಗಿಯೂ ಚರ್ಚಿಸಿ, ಶ್ರೀರಾಮಕೃಷ್ಣರನ್ನು ಈ ಯುಗದ ಅವತಾರ ಪುರುಷರೆಂದು ಸಮರ್ಥಿಸಿದ್ದಾರೆ: “ಶ್ರೀರಾಮಚಂದ್ರ ಶ್ರೀಕೃಷ್ಣಾದಿ ರೂಪಗಳಿಂದ ಹಿಂದಿನ ಯುಗಗಳಲ್ಲಿ ಯಾರು ಅವತಾರಮಾಡಿ ಸನಾತನ ಧರ್ಮವನ್ನು ಸ್ಥಾಪಿಸಿದ್ದನೋ ಆತನೆ ವರ್ತಮಾನಕಾಲದ ಯುಗಪ್ರಯೋಜನಗಳನ್ನು ಸಾಧಿಸಲು ಶುಭಾಗಮನವಿತ್ತುದನ್ನು ಕಣ್ಣಾರೆ ಕಂಡು ಭಾರತವು ಪುನಃ ಧನ್ಯವಾಗಿದೆ” ಎಂದು ಕೊನೆಗಾಣುತ್ತದೆ ಅವರ ಮುನ್ನುಡಿಯ ಕಡೆಯ ವಾಕ್ಯ. ಅಂತಹ ಅಚಲ ಶ್ರದ್ಧೆಗೆ ಮತ್ತು ಪ್ರತ್ಯಾಕ್ಷಾನುಭವದ ಸಾಕ್ಷಾತ್ಕಾರಕ್ಕೆ ಕರೆಯಿಸಿಕೊಳ್ಳುವವರ ಸಂಪ್ರಾದಯ ದೃಷ್ಟಿಯಲ್ಲಿ ಎಷ್ಟೇ ಹೇಯವಾಗಿರಲಿ ಅಥವಾ ತಿರಸ್ಕೃತವಾಗಿರಲಿ, ಅವಮಾನಕರವೆಂದು ಬಚ್ಚಿಡಬೇಕಾಗುವ ಆವಶ್ಯಕತೆಯಿಲ್ಲ. ಪರಮಹಂಸರು ನಗ್ನತೆಗತೆ ನಾಚಿದವರಲ್ಲ, ಬರಿದು ಶಿಷ್ಟಾಚಾರದ ಅಭಿಪ್ರಾಯಕ್ಕೆ ಅಂಜಿದವರಲ್ಲ. ಸ್ವಾಮಿ ಶಾರದಾನಂದರ ‘ಲೀಲಾಪ್ರಸಂಗ’ ಆ ವಿಚಾರದಲ್ಲಿ ಎಲ್ಲಿಯೂ ನಾಚಿಲ್ಲ, ಯಾರಿಗೂ ಅಂಜಿಲ್ಲ.

ಶ್ರೀರಾಮಕೃಷ್ಣರನ್ನು ಕುರಿತು ಜನಪ್ರಿಯವಾಗಲೆಂದು ಬರೆದ ಅನೇಕ ಜೀವನಚರಿತ್ರೆಗಳನ್ನು ಓದಿದವರಿಗೆ ಅವರು ನಿರಕ್ಷರಕುಕ್ಷಿಯಾಗಿದ್ದರೆಂಬ ಒಂದು ಭ್ರಾಂತಿಯುಂಟಾಗುತ್ತದೆ. ಆ ಭ್ರಾಂತಿ ಸ್ವಲ್ಪಮಟ್ಟಿಗೆ ಭಕ್ತನಿಗೆ ಇಷ್ಟವಾದದ್ದೆ. ಏಕೆಂದರೆ ಅದು ಅವರ ಮಹಿಮೆಯನ್ನು ಶತಗುಣ ಸಹಸ್ರ ಗುಣವನ್ನಾಗಿ ಮಾಡಿ, ಅವರನ್ನು ಅಲೌಕಿಕ ಪವಾಡ ಪುರುಷರನ್ನಾಗಿ ಮಾಡುತ್ತದೆ. ಆದರೆ ಸ್ವಾಮಿ ಶಾರದಾನಂದರು ಅಂತಹ ಭಕ್ತಿಭ್ರಾಂತಿಯನ್ನು ನಿರಸನಗೊಳಿಸಿದ್ದಾರೆ. ಪರಮಹಂಸರ ಮಹಿಮಾಪ್ರತಿಷ್ಠಾಪನೆಗೆ ಯಾವ ಇಲ್ಲದ ಸಲ್ಲದ ಹುಸಿಯ ಅಡಪೂ ಅನಾವಶ್ಯಕ. ಗದಾಧರನು ಶಾಲೆಗೆ ಹೋಗಿದ್ದನು. ಓದು ಬರೆಹ ಚೆನ್ನಾಗಿ ಬಲ್ಲವನೂ ಆಗಿದ್ದನು. “ಬಳಕೆಯಲ್ಲಿದ್ದ ವಿದ್ಯಾಭ್ಯಾಸದಲ್ಲಿ ಕ್ರಮಕ್ರಮವಾಗಿ ಔದಾಸೀನ್ಯ ಹೆಚ್ಚಿದರೂ ಗದಾಧರನು ಆಗಲೂ ಎಂದಿನಂತೆ ನಿಯಮಿತನಾಗಿ ಪಾಠಶಾಲೆಗೆ ಹೋಗುತ್ತಿದ್ದನು. ಮಾತೃಭಾಷೆಯಲ್ಲಿ ಅಚ್ಚಾಗಿದ್ದ ಗ್ರಂಥಗಳನ್ನು ಓದುವುದರಲ್ಲಿಯೂ ಬರೆಯುವುದರಲ್ಲಿಯೂ ಆತನು ಹೆಚ್ಚಿನ ನೈಪುಣ್ಯವನ್ನು ಹೊಂದಿದ್ದನು. ಮುಖ್ಯವಾಗಿ ರಾಮಾಯಣ ಮಹಾಭಾರತಾದಿ ಧರ್ಮಗ್ರಂಥಗಳನ್ನು ಆತನು ಆಗ ಭಕ್ತಿಯಿಂದೊಡಗೂಡಿ ಬಹಳ ಮನೋಹರವಾಗಿ ಓದುತ್ತಿದ್ದನು. ಜನರು ಅದನ್ನು ಕೇಳಿ ಮುಗ್ಧರಾಗುತ್ತಿದ್ದರು”! “ಬಾಲಕನು ತನ್ನ ಏಕಸಂಧಿಗ್ರಾಹಿತ್ವದ ಗುಣದಿಂದ ಅವನ್ನೆಲ್ಲ ಕೇಳಿ ಅವುಗಳಲ್ಲಿ ಪಾರಂಗತನಾಗಿದ್ದನು. ಅಂತಹ ಉಪಾಖ್ಯಾನಗಳ ಮುದ್ರಿತ ಅಥವಾ ಕೈಬರಹದ ಗ್ರಂಥಗಳು ದೊರೆತಾಗ ಒಮ್ಮೊಮ್ಮೆ ಅವುಗಳನ್ನು ತನ್ನ ಕೈಯಿಂದಲೆ ಬರೆದು ಕೂಡ ಇಡುತ್ತಿದ್ದನು. ಗದಾಧರನ ಕೈಬರಹದ ‘ರಾಮಕೃಷ್ಣಾಯನ’ ಪುಸ್ತಕ, ‘ಯೋಗಮಾಯೆಯ ಗೀತ.’ ‘ಸುಬಾಹು ಪದ್ಯ’ ಮೊದಲಾದುವುಗಳನ್ನು, ಅವರ ಕಾಮಾರುಪುಕುರದ ಮನೆಯಲ್ಲಿ ಹುಡುಕುತ್ತಿದ್ದಾಗ, ಅವು ದೊರೆತಾಗ ನಾವು ಆ ವಿಷಯವನ್ನು ತಿಳಿದುಕೊಂಡೆವು.”

ಶ್ರೀರಾಮಕೃಷ್ಣರ ಜೀವನ ನಾಟಕಕ್ಕೆ ದಕ್ಷಿಣೇಶ್ವರವೆ ಅಗ್ರವೇದಿಕೆಯಾಗಿತ್ತು. ಆ ಅಗ್ರವೇದಿಕೆಯನ್ನು ತನಗರಿಯದೆಯೆ ನಿರ್ಮಾಣ ಮಾಡಿದ ರಾಣಿ ರಾಸಮಣಿ ಮತ್ತು ಆ ಪೂಜ್ಯೆಯ ಅಳಿಯ ಮಥುರಾನಾಥವಿಶ್ವಾಸ ಇವರಿಬ್ಬರೂ ಭಗವತ್ ಪ್ರೇಮೋನ್ಮಾದದ ಆವರ್ತಗರ್ತದಲ್ಲಿ ಸಿಕ್ಕಿ ಮುಳುಗೇಳುತ್ತಿದ್ದ ತರುಣ ಗದಾಧರನ ರಕ್ಷಣೆ ಪೋಷಣೆಗಳನ್ನು ಭಕ್ತಿಯಿಂದ ಹೊತ್ತು ಧನ್ಯರಾಗಿದ್ದಾರೆ. ಸ್ವಾಮಿ ಶಾರದಾನಂದರು ತಮ್ಮ ‘ಲೀಲಾಪ್ರಸಂಗ’ದಲ್ಲಿ ಆ ಇಬ್ಬರು ಶ್ರೀಮಂತ ಭಕ್ತರ ಮತ್ತು ಈ ‘ದರಿದ್ರಭಗವಂತ’ನ ಸಂಬಂಧದ ದಿವ್ಯವಾದ ಚಿತ್ರಣಕ್ಕೆ ಯೋಗ್ಯ ಪ್ರಮಾಣದಲ್ಲಿ ತಮ್ಮ ಗ್ರಂಥದ ಬಹುಭಾಗವನ್ನು ನಿವೇದಿಸಿ ಅವರಿಗೆ ಸಲ್ಲಬೇಕಾದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಇತರ ಅನೇಕ ಜೀವನ ಚರಿತ್ರೆಗಳನ್ನು ಓದುವಾಗ ವಾಚಕನಿಗೆ ಮಥುರಾನಾಥ ಮತ್ತು ರಾಸಮಣಿಯವರಿಗೆ ದೊರೆಯಬೇಕಾಗಿದ್ದ ಸ್ಥಾನಮಾನಗಳು  ದೊರೆಯಲಿಲ್ಲವೊ ಎಂಬಂತಾಗುತ್ತದೆ. ರಾಸಮಣಿ ಮಥುರಾನಾಥರ ನಿಧನದ ತರುವಾಯ ಶ್ರೀಗುರುವಿನ ಜೀವನದಲ್ಲಿ ಕಾಣಿಸಿಕೊಂಡಿರುವ ಕೇಶವಚಂದ್ರ ಸೇನನಂತಹ ಬ್ರಾಹ್ಮಸಮಾಜದವರಿಗೂ ನರೇಂದ್ರನಾಥನಂತಹ ಶಿಷ್ಯೋತ್ತಮರಿಗೂ ಯಾವ ಸ್ಥಾನಮಾನಗಳು ಲಭಿಸಿವೆಯೋ ಅಷ್ಟೇ ಸ್ಥಾಮಾನಗಳಿಗೆ ಅರ್ಹರಾಗಿದ್ದಾರೆ ರಾಸಮಣ ಮಥುರಾನಾಥರು ಎಂಬುದನ್ನು ‘ಲೀಲಾಪ್ರಸಂಗ’ದ ಕರ್ತೃ ಸುಪ್ರಕಟವಾಗುವಂತೆ ಚಿತ್ರಿಸಿದ್ದಾರೆ.

ಅಧ್ಯಾತ್ಮಸಾಧಕರಿಗೆ ಒಂದು ವಿಶ್ವಕೋಶದಂತಿರುವ ಈ ‘ಲೀಲಾಪ್ರಸಂಗ’ದಲ್ಲಿ ಚರ್ಚಿತವಾಗದಿಂದ ಮತ, ಧರ್ಮ ಮತ್ತು ತತ್ತ್ವವಸ್ತುಗಳು ಯಾವುವೂ ಇಲ್ಲವೆಂದು ತೋರುತ್ತದೆ. ಅದರ ವಿಸ್ತಾರವೂ ಮತ್ತು ವಿವರವೂ ಆದ ಅನುಭವಕ್ಕೆ ಓದುಗನು ಆ ಗ್ರಂಥಗಂಗೋತ್ರಿಗೇ ಪಾದಯಾತ್ರಿಯಾಗಿ ಏರಬೇಕು. ಆ ಮಹಾಪ್ರಸ್ಥಾನಕ್ಕೆ ಪೂರ್ವದ ಈ ನಾಂದೀಪೂಜಾಸ್ವರೂಪದ ಮುನ್ನುಡಿಯಲ್ಲಿ ಒಂದೆರಡು ವಿಶೇಷವಿಷಯಗಳ ಕಡೆಗೆ ಬೆರಳು ತೋರುವುದು ಮಾತ್ರ ಸಾಧ್ಯ.

ಶ್ರೀ ಶ್ರೀ ಠಾಕೂರರ ತಾಂತ್ರಿಕಸಾಧನೆಯ ವಿಚಾರವಾಗಿ ಬರೆಯುತ್ತ ಸ್ವಾಮಿ ಶಾರದಾನಂದರು ಆಧುನಿಕ ಅಭಿರುಚಿಗೆ ಬೀಭತ್ಸವಾಗಿ ತೋರುವ ವಿಷಯಗಳನ್ನು ಸತ್ಯನಿಷ್ಠೆಯಿಂದ ಹಿಂಜರಿಯದೆ ಉಲ್ಲೇಖಿಸಿದ್ದಾರೆ. ಅವುಗಳನ್ನು ಓದಿ ಮುಖ ಸಿಂಡರಿಸುವುದಲ್ಲ ನಿಜವಾದ ಜಿಜ್ಞಾಸುವಿನ ಕರ್ತವ್ಯ; ಗಂಭೀರ ಬುದ್ಧಿಯಿಂದ ಅವುಗಳನ್ನು ಮನಶ್ಯಾಸ್ತ್ರೀಯವಾಗಿ ವಿಶ್ಲೇಷಿಸಿ, ಸಾಧ್ಯವಾದರೆ ತಿಳಿದುಕೊಳ್ಳಲು ಪ್ರಯತ್ನಿಸುವುದೇ ಅವನ ಮುಂದಿರುವ ಮಾರ್ಗ. ಅಂತಹ ಘಟನೆಗಳು ವಿಜ್ಞಾನ ದೃಷ್ಟಿಗೆ ಪರಮಹಂಸರ ಬದುಕು ಹಾಕಿರುವ ಸವಾಲುಗಳಂತಿವೆ.

“ಒಂದು ದಿನ ಬ್ರಾಹ್ಮಣಿ ರಾತ್ರಿಹೊತ್ತು ಎಲ್ಲಿಂದಲೊ ಯೌವನೆಯಾದ ಒಬ್ಬಳು ಸುಂದರಿಯನ್ನು ಕರೆತಂದು ಪೂಜೆಯ ಸನ್ನಾಹವನ್ನು ಹೂಡಿ, ದೇವಿಯ ಆಸನದಲ್ಲಿ ಅವಳನ್ನು ಕುಳ್ಳಿರಿಸಿ, ನನ್ನನ್ನು ಸಂಬೋಧಿಸಿ ‘ಬಾಬಾ, ಇವಳನ್ನು ದೇವೀಬೋಧೆಯಿಂದ ಪೂಜಿಸು’ ಎಂದಳು. ಪೂಜೆ ಸಾಂಗವಾದ ಬಳಿಕ ‘ಬಾಗ, ಸಾಕ್ಷಾತ್ ಜಗಜ್ಜನನಿ ಎಂಬ ಬೋಧೆಯಿಂದ ಇವಳ ತೊಡೆಯ ಮೇಲೆ ಕುಳಿತುಕೊಂಡು ತನ್ಮಯಚಿತ್ತದಿಂದ ಜಪಮಾಡು’ ಎಂದಳು. ಆಗ ನಾನು ಅಂಜಿಕೆಯಿಂದ ಅತ್ತು ಜಗದಂಬೆಯನ್ನು ಕೇಳಿಕೊಂಡೆ: ‘ತಾಯಿ, ನಿನ್ನನ್ನು ಮರೆಹೊಕ್ಕ ನನಗೆ ಎಂತಹ ಅಪ್ಪಣೆ ಮಾಡುತ್ತೀಯೆ? ದುರ್ಬಲ ಮಗುವಿಗೆ ಅಂತಹ ದುಡುಕಿನ ಸಾಮರ್ಥ್ಯವೆಲ್ಲಿ?’ ಹಾಗೆ ಹೇಳಿದೊಡನೆಯೆ ದಿವ್ಯಶಕ್ತಿಯಿಂದ ನನ್ನ ಹೃದಯವು ಪೂರ್ಣವಾಯಿತು. ಅಲ್ಲದೆ, ದೇವತಾವೇಶ ಬಂದವನಂತೆ, ಏನು ಮಾಡುತ್ತೇನೆಂದು ಯಥಾರ್ಥವಾಗಿ ತಿಳಿಯದೆ, ಮಂತ್ರೋಚ್ಚಾರಣೆ ಮಾಡುತ್ತ ಮಾಡುತ್ತ ಆ ಹೆಂಗಸಿನ ತೊಡೆಯಮೇಲೆ ಕುಳಿತುಕೊಂಡೊಡನೆಯೆ ಸಮಾಧಿಸ್ಥನಾದೆ! ಅನಂತರ ಪ್ರಜ್ಞೆ ಬಂದಾಗ ಬ್ರಾಹ್ಮಿಣಿ ‘ಬಾಬಾ, ಕ್ರಿಯೆ ಸಂಪೂರ್ಣವಾಯಿತು. ಇತರರು ಕಷ್ಟದಿಂದ ತಾಳ್ಮೆಯನ್ನವ ಲಂಬಿಸಿ ಆ ಅವಸ್ಥೆಯಲ್ಲಿ ಜಪವನ್ನು ಮಾತ್ರ ಮಾಡಿಯೆ ಬಿಟ್ಟು ಬಿಡುತ್ತಾರೆ; ನೀನಾದರೋ ಪೂರ್ತಿ ದೇಹಬೋಧರಹಿತನಾಗಿ ಸಮಾಧಿಸ್ಥನಾದೆ!’ ಎಂದು ಹೇಳಿದಳು. ಕೇಲಿ ಸಮಾಧಾನಗೊಂಡೆ, ಪರೀಕ್ಷೆಯಲ್ಲಿ ಉತ್ತೀರ್ಣನಾದುದಕ್ಕೆ ಶ್ರೀ ಜಗದಂಬೆಗೆ ಕೃತಜ್ಞತಾಪೂರ್ಣವಾದ ಆಂತರ್ಯದಿಂದ ಬಾರಿ ಬಾರಿಗೂ ಪ್ರಣಾಮ ಮಾಡಿದೆ.”

ಇದು ನಡೆದು ಬಹುಕಾಲದ ಮೇಲೆ ತಮ್ಮಲ್ಲಿಗೆ ಬಂದ ತರುಣಶಿಷ್ಯರಿಗೆ ಅದನ್ನೆಲ್ಲಾ ವರ್ಣಿಸುತ್ತಾ ಎಚ್ಚರಿಕೆ ಹೇಳಿದ್ದಾರೆ: ಅಂತಹ ತಾಂತ್ರಿಕ ಸಾಧನೆಗಳನ್ನು ಕೈಕೊಂಡು ಅನೇಕ ಸಾಧಕರು ಪತಿತರಾಗಿ ಅಧೋಗತಿಗಿಳಿದು ಹೋಗುತ್ತಾರೆ. ಆದ್ದರಿಂದ ಕಲಿಯುಗಕ್ಕೆ ನಾರದೀಯ ಭಕ್ತಿ ಸಾಧನೆಯೆ ಸರ್ವೋತ್ತಮ ಪಥ ಎಂದು.

‘ಶ್ರೀರಾಮಕೃಷ್ಣ ವಚನವೇದ’ ಮತ್ತು ‘ಶ್ರೀರಾಮಕೃಷ್ಣ ಲೀಲಾಪ್ರಸಂಗ’ ಇವೆರಡೂ ಬೃಹದ್ ಗ್ರಂಥಗಳು ಒಂದಕ್ಕೊಂದು ಪೂರಕವಾಗಿ, ಶ್ರೀಗುರುವಿನ ಮಹಾದ್ಭುತ ಜೀವನ ಸಾಗರಕ್ಕೆ ಭೂವ್ಯೋಮ ಸದೃಶವಾದ ವಿಸ್ತಾರವೇದಿಕೆಯನ್ನು ನಿರ್ಮಿಸಿವೆ. ಆ ಪವಿತ್ರವೇದಿಕೆಯನ್ನು ಪ್ರವೇಶಿಸುವ ಚೇತನಕ್ಕೆ ಬಡತನವುಂಟೆ? ಭಯವುಂಟೆ? ಅದರ ಪುಣ್ಯಕ್ಕೆಣೆಯುಂಟೆ? ಅದರ ಧನ್ಯತೆಗೆ ಪಾರವುಂಟೆ? ಪೀಯೂಷ ಪಾನ ಮಾಡುತ್ತಾ ಮಾತೆಯ ಮಡಿಲಲ್ಲಿ ಮಲಗುವ ಮಗುವಾಗುತ್ತೇವೆ; ಭಕ್ತಿಯೆ ಹೃದಯವಾಗಿ, ಜ್ಞಾನವೆ ಶ್ವಾಸಕೋಶವಾಗಿ, ಅಮೃತತ್ವದ ಔರಸ ಅಧಿಕಾರೀ ಪುತ್ರರಾಗುತ್ತೇವೆ!

‘ವಚನವೇದ’ದ ಕರ್ತೃ ಮಹೇಂದ್ರನಾಥ ಗುಪ್ತರು. ಅವರು ಪರಮಹಂಸರ ಅಂತರಂಗವಲಯಕ್ಕೆ ಸೇರಿದ ಸಂಸಾರೀ ಶಿಷ್ಯಾಗ್ರಣಿ. ‘ಲೀಲಾಪ್ರಸಂಗ’ದ ಕರ್ತೃ ಸ್ವಾಮಿ ಶಾರದಾನಂದರು ಶ್ರೀಗುರುದೇವನ ಅಂತರಂಗ ಶಿಷ್ಯವರ್ಗಕ್ಕೆ ಸೇರಿದ ಮಹಾ ಸನ್ಯಾಸಿ. ‘ವಚನವೇದ’ವು ಪರಮಹಂಸರ ಅಂದಂದಿನ ಮಾತುಕತೆಗಳ ಯಥಾವತ್ತಾದ ದಿನಚರಿಯ ಬೃಹದ್ ವರದಿ. ಅದರ ಭಾಷೆ ಆಡುನುಡಿ; ಅದರ ರೀತಿ ಅತ್ಯಂತ ಸರಳ. ‘ಲೀಲಾ ಪ್ರಸಂಗ’ ವಾದರೋ ಶ್ರೀ ಶ್ರೀಠಾಕೂರರ ನಿಧನಾನಂತರ ಅವರ ಅತ್ಯಂತ ಸಮೀಪದ ಶಿಷ್ಯವರೇಣ್ಯರಲ್ಲಿ ವಿಶೇಷಮಾನ್ಯರಾಗಿ, ತತ್ತ್ವವೇತ್ತರಾಗಿ, ಪ್ರಾಚ್ಯ ಪಾಶ್ಚಾತ್ಯ ನವೀನ ವಿದ್ಯಾಭ್ಯಾಸದ ಪೂರ್ಣಪ್ರಭಾವವನ್ನು ಪಡೆದವರಾಗಿ, ತರ್ಕಬುದ್ಧಿಯನ್ನೂ ವೈಜ್ಞಾನಿಕದೃಷ್ಟಿಯನ್ನೂ ಚೆನ್ನಾಗಿ ಅಳವಡಿಸಿಕೊಂಡವರಾಗಿ, ಶಾಸ್ತ್ರಭ್ಯಾಸದಿಂದಲೂ ಸ್ವಂತಸಾಧನೆಯಿಂದಲೂ ಆಧ್ಯಾತ್ಮಿಕ ವಿಚಾರಗಳನ್ನು ಬೋಧಿಸಲೂ ಶೋಧಿಸಲೂ ಅಧಿಕಾರೀಪುರುಷರಾಗಿ, ಬಹುಜನ ಪೂಜಾ ಗೌರವಭಾಜನರಾಗಿ ಇದ್ದವರೊಬ್ಬರು ಸಪ್ರಮಾಣವಾಗಿ ಸಾವಧಾನವಾಗಿ ವಿಚಾರ ಪೂರ್ವಕವಾಗಿ, ಚೆನ್ನಾಗಿ ಆಲೋಚಿಸಿ ಮಥಿಸಿ ಸಂಶೋಧಿಸಿ, ವಿದ್ವಜ್ಜನ ಸಮ್ಮತವಾಗುವಂತೆ ಬರೆದಿರುವ ಮಹಾಗ್ರಂಥ. ಅವರೆಡೂ ಒಂದಕ್ಕೊಂದು ಬೆಂಬಲವಾಗಿ, ಪೂರಕವಾಗಿ, ಸಂಸಾರಿಗಳಲ್ಲಿ ಪರಮ ಸನ್ಯಾಸಿಯೂ ಸನ್ಯಾಸಿಗಳಲ್ಲಿ ಪರಮಸಂಸಾರಿಯೂ ಆಗಿರುವ ಶ್ರೀ ಮಹಾಗುರುವಿನ ಸಮಗ್ರವೂ ಸಮನ್ವಿತವೂ ಆದ ಸರ್ವಗ್ರಾಸಿ ಸರ್ವತೋಮುಖ ಭಗವದ್ ವ್ಯಕ್ತಿತ್ವವನ್ನು ಓದುಗನ ಅಭೀಪ್ಸಾಪೂರ್ಣ ಹೃದಯಕ್ಕೆ ಸಮರ್ಪಿಸುತ್ತಿವೆ. ಸಾವಿರಾರು ದೇವಾಲಯಗಳೂ ಪುಣ್ಯಕ್ಷೇತ್ರಗಳೂ ಮಾಡಲಾರದ ಉದ್ದಾರವನ್ನು ಅವು ಮಾಡಬಲ್ಲುವಾಗಿವೆ. ಯಾವ ತೀರ್ಥಯಾತ್ರೆಯೂ ನೀಡಲಾರದ ಪರಿಶುದ್ದಿಯನ್ನೂ ಆತ್ಮಶಕ್ತಿಯನ್ನೂ ಅವು ಸುಲಭವಾಗಿ ಅಪ್ರಯಾಸಕರವಾಗಿ ನೀಡುತ್ತವೆ. ಅಂಜಲಿಬದ್ಧರಾಗಿ ವಿನಯಭಕ್ತಿಗಳಿಂದ ಅಂತರ್ಮುಖಿಗಳಾಗಿ ಯಾತ್ರಿಕರಾಗುವವರಿಗೆ ಅಲ್ಲಿ ಭಗವದನುಗ್ರಹ ತನ್ನ ವರದ ಹಸ್ತವನ್ನು ಕರುಣಾಪೂರ್ಣ ಕೃಪೆಯಿಂದ ಚಾಚುತ್ತದೆ; ಬಾಚಿ ತಬ್ಬಿಕೊಳ್ಳುತ್ತದೆ, ತನ್ನ ಅಮೃತ ವಕ್ಷಕ್ಕೆ. ಊರ್ಧ್ವಮುಖ ಪ್ರವಾಸ ಕೈಕೊಳ್ಳುವ ಬದ್ಧ ಜೀವ ಅಜ್ಞಾನ ಅಧೈರ್ಯ ಅವಿಧ್ಯೆಗಳನ್ನು ಪರಿಹರಿಸಿ, ಅದನ್ನು ಅತ್ಯಂತ ಧನ್ಯತಮವಾದ ಸಿದ್ಧಿಸ್ಥಿತಿಗೆ ಕರೆದೊಯ್ಯುವ ದೈವೀಶಕ್ತಿಯ ಪ್ರತೀಕಗಳಾಗಿವೆ ‘ಶ್ರೀರಾಮಕೃಷ್ಣ ವಚನವೇದ’ ಮತ್ತು ‘ಶ್ರೀರಾಮಕೃಷ್ಣ ಲೀಲಾಪ್ರಸಂಗ.’

* * *


[1] ಸ್ವಾಮಿ ಶಾರದಾನಂದರು ಬಂಗಾಳಿಯಲ್ಲಿ ಬರೆದ ‘ಶ್ರೀರಾಮಕೃಷ್ಣ ಲೀಲಾಪ್ರಸಂಗ’ವನ್ನು ಸ್ವಾಮಿ ಪ್ರಣವೇಶಾನಂದರು ಕನ್ನಡಕ್ಕೆ ಪರಿವರ್ತಿಸಿದ್ದಾರೆ.