ಕವಿ ಆಶಾವಾದಿ. ಸರ್ವನಾಶದಲ್ಲಿಯೂ ಆಶಾವಾದಿ ಎಂದೂ ಹೇಳಿಕೊಳ್ಳುತ್ತಾನೆ. ಆದರೂ ಒಮ್ಮೊಮ್ಮೆ ಸುತ್ತಲೂ ಕಗ್ಗತ್ತಲು ಕವಿದಂತಾದಾಗ ತುಸು ಬೆಬ್ಬಳಿಸಿ ದಿಕ್ಕುಗೆಟ್ಟಂತಾಗಿ ನಾಲ್ಕೂ ಕಡೆಗೆ ಭಗವಂತನ ಆಶ್ವಾಸನೆಯ ಆಶೀರ್ವಾದ ನಿರೀಕ್ಷೆಯಿಂದ ಕಣ್ಣು ಹೊರಳಿಸುತ್ತಾನೆ. ಆಗ ಪ್ರಾಚೀನದ ವ್ಯೋಮಾಂತದಲ್ಲಿಯೊ ಅಥವಾ ಅರ್ವಾಚೀನದ ಭೂಮಂಡಲದಲ್ಲಿಯೊ ಚರಿಸುವ ಯಾವುದಾದರೊಂದು ದಿವ್ಯ ವಿಭೂತಿಯ ಪೂಜ್ಯ ಚರಣಚಿಹ್ನೆಯ ಅಗ್ನಿರೇಖೆಯೊಂದು ಧೈರ್ಯದೀಪಧಾರಿಯಾಗಿ ಮೈದೋರಿಯೆ ತೋರುತ್ತದೆ. ಆ ವಿಭೂತಿ ವ್ಯಕ್ತಿಯಾಗಿರಬಹುದು, ಘಟನೆಯಾಗಿರಬಹುದು, ಭಗವತ್‌ ಕೃತಿಯಾಗಿರಬಹುದು, ಪೌರಾಣಿಕ ಸಂಗತಿಯಾಗಿರಬಹುದು, ಐತಿಹಾಸಿಕ ಕ್ರಿಯೆಯಾಗಿರಬಹುದು, ಮಹಾಕಾವ್ಯವಾಗಿರಬಹುದು, ಅಥವಾ ಗಾನದ ವಿಮಾನವೇರಿ ಚೇತನವನ್ನು ಅನಂತತೆಗೆ ಬೀಸುವ ಒಂದು ಸಣ್ಣ ಭಾವಗೀತೆ ಕೂಡ ಆಗಿರಬಹುದು.

ಶ್ರೀ ವಿನೋಬಾಜಿಯ ಸರ್ವೋದಯ ಪಾದಯಾತ್ರೆಯಲ್ಲಿ ಅಂತಹ ಅಗ್ನಿರೇಖೆಯೊಂದನ್ನು ನಾನು ಗುರುತಿಸಿದ್ದೇನೆ. ಜಗತ್ತನ್ನು ಉದ್ಧಾರದ ಪಥದಲ್ಲಿ ಕೈಹಿಡಿದು ಮೆಲ್ಲಮೆಲ್ಲನೆ ಮುನ್ನಡಿಯಿಡಿಸಲು ಅವತರಿಸಿದ ಅಗ್ರಗಣ್ಯಶಕ್ತಿಗಳಲ್ಲಿ ಈ ವಿಭೂತಿಯ ಅತ್ಯಂತ ಅರ್ವಾಚೀನವಾದದ್ದು. ಆಧುನಿಕ ಪ್ರಪಂಚದ ಕ್ಷೇಮಸೂತ್ರಗಳನ್ನು ಅಚಂಚಲ ಮುಷ್ಟಿಗಳಲ್ಲಿ ಹಿಡಿದು ಮಾರ್ಗದರ್ಶನ ಮಾಡುತ್ತಿರುವ ಮಹಾಶಕ್ತಿಗಳಲ್ಲಿ ಅಗ್ರಪಂಕ್ತಿಗೆ ಸೇರಿದ ವಿಭೂತಿ ಶ್ರೀ ವಿನೋಬಾಜಿ.

ಅವರ ಆಗಮನ ನಿರಾಡಂಬರವಾದದ್ದು. ಕೊಂಬಿಲ್ಲ, ಕಹಳೆಯಿಲ್ಲ, ಆನೆ ಅಂಬಾರಿಗಳ ಡಂಗಿಲ್ಲ. ಸೈನಿಕ ಕವಾತಿನ ಗೌರವರಕ್ಷೆಯ ಷೋಕಿಯಿಲ್ಲ. ತಮ್ಮ ತಮ್ಮ ಅಂತಸ್ತಿನ ಸಮವಸ್ತ್ರಗಳನ್ನು ಧರಿಸಿದ ಅಧಿಕಾರವರ್ಗದವರ ಹೂಮಾಲೆಯ ಹಂಗಿಲ್ಲ. ಆದರೂ ಅವರು ಬರುವ ಸುದ್ಧಿ ಕಾಡುಮೇಡುಗಳಲ್ಲಿ ತಮಗೆ ಗತಿ ಏನೆಂದು ಆಕಾಶದ ಕಡೆಗೆ ನೋಡುತ್ತಾ ಬಾಯಾರಿರುವ ನೂರಾರು ಸಾವಿರಾರು ಹೃದಯಗಳಲ್ಲಿ ಆಶಾತರಂಗಗಳನ್ನೆಬ್ಬಿಸುತ್ತಿದೆ; ಸ್ವಾರ್ಥತೆಯನ್ನಪ್ಪಳಿಸುತ್ತಿದೆ; ತ್ಯಾಗೋತ್ಸಾಹವನ್ನರಳಿಸುತ್ತಿದೆ. ತಂಡೋಪತಂಡವಾಗಿ ನೆರೆದು ನಮ್ಮ ಆಕೃತ್ರಿಮ ಜನತೆ ಅವರನ್ನು ಮುಂದಿನ ಸರ್ವ ಕಲ್ಯಾಣದ ಏಕೈಕ ಪ್ರವಾದಿಯನ್ನಾಗಿ ಭಾವಿಸಿ, ಗೌರವಿಸಿ ಸ್ವಾಗತಿಸುತ್ತಿದೆ.

ಶ್ರೀ ವಿನೋಬಾಜಿಯಲ್ಲಿ ಭಾರತೀಯ ಪರಂಪರೆಯ ಪ್ರಾಚೀನ ತಪಸ್ವಿಯೂ ಅತ್ಯಂತ ಕ್ರಾಂತಿಕಾರನಾದ ಆಧುನಿಕ ರಾಜಕೀಯಾರ್ಥಿಕ ವಿಜ್ಞಾನಿಯೂ ಒಟ್ಟುಗೂಡಿದಂತಿದೆ. ಈ ದೃಷ್ಟಿಯಿಂದ ನೋಡಿದರೆ ಗಾಂಧೀಜಿಯ ನಿಜವಾದ ಉತ್ತರಾಧಿಕಾರಿ ಅವರಲ್ಲದೆ ಬೇರೆ ಇನ್ನಾರೂ ಅಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಭರತಖಂಡಕ್ಕಿದ್ದ ಬಹುಮುಖ್ಯ ಸಮಸ್ಯೆ – ಸ್ವಾತಂತ್ರ್ಯ ಸಾಧನೆಯಾಗಿತ್ತು. ರಾಜಕೀಯ ಸ್ವಾತಂತ್ರ್ಯ ಸಿದ್ಧಿಯಾದ ಮೇಲೆ ಅದರಿಂದ ಉದ್ಭವವಾದ ಅನೇಕಾನೇಕ ಸಮಸ್ಯೆಗಳು ಪರಿಹಾರ ಕಾಯುತ್ತ ಮನೆಮನೆಯ ಬಾಗಿಲಲ್ಲಿ ಸತ್ಯಾಗ್ರಹ ಹೂಡಿದಂತಿದೆ. ಯಾವ ಮೂಲ ಸಮಸ್ಯೆಯ ಪರಿಹಾರದಿಂದ ಇತರ ಎಲ್ಲ ಸಮಸ್ಯೆಗಳಿಗೂ ಪರಿಹಾರವು ಸುಲಭವಾಗುತ್ತದೆಯೊ ಆ ಪ್ರಧಾನ ಸಮಸ್ಯೆಯ ಸಿಕ್ಕು ಬಿಡಿಸುವುದರಲ್ಲಿ ತೊಡಗಿದ್ದಾರೆ ಶ್ರೀ ವಿನೋಬಾಜಿ. ಮನುಷ್ಯತ್ವದ ಯಾವ ಮೂಲ ಪರಿವರ‍್ತನೆಯಿಂದ ನೈಜ ಮಾನವೀಯತೆಯ ದೇಗುಲದ ಹೆಬ್ಬಾಗಿಲು ತೆರೆದು, ಅಮೃತ ಪ್ರವಾಹವು ಭೋರ್ಗರೆವ ಭಾಗೀರಥಿಯಂತೆ ಹರಿದು, ಲೋಕದ ಜೀವನವನ್ನೆಲ್ಲ ಸೌಹಾರ್ದ ಸುಖಶಾಂತಿಗಳಿಗೆ ಅದ್ದಿ ಆರ್ದ್ರವನ್ನಾಗಿ ಮಾಡಲು ಸಮರ್ಥವಾಗುತ್ತದೆಯೊ ಆ ಮೂಲಪರಿವರ‍್ತನೆಯ ಯಜ್ಞಕಾರ್ಯದಲ್ಲಿ ದೀಕ್ಷಿತರಾಗಿದ್ದಾರೆ ಶ್ರೀ ವಿನೋಬಾಜಿ.

ಪ್ರಪಂಚದ ಸಂತರೆಲ್ಲ ಒಂದಲ್ಲ ಒಂದು ರೀತಿಯಿಂದ ಮಾನವ ಕಲ್ಯಾಣ ಸಾಧನೆಗೆ ದುಡಿದಿದ್ದಾರೆ, ನಿಜ. ಆದರೆ ಈ ಪ್ರಕಾರದಲ್ಲಿ, ಈ ಪ್ರಮಾಣದಲ್ಲ, ಆಧ್ಯಾತ್ಮಿಕ ಸಾಮಾಜಿಕ ಆರ್ಥಿಕ ರಾಜಕಿಯಗಳೆಲ್ಲವನ್ನೂ ಸಮನ್ವಯಗೊಳಿಸಿ, ಸರ್ವೋದಯ ಸಾಧನೆಗೆ ತೊಡಗಿದವರಲ್ಲಿ ಇವರೇ ಮೊತ್ತಮೊದಲಿಗರೆಂದು ಕಾಣುತ್ತದೆ. ಇವರ ಈ ಬಹುಮುಖ ವಾದ ಬೃಹದ್ರೂಪದ ಪ್ರಯತ್ನಕ್ಕೂ ಶೀಘ್ರದಲ್ಲಿಯೆ ಪೂರ್ಣಸಿದ್ಧಿ ದೊರೆಯುತ್ತದೆ ಎಂದು ಯಾರಾದರೂ ನಿರೀಕ್ಷಿಸಿದರೆ ಅದು ಅತಿಶ್ರದ್ಧೆಯಾದೀತು. ಆದರೂ ಪೂರ್ಣತ್ವದ ಕಡೆಗೆ ಮಾನವತ ಕೈಕೊಂಡಿರುವ ಮಹಾಪ್ರಯಾಣದಲ್ಲಿ ಆಚಾರ್ಯ ವಿನೋಬಾಭಾವೆ ಅವರ ಪಾದಯಾತ್ರೆಗೆ ಒಂದು ಅನನ್ಯಸಾಧಾರಣವಾದ ಅಪೂರ್ವ ದಿವ್ಯಸ್ಥಾನಕ್ಕೆ ಸಲ್ಲಬೇಕಾದ ಪೂಜಾಗೌರವ ಸಲ್ಲುತ್ತದೆ.

ಭೂದಾನ, ಗ್ರಾಮದಾನ, ಸಂಪತ್ತಿದಾನ ಮೊದಲಾದ ಹೆಸರುಗಳ ಕಾಲುವೆಗಳಲ್ಲಿ ಹರಿಯುತ್ತಿರುವ ಈ ಭೂತದಯೆಯ ದೀಕ್ಷಾನದಿ ಮಾಡುತ್ತಿರುವ ನಿರ್ಮಲೀಕರಣದ ಕಾರ್ಯ ತುಂಬಾ ಜಟಿಲವಾಗಿದೆ. ಸೂಕ್ಷ್ಮದೃಷ್ಟಿಗೆ ಮಾತ್ರ ಗೋಚರವಾಗುವಂತಹ ಪರಿಣಾಮಕರವಾದ ಮಾರ್ಗಗಳಲ್ಲಿ ಅದು ಪ್ರವಹಿಸಿ ಮಾನವ ಮನೋಭೂಮಿಯ ಸಂದುಗೊಂದುಗಳಲ್ಲಿ ನುಗ್ಗಿ ತನ್ನ ಪವಿತ್ರ ತೀರ್ಥಪ್ರೋಕ್ಷಣೆ ಮಾಡುತ್ತಿರುವುದನ್ನು ಕಾಣುತ್ತೇವೆ. ಮೇಲೆ ಕಾಣುವ ಸದ್ಯದ ಫಲ ಬರಿಯ ಸಾಮಾನ್ಯ ಲೌಕಿಕಪ್ರಯೋಜನದಂತೆ ತೋರುತ್ತಿದ್ದರೂ ಅದು ಮನುಷ್ಯತ್ವವನ್ನು ಅದರ ಮೂಲ ಅವಿದ್ಯೆಯ ಪಾಶಗಳಿಂದಲೆ ಬಿಡುಗಡೆ ಮಾಡುವ ಚಿಂತನ ಫಲದಾಯಕವಾದ ಚಿಕಿತ್ಸೆಯಲ್ಲಿ ತೊಡಗಿದೆ. ಎಣ್ಣೆಕೊಪ್ಪದ ಮಲ್ಲಿಕಾಜುನಗೌಡರಿಂದ ತಮ್ಮ ಮತ್ತು ತಮ್ಮ ಪಕ್ಕದ ಹಳ್ಳಿಗಳಲ್ಲಿ ನಡೆದ ಕೆಲವು ಸಂಗತಿಗಳನ್ನು ಕೇಳಿ ನನಗೆ ಕೃತಯುಗದ ಕಲಿಯುಗಕ್ಕೆ ಕಾಲಿಡುತ್ತಿರುವಂತೆ ಭಾಸವಾಯಿತು! ಇದು ಬರಿಯ ಭೂಮಿಹಂಚಿಕೆಯ ಕೆಲಸ ಮಾತ್ರವಲ್ಲ; ಅದಕ್ಕಿಂತಲೂ ಮಹೋನ್ನತವಾದ ಆತ್ಮಶ್ರೀ ಅನುಸಂಧಾನದ ಮತ್ತು ಸಂಸ್ಥಾಪನೆಯ ಗುರುತರ ಕ್ರಿಯೆಯಾಗುವುದರಲ್ಲಿ ಸಂದೇಹವಿಲ್ಲ.

ಪ್ರಪಂಚದ ಅನೇಕ ಭಾಗಗಳಲ್ಲಿ, ಬೇರೆಬೇರೆ ಹೆಸರು ಹೊತ್ತು, ಕತ್ತಿಯ ಅಲಗಿನ ದಾರಿಯಲ್ಲಿ ಸಂಚರಿಸುತ್ತಿರುವ ಈ ಸರ್ವಸುಖಸಾಧನೆಯ ಕಾರ್ಯ ನಮ್ಮ ದೇಶದಲ್ಲಿ ಶ್ರೀ ವಿನೋಬಾಜಿಯ ಮಾರ್ಗದರ್ಶನದಲ್ಲಿ ಸರ್ವೋದಯ ಚಳವಳಿಯಾಗಿ ಮುನ್ನಡೆಯುತ್ತಿದೆ. ಇದಕ್ಕೆ ತತ್ತ್ವತಃ ಎಲ್ಲರೂ ಮಾರುವೋಗಿದ್ದಾರೆ; ಬಹುಶಃ ಕೆಲವು ಪ್ರತಿಗಾಮಿ ಪಟ್ಟಭದ್ರ ಸ್ವಾರ್ಥಸಾಧಕ ಅಸುರೀ ಸಂತಾನರನ್ನುಳಿದು! ಆದರೆ ತತ್ತ್ವತಃ ಒಪ್ಪಿ ಪೂಜಿಸಿ ಗೌರವ ಸಲ್ಲಿಸುವುದಕ್ಕೂ ಕಾರ್ಯತಃ ಅನುಷ್ಠಾನಕ್ಕೆ ತರುವುದಕ್ಕೂ ಬಹಳ ಅಂತರವಿದೆ. ಈ ವಿಚಾರದಲ್ಲಿ ಸರಕಾರವೂ ಸೇರಿ ಅನೇಕ ವ್ಯಕ್ತಿಗಳ ಮತ್ತು ಸಂಸ್ಥೆಗಳ ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿದೆ. ಅಲ್ಲದೆ ಜಗತ್ತಿನ ಇತರ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಘಟನೆಗಳೂ ಅಲ್ಲಿಯ ಜನಮನದಲ್ಲಿ ಆಂದೋಲನಗೈಯುತ್ತಿರುವ ಆಶೋತ್ತರ ಆದರ್ಶಗಳೂ ನಮ್ಮ ಪ್ರಭಾವವನ್ನು ಬೀರುತ್ತಿರುವುದರಿಂದ ಅವನ್ನೂ ನಾವು ಅಲಕ್ಷಿಸುವಂತಿಲ್ಲ. ಆದರೂ ಒಂದು ಶುಭದ ಸಂಗತಿ: ಸರ್ವೋದಯದ ಪಕ್ಷವಾಗಿ ಅಲ್ಲಿಯ ಜನತೆ ತಮ್ಮ ದೇಶದಲ್ಲಿ ಅದಕ್ಕೆ ಬೆಂಬಲ ನೀಡುತ್ತಿದೆ.

ಭಾರತೀಯ ಸ್ವಾತಂತ್ರ್ಯಸಂಗ್ರಾಮದ ಒಂದು ಅತ್ಯಂತ ನಿರ್ಣಾಯಕವಾದ ಪ್ರಪ್ರಮುಖ ಘಟ್ಟದಲ್ಲಿ ಪೂಜ್ಯ ಮಹಾತ್ಮಾ ಗಾಂಧೀಜಿ ವೈಯಕ್ತಿಕ ಸತ್ಯಾಗ್ರಹವನ್ನು ಘೋಷಿಸಿ, ಅದನ್ನು ಪ್ರಾರಂಭಿಸುವ ಪ್ರಪ್ರಥಮ ಸತ್ಯಾಗ್ರಹಿಯನ್ನಾಗಿ ಶ್ರೀ ವಿನೋಬಾಜಿಯನ್ನು ಆರಿಸಿದಾಗ ಭರತಖಂಡ ಮಾತ್ರವಲ್ಲದೆ ಪ್ರಪಂಚವೆಲ್ಲ ಆಶ್ಚರ್ಯಚಕಿತವಾಯಿತು! ಅದುವರೆಗೆ ಲೋಕನಯನಗಳಿಂದ ದೂರವಾಗಿ ಬಹುಮಟ್ಟಿಗೆ ಅಜ್ಞಾತರಾಗಿದ್ದ ಅವರನ್ನು ಅಂತಹ ಬಹುಮುಖ್ಯಸ್ಥಾನಕ್ಕೆ ಆರಿಸಿದುದು ಯಾರಿಗೂ ಅರ್ಥವಾಗಲಿಲ್ಲ. ಆ ಉನ್ನತಯಜ್ಞಪೀಠಕ್ಕೆ ಶ್ರೀ ನೆಹರೂ ಅಂತಹರನ್ನೆ ಆರಿಸುವುದು ಅನಿವಾರ್ಯವೂ ಸ್ವತಸ್ಸಿದ್ಧವೂ ಎಂಬಂತೆ ಎಲ್ಲರೂ ಇದಿರುನೋಡುತ್ತಿದ್ದಾಗ ಗಾಂಧೀಜಿ ಈ ವಿಸ್ಮಯವನ್ನು ತಮ್ಮ ಬತ್ತಳಿಕೆಯಿಂದ ಹೊರಬಿಟ್ಟಿದ್ದರು! ಶ್ರೀರಾಮನು ರಾವಣನ ಕೊನೆಯ ತಲೆಯ ಸಂಹಾರಕ್ಕೆ ಅಸ್ತ್ರೋತ್ತಮವಾದ ಬ್ರಹ್ಮಾಸ್ತ್ರವನ್ನಲ್ಲದೆ ಬೇರೊಂದನ್ನು ಹೂಡುತ್ತಾನೆಯೆ? ಯಾವ ಅಸ್ತ್ರ ಏನು ಎಂಬುದು ಅವನಿಗೆ ಗೊತ್ತಿಲ್ಲವೆ?

ಶ್ರೀ ವಿನೋಬಾರನ್ನು ಪ್ರಪ್ರಥಮರನ್ನಾಗಿ ಅಂದು ತಾವು ಆರಿಸಿದುದು ಗಾಂಧೀಜಿಗೆ ಆಕಸ್ಮಿಕ ವಿಷಯವಾಗಿರಲಿಲ್ಲ. ಚೆನ್ನಾಗಿ ಅರಿತು ವಿಮರ್ಶೆ ಮಾಡಿಯೆ ಅವರು ಆರಿಸಿದ್ದರು. ಅನೇಕ ವರ್ಷಗಳ ಹಿಂದೆಯೆ ಶ್ರೀ ವಿನೋಬಾ ಅವರ ತಾಯಿಗೆ ಬರೆಯುತ್ತ ಗಾಂಧೀಜಿ “ನಿನ್ನ ಮಗ ತಪಸ್ಯೆಯಲ್ಲಿ ನನಗಿಂತಲೂ ಮುಂದುವರಿದ್ದಾನೆ. ಅವ ವಿಚಾರವಾಗಿ ನೀನು ಒಂದಿನಿತೂ ತಳ್ಳಂಕಗೊಳ್ಳುವುದು ಬೇಡ” ಎಂದು ಬರೆದಿರಲಿಲ್ಲವೆ?

ಭರತವರ್ಷ ಸ್ವತಂತ್ರವಾದ ಮೇಲೆ ಅದರ ಸರಕಾರದ ಸೂತ್ರಗಳನ್ನು ಹಿಡಿದವರೆಲ್ಲರೂ ಗಾಂಧೀಜಿಯ ಶಿಷ್ಯರೆ, ಭಕ್ತರೆ, ಅನುಯಾಯಿಗಳೆ. ಆ ಕೇಂದ್ರ ಸರಕಾರದ ಅತ್ಯುನ್ನತ ಶಿಖರದಲ್ಲಿರುವ ರಾಷ್ಟ್ರಪತಿಗಳೂ ಮಹಾಪ್ರಧಾನಿಗಳೂ ಇತರ ಮಂತ್ರಿಗಳೂ ಬೇರೆಬೇರೆಯ ರಾಜ್ಯ ಸರಕಾರಗಳ ರಾಜ್ಯಪಾಲರುಗಳೂ ಮತ್ತು ಮುಖ್ಯಮಂತ್ರಿಗಳೂ ಎಲ್ಲರೂ ಶ್ರೀ ವಿನೋಬಾಜಿಯ ವಿಚಾರದಲ್ಲಿ ತುಂಬ ಗೌರವವುಳ್ಳವರೆ, ಪೂಜ್ಯಬುದ್ಧಿಯುಳ್ಳವರೆ. ಆದ್ದರಿಂದ ಶ್ರೀ ವಿನೋಬಾಜಿಯ ಕೈಕೊಂಡಿರುವ (ಕಾಲ್ಗೊಂಡಿರುವ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ತಮ್ಮ ಜೀವಮಾನವನ್ನೆಲ್ಲ ಪಾದಯಾತ್ರಿಯಾಗಿಯೆ ಮುಗಿಸಬೇಕೆಂದು ಅವರು ಕನ್ಯಾಕುಮಾರಿಯಲ್ಲಿ ಸಂಕಲ್ಪಿಸಿ ದೀಕ್ಷೆ ತೊಟ್ಟಿದ್ದಾರಂತೆ!) ಈ ಸರ್ವೋದಯ ಯಜ್ಞಕಾರ್ಯದಲ್ಲಿ ಅವರೆಲ್ಲರೂ ಅವಿರೋಧಭಾವದಿಂದಿರುವುದೆ ಅಲ್ಲದೆ ರಾಜಕೀಯವಾದ ಮತ್ತು ಶಾಸನಬದ್ಧವಾದ ಸಾಧ್ಯತೆಯ ಇತಿಮಿತಿಯಲ್ಲಿ ಮಾಡಬಹುದಾದ ಎಲ್ಲ ಸಹಾಯವನ್ನೂ ಮಾಡುತ್ತಿದ್ದಾರೆ; ನೀಡಬಹುದಾದ ಎಲ್ಲ ಸಹಾನುಭೂತಿಯನ್ನೂ ನೀಡುತ್ತಿದ್ದಾರೆ.  ಅಲ್ಲದೆ ಶ್ರೀ ರಾಜೇಂದ್ರಬಾಬು ಶ್ರೀ ನೆಹರೂ ಅಂತಹ ಹಿರಿಯ ಮುಂದಾಳುಗಳು ಸರ್ವೋದಯ ಸಮ್ಮೇಳನಗಳಲ್ಲಿ ಭಾಗವಹಿಸಿ ಶ್ರೀ ವಿನೋಬಾ ಅವರನ್ನು ಆಗಾಗ ಸಂದರ್ಶಿಸಿ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರಿನ ಬಳಿಯ ಎಲವಾಲದಲ್ಲಿ ಸೇರಿದ ಸರ್ವೋದಯ ಸಮ್ಮೇಳನಕ್ಕೆ ಶ್ರೀ ನೆಹರೂ ಆಗಮಿಸಿ ಆಚಾರ್ಯರನ್ನು ಸಂಧಿಸಿದಾಗ ಇಬ್ಬರೂ ಪರಸ್ಪರ ಗೌರವ ಪ್ರೀತಿಗಳನ್ನು ಸಲ್ಲಿಸಿ. ಕೈ ಮುಗಿಯುವ ಭಂಗಿಯ ಭವ್ಯದೃಶ್ಯವೊಂದರ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನೂರು ಹೊತ್ತಗೆಗಳು ಹೇಳಿ ಪೂರೈಸಲಾರದ ಕೆಲಸವನ್ನು ಆ ಒಂದು ಚಿತ್ರವೇ ಸಾಧಿಸಿದಂತಿದೆ: ವಯಸ್ಸಿನಲ್ಲಿ ಹಿರಿಯರಾದ ಶ್ರೀ ನೆಹರೂ ಅವರಿಗೆ ಎಂತಹ ಅಪಾರ ಗೌರವ ಪ್ರೇಮಗಳಿವೆ ಶ್ರೀ ವಿನೋಬಾ ಅವರಲ್ಲಿ!

ಮತ್ತೊಮ್ಮೆ ದೆಹಲಿಯಲ್ಲಿ ‘ವಿಜ್ಞಾನ ಸಮ್ಮೇಲನ’ವನ್ನು ಉದ್ಘಾಟಿಸುತ್ತಾ ಅಲ್ಲಿ ನೆರೆದ ಮಹಾಮಹಾ ವಿಜ್ಞಾನಿಗಳನ್ನು ಕುರಿತು, ಭಾಷಣದ ಮಧ್ಯದಲ್ಲಿ, ಶ್ರೀ ನೆಹರು ಪ್ರಾಸಂಗಿಕವಾಗಿ ಹೇಳಿದ ವಿನಯ ವಾಕ್ಯಗಳಂತೂ ಆಚಾರ್ಯ ವಿನೋಬಾರ ಹಿರಿಮೆಯನ್ನು ಜಗತ್ತಿಗೆ ಘೋಷಿಸುವಂತೆಯೆ ಅದನ್ನು ಹೃತ್ಪೂರ್ವಕವಾಗಿ ಗುರುತಿಸಿ ಕಾಣಿಕೆ ಅರ್ಪಿಸುತ್ತಿರುವ ಶ್ರೀ ನೆಹರೂ ಅವರ ವ್ಯಕ್ತಿತ್ವ ಸೌಂದರ್ಯವನ್ನೂ ಸಾರಿ ಹೇಳುತ್ತಿವೆ : “ಆದ್ದರಿಂದ ವಿಜ್ಞಾನಿಗಳಾದವರು ಕ್ರಮಕ್ರಮವಾಗಿ ಸ್ವಲ್ಪಮಟ್ಟಿಗಾದರೂ ಋಷಿಗಳ ಜ್ಞಾನಶ್ರೀಯನ್ನೂ ಸಂತರ ಅನುಕಂಪನಶ್ರೀಯನ್ನೂ ಸಾಧಿಸಿಕೊಳ್ಳಬೇಕಾಗುತ್ತದೆ.” ಎಂದು ಹೇಳಿದ ನೆಹರೂ ನಿದರ್ಶನ ಕೊಡುವಂತೆ ಹೀಗೆ ಮುಂದುವರಿದಿದ್ದಾರೆ : “ಇಂದೂ ಈಗಲೂ, ಉಳಿದ ನಮ್ಮೆಲ್ಲರಿಂದಲೂ ಪ್ರತ್ಯೇಕವಾಗಿ ನಿಂತು, ಕೃಶದೇಹಿಯಾದ ಮಾನವನೊಬ್ಬನು ಹಳ್ಳಿಹಳ್ಳಿಗಳಲ್ಲಿ ಅಲೆಯುತ್ತಿದ್ದಾನೆ, ವಿನೋಬಾಜಿ. ನಾವೇನೊ ಮಹಾಪ್ರಧಾನಿಗಳಾಗಿರಬಹುದು, ರಾಜ್ಯಪಾಲರಾಗಿರಬಹುದು, ಕುಲಪತಿಗಳಾಗಿರಬಹುದು ಅಥವಾ ಮಂತ್ರಿಗಳಾಗಿರಬಹುದು; ಆದರೆ ಏಕೊ ಏನೊ, ವಿನೋಬಾಜಿ ಅಂತಹರ ಇದಿರಿನಲ್ಲಿ ನಿಂತಾಗ ನಾವೆಷ್ಟು ಸಣ್ಣವರು ಎಂಬಂತಾಗುತ್ತದೆ.”

ಅಂದಮಾತ್ರಕ್ಕೆ ಭಾರತದ ಜನತೆಯೆಲ್ಲ ಸರ್ವೋದಯದ ಪರವಾಗಿದೆ ಎಂದೂ ಯಾರೂ ಭಾವಿಸದಿರಲಿ. ಬಹುಕಾಲದಿಂದ ಸಂಪತ್ತನ್ನೂ ಪ್ರತಿಷ್ಠೆಯನ್ನೂ ಅನುಭವಿಸಿಕೊಂಡಿರುವ ಶಕ್ತಿಗಳೂ ಸಂಸ್ಥೆಗಳೂ ಪದ್ಧತಿಗಳೂ, ಅಸಮಾನತೆಯ ಮತ್ತು ಅನ್ಯಾಯದ ಆಧಾರದಿಂದಲೆ ತಮ್ಮ ಅಥವಾ ತಮ್ಮ ಗುಂಪಿನ ಸುಖಹಿತಗಳನ್ನು ಸಾಧಿಸಿ ರಕ್ಷಿಸಿಕೊಂಡು ಬರುತ್ತಿರುವವರೂ ಮೇಲೆ ಮೇಲೆ ಅಕ್ಷತೆ ಎರಚಿದರೂ ಒಳಗೊಳಗೆ ತಿರಸ್ಕಾರದ ಮುಗುಳುನಗೆ ಬೀರುತ್ತಾ ಹಲ್ಲು ಕಡಿಯುತ್ತಿದ್ದಾರೆ. ಆಚಾರ್ಯರ ಕ್ರಾಂತಿ ಮೇಲೆಮೇಲೆ ತೋರುವಷ್ಟೇನೂ ಮುಗ್ಧವಾಗಿಲ್ಲ. ಅದು ಪರಿಣಾಮಕಾರಿಯಾದರೆ ಬುಡಮುಟ್ಟುವ ಕ್ರಾಂತಿಯೆ ಆಗುತ್ತದೆ. ಅದು ಅಹಿಂಸೆಯ ದಾರಿಯಲ್ಲ ಹೋಗುತ್ತಿರುವುದರಿಂದಲೆ ಅದರ ಉಗ್ರತೆ ದೃಗ್ಗೋಚರವಾಗುತ್ತಿಲ್ಲ, ಅಷ್ಟೆ. ಅದು ಬರಿಯ ಜಮೀನು ಹಂಚಿ ಕೈಬಿಡುವುದಿಲ್ಲ; ಮತಾಚಾರದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನೂ ತೊಡೆದುಹಾಕುತ್ತದೆ. ನೀತಿಯ ನಡೆಯನ್ನು ತಿದ್ದುವಂತೆಯೆ ಜಾತಿಯ ಸಂಕುಚಿತ ಮನೋಭಾವಗಳಿಂದ ಉಂಟಾಗಿರುವ ತಾರತಮ್ಯಗಳನ್ನು ಸದೆಬಡಿಯುತ್ತದೆ. ಕಾರ್ಖಾನೆಯ ಮಾಲೀಕನ ಬೊಜ್ಜು ಮೈಗೆ ಕೀಸುಳಿ ಹೊಡೆಯುವಂತೆಯೆ ದೇವಾಲಯದ ಸಂಪ್ರದಾಯಭ್ರಾಂತ ಪುರೋಹಿತನ ಡೊಳ್ಳಿಗೂ ಕನ್ನವಿಕ್ಕುತ್ತದೆ. ವ್ಯಾಪಾರಿಯ ಲೋಭಕಾರ್ಪಣ್ಯಗಳಿಗೆ ಕತ್ತರಿಯಿಕ್ಕುವಂತೆಯೆ ಪಾಶ್ಚಾತ್ಯ ವಿದ್ಯಾಪದ್ಧತಿಯ ವಿಶ್ವವಿದ್ಯಾನಿಲಯದಲ್ಲಿ ಪದವೀಧರನಾಗಿ ಅಟ್ಟಹಾಸದಿಂದ ಮೆರೆಯುತ್ತ ಮಲೆಯುತ್ತಿರುವ ವಸ್ತ್ರ ಮಾತ್ರ ಸಭ್ಯನಾದ ನಾಗರಿಕನ ಹಮ್ಮಿಗೂ ಹತ್ತರಿ ಹಾಕುತ್ತದೆ. ಅದು ಯಾರನ್ನೂ ಬಿಡುವುದಿಲ್ಲ; ಯಾವುದನ್ನೂ ಬಿಡುವಂತಿಲ್ಲ.

ಬೀಹಾರಿನ ದೇವಾಲಯವೊಂದರಲ್ಲಿ ಪೂಜಾರಿಗಳು ಆಚಾರ್ಯರ ಮತ್ತು ಅವರ ಸಂಗಡಿಗಳ ಮೇಲೆ ನಡೆಸಿದ ಅಸಭ್ಯ ಹಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ಆತ್ಮರಕ್ಷಣೆಗಾಗಿ ಸಿದ್ಧವಾಗುತ್ತಿರುವ ಪಟ್ಟಭದ್ರ ಹಿತಗಳ ಮತ್ತು ಪ್ರತಿಗಾಮೀ ಶಕ್ತಿಗಳ ಸಂಕೇತವೆಂದೇ ತಿಳಿಯಬೇಕು.

ನಮ್ಮ ದೇಶ ರಷ್ಯಾ ಚೀಣಾ ದೇಶಗಳಂತೆ ಹಿಂಸಾಯುತವಾದ ರಕ್ತಕ್ರಾಂತಿಯಿಂದ ತನ್ನ ಸ್ವಾತಂತ್ರ್ಯವನ್ನು ಸಾಧಿಸಿದ್ದ ಪಕ್ಷದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಹೋರಾಟದ ಹೊತ್ತಿನಲ್ಲಿಯೆ ಪ್ರತಿಗಾಮೀ ಶಕ್ತಿಗಳೂ ವ್ಯಕ್ತಿಗಳೂ ಧ್ವಂಸವಾಗಿ, ದೇಶದ ರಂಗಸಮಸ್ತವನ್ನೂ ಕ್ರಾಂತಿಪರವಾದ ಶಕ್ತಿ, ಭಾವ ಮತ್ತು ಆದರ್ಶಗಳಿಗೆ ಪ್ರತಿಸ್ಪರ್ಧೆಯಿಲ್ಲದೆ ಬಿಟ್ಟುಕೊಡುತ್ತಿದ್ದುವು. ಆದರೆ ಇಲ್ಲಿ ಹಾಗಾಗಲಿಲ್ಲ. ಅಹಿಂಸೆ ಬೆಳೆಯನ್ನು ರಕ್ಷಿಸದಂತೆ ಕಳೆಯನ್ನೂ ರಕ್ಷಿಸಿತು. ಕಳೆ ತನಗೆ ತಾನೆ ಪರಿವರ‍್ತನೆಯಾಗುತ್ತದೆ ಎಂಬ ಒಂದು ಭಾವಮಯ ಧೈರ್ಯದಿಂದ. ಆದರೆ ಅದು ನಾವು ಊಹಿಸಿದಂತೆ ಸುಲಭವಾಗಿ ಪರಿವರ್ತನೆ ಹೊಂದುವುದೂ ಇಲ್ಲ; ತಟಸ್ಥವಾಗಿರುವುದೂ ಇಲ್ಲ. ಬೆಳೆಯ ಉತ್ಕರ್ಷ ತನಗೆ ಅಪಕರ್ಷ ಎಂಬ ದುರ್ಭಾವದಿಂದ ಅದನ್ನು ತನ್ನ ಕೈಲಾಗುವವರೆಗೆ ತನಗೆ ಅಡಿಯಾಳಾಗಿರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಆ ಪ್ರಯತ್ನ ಎಂತೆಂತಹ ವಂಚಕವಿಧಾನದಲ್ಲಿ ಸಾಗುತ್ತಿದೆ ಎಂದರೆ ಬೆಳೆಯ ಟೋಪಿಯನ್ನೆ ಕಳೆಯೂ ತೊಟ್ಟುಕೊಳ್ಳತೊಡಗಿದೆ. ಈಗ ರಾಮನಿಗೇ ಕಷ್ಟವಾಗಿದೆ, ವಾಲಿ ಯಾರು ಸುಗ್ರೀವನಾರು ಎಂದು ಕಂಡುಹಿಡಿಯುವುದಕ್ಕೆ!

ಆದರೆ ಮಾರೀಚ ಅನಂತಕಾಲವೂ ಜಿಂಕೆಯಾಗಿರಲು ಸಾಧ್ಯವಿಲ್ಲ. ಕೃತಕವಾದ ಅವನ ಅಸುರರೂಪ ಬಾಣಪ್ರಯೋಗವಾದೊಡನೆ ಹೊರಕ್ಕೆ ನೆಗೆದೇ ನೆಗೆಯುತ್ತದೆ. ಆಗ ಅವನು ಸಾಯಲೇಬೇಕಾಗುತ್ತದೆ. ಶ್ರೀ ವಿನೋಬಾಜಿಯ ಸರ್ವೋದಯ ಚಳವಳಿ ಮತ್ತು ಅದರ ಪಾದಯಾತ್ರೆಯ ಬಾಣ ಪ್ರಯೋಗ ಇವೆರಡೂ ನಮ್ಮ ಜೀವನದ ಆರ್ಥಿಕ ರಾಜಕೀಯಾದಿ ಕೃತ್ರಿಮತೆ ಆತ್ಮವಂಚನೆಗಳನ್ನೆಲ್ಲ ಹೊರಕ್ಕೆಳೆದು ಬೀಸಾಡಿ, ಅದರ ನೈಜತೆ ಬದುಕುವಂತೆ ಅವಕಾಶ ಕಲ್ಪಿಸುವುದರಲ್ಲಿ ಸಂದೇಹವಿಲ್ಲ.

ದೇಶದ ಪ್ರತಿಷ್ಠಿತ ಧನಿಕಶಕ್ತಿಗಳು ಕರ್ಮ ದುರ್ವಿಪಾಕದಿಂದ ಎಲ್ಲಿಯಾದರೂ ಒಂದು ವೇಳೆ ಸರ್ವೋದಯದ ಮಾರ್ಗವನ್ನು ಪ್ರತಿಭಟಿಸಿ ತಿರಸ್ಕರಿಸಿದರೆ ಮುಂದೆ ಒದಗಲಿರುವ ದುರಂತವು ಊಹೆಗೂ ಮೀರಿ ಭೀಕರವಾಗಿ ಕಾಣುತ್ತದೆ. ಪ್ರಾಪ್ತ ವಯಸ್ಕರೆಲ್ಲರಿಗೂ ಓಟಿನ ಹಕ್ಕಿದೆಯೆಂಬ ತತ್ವವನ್ನು ಸ್ವತಂತ್ರಭಾರತ ಯಾವ ದಿನ ಘೋಷಿಸಿತೋ ಅಂದೆ ಅದು ಸರ್ವ ವಿಷಯಗಳಲ್ಲಿಯೂ ಸರ್ವರಿಗೂ ಸರ್ವಸಮಾನತೆಯಿದೆ ಎಂದು ಒಪ್ಪಿಕೊಂಡಂತಾಗಿದೆ. ಆ ಒಪ್ಪಂದ ಕೊನೆ ಮುಟ್ಟುವವರೆಗೂ ಜನಜೀವನದಲ್ಲಿ ರಾಜಕೀಯವಾದ ಆಂದೋಲನ ವಿರಮಿಸುವುದಿಲ್ಲ. ಅದನ್ನು ಸಾಧಿಸುವಂತೆ ಸರ್ವೋದಯದ ಅಹಿಂಸಾ ಮೂಲವಾದ ಶಾಂತ ಚಳವಳಿಗೆ ದೇಶ ಅವಕಾಶ ಕೊಡದಿದ್ದರೆ ಉಗ್ರ ಹಿಂಸಾಶಕ್ತಿಗಳು ಅದನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು ಗುರಿಯನ್ನು ಸಾಧಿಸಲು ಪ್ರಯತ್ನಿಸಿಯೇ ತೀರುತ್ತವೆ. ಆಗ ಒದಗುವ ಹಾನಿ ನಷ್ಟಗಳಿಗೆ ಪರಿಮಿತಿಯೇ ಇರುವುದಿಲ್ಲ. ಆಚಾರ್ಯ ವಿನೋಬಾ ಅವರ  ಹಿತವಚನಗಳಿಗೆ ಕಿವಿಗೊಟ್ಟರೆ ಸ್ವಹಿತ ಪರಹಿತ ಮತ್ತು ದೇಶಹಿತಗಳೆಲ್ಲವೂ ಕೈಗೂಡಿ ಸರ್ವರಿಗೂ ಶ್ರೇಯಸ್ಸಾಗುತ್ತದೆ ಎಂಬ ನಿಷ್ಠುರ, ನಿರ್ದಾಕ್ಷಿಣ್ಯ ಸತ್ಯವನ್ನು ನಮ್ಮ ಜನತೆ ಎಷ್ಟು ಬೇಗ ಗ್ರಹಿಸಿದರೆ ಅಷ್ಟೂ ಮೇಲು, ಭಾರತಕ್ಕೆ ಮತ್ತು ಲೋಕಕ್ಕೆ.

ಶ್ರೀ ವಿನೋಬಾ ಸ್ಥಿತಪ್ರಜ್ಞನಂತೆ ವರ್ತಿಸುತ್ತಾನೆ. ಲೋಕಸಂಗ್ರಹ ಕಾರ್ಯದಲ್ಲಿ ನಿರಂತರವಾಗಿ ತೊಡಗಿದ್ದರೂ ನಿಸ್ಸಂಗರಾಗಿದ್ದಾರೆ. ಸರ್ವೋದಯದ ಕಾರ್ಯ ಬೇಗನೆ ಫಲಕಾರಿಯಾಗಬೇಕೆಂದು ದುಡಿಯುತ್ತಿದ್ದರೂ ಅವರು ಫಲಾಸಕ್ತಿಯಿಂದ ಬದ್ಧಜೀವಿಯಾಗಿಲ್ಲ. ಅವರು ಅನಾಸಕ್ತಿಯೆ ಮೈವೆತ್ತಂತಿದ್ದಾರೆ, ಮುಕ್ತರಾಗಿದ್ದಾರೆ. ಅವರಿಗಿರುವ ಒಡಲೂ ಲೋಕ ದಾಕ್ಷಿಣ್ಯಕ್ಕಾಗಿ ನೆವಮಾತ್ರಕ್ಕಿರುವಂತೆ ತೋರುತ್ತದೆ. ಅವರು ನೆಲದ ಮೇಲೆ ನಡೆಯುತ್ತಿದ್ದರೂ ಬಾನಿನಲ್ಲಿ ತೇಲುವಂತೆ ತೋರುತ್ತಾರೆ. ಅವರ ಪಾದಯಾತ್ರೆಗೆ ಪ್ರತಿದಿನವೂ ಒಂದೊಂದು ಊರು ಗುರಿಯಾಗಿದ್ದರೂ ಅನಿಕೇತನರಾಗಿರುವ ಅವರು ಗುರಿಯೆ ಇಲ್ಲದೆ ಅಥವ ಯಾವ ಗುರಿಯಲ್ಲಿಯೂ ನಿಲ್ಲದೆ ಚಲಿಸುತ್ತಿರುವಂತೆ ತೋರುತ್ತದೆ. ಅಸಾಧಾರಣ ದೇವ ವಿನಯದಿಂದ ತಮ್ಮ ನೂತನ ಪರಿಚಯದ ವ್ಯಕ್ತಿಯನ್ನು ಸಂಭಾವಿಸಿದರೂ ಪ್ರತ್ಯೇಕ ನಾಮರೂಪದ ಯಾವೊಬ್ಬ ವ್ಯಕ್ತಿಯೂ ಅವರ ಲಕ್ಷ್ಯವಾಗಿರುವಂತೆ ತೋರುವುದಿಲ್ಲ. ಜನಜಂಗುಳಿಯ ನಡುವೆಯಿದ್ದರೂ ಅವರು ಏಕಾಂಗಿ. ಅವರ ಜಯಘೋಷ ‘ಜಯ್‌ ಜಗತ್!’

ಇಂತಹ ಸರ್ವಸಂಗಪರಿತ್ಯಾಗಿಯೂ ಸರ್ವಭೂತಹಿತಾಕಾಂಕ್ಷಿಯೂ ಆಗಿರುವ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸರ್ವೋದಯ ಚಳವಳಿ ಖಂಡಿತವಾಗಿಯೂ ಯಾರಿಗೂ ಕೇಡುಬಗೆಯುವುದೂ ಇಲ್ಲ, ಕೇಡು ಮಾಡುವುದೂ ಇಲ್ಲ. ಅವರಿಗೆ ತಮ್ಮ ಶಕ್ತಿ ಸಾಮರ್ಥ್ಯ ಪ್ರಭಾವಗಳ ಇತಿಮಿತಿಯೂ ಚೆನ್ನಾಗಿ ಗೊತ್ತಿದೆ. ಅವರಲ್ಲಿ ಭಾವ ತೀವ್ರತೆ ಎಷ್ಟು ಅಪಾರವಾಗಿದೆಯೊ ವಿಚಾರಶಕ್ತಿಯೂ ಅಷ್ಟೇ ಅಗಾಧವಾಗಿದೆ. ಅವರ ಭೂಮಾದರ್ಶ ವ್ಯೋಮೋನ್ನತ ವಿಸ್ತಾರವಾಗಿದ್ದರೂ ಅದು ಭೂವಾಸ್ತವದ ಚೌಕಟ್ಟಿನಲ್ಲಿಯೆ ಕ್ರಮಕ್ರಮವಾಗಿ ವಿಜಯಿಯಾಗಲು ಮಾತ್ರ ಸಾಧ್ಯ ಎಂಬಂಶವು ಅವರಿಗೆ ತಿಳಿಯದ ವಿಷಯವಲ್ಲ. ಎಲ್ಲವನ್ನೂ ತಿಳಿದುದೂ ಎಲ್ಲವನ್ನೂ ಮಾಡಬಲ್ಲುದೂ ಆಗಿರುವ ಭಗವಂತನ ಇಚ್ಛೆಗೆ ಅಧೀನವಾಗಿ ಪಾತ್ರವಾಗಿ ಪ್ರಣಾಳಿಕೆಯಾಗಿ ಮಾತ್ರ ಅವರು ವ್ಯವಹರಿಸುತ್ತಿದ್ದಾರೆ. ಆ ತಪೋಮಯವಾದ ಶ್ರದ್ಧೆಯೆ ಅವರಲ್ಲಿ ಅವಿಚಲಿತವಾದ ದೃಢಹಟದ ರೂಪದಿಂದ ಅಭಿವ್ಯಕ್ತವಾಗಿ ನಿರ್ದಾಕ್ಷಿಣ್ಯವಾಗಿ ನಿಷ್ಠುರ ತಪಸ್ಸಿನಂತೆ ಪ್ರಕಾಶಿಸುತ್ತದೆ.

ಶ್ರೀ ವಿನೋಬಾ ಅವರು ಕೈಕೊಂಡಿರುವ ಪಾದಯಾತ್ರೆಗೆ ಸಾರ್ಥಕವಾಗುವುದಕ್ಕೆ ತನ್ನ ಪೂರ್ಣಸಿದ್ಧಿಯವರೆಗೂ ಅದು ಕಾಯಬೇಕಾಗಿಲ್ಲ. ಸಾಧನೆಯೆ ಮಾರ್ಗದಲ್ಲಿಯೆ ಅದು ಅದ್ಭುತವಾಗಿ ಸಾರ್ಥಕವಾಗುತ್ತಿದೆ. ಆಧ್ಯಾತ್ಮಿಕವಾಗಿರುವ ಆಂದೋಲನಗಳೆಲ್ಲವೂ ಹಾಗೆಯೆ : ಸಾಧನೆಯ ಕಾಲದಲ್ಲಿಯೆ ಅವು ತಮ್ಮ ಸಿದ್ಧಿಯ ಪ್ರಯೋಜನವನ್ನು ಪಡೆದಿರುತ್ತವೆ. ಗಾಂಧೀಜಿ ಹೇಳಿದರು, ‘ಗುರಿಯಂತೆಯೆ ದಾರಿಯೂ ಪವಿತ್ರ’ ಎಂದು. ಆದ್ದರಿಂದ ದಾರಿಯ ಪವಿತ್ರತೆಯನ್ನೂ ಕಾಪಾಡಿಕೊಂಡು ಬರಬೇಕಾದ್ದು ನಮ್ಮ ಗುರಿಯ ಒಂದು ಮುಖ್ಯಾಂಗ. ಒಂದು ವೇಳೆ ಗುರಿ ತಪ್ಪಿದರೂ ದಾರಿಯ ಪವಿತ್ರತೆಯ ಸಿದ್ಧಿಯೆ ಗುರಿಯ ಗೆಲುವಾಗಿ ಪರಿಣಮಿಸುತ್ತದೆ. ಹಾಗೆಯೆ ವಿನೋಬಾಜಿಯ ಪಾದಯಾತ್ರೆ ಅದರ ಸರ್ವೋದಯ ಸಿದ್ಧಿಯಿಂದ ಮಾತ್ರವಲ್ಲದೆ ತನಗೆ ತಾನೆ ಸಾರ್ಥಕವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ: ಎಷ್ಟು ಜೀವರಿಗೆ ಮನೋನೈರ್ಮಲ್ಯ, ಹೃದಯಧೈರ್ಯ, ಆತ್ಮಶಾಂತಿಗಳು ಲಭಿಸುತ್ತಿವೆ! ಮತ್ತೆಷ್ಟು ಮಂದಿ ತಮ್ಮ ಅಸುರೀಪ್ರವೃತ್ತಿಗಳಿಂದ ಪಾರಾಗಿ ದೈವೀಪಕ್ಷದ ಪ್ರಜೆಗಳಾಗುತ್ತಿದ್ದಾರೆ! ಎಷ್ಟು ಗೃಹಗಳಲ್ಲಿ ಮತ್ತೆಷ್ಟು ಗ್ರಾಮಗಳಲ್ಲಿ ಆಲಸ್ಯ, ಮತ್ಸರ, ದ್ವೇಷ, ಅಸೂಯೆ, ಸ್ಪರ್ಧೆ ಮೊದಲಾದ ತಮೋ, ರಜೋ ಭಾವನೆಗಳೆಲ್ಲ ನಾಚಿ ತಲೆಮರೆಯಾಗಿ ಪ್ರೇಮ, ಅನುಕಂಪ, ತ್ಯಾಗ, ಉತ್ಸಾಹ, ಅಜುಗುಪ್ಸೆ, ಶ್ರದ್ಧೆ ಇತ್ಯಾದಿ ದೈವೀಭಾವನೆಗಳು ಉದ್ಧೀಪನಗೊಂಡಿವೆ! ದೈವೀ ಮಾರ್ಗದಲ್ಲಿ ಸಾಗುತ್ತಿರುವ ಸರ್ವೋದಯ ವಿಭೂತಿಗೆ ಸೋಲೆಂಬುದಿಲ್ಲ; ಅದು ಸೋತರೂ ಸೋಲಲ್ಲ; ಅದಕ್ಕೆ ಸೋಲಿಲ್ಲ! ಗೆದ್ದರಂತೂ ಸರಿಯೆ, ಇಮ್ಮಡಿ ಜಯವಾಗುತ್ತದೆ; ದಾರಿ ಪೂರೈಸಿದ ಜಯ; ಗುರಿಗೆ ಸೇರಿದ ಜಯ!

ಅಂತಹ ಪವಿತ್ರ ಪಾದಯಾತ್ರೆಯ ಅಮೃತರೇಖೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮತ್ತೆ ಹರಿದು ಅದನ್ನು ಪುನೀತವನ್ನಾಗಿ ಮಾಡಿದೆ. ಜನಮನಸ್ಸಿನಲ್ಲಿ ಅವರ ಆಗಮನದ ದಿವ್ಯಾನುಭವ ಚಿರಸ್ಥಾಯಿಯಾಗಿರುವಂತೆ ಮಾಡುವ ಒಂದು ಸ್ಮೃತಿಮಂದಿರವಾಗಿದೆ, ಅದರ ಪ್ರವಚನಮಾಲೆಯ ಈ ಪುಸ್ತಕ. ಅವರ ವಾಙ್ಮಯ ವಿಗ್ರಹವನ್ನು ಜನಹೃದಯವೇದಿಕೆಯಲ್ಲಿ ಶಾಶ್ವತವಾಗಿ ನಿಲ್ಲಿಸಲು ಇದು ಸಮರ್ಥವಾಗಲಿ ಎಂದು ಹಾರೈಸುತ್ತೇನೆ. ಅವರ ದೇಹರೂಪದ ಪ್ರತ್ಯಕ್ಷ ದರ್ಶನದಿಂದಲೆ ಎನಿತೆನಿತೊ ಸಾಮಾನ್ಯ ಜೀವರು ತಮ್ಮ ಪೂರ್ವ ದುಷ್ಕರ್ಮ ಕುಸಂಸ್ಕಾರಗಳಿಂದ ಬಿಡುಗಡೆಹೊಂದಿ ಹೊಸ ಬಾಳು ಬಾಳುತ್ತಿರುವರೆಂದು ಆ ಸ್ಥಳದಲ್ಲಿಯೆ ಹುಟ್ಟಿಬೆಳೆದು ಬದುಕು ಸಾಗಿಸುತ್ತಿರುವ ಪ್ರತ್ಯಕ್ಷದರ್ಶಿಯೊಬ್ಬರಿಂದ ಕೇಳಿ ಮಧುರಸಪಾನ ಮಾಡಿದ್ದೇನೆ. ಆ ಪ್ರವಚನಕೃತಿಯಲ್ಲಿ ಮೈದೋರಿರುವ ದರ್ಶನದಿಂದ ಆ ಕೆಲಸ ಇನ್ನೂ ಸಮಧಿಕವಾಗಿ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಆ ಪುಣ್ಯ ಧ್ಯೇಯದ ಸಾಧನೆಗೆ ಸೇವೆ ಸಲ್ಲಿಸಿ ನೆರವಾಗುವ ಎಲ್ಲ ಚೇತನಗಳೂ ಶ್ರೀ ವಿನೋಬಾ ಅವರ ಆಶೀರ್ವಾದಕ್ಕೆ ಪಕ್ಕಾಗಿ ಸರ್ವೋದಯದ್ವಾರದಿಂದ ಆತ್ಮೋದ್ಧಾರವನ್ನೂ ಲೋಕೋದ್ಧಾರವನ್ನೂ ಸಾಧಿಸಲಿ.

ಸರ್ವೋದಯದ ಈ ಮೂರು ಶ್ಲೋಕಗಳೂ ಸರ್ವರ ನಿತ್ಯ ಮಂತ್ರಗಳಾಗಲಿ:

ಸರ್ವಸ್ತರತು ದುರ್ಗಾಣಿ
ಸರ್ವೋ ಭದ್ರಾಣಿ ಪಶ್ಯತು|
ಸರ್ವಃ ಸಮೃದ್ಧಿ ಮಾಪ್ನೋತು
ಸರ್ವಃ ಸರ್ವತ್ರ ನಂದತು||

(ಕೇಡಿನಿಂದೆಲ್ಲರು ಪಾರಾಗಿ;
ಒಳ್ಪನೆಲ್ಲರೂ ಕಾಣಲಿ;
ಸರ್ವರಿಗೂ ಸದ್ಬುದ್ಧಿಯುಂಟಾಗಲಿ;
ಎಲ್ಲರೆತ್ತಲೂ ನಲಿಯಲಿ|)

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ|
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್||

(ಸುಖಿಗಳಾಗಲಿ ಸರ್ವರುಂ,
ಸರ್ವರಕ್ಕೆ ನಿರಾಮಯಂ,
ಸರ್ವರೊಳ್ಪನೆ ಕಾಣಲಿ;
ದುಃಖಮಾರ್ಗುಂ ಮಾಣಲಿ|)

ದುರ್ಜನಃ ಸಜ್ಜನೋ ಭೂಯಾತ್
ಸಜ್ಜನಃ ಶಾಂತಿಮಾಪ್ನುಯಾತ್!
ಶಾಂತೋ ಮುಚ್ಯೇತ ಬಂಧೇಭ್ಯೋ
ಮುಕ್ತಶ್ಚಾನ್ಯಾನ್ ವಿಮೋಚಯೇತ್||

(ದುರ್ಜನರು ಸಜ್ಜನರಾಗಲಿ;
ಸಜ್ಜನರು ಶಾಂತಿ ಪಡೆಯಲಿ,
ಶಾಂತಿ ಬಂಧಮುಕ್ತರಾಗಲಿ;
ಮುಕ್ತರು ಇತರರನ್ನೂ ಮುಕ್ತಗೊಳಿಸಲಿ|)

* * *