ಯಾವ ವಿದ್ಯಾರ್ಥಿನಿಲಯದ ಯಾವ ಸಮಾರಂಭವಾಗಲಿ ಇಷ್ಟು ಶಾಂತತೆಯಿಂದ ಇಷ್ಟು ಶಿಸ್ತಿನಿಂದ ಇಷ್ಟು ನಿರ್ಮಲ ಭಾವನೆಯಿಂದ ನಡೆಯುವುದಾದರೆ ನಮ್ಮ ದೇಶದ ಕಲ್ಯಾಣ ಬಹುದೂರವಿಲ್ಲವೆಂದು ಭಾವಿಸುತ್ತೇನೆ. ಅದು ಬಹುಶಃ ಈ ಪವಿತ್ರ ಸಮಾರಂಭದ ಕಾರಣವಾಗಿ ಏರ್ಪಟ್ಟಿರಬಹುದು. ಇಂತಹ ಪವಿತ್ರಗೆ ಅಧೀನವಾಗುವಂತಹ ಚೇತನವನ್ನು ಪಡೆದ ತರುಣರು ಈ ಸಂಖ್ಯೆಯಲ್ಲಿ ನಮ್ಮ ನಾಡಿನಲ್ಲಿದ್ದಾರೆಂದರೆ ಅಭ್ಯುದಯದ ಕಾಲ ಹೆಚ್ಚು ದೂರದಲ್ಲಿಲ್ಲವೆಂಬ ಧೈರ್ಯವಾಗುತ್ತದೆ.

ಮಹಾರಾಜಾ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಶ್ರೀ ಅರವಿಂದರ ಚಿತ್ರವನ್ನು ಅನಾವರಣ ಮಾಡಬೇಕೆಂದು ಕೇಳಿದಾಗ ಸಂತೋಷ ಭಾವದಿಂದ ಒಪ್ಪಿಕೊಂಡೆ. ಅದಕ್ಕೆ ಎರಡು ಮೂರು ಕಾರಣಗಳಿವೆ. ನನಗೆ ಶ್ರೀ ಅರವಿಂದರಲ್ಲಿರುವ ಅಸಾಧಾರಣ ಪೂಜ್ಯಭಾವನೆ ಮೊದಲನೆಯ ಕಾರಣ. ಎರಡನೆಯದಾಗಿ, ಅಂತಹ ಪೂಜ್ಯ ಸಾನ್ನಿಧ್ಯವನ್ನು ಪ್ರಸರಿಸುವ ಮಹಾಪುರಷನ ಭಾವಚಿತ್ರ ವಿದ್ಯಾರ್ಥಿನಿಲಯದಲ್ಲಿದ್ದರೆ ಅದರ ಪ್ರಭಾವ ಬೇರೆ ಬೇರೆ ಚೇತನಗಳನ್ನೂ ಜಾಗ್ರತಗೊಳಿಸಲು ಪ್ರೇರಕವಾಗಬಹುದೆಂಬ ಆಸೆ. ಮೂರನೆಯದಾಗಿ ನನ್ನ ಅಧಿಕಾರ ಸ್ಥಾನದಲ್ಲಿ ನನಗೆ ಇಂತಹ ಸನ್ನಿವೇಶ ಒದಗುವುದು ಸ್ವಲ್ಪ ಅಪೂರ್ವ. ವಿದ್ಯಾರ್ಥಿಗಳ ಮರ್ಧಯೆ, ಅಧ್ಯಾಪಕರ ಮಧ್ಯೆ, ಲೌಕಿಕ ವೃತ್ತಿಗಳ ಚಲನೆಗೆ ಅವಕಾಶವಿಲ್ಲದ ನಿರ್ಮಲ ಭಾವಗಳಲ್ಲಿ ಭಾಗಿಯಾಗುವ ಸದವಕಾಶವಿದು. ಈ ದಿನ ಬೆಳಗ್ಗೆಯವರೆಗೆ ಶ್ರೀ ಅರಿವಿಂದರ ವಿಚಾರವಾಗಿ ಯೋಚಿಸುವುದಕ್ಕೂ ಅವಕಾಶ ದೊರಕಲಿಲ್ಲ. ನಿನ್ನೆಯ ದಿನ ಕುಂಭದ್ರೋಣದ ಮಳೆಯಲ್ಲಿ ಮಧ್ಯರಾತ್ರಿ ಮೈಸೂರಿಗೆ ಹಿಂತಿರುಗಿದೆ. ಬೆಳಿಗ್ಗೆ ಈ ಪವಿತ್ರ ಕಾರ್ಯಕ್ಕೆ ಏನಾದರೂ ಪೂರ್ವಸಿದ್ಧತೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಯೋಚಿಸಿದೆ. ಆದರೆ ಅದೂ ಸಾಧ್ಯವಾಗಲಿಲ್ಲ. ನನ್ನ ಭಾಷಣವನ್ನು ‘ರೆಕಾರ್ಡ್’ ಮಾಡುತ್ತೇವೆ ಎಂದು ಬೇರೆ ಹೇಳಿದ್ದರು! ಲೋಕಾಭಿರಾಮವಾಗಿ ಮಾತನಾಡಿ, ಹಾಕಿದ ಹಾರ ಕೊಟ್ಟ ತಿಂಡಿಯನ್ನು ಸ್ವೀಕರಿಸಿ, ಕೈ ಚಪ್ಪಾಳೆಯೊಡನೆ ಸಮಾರಂಭವನ್ನು ಮುಗಿಸುವುದು ಸಾಧ್ಯವಾಗಬಹುದು. ಆದರೆ ಇಂದಿನ ಸಮಾರಂಭದ ಗಂಭೀರ ಗುರುತ್ವವನ್ನು ಗುರುತಿಸಬೇಕು.

ಶ್ರೀ ಅರವಿಂದರ ಅವ್ಯಕ್ತ ಆಧ್ಯಾತ್ಮಿಕ ಚೇತನದ ಮಾತಿರಲಿ, ಅತ್ಯಲ್ಪ ಪ್ರಮಾಣದಲ್ಲಿಯಾದರೂ ಅವರ ವಾಙ್ಮಯ ಶರೀರದ ಈಷತ್ ಪರಿಚಯ ಮಾಡಿಕೊಳ್ಳುವುದೆಂದರೆ ಸಾಗರಪರ್ಯಟನ ಹಿಮಾಲಯಪ್ರವಾಸಗಳನ್ನು ಒಟ್ಟಿಗೆ ಕೈಗೊಂಡಂತೆ! ಆ ಉತ್ತುಂಗ ಶೃಂಗವನ್ನೇರಿ ಬರುವ ಚೇತನ ಎಷ್ಟು ಶಾಂತ, ಶಕ್ತ, ಸಮರ್ಥವಾಗಿರಬೇಕು! ಅವರ ಸಮಗ್ರ ಪರಿಚಯ ಮಾಡಿ ಕೊಡುವಂತಹ ಧೂರ್ತ ಕಾರ್ಯಕ್ಕೆ ಇಂದು ತೊಡಗುವುದಿಲ್ಲ. ಅತ್ಯಪೂರ್ವ ಚೇತನಗಳು ಅವರನ್ನು ಅವರ ಆಧ್ಯಾತ್ಮಿಕ ಅತಿಮಾನಸ ಸ್ವರೂಪಗಳಲ್ಲಿ ಕ್ರಮಕ್ರಮೇಣ ಅರಿಯಲು ಯತ್ನಿಸಬಹುದು. ಕೋಟಿ ಜನರಲ್ಲಿ ಒಬ್ಬರು ಅಂತಹ ಹಿರಿದಾದ ಸಾಧನೆಯನ್ನು ಕೈಕೊಂಡರೂ ಭೂಮಿಯ ಏಳಿಗೆಯ ಸಲ್ಲಕ್ಷಣವಾಗುತ್ತದೆ. ಆ ಅಪೂರ್ವತೆ ಗಹನತೆ ಅಸಾಧ್ಯತೆಗಳನ್ನೂ ಸೂಚಿಸಿ ಭಗವದ್‌ವಾಣಿ ಹೀಗೆ ಸಾರುತ್ತದೆ:

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ |
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ||
– ಗೀತೆ ೭, ೩.

ಸಿದ್ಧಿಗಾಗಿ ಯತ್ನಿಸುವವರೆ ವಿರಳ. ಹಾಗೆ ಪ್ರಯತ್ನಿಸುವ ಅನೇಕ ಸಾಧಕರಲ್ಲಿ ಯಾರೋ ಒಬ್ಬನು ಸಿದ್ಧಿಯನ್ನು ಪಡೆಯುತ್ತಾನೆ. ಈ ಮಾತು ಸಿದ್ಧಿಯ ಗಹನತೆ ಅಪೂರ್ವತೆಗಳನ್ನು ಸೂಚಿಸುತ್ತದೆ. ಹೀಗೆ ಮಾತನಾಡಿ ನಿಮ್ಮ ಎಳೆಯ ಹೃದಯವನ್ನು ಹೆದರಿಸುವ ಕಾರ್ಯಕ್ಕೆ ತೊಡಗಿದ್ದೇನೆ ಎಂದು ತಿಳಿಯಬೇಡಿ. ಆಕಾಶಕ್ಕಿಂತಲೂ ಭಯಾನಕ, ಭವ್ಯ, ಅನಂತ, ವಿಸ್ತಾರ, ಅತೀತ ಆಗಿರುವುದು ನಮ್ಮ ದೃಗಿಂದ್ರಿಯಕ್ಕೆ ಬೇರಾವುದಾದರೂ ಗೋಚರವಾಗುತ್ತದೆಯೆ? ಆಕಾಶವನ್ನೂ ಅರಿಯದೆ ಲಕ್ಷಿಸದೆ ವಾಸಿಸುವವರಿದ್ದಾರೆ. ಯಾವುದು ಭವ್ಯವೂ ಅದು ಅಹಂಕಾರವನ್ನು ಅಪ್ಪಳಿಸುವುದರಲ್ಲಿಯೆ ಪರ್ಯವಸಾನವಾಗುವುದಿಲ್ಲ; ಸ್ವಸ್ವರೂಪದ ಅರಿವಿಗೆ ಪ್ರೇರಕವಾಗುತ್ತದೆ. ಭೂಮದ ಸಾಧನೆ ಭಯಂಕರವಲ್ಲ, ಶಂಕರ. ಶ್ರೀ ಅರವಿಂದರು ದೈವೀ ಭವ್ಯತೆಯ ವ್ಯಕ್ತಿ. ಆಸುರೀ ಭವ್ಯತೆ ನಮ್ಮನ್ನು ಅಪ್ಪಳಿಸುವುದರಲ್ಲಿಯೆ ಪರ್ಯವಸಾನವಾಗುತ್ತದೆ, ದೈವೀ ಭವ್ಯತೆ ಭೂಮಕ್ಕೇರಿಸುತ್ತದೆ.

ಯಾವ ವ್ಯಕ್ತಿಯ ಭಾವಚಿತ್ರವನ್ನಾದರೂ ವಾಸ್ತವವಾಗಿ ಅನಾವರಣ ಮಾಡುವುದು ಸುಲಭ. ಒಂದು ದಾರವನ್ನು ಎಳೆದರೆ ಆಯಿತು. ಆದರೆ ಶ್ರೀ ಅರವಿಂದರಂಥ ಬಹುಮುಖ ಪ್ರತಿಭೆಯ ಮಹಾಪುರುಷರ ಆಂತರಿಕ ಚಿತ್ರದ ಅನಾವರಣ ಮಾಡುವುದು ಸುಲಭವಲ್ಲ. ಆ ಅಂತರ್ಮುಖವಾದ ಭಾವಚಿತ್ರದ ಅನಾವರಣ ಪ್ರತಿ ಹೃದಯದಲ್ಲಯೂ ಆಗಬೇಕು. ಶ್ರೀ ಅರವಿಂದರನ್ನು ಸ್ವಲ್ಪಮಟ್ಟಿಗೆ ಪರಿಚಯ ಮಾಡಿಕೊಡುವ ಕಾರ್ಯವನ್ನು ವಿಶ್ವದ ಕೆಲವೇ ಜನರು ಮಾಡಿದ್ದಾರೆ. ಅವರನ್ನು ಕುರಿತು ಬರೆದ ಕೆಲವು ವಿದ್ವಾಂಸರು ಅವರ ಸಾಧನೆಯ ಅಗಾಧತೆಯನ್ನೂ ಅನಂತತೆಯನ್ನೂ ಸೂಚಿಸಿದ್ದಾರೆ. ಡಾ|| ಸಿ.ಆರ್. ರೆಡ್ಡಿಯವರು ಆಂಧ್ರ ವಿಶ್ವವಿದ್ಯಾನಿಲಯದ ಗೌರವವನ್ನು ಶ್ರೀ ಅರವಿಂದರಿಗೆ ಅರ್ಪಿಸುತ್ತಾ ಅವರನ್ನು “The sole sufficing genius of the age” ‘ಸರ್ವತೋಮುಖ ತೃಪ್ತಿಕಾರಕವಾದ ಈ ಯುಗದ ಏಕೈಕ ಪ್ರತಿಭೆ’ ಎಂದು ಸಾರಿದ್ದಾರೆ.

ಶ್ರೀ ಅರವಿಂದರು ತಾವು ಕೈಕೊಂಡ ಯಾವುದನ್ನಾದರೂ ಅನಂತ ಪ್ರಮಾಣದಲ್ಲಿಯೆ ಸಾಧಿಸಿದವರು. ಕಾವ್ಯವೊ, ರಾಜಕೀಯವೊ, ಚರಿತ್ರೆಯೊ, ತತ್ತ್ವವೊ, ಮನಶ್ಶಾಸ್ತ್ರವೊ, ಮಹಾಕಾವ್ಯವೊ, ಭಾವಗೀತೆಯೊ, ವಿಮರ್ಶೆಯೊ, – ಹೀಗೆ ನೂರಾರು ಪ್ರಕಾರಗಳಲ್ಲಿ ಅವರ ಪ್ರತಿಭೆ ಮಹಾದ್ಭುತವಾಗಿ ಪ್ರಕಟವಾಗಿದೆ. ಯಾವ ವ್ಯಕ್ತಿ ಯಾವುದನ್ನು ಬೇಕಾದರೂ ಅನಂತ ಪ್ರಮಾಣದಲ್ಲಿ ಸ್ವೀಕರಿಸುವಷ್ಟು ಸಾಮಗ್ರಿ ಅಲ್ಲಿದೆ. ಶ್ರೀ ಅರವಿಂದರ ಜೀವನದ ಸ್ವರೂಪವೂ ಆ ತೆರನಾದ ಅದ್ಭುತ ಪ್ರಮಾಣದಲ್ಲಿಯೆ ಗೋಚರವಾಗುತ್ತದೆ. ಬಂಗಾಳದಲ್ಲಿ ಹುಟ್ಟಿ, ಚಿಕ್ಕ ವಯಸ್ಸಿನಲ್ಲಿಯೆ ಇಂಗ್ಲೆಂಡಿಗೆ ಹೋಗಿ, ತಾರುಣ್ಯದಲ್ಲಿ ವಿದ್ಯಾರ್ಜನೆ ಮಾಡಿ ಯಶಸ್ಸು ಪಡೆದು ಭಾರತಕ್ಕೆ ಬಂದರು. ಬರೋಡಾ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಲ್ಲಿಯ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಪ್ರಿನ್ಸಿಪಾಲರೂ ಆದರು. ಅನಂತರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ಮಹಾಶಕ್ತಿ ಸಂಚಯನ ಮಾಡಿದರು; ದೇಶದ ನಾಡಿಯಲ್ಲಿ ಹೊಸ ಚೈತನ್ಯವನ್ನು ಹರಿಸಿದರು. ಅವರು ಸೆರೆಮನೆಯಲ್ಲಿದ್ದಾಗ ಪಡೆದ ದರ್ಶನದ ಪರಿಣಾಮವಾಗಿ ಪಾಂಡಿಚೆರಿಯನ್ನು ಸೇರಿ ಅಲ್ಲಿ ಸಾಧಕರಾಗಿ ನಿಂತರು.

ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧಿ, ಶ್ರೀ ಅರವಿಂದರು ಇವರೆಲ್ಲ ಒಂದು ಕ್ಷೇತ್ರಕ್ಕೆ ಸೇರುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸ, ಶ್ರೀ ರಮಣಮಹರ್ಷಿ ಇವರು ಮತ್ತೊಂದು ಭೂಮಿಕೆಗೆ ಸೇರುವವರು. ಶ್ರೀ ಅರವಿಂದರ ಮೇಧಾಶಕ್ತಿ, ಪ್ರಾಚ್ಯ ಪಾಶ್ಚಾತ್ಯ ತತ್ತ್ವಶಾಸ್ತ್ರಗಳ ಪ್ರವೀಣತೆ, ಪ್ರಖರ ತೀಕ್ಷ್ಣಬುದ್ಧಿಶಕ್ತಿ ಇವುಗಳನ್ನು ನೋಡಿದಾಗ ನನಗೆ ಒಂದು ವಿಚಿತ್ರ ಸಂಗಿ ನೆನಪಿಗೆ ಬರುತ್ತದೆ. ಒಮ್ಮೆ ಅವರು ತಮ್ಮ ಅಂತರಂಗದ ಶಿಷ್ಯರಿಗೆ ತಾವು ಹಿಂದಿನ ಜನ್ಮಗಳಲ್ಲಿ ಅಗಸ್ಟಸ್ ಸೀಸರ್ ಆಗಿದ್ದೆ, ಲಿಯೋನಾರ‍್ಡೋ ಡಾ ವಿಂಚಿಯಾಗಿದ್ದೆ ಎಂದು ಹೇಳಿದರಂತೆ! ಮೊದಲು ಇದನ್ನು ಕೇಳಿದಾಗ ಇದರ ಅರ್ಥವನ್ನು ಜೀರ್ಣಮಾಡಿಕೊಳ್ಳುವುದೆ ಕಷ್ಟವಾಗಿ ಕಂಡಿತು. ಆದರೆ ಅವರ ‘Life Divine’, ‘Essays on the Gita’, ‘Synthesis of yoga’ ಮೊದಲಾದ ಬೃಹತ್ ಕರತಿಗಳನ್ನು ಓದಿದವರು ಜನ್ಮಾಂತರದ ವಿಚಾರವಾಗಿ ಆಶ್ಚರ್ಯಪಡಲಾರರು. ಒಂದು ಜೀವ ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಏರುತ್ತ ಬರುತ್ತದೆ. ಒಂದು ವಿಷಯ ನಿಶ್ಚಯ: ಅಗಸ್ಟಸ್ ಸೀಸರನಿಗಿಂತ ಲಿಯೋನಾರ‍್ಡೋ ಡಾ ವಿಂಚಿ ಆಧ್ಯಾತ್ಮಿಕವಾಗಿ ಬಹು ಮುಂದುವರಿದ ಚೇತನ. ಅದಕ್ಕಿಂತ ಶ್ರೀ ಅರವಿಂದರದು ಪೂರ್ಣಸಿದ್ಧಿಯ ಸ್ಥಾನ. ಲಿಯೋನಾರ‍್ಡೋ ಡಾ ವಿಂಚಿಯಲ್ಲಿ ಕಾಣುವ ಸರ್ವತೋಮುಖವಾದ ವೈವಿಧ್ಯತೆಯೂ ಸೀಸರಲ್ಲಿ ಕಾಣುವ ಪರಾಕ್ರಮ ವೀರ ಸಾಹಸಗಳೂ ಶ್ರೀ ಅರವಿಂದರಲ್ಲಿ ಸಹಸ್ರ ಪಾಲು ಮಿಗಿಲಾಗಿ ಕಾಣುತ್ತವೆ.

ಅವರ ಬರವಣಿಗೆಯ ಗಾತ್ರವೈಭವವನ್ನು ನೋಡಿದಾಗ ವಿಸ್ಮಯವಾಗುತ್ತದೆ. ‘ಆರ್ಯ’ ಎಂಬ ಪತ್ರಿಕೆ ನಾಲ್ಕು ವರ್ಷಗಳ ಕಾಲ ಪ್ರಕಟವಾಯಿತು. ಆ ಪತ್ರಿಕೆಯಲ್ಲಿ ಅವರ ಲೇಖನಗಳು ವಿಪುಲವಾಗಿ ಪ್ರಕಟವಾದುವು. ಅವರು ಬರೆಯುತ್ತಿದ್ದುದು ಮನಸ್ಸಿನ ಮಟ್ಟದಿಂದಲ್ಲ; ಅತಿಮಾನಸ (Supermind) ಅಧಿಮಾನಸ (Overmind) ಗಳ ಎತ್ತರದಿಂದ. ಅವರ ಬರವಣಿಗೆಯ ಪ್ರಮಾಣವನ್ನು ನೋಡಿದರೂ ದಿಗಿಲಾಗುತ್ತದೆ ನಮಗೆ. ಯಾವ ವಿಚಾರವನ್ನು ತೆಗೆದುಕೊಂಡರೂ ಅವರ ಶಕ್ತಿ ಸರ್ವತೋಮುಖವಾಗಿ ಮೇರುಮಹೋನ್ನತವಾಗಿ ಪ್ರಕಾಶಿಸುತ್ತದೆ.

ಅವರ “Ideal of Human Unity” ಎಂಬ ಪುಸ್ತಕವನ್ನು ರಾಜಕೀಯ ಮನಶ್ಶಾಸ್ತ್ರ ಸಮಾಜಶಾಸ್ತ್ರಗಳನ್ನು ಅಭ್ಯಾಸಮಾಡುವ ವಿದ್ಯಾರ್ಥಿಗಳೆಲ್ಲರೂ ಓದಬೆಕು. ರಾಜಕೀಯ ಚರಿತ್ರೆಯ ವಿಚಾರವಾಗಿ, ಆ ಪುಸ್ತಕವನ್ನು ಓದಿದಮೇಲೆ, ನಮ್ಮ ದೃಷ್ಟಿಯೆ ಬದಲಾಯಿಸುತ್ತದೆ. ಶ್ರೀ ಅರವಿಂದರು ಇಂಗ್ಲಿಷ್ ಭಾಷೆಯನ್ನು ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ನಿಷ್ಣಾತರಾಗಿದ್ದರು. ಅವರು ಭಾರತಕ್ಕೆ ಬಂದಮೇಲೆ ಸಂಸ್ಕೃತ ಬಂಗಾಳಿ ಭಾಷೆಗಳನ್ನೂ ಕಲಿತರು: ಅವರ ‘The Secret of the Veda’ ಎಂಬುದು ಭವ್ಯಕೃತಿ. ವೇದಗಳನ್ನೂ ಪೂರ್ಣದೃಷ್ಟಿಯ ಬೆಳಕಿನಲ್ಲಿ ಅಧ್ಯಯನ ಮಾಡುವ ರೀತಿಯನ್ನು ನಾವು ಅಲ್ಲಿ ಕಾಣುತ್ತೇವೆ. ‘Future Poetry’ ಎಂಬ ಉದ್ಗ್ರಂಥದಲ್ಲಿ ಮುಂಬರಲಿರುವ ಕಾವ್ಯದ ಗೊತ್ತು ಗುರಿಗಳನ್ನು ವಿಮರ್ಶಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಅವರು ನಿಲ್ಲುವುದು ಶಿಖರಗಳಲ್ಲಿಯೆ.

ನನ್ನ ನಿಜಸ್ಥಿತಿ, ನಿಮಗೆ ತಿಳಿಸುವುದಾದರೆ, ಸಾಹಿತ್ಯವಲ್ಲ, ತತ್ತ್ವವೆ. ನಾನು ತತ್ತ್ವಶಾಸ್ತ್ರದ ವಿದ್ಯಾರ್ಥಿಯೂ ಆಗಿದ್ದೆ. ಸ್ವಭಾವತಃ ಅದರಲ್ಲಿ ಒಲವು ಹೆಚ್ಚು. ಪೌರ್ವಾತ್ಯ ಪಾಶ್ಚಾತ್ಯ ತತ್ತ್ವಶಾಸ್ತ್ರಗಳನ್ನು ಸಾಕಷ್ಟು ಅಧ್ಯಯನ ಮಾಡಿ ಸಿದ್ಧಿಪಡೆದವರ ಸಾಮೀಪ್ಯದಲ್ಲಿದ್ದೆ. ಇತ್ತೀಚಿನವರೆಗೆ ಶ್ರೀ ಅರವಿಂದರ ಹೆಸರನ್ನು ಕೇಳಿದ್ದರೂ ಅವರ ಕೃತಿಗಳನ್ನು ಓದಿರಲಿಲ್ಲ. ಕೆಲವು ವರ್ಷಗಳ ಹಿಂದೆ ಅವರ ಕೃತಿಗಳನ್ನು ಓದಿದೆ. ಅದೂ ಅಕಸ್ಮಾತ್ತಾಗಿ. ಅವರ ಕೃತಿಗಳನ್ನು ಓದಿದ ಮೇಲೆ ಇತರ ಕೃತಿಗಳು ರುಚಿಸುತ್ತಿಲ್ಲ. ಅದು ಸಲ್ಲಕ್ಷಣವೊ ಅವಲಕ್ಷಣವೊ ನನಗೆ ತಿಳಿಯದು. ನೀವೂ ಹೀಗಾಗಬೇಕೆಂದು ನನ್ನ ಅಭಿಪ್ರಾಯವಲ್ಲ. ನನಗೆ ತಿಳಿದ ಮಟ್ಟಿಗೆ ಅವರ ಗ್ರಂಥಗಳು ಸರ್ವೋಚ್ಚ ಶೃಂಗ ಸ್ಥಾನದಲ್ಲಿ ನಿಂತಿವೆ. ಪಾಶ್ಚಾತ್ಯ ತತ್ತ್ವಜ್ಞಾನಿಯೊಬ್ಬರು ಅವರನ್ನು ಕುರಿತು ಹೇಳಿದ ಮಾತು ಜ್ಞಾಪಕಕ್ಕೆ ಬರುತ್ತದೆ. “ಕ್ಯಾಂಟ್, ಹೆಗೆಲ್, ಸ್ಪಿನೋಜ ಮೊದಲಾದ ತತ್ತ್ವಜ್ಞನಿಗಳು ಶ್ರೀ ಅರವಿಂದರ ಮುಂದೆ ಅಂಬೆಗಾಲಿಕ್ಕುವ ಶಿಶುಗಳು.” ಶ್ರೀ ಅರವಿಂದರನ್ನು ಪಾಶ್ಚಾತ್ಯ ತತ್ತ್ವಜ್ಞಾನಿಗಳು ಅರಿಯುವುದು ಕಷ್ಟ. ಆದರೆ, ಅವರ ವೈಜ್ಞಾನಿಕ ರೀತಿಯ ತತ್ತ್ವ ವಿಶ್ಲೇಷಣೆಯನ್ನು ಪಾಶ್ಚಾತ್ಯರು ಮೆಚ್ಚಿದ್ದಾರೆ. ಶ್ರೀ ಅರವಿಂದರ ಕೃತಿಗಳನ್ನು ಅಭ್ಯಾಸ ಮಾಡುವ ಮೊದಲು ಇಂಗ್ಲಿಷ್ ಭಾಷೆಯ ಸಮರ್ಪಕ ಜ್ಞಾನ ಅತ್ಯಂತ ಆವಶ್ಯಕ. ಈ ಬಗೆಯ ಭಾಷಾ ಪ್ರಭುತ್ವವನ್ನು ಸಾಧಿಸಲು ಇಂಗ್ಲಿಷಿನಲ್ಲಿರುವ ಉನ್ನತ ಮಟ್ಟದ ಕಾವ್ಯ, ತತ್ತ್ವಶಾಸ್ತ್ರ, ಮನಶ್ಶಾಸ್ತ್ರ ಎಲ್ಲವನ್ನೂ ಅಧ್ಯಯನ ಮಾಡಿದ ಹೊರತು ಶ್ರೀ ಅರವಿಂದರನ್ನು ಅರಿಯುವುದು ಕಷ್ಟ. ಅವರ ಮೇರು ಕೃತಿ ‘Life Divine’ ಬಂಗಾಳಿ ಭಾಷೆಗೆ ಭಾಷಾಂತರವಾಗಿದೆ. ಅದು ಇಂಗ್ಲಿಷಿಗಿಂತ ಚೆನ್ನಾಗಿ ಬಂದಿದೆ ಎಂದು ಅಭಿಪ್ರಾಯಪಡುತ್ತಾರೆ. ಬೇರೆ ಬೇರೆ ಭಾಷಾಂತರವಾಗಬೇಕಾಗಿದೆ. ಆ ಕಾರ್ಯಕ್ಕೆ ಇಂಗ್ಲಿಷ್ ಭಾಷಾಜ್ಞಾನ ಅತ್ಯಂತ ಆವಶ್ಯಕ.

ಶ್ರೀ ಅರವಿಂದರ ಕೃತಿಗಳನ್ನು ಓದಿ ‘ಅರ್ಥವಾಗುವುದಿಲ್ಲ’ ಎಂದು ಹೇಳುವ ವಿನಯವಂತರಿದ್ದಾರೆ. “ಅಲ್ಲಿ ಅರ್ಥವಾಗುವುದು ಮಹಾ ಏನಿದೆ?” ಎಂದೂ ಕೆಲವರು ಹೇಳಿದ್ದಾರೆ. ಅವರ ಕೃತಿಗಳನ್ನು ಓದುವ ಮೊದಲೆ ಅವರಲ್ಲಿ ಏನಿದೆ ಮಹಾ ಎಂಬ ಪೂರ್ವಾಭಿಪ್ರಾಯದಿಂದ ಹೊರಡುವುದು ಸೂಕ್ತವಲ್ಲ. ಹೀಗೆಂದ ಮಾತ್ರಕ್ಕೆ ಅವರ ಕೃತಿಗಳನ್ನು ಓದಲು ನೀವು ಅಸಮರ್ಥರೆಂದು ಹೇಳುತ್ತಿಲ್ಲ. ಅದಕ್ಕೆ ಬೇಕಾದ ವ್ಯುತ್ಪತ್ತಿಯನ್ನು ಪಡೆಯಬೇಕೆಂದು ಹೇಳುತ್ತಿದ್ದೇನೆ. ಇಂದಿನ ನಾನು ಮುಂದಿನ ನಿಮಗೆ ಲೌಕಿಕವನ್ನು ತಿರಸ್ಕರಿಸುವೆನೆಂದು ತಿಳಿಯಬಾರದು. ಯಾವುದು ಉಪನಿಷತ್ತು ಗೀತೆಗಳಲ್ಲಿ ಪ್ರಚುರವಾಗಿ ಬಂದಿತೊ ಆ ದರ್ಶನ ಶ್ರೀ ಅರವಿಂದರ ಪೂರ್ಣಯೋಗದಲ್ಲಿ ವೈಜ್ಞಾನಿಕವಾಗಿ ಒಂದು ಹಜ್ಜೆ ಮುಂದುವರಿದು ಅವರ ಕೃತಿಗಳಲ್ಲಿ ಪ್ರಣೀತವಾಗಿದೆ. ಅವರ ದರ್ಶನದ ಬಾಹು ಐಹಿಕ ಪಾರಲೌಕಿಕಗಳೆರಡನ್ನೂ ಆಲಿಂಗಿಸಿದೆ. ಸದ್ಯಕ್ಕೆ ಅಪರಿಪೂರ್ಣವಾದ ಈ ಲೋಹಿದ ಚೌಕಟ್ಟಿನಲ್ಲಿಯೆ ನಾವು ಪರಿಪೂರ್ಣತೆಯನ್ನು ಸಾಧಿಸಬೇಕಾಗಿದೆ. ತಪಸ್ಸು ಸಾಧನೆಗಳಿಂದ ಸಿದ್ಧಿಯನ್ನು ಪಡೆದ ಬಳಿಕ ಲೋಕಹಿತಕ್ಕಾಗಿ ಸಾಧನೆಮಾಡಬೇಕು. ಸಿದ್ಧಪುರುಷರಾದ ಶ್ರೀ ಅರವಿಂದರೆ ತಪಸ್ಸು ಮಾಡುತ್ತಿದ್ದರೆಂಬ ಅಂಸ ಗಮನೀಯ. ಈ ಪ್ರಕೃತಿ ಅತೀತದ ಅವತರಣಕ್ಕೆ ಬಾಯ್ತೆರೆದು ಕಾದು ನಿಂತಿದೆ. ಈ ಕಾರ್ಯವನ್ನು ಪ್ರಕೃತಿಗೇ ಬಿಟ್ಟರೆ ಕಲ್ಪಾಂತರಗಳು ಬೇಕಾಗಬಹುದು. ಆದರೆ ಅಂಥ ಸಿದ್ಧಿಯನ್ನು ಮಾನವತ್ವದ ಮೂಲಕ ಒಂದೇ ಜನ್ಮದಲ್ಲಿ ಪ್ರಕಟಗೊಳಿಸುವ ವಿಧಾನ ಅಪೂರ್ವವಾದುದು. ಶ್ರೀ ಅರವಿಂದರು “All Nature is yoga” ಎಂದು ಹೇಳಿದ್ದಾರೆ.

ಅವರು ಯಾವುದೇ ರೀತಿಯಾದ ಸನ್ಯಾಸ, ತ್ಯಾಗ ಮೊದಲಾದ ಬಾಹ್ಯ ರೀತಿಯ ನಿಯಮಗಳನ್ನು ಹೇಳಲಿಲ್ಲ. ಅವರ ದೃಷ್ಟಿ ಆಂತರಿಕವಾದ ಸಾಧನೆಯ ಕಡೆಗೆ. ಈ ಆಂತರಿಕ ಸಾಧನೆಯನ್ನು ಅವರದೇ ಆದ ಯೋಗಮಾರ್ಗದಲ್ಲಿ ವರ್ಣಿಸಿದ್ದಾರೆ. ಅವರು ಏಕಾಂಗಿಯಾದ್ದರೂ ಲೋಕವನ್ನು ಮರೆತವರಲ್ಲ. ತಮ್ಮ ಶಿಷ್ಯವರ್ಗದವರಿಗೂ ಮುಮುಕ್ಷು ವರ್ಗದವರಿಗೂ ಪತ್ರಗಳ ಮೂಲಕ ಬರೆದ ಮಾರ್ಗದರ್ಶನ ರೂಪದ ಪತ್ರಗಳು ಈಗ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಇನ್ನೂ ಪ್ರಕಟವಾಗುವುದು ಬೇಕಾದಷ್ಟಿದೆಯಂತೆ! ಈ ಪತ್ರಗಳಲ್ಲಿ ಅವರು ಸಾಧಕರ, ಕವಿಗಳ, ಸಾಹಿತಿಗಳ, ತತ್ತ್ವಜ್ಞಾನಿಗಳ, ರಾಜಕೀಯ ವ್ಯಕ್ತಿಗಳ ಅನೇಕಾನೇಕ ಸಂಶಯಗಳಿಗೆ ಬೆಳಕಿನ ಉತ್ತರ ಕೊಟ್ಟಿದ್ದಾರೆ. ಪಾಂಡಿಚೆರಿಯ ಮೂಲೆಯಲ್ಲಿ ಕುಳಿತಿದ್ದರೂ ಈ ಜಗತ್ತಿನಲ್ಲಿ ನಡೆಯುತ್ತಿದ್ದ ಹೊಚ್ಚ ಹೊಸ ವೈಜ್ಞಾನಿಕ ಪ್ರಗತಿಯಿಂದ ಹಿಡಿದು ಎಲ್ಲದರ ಬಗೆಗೂ ತಿಳಿಯುವ ಹಂಬಲವುಳ್ಳವರಾಗಿದ್ದರು. ತಾವು ಮಹಾಸಮಾಧಿಸ್ಥರಾಗುವ ತನಕ ಅತ್ಯಂತ ನವೋನವವಾದ ದೈನಂದಿನ ಜೀನವನ್ನು ಕಟ್ಟಿಕೊಂಡಿದ್ದರು.

ಅವರ ಮಹಾಕಾವ್ಯ ‘ಸಾವಿತ್ರಿ’ಯಿಂದ ಕೆಲವು ಪಂಕ್ತಿಗಳನ್ನು ಓದುತ್ತೇನೆ. ಈ ಮಹಾಕಾವ್ಯದಲ್ಲಿ ಕಾವ್ಯಾಂಶವಿದೆ, ಅದಕ್ಕಿಂತ ಹೆಚ್ಚಾಗಿ ದರ್ಶನಾಂಶವಿದೆ. ಮಹೋತ್ತುಂಗ ಶಿಖರವನ್ನು ಏರಿ ನಿಂತಾಗ ಆಗುವ ಅನುಭವ ಇಂಗ್ಲಿಷ್ ಕವಿಗಳು ರಚಿಸಿರುವ ಕಾವ್ಯಗಳನ್ನು ಓದುವಾಗ ಅಲ್ಲಲ್ಲಿ ನಮಗೆ ಆಗುತ್ತದೆ. ಆದರೆ ಶ್ರೀ ಅರವಿಂದರ ಇಡೀ ಕಾವ್ಯವೆ ಧವಳಗಿರಿ ಶೃಂಗದಲ್ಲಿಯೆ ಚಲಿಸುತ್ತದೆ. ಈ ಕಾವ್ಯ ಮನಸ್ಸಿನ ಮಟ್ಟದಿಂದ ಬಂದುದಲ್ಲ. ಅತಿಮಾನಸದ ಎತ್ತರದಿಂದ ಮೂಡಿದುದು. ಅವರು ತೆಗೆದುಕೊಂಡಿರುವ ಕಥಾವಸ್ತು ಎಲ್ಲರಿಗೂ ತಿಳಿದಿರುವ ಸಾವಿತ್ರಿಯ ಕಥೆ. ಇಲ್ಲಿ ಕಥೆ ಸ್ವಲ್ಪ. ಸಾವಿತ್ರಿಯ ತಂದೆ ಅಶ್ವಪತಿಯ ಯೋಗದಲ್ಲಿ ಮಾನವ ಜೀವನದ ಆಧ್ಯಾತ್ಮಿಕ ವಿಕಾಸವನ್ನು ಗುರುತಿಸಿದ್ದಾರೆ. ಈ ದೇಹವನ್ನು ಪ್ರಜ್ಞಾಪೂರ್ವಕವಾಗಿ ವಿಸರ್ಜಿಸುವ ತತ್ತ್ವವನ್ನು ಸಾವಿತ್ರಿ ಯಮನನ್ನು ಗೆಲ್ಲುವ ಸಂಕೇತವಾಗಿ ಅಮರತ್ವದ ಭವ್ಯ ಕಲ್ಪನೆಯನ್ನು ಯೌಗಿಕವಾಗಿ ಮೂಡಿಸಿದ್ದಾರೆ. ಇಂಥ ಮಹಾಕೃತಿ ಸ್ವಲ್ಪ ಜನಪ್ರಿಯವಾಗಬೇಕಾದರೂ ಶತಮಾನಗಳು ಬೇಕು. ಎಲ್ಲರೂ ಶಿಖರವನ್ನು ಏರಬೇಕೆಂದಲ್ಲ; ಹತ್ತಿ ಬಂದವರು ಒಬ್ಬರಾದರೂ ಸಾಕು, ಅಂಥವರಿಗೆ ಹಾರ ಹಾಕಿ ಗೌರವಿಸಬಹುದು. ಶ್ರೀ ಅರವಿಂದರಿಗೆ ಸ್ವಂತ ಸಿದ್ಧಿ ಎಂದೋ ಲಭಿಸಿತ್ತು. ಅವರು ಜೀವನ್ಮುಕ್ತರಾಗಿಯೂ ಸಾಧನೆ ಮಾಡಿದ್ದು ಸರ್ವರ ಸಿದ್ಧಿಗಾಗಿ. ಅವರ “ಜೀವನ್ಮುಕ್ತ” ಕವನದ ಕೆಲವು ಪಂಕ್ತಿಗಳಿವು:

“Only to bring God’s forces to waiting Nature,
To help with wide – winged peace her tormented labour
And heal with joy her ancient sorrow,
Casting down light on the inconscient darkness,
He acts and lives….”

ಜಡದಿಂದ ಜೀವ ಮನೋಮಯ, ವಿಜ್ಞಾನಮಯ, ಆನಂದಮಯಕ್ಕೇರಬೇಕು. ವಿಭೂತಿ ಪುರುಷರೆಲ್ಲರಿಗೂ ಈ ಮರ್ತ್ಯ ಏನನ್ನು ಕೊಟ್ಟಿದೆ? ದುಃಖಮಿಶ್ರಣವಲ್ಲದ ಸುಖವನ್ನು ಕೊಡಲು ಅದಕ್ಕೆ ಇಷ್ಟವಿಲ್ಲ. ಆದರೆ ಸಂಸ್ಕಾರವಿದ್ದ ಚೇತನ ಈ ಮರ್ತ್ಯವನ್ನು ಪರಿಷ್ಕರಿಸಬೇಕು. ಈ ಸ್ಥಿತಿಯನ್ನು ಶ್ರೀ ಅರವಿಂದರು ‘ಸಾವಿತ್ರಿ’ಯಲ್ಲಿ ಹೀಗೆ ಹೇಳಿದ್ದಾರೆ:

“Hard is it to persuade earth – nature’s change;
Mortalit bears ill the eternals’ touch:
It fears the pure divine intolerance
Of that assault of ether and of fire;
It murmurs at its sorrowless happiness,
Almost with hate repels the light it brings;
It trembles at its naked power of Truth
And the might and sweetness of its absolute Voice,
infliction on the heights the abysm’s law,
It sullies with its mire heaven’s messengers:
Its thorns of fallen nature are the defence

It turns against the saviour hands of Grace;
It meets the sons of god with death and pain.
A glory of lightnings traversing the earth – scene,
Their sun – thoughts fading, darkened by ignorant minds,
Their work betrayed, their good to evil turned,
The cross their payment for the crown they gave,
Only they leave behind a splendid Name.”

[2]

ಸಾವಿತ್ರಿ ತನ್ನ ಜೀವನದ ಮಹಾಪರೀಕ್ಷೆಯನ್ನು ಎದುರಿಸುವ ಮುನ್ನ ಕೈಗೊಂಡ ಮಹತ್ತರ ಸಾಧನೆಯನ್ನು ಶ್ರೀ ಅರವಿಂದರು ಹೀಗೆ ಚಿತ್ರಿಸಿದ್ದಾರೆ:

“An Absolure supernatural darkness falls
On man sometimes when he draws near to God;
An hour comes when fail all Nature’s means;
Forced out from the protecting Ignorance
And flung back on his naked primal need,
He at length must cast from him his surface soul
And be the ungarbed entit within;
That hour had fallen now on Savitri,
A point she had reached where life must be in van
Or, in her unborn element awake,
Her will must cancel her body’s destiny.
For only the unborn spirit’s timeless power
Can lift the yoke imposed by birth in time.”[3]

ಆದರೆ ಈ ಸಾಧನೆ ಹೇಗೆ ಸಾಧ್ಯ? ಹೇಗೆ ಪ್ರಾರಂಭಿಸಬೇಕು?

“A prayer, a master act, a king idea
Can link man’s strength to a transcendent Force.
then miracle is made the common rule,
One mighty deed can change the course of things;
A lonely thought becomes omnipotent.”[4]

ಈ ವಿಧಾನವಾಗಿಯೆ ಸಾಧನೆ ಪ್ರಾರಂಭವಾಗಬೇಕು, ಮುಂದುವರಿಯಬೇಕು. ಆಗ ಮಾನವ ಜೀವನದ ಧ್ಯೇಯ ತನ್ನ ಸ್ವಸ್ವರೂಪದ ಮಹಾ ವೈಭವವನ್ನು ಅರಿಯುವುದು.

“The earth’s uplook to a remote unknown
Is a preface only of the epic climb

Of human soul from its flat earthly state
To the discovery of a greater self
And the far gleam of an eternal Light.
This world is a beginning and a base
Where Life and Mind erect their structured dreams;
An unborn Power must build reality.
A deathbound littleness is not all we are:
Immortal our forgotten vastnesses
Await discovery in our summit selves;
Unmeasured breadths and depths of being are ours”[5]

ಸ್ವಸ್ವರೂಪದ ಉತ್ತುಂಗ ಶಿಖರಗಳಲ್ಲಿ ನಮ್ಮ ಪರಿಪೂರ್ಣತೆ ನಮಗಾಗಿ ಕಾದುನಿಂತಿದೆ. ಆ ಉತ್ತುಂಗ ಶಿಖರಗಳಿಗೆ ಏರಲು ಪ್ರಯತ್ನಿಸುವ ಸಿದ್ಧ ಚೇತನಗಳ ಅವತರಣದಿಂದಲೆ ಮರ್ತ್ಯದ ಪರಿವರ್ತನೆ ಸಾಧ್ಯ. ಅವರು ಮತ್ತೆ ಮತ್ತೆ ಅವತರಿಸಿ ಇಲ್ಲಿಯ ಅಜ್ಞಾನ ಅಂಧಕಾರಗಳನ್ನು ಸ್ವಲ್ಪಸ್ವಲ್ಪವಾಗಿ ಪರಿವರ್ತಿಸುವರು.

“Only the Immortals on their deathless heights
Dwelling beyond the walls of Time and Space,
Masters of living, free from the bonds of Thought,
Who are overseers of Fate and Chance and Will
And experts of the theorem of world- need,
Can see the Idea, the Might that change Time’s course
Come maned with light from undiscovered worlds,
Hear, while the world toils on with its deep blind heart,
The galloping hooves of the unforeseen event,
Bearing the superhuman rider, near
And, impassive to earth’s din and startled cry,
Return to the silence of the hills of God;
As lightning leaps, as thunder sweeps, they pass
And leave their mark on the trampled breast of Life.”[6]

ಆ ಉತ್ತುಂಗ ಶಿಖರಗಳಿಗೆ ಏರಲು ಊರ್ಧ್ವಲೋಕದಲ್ಲಿರುವ ಸಿದ್ಧ ಚೇತನಗಳ ಅವತರಣದಿಂದಲೇ ಸಾಧ್ಯ. ಅವರು ಮತ್ತೆ ಮತ್ತೆ ಅವತರಿಸಿ ಮರ್ತ್ಯವನ್ನು ಪರಿಷ್ಕರಿಸಬೇಕು. ಆಗ ಮೃಣ್ಮಯ ಚಿನ್ಮಯವಾಗುತ್ತದೆ.

“In Matter shall be lit the spirit’s glow,
In body and body kindled the sacred birth;

Night shall awake to the anthem of the stars,
The days become a happy pilgrim march,
Our will a force of the Eternals’ power,
And thought the rays of a spiritual sun.
A few shall see what none yet understands;
God shall grow up while the wise men talk and sleep;
For man shall not know the coming till its hour
And belief shall be not till the work is done.”[7]

ಮಹಾಪುರುಷರು ತಮ್ಮ ಸಾಧನೆಯಲ್ಲಿ ಸದಾ ಪ್ರವೃತ್ತರಾಗಿರುತ್ತಾರೆ. ಅವರ ಸತತ ಸಾಧನೆಯೆ ಮುಂದಿನ ಪರಿವರ್ತನೆಗೆ ಬೇಕಾದ ಪೀಠಿಕೆಯಾಗುತ್ತದೆ.

‘And never can the mighty traveller rest
And never can the mystic voyage cease,
Till the nescient dusk is lifted from man’s soul
And the morns of God have overtaken his night.’[8]

ಅಂತಹ ಶ್ರದ್ಧೆ ಇರುವುದಾದರೆ ಸಿದ್ಧಿ ಸಾಧ್ಯವಾಗುತ್ತದೆ. ಮನಸ್ಸಿಗೆ ಅದ್ಭುತ ಶಕ್ತಿ ಇದೆ. ಜಾಗ್ರತವಾದ ಮನಸ್ಸು ಅದ್ಭುತ ಕಾರ್ಯವನ್ನು ಸಾಧಿಸಬಲ್ಲುದು.

“Mind is a mediator divinity:
Its powers can undo all Nature’s work:
Mind can suspend or change earth’s concrete law.
Affranchised from earth – habit’s drowsy seal
The leaden grip of Matter it can break;
Indifferent to the anger stare of Death,
It can immortalize a moment’s work:
A simple fiat of its thinking force,
The casual pressure of its slight assent
Can liberate the Energy dumb and pent
Within its chambers of mysterious trance:
It makes the body’s sleep a puissant arm,
Holds still the breath, the beatings of the heart,
While the unseen is found, the impossible done,
Communicates without means the unspoken thought;
It moves events by its bare silent will.
Acts at a distance without hands or feet.”[9]

ನಾವು ಪ್ರಕೃತಿಯ ನಿಯಮಗಳನ್ನು ಸಮಾನ್ಯವಾಗಿ ನಿಶ್ಚಯ, ನಿಷ್ಠುರ,

ಅಪರಿವರ್ತನೀಯ ಎಂದು ತಿಳಿದಿದ್ದೇವೆ. ಆದರೆ ಯೋಗಿಗಳ ದೃಷ್ಟಿಯಲ್ಲಿ ಅದು ಇಚ್ಛಾಬದ್ಧ.

“To seize the absolute in shapes that pass,
To feel the eternal’s touch in time – made things,
This is the law of all perfection here.
A fragment here is caught of heaven’s design;
Else could we never hope for greater life
And ecstasy and glory could not be.
Even in the littleness of our mortal state,
Even in the prison – house of outer from,
A brilliant passage for the infallible Flame
Is driven through gross walls of nerve and brain,
A Splendour presses or a Power breaks through,
Earth’s great dull barrier is removed awhile,
The inconscient seal is lifted from our eyes
And we grow vessels of creative might,”[10]

ಇಂತಹ ದೊಡ್ಡ ದೇವತಾಶಕ್ತಿ ನಮ್ಮೆಲ್ಲರಲ್ಲೂ ಬೀಜರೂಪವಾಗಿ ಪ್ರತಿಷ್ಠಿತವಾಗಿದೆ. ಅಂತಹ ಪ್ರತಿಷ್ಠಿತ ದೇವತೆಗಳನ್ನು ನಾವು ಶುದ್ಧ ಹೃದಯದಿಂದ ಕರೆಯಬೇಕು, ಪ್ರಾರ್ಥಿಸಬೇಕು, ಎಚ್ಚರಿಸಬೇಕು, ಅನಾವರಣ ಮಾಡಬೇಕು. ಶೃಂಗದ ಔನ್ನತ್ಯ ಕೈಬೀಸಿ ಕರೆಯುತ್ತದೆ. ಕೋಟಿ ಜನರಲ್ಲಿ ಒಬ್ಬನು ಅದನ್ನು ಸಾಧಿಸಿದಾಗ ನಾವೇ ಸಾಧಿಸಿದೆವೆಂಬ ಉತ್ಸಾಹ ಆನಂದ ಉಂಟಾಗುತ್ತದೆ. ನಮ್ಮಲ್ಲಿ ಎಲ್ಲರಲ್ಲಿಯೂ ಆ ಅಪೇಕ್ಷೆ ಉತ್ಸಾಹಗಳೇನೋ ಇವೆ. ಆದರೆ ಮರ್ತ್ಯರಿಗೆ ಮರ್ತ್ಯದಲ್ಲಿಯೆ ಮಮತೆ. ಅಮರ್ತ್ಯರು ಅತೀತರೆಂದೋ ಏನೋ, ಸ್ವಲ್ಪ ದೂರದಿಂದಲೆ ನೋಡಿ ಗೌರವ ತೋರಿಸುವ ಮನೋಧರ್ಮ ನಮ್ಮಲ್ಲಿದೆ.

“The hearts” of men are amorous of clay – kin
And bear not spirits lone and high who bring
Fire – intimations from the deathless planes
Too vast for souls not born to mate with heaven,
Whoever is too great must lonely live,
Adored he walks in mighty solitude;
Vain is his labour to create his kins,
His only comrade is the Strength within.”[11]

ಇಂತಹ ಸಿದ್ಧಸ್ಥಿತಿಗೆ ಏರುವುದು ಸಾಧ್ಯ. ಇದೇ ಜೀವನದ ಗುರಿ. ಇದನ್ನು ಎಷ್ಟು ಜನ ಸಾಧಿಸಿ ಸಿದ್ದಿ ಪಡೆಯುತ್ತಾರೆ ಎಂಬುದು ಮುಖ್ಯವಲ್ಲ. ಧವಳಗಿರಿ ಶೃಂಗವು ಎಲ್ಲರನ್ನೂ ಆಹ್ವಾನಿಸುತ್ತದೆ. ಕುಬ್ಜತೆಯಲ್ಲಿಯೆ ಇರುವುದನ್ನು ಬಿಟ್ಟು ಒಬ್ಬನು ಔನ್ನತ್ಯಕ್ಕೆ ಏರಿದರೂ ಏನು ಉತ್ಸಾಹ, ಏನು ಹೂಮಾಲೆ, ಏನು ಕರತಾಡನ! ನಮ್ಮ ಒಬ್ಬೊಬ್ಬರಲ್ಲಿಯೂ ಈ ಉದ್ಧಾರದ ಅಭೀಪ್ಸೆ ಕೊರಳೆತ್ತಿ ಇದೆ.

ಶ್ರೀ ಅರವಿಂದರ ಎತ್ತರವನ್ನು ಕಂಡು, ಅವರ ಸಾಧನೆಯ ಮಹತ್ತನ್ನು ಕಂಡು, ಅವರ ಸಿದ್ಧಿ ಉಳಿದವರಿಗೆ ಅತೀತ ಅಸಾಧ್ಯ ಎಂದೆನಿಸಬಹುದು. ಆದರೆ ಭವ್ಯವಾದುದು ಭಯಂಕರವಾಗಿ ಮೊದಲು ಕಂಡರೂ ಆ ದೈವೀ ಭವ್ಯತೆ ತರುವಾಯ ಹಾಗೆ ಕಾಣಿಸುವುದಿಲ್ಲ. ಅಲ್ಪನ ಹೃದಯದಲ್ಲಾದರೂ ಶುದ್ಧ ಪ್ರಾರ್ಥನೆ ಕಾಣಿಸಿದರೆ ಆ ಭೂಮ ಕೈಚಾಚಿ ಕರೆದುಕೊಳ್ಳುತ್ತದೆ. ಅತೀತದ ಸಿದ್ಧಪುರುಷರ ವಿಚಾರವಾಗಿ ಹೇಳುವುದಾದರೆ ಪ್ರಾಥಿಸಿದವರಿಗೆ ಅವರ ಸಿದ್ಧಹಸ್ತ ಎಂದಿಗೂ ಒಲ್ಲೆ ಎನ್ನುವುದಿಲ್ಲ. ಎಂತಹ ಪತನಸ್ಥಿತಿಯಲ್ಲಿಯೂ ಕರೆದವರಿಗೆ ಓ ಕೊಳ್ಳದೆ ಇರುವುದಿಲ್ಲ. ಆ ಕರೆ ನಿರಾಡಂಬರವಾಗಿ ನಿರಪೇಕ್ಷಣೀಯವಾಗಿ ನಡೆಯುವಂಥದು.

ದಾರ್ಶನಿಕರಾದ ಮಹಾಕವಿಗಳು ಸ್ಫೂರ್ತಿಯನ್ನೂ ಪ್ರತಿಭೆಯನ್ನೂ ತಮ್ಮ ತಮ್ಮ ರೀತಿಯಲ್ಲಿ ಕಾವ್ಯಗಳಲ್ಲಿ ಪ್ರಕಾಶಿಸಿದ್ದಾರೆ. ಆ ದೈವೀಸ್ಫೂರ್ತಿ ಪ್ರತಿಭೆಗಳನ್ನೇರಿ ನಾವು ಗರುಡನನ್ನೇರಿದ ವಿಷ್ಣುವಾಗಬೇಕು. ಆಧ್ಯಾತ್ಮದಲ್ಲಿ ಯಾರೂ ಅನರ್ಹತಲ್ಲ, ಎಲ್ಲರೂ ಅರ್ಹರೆ. ಇಂಥ ವಿಭೂತಿಪುರುಷರ ಅವತಾರ ಸತ್ಪುರುಷರಿಗೆ ಮಾತ್ರವಲ್ಲ. ಆಸುರೀ ಚೇತನಗಳಿಗಂತೂ ಅವರ ಸಹಾಯ ತುಂಬ ಆವಶ್ಯಕ. ಆಸುರೀಚೇತನರನ್ನು ದೈವೀಚೇತನರನ್ನಾಗಿ ಪರಿವರ್ತಿಸುವುದೆ ಶ್ರೀ ಅರವಿಂದರನಂಥ ವಿಭೂತಿಪುರುಷರ ಆದ್ಯ ಕರ್ತವ್ಯ. ಅಂಥ ಮಹಾಪುರುಷರ ಭಾವಚಿತ್ರ ಈ ನಿಲಯದಲ್ಲಿರುವುದರಿಂದ ಆಗೊಮ್ಮೆ ಈಗೊಮ್ಮೆ ಸಂದರ್ಶಿಸಿದರೂ ವಿದ್ಯಾರ್ಥಿಗಳ ಆಧ್ಯಾತ್ಮಿಕ ಭಾವನೆಗಳು ಪ್ರಬುದ್ಧವಾಗಿ ಅವರ ಅಭ್ಯುದಯವಾಗುವುದರಲ್ಲಿ ಸಂಶಯವಿಲ್ಲ.

ಸದ್ಯದ ಜಗತ್ತಿಗೆ ಅತೀತವಾಗಿರುವ ಅತಿಮಾನಸ ಶಕ್ತಿ ಜ್ಯೋತಿ ಆನಂದಗಳು ಪೃಥ್ವೀತತ್ತ್ವಕ್ಕೆ ಪೂರ್ಣ ಪ್ರಮಾಣದಲ್ಲಿ ಅವತರಿಸಿ, ಸಮಗ್ರ ಲೋಕವನ್ನೆ ಪರಿವರ್ತಿಸಿ, ಇಲ್ಲಿ ದಿವ್ಯಜೀವನ ಸ್ಥಾಪನೆಯಾಗುವಂತೆ ಮಾಡಲು ‘ಪೂರ್ಣಯೋಗ ದರ್ಶನ’ ಪ್ರತಿಪಾದನೆ ಮಾಡಿ, ತಪಸ್ಸಾದನೆ ಮಾಡಿ, ನಮ್ಮ ಬದುಕಿಗೊಂದು ನವೋನವ ಆದರ್ಶವನ್ನು ನೀಡಿ, ನಮ್ಮ ಅಭೀಪ್ಸೆಯನ್ನು ಉದ್ದೀಪನಗೊಳಿಸಿ, ನಮ್ಮ ಹೃದಯನೀಡದಿಂದ ಪ್ರಾರ್ಥನಾ ಅಗ್ನಿಹಂಸವನ್ನು ಭಗವತ್‌ಕೃಪೆಯ ತಟಿಚ್ಚರಣದೆಡೆಗೆ ಹಾರಿಬಿಟ್ಟಿರುವ ಈ ಪೂರ್ಣಯೋಗಿಯ ಆಶೀರ್ವಾದ  ನಮ್ಮೆಲ್ಲರ ಮೇಲೆ ನಿರಂತರವಾಗಿರಲಿ!

* * *


[1] ದಿನಾಂಕ ೧೦-೮-೧೮೫೮ರಂದು, ಮಹಾರಾಜಾ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ನಡೆದ ಶ್ರೀ ಅರವಿಂದರ ಭಾವಚಿತ್ರ ಅನಾವರಣ ಮಹೋತ್ಸವದಲ್ಲಿ ಮಾಡಿದ ಭಾಷಣದ ಸಾರಾಂಶ.

[2] Savitri-Sri Aurobindo p.10.

[3] Savitri-Sri Aurobindo p.15.

[4] Ibid p.24

[5] Savitri – Sri Aurobindo p. 53.

[6] Ibid p.62.

[7] Savithri – Sri Aurobindo p.63.

[8] Ibid p.82.

[9] Savithri 0 Sri Aurobindo p.96.

[10] Savithri-Sri Aurobindo p.122.

[11] Savithri-Sri Aurobindo p.418.