ಧಾರವಾಡದ ಮಹಾಜನರಲ್ಲಿ, ಕನ್ನಡ ನಾಡಿನ ಸಾಹಿತ್ಯ ಪ್ರೇಮಿಗಳಲ್ಲಿ, ಭಾರತೀಯ ಸಹೃದಯರಲ್ಲಿ ವಿಜ್ಞಾಪನೆ:-

ಜನಕೋಟಿಯ ಹೃದಯ ಹೃದಯದಲ್ಲಿ ಮೊಳೆತು ಬೇರೂರಿ ಬೆಳೆದ ಬಹುಕಾಲದ ಹೊಂಗನಸು ಹಲವಾರು ಚೇತನಗಳ ಅಭೀಪ್ಸೆ, ಸಾಧನೆ ಮತ್ತು ತ್ಯಾಗಗಳ ಫಲವಾಗಿ ಇಂದು ನನಸಾಗಿದೆ. ನಮ್ಮೆಲ್ಲರ ಹಿಗ್ಗು ಹೀಲಿಗೆದರುತ್ತಿರುವ ಈ ಸಂಭ್ರಮದ ಸಮಯದಲ್ಲಿ ಕರ್ಣಾಟಕದ ಸಂಸ್ಕೃತಿಯ ಪ್ರಧಾನ ಕೇಂದ್ರಗಳಲ್ಲಿ ಒಂದಾಗಿರುವ ಈ ಮಲೆ ಬಯಲು ಸೇರುವೆಡೆಯ ಚೆಲ್ವಿನ ಪ್ರಶಾಂತ ನಗರದಲ್ಲಿ ನೆರೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೂವತ್ತೊಂಬತ್ತನೆಯ ವಾರ್ಷಿಕ ಸಮ್ಮೇಲನದ ಅಧ್ಯಕ್ಷರೂಪದ ಈ ಸಾರಸ್ವತ ಸೇವಾಸ್ಥಾನಕ್ಕೆ ನನ್ನನ್ನು ಆಯ್ದು ಆರ್ಶೀದಿಸಿರುವುದಕ್ಕಾಗಿ ವಾಗ್ದೇವಿಯ ಮಕ್ಕಳಾಗಿರುವ ನನ್ನ ಸಹೋದರ ಸಹೋದರಿಯರೆಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಕೈಮುಗಿದು ವಂದಿಸುತ್ತೇನೆ.

ನಾವು ಭಾಗ್ಯಶಾಲಿಗಳು; ನಾವು ಧನ್ಯರು; ನಾವು ಬದುಕುತ್ತಿರುವ ಈ ನಮ್ಮ ಶತಮಾನ ನಮ್ಮೆಲ್ಲರ ಭಾಗಕ್ಕೆ ಅತ್ಯಂತ ಶ್ರೀಮಂತವಾಗಿದೆ. ಎಂತೆಂತಹ ಅದ್ಭುತ ಘಟನಾವಳಿ ನಮ್ಮ ಕಣ್ಮುಂದೆ ನಡೆದಿದೆ! ಎನಿತೆನಿತು ಮಹದ್ ವ್ಯಕ್ತಿಗಳು ಜಗನ್ನಯನವನ್ನೆ ಆಕರ್ಷಿಸಿ, ಸಮಗ್ರ ಪ್ರಪಂಚದ ಪ್ರೀತಿ ಭಕ್ತಿ ಗೌರವಗಳಿಗೆ ಭಾಜನರಾಗಿ ನಮ್ಮೀ ಭಾರತಭೂಮಿಯ ಮಹಾ ವೇದಿಕೆಯ ಮೇಲೆ ಸುಳಿದುಹೋಗಿದ್ದಾರೆ! ಎಂತಹ ಭವ್ಯಶಕ್ತಿ ಸಂಪನ್ನವಾದ ದಿವ್ಯ ಚೇತನಗಳು ತಮ್ಮ ತಪಃಪ್ರಭಾವದಿಂದ ದೇಶದಾದ್ಯಂತ ಕೋಟ್ಯಂತರ ಸಾಮಾನ್ಯ ಜನಹೃದಯಗಳಲ್ಲಿಯೂ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಅದ್ಭುತ ಶಕ್ತಿ ಸಂಚಾರಮಾಡಿಹೋಗಿದ್ದಾರೆ! ರಾಷ್ಟ್ರಕುಂಡಲಿಯನ್ನೆ ಎಚ್ಚರಿಸಿ ಜನ ಚೇತನಸಮಸ್ತವನ್ನೂ ಉರ್ಧ್ವಗಾಮಿಯಾದ ಪ್ರಜ್ಞಾಪಥದಲ್ಲಿ ಉದ್ಧಾರೋನ್ಮುಖವಾಗುವಂತೆ ನಿಯೋಜಿಸಿದ್ದಾರೆ! ಕೆಲವೇ ಸಂವತ್ಸರಗಳ ಹಿಂದೆ ತಮ್ಮ ಹೆಬ್ಬಯಕೆ ಈಡೇರುವುದೊ ಇಲ್ಲವೊ ಎಂಬ ಭಯಾಶಂಕೆಗಳಿಂದ ಅಳುಕುತ್ತಿದ್ದ ನಮ್ಮ ಹೇರಾಸೆಗಳಲ್ಲ ಇಂದು ಕೈಗೂಡಿ ಸಿದ್ದಘಟನೆಗಳಾಗಿ ಪವಾಡಗಳಂತೆ ಕಂಗೊಳಿಸುತ್ತಿವೆ! ಅಂದಿನ ಪ್ರಪಂಚದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಮಹಾ ನಿಷ್ಠುರ ಸಾಮ್ರಾಜ್ಯವೊಂದರ ವಜ್ರೋಪಮಕಠೋರ ಹಸ್ತದ ಕಪಿಮುಷ್ಠಿಯಲ್ಲಿ ಸಿಲುಕಿ, ಸ್ವಾತಂತ್ರ್ಯಕ್ಕಾಗಿ ಅರ್ಧಶತಮಾನದಿಂದ ಹೋರಾಡುತ್ತಿದ್ದರೂ, ಜಗತ್ತಿನ ಅತ್ಯಂತ ಗಣ್ಯತಮ ವ್ಯಕ್ತಿಯೊಬ್ಬನ ನಿರ್ದೇಶನದಲ್ಲಿ ಸಂಗ್ರಾಮ ಸಾಗಿದ್ದರೂ, ‘ಎಂದಿಗೈ ತರುವುದೋ ಆ ಸ್ವಾತಂತ್ರ್ಯ ಸ್ವರ್ಗ’ ಎಂದು ಪರಿತಪಿಸುತ್ತಿದ್ದ ನಮಗೆ, ನಾವೆ ಬೆಕ್ಕಸಗೊಳ್ಳುವ ತೆರದಲ್ಲಿ ಅದು ಕೈಸಾರಿ ಈಗಾಗಲೆ ಹತ್ತು ವರ್ಷವಾಗಿದೆ! ಆ ಸ್ವಾತಂತ್ರ್ಯವನ್ನೇನೋ ನಮ್ಮ ಭಾರತಜನತೆ ದಿಕ್ಕು ದಿಕ್ಕುಗಳೆ ಅನುರಣಿತವಾಗುವಂತೆ ಜಯಧ್ವನಿಗೈದು ಸ್ವಾಗತಿಸಿತು; ಮನದಣಿಯೆ ಕೊಂಡಾಡಿತು; ಎದೆತುಂಬಿ ಆಸ್ವಾದಿಸಿತು; ಕೊರಳೆತ್ತಿ ಹಾಡಿ ಹೂವೆರಚಿ ಪೂಜಿಸಿತು. ಆದರೂ, ಸರ್ವರ ಸರ್ವಕ್ಷೇಮಕ್ಕೂ ಭಿತ್ತಿಸ್ವರೂಪವಾದ ಆ ಅಖಿಲ ಭಾರತೀಯ ಸಂಪೂರ್ಣ ಸ್ವಾತಂತ್ರ್ಯದಿಂದ ಜನತೆಯ ಪ್ರಧಾನಾಕಾಂಕ್ಷೆ ತೃಪ್ತವಾದರೂ, ಆ ಸ್ವಾತಂತ್ರ್ಯದಿಂದಲೆ ಸಂಭವನೀಯವೆಂದು ಎಲ್ಲರೂ ನಂಬಿದ್ದ ಮತ್ತೊಂದು ಸಾಂಸ್ಕೃತಿಕವಾದ ಮೂಲತರ ಆಕಾಂಕ್ಷೆಗೆ ತೃಪ್ತಿ ದೊರೆಯದೆ ಜನತೆಯ ಅಪೇಕ್ಷೆ ನೀರಡಸಿತ್ತು, ಕಾತರಿಸಿತ್ತು. ಅಷ್ಟೇ ಅಲ್ಲದೆ; ಆ ಅಪೇಕ್ಷೆಯ ಸಾಧುತ್ವದ ವಿಚಾರದಲ್ಲಿಯೆ ಅಲ್ಲಲ್ಲಿ ಒಡಕುದನಿ ಮೂಡಿ, ಜಿಜ್ಞಾಸೆಯ ಜಂಝೆಯೆದ್ದು ಸ್ವಲ್ಪ ಕಾಲ ಕ್ಷೋಭೆಗೂ ಕಾರಣವಾಗಿತ್ತು. ಆದರೆ ನಮ್ಮ ನಾಯಕವರೇಣ್ಯರ ದೂರದೃಷ್ಟಿಯಿಂದಲೂ ನಮ್ಮ ಜನ ಸಾಮಾನ್ಯರ ವಿವೇಕಪೂರ್ಣವಾದ ಸೌಜನ್ಯದಿಂದಲೂ ಆ ಕುದಿಹವೆಲ್ಲ ಬಹುಮಟ್ಟಿಗೆ ತಣ್ಣಗಾಗಿ ಈಗತಾನೆ ಭಾಷಾನುಗುಣವಾದ ಪ್ರದೇಶಗಳು ಭೂನೈಜವಾಗಿವೆ. ಅದರ ಪರಿಣಾಮವಾಗಿ ಮತ್ತು ಫಲರೂಪವಾಗಿ ನಾವಿಂದು ಇಲ್ಲಿ ಏಕೀಕೃತ ಅಖಂಡ ಕರ್ಣಾಟಕದ ಸಾಹಿತ್ಯಪರಿಷತ್ತಿನ ಪ್ರಪ್ರಥಮ ವಾರ್ಷಿಕ ಸಮ್ಮೇಲನೋತ್ಸವದಲ್ಲಿ ಭಾಗಿಗಳಾಗಲು ನೆರೆದಿದ್ದೇವೆ. ನಾವು ನಿಜವಾಗಿಯೂ ಭಾಗ್ಯಶಾಲಿಗಳಲ್ಲವೆ? ಧನ್ಯರಲ್ಲವೆ?

ಹೌದು. ಆದರೆ ಏಕೆ ಧನ್ಯರು? ಏನು ಧನ್ಯತೆ? ಶಾಶ್ವತ ಪ್ರಯೋಜನ ರೂಪವಾದ ಯಾವ ಪುರುಷಾರ್ಥ ದೊರೆಕೊಂಡಿದೆ? ಅಥವಾ ಅಂತಹ ಪುರುಷಾರ್ಥ ಸಾಧನೆಗೆ ಹಾದಿಯಾದರೂ ಸಿದ್ಧವಾಗಿದೆಯೆ?

ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಯ ಭೂಮಿಕೆಯಲ್ಲಿ ವ್ಯವಹರಿಸುವ ಸಾಹಿತ್ಯಪರಿಷತ್ತಿಗೂ ಈ ಪ್ರಾಂತರಚನೆಯ ರಾಜಕೀಯಕ್ಕೂ ಏನು ಸಂಬಂಧ? ಕನ್ನಡ ಜನತೆಯ ಹೃದಯಲ್ಲಿ ಅಂತರ್ಗತವಾಗಿದ್ದ ಯಾವ ಮೂಕಾಶಯವನ್ನು ವಾಙ್ಮಯವನ್ನಾಗಿ ಮಾಡಲು ಪ್ರಯತ್ನಿಸಿ ಸಾಹಿತ್ಯ ಪರಿಷತ್ತು ಕಳೆದ ಮೂವತ್ತೆಂಟು ವರ್ಷಗಳಿಂದ ವರುಷವರುಷವೂ ನಾಡಿನ ಕೇಂದ್ರದಲ್ಲಿ ನೇಮಿಯಲ್ಲಿ ಗಡಿಮೂಲೆಗಳಲ್ಲಿ ವಾರ್ಷಿಕ ಸಮ್ಮೇಲನೋತ್ಸವವನ್ನು ನೆರಪಿ, ಜನ ಚೇತನಕ್ಕೆ ನವೀನೋತ್ಸಾಹವನ್ನು ತುಂಬಿ, ನಾಡಿನ ಮಕ್ಕಳನ್ನು ಮತ್ತೆ ಮತ್ತೆ ಎಚ್ಚರಿಸಿ ದೀಕ್ಷಾಬದ್ಧರನ್ನಾಗಿ ಮಾಡುತ್ತಿತ್ತೋ ಆ ಮೂಕ ಆಶಯವೆ ಕಳೆದ ಮೂವತ್ತು ನಾಲ್ವತ್ತು ವರ್ಷಗಳಿಂದಲೂ ನಮ್ಮ ನಾಡಿನ ಕವಿಗಳಲ್ಲಿ, ಲೇಖಕರಲ್ಲಿ, ವಿದ್ವಾಂಸರಲ್ಲಿ, ಸಾರ್ವಜನಿಕ ಮುಂದಾಳುಗಳಲ್ಲಿ, ರಾಜಕೀಯ ಆಂದೋಲನಕಾರರಲ್ಲಿ, ವಿದ್ಯಾರ್ಥಿಗಳಲ್ಲಿ, ಅಧ್ಯಾಪಕರಲ್ಲಿ, ಕರ್ಣಾಟಕ ಸಂಘಗಳಂತಹ ಸಂಸ್ಥೆಗಳಲ್ಲಿ, ದೇಶಭಾಷೆಯ ಪತ್ರಿಕೆಗಳಲ್ಲಿ ನಾನಾರೂಪಗಳಿಂದ ಅನೇಕಮುಖವಾಗಿ ಅಭಿವ್ಯಕ್ತವಾಗಿ ಸ್ವಯಂ ಕ್ರಿಯಾಸಮರ್ಥವಾದ ಕ್ರತುಶಕ್ತಿಯಾಗಿ ಏಕೀಕೃತ ಅಖಂಡ ಕರ್ಣಾಟಕವಾಗಿ ಪರಿಣಮಿಸಿತು. ವಾಸ್ತವವಾಗಿ ಈ ಏಕೀಕರಣ ಮತ್ತು ಅಖಂಡತೆ ಹೊಚ್ಚ ಹೊಸದಾಗಿ ಸೃಷ್ಟಿಯಾದುದೇನೂ ಅಲ್ಲ. ಸಾಂಸ್ಕೃತಿಕವಾಗಿ ದೇಶದ ಮನೋಮಂಡಲದಲ್ಲಿ ಯಾವುದು ಅನೇಕ ಶತಮಾನಗಳಿಂದಲೂ ಅಚ್ಯುತವಾದ ಭಾವಸತ್ಯವಾಗಿದ್ದಿತೊ ಅದು ಈಗ ಭೌಗೋಳಿಕವಾಗಿಯೂ ಸಿದ್ಧವಾಯಿತೆಷ್ಟೊ ಅಷ್ಟೆ. ಅದನ್ನು ಯಾವ ಹೆಸರಿನಿಂದ ಕರೆದರೂ ಅದು ನಮಗೆ ಕರ್ಣಾಟಕವೆ. ಈ ಭಾವವನ್ನೆ ಒಮ್ಮೆ ಕವಿವಾಣಿ ಹೀಗೆಂದು ಘೋಷಿಸಿದೆ:

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ;
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!

ನೃಪತುಂಗನೆ ಚಕ್ರವರ್ತಿ,
ಪಂಪನಲ್ಲಿ ಮುಖ್ಯಮಂತ್ರಿ.
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟುದಲ್ಲ; ಕಾಲವಿಸ್ತೀರ್ಣವನ್ನೂ ನಾವು ಪ್ರಮುಖವಾಗಿ ಭಾವಿಸುತ್ತೇವೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರವರ್ಷಗಳಿಂದಲೂ ಗುರುತಿಸಬೇಕು. ವ್ಯಷ್ಟಿರೂಪವಾದ ವ್ಯಕ್ತಿಗೆ ಕೋಶಗಳಿರುವಂತೆ ಸಮಷ್ಟಿರೂಪವಾದ ದೇಶಕ್ಕೂ ಕೋಶಗಳಿವೆ ಎಂದು ಭಾವಿಸುವುದಾದರೆ ಕರ್ನಾಟಕಕ್ಕೆ ಅನ್ನಮಯ ರೂಪವಾದ ಭೂಪ್ರದೇಶವಿರುವಂತೆಯೆ ಪ್ರಾಣಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ ಆಧ್ಯಾತ್ಮಿಕವೂ ಆಗಿರುವ ಆ ಸಂಸ್ಕೃತಿ ಕೋಶವೆ ಕರ್ಣಾಟಕದೇವಿಯ ಸೂಕ್ಷ್ಮಶರೀರ. ನಶ್ವರವೂ ಚಂಚಲವೂ ಕಾಲ ಸನ್ನಿವೇಶವಶವೂ ಆಗಿರುವ ಭೂವಿಸ್ತೀರ್ಣ ರೂಪವಾದ ಲೀಲಾಸ್ಥೂಲ ಶರೀರವನ್ನು ಸರ್ವದಾ ಧಾರಣೆ ಮಾಡುತ್ತಿರುತ್ತದೆ ಆ ನಿತ್ಯಭಾವತನು. ಆ ಜ್ಯೋತಿಶ್ಯರೀರಿಯೆ ದೇವಿ. ಆ ದೇವಿಯ ಉಪಾಸನೆಯೆ ಕವಿ ಕಲಾವಿದ ತತ್ವ್ತಜ್ಞ ಸಾಧಕರಾದಿಯಾಗಿ ಸಕಲರ ಗಂತವ್ಯ ಮತ್ತು ಗಮ್ಯ. ಕರ್ಣಾಟಕದ ಕಾವ್ಯ ಕಲೆ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಲಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ.

ಎಲ್ಲಾದರು ಇರು, ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು;
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು:
ನೀ ಮೆಟ್ಟುವ ನೆಲ-ಅದೆ ಕರ್ನಾಟಕ;
ನೀನೇರುವ ಮಲೆ-ಸಹ್ಯಾದ್ರಿ.
ನೀ ಮುಟ್ಟುವ ಮರ-ಶ್ರೀಗಂಧದ ಮರ;
ನೀ ಕುಡಿಯುವ ನೀರ್-ಕಾವೇರಿ.

ಕನ್ನಡ ಕಾವ್ಯಗಳನ್ನೋದುವಾತನು ಅಮೇರಿಕೆಯಲ್ಲಿದ್ದರೂ ಅದು ಕರ್ಣಾಟಕವೆ. ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ‘ಕುಮಾರವ್ಯಾಸನನಾಲಿಪ ಕಿವಿ’ ಆಂಡೀಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ‘ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ಣಾಟಕದ ನೆಲದ ಎಲ್ಲೆ ಇಂದು ಭೌಗೋಲಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ನಾವು ಪರಿತಪಿಸುವುದು ಅನಾವಶ್ಯಕ. ಕಾವೇರಿ ಮತ್ತು ಗೋದಾವರಿಗಳು ನಿತ್ಯವೂ ನಿರ್ದಿಗಂತವಾಗಿ ವಿಸ್ತರಿಸುತ್ತಿರುವ ಕರ್ಣಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಭೂಮಿಕೆಯ ಗಡಿಗಳಿಗೆ ಸಂಕೇತ ಮಾತ್ರಗಳಾಗಿರಲಿ. ಅವು ಭಾವೋಪಯೋಗಿಗಳೆ ಹೊರತು ಲೋಕೋಪಯೋಗಿಗಳಾಗುವುದಿಲ್ಲ. ಏಕೆಂದರೆ ಮೈಸೂರಿನ ಎಲ್ಲೆ ರಾಜಕೀಯದಿಂದ ಭೌಗೋಲಿಕವಾಗಿ ನಿರ್ಣಯವಾಗಿದ್ದರೂ ಕರ್ಣಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನರ್ಣಯವಾಗುತ್ತಿರುತ್ತದೆ. ಕನ್ನಡಿಗರ ಸಂಸ್ಕೃತಿಗೆ ಪ್ರತಿಮಾರೂಪವಾಗಿರುವ ಕರ್ಣಾಟಕದ ವಿಸ್ತಾರ ನಿರ್ದಿಗಂತವಾದದ್ದು; ಅದರ ಔನ್ನತ್ಯ ನಿಶ್ಯಿಕರವಾದದ್ದು. ಅಂತಹ ‘ಸಂಸ್ಕೃತಿ ಕರ್ಣಾಟಕ’ದ ಸ್ಥಾಪನೆ, ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿಯೆ ಸಹೃದಯ ಸಮಷ್ಟಿರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಾಗಿದೆ. ಏಕೆಂದರೆ ಭೌಗೋಲಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲಬಾಳಿಗರಾಗಿ ಸುಮ್ಮನಾದರೆ ರಾಜ್ಯಸ್ಥಾಪನೆಯ ಮೂಲೋದ್ದೇಶವೆ ವಿಫಲವಾಗುತ್ತದೆ.

ಶರೀರವೆ ಮೊತ್ತಮೊದಲನೆಯ ಧರ್ಮಸಾಧನ. ಈ ಪೃಥ್ವೀತತ್ತ್ವದಲ್ಲಿ ಅನ್ನಮಯಕ್ಷೇಮವೆ ಉಳಿದೆಲ್ಲ ಅಭ್ಯುದಯಗಳಿಗೂ ಆಧಾರಭೂತವಾಗಿರುತ್ತದೆ. ಆ ಮೂಲಭೂತವಾದ ಕ್ಷೇಮಸಾಧನೆಗಾಗಿಯೆ ಕನ್ನಡ ಜನತೆ ಕರ್ಣಾಟಕ ರಾಜ್ಯರಚನೆಗಾಗಿ ಹಾತೊರೆದದ್ದು. ಅದರ ರಚನೆಗೆ ಭಂಗತರುವಂತಹ ವಿನಾಶಕ ಶಕ್ತಿಗಳು ಹೆಡೆಯೆತ್ತಿದ್ದಾಗ ಕೆರಳಿದ ಜನತೆ:

ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ,
ಇನ್ನೆಂದೂ ತಾನೊಂದೇ!
ನೃಪತುಂಗನ ದೊರೆಮುಡಿ ಸಾಕ್ಷಿ
ಪಂಪನ ಪದದೂಳಿಯ ಸಾಕ್ಷಿ
ಕೂಡಲ ಸಂಗನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ
ದೀಕ್ಷೆಯ ತೊಡು ಇಂದೇ…

ಇಡು ಸಹ್ಯಾದ್ರಿಯ ಮೇಲಾಣೆ,
ಇಡು ಕಾವೇರಿಯ ಮೇಲಾಣೆ,
ಇಡು ಚಾಮುಂಡಿಯ ಮೇಲಾಣೆ,
ಇಡು ಗೊಮ್ಮಟ ಗುರುದೇವಾಣೆ,
ದೀಕ್ಷೆಯ ತೊಡು ಇಂದೇ….

ಎಂದು ಮೊದಲಾಗಿ ದೀಕ್ಷೆ ತೊಟ್ಟಿತು, ಕಂಕಣ ಕಟ್ಟಿತು; ದೃಢಮನಸ್ಸಿನಿಂದ ವರ್ತಿಸಿತು, ತನ್ನ ಇಚ್ಛೆ ಕ್ರಿಯೆಯಾಗುವಂತೆ!

ಕಾವೇರಿ ಸಿರಿಯಡಿಯ ಗೋದಾವರಿಯ ಮುಡಿಯ
ಮೂಡುಮಲೆಯೆಡದ ಗಡಿಯ
ಪಡುಗಡಲ ಬಲದ ತಡಿಯ;
ವರ್ಣಶಿಲ್ಪದ ಕಲೆಯ ಚೆಲ್ವಿನ ಶಿಲೆಯಗುಡಿಯ,
ಕನ್ನಡದಿಂಪು ನುಡಿಯ
ಕನಸು ನನಸಾಯಿತಿದೊ ಏಕೈಕ ಕರ್ಣಾಟಕ!

ಕನಸೇನೊ ನನಸಾಗಿದೆ, ಒಂದು ಅಂಶದಲ್ಲಿ ಮಾತ್ರ. ಆಗಿರುವುದಕ್ಕಿಂತಲೂ ನೂರ್ಮಡಿ ಇದೆ ಮುಂದೆ ಆಗಬೇಕಾದ್ದು. ಅನೇಕ ರೂಪಗಳಲ್ಲಿ ಈ ಕರ್ಣಾಟಕ ಆಗಬೇಕಾಗಿದೆ, ಅರಳಬೇಕಾಗಿದೆ, ಬಳೆಯಬೇಕಾಗಿದೆ. ಕೌಟುಂಬಿಕ ಕ್ಷೇಮ, ಮಕ್ಕಳ ಕ್ಷೇಮ, ಪಶುಪಕ್ಷಿಗಳ ಕ್ಷೇಮ, ಜನದ ನಾನಾವಿಧ ಕ್ಷೇಮ, ತತ್ವ ಕಾವ್ಯ ಕಲೆ ಆಧ್ಯಾತ್ಮ ಮೊದಲಾದ ಊರ್ಧ್ವಮುಖಸಾಹಸಗಳ ಮನೋವಿಕಾಸ ರೂಪದ ಕ್ಷೇಮ-ಇವುಗಳಲ್ಲಿ ಕರ್ಣಾಟಕದ ಸೃಷ್ಟಿ ಮುಂದುವರಿಯುತ್ತಿದೆ.

ಶಿಶುರೂಪಿ, ಪಶುರೂಪಿ, ಜನರೂಪಿ, ಮನರೂಪಿ,
ನವ್ಯ ಶಾದ್ವಲರೂಪಿ
ಕಲಕಲ ಪಕ್ಷಿರೂಪಿ;
ನವಸರೋವರದಂತೆ, ನವಶಾಲಿವನದಂತೆ,
ನವಯೌವನದ ಮೊದಲ ನವವಧೂವರರಂತೆ;
ನವ ಕವಿಯ ನವರಸ ನವೀನ ಕೃತಿಯಂತೆ,
ದಿವ್ಯವೀಣಾಗಾನ ಗತಿಯಂತೆ
ಮೂಡುತಿದೆ ನೋಡು ಅದೊ ಏಕೈಕ ಕರ್ಣಾಟಕ!

ಮೂಡುತ್ತಿರುವ ಆ ಏಕೈಕ ಕರ್ಣಾಟಕ ಬಹುರೂಪಿ ಮತ್ತು ವಿಶ್ವತೋಮುಖಿ. ವಿಜ್ಞಾಣಸಹಸ್ರಬಾಹುವಾದ ಮಾನವ ಕಾರ್ತವೀರ್ಯಾರ್ಜುನನ ಶಿಲ್ಪ ಸಾಹಸದಿಂದ ನಡೆತಡೆದು ನಿಂತು ಮುಡುಗೊಂಡ ನದಿಗಳಿಂದ ಉದ್ಭವವಾದ ಮಹಾ ಜಲಾಶಯಗಳ ರೂಪದಲ್ಲಿ, ದಿಗಂತವಿಶ್ರಾಂತವಾಗಿ ಹಬ್ಬಿಹಸುರಾಗಿ ಹೊನ್ನಾಗಿ ಕಂಗೊಳಿಸುತ್ತಿರುವ ಶಲಿವನ ಕ್ಷೇತ್ರಗಳ ರೂಪದಲ್ಲಿ, ನಾನಾ ರೀತಿಯ ನಾಗರಿಕ ಭೋಗ ಸೌಕರ್ಯಗಳನ್ನು ಒದಗಿಸುವ ಭೀಮಾಕಾರದ ಯಂತ್ರೋಪಕರಣಗಳಿಂದ ಭಯಂಕರ ಭವ್ಯವಾಗಿರುವ ಬೃಹತ್ ಕಾರ್ಖಾನೆಗಳ ರೂಪದಲ್ಲಿ ಈ ಕರ್ಣಾಟಕ ಸೃಷ್ಟಿ ನಿರಂತರವೂ ಮುಂದುವರಿಯುತ್ತದೆ. ಹೊಳೆಗಳು ನಿಲ್ಲುತ್ತವೆ; ನೀರು ಜ್ಯೋತಿರ್ದಾನ ಮಾಡುತ್ತದೆ; ಬೆಟ್ಟನೆತ್ತಿಯ ಲೋಹಸ್ವಪ್ನ ಎಚ್ಚರಗೊಳ್ಳುತ್ತದೆ; ಅರಣ್ಯದೇವಿಯ ಮಡಿಲ ಸಂಪತ್ತು ಮಕ್ಕಳ ಕೈಸೇರುತ್ತದೆ; ಸಮುದ್ರವೂ ತನ್ನ ಶ್ರೀಮಂತಿಕೆಯನ್ನು ಹಂಚಿ ಸಮತಾವಾದಿಯಾಗುತ್ತದೆ; ಆಕಾಶವೂ ದಾರಿಬಿಡುತ್ತೆ: ನಮ್ಮ ವಿಜ್ಞಾನಿ ಯಂತ್ರವಿಜ್ಞಾನಿಗಳ ಮಂತ್ರಮಹಿಮೆಯಿಂದಲೂ ತಂತ್ರಕೌಶಲದಿಂದಲೂ ನಿಲ್ಲದೆ ನಿದ್ದೆ ಮಾಡದೆ ಮುಂದುವರಿಯುತ್ತದೆ ಈ ಕರ್ಣಾಟಕದ ಭವ್ಯಸೃಷ್ಟಿ. ಕವಿ ಕಲಾರ್ಥಿ ವಿಜ್ಞಾನಿ ರಾಜಕಾರಣಿ ಎಲ್ಲರೂ ಆ ದೇವಕರ್ಮದಲ್ಲಿ ಸಮಭಾಗಿಗಳಾಗುತ್ತಾರೆ.

ಈ ಕರ್ಣಾಟಕ ಭೌಗೋಲಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿವಾಗಿ ಅಷ್ಟೇನೂ ಭಿನ್ನವಲ್ಲ; ಆಧ್ಯಾತ್ಮಿಕವಾಗಿ ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಉಡುಗೆ ತೊಡುಗೆ ಉಣಿಸು ನಡೆ ನುಡಿಗಳಲ್ಲಿ ಪ್ರಾಂತದಿಂದ ಪ್ರಾಂತಕ್ಕೆ ಸ್ವಲ್ಪ ವ್ಯತ್ಯಾಸ ತೋರಿದರೂ ನಮ್ಮೆಲ್ಲರ ಕನಸೂ ಒಂದೇ, ನಮ್ಮೆಲ್ಲರ ಮನಸ್ಸೂ ಒಂದೇ, ನಮ್ಮೆಲ್ಲರ ಗುರಿಯೂ ಒಂದೇ; ನಾವೆಲ್ಲ ಭಾರತೀಯರು. ನಮ್ಮ ಭಾಷೆ ಸಾಹಿತ್ಯಗಳು ಆ ಏಕೈಕವಾದ ಭಾರತೀಯ ಸಂಸ್ಕೃತಿಸಮುದ್ರದ ಬೃಹತ್ ತರಂಗಮಾತ್ರಗಳಾಗಿವೆ. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಗಳೂ ಹಿಮವತ್ ಪರ್ವತವೂ ನಮ್ಮನ್ನು ಭೌಗೋಲಿಕವಾಗಿ ಒಂದೂಗೂಡಿಸಿರಬಹುದು. ಆದರೆ ರಾಜಕೀಯವಾಗಿ ಭಾರತೀಯ ಜನತೆ ಪರಸ್ಪರ ವೈರಿಗಳೆಂದು ಪರಿಗಣಿತವಾಗಿದ್ದ ಭಿನ್ನ ಭಿನ್ನರಾಜ್ಯಗಳಲ್ಲಿ ಖಂಡ ಖಂಡವಾಗಿ ಹರಿದು ಹಂಚಿ ಹೋಗಿದ್ದಾಗಲೂ ಅವರನ್ನೆಲ್ಲ ಶತ ಶತಮಾನಗಳಿಂದ ಅಖಂಡವಾಗಿಯೆ ಇಟ್ಟಿದ್ದ ಶಕ್ತಿ ಯಾವುದು? ಆ ಶಕ್ತಿ ವೇದೋಪನಿಷತ್ತು ಷಡ್ದರ್ಶನಾದಿಗಳಲ್ಲಿ ಹರಿಯುತ್ತಿರುವ ಅಧ್ಯಾತ್ಮ ಶಕ್ತಿ; ರಾಮಾಯಣ ಮಹಾಭಾರತ ಭಾಗವತಾದಿಗಳಲ್ಲಿಯೂ ದೇಶ ದೇಶದ ಕಾಲ ಕಾಲದ ಮಹಾ ಕವೀಂದ್ರರ ಮಹಾಕೃತಿಗಳಲ್ಲಿಯೂ ಹರಿಯುತ್ತಿರುವ ಸಾಹಿತ್ಯಶಕ್ತಿ; ಋಷಿ ಯೋಗಿ ಸಾಧಕ ಸಿದ್ದ ಸಂತರ ದಿವ್ಯ ಜೀವನದಿಂದ ಆಕರ್ಷಿತವಾಗಿ, ಅವತರಿಸಿ ಅಭಿವ್ಯಕ್ತಗೊಂಡಿರುವ, ಹಾಗೂ ಒಂದಲ್ಲ ಇನ್ನೊಂದು ರೀತಿಯಿಂದ, ಒಬ್ಬರಲ್ಲ ಮತ್ತೊಬ್ಬರಿಂದ ಇಂದಿಗೂ ಆವಿರ್ಭಾವಗೊಳ್ಳುತ್ತಿರುವ ಧಾರ್ಮಿಕ ಶಕ್ತಿ. ಆ ಶಕ್ತಿಯೆ ಭಾರತಿ! ನೆಲದಲ್ಲಿ ಅದು ನೆಲೆಗೊಂಡಿರುವ ವಿಭಾಗವೆ ಭಾರತ! ಅಲ್ಲಿ ಹುಟ್ಟಿ ಬೆಳೆದು, ಅದರ ಧ್ಯೇಯೋದ್ದೇಶಗಳನ್ನು ಸಾಧಿಸುತ್ತ ಪೂರ್ಣತ್ವದ ಕಡೆಗೆ ಸಾಗುತ್ತಿರುವ ಜನವೇ ಭಾರತೀಯರು. ನಾವೆಲ್ಲ ಭಾರತೀಯರೆ. ಕೇರಳ ಕರ್ಣಾಟಕ ಆಂಧ್ರಾದಿ ಪ್ರದೇಶಗಳೆಲ್ಲ ಆ ಭಾರತಿಯ ಅಂಗರೂಪಗಳು, ಅಂಶರೂಪಗಳು. ಭಾರತಿತಾಯಿ. ಇವರೆಲ್ಲ ಆ ತಾಯಿಯ ತನುಜಾತೆಯರು; ತನುವಿನಿಂದ ಜಾತರಾದವರು; ಮನಕ್ಕಳು. ಅಂಗಾಂಗಗಳ ಕ್ಷೇಮ ಅಂಗಿಯ ಕ್ಷೇಮದಿಂದ ಅಭಿನ್ನ. ಅಂಗಿಯ ಕ್ಷೇಮದಿಂದಲೆ ಅಂಗಾಂಗಗಳ ಕ್ಷೇಮವೂ ಸಿದ್ಧಾವಾಗುತ್ತದೆ. ಯಾವ ಅಂಗವಾಗಲಿ ಮತ್ತೊಂದು ಅಂಗದೊಡನೆ ಕದನವಾಡಿದರೆ ಅಥವಾ ಸಹಕರಿಸಿದಿದ್ದರೆ ಇತರ ಅಂಗಗಳಿಗೆ ಹಾನಿಯನ್ನುಂಟುಮಾಡುವುದರ ಜೊತೆಗೆ ಅಂಗಿಗೂ ಹಾನಿಯನ್ನುಂಟುಮಾಡಿ ತನ್ನ ಸರ್ವನಾಶಕ್ಕೂ ಕಾರಣವಾಗುತ್ತದೆ. ಕೇರಳಾಭಿಮಾನ ಕರ್ಣಾಕಾಭಿಮಾನ ಆಂಧ್ರಾಭಿಮಾನ ಇತ್ಯಾದಿ ದೇಶಭಾಷಾಕ್ಷೇತ್ರಾಭಿಮಾನಗಳು ದ್ವೇಷಕ್ಕಾಗಲಿ ಅಸಹನೆಗಾಗಲಿ ಅನ್ಯಾಯಕ್ಕಾಗಲಿ ಆಕ್ರಮಣ ಬುದ್ಧಿಗಾಗಲಿ ಎಡೆಗೊಡದೆ ಭಾರತಾಭಿಮಾನದ ಆಶ್ರಯದಲ್ಲಿ, ವೈಯಕ್ತಿಕವಾದ ಮತ್ತು ಅನುಚಿತವಾದ ಸ್ವಾರ್ಥತೆಗಳನ್ನು ತ್ಯಜಿಸಿ, ತಮ್ಮ ತಮ್ಮ ಏಳಿಗೆಯನ್ನು ಸಾಧಿಸಬೇಕು. ಏಕೆಂದರೆ ಸರ್ವಕ್ಷೇಮದ ಪ್ರಣಾಳದಲ್ಲಿಯೆ ಸ್ವಕ್ಷೇಮವೂ ಹರಿದುಬರುತ್ತದೆ.

ಭಾಷಾನುಗುಣ ಪ್ರಾಂತರಚನೆ ಆಗುವುದಕ್ಕೆ ಅಚಿರಪೂರ್ವದಲ್ಲಿ -ಈ ಪುನರ್ವಿಂಗಡಣೆಯಿಂದ ಭಾರತದ ಐಕ್ಯತೆಗೆ ಭಂಗಬರುತ್ತದೆ; ದುರಭಿಮಾನದಿಂದ ಜನರಲ್ಲಿ ದ್ವೇಷಾಸೂಯೆಗಳು ಹೆಚ್ಚಿ, ದೇಶ ಛಿದ್ರಛಿದ್ರವಾಗಿ, ಅಂತಃಕಲಹದ ಕಿಚ್ಚುಹೊತ್ತಿ, ದೇಶಭಕ್ತರ ಮಹಾತ್ಯಾಗದಿಂದಲೂ ಬಹುಕಾಲದ ಶ್ರಮದಿಂದಲೂ ಸಂಪಾದಿಸಿದ್ದ ಸ್ವಾತಂತ್ರ್ಯಕ್ಕೂ ಭಂಗ ಬರುತ್ತದೆ-ಎಂದು ವಿರೋಧಿಗಳಾದ ಕೆಲವರು ಆಡಿಕೊಳ್ಳುತ್ತಿದ್ದರು. ಆದರೆ ಅದೆಲ್ಲ ಬರಿಯ ಬಿಸಿತಲೆಯ ಹುಸಿ ಊಹೆಯಾಗಿತ್ತು ಎಂಬುದನ್ನು ತರುವಾಯ ನಡೆದ ಘಟನೆಗಳು ಮೂದಲಿಸುವಂತೆ ತೋರಿಸಿಕೊಟ್ಟಿವೆ. ರೋಗ ಗುಣವಾದ ಮೇಲೆಯೂ ಅದನ್ನು ಮತ್ತೆ ಮತ್ತೆ ನೆನೆಯುತ್ತಿರುವುದು ಆರೋಗ್ಯಲಕ್ಷಣವಾಗುವುದಿಲ್ಲ. ಭಾಷಾಪ್ರಾಂತ ಸಿದ್ಧವಾದ ಮೇಲೆಯೂ ಮುಂದೆ ನಡೆಯಬೇಕಾಗಿರುವುದು ರಚನಾತ್ಮಕ ಕಾರ್ಯಗಳಲ್ಲಿ ಆಸಕ್ತರಾಗಿ ತೊಡಗದೆ ಮತ್ತೆ ಆ ವಿಚಾರವಾಗಿ ತಲೆಕೆಡಿಸಿಕೊಳ್ಳುವುದು ಹಿತಕರವಲ್ಲ. ಏನಾದರೂ ಅಲ್ಪ ಸ್ವಲ್ಪ ಹೊಂದಾಣಿಕೆಗಳಾಗಬೇಕಾಗಿದ್ದರೆ ಅವನ್ನು ಆಯಾ ರಾಜ್ಯಸರ್ಕಾರಗಳೆ ಪರಸ್ಪರವಾಗಿ ಆಡಳಿತದ ಮಟ್ಟದಲ್ಲಿ ಕಾಲಕ್ರಮೇಣ ಸರಿಪಡಿಸಿಕೊಳ್ಳಲು ಅವಕಾಶವಿದೆ.

ಸುಮಾರು ಇಪ್ಪತ್ತೆಂಟು ಮೂವತ್ತು ವರ್ಷಗಳ ಹಿಂದೆ ನಾನು ವಾಗ್ದೇವಿಯ ತೊಡೆಯ ಮೇಲೆ ತೊದಲುವ ಹಸುಳೆಯಾಗಿದ್ದಾಗ, ಬಹುಶಃ ಹಿರಿಯ ಕವಿ ರವೀಂದ್ರರ ಪ್ರಸಿದ್ಧ ಭಾರತ ರಾಷ್ಟ್ರಗೀತೆಯ ಪ್ರಭಾವದಿಂದ ಪ್ರೇರಿತನಾಗಿ, ಹಾಡಿದ ಒಂದು ಕರ್ಣಾಟಕ ರಾಷ್ಟ್ರಗೀತೆಯ ಕೆಲವು ಪಂಕ್ತಿಗಳನ್ನು ತಮ್ಮ ಅವಗಾಹನಕ್ಕೆ ತರಬಯಸುತ್ತೇನೆ. ಕರ್ಣಾಟಕ ಮತ್ತೆ ಭಾರತದ ಪೂರ್ವೋಕ್ತ ಸಂಬಂಧ ಅಲ್ಲಿ ಹೀಗೆ ಕಲ್ಪಿತವಾಗಿದೆ:

ಜಯ್‌ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ಜಯ್ ಸುಂದರ ನದಿನವಗಳ ನಾಡೆ,
ಜಯ ಹೇ ರಸ ಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ

ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರರಂಗ!
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನೀಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ!
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಜಯ್‌ಸುಂದರ ನದಿವನಗಳ ನಾಡೆ,
ಜಯ ಹೇ ರಸ ಋಷಿಗಳ ನಾಡೆ,

ಇಲ್ಲಿ ಕರ್ಣಾಟಕಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯತನುಜಾತೆ ಯಾಗಿರುವುದರಿಂದಲೇ, ಭಾರತಾಂಬೆಯ ಅಂಗೋದ್ಭವೆಯಾಗಿ ವಿನಾ ಕರ್ಣಾಟಕಕ್ಕೆ ಬೇರೆಯ ಅಸ್ತಿತ್ವವೆಲ್ಲಿ? ಈ ತನುಜಾತೆ ಆ ಮಾತೆಯ ತನುವಿನ-ಎಂದರೆ ಐಹಿಕ ಆಧ್ಯಾತ್ಮಿಕ ಎರಡೂ ಸೇರಿದ ತನುವಿನ-ಸಕಲ ಲಕ್ಷಣಗಳನ್ನೂ ಪಡೆದು, ಸಮರೂಪೆ ಮಾತ್ರವಲ್ಲ, ಸರ್ವಸಮರೂಪೆಯಾಗಿದ್ದಾಳೆ. ಈಕೆ ಶ್ರೀರಾಮ ಶ್ರೀಕೃಷ್ಣರು ಅವತಾರಮಾಡಿದ ಭಾರತಾಂಬೆಯ ಮಗಳು; ಕಪಿಲ, ಪತಂಜಲ, ಗೌತಮ, ಜಿನ ಇವರೆಲ್ಲರಿಂದ ರೂಪಿತೆಯಾದ ಭಾರತಾಂಬೆಯ ಕನ್ಯೆ; ನಾನಕ, ರಾಮಾನಂದ, ಕಬೀರ, ಶ್ರೀ ಕೃಷ್ಣಚೈತನ್ಯ, ಶ್ರೀರಾಮಕೃಷ್ಣಪರಮಹಂರೆ ಮೊದಲಾದ ಮಹಾಪುರಷರನ್ನು ಹಡೆದೂ ಅವರೆಲ್ಲರ ದಿವ್ಯತಪಸ್ಸಿನಿಂದಲೆ ಸಂಭೂತೆಯಾಗಿರುವ ಭಾರತಮಾತೆಯ ತನುಜಾತೆ. ಮಗಳ ಮೆಯ್ಯಲ್ಲಿ ಹರಿವ ನೆತ್ತರು ತಾಯಿಯದು. ಇವಳ ಉಸಿರ ಉಸಿರು ಅವಳು. ಇಬ್ಬರಿಗೂ ಇರುವ ಸಂಬಂಧ ಹೊಕ್ಕುಳ ಬಳ್ಳಿಯ ಸಂಬಂದ. ಆದ್ದರಿಂದಲೆ ಅವಳು ತಿಂದರೆ ಇವಳಿಗೆ ಪುಷ್ಟಿ. ಮಗಳ ಪುಷ್ಟಿ ತಾಯಿಗೆ ತುಷ್ಟಿ. ಈ ದೃಷ್ಟಿ ರಾಜಕೀಯ ಆರ್ಥಿಕರಂಗಗಳಲ್ಲಿ ಒಂದು ರೀತಿಯಲ್ಲಿ ಪ್ರಸಾರಿತವಾದರೆ, ಕಲೆ ಸಾಹಿತ್ಯಾದಿ ರಂಗಗಳಲ್ಲಿ ಮತ್ತೊಂದು ರೀತಿಯಲ್ಲಿ ಪ್ರಸಾರಿತವಾಗಿ, ಬಹಿರಂಗದ ಭದ್ರತೆಗೆ ಅತ್ಯಾವಶ್ಯಕವಾದ ಅಂತರಂಗಿಕ ಪ್ರಜ್ಞಾಭಿತ್ತಿ ಜನಮನದಲ್ಲಿ ಸಿದ್ಧವಾಗುವಂತೆ ಮಾಡುವುದೆ ನಮ್ಮೆಲ್ಲರ ಆದ್ಯ ಮತ್ತು ರಾಜಕರ್ತವ್ಯ.


[1] ಧಾರವಾಡದಲ್ಲಿ ೭-೫-೧೯೫೭ರಂದು ನಡೆದ ೩೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ.