ಇಂದಿನ ಜಗಜ್ಜೀವನದಲ್ಲಿ ಮತ ಮತ್ತು ರಾಜಕೀಯಗಳಿಗೆ ಮೀಸಲಾಗಿರುವ ಸ್ಥಾನವನ್ನು ಅಧ್ಯಾತ್ಮ ಮತ್ತು ವಿಜ್ಞಾನಗಳು ಆಕ್ರಮಿಸಿಕೊಳ್ಳದಿದ್ದರೆ ಮುಂದಿನ ಮಾನವನ ಬದುಕು ಶಾಂತಿ ನೆಮ್ಮದಿಗಳನ್ನು ಕಾಣಲಾರದು ಎಂದು ಸಂತವರೇಣ್ಯ ಶ್ರೀ ವಿನೋಬಾಜಿ ಹೇಳಿದ್ದಾರೆ.

ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿ ಎರಡೂ ಮೂರ್ತಿವೆತ್ತಂತಿದ್ದ ದಿವಂಗತ ಶ್ರೀ ಜವಾಹರಲಾಲ್ ನೆಹರೂ ಆ “ಅಧ್ಯಾತ್ಮ ಮತ್ತು ವಿಜ್ಞಾನ” ಗಳಿಗೆ ಸರ್ವೋಚ್ಛ ಪ್ರತಿನಿಧಿಯಾಗಿದ್ದಾರೆ. ಇದುವರೆಗಿನ ನಮ್ಮ ಆಧುನಿಕ ರಾಜಕೀಯ ರಂಗದ ಮುಂದಾಳುಗಳಲ್ಲಿ ವಿಚಾರ ಮತ್ತು ವಿಜ್ಞಾನಗಳನ್ನು ಬೇರೆ ಯಾರೂ ಅವರಂತೆ ಎತ್ತಿಹಿಡಿದಿಲ್ಲ; ಬೇರೆ ಯಾರೂ ಅವರಷ್ಟು ಅನನ್ಯತೆಯಿಂದ ಅವುಗಳ ಪ್ರತಿಷ್ಠಾಪನೆಗಾಗಿ ದುಡಿದಿಲ್ಲ. ಕಾರ್ಖಾನೆ ಕಟ್ಟಿಸಿದರು, ಅಣೆಕಟ್ಟು ಹಾಕಿಸಿದರು, ಮಹಾಕಟ್ಟಡಗಳನ್ನು ನಿರ್ಮಿಸಿದರು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳನ್ನೂ ಸಂಶೋಧನಾಲಯಗಳನ್ನೂ ಸ್ಥಾಪಿಸಿದರು, ವಿಜ್ಞಾನಿಗಳಿಗೆ ಮತ್ತು ತಾಂತ್ರಿಕ ತಜ್ಞರಿಗೆ ಪ್ರೋತ್ಸಾಹ ಕೊಟ್ಟರು ಎಂಬಷ್ಟೆ ಕಾರಣಕ್ಕಾಗಿ ಅಲ್ಲ ಅವರು ವೈಜ್ಞಾನಿಕ ದೃಷ್ಟಿಯ ಮತ್ತು ವಿಚಾರಬುದ್ಧಿಯ ಶಿಖರ ವ್ಯಕ್ತಿ ಎಂದು ನಾವು ಹೇಳುತ್ತಿರುವುದು. ಏಕೆಂದರೆ ಮತಮೂಢರಾಗಿ, ಆಚಾರಾಂಧರಾಗಿರುವ ಇತರ ಎಷ್ಟೋ ಚುನಾಯಿತ ಮಂತ್ರಿಗಳೂ ಅವುಗಳನ್ನು ಅನಿವಾರ್ಯವಾದ ಆರ್ಥಿಕ ಕಾರಣಗಳಿಂದಾಗಿಯೇ ಮಾಡಬಹುದಾಗಿತ್ತುಲ ಮತ್ತು ರಾಜ್ಯಗಳಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾಡುತ್ತಲೂ ಇದ್ದಾರೆ. ವೈಜ್ಞಾನಿಕ ವಿದ್ಯೆಯನ್ನು ಲೌಕಿಕ ಅಭ್ಯುದಯಗಳಿಗೆ ಪ್ರಯೋಗಿಸಿದ ಮಾತ್ರದಿಂದಲೆ ನಾವು ಹೇಳುತ್ತಿರುವ ವೈಜ್ಞಾನಿಕ ದೃಷ್ಟಿ ಸಂಪನ್ನತೆ ಸಿದ್ಧವಾಗಿಬಿಡುವುದಿಲ್ಲ. ಎಷ್ಟೋ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರೊಫೆಸರುಗಳೂ ವಿಜ್ಞಾನದ ಪಾಠಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧಿಸಿದರೂ ಮನೆಯಿಂದ ಹೊರಡುವಾಗ ರಾಹುಕಾಲ ಗುಳಿಕಕಾಲಗಳಿಗಾಗಿ ಕ್ಯಾಲೆಂಡರನ್ನೊ ಪಂಚಾಂಗವನ್ನೊ ನೋಡುವುದನ್ನು ನಾವು ಕಂಡಿಲ್ಲವೆ? ಅವರು ಭೌತಶಾಸ್ತ್ರ ರಸಾಯನ ಶಾಸ್ತ್ರಗಳ ಭಾರಿ ಸರಕನ್ನು ಸಮರ್ಥವಾಗಿ ಹೊರುವ ಹೇಸರಗತ್ತೆಗಳಾಗುತ್ತಾರೆಯೆ ಹೊರತು ವೈಜ್ಞಾನಿಕದೃಷ್ಟಿ ಸಂಪನ್ನರಾದ ವಿಚಾರಮತಿಗಳಾಗುವುದಿಲ್ಲ. ಯಾರ ವಿಚಾರ ಮತ್ತು ವಿಜಞಾನ ಅವರ ಮತಿಯನ್ನೆ ಪ್ರವೇಶಿಸಿ ಪರಿವರ್ತಿಸಿದೆಯೊ ಅಂಥವರನ್ನು ಮಾತ್ರ ವೈಜ್ಞಾನಿಕ ದೃಷ್ಟಿ  ಸಂಪನ್ನರೆಂದು ಕರೆಯುತ್ತೇವೆ. ಬರಿಯ ಲೌಕಿಕ ಸೃಷ್ಟಿಯಿಂದಲ್ಲದೆ ಅವರು ದೃಷ್ಟಿಯಿಂದಲೂ ವಿಜ್ಞಾನಿಗಳಾಗಿರಬೇಕು; ವಿಚಾರಮತಿಗಳಾಗಿರಬೇಕು. ಶ್ರೀ ನೆಹರೂ ಅಂತಹ ವೈಜ್ಞಾನಿಕ ದೃಷ್ಟಿಯ ಧೀಮಂತರಾಗಿದ್ದರು.

ಒಂದು ನಿದರ್ಶನವನ್ನು ತೆಗೆದುಕೊಳ್ಳಿ. ಭಾರತ ದೇಶದ ಮತೀಯ ಮೂರ್ಖ ಸಮುದಾಯವೆಲ್ಲ-ಅವಿದ್ಯಾವಂತರಾದ ಸಾಮಾನ್ಯರೂ ವಿಶ್ವವಿದ್ಯಾನಿಲಯಗಳಲ್ಲಿ ಮಹೋನ್ನತ ಪದವಿಗಳನ್ನು ಪಡೆದು ವಿದ್ಯಾಪೀಠಗಳಲ್ಲಿ ಮತ್ತು ಸರಕಾರದ ಸ್ಥಾನಗಳಲ್ಲಿ ಉಚ್ಚಶ್ರೇಣಿಗಳಲ್ಲಿ ರಂಜಿತರಾಗಿರುವವರೂ, -ಅಷ್ಟಗ್ರಹಕೂಟದ ಅಮಂಗಳ ಪರಿಹಾರಾರ್ಥವಾಗಿ, ಅದರಿಂದೊದಗುವ ದುಷ್ಪರಿಣಾಮವನ್ನು ತಡೆಗಟ್ಟಲೆಂದು ಹಾಸ್ಯಾಸ್ಪದವಾದ, ಮತ್ತು ಮಹಾ ನಷ್ಟಕರವಾದ ಯಾಗ, ಮಂತ್ರ, ತಂತ್ರ, ಪೂಜೆ ಮೊದಲಾದ ಮೌಢ್ಯಗಳಲ್ಲಿ ನಿರತರಾಗಿದ್ದಾಗ, ಪ್ರವರ್ಧಮಾನತೆಯ ದಾರಿಯಲ್ಲಿ ಇನ್ನೂ ಕುಂಟುತ್ತಾ ಏಳುತ್ತಾ ಬೀಳುತ್ತಾ ಸಾಗುತ್ತಿರುವ ನಮ್ಮ ಬಡದೇಶದಲ್ಲಿ ಮಾಡಲೇಬೇಕಾದ ಸಹಸ್ರಾರು ಅಭ್ಯುದಯದ ಕಾರ್ಯಗಳು ನಮ್ಮ ಉದ್ಯಮಶೀಲತೆಯನ್ನು ಬಾಯಿಬಿಟ್ಟು ಹಾರೈಸುತ್ತಿರುವಾಗ, ಮಾಡುವ ಆವಶ್ಯಕರ್ತವ್ಯಗಳನ್ನೆಲ್ಲ ಮೂಲೆಗೊತ್ತಿ ನಿಲ್ಲಿಸಿ, ಜಗದ್ಗುರುಗಳಿಂದಲೂ ರಾಜ್ಯಪಾಲರುಗಳಿಂದಲೂ ಬೆಂಕಿಗೆ ತುಪ್ಪ ಹೊಯ್ಯಿಸುವ ಅಥವಾ ಜರತಾರಿ ಸೀರೆಗಳಿಗೆ ಘೃತಸ್ನಾನ ಮಾಡಿಸಿ ಅವನನ್ನು ಹವ್ಯವಾಹನನಿಗೆ ಅರ್ಪಿಸುವ ಮಂಕಿನ ಮಹತ್ಕಾರ್ಯದಲ್ಲಿ ತೊಡಗಿದ್ದಾಗ, ಸಮಗ್ರ ರಾಷ್ಟ್ರದ ಸಾರ್ವಜನಿಕ ಮತ್ತು ರಾಜಕೀಯ ಮುಂದಾಳುಗಳಲ್ಲಿ ಶ್ರೀ ನೆಹರೂ ಒಬ್ಬರೇ, ಒಂಟಿಯಾಗಿ ನಿಂತು, ಪ್ರತಿಭಟನೆಯ ತಮ್ಮ ವೈಜ್ಞಾನಿಕದೃಷ್ಟಿಯನ್ನು ಘೋಷಿಸಲಿಲ್ಲವೆ? ಇತರ ಮತಮೂಢ ಮುಂದಾಳುಗಳ ಮತ್ತು ವೈಜ್ಞಾನಿಕ ವೇಷದ ಪ್ರಚ್ಛನ್ನ ಮೂಢ ಜ್ಯೋತಿಷ್ಕರ ನಿಂದನೆ, ಮೂದಲೆ, ಎಚ್ಚರಿಕೆ, ಶಾಪಗಳಿಗೆ ಸೊಪ್ಪುಹಾಕದೆ ತಮ್ಮ ವೈಮಾನಿಕ ಪ್ರಯಾಣ ಕರ್ತವ್ಯವನ್ನು ಸಹ್ಯಾದಿ ಪರ್ವತಗಳ ಅಪಾಯಕರ ರಂಗದ ಮೇಲೆಯೂ ನಿಷ್ಠೆಯಿಂದ ಕೈಕೊಂಡು ಪಾಲಿಸಲಿಲ್ಲವೆ?

ಅವರ ಬದುಕಿನ ಸಂದೇಶದಲ್ಲಿ ಮಾತ್ರವಲ್ಲದೆ ಸಾವಿನ ಸಂದೇಶದಲ್ಲಿಯೂ ಅವರು ತಮ್ಮ ವೈಜ್ಞಾನಿಕ ವಿಚಾರ ನಿಷ್ಠೆಯನ್ನೆ ಮೆರೆದು ಹೋಗಿದ್ದಾರೆ. ಅವರು ತೀರಿಕೊಂಡಾಗ ದೆಹಲಿಯ ಆಕಾಶವಾಣಿಯಲ್ಲಿ ಒಬ್ಬರು ರಾಷ್ಟ್ರಪತಿಗಳಿಂದ ಉದ್ಘಾಟಿತವಾಗಿ, ಮತ್ತೊಬ್ಬರು ರಾಜ್ಯಪಾಲ ಬಂಧುವಿನಿಂದ ಪಠಿತವಾದ ಅವರ ‘ಮರಣ ಶಾಸನ’ ಅವರ ವೈಜ್ಞಾನಿಕ ದೃಷ್ಟಿಗೂ ವಿಚಾರಬುದ್ಧಿಗೂ ಕಲಶದೇದೀಪ್ಯವಾಗಿ ಕಿರೀಟವಿಟ್ಟಂತಿಲ್ಲವೆ?

ಆದರೆ ಮತಮೌಢ್ಯದ ಮಹಾಪ್ರಾಚೀನ ಜಾಡ್ಯದಿಂದ ವಿಚಾರಜಡವಾಗಿರುವ ನಮ್ಮ ದೇಶ ಶ್ರೀ ನೆಹರೂ ಅವರ ಆ ಸಂದೇಶಕ್ಕೆ ಎಷ್ಟರ ಮಟ್ಟಿಗೆ ಗಮನ ಕೊಟ್ಟಿದೆ? ಎಷ್ಟರ ಮಟ್ಟಿಗೆ ಅದನ್ನು ಅರ್ಥಮಾಡಿಕೊಂಡಿದೆ? ಮತ್ತೆಷ್ಟರಮಟ್ಟಿಗೆ ಅನುಷ್ಠಾನಕ್ಕೆ ತಂದಿದೆ? ಮತ್ತು ಅನುಷ್ಠಾನಕ್ಕೆ ತರಲಾದರೂ ಪ್ರಯತ್ನ ಮಾಡುತ್ತಿದೆ?

ವಿಜ್ಞಾನ ವಿದ್ಯೆಯೊಂದಿಗೆ ವೈಜ್ಞಾನಿಕ ದೃಷ್ಟಿಯೂ ವಿಚಾರಬುದ್ಧಿಯೂ ಸಾಧಿತವಾಗುತ್ತದೆ ಎಂದು ಹಾರೈಸಿದ್ದವರಿಗೆಲ್ಲ ಅತ್ಯಂತ ನಿರಾಶೆಯಾಗುವ ಪರಿಸ್ಥಿತಿ ಈ ದೇಶದಲ್ಲಿದೆ. ನಮ್ಮ ರಾಜ್ಯಾಂಗವೇನೊ ವೈಜ್ಞಾನಿಕದೃಷ್ಟಿಗೂ ವಿಚಾರಬುದ್ದಿಗೂ ತಂದೊಡ್ಡಿರುವ ರಕ್ಷಾಪೀಠದಂತಿದೆ. ಆದರೆ ಹಳೆಯ ಮತೀಯ ಭ್ರಾಂತಿಗಳು ಧರ್ಮಾಚರಣೆಯ ಹೆಸರಿನಲ್ಲಿ ಆ ದೃಷ್ಟಿ ಮತ್ತು ಬುದ್ಧಿ ಎರಡಕ್ಕೂ ವಿಘ್ನಪ್ರಾಯವಾಗಿ ವಿಜೃಂಭಿಸುತ್ತಿದೆ. ಶ್ರೀಸಾಮಾನ್ಯನ ಚೇತನ ಆಚಾರದ ಯೂಪಕ್ಕೆ ಕಟ್ಟುಗೊಂಡು ಅಸಹಾಯವಾಗಿ ಅರಚುತ್ತಿದೆ.

ಇಲ್ಲದಿದ್ದರೆ, ಶ್ರೀ ನೆಹರೂ ತಮ್ಮ ‘ಮರಣ ಶಾಸನ’ದಲ್ಲಿ ಎಂತಹ ಜಡಮತಿಗೂ ಅರ್ಥವಾಗುವಂತೆ ಅತ್ಯಂತ ವಾಚ್ಯವಾಗಿ “ನನಗೆ ಯಾವ ಶ್ರಾದ್ಧಾದಿ ಮತೀಯ ಕರ್ಮಾಚರಣೆಯಲ್ಲಿಯೂ ನಂಬುಗೆಯಿಲ್ಲವಾದ್ದರಿಂದ ನನ್ನ ನಿಧನಾನಂತರ ನನ್ನ ಅಪರಕ್ರಿಯೆಯಲ್ಲಿ ಅವುಗಳನ್ನು ಆಚರಿಸಬಾರದು”, ಎಂದು ಹೇಳಿದ್ದರೂ ಅವರ ಬೂದಿಯನ್ನು ಗೌರವಿಸಲು ತಂದ ಒಂದು ರಾಜ್ಯದ ಮಂತ್ರಿಮುಖ್ಯರೂ ಮತ್ತು ರಾಜ್ಯಪಾಲರೂ ಆ ಭಸ್ಮಾವಶೇಷವನ್ನು ಹೊಳೆಯಲ್ಲಿ ತೇಲಿಬಿಟ್ಟು ಪುರೋಹಿತರಿಂದ ಶ್ರಾದ್ಧಮಂತ್ರಗಳನ್ನು ಹೇಳಿಸಿ ಅಪಚಾರವೆಸಗುತ್ತಿದ್ದ ದೃಶ್ಯ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತೇನು?

ಶ್ರೀ ನೆಹರೂ ಅವರು ವೈಜ್ಞಾನಿಕ ದೃಷ್ಟಿಯಲ್ಲಿ ಮೆಚ್ಚಿಗೆ ಇರುವವರಲ್ಲಿಯೂ ಕೆಲವರು ಅವರನ್ನು ನಾಸ್ತಿಕರೆಂದು ವರ್ಣಿಸಿರುವುದನ್ನೂ ನಾವು ನೋಡಿದ್ದೇವೆ. ಶ್ರಾದ್ಧಾದಿ ಕರ್ಮಗಳಲ್ಲಿ ತಿರಸ್ಕಾರವನ್ನು ಅವರು ತಮ್ಮ ‘ಮರಣ ಶಾಸನ’ದಲ್ಲಿ ಪ್ರದರ್ಶಿಸಿದ ಮೇಲಂತೂ ಅನೇಕರು ಅವರನ್ನು ನಾಸ್ತಿಕರ ಗುಂಪಿಗೆ ಸೇರಿಸಿಬಿಟ್ಟಿದ್ದಾರೆ. ಒಂದು ಪತ್ರಿಕೆ ಅವರನ್ನು ನಾಸ್ತಿಕರೆಂದೂ ಗಾಂಧೀಜಿಯನ್ನು ಆಸ್ತಿಕರೆಂದೂ ವರ್ಣಿಸಿದ್ದನ್ನೂ ನಾವು ಕಂಡಿದ್ದೇವೆ. ಆದರೆ ಆ ಭಾವನೆ ಅತ್ಯಂತ ಸತ್ಯದೂರವಾದದ್ದು, ನಮ್ಮವರು ಬುದ್ಧನನ್ನು ನಾಸ್ತಿಕನೆಂದೂ ಬೌದ್ಧ ಮತ್ತು ಜೈನ ಧರ್ಮಗಳನ್ನು ನಾಸ್ತಿಕ ಮತಗಳೆಂದೂ ವರ್ಣಿಸಿದ್ದಂತೆ! ವಿಗ್ರಹ ಪೂಜಕನು ನಿರಾಕಾರವಾದಿಯನ್ನು ನಾಸ್ತಿಕನೆಂದು ವರ್ಣಿಸಿದರೆ ಅದು ನಿಜವಾಗುತ್ತದೆಯೆ? ತನ್ನ ಆಕಾರದ ಅಥವಾ ತಾನು ಅರಿತ ಪ್ರಕಾರದ ದೇವರೆ ದೇವರು; ಭಗವದ್ವಸ್ತು ತನಗರಿಯದ ಅಥವಾ ತಾನು ಗ್ರಹಿಸಲಾರದ ಅನ್ಯಾಕಾರ ಅಥವಾ ಅನ್ಯಪ್ರಕಾರಗಳಿಂದ ಭಾವಿತವಾದರೆ ಅದು ದೇವರಲ್ಲ ಎಂದು ವಾದಿಸುವವನು ಮೂರ್ಖನಲ್ಲದಿದ್ದರೆ ಶಠನಂತೂ ನಿಶ್ಚಯ.

ಯಾರಿಗೆ ತನಗಿಂತಲೂ ದೊಡ್ಡದೊಂದಿದೆ,-‘ಅಸ್ತಿ’-ಎಂಬ ಪ್ರಜ್ಞೆ ಇರುವುದೊ ಅವರೆಲ್ಲ ಆಸ್ತಿಕರೆ. ನೆಹರೂ ಅವರ ಲೇಖನಗಳಲ್ಲಿ, ಭಾಷಣಗಳಲ್ಲಿ, ಪತ್ರಗಳಲ್ಲಿ, ಬದುಕಿನ ನಡತೆಯಲ್ಲಿ, ಹಿರಿಯರೊಡನೆಯ ವ್ಯವಹಾರಗಳಲ್ಲಿ ಈ ‘ಅಸ್ತಿಪ್ರಜ್ಞಾ’ ರೂಪದ ಆಸ್ತಿಕತೆ ಎಲ್ಲೆಲ್ಲಿಯೂ ಮೂಡಿರುವುದನ್ನು ನಾವು ಕಾಣುತ್ತೇವೆ. ಅವರು ಭಾರತದ ಮಹಾ ಪ್ರಧಾನಿಯಾಗಿ ಒಂದು ಸಂದರ್ಭದಲ್ಲಿ ಮೈಸೂರಿಗೆ ಬಂದು, ಯಲವಾಲದಲ್ಲಿ ನಡೆಯುತ್ತಿದ್ದ ಸರ್ವೋದಯ ಸಮ್ಮೇಲನಕ್ಕೆ ಹೋಗಿ, ಸಂತವರೇಣ್ಯ ಶ್ರೀ ವಿನೋಬಾಜಿಯನ್ನು ಎದುರುಗೊಂಡ ಸಂದರ್ಭದಲ್ಲಿ ತೆಗೆದ ಒಂದು ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿದ ಯಾವನಿಗಾದರೂ ನೆಹರೂ ಅವರನ್ನು ‘ನಾಸ್ತಿಕ’ ಎಂದು ಕರೆಯುವುದಕ್ಕೆ ಸಾಧ್ಯವಾಗುತ್ತದೆಯೆ? ಅಲ್ಲಿ ನೆಹರೂ ಅವರ ದೇಹಭಂಗಿಯಲ್ಲಿ, ಮುಖಮುದ್ರೆಯಲ್ಲಿ, ನಮಸ್ಕಾರ ವಿನ್ಯಾದ ಕರಪುಟಾಂಜಿಲಿಯಲ್ಲಿ ವ್ಯಕ್ತವಾಗಿರುವ ಅಸಂಖ್ಯ ಭಾವಗಳನ್ನು ಬರೆದು ಮುಗಿಸಲು ಸಾಧ್ಯವೆ? ವಯಸ್ಸಿನಲ್ಲಿ ಶ್ರೀ ವಿನೋಬಾಜಿಯವರಿಗೆ ಹಿರಿಯರಾಗಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಗಾಂಧೀಜಿಯ ಮುಂದೆ ದ್ವಿತೀಯ ಮಾತ್ರರಾಗಿಜಗದ್ವಿಖ್ಯಾತರಾಗಿ, ಮಹಾ ಮೇಧಾವಿಯಾಗಿ, ಶ್ರೀಮಂತ ಪ್ರತಿಷ್ಠಿತ ವ್ಯಕ್ತಿಯಾಗಿ, ಜಗತ್ತಿನಮಹೋನ್ನತ ಪುರುಷರಲ್ಲಿ ಅಗ್ರಗಣ್ಯರಾಗಿದ್ದ ಅವರು ಶ್ರೀ ವಿನೋಬಾಜಿಗೆ ಶರಣು ಮಾಡುತ್ತಿರುವ ದೃಶ್ಯ ಅನ್ಯಾದೃಶವಾಗಿದೆ. ಭಕ್ತಿ, ದೈನ್ಯ, ಪ್ರಾರ್ಥನೆ, ವಿನಯ, ಶರಣಾಗತಿ, ಸಮರ್ಪಣಭಾವ, ನಿರಹಂಕಾರ, ಪೂಜ್ಯಬುದ್ಧಿ, ಮಹಾವಿಭೂತಿಯ ಮುಂದೆ ತನ್ನ ಐಶ್ವರ್ಯ ವೈಭವ ಪ್ರತಿಷ್ಠೆ ಅಧಿಕಾರ ಎಲ್ಲವನ್ನೂ ನಿವೇದಿಸುವ ಒಂದು  ಮಹತ್ತರ ವಿಭೂತಿಭಂಗಿ-ಇತ್ಯಾದಿ ಆಸ್ತಿಕ ಪ್ರಜ್ಞೆಯ ಸರ್ವಲಕ್ಷಣಗಳನ್ನೂ ಅಲ್ಲಿ ನಾವು ಸಂದರ್ಶಿಸಿ ಆ ದೃಶ್ಯಭವ್ಯತೆಯ ಭೂಮಾನುಭೂತಿಯಲ್ಲಿ ಮೈಮರೆಯುತ್ತೇವೆ. ಶ್ರೀ ನೆಹರೂ ಅವರ ‘ಅಸ್ತಿಪ್ರಜ್ಞೆ’ ಅಥವಾ ‘ಆಸ್ತಿಕತೆ’ಯ ಪರವಾಗಿ ವಾಗ್ಮಿಯಾಗಿ ವಾದಿಸಲು ಅದಕ್ಕಿಂತಲೂ ಹೆಚ್ಚಾದ ಬೇರೊಬ್ಬ ತರ್ಕಚೂಡಾಮಣಿ ಬೇಕಿಲ್ಲ. ಅವರು ಆಸ್ತಿಕ ಅಗ್ರೇಸರ!

ಜನಿವಾರ ಹಾಕಿಕೊಳ್ಳಲಿಲ್ಲ, ನಾಮ ಹಚ್ಚಿಕೊಳ್ಳಲಿಲ್ಲ, ವಿಭೂತಿ ಬಳಿದುಕೊಳ್ಳಲಿಲ್ಲ, ದೇವಾಲಯಗಳಿಗೆ ಆರಾಧನೆಗಾಗಿ ಹೋಗಲಿಲ್ಲ, ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಾಲಿಲ್ಲ, ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ, ಪೂಜಾರಿಗಳಿಗೆ ಅಡ್ಡಬೀಳಲಿಲ್ಲ, ಅಡ್ಡಪಲ್ಲಕಿಯ ಜಗದ್ಗುರುಗಳಿಗೆ ಕೈಮುಗಿದು ಮಾಲೆ ಹಾಕಲಿಲ್ಲ, ರಾಹುಕಾಲ ಗುಳಿಕಕಾಲ ನೋಡಲಿಲ್ಲ, ನಿಮಿತ್ತ ನೋಡಿಸಲಿಲ್ಲ, ಪಂಚಾಂಗ ತೆರೆಯಲಿಲ್ಲ, ಜೋತಿಷ್ಯ ನಂಬಲಿಲ್ಲ. ಗ್ರಹಣಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿನಿಂದ ಪಾರು ಮಾಡುವ ಭಾರತೀಯ ಡಾನ್ ಕ್ವಿಕ್ಷೋಟು ಆಗಲಿಲ್ಲ-ಇತ್ಯಾದಿಗಳಿಗಾಗಿ ಅವರನ್ನು ನಾಸ್ತಿಕ ಎಂದರೆ-ಅವರಂತಹ ನಾಸ್ತಿಕರೊಡನೆ ನರಕವೂ ಲೇಸು; ಮೂಢಮತಾಚಾರದ ಯಾವಾತನೊ ಒಬ್ಬ ಪೂರ್ಣಾನಂದ, ಭ್ರಾಂತ ಜೋತಿಷಿ ಯಾವಾತನೊ ಒಬ್ಬ ರಾಮಣ್ಣ, ಮತ್ತಾರೊ ಒಬ್ಬ ಮಠಾಧಿಪತಿ ಸೀನಣ್ಣ ಮುಂತಾದವರು ಇರುವ ಸ್ವರ್ಗವೂ ಹೇಸು!-ಎಂದು ಹೇಳಬೇಕಾಗುತ್ತದೆ.

ತ್ಯಾಗದಲ್ಲಿ, ದೇಶಪ್ರೇಮದಲ್ಲಿ, ತತ್ತ್ವನಿಷ್ಠೆಯಲ್ಲಿ ಪರಾನುಕಂಪೆಯಲ್ಲಿ, ಕೆಚ್ಚಿನಲ್ಲಿ, ದೃಢತೆಯಲ್ಲಿ, ಮೇಧಾಶಕ್ತಿಯಲ್ಲಿ, ವಾಗ್ಮಿತೆಯಲ್ಲಿ, ಲೇಖನ ಪ್ರತಿಭೆಯಲ್ಲಿ, ಸಮನ್ವಯ ದೃಷ್ಟಿಯಲ್ಲಿ ಅಕುಟಿಲಭಾವ ಮತ್ತು ಋಜುವರ್ತನೆಗಳಲ್ಲಿ ಶ್ರೀ ನೆಹರೂ ಅಸಾಧಾರಣ ವ್ಯಕ್ತಿಯಾಗಿದ್ದರು. ಆ ಒಂದೊಂದು ಗುಣ ಪ್ರಕಾಶನದ ಹಿಂದೆಯೂ ಅದಕ್ಕೆ ಪೀಠ ಭಿತ್ತಿಯಾಗಿ ಯಾವುದೋ ಒಂದು ಮಹತ್ತಾದ ಆಧ್ಯಾತ್ಮಿಕತ-ಅದು ಛದ್ಮವೇಷಿಯಾಗಿರಬಹುದು ಅಥವಾ ಪ್ರಚ್ಛನ್ನವಾಗಿರಲೂಬಹುದು – ಬೆಂಬಲವಾಗಿರದಿದ್ದರೆ ಅವರ ಬದುಕಿನ ಬೆನ್ನುಮೂಳೆ ಅವರು ಹೊತ್ತಿದ್ದ ಭಾರಕ್ಕೆ ಎಂದೋ ಕುಸಿದು ಬೀಳುತ್ತಿತ್ತು. ಕಡೆಗೂ ಅದು ಕುಸಿದು ಬಿದ್ದುದಕ್ಕೆ ಕಾರಣ ಆ ಆಧ್ಯಾತ್ಮಿಕತೆಯ ಬೆಂಬಲ ತಪ್ಪಿದುದರಿಂದಲೆ ಎಂದು ತೋರುತ್ತದೆ. ಏಕೆಂದರೆ ಅವರ ಕೊನೆ ಅಷ್ಟು ಬೇಗನೆ, ಅಷ್ಟು ಅನಿರೀಕ್ಷಿತವಾಗಿ, ಅಷ್ಟು ಆಕಸ್ಮಿಕವೆಂಬಂತೆ ಶೀಘ್ರವಾಗಿ ಆಗುತ್ತದೆ ಎಂದು ಯಾರೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಆ ಆರೋಗ್ಯ, ಆ ಉಲ್ಲಾಸ, ಆ ಉತ್ಸಾಹ, ಆ ಧೈರ್ಯ, ಆ ಸ್ಥೈರ್ಯ, ಆ ಬಾಲಕಸದೃಶ ಮುಧಮನೋಭಾವ, ರಾಜಕೀಯದ ಸಮುದ್ರಮಂಥನದಲ್ಲಿ ಉದಿಸಿದ ಎಷ್ಟು ಹಾಲಾಹಲವನ್ನು ಹೀರಿಕೊಂಡರೂ ತನ್ನ ಶಿಶುಸಹಜವಾದ ಅಮೃತತ್ತ್ವವನ್ನು ಒಂದಿನಿತೂ ಕುಲುಷಿತವನ್ನಾಗಿ ಮಾಡಿಕೊಳ್ಳದ ಹರಶಿರಶ್ಚಂದ್ರಿಕಾ ಉಪಮವಾದ ಕ್ಷೀರಶುಭ್ರ ಚೇತನ-ಅಷ್ಟು ತಟಕ್ಕನೆ, ಅಷ್ಟು ಬೇಗನೆ ತನ್ನ ಲೀಲಾರಂಗವನ್ನು ತ್ಯಜಿಸಿ ಹೋದುದಕ್ಕೆ ಮುಖ್ಯಕಾರಣ-ಅವರು ತಮ್ಮ ಜೀವನಾದ್ಯಂತವೂ ರಕ್ಷಿಸಿ, ಪೋಷಿಸಿ, ಹಾರೈಸಿಕೊಂಡು ಬಂದಿದ್ದ ಮಹಾ ಧ್ಯೇಯಕ್ಕೆ ಅನಿರೀಕ್ಷಿತ ದಿಕ್ಕಿನಿಂದ ಒದಗಿದ ಮಿತ್ರದ್ರೋಹರೂಪದ ಧಕ್ಕೆಯೆ: ಚೀಣೀಯ ಧಾಳಿ! ವೈರಿಯ ಸೈನಿಕ ಶಕ್ತಿಗಲ್ಲ ಆ ಚೇತನ ಅಳುಕಿದ್ದು; ಸ್ವದೇಶದ ಅಸಿದ್ಧತೆಗಲ್ಲ ಅವರ ಮನಸ್ಸು ಮುರಿದದ್ದು; ಅವರ ಜೀವನದ ಸಾರಸರ್ವಸ್ವವಾದ ಜಗತ್ತಿನ ಸ್ನೇಹ ಮತ್ತು ಶಾಂತಿ ಸ್ಥಾಪನೆಯ ದಿವ್ಯ ಧ್ಯೇಯಕ್ಕೆ ಬಿದ್ದ ಕೊಡಲಿಪೆಟ್ಟು, ಬೆನ್ನಿರಿತ! ಬದುಕಿಗೆ ಆಧಾರವಾಗಿದ್ದ ಒಂದು ಆಧ್ಯಾತ್ಮಿಕವಾದ ಶಾಶ್ವತ ಮೌಲ್ಯವೆ-ಪುರುಷಾರ್ಥೋತ್ತಮವೆ-ವಿನಷ್ಟವಾದಂತಾಗಿ ಅವರ ಆಸ್ಮಿತಾಸಕ್ತಿಯ ತಾಯಿಬೇರಿಗೆ ಬೆನ್ನೀರು ಹೊಯ್ದುಬಿಟ್ಟಿತು!

ಮೇಲೆ ಉಲ್ಲೇಖಿಸಿದ ಗುಣಗಣಗಳಲ್ಲಿ ಶ್ರೀ ನೆಹರೂ ವಿಶೇಷ ಅಸಾಧಾರಣ ವ್ಯಕ್ತಿಯಾಗಿದ್ದರು ಎಂಬುದೇನೋ ನಿಜ. ಆದರೆ ಆ ಗುಣಗಳಲ್ಲಿ ಅವರಿಗೆ ಸಮಸ್ಪರ್ಧಿಗಳಾಗಿ ನಿಂತವರೂ ನಿಲ್ಲುವವರೂ ಸ್ವಾತಂತ್ರ್ಯಸಂಗ್ರಾಮ ಸಮಯದಲ್ಲಿ ಅನೇಕರು ಆಗಿಹೋಗಿದ್ದಾರೆ, ಕೆಲವರಾದರೂ ಇನ್ನೂ ಇದ್ದಾರೆ. ಈ ಒಂದು ವಿಷಯದಲ್ಲಿ-ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿಯಲ್ಲಿ-ಮಾತ್ರ ರಾಜಕೀಯ ಮತ್ತು ಸಾರ್ವಜನಿಕರಂಗದಲ್ಲಿರುವ ಇತರರಾರೂ ಅವರಿಗೆ ಹೆಗಲೆಣೆಯಾಗುವುದಿರಲಿ ಅವರ ಮೊಣಕಾಲೆತ್ತರಕ್ಕೂ ಬರಲಾರರು. ಅಲ್ಲಿ ಅವರು ಏಕೈಕ ಗಗನೋನ್ನತ ವ್ಯಕ್ತಿಯಾಗಿ ಗೊಮ್ಮಟೋಪಮವಾಗಿ ಭಾರತೀಯ ರಾಜಕೀಯ ದಿಗಂತವನ್ನೆಲ್ಲ ಆಕ್ರಮಿಸಿ ನಿಂತಿದ್ದಾರೆ, ಲೋಕ ಲೋಚನ ಮಹಾ ಧ್ಯೇಯಮೂರ್ತಿಯಾಗಿ, ತಮ್ಮ ಮಹದ್ಗುರು ಪೂಜ್ಯ ಮಹಾತ್ಮಾ ಗಾಂಧೀಜಿಯ ಆಶೀರ್ವಾದ ಹಸ್ತಮುದ್ರೆಯ ಆಶ್ರಯದಲ್ಲಿ!

ಶ್ರೀ ನೆಹರೂ ಮೂಢ ಮತಾಚಾರದ ಮಂಕುದಿಣ್ಣೆಯಲ್ಲ; ಆಧ್ಯಾತ್ಮ ಮತ್ತು ವಿಜ್ಞಾನಗಳ ಸರ್ವಶ್ರೇಷ್ಠ ನಿಧಿ ಮತ್ತು ಪ್ರತಿನಿಧಿ: ದೇಶದ ತರುಣರು ರಾಷ್ಟ್ರಹಾನಿಕರವಾದ ಮತ್ತು ಛಿದ್ರಕಾರಕವಾದ ಪುರೋಹಿತ ವರ್ಗದವರ ಮತೀಯ ಮೌಢ್ಯವನ್ನು ಹೊರತಳ್ಳಿ, ನೆಹರೂ ಅವರ ವಿಚಾರ ಮಾರ್ಗವನ್ನು ವೈಜ್ಞಾನಿಕ ದೃಷ್ಟಿಯಿಂದ ಅನುಸರಿಸದಿದ್ದರೆ ಭಾರತೀಯ ಸಂಸ್ಕೃತಿಗೆ ಉಳಿಗಾಲವಿಲ್ಲ; ಭಾರತೀಯರಿಗೆ ಕೇಡು ತಪ್ಪಿದ್ದಲ್ಲ; ಭಾರತದ ಐಹಿಕ ಮತ್ತು ಪಾರಲೌಕಿಕವಾದ ಅಭ್ಯುದಯ ಮತ್ತು ಶ್ರೇಯಸ್ಸುಗಳಿಗೂ ಸ್ವತಃಸಿದ್ಧವಾಗುತ್ತದೆ-ಹಾನಿ ಮತ್ತು ಗ್ಲಾನಿ!


[1] ಕೇಂದ್ರೀಯ ಆಹಾರವಿಜ್ಞಾನ ಸಂಶೋಧನಾ ಸಂಸ್ಥೆ ಹೊರಡಿಸುತ್ತಿರುವ ‘ಆಹಾರವಿಜ್ಞಾನ’ ತ್ರೈಮಾಸಿಕದ ವಿಶೇಷ ಸಂಚಿಕೆಗೆ ಬರೆದ ಲೇಖನ: ೮-೧೦-೧೯೬೪.