“ಈ ಅಸೀಮ ಅನಂತಭಾವವು, ಸನಾತನ ಶಾಸ್ತ್ರ ಮತ್ತು ಧರ್ಮಗಳಲ್ಲಿ ನಿಹಿತವಾಗಿದ್ದರೂ ಕೆಲವು ಕಾಲ ಮಾತ್ರ ಪ್ರಚ್ಛನ್ನವಾಗಿದ್ದ ಈ ಅಸೀಮ ಅನಂತಭಾವವು, ಈ ಯುಗಾವತಾರನಿಂದ ಪುನರಾವಿಷ್ಕೃತವಾಗಿ ಪಾಂಚಜನ್ಯ ಸದೃಶವಾದ ಉಚ್ಚನಿನಾದದಿಂದ ಮಾನವ ಸಮಾಜದಲ್ಲಿ ಘೋಷಿತವಾಗುವುದು.”

“ಈ ನವಯುಗ ಪ್ರವರ್ತಕನಾದ ಭಗವಾನ್ ಶ್ರೀರಾಮಕೃಷ್ಣನು ಹಿಂದೆ ಅವತರಿಸಿದ ಯುಗಧರ್ಮಪ್ರವರ್ತಕ ಸಮೂಹದ ಪುನಸ್ಸಂಸ್ಕೃತ ಮಹಾ ಪ್ರಕಾಶವಾಗಿರುತ್ತಾನೆ!”

“ಯಾವ ಶಕ್ತಿಯ ಉನ್ಮೇಷಮಾತ್ರದಿಂದಲೆ ದಿಗ್ದಿಗಂತವ್ಯಾಪಿಯಾದ ಪ್ರತಿಧ್ವನಿಯಿಂದ ಜಗತ್ತು ಜಾಗ್ರತವಾಗುತ್ತಿರುವುದೊ ಆ ಶಕ್ತಿಯ ಪೂರ್ಣತ್ವವನ್ನು ಭಾವಿಸಿ ಅನುಭವಿಸು!”

ಅರ್ಧಶತಮಾನಕ್ಕೆ ಪೂರ್ವದಲ್ಲಿ ಶ್ರೀರಾಮಕೃಷ್ಣರು ಮಹಾ ಸಮಾಧಿಸ್ಥರಾದ ತರುಣದಲ್ಲಿಯೆ, ಜಗತ್ತಿನ ಕಿವಿ ಆ ದಕ್ಷಿಣೇಶ್ವರ ದೇವ ಮಾನವನ ಪುಣ್ಯನಾಮದ ದೂರಘೋಷದ ಅನುರಣನ ಮತ್ತು ಪ್ರತಿಧ್ವನನಗಳಿಂದ ಆಗತಾನೆ ಒಂದಿನಿತೆ ಉನ್ಮೇಷನಗೊಳ್ಳುತ್ತಿದ್ದ ಶುಭಮುಹೂರ್ತದಲ್ಲಿ, ದ್ರಷ್ಟರ ಸ್ವಾಮಿ ವಿವೇಕಾನಂದರ ಋಷಿವಾಣಿ ಹಾಗೆಂದು ಘೋಷಿಸಿತು. ಅವರು ಅಂದು ಸಾರಿ ಹೇಳಿದ ಭವಿಷ್ಯತ್ತು ದಿನ ದಿನಕ್ಕೂ ಹೆಚ್ಚು ಹೆಚ್ಚು ಸತ್ಯವಾಗಿ ಈ ಐವತ್ತು ವರ್ಷಗಳಲ್ಲಿ ನಿರ್ವಿತವಾದವಾದ ನಿಸ್ಸಂದೇಹವಾದ ನಿರ್ಣಾಯಕವಾದ ಸಿದ್ಧಾಂತವಾಗಿರುವುದನ್ನು ಕಾಣುತ್ತಲಿದ್ದೇವೆ. ಶ್ರೀರಾಮಕೃಷ್ಣರ ದಿವ್ಯ ಪ್ರಭಾವ ಸಮಗ್ರ ಪೃಥ್ವೀಮಂಡಲವನ್ನೇ ವ್ಯಾಪಿಸುತ್ತಿದೆ. ಅವರ ಜೀವನ ಉಪದೇಶಗಳಿಗೆ ಕೋಟ್ಯಂತರ ಚೇತನಗಳು ಅರಳಿ ಬೆಳಕು ಕಾಣುತ್ತಿವೆ; ಅಸಂಕ್ಯ ಹೃದಯ ಗಹ್ವರಗಳಲ್ಲಿ ಶಾಂತಿ ಸತ್ತ್ವದ ಆನಂದದ ಭಗವಜ್ಜ್ಯೋತಿ ಹೊಮ್ಮುತ್ತಿದೆ. ಆ ದಿವ್ಯ ಸಂದೇಶಾಮೃತದಿಂದ ಆಕರ್ಷಿತರಾಗಿ ಆರ್ತರೂ ಮುಮುಕ್ಷುಗಳೂ ಜ್ಞಾನಾರ್ಥಿಗಳೂ ಭೂಮಂಡಲದ ಮೂಲೆ ಮೂಲೆಗಳಿಂದ ಯಾತ್ರೆ ಬರುತ್ತಿದ್ದಾರೆ. ಕಂಡರಿಯದ ಕೇಳರಿಯದ ಬಹುದೂರದ ದೇಶವಿದೇಶಗಳಲ್ಲಿ ಪರಮಹಂಸರ ಜೀವನ ಸಂದೇಶಗಳು ಪ್ರಕಟವಾಗುತ್ತಿವೆ. ಸ್ವಾಮಿ ವಿವೇಕಾನಂದರಿಂದ “ಆತ್ಮನೋ ಮೋಕ್ಷಾರ್ಥಂ ಜಗದ್ಧಿ ತಾಯ ಚ” ಎಂಬ ಮಹಾಧ್ಯೇಯದಿಂದ ಸ್ಥಾಪಿತವಾದ ಶ್ರೀರಾಮಕೃಷ್ಣ ಮಹಾಸಂಘವು ಸದ್ದುಗದ್ದಲವಿಲ್ಲದೆ ಮೆಲ್ಲಮೆಲ್ಲಗೆ ಕ್ರಮಕ್ರಮೇಣ ತನ್ನ ಶಾಖೋಪಶಾಖೆಗಳನ್ನು ವಿಸ್ತರಿಸುತ್ತಾ ತನ್ನ ಮಾತೃಸದೃಶವಾದ ಕರುಣಾಬಾಹುಗಳಿಂದ ಪ್ರಪಂಚವನ್ನೆಲ್ಲ ತಬ್ಬುತ್ತಿದೆ. ಪ್ರತಿ ವರುಷವೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಹಾಸಂಘದ ಶಾಖಾಕೇಂದ್ರಗಳು ಸ್ಥಾಪಿತವಾಗುತ್ತಿವೆ. ಆದರೆ ಅದರ ರೀತಿಯೆ ಬೇರೆ, ನೀತಿಯೆ ಬೇರೆ. ಅಲ್ಲಿ ಪ್ರೀತಿಗಲ್ಲದೆ ಭೀತಿಗೆ ಒಂದಿನಿತೂ ಅವಕಾಶವಿರುವುದಿಲ್ಲ. ಅದು ಮತಪ್ರಚಾರ ಸಂಸ್ಥೆಯಲ್ಲ; ಧರ್ಮಪ್ರಸಾರ ಸಂಸ್ಥೆ. ಅದರ ಉದ್ದೇಶ ಇತರ ವಿದೇಶಿಯ ಮತಸಂಸ್ಥೆಗಳಂತೆ ಮತಾಂತರಗೊಳಿಸುವುದಲ್ಲ. ಎಲ್ಲ ಮತಗಳೂ ಭಗವಂತನೆಡೆಗೆ ಭಕ್ತನನ್ನು ಕರೆದೊಯ್ಯುವ ವಿವಿಧ ಪಥಗಳು ಎಂಬುದೆ ಅದರ ದೃಢವಿಶ್ವಾಸ. ಅಮೆರಿಕದ ಮತ್ತು ಇಂಗ್ಲೆಂಡಿನ ಕ್ರೈಸ್ತಮಿಶನನ್ನುಗಳಂತೆಯಾಗಲಿ ಮಹಮ್ಮದೀಯ ಬೌದ್ಧಾದಿ ಪ್ರಚಾರಸಂಸ್ಥೆಗಳಂತಾಗಲಿ ಅದು ಮತಾಂತರಗೊಳಿಸುವ ನೆವದಿಂದ ತಮ್ಮ ಪಕ್ಷದ ಸಂಖ್ಯೆಯನ್ನು ವಿಪುಲಗೊಳಿಸುವ ಲೌಕಿಕವೂ ರಾಜಕೀಯವೂ ಆದ ಕಾರ್ಯಕಲ್ಕೆ ಎಂದೂ ಪ್ರವೇಶಿಸುವುದಿಲ್ಲ. ಅಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಇತರ ವಿದೇಶಿಯ ಮಿಶನ್ನುಗಳಿಗೆ ಅವರ ದೇಶದ ಸರಕಾರವೂ ಅಥವಾ ಅವರ ಮಠಾಧಿಪತಿಯೊ ಹಣವೊದಗಿಸುವಂತೆ ಶ್ರೀರಾಮಕೃಷ್ಣ ಮಹಾಸಂಘವು ಹಣವೊದಗಿಸುವುದಿಲ್ಲ. ಎಲ್ಲಿ ಯಾವ ಕೇಂದ್ರ ತೆರೆದರೂ ಅಲ್ಲಿಯ ಜನರ ಅಪೇಕ್ಷೆಯಂತೆ ತೆರೆಯಬೇಕು. ಅಲ್ಲಿಯ ಜನರೆ ಆ ಸಂಸ್ಥೆ ನಡೆಯುವುದಕ್ಕೆ ಹಣ ಒದಗಿಸಬೇಕು. ಅವರು ಬೇಕೆಂದರೆ ಇರುತ್ತದೆ; ಬೇಡವೆಂದರೆ ಹೋಗುತ್ತದೆ. ತಾಯಿಸಂಸ್ಥೆ ಹಣವೊದಗಿಸಿ ಅದರ ಆಯುಪ್ರಮಾಣವನ್ನು ಕೃತಕವಾಗಿ ಅಧಿಕಗೊಳಿಸುವ ಗೋಜಿಗೆ ಎಂದಿಗೂ ಹೋಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಶ್ರೀರಾಮಕೃಷ್ಣ ಸಂಘದ ಕೇಂದ್ರೋಪಕೇಂದ್ರಗಳು ಯಾವ ಕೃತಕ ಪ್ರಚೋದನೆಯೂ ಇಲ್ಲದೆ, ಯಾವ ಲೌಕಿಕ ಪ್ರಯೋಜನದ ಉದ್ದೇಶವನ್ನೂ ಒಲ್ಲದೆ, ಸ್ವಾಭಾವಿಕವಾಗಿ, ಸಂದೇಹ ಭೀತಿ ಘರ್ಷಣೆಗಳಿಗೆ ಒಂದಿನಿತೂ ಅವಕಾಶವಿಲ್ಲದಂತೆ ಮೂಡಿ ಮಲರಿ ಬಾಳುತ್ತಿವೆ; ಬದುಕನ್ನು ಬೆಳಗಿಸುತ್ತಿವೆ.

ಶ್ರೀರಾಮಕೃಷ್ಣರ ಹೆಸರು ಜಗದ್‌ವ್ಯಾಪಿಯಾಗುವಂತೆಯೂ ಅವರ ಉಪದೇಶಾಮೃತವು ಲೋಕದ ಹೃದಯಕ್ಕೆ ಪ್ರವಹಿಸುವಂತೆಯೂ ಮಾಡಿದ ಮಹಾವ್ಯಕ್ತಿಗಳಲ್ಲಿ ಇಬ್ಬರು ಕಲಶಪ್ರಾಯವಾಗಿದ್ದಾರೆ. ಅವರಲ್ಲಿ ಒಬ್ಬರು ವಿಖ್ಯಾತನಾಮರು; ಮತ್ತೊಬ್ಬರು ಅಜ್ಞಾತರು ಅಥವಾ ಅನಾಮರು: ಸ್ವಾಮಿ ವಿವೇಕಾನಂದ ಮತ್ತು “ಮ”! ಒಂದು, ಆಕಾಶದಲ್ಲಿ ತೊಳಗುವ ಸೂರ್ಯ; ಮತ್ತೊಂದು, ಮನೆಮನೆಯ ಹೃದಯದ ಗುಡಿಯಲ್ಲಿ ಬೆಳಗುವ ಹಣತೆ, ನಂದಾದೀಪ; ಕತ್ತಲೆಯಲ್ಲಿ ಭಾಸ್ಕರನಿಲ್ಲದ ವೇಳೆಯಲ್ಲಿಯೂ ತಂಪಿನ ಕಾಂತಿ ಶಾಂತಿಗಳನ್ನು ಕಣ್ಣು ಕೋರೈಸದಂತೆ ನಿರಾಡಂಬರವಾಗಿ ನೀಡುವ ಸೊಡರು, ಮುದ್ದು ಸೊಡರು, ತಾಯ್ತನದ ಸೊಡರು, ಹಣತೆಸೊಡರು! ಆತನು ತನ್ನಪೂರ್ಣನಾಮದಿಂದ ಪ್ರಪಂಚದ ಸಂತೆಬಯಲಿಗೆ ಬರಲು ನಾಚಿ, ಹೇಸಿ, ಹೆದರಿ, ‘ಮರ’ ಎಂಬ ಮೊದಲಕ್ಕರದಿಂದ ಮಾತ್ರ ತೆರೆಮರೆಯಿಂದ ಇಣುಕಿದ ಎಲೆಮರೆಯ ಮಿಣುಕು ಹೂ!

ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ವಿಜಯಿಯಾದಂದು ಮೊದಲುಗೊಂಡು ಅವರು ಪರಂದಾಮವನ್ನೈದುವವರೆಗೂ ದೇಶವಿದೇಶಗಳಲ್ಲಿ ಜನಾಂಗ ಜನಾಂಗಗಳಲ್ಲಿ ಸಹಸ್ರಾರು ವೇದಿಕೆಗಳ ಮೇಲೆ ನಿಂತು ತಮ್ಮ ಅನನುಕರಣೀಯವಾದ ಧೀರವಾಣಿಯಿಂದಲೂ ಅನುಪಮ ತೇಜಸ್ಸಿನ ವ್ಯಕ್ತಿತ್ವದಿಂದಲೂ ಶ್ರೀಗುರುದೇವನ ಉದಾರ ದಿವ್ಯ ಸಮನ್ವಯ ಸಂದೇಶವನ್ನು ಜಗತ್ತಿಗೆ ಸಾರಿ ಶ್ರೀರಾಮಕೃಷ್ಣರ ನಾಮಸಿಂಹಾಸನ ದಶದಿಕ್ಕುಗಳಲ್ಲಿಯೂ ಸಂಸ್ಥಾಪಿತವಾಗುವಂತೆ ಪೀಠಿಕೆ ಹಾಕಿದರು. ಅವರು ತಾವೆ ಸ್ವತಃ ಬರೆದ ಬರವಣಿಗೆಯೂ ಶಿಷ್ಯವರ್ಗದವರು ಬರೆದಿಟ್ಟುಕೊಂಡ ಅವರ ಮಾತುಕತೆ ಮತ್ತು ಭಾಷಣಗಳೂ ತರುವಾಯ ಮುದ್ರಿತವಾಗಿ ಹಲವಾರು ಮಹಾ ಹೊತ್ತಗೆಗಳ ರೂಪದಲ್ಲಿ ಹೊರಬಿದ್ದು ಕೋಟ್ಯಂತರ ಜನಗಳ ಹೃದಯ ಬುದ್ಧಿಗಳಿಗೆ ಪುಷ್ಟಿಕಾಂತಿಗಳನ್ನು ದಾನಮಾಡಿವೆ ಮತ್ತು ಮಾಡುತ್ತಲೂ ಇವೆ. ಇಂಗ್ಲೀಷಿನಲ್ಲಿ ಮೊದಲು ಬೆಳಕು ಕಂಡ ಅವು ಪ್ರಪಂಚದ ಅನೇಕಾನೇಕ ಭಾಷೆಗಳಿಗೆ ಪರಿವರ್ತಿತವಾಗಿ ಈಗ ಸರ್ವಜಗತ್ತಿನ ಸ್ವತ್ತಾಗಿ ಪರಿಣಮಿಸಿವೆ.

ಸ್ವಾಮಿ ವಿವೇಕಾನಂದರ ಸಿರಿಬಾಯಿಂದಲೆ ಪರಮಹಂಸರ ಜೀವನ ವಿಚಾರಗಳನ್ನೆಲ್ಲ ಸಾಧ್ಯವಾದಷ್ಟು ಆಮೂಲಾಗ್ರವಾಗಿ ಕೇಳಿ ಅವರ ವಿಚಾರವಾಗಿ ಮೊತ್ತಮೊದಲನೆಯ ಚಿಕ್ಕದಾದರೂ ಮಹತ್ತಾದ ಗ್ರಂಥವನ್ನು ಬರೆದವರೆಂದರೆ ಭಾರತೀಯ ತತ್ವ್ತಶಾಸ್ತ್ರಗಳನ್ನು ಪಾಶ್ಚಾತ್ಯರಿಗೆ ಮ್ಯಾಕ್ಸ್ ಮುಲರ್ ಅವರು. ಅವರ ತರುವಾಯ ಬಹುವರ್ಷ ಕಳೆದ ಮೇಲೆ, ಅವರಷ್ಟೆ ಪ್ರಸಿದ್ಧರೂ ಪ್ರಪಂಚದ ಸಾಹಿತ್ಯಲೋಕದಲ್ಲಿ ಒಂದು ಶಾಶ್ವತ ತಾರೆಯಾಗಿ ಪ್ರಕಾಶಿಸುತ್ತಿರುವವರೂ ಆದ ಫ್ರೆಂಚ್ ಸಾಧಕ, ಸಾಹಿತಿ ಮತ್ತು ಮಹಾಜ್ಞಾನಿ ದಿವಂಗತ ರೋಮೇನ್‌ರೊಲಾಂಡ್ ಅವರು ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದ ಇವರಿಬ್ಬರ ಜೀವನಚರಿತ್ರೆಗಳನ್ನೂ ಅನ್ಯಾದೃಶ ವಿಶಾಲ ದೃಷ್ಟಿಯಿಂದಲೂ ವಿದ್ವತ್ತಿನಿಂದಲೂ ಬರೆದು ಜಗತ್ತನ್ನು ಬೆರಗುಗೊಳಿಸಿದರು. ಅದಕ್ಕೆ ಮೊದಲೆ ಭಾರತೀಯ ಭಾಷೆಗಳಲ್ಲಿ ಒಂದಾಗಿರುವ ಬಂಗಾಳಿಯಲ್ಲಿ ಪರಮಹಂಸರ ಅಂತರಂಗ ಶಿಷ್ಯರಲ್ಲಿ ಅಗ್ರಗಣ್ಯರೆಂದು ಪರಿಗಣಿತರಾಗಿದ್ದ ಶ್ರೀಮತ್ ಸ್ವಾಮಿ ಶಾರದಾನಂದರು ‘ಶ್ರೀರಾಮಕೃಷ್ಣ ಲೀಲಾ ಪ್ರಸಂಗ’ ಎಂಬ ಅದ್ಭುತ ಬೃಹದ್‌ಗ್ರಂಥಗಳನ್ನು ಪೌರಾಣಿಕ ಪ್ರಮಾಣದಲ್ಲಿ ಬರೆದು, ತಮ್ಮ ಗುರುವಿನ ಜೀವನದ ನಿಕಟ ಪರಿಚಯವನ್ನು ಲೋಕಕ್ಕೆ ಮಾಡಿಕೊಟ್ಟರು. ಆದರೆ ಎಲ್ಲಕ್ಕೂ ಮೊದಲಾಗಿ, ಎಲ್ಲಕ್ಕೂ ಮಿಗಿಲಾಗಿ, ಎಲ್ಲರಿಗಿಂತಲೂ ಹಿರಿದಾಗಿ, ಇತರರಾರಿಂದಲೂ ಸಾಧ್ಯವಲ್ಲದಷ್ಟು ವಿವರವಾಗಿ, ಬರೆವ ಇತರರೆಲ್ಲರಿಗೂ ಮೂಲಾಧಾರ ಗ್ರಂಥವಾಗುವಂತೆ ಸಕಲ ವಿಷಯ ವಿಸ್ತಾರವಾಗಿ, ಹಿಂದಿಲ್ಲ ಮುಂದೆ ಬರುವುದಿಲ್ಲ ವೆಂಬಂತೆ ಆಶ್ಚರ್ಯಕರವಾಗಿ, ಪಂಡಿತ ಪಾಮರ ಪಾಮರ ಸರ್ವ ಸುಲಭ ಸ್ವರಸವಾಗಿ, ಶ್ರೀರಾಮಕೃಷ್ಣಪರಮಹಂಸರ ಸ್ವಂತ ಸಹಜ ದಿವ್ಯವಾಣಿಯೆ ಲೋಕಕಲ್ಯಾಣಾರ್ಥವಾಗಿ ಮೂರ್ತಿಮತ್ತಾಗಿರುವಂತೆ ಅವರ ವಚನವೇದವನ್ನು ಲೋಕಕ್ಕೆ ಅನುಗ್ರಹಿಸಿದವರೆಂದರೆ ‘ಕಥಾಮೃತ’ ಕರ್ತೃ ಶ್ರೀ ‘ಮ’! ‘ಮ’ ಅವರಿಗೆ ತಾನು ಯಾವ ಪ್ರಮಾಣದಲ್ಲಿ ಋಣಿಯಾಗಿದ್ದೇನೆ ಎಂಬುದಿನ್ನೂ ಜಗತ್ತಿಗೆ ಸಂಪೂರ್ಣವಾಗಿ ಅರಿವಾಗಿಲ್ಲ. ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಹಾಸಂಘ ಸಂಸ್ಥಾಪನೆ ಮಾಡಿದುದಕ್ಕೆ ಸಮಸಂವಾದಿಯಾಗಿ, ಹೆಗಲೆಣೆಯಾಗಿ ನಿಲ್ಲುತ್ತದೆ ‘ಮ’ ಅವರ ಮೇರುಕೃತಿ ‘ಶ್ರೀರಾಮಕೃಷ್ಣ ವಚನವೇದ’!

ಅಷ್ಟೆ ಅಲ್ಲ. ಅದಕ್ಕಿಂತಲೂ ಚಿರಸ್ಥಾಯಿ ಎಂದಾದರೂ ಹೇಳಬಹುದು. ಒಮ್ಮೆ ಬೇಲೂರು ಮಠದ ಒಂದು ಮರದಡಿಯಲ್ಲಿ ಅಡ್ಡಾಡುತ್ತಿದ್ದಾಗ ಸ್ವಾಮಿ ವಿವೇಕಾನಂದರು ಹೇಳಿದರಂತೆ: ‘ಇಂದು ಇಲ್ಲಿ ಸ್ಥಾಪಿತವಾದ ಈ ಸಂಘರೂಪದ ಶಕ್ತಿ ಇನ್ನು ಐನೂರು ವರ್ಷಗಳವರೆಗೂ ಚ್ಯುತಿಯಿಲ್ಲದೆ ಅವ್ಯಾಹತವಾಗಿ ಮುಮಬರಿಯುತ್ತದೆ’ ಎಂದು. ನಮಗನ್ನಿಸುತ್ತದೆ ‘ಮ’ ಅವರ ಈ ಮೇರುಕೃತಿ ಮನುಷ್ಯತ್ವವಿರುವವರಿಗೆ, ಅದು ದೇವತ್ವವನ್ನು ಬಯಸುತ್ತಿರುವವರೆಗೆ ಚಿರಸ್ಥಾಯಿಯಾಗಿ, ಜೀವಂತ ಶಕ್ತಿಯಾಗಿರುತ್ತದೆ ಎಂದು. ಕಟ್ಟಡ ಸಂಸ್ಥೆಗಳು ಕಾಲವಶವಾಗಿ ಗತಿಸಬಹುದು; ಸರಸ್ವತಿ ಅಮರೆ!

ಈಗೀಗ ಜತ್‌ಪ್ರಸಿದ್ಧ ವಾಗುತ್ತಿರುವ ‘ಮ’ ಅವರ. ನಿಜವಾದ ಹೆಸರು ಮಹೇಂದ್ರನಾಥ ಗುಪ್ತ. ಬಂಗಾಳಿಗಳಿಗೆ ‘ಮಾಸ್ಟರ್ ಮಹಾಶಯ’ ಎಂಬ ನಚ್ಚಿನ ನಾಮಾಂಕಿತದಿಂದ ನಿತ್ಯಪರಿಚಿತರಾಗಿದ್ದಾರೆ. ಅವರು ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ನವೀನ ರೀತಿಯ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಉತ್ತೀರ್ಣರಾಗಿ, ಅಂದಿನ ಅಂತಹರೆಲ್ಲ ತರುಣರಂತೆ ಬ್ರಾಃಮಸಮಾಜಕ್ಕೆ ಸೇರಿದವರಾಗಿ ಒಂದು ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರು. ಇಂಗ್ಲಿಷ್ ವಿದ್ಯಾಭ್ಯಾಸ ಪದ್ಧತಿಯಿಂದ ಭಾರತೀಯ ತರುಣರ ಮೇಲೆ ಆದ ಎಲ್ಲ ಸತ್ ಮತ್ತು ದುಷ್ ಪರಿಣಾಮಗಳಿಗೆ ಅವರೇನೂ ಹೊರತಾಗಿರಲಿಲ್ಲ. ಯಾವ ಅಗೋಚರ ದಿವ್ಯಶಕ್ತಿ ನರೇಂದ್ರನಾಥನನ್ನು ದಕ್ಷಿಣೇಶ್ವರದ ಭವತಾರಿಣಿಯ ಭಕ್ತವರೇಣ್ಯನೆಡೆಗೆ ಸೆಳೆಯಿತೋ ಅದೇ ಶಕ್ತಿ ಮಹೇಂದ್ರನಾಥ ಗುಪ್ತನನ್ನೂ ತನ್ನ ಸನ್ನಿಧಿಗೆ ಆಕರ್ಷಿಸಿತು. ನರೇಂದ್ರ ಮತ್ತು ಶ್ರೀರಾಮಕೃಷ್ಣರ ಮೊದಮೊದಲ ಸಂದರ್ಶನ ಸಂದರ್ಭಗಳಲ್ಲಿ ನಮಗೆ ಗೋಚರವಾಗುವ ಅದ್ಭುತ ನಾಟಕೀಯತೆ ಮಾಸ್ಟರ್ ಮಹಾಶಯ ಶ್ರೀರಾಮಕೃಷ್ಣರನ್ನು ಸಂದರ್ಶಿಸಿದ ಪ್ರಥಮದಲ್ಲಿ ನಮಗೆ ಕಾಣಿಸುವುದಿಲ್ಲ. ಆದರೆ ‘ಮ’ ತನ್ನ ದಿನಚರಿಯಾದ ‘ಕಥಾಮೃತ’ದಲ್ಲಿ ಲೋಕಕ್ಕೆ ಕೊಟ್ಟಿರುವ ಆ ಸಂದರ್ಶನ ಕಥನವನ್ನು ಸುಸೂಕ್ಷ್ಮವಾಗಿ ಅವಲೋಕಿಸುವ ಯಾರಿಗಾದರೂ ಹೊಳೆಯುತ್ತದೆ, ನರೇಂದ್ರನಿಗಾಗಿ ಅವರು ಹಾತೊರೆದು ಕಾಯುತ್ತಿದ್ದಂತೆಯೆ ಮಾಸ್ಟರ್ ಮಹಾಶಯನನ್ನೂ ನಿರೀಕ್ಷಿಸುತ್ತಿದ್ದರೆಂದು. ತಮ್ಮ ಸಂದೇಶವನ್ನು ಡಿಂಡಿಮಸದೃಶ ಕಂಠದಿಂದ ದಶದಿಕ್ಕುಗಳೂ ಪ್ರತಿಧ್ವನಿಸುವಂತೆ ಡಂಗುರ ಹೊಯ್ದುಸಾರಿ, ಆಲಿಸಿದವರನ್ನು ತನ್ನ ಭವ್ಯ ವ್ಯಕ್ತಿತ್ವದಿಂದ ಅಪ್ಪಳಿಸುವ ಕಾರ್ಯಕ್ಕೆ ನರೇಂದ್ರನು ಆವಶ್ಯಕವಾಗಿದ್ದಂತೆಯೆ ಆ ಲೋಕ ಪರಿವರ್ತನಕರವಾದ ದಿವ್ಯಸಂದೇಶವನ್ನು ತಮ್ಮ ಸ್ವಂತ ಸಹಜವಾಣಿಯಲ್ಲಿಯೆ ಹಿಡಿದಿಟ್ಟು, ಅದರ ವಿವರ ವಿವರವನ್ನೂ ಸ್ತರಸ್ತರವಾಗಿ ಚಿತ್ರಿಸಿ, ಗುರುದೇವನ ದೈನಂದಿನವಾದ ಗುರುಲಘು ಮಿಶ್ರಿತ ಮನೋವಾಕ್ಕಾಯ ವ್ಯಾಪಾರಗಳನ್ನೆಲ್ಲ ತನ್ನ ನೆನಹಿನ ತೊಟ್ಟಿಲಲ್ಲಿ ಲಾಲಿಸಿ ಪಾಲಿಸಿ ಅಪಚಾರವಾಗದಂತೆ ಒರೆದು, ಸದ್ದುಗದ್ದಲವಿಲ್ಲದೆ ಆಟೋಪ ಅಟ್ಟಹಾಸಗಳಿಲ್ಲದೆ ಲೋಕಶಿಶು ಹೃದಯಕ್ಕೆ ಅಮರಸ್ತನ್ಯವೀಯುವ ದೀನ ದಿವ್ಯ ಮಹತ್ತರ ಕಾರ್ಯಕ್ಕೆ ಮಹೇಂದ್ರನಾಥನಂತಹರ ಆವಶ್ಯಕತೆಯೂ ಅತ್ಯಂತ ಅನಿವಾರ್ಯವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ. ‘ವಚನವೇದ’ದ ನಾನಾ ಭಾಗಗಳಲ್ಲಿ ಮಾಸ್ಟರ್ ಮಹಾಶಯನ ವಿಚಾರವಾಗಿ ಶ್ರೀಗುರು ಆತನ ಜನ್ಮಾಂತರ ವಿಷಯಗಳನ್ನೂ ಸೂಚಿಸುತ್ತಾರೆ. ಈ ಯುಗದ ಭಗವದ್ ವಾಣಿಯನ್ನು ಬರೆದಿಡುವುದಕ್ಕಾಗಿಯೆ ಯುಗಾವತಾರನು ತನ್ನ ದಿವ್ಯ ಕರಣಿಕನನ್ನು ಮಹೇಂದ್ರನಾಥ ಗುಪ್ತನನ್ನಾಗಿ ಕರೆತಂದಿದ್ದನೆಂಬುದೂ ಅಲ್ಲಲ್ಲಿ ಧ್ವನಿತವಾಗುತ್ತದೆ. ಮಹೇಂದ್ರನೂ ತನ್ನ ಹೆಸರಿಗೆ ತಕ್ಕಂತೆಯೆ ಗುಪ್ತನಾಗಿದ್ದುಕೊಂಡು, ಗುಪ್ತರೀತಿಯಲ್ಲಿಯೆ ಎಲ್ಲವನ್ನೂ ಬರೆದಿಟ್ಟುಕೊಂಡು, ಯಾವುದಕ್ಕಾಗಿ ತಾನು ಅವತಾರದೊಡನೆ ಅವತರಿಸಿದ್ದನೊ ಅದನ್ನು ಸಂಪೂರ್ಣವಾಗಿ ಸಾರ್ಥಕಗೊಳಿಸಿ ಕೃತಕೃತ್ಯನಾಗಿ ಭೂರಂಗತ್ಯಾಗಮಾಡಿದ್ದಾನೆ. ಆತನಿಗೆ ನಾವೆಷ್ಟು ಋಣಿ ಎಂಬುದನ್ನು ಹೇಳಿ ಪೂರೈಸಲಾದೀತೆ?

‘ಶ್ರೀರಾಮಕೃಷ್ಣ ವಚನವೇದ’ವೆಂದರೆ ಅದೊಂದು ಕರತಲ ದೇವಸ್ಥಾನ, ಕರತಲ ತಪೋರಂಗ, ಕರತಲ ಪಣ್ಯಕ್ಷೇತ್ರ. ಆದರೆ ದೇವಸ್ಥಾನ ಪುಣ್ಯಕ್ಷೇತ್ರಗಳಂತೆ ತಾನೆಂದಿಗೂ ಕುಲಷಿತವಾಗುವ ಸಂಭವವಿಲ್ಲ, ಶಿಥಿಲವಾಗುವ ಸಂಭವವಿಲ್ಲ. ಯಾವ ಮನೆಯಲ್ಲಿ ಈ ‘ವಚನವೇದ’ವಿರುತ್ತದೆಯೊ ಅದು ಮಂದಿರವಾಗುತ್ತದೆ. ಯಾರ ಕೈ ಇದನ್ನು ಹಿಡಿದಿರುತ್ತದೆಯೊ ಅದು ಭಗವಂತನ ಪಾದಾರವಿಂದವನ್ನೆ ಧರಿಸಿರುತ್ತದೆ. ಯಾರ ಜಿಹ್ವೆ ಇದನ್ನು ಪಠಿಸುತ್ತದೆಯೊ ಅದು ಅಮೃತವನ್ನೆ ಈಂಟುತ್ತಿರುತ್ತದೆ. ಇದು ಆನಂದದ ಅಗರ; ಶಾಂತಿಯ ಸಾಗರ; ದಿವ್ಯಜ್ಞಾನದ ಓಗರ. ಕಷ್ಟದ ಸಮಯದಲ್ಲಿ ಧೈರ್ಯವೀಯವ ಸಖ; ಸುಖದ ಸಮಯದಲ್ಲಿ ಸಮರ್ಪಣಭಾವವಿತ್ತು ವಿನಯ ಭಕ್ತಿಗಳನ್ನು ಪ್ರಚೋದಿಸುವ ಗುರು; ಕತ್ತಲಲ್ಲಿ ದೀಪ, ದಾರಿಗೆ ಊರುಗೋಲು, ದಿಕ್ಕುಗೆಡದಂತೆ ಗುರಿದೋರುವ ಧ್ರುವತಾರೆ. ಇಲ್ಲಿ ವೇದ ವೇದಾಂತ ದರ್ಶನಾದಿ ಸರ್ವಸಾರವಿದೆ. ಓದುಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಆವಶ್ಯಕತೆಯಿಲ್ಲ; ಯಾವ ವಿದ್ವತ್ ಪೂರ್ಣನಾದ ತತ್ವಜ್ಞಾನಿಗೂ ಕೀಳೆಂದು ನಾಚಬೇಕಾಗಿಲ್ಲ. ಅದಕ್ಕೆ ಬದಲು ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂದರಿತು ನಿರ್ಮಮನಾಗುತ್ತಾನೆ, ಶಾಂತನಾಗುತ್ತಾನೆ, ಪೂರ್ಣನಾಗುತ್ತಾನೆ. ಆತನಿಗೆ ಗಗನದ ವೈಶಾಲ್ಯ, ಹೈಮಾಚಲದ ಔನ್ನತ್ಯ, ಅಂಬುಧಿಯ ಗಂಭೀರ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತವೆ. ಇಷ್ಟು ಸರ್ವಜನ ಸಾಮಾನ್ಯರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ. ಭಗವದ್‌ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ.

‘ಮ’ ಅವರ ಈ ಮಹಾಕೃತಿ ‘ಕಥಾಮೃತ’ ಈಗಾಗಲೆ ಅನೇಕ ಭಾಷೆಗಳಲ್ಲಿ ಪರಿವರ್ತನಗೊಂಡಿದೆ, ಗೊಳ್ಳುತ್ತಿದೆ. ಸ್ವಾಮಿ ನಿಖಿಲಾನಂದರಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರವಾಗಿ, ಅಮೆರಿಕದಲ್ಲಿ ಮೊತ್ತಮೊದಲು ಪ್ರಕವಾಗಿ, ”The Gospel of Sri Ramakrishna” ಎಂಬ ಹೆಸರಿನಿಂದ ಜಗತ್‌ಪ್ರಿಯವೂ ಪ್ರಸಿದ್ಧವೂ ಆಗಿದೆ. ಅಸಂಖ್ಯಾತ ವಿದೇಶಿಯ ಜೀವಿಗಳು ಆ ಭಾಷೆಯಲ್ಲಿ ಅದನ್ನು ಓದಿ ಧನ್ಯರಾಗುತ್ತಿದ್ದಾರೆ. ವಿಚಾರವಾದಿಗಳೂ ಕವಿಗಳೂ ಮೇಧಾವಿಗಳೂ ತತ್ವಜ್ಞರೂ ದೇಶ, ಪಕ್ಷ, ಪಂಥ, ವಾದ, ಮತ ಯಾವ ಭೇದವೂ ಇಲ್ಲದೆ ಭಾರತದ ಈ ಭಾಗೀರಥಿಯ ತೀರ್ಥಕ್ಕೆ ಪುಣ್ಯ ಸ್ನಾಗೈಯಲು ಬರತೊಡಗಿದ್ದಾರೆ. ಆ ಆಧ್ಯಾತ್ಮಿಕ ಸಾಹಸದಲ್ಲಿ ಕನ್ನಡಿಗರೂ ಹಿಂದುಳಿದಿಲ್ಲ. ‘ಮ’ ಅವರ ಗ್ರಂಥದ ಪೂರ್ವಭಾಗದ ಕನ್ನಡ ಭಾಷಾಂತರ ‘ಶರಿರಾಮಖೃಷ್ಣ ವಚನಾಮೃತ’ ಎಂಬ ಅಂಕಿತದಿಂದ ಅನೇಕ ವರ್ಷಗಳ ಹಿಂದೆಯೆ ಬೆಂಗಳೂರು ಶ್ರೀರಾಮಕೃಷ್ಣಾಶ್ರಮದಿಂದ ಪ್ರಕಟಗೊಂಡಿತು. ಆದರೆ ಆ ಭಾಷಾಂತರ ನಾವು ಅಪೇಕ್ಷಿಸುವವಷ್ಟು ಸಮರ್ಪಕವಾಗಿತ್ತೆಂದು ಹೇಳುವಂತಿಲ್ಲ. ಮಾಸ್ಟರ್ ಮಹಾಶಯನು ಶ್ರೀರಾಮಕೃಷ್ಣರ ಬಾಯಿಂದ ಬಂದ ಮಾತುಗಳನ್ನು ಮಾತಾಡಿದಂತೆಯೆ ಬರೆದಿಟ್ಟಿದ್ದಾನೆ, ಬಂಗಾಳಿಯಲ್ಲಿ. ಸಂವಾದವನ್ನು ನಿರ್ವಹಿಸುವಾಗ ಅಲ್ಲಿ ಗ್ರಂಥಭಾಷೆಯ ಪ್ರಯೋಗವೆ ಇಲ್ಲ. ಗ್ರಾಮ್ಯ ಪ್ರಯೋಗಗಳೂ ಯಥೇಚ್ಛವಾಗಿವೆ. ಬರವಣಿಗೆಯ ಕೃತಕತೆ ಒಂದಿನಿತೂ ಇಲ್ಲ. ಓದುಗನಿಗೆ ಶ್ರೀರಾಮಕೃಷ್ಣರ ಸಾಮೀಪ್ಯದಲ್ಲಿಯೆ ಕುಳಿತು ಅವರ ಬಾಯಿಂದ ಬರುವ ಮಾತನ್ನೆ ಕೇಳುತ್ತಿರುವಂತೆ ಅನುಭವವಾಗುತ್ತದೆ. ಅತ್ಯಂತ ಗಹನವಾದ ಆಧ್ಯಾತ್ಮಿಕ ವಿಚಾರಗಳ ಮಧ್ಯೆಮಧ್ಯೆ ಅಳ್ಳೆಬಿರಿಯೆ ನಗುವಂತಹ ಪರಿಹಾಸದ ಮತ್ತು ವಿನೋದದ ಪ್ರಸಂಗಗಳೂ ತಿಳಿಯಾದ ಆಡುಮಾತಿನಲ್ಲಿಯೆ ಹೊಳೆಯುತ್ತವೆ. ಆದ್ದರಿಂದ ಈಗಿನ ಈ ಭಾಷಾಂತರದಲ್ಲಿ ಮೂಲದ ಆ ಸಹಜತೆ ಸರಳತೆಗಳನ್ನು ಅನುಸರಿಸುವ ಉದ್ದೇಶದಿಂದ ಭಾಷೆಯನ್ನು ಆದಷ್ಟು ಮಟ್ಟಿಗೆ ಗ್ರಂಥಭಾಷೆಯಾಗದಂತೆ ನೋಡಿಕೊಂಡು ಆಡುಮಾತಿನ ಶೈಲಿಯನ್ನೆ ಬಳಸಿಕೊಂಡಿದೆ. ಸದ್ಯಕ್ಕೆ ಗ್ರಂಥಭಾಷೆಯಾಗದಂತೆ ನೋಡಿಕೊಂಡು ಆಡುಮಾತಿನ ಶೈಲಿಯನ್ನೇ ಬಳಸಿಕೊಂಡಿದೆ. ಸದ್ಯಕ್ಕೆ ಹಿಂದೆ ಭಾಷಾಂತರವಾಗಿದ್ದ ಉತ್ತರಭಾಗವನ್ನೆ ಪರಿವರ್ತನಗೊಳಿಸಿದ್ದಾರೆ. ಹಿಂದೆ ಭಾಷಾಂತರವಾಗಿದ್ದ ಪೂರ್ವಭಾಗವನ್ನೂ ಇಲ್ಲಿ ಅನುಸರಿಸಿರುವ ಆಡುಮಾತಿನ ರೀತಿಯಲ್ಲಿಯೆ ಮತ್ತೆ ಅನುವಾದ ಮಾಡಿ ಈ ಗ್ರಂಥ ಪೂರಕವಾಗಿ ಶೀಘ್ರದಲ್ಲಿಯೆ ಪ್ರಕಟಿಸಲಿದ್ದಾರೆ.

ಈ ಭಾಷಾಂತರಕ್ಕೆ ‘ಶ್ರೀರಾಮಕೃಷ್ಣ ವಚನವೇದ’ ಎಂದು ಹೆಸರಿಟ್ಟಿದೆ. ಅದಕ್ಕೆ ಈ ಮುನ್ನುಡಿಕಾರನೆ ಬಹುಮಟ್ಟಿಗೆ ಕಾರಣವಾಗಿರುವುದರಿಂದ ಅದರ ಪರವಾಗಿ ಎರಡು ಮಾತು ಹೇಳಬೇಕಾಗಿದೆ.

‘ವೇದ’ ಎಂದರೆ ನಿತ್ಯಜ್ಞಾನ. ಅದು ಸನಾತನ. ಅದು ಅಪೌರುಷೇಯ. ಅಂದರೆ ಯಾವ ಮಾನವವ್ಯಕ್ತಿಯಿಂದಲೂ ಹುಟ್ಟಿಬಂದುದಲ್ಲ. ಮನುಷ್ಯತ್ವ ಹುಟ್ಟುವುದಕ್ಕೆ ಮೊದಲೂ ಅದು ಇತ್ತು, ಮನುಷ್ಯತ್ವ ಹೋದ ಮೇಲೆಯೂ ಅದು ಇರುತ್ತದೆ. ಅಂದರೆ ‘ಲೋಕ’ಕ್ಕೆ ಪೂರ್ವದಲ್ಲಿಯೂ ಇತ್ತು; ‘ಲೋಕ’ದ ಅನಂತರವೂ ಇರುತ್ತದೆ. ‘ವೇದ’ ‘ಲೋಕ’ಕ್ಕೆ ಅವತರಿಸುವಾಗ ಯಾವನಾದರೊಬ್ಬ ಮನುಷ್ಯಪಾತ್ರದ ಮೂಲಕವಾಗಿಯೆ ಹೊಮ್ಮುತ್ತದೆ. ಅಂತಹ ಮನುಷ್ಯನೀರನ್ನು ಹರಿಯಿಸುವ ಒದಗೆಯೆ ಹೊರತು ಅದನ್ನು ಸೃಷ್ಟಿಸುವವನಲ್ಲ. ಅವನು ಪ್ರಣಾಳಿಕಾ ರೂಪ ಮಾತ್ರ. ಅಂತಹನನ್ನು ಋಷಿ, ಕವಿ, ದ್ರಷ್ಟಾರ ಎಂದೆಲ್ಲ ಕರೆಯುತ್ತೇವೆ. ಆ ದೃಷ್ಟಿಯಿಂದ ವೇದ ಎಂಬುದು ಎಂದೋ ಮುಗಿದ ಒಂದು ಗ್ರಂಥದ ಅಥವಾ ಗ್ರಂಥರಾಶಿಯ ಹೆಸರಲ್ಲ. ವೇದದ ಮಹಾಗ್ರಂಥಕ್ಕೆ ಕಾಲಕಾಲಕ್ಕೂ ಯುಗಯುಗಕ್ಕೂ ಹೊಸ ಹೊಸ ಅಧ್ಯಾಯಗಳೂ ಪ್ರಕರಣಗಳೂ ಸೇರುತ್ತಲೆ ಹೋಗುತ್ತಿವೆ. ಅವುಗಳಲ್ಲಿ ಆಧುನಿಕ ವಿಜ್ಞಾನಶಾಸ್ತ್ರಗಳಿಗೂ ಗೌರವ ಸ್ಥಾನವಿದೆ. ನಮ್ಮ ಅನುಭವಗಳು ವಿಸ್ತರಿಸಿದಂತೆಲ್ಲ, ಹೊಸ ಹೊಸ ಸಾಕ್ಷಾತ್ಕಾರಗಳೂ ಸಿದ್ಧಿಗಳೂ ಮೈದೋರಿದಂತೆಲ್ಲ ವೇದವೂ ವಿಸ್ತರಣಗೊಳ್ಳುತ್ತದೆ. ಸಧ್ಯಕ್ಕೆ ಅತೀತವಾಗಿರುವ ‘ವೇದ’ದ ವಿರಾಟ್ ಜಗತ್ತಿನಲ್ಲಿ ‘ಲೋಕ’ಕ್ಕೆ ಇಳಿಯಬಹುದಾದ, ಇಳಿಯಲಿರುವ ಮತ್ತು ಇಳಿಯಲೇಬೇಕಾಗಿರುವ ಇನ್ನೆಷ್ಟೆಷ್ಟು ವಿಸ್ಮಯಗಳೂ ಆಶ್ಚರ್ಯಗಳೂ ಕಾಲಲಬ್ಧಿಯನ್ನು ಕಾಯುತ್ತಿವೆಯೊ ಹೇಳಬಲ್ಲವರಾರು? ಸೂಕ್ಷ್ಮವಾದ ಆಧ್ಯಾತ್ಮಿಕಾನುಭವ ಜಗತ್ತಿನ ಮಾತಂತಿರಲಿ; ನಮ್ಮ ನಮ್ಮ ನಕ್ಷತ್ರ ನೀಹಾರಿಕಾಮಯವಾದ ಈ ಸ್ಥೂಲ ಜಗತ್ತಿನಲ್ಲಿಯೆ ನಮ್ಮ ವಿಜ್ಞಾನ ಊಹಿಸದಿದ್ದ ಅಘಟನಗಳೂ ಘಟಿಸುತ್ತಿವೆ ಎಂಬುದನ್ನು ನಮ್ಮ ಕಣ್ಣ ಮುಂದೆಯೆ ಕಾಣುತ್ತಿದ್ದೇವೆ, ಕೇಳುತ್ತಿದ್ದೇವೆ! `Flying Saucers from Outer Space’ `Flying Saucers Have Landed’ ಎಂಬ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದನ್ನೂ, ನಂಬಲರ್ಹರೂ ಸಮರ್ಥ ವೀಕ್ಷಕರೂ ಆದ ವಿವಿಧ ಸಾಕ್ಷಿಗಳ ಹೇಳಿಕೆಗಳು ಪ್ರಪಂಚದ ನಾನಾ ಭಾಗದ ಪತ್ರಿಕೆಗಳಲ್ಲಿ ವರದಿಯಾಗುತ್ತಿರುವುದನ್ನೂ ಗಮನಿಸಿದರೆ ನಮ್ಮ ಆಶ್ಚರ್ಯಕ್ಕೆ ಏನೇನು ಆಹಾರಗಳನ್ನು ಒದಗಿಸುತ್ತಾರೋ ಈ ವ್ಯೋಮಾಂತರದ ವಿಯದ್ಯಾನಗಳಲ್ಲಿರಬಹುದಾದ ಅತಿಥಿಮಹನೀಯರು, ಹೇಳಬಲ್ಲವರಾರು?

[2] ಅಂತೂ ಸದ್ಯಕ್ಕೆ ಅತೀತವಾಗಿರುವ ’ವೇದ’ ಅನಂತವಾಗಿರುವುದರಿಂದ ಲೋಕಕ್ಕಿಳಿಯುವ ನಮ್ಮ ವೇದವೂ ಕೊನೆಯಿಲ್ಲದೆ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಶ್ರೀರಾಮಕೃಷ್ಣರಂತಹ ಸಿದ್ಧಪುರುಷನ, ಮಹರ್ಷಿಯ, ದ್ರಷ್ಟಾರನ, ಅವತಾರವರಿಷ್ಠನ ವಾಕ್‌ಶ್ರೀಯನ್ನು ‘ವಚನವೇದ’ ಎಂದು ಕರೆಯುವುದರಲ್ಲಿ ಅನೌಚಿತ್ಯವೆಲ್ಲಿ ಬಂತು? ಈ ‘ವಚನವೇದ’ ವೇದಗಳೂ ಮಾಡದ ಕೆಲಸವನ್ನು ಮಾಡುತ್ತದೆ. ಈ ‘ವಚನವೇದ’ ವೇದಗಳು ಹೊಗಲಾರದ, ಬಹುಶಃ ಕೆಲವರ ದೃಷ್ಟಿಯಲ್ಲಿ ಹೊಗಬಾರದ, ಮೂಲೆ ಮೂಲೆಗಳನ್ನೂ ಪ್ರವೇಶಿಸಿ ಜ್ಯೋತಿರ್ದಾನ ಮಾಡುತ್ತದೆ. ಈ ‘ವಚನವೇದ’ ಅಂಧಶ್ರದ್ಧೆಯ ಮೂಢಾಚಾರದ ಜನಜಂಗುಳಿಯನ್ನು ಪುರೋಹಿತ ವರ್ಗದ ನಖಪಂಜರದಿಂದ ಪಾರುಮಾಡಿ, ಅವರ ಧರ್ಮದಾಸ್ಯದೈನ್ಯಗಳನ್ನು ಪರಿಹರಿಸಿ, ಅವರನ್ನು ‘ಮನುಷ್ಯ’ರನ್ನಾಗಿ ಮಾಡುತ್ತದೆ. ಈ ‘ವಚನವೇದ’ ಪ್ರಜ್ಞಾಪರಾಧ ಜನ್ಯವಾದ ಭಯಭೀತಿಗಳಿಂದಲೂ ನಮ್ಮನ್ನುದ್ಧರಿಸಿ, ಉದಾರ ಧೀರರನ್ನಾಗಿ ಮಾಡಿ, ಸಂರಕ್ಷಿಸುತ್ತದೆ; ಜೀವನ್ಮುಕ್ಕಿಗೆ ನಡೆಸುತ್ತದೆ.

ಸ್ವತಂತ್ರಭಾರತವನ್ನು ನಮ್ಮ ರಾಜ್ಯಾಂಗ ‘ಸೆಕ್ಯುಲರ್ ರಾಜ್ಯ’ ಎಂದು ಕರೆದಿದೆ. ಸೆಕ್ಯುಲರ್ ಎಂದರೆ ಧಾರ‍್ಮಿಕವಲ್ಲದ, ಮತದೂರವಾದ, ಲೌಕಿಕ, ಲೋಕಾಯುತ ಎಂದು ಅರ್ಥವಾಗುತ್ತದೆ. ಯಾವ ಭರತಖಂಡವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಪುಣ್ಯಭೂಮಿಯೆಂದು ಕರೆದರೊ; ಯಾವುದರ ವಿಶೇಷ ಪ್ರಜ್ಞೆ, ವಿಶೇಷ ಪ್ರತಿಭೆ, ವಿಶಿಷ್ಟ ಕರ್ತವ್ಯ, ಸ್ವಭಾಗ, ಸ್ವಧರ್ಮ ಸರ್ವವೂ ಧಾರ್ಮಿಕದಲ್ಲಿ ಮಾತ್ರವೆ ನಿಷ್ಠವಾಗಿದೆ ಎಂದು ಸ್ವಾಮಿ ವಿವೇಕಾನಂದರು ಸಾರಿದರೊ; ಯಾವುದರ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದ ಸ್ವಾತಂತ್ರ್ಯಶಿಲ್ಪಿ ಮಹಾತ್ಮಗಾಂಧಿಜಿಯ ನಡೆ ನುಡಿ ಉಸಿರು ಎಲ್ಲವೂ ಭಗವದಭಿಮುಖವಾದ ದಿವ್ಯ ಧರ್ಮದಲ್ಲಿಯೆ ಸಮರ್ಪಿತವಾಗಿದ್ದಿತೊ ಆ ಭೂಭಾಗವನ್ನು ‘ಧಾರ್ಮಿಕಕವಲ್ಲದ’ ‘ಮತದೂರವಾದ’ ‘ಲೌಕಿಕ’ ‘ಲೋಕಾಯತ’ ‘ಸೆಕ್ಯುಲರ್’ ಎಂದು ಕರೆದರೆ ಏನರ್ಥವಾಗುತ್ತದೆ? ಹಿಮಾಲಯವನ್ನಾದರೂ ಎತ್ತಿ ಬೇರೆ ದಿಕ್ಕಿಗೆ ಸಾಗಿಸಬಹುದೊ ಏನೊ? ಅಣುಶಕ್ತಿಯ ಪ್ರಯೋಗದಿಂದ ಸಮತಲ ಮಾಡಬಹುದೊ ಏನೊ? ಆದರೆ ಭಾರತೀಯ ಸಂಸ್ಕೃತಿಯ ಈ ಆಧ್ಯಾತ್ಮಿಕ ಲಕ್ಷಣವನ್ನು ಮಾತ್ರ ಮಾರ್ಪಡಿಸಲು ಎಂದೆಂದಿಗೂ ಸಾಧ್ಯವಿಲ್ಲ! ಹಾಗೆ ಮಾಡುವುದೂ ರಾಜ್ಯಾಂಗದ ಉದ್ದೇಶವಲ್ಲ. ರಾಜ್ಯಾಂಗ ‘ಸೆಕ್ಯುಲರ್’ ಎಂದು ಕರೆದುದರ ಉದ್ದೇಶ ಆಡಳಿತದ ಸಮನ್ವಯ ದೃಷ್ಟಿಯನ್ನೂ ಮತೀಯ ನಿಷ್ಪಕ್ಷಪಾತವನ್ನೂ ಎಲ್ಲ ಮತದವರಿಗೂ ಸರ್ವ ಸಮಾನವಾದ ಹಕ್ಕು ಬಾಧ್ಯತೆ ಹೊರೆ ಹೊಣೆ ಉಂಟೆಂಬುದನ್ನೂ ಸಾರುವುದೆ ವಿನಾ ಯಾವ ಆಸ್ತಿಕ ನಾಸ್ತಿಕ ಸಿದ್ಧಾಂತಗಳನ್ನೂ ಸಂಸ್ಥಾಪಿಸುವುದೂ ಅಲ್ಲ. ಉತ್ಪಾಟಿಸುವುದೂ ಅಲ್ಲ. ಅಂದರೆ ನಮ್ಮ ರಾಷ್ಟ್ರದ ಆಡಳಿತದ ಈ ಲಕ್ಷಣವನ್ನು ಸರಿಯಾದ ಮಾತಿನಲ್ಲಿ ವರ್ಣಿಸುವುದಾದರೆ ‘ಸಮನ್ವಯ ರಾಷ್ಟ್ರ’ ಎಂದು ಕರೆಯಬೇಕಾಗುತ್ತದೆ. ಅಂತಹ ಸಮನ್ವಯ ರಾಷ್ಟ್ರಕ್ಕೆ ಅತ್ಯಂತ ಅವಶ್ಯವಾಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಈ ಯುಗದಲ್ಲಿ ಸ್ವಾತಂತ್ರ್ಯೋದಯಕ್ಕೆ ಬಹು ಪೂರ್ವದಲ್ಲಿಯೆ ಸ್ಪಷ್ಟವಾಗಿ ಅನುಭವಪೂರ್ವಕವಾಗಿ ಸರ್ವಜನ ಸುಲಭ ಗ್ರಾಹ್ಯವಾಗಿ ಪ್ರಭಾವಯುತವಾಗಿ ಕ್ರಾಂತಿಪೂರ್ಣವಾದರೂ ಸಂಪ್ರದಾಯ ಅವಿರುದ್ಧವೆಂಬಂತೆ ಲೋಕಸಮಸ್ತಕ್ಕೂ ತೋರಿ ಸಾರಿದವರೆಂದರೆ ಭಗವಾನ್ ಶ್ರೀರಾಮಕೃಷ್ಣಪರಮಹಂಸರು. ಅವರ ಈ ‘ವಚನವೇದ’ ನಿಜವಾಗಿಯೂ ಸಮನ್ವಯ ದೃಷ್ಟಿಯನ್ನು ಸರ್ವ ಪ್ರಜೆಗಳಿಗೂ ಸುಲಭವಾಗಿ ಹೃದಯಸ್ಪರ್ಶಿಯಾಗುವಂತೆ ಬೋದಿಸುವ ನವೀನ ವೇದ. ಮತಾಂತರಗೊಳಿಸುವುದು, ಪರಮತ ನಿಂದೆಯಿಂದ ಸ್ವಮತಶ್ಲಾಘನೆ ಮಾಡುವುದು, ರಾಜಕೀಯ ಪ್ರಯೋಜನಕ್ಕಾಗಿ ಸ್ವಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಕುತಂತ್ರಕ್ಕೆ ಕೈ ಹಾಕುವುದು ಮೊದಲಾದ ಕಾಡುಭಾವನೆಗಳನ್ನೆಲ್ಲ ಬೇರುಸಹಿತ ಸುಟ್ಟುಹಾಕುವ ಕಾಳ್ಗಿಚ್ಚಾಗುತ್ತದೆ ಈ ‘ವಚನವೇದ’. ನಮ್ಮ ರಾಜ್ಯಾಂಗದ ರಾಜಕೀಯದ ಸುರತರು ಸುಫಲಸುಮಭರತಿವಾಗಬೇಕಾದರೆ ಜನಹೃದಯಮೂಲವಾಗಿರುವ ಅದರ ತಾಯಿಬೇರು ಈ ‘ವಚನವೇದ’ ಸಾರವನ್ನು ಹೀರಿಕೊಂಡಲ್ಲದೆ ಸಾಧ್ಯವಿಲ್ಲ. ನಮ್ಮ ರಾಜಕೀಯರಾಜ್ಯಾಂಗಕ್ಕೆ ಪೂರಕವಾಗುವ ಧಾರ್ಮಿಕರಾಜ್ಯಾಂಗವಾಗುತ್ತದೆ ಈ ‘ಶ್ರೀರಾಮಕೃಷ್ಣ ವಚನವೇದ!’

ಸುಮಾರು ಇಪ್ಪತ್ತೈದು ಸಂವತ್ಸರಗಳ ಹಿಂದೆ ಮಾಸ್ಟರ್ ಮಹಾಶಯನನ್ನು ಆತನ ಕಲಿಕತ್ತೆಯ ಮನೆಯಲ್ಲಿ, ಸಾಯಂ ಸಮಯದಲ್ಲಿ, ಉತ್ತುಂಗ ಮಹಾಸೌಧದ ಉನ್ನತ ತಾರಸಿಯ ಮೇಲೆ, ಆಕಾಶದ ಕೊಡೆಯಡಿಯಲ್ಲಿ, ಸ್ವಾಮಿಸಿದ್ದೇಶ್ವರಾನಂದರೊಡಗೂಡಿ ಹೋಗಿದ್ದ ಈ ಲೇಖಕನು ಸಂದರ್ಶಿಸುವ ಯೋಗ ಒದಗಿತ್ತು. ಶ್ರೀರಾಮಕೃಷ್ಣರ ವಿಚಾರವಾಗಿ ಈ ಲೇಖಕ ಬರೆದಿದ್ದ ಕನ್ನಡ ಕವನವೊಂದನ್ನು ಹಾಡಿಸಿ ಕೇಲಿ ‘ಮ’ ತುಂಬ ಆನಂದಿತರಾಗಿ ಅದನ್ನು ಯಾರ ಕೈಯಲ್ಲಾದರೂ ಬಂಗಾಳಿಗೆ ಪರಿವರ್ತಇಸಿ ಕಳುಹಿಸುವಂತೆ ಅತ್ಯಮತ ವಿಶ್ವಾಸಪೂರ್ವಕವಾಗಿ ಕೇಳಿಕೊಂಡಿದ್ದರು; ಲೇಖಕನೂ ಒಪ್ಪಿದ್ದ. ಆದರೆ ಬಹುಶಃ ಆಲಸ್ಯವೆ ಕಾರಣವಾಗಿ ಎರಡು ಮೂರು ವರ್ಷಗಳಾದರೂ ಅದನ್ನು ಭಾಷಾಂತರಿಸಿ ಕಳುಹಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ‘ಮ’ ಹೋದವರು ಹಿಂತಿರುಗದ ಧಾಮಕ್ಕೆ ಪ್ರಯಾಣ ಮಾಡಿಬಿಟ್ಟರು. ಆ ವಚನ ಋಣವನ್ನು ಇಂದು ಈ ರೀತಿಯಿಂದಲಾದರೂ ತೀರಿಸುತ್ತೇನೆ. ಆ ಸ್ತೋತ್ರ ಕವನವನ್ನು ಅವರ ‘ಕಥಾಮೃತ’ದ ಕನ್ನಡ ಭಾಷಾಂತರಕ್ಕೆ ನಾಂದಿಯಾಗಿ ಹಾಡಿ ಸಮರ್ಪಿಸುತ್ತೇನೆ. ‘ವಚನವೇದ’ವನ್ನು ನಮಗಿತ್ತ ಸರ್ವಧರ್ಮ ಸಮನ್ವಯಾಚಾರ್ಯನ ಸರ್ವೋದಯಕಾರಿಯಾದ ಸಮನ್ವಯಭಾವವೂ ಪೂರ್ಣದೃಷ್ಟಿಯೂ ಆ ಸ್ತೋತ್ರದಲ್ಲಿ ಮೂರ್ತಿಮತ್ತಾಗಿ ನಮ್ಮನ್ನು ಶ್ರೇಯಸ್ಸಿಗೆ ನಡೆಸಲಿ:

ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು,
ಪರಮಹಂಸನೆ, ಉದಯ ಸೂರ್ಯನ ತೆರದಿ ರಂಜಿಸಿದೆ;
ಹೃದಯ ನಭದಜ್ಞಾನ ತಿಮಿರವನಿರದೆ ಭಂಜಿಸಿದೆ.

ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು
ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ;
ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧ ಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲಿಸಿದೆ.

ಮಾಯ ತಿಮಿರದಿ ಮಾರ್ಗ ಕಾಣದೆ ಗೋಳಿಡುತಲಿಹರ
ಅಭಯದೀಪವ ಹಿಡಿದು ದಾರಿಯ ತೋರಿ ರಕ್ಷಿಸಿದೆ;
ಘೋರ ಸಂಸಾರಾಂಬುನಿಧಿಯೊಳು ಮುಳುಗಿ ತೇಲುವರ
ಅಮೃತನಾವೆಯ ತಂದು ಮೇಲೆಯನಿರದೆ ಸೇರಿಸಿದೆ.

ಶಿರವ ನಾಕದೊಳಿರಿಸಿ ಚರಣಗಳೆರಡ ಭೂತಳದಿ
ಗುರು ಹಿಮಾಚಲದಂತೆ ನಿಂತಿಹೆ, ಶಾಂತಿಯಾಶ್ರಯನೆ.
ಹೃದಯ ನಿನ್ನದು ಮೇರಿಯಿಲ್ಲದ ರುಂದ್ರ ವಾರಿನಿಧಿ;
ಚಲಿತ ಮತಗಳ ಚಂದ್ರನಾವೆಗಳಲ್ಲಿ ತೇಲುತಿವೆ!

ಕ್ರೈಸ್ತ ಮಹಾಮದ ರಾಮ ಕೃಷ್ಣ ಜ್ಹೋರಾಸ್ತ ಗೌತಮರು
ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು
ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು
ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯವಾ ‘ಗಿಹವು’!

ದಕ್ಷಿಣೇಶ್ವರ ದೇವನಿಲಯದ ಪರಮ ಯೋಗಿಂದ್ರ
ಶ್ರೀ ವಿವೇಕಾನಂದ ಪೂಜಿತನಾತ್ಮ ಭಾವಿತನೆ,
ಲೋಕಜೀವರಿಗಾತ್ಮಶಕ್ತಿಯ ನೀಡಿ ಕಾಪಾಡು;
ನೆನೆವರೆಲ್ಲರ ಹೃದಯವಾಗಲಿ ನಿನ್ನ ನೆಲವೀಡು!

* * *

[1] ಸ್ವಾಮಿ ಜ್ಞಾನಘನಾನಂದರು ಭಾಷಾಂತರಿಸಿ. ಮೈಸೂರು ಶ್ರೀರಾಮಕೃಷ್ಣಾಶ್ರಮ ಪ್ರಕಟಿಸಿರುವ ಮಹೇಂದ್ರನಾಥಗುಪ್ತರ ದಿನಚರಿಗೆ ಬಂದ ಮುನ್ನುಡಿ.

[2] 1. Flying Saucers From Outer Space-Donald Keyhoe
2. Flying Saucers Have Landed-Desmond Leslie and George Adamski
3. Flying Saucers from Mars–Cedric Allingham
4. Flying Saucers From The Moon H.T. Wilkins
5. Space. Gravity and The Flying Saucer–Leonard G. Cramp
6. Inside the Space Ships–George Adamski