ಮೈಸೂರು ಎಂಬ ರಾಜಕೀಯ ನಾಮಧೇಯದಿಂದ ಸಿದ್ಧವಾಗಿರುವ ಈ ಸಾಂಸ್ಕೃತಿಕ ನಾಮಧೇಯದ ಕರ್ಣಾಟಕದ ಲೌಕಿಕ ಅಭ್ಯುದಯ ಸಾಧನೆ ಪ್ರಧಾನತಃ ರಾಜಕೀಯ ವೈಜ್ಞಾನಿಕ ಆರ್ಥಿಕಾದಿ ಕ್ಷೇತ್ರಗಳಿಗೆ ಸಂಬಂಧಪಟ್ಟದ್ದು. ಅಂತಹ ಲೌಕಿಕಾಭ್ಯುದಯದ ತಳಹದಿಯ ಮೇಲೆಯೆ ನಮ್ಮ ನಿಃಶ್ರೇಯಸದ ಭಗವನ್ಮಂದಿರ ನರ್ಮಾಣವಾಗುತ್ತದೆ. ಈ ಮಂದಿರ ನಿರ್ಮಾಣ ಕಾರ್ಯದಲ್ಲಿ ಲೇಖನಿಯೆ ಆಚಾರ್ಯಶಿಲ್ಪಿ.

ಭವಲೋಕದಲ್ಲಿ ಏನನ್ನು ಸಾಧಿಸಬೇಕಾಗಿದ್ದರೂ ಮೊದಲು ಅದನ್ನು ಭಾವಲೋಕದಲ್ಲಿ ಬಿತ್ತಬೇಕು. ಮೈಯಲ್ಲಿ ಯಾವ ಪರಿವರ್ತನೆಯಾಗಬೇಕಾಗಿದ್ದರೂ ಅದು ಮನದಲ್ಲಿ ಮೊಳೆತು ಬೇರೂರಬೇಕು. ಹಾಗಲ್ಲದೆ ಹೊರಗಡೆಯಿಂದ ಬಲಾತ್ಕಾರವಾಗಿ ಹೇರುವ ಕೃತಕ ಪರಿವರ್ತನೆ ತಾತ್ಕಾಲಿಕವಾಗಿ ಶೀಘ್ರಫಲಕಾರಿಯಾಗಿ ತೋರಿದರೂ ಬಹುಬೇಗನೆ ವಿಫಲವಾಗುತ್ತದೆ, ಇಲ್ಲವೆ ವಿರುದ್ಧ ಪರಿಣಾಮಕಾರಿಯಾಗುತ್ತದೆ. ಆದ್ದರಿಂದ ನೂತನ ಸಾಹಸಕ್ಕೆ ಜನರ ಮನಸ್ಸನ್ನು ಹದಗೊಳಿಸುವುದು ಅತ್ಯಂತ ಆವಶ್ಯಕ. ಅದರಲ್ಲಿಯೂ ರಾಜಕೀಯ ಆರ್ಥಿಕ ಸಾಮಾಜಿಕ ಪ್ರಪಂಚಗಳಲ್ಲಿ ಕ್ರಾಂತಿಕಾರಕವಾದ ಸಿದ್ಧಾಂತಗಳೂ ಪ್ರಯೋಗಗಳೂ ಮಿಂಚಿನ ವೇಗದಿಂದ ಸಾಗುತ್ತಿರುವ ಈ ಸಮಯದಲ್ಲಿ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ, ಹೊಸ ತತ್ತ್ವಗಳನ್ನು ಒಪ್ಪಿಕೊಳ್ಳುವಂತೆ, ಹೊಸರೀತಿಯ ತ್ಯಾಗಗಳಿಗೆ ಸಿದ್ಧವಾಗುವಂತೆ, ಹಳೆಯ ದಂಭ ದರ್ಪಾಚಾರಗಳನ್ನು ತ್ಯಜಿಸಿ ಹೊಸ ನಿಯಮಗಳನ್ನು ಮರ್ಯಾದೆಯಿಂದ ಅಂಗೀಕರಿಸುವಂತೆ ಬುದ್ಧಿಯನ್ನೂ ಹೃಯದವನ್ನೂ ತಿದ್ದಬೇಕಾದುದು ಅಗತ್ಯ. ಈ ಕೆಲಸವನ್ನು ಸಾಧಿಸುವುದರಲ್ಲಿ ಕೆಲವು ರಾಷ್ಟ್ರಗಳು ಮೊದಮೊದಲು ಲೇಖನಿಗಿಂತಲೂ ಹೆಚ್ಚಾಗಿ ಕತ್ತಿಯನ್ನೇ ನೆಚ್ಚಿ, ಕಾರ್ಯಸಾಧನೆಯಲ್ಲಿ ಸ್ವಲ್ಪಮಟ್ಟಿಗೆ ಶೀಘ್ರವಿಜಯಿಗಳಾದಂತೆ ತೋರಿದರೂ, ಅಪಖ್ಯಾತಿಗೂ ಲೋಕನಿಂದೆಗೂ ಸಾಮೂಹಿಕ ಸಂಶಯಕ್ಕೂ ಪಕ್ಕಾಗಿ, ಕೊನೆಗೆ ಲೇಖನಿಯ ನೆರವನ್ನೆ ನೆಮ್ಮಬೇಕಾಯಿತು. ಬುದ್ಧಿಯನ್ನು ಎಚ್ಚರಿಸಿ ಸೂಕ್ಷ್ಮಗೊಳಿಸಿ, ನಾನಾರೂಪದ ಪ್ರಾಚೀನ ಮತ್ತು ನವೀನ ಮೌಢ್ಯಗಳಿಂದ ಅದನ್ನು ಪಾರುಮಾಡಿ, ವಿಚಾರಪರತೆಯನ್ನೂ ವೈಜ್ಞಾನಿಕದೃಷ್ಟಿಯನ್ನೂ ನೆಲೆಗೊಳಿಸಿ, ಜನತೆಯನ್ನು ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿಗಳ ಕಡೆಗೆ ತಿರುಗಿಸುವ ಹೊರೆ ಹೊಣೆ ಎರಡೂ ಕತ್ತಿಕುಡುಗೋಲುಗಳಿಗಿಂತಲೂ ಹೆಚ್ಚಾಗಿ ಲೇಖನಿಯ ಮೇಲೆ ಬೀಳುತ್ತದೆ. ಬುದ್ಧಿಯಷ್ಟೆ, ಅಥವಾ ಅದಕ್ಕಿಂತಲೂ ಮಿಗಿಲಾಗಿಯೆ, ಹೃದಯಪರಿವರ್ತನೆ ಅತ್ಯಗತ್ಯ. ಆ ಕೆಲಸ, ವಿವಿಧ ಮತಧರ್ಮಗಳು ನೆಲಸಿರುವ ನಮ್ಮ ದೇಶದಲ್ಲಿ, ಸಾಹಿತ್ಯದಿಂದಲೆ ಸಾಧ್ಯವಾಗಬೇಕಾಗಿದೆ. ಏಕೆಂದರೆ ಭಾವವೆ ಸಾಹಿತ್ಯದ ಮುಖ್ಯಸಾಮಗ್ರಿ; ಅದರ ಗುರಿ ರಸಾನುಭವ. ರಸಾನುಭವದಿಂದ ಹೃದಯಪರಿವರ್ತನೆಯಾಯಿತೆಂದರೆ ಬುದ್ಧಿಯ ಮೀನಮೇಷವೆಲ್ಲ ಮಾಯವಾಗಿ ನಮ್ಮ ನೇರನಡೆ ತಡೆಯಿಲ್ಲದೆ ಸಾಗುತ್ತದೆ.

ಭಾರತರಾಷ್ಟ್ರವನ್ನು ನಮ್ಮ ರಾಜ್ಯಾಂಗ ಸಮನ್ವಯ-ರಾಷ್ಟ್ರವೆಂದು ಘೋಷಿಸಿದೆ. ‘ಸೆಕ್ಯುಲರ್’ ಎಂದರೆ ಧರ್ಮರಹಿತ, ಮತರಹಿತ, ಚಾರ್ವಾಕ ಅಥವಾ ನಾಸ್ತಿಕ ಎಂದೇನೂ ಅರ್ಥವಲ್ಲ. ಇಲ್ಲಿ ಎಲ್ಲ ಧರ್ಮಗಳೂ ಎಲ್ಲ ದೃಷ್ಟಿಗಳೂ ಎಲ್ಲ ಆಚಾರ ಆರಾಧನೆಗಳೂ ಪರಸ್ಪರ ಗೌರವದಿಂದ, ಪರಸ್ಪರ ವಿಶ್ವಾಸದಿಂದ, ದಾರಿಗಳು ಬೇರೆಬೇರೆಯಾದರೂ ಸರ್ವರಿಗೂ ಏಕೈಕವಾದ ಗುರಿಯಾಗಿರುವ ಭಗವತ್‌ತತ್ವ್ತದ ಕಡೆಗೆ ಸಾಗಬಹುದು. ಶ್ರೀರಾಮಕೃಷ್ಣ ಪರಮಹಂಸರಿಂದ ಪುನಃಪ್ರಣೀತವಾಗಿ, ಮಹಾತ್ಮಾ ಗಾಂಧಿ ಶ್ರೀ ಅರವಿಂದರೆ ಮೊದಲಾದವರಿಂದ ಭಾವಪುಷ್ಟವೂ ಬುದ್ದಿಪೋಷಿತವೂ ಆಗಿ, ಆಧುನಿಕ ವೈಜ್ಞಾನಿಕ ದೃಷ್ಟಿಗೂ ಅವಿರುದ್ಧವಾಗಿ, ಅನ್ಯದೇಶ ಅನ್ಯಮತಗಳ ಮೇಧಾವಿಗಳಿಂದಲೂ ಸ್ವೀಕೃತವಾಗಿ, ಲೋಕಾದರಕ್ಕೆ ಪಾತ್ರವಾಗಿರುವ ಈ ಸಮನ್ವಯದೃಷ್ಟಿ ನಮ್ಮ ಜನತೆಯ ನಿತ್ಯಜೀವನದ ಸಾಧಾರಣ ತತ್ವ್ರವಾಗುವಂತೆ ಲೇಖಕರೆಲ್ಲ ಶ್ರಮಿಸಬೇಕಾಗಿದೆ. ಸಾಹಿತ್ಯದ ಚರಿತ್ರೆಯನ್ನು ಕೂಡ ಜಾತೀಯತೆಯ ಆಧಾರದ ಮೇಲೆ ವಿಭಾಗಿಸುವ ನಾವು ನಮ್ಮ ನಾಡಿಗೆ ಬಂದಿರುವ, ಮತಧರ್ಮದ ಸೋಂಕು ಇನಿತೂ ಇಲ್ಲದ, ಪರದೇಶಿಯಾದ ಕಮ್ಯೂನಿಸಮ್‌ಗೆ ಕೂಡ ಜನಿವಾರವನ್ನೊ ಶಿವದಾರವನ್ನೊ ನಾಮವನ್ನೊ ವಿಭೂತಿಯನ್ನೋ ಲಿಂಗವನ್ನೊ ಶಿಲುಬೆಯನ್ನೊ ತೊಡಿಸದೆ ಬಿಡುವುದಿಲ್ಲ ಎಂಬ ಆಶ್ಚರ್ಯಕರವಾದ ಚಿಹ್ನೆಗಳು ಕಂಡುಬರುತ್ತಿರುವ ಈ ಸಮಯದಲ್ಲಿ ಈ ವಿಚಾರವಾಗಿ ಎಷ್ಟು ಎಚ್ಚರಿಕೆಯಿಂದ ಮುಂದುವರಿದರೂ ಸಾಲದಾಗಿದೆ. ನಮ್ಮ ರಾಜ್ಯಾಂಗ ಎಂತಹ ವಿಶಾಲಹೃದಯದಿಂದ ಏನೇ ಕಾನೂನುಗಳನ್ನು ಮಾಡಿದ್ದರೂ ಜನತೆಯ ಹೃದಯ ಪರಿವರ್ತಿತವಾಗಿ ಆ ಭಾಗಗಳನ್ನು ಒಲಿದು ಅಪ್ಪಿಕೊಳ್ಳದಿದ್ದರೆ ನಾವು ಹೀಗೆ ಮುಂದುವರಿಯಬೇಕಾಗುತ್ತದೆ. ನಮ್ಮ ರಾಜಕೀಯ ಜೀವನ, ನಮ್ಮ ಪ್ರಜಾಪ್ರಭುತ್ವ, ನಮ್ಮ ಮಹಾಚುನಾವಣೆಗಳು ನಮ್ಮನ್ನು ಹೇಗಾದರೂ ಸುಧಾರಿಸುತ್ತವೆ ಎಂಬ ನಂಬುಗೆಯೂ ನಡುಗುವಂತಾಗುತ್ತಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಹಾಗೂ ಜನಹೃದಯಸಾಗರವನ್ನು ಕಡೆಯುವ ಮಹಾಚುನಾವಣೆ ನಮ್ಮಲ್ಲಿ ಪ್ರಜಾಪ್ರಭುತ್ವದ ತತ್ವ್ತವನ್ನು ಬಿತ್ತಿ, ನಮ್ಮ ಸಮನ್ವಯ ದೃಷ್ಟಿಯನ್ನು ವಿಸ್ತರಿಸುವುದಕ್ಕೆ ಬದಲಾಗಿ, ನಾಲ್ಕು ವರ್ಷದ ಅವಧಿಯಲ್ಲಿ ಕೊಂಚ ಸಮಾಧಾನ ಹೊಂದಿ ತಣ್ಣಗಾಗಿ ಕಡಲ ತಳಕ್ಕೆ ಇಳಿದು ಕುಳಿತು ಕ್ರೋಧ ಅಸೂಯೆ ಸ್ಪರ್ಧೆ ವೈರ ಜಾತಿಮಾತ್ಸರ್ಯ ದ್ವೇಷ ದುರ್ಬುದ್ಧಿ ಸ್ವಾರ್ಥತೆ ಇತ್ಯಾದಿ ಭಾವೋನ್ಮಾದ ಬುದ್ಧಿ ಭ್ರಾಂತಿಗಳನ್ನೆಲ್ಲ ಕಡೆದೆಬ್ಬಿಸಿ ಹೊಡೆದುಬ್ಬಿಸಿ ಎಂತಹ ಅನಾಹುತವಾಗುತ್ತಿದೆ ಎನ್ನುವುದನ್ನು ತಿಳಿದವರೆಲ್ಲ ಬಲ್ಲರು. ಸಾಹಿತ್ಯ ಈ ವಿಷವನ್ನೆಲ್ಲ ಈಂಟುವ ನೀಲಕಂಠನಾಗಬೇಕು; ಅಮೃತವನ್ನು ಹಂಚುವ ದಿವ್ಯಮೋಹಿನಿಯಾಗಬೇಕು.

ಸಂಸ್ಕೃತಿಯ ಏಳಿಗೆಗೆ ತಳಹದಿಯಾಗುವ ಲೌಕಿಕದ ಚೌಕಟ್ಟಿನ ಸಾಧನೆಗಾಗಿಯೆ ಜನತೆ ಭಾಷಾನುಗುಣ ಪ್ರಾಂತಗಳನ್ನು ಬಯಸಿದ್ದು. ಆಯಾ ಚೌಕಟ್ಟಿನ ಪರಿಮಿತಿಯಲ್ಲಿ ಆಯಾ ದೇಶಭಾಷೆ ತನ್ನ ಎಲ್ಲ ವ್ಯವಹಾರಗಳನ್ನೂ ನಡೆಸಬೇಕಾಗಿದೆ. ಆ ವಿಚಾರವಾಗಿ ನಮ್ಮ ಬುದ್ಧಿಯಲ್ಲಿ ಯಾವ ಅನಿಶ್ಚಯತೆಯನ್ನೂ ಇಟ್ಟುಕೊಳ್ಳಬಾರದು. ಪ್ರದೇಶ ಪ್ರದೇಶಗಳ ಮತ್ತು ಪ್ರದೇಶ ಕೇಂದ್ರಗಳ ವ್ಯವಹಾರದ ಸಲುವಾಗಿ ನಮ್ಮ ರಾಜ್ಯಾಂಗ ಒಂದು ಭಾಷೆಯನ್ನೊಪ್ಪಿಕೊಂಡಿದೆ. ಆದರೆ ಆ ಭಾಷೆ ನಮಗೆ ಬರಿಯ ಭಾಷಾದೃಷ್ಟಿಯಿಂದ ಮಾತ್ರವೆ ಬೇಕಾಗಬಹುದಾದ್ದು, ವ್ಯಾವಹಾರಿಕ ಮಟ್ಟದಲ್ಲಿ. ಅದೂ ಎಲ್ಲರಿಗಲ್ಲ. ಅಂತಹ ವ್ಯವಹಾರಗಳಲ್ಲಿ ಭಾಗವಹಿಸುವವರಿಗೆ ಮಾತ್ರ. ಆಯಾ ಪ್ರದೇಶದ ಸಾಮಾನ್ಯ ಜನತೆಯ ದೈನಂದಿನ ವ್ಯವಹಾರಕ್ಕೂ ಭಾವ ಹಾಗೂ ಬುದ್ಧಿ ಪುಷ್ಟಿಯ ಸಾಧನೆಗೂ ವಿಶೇಷವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಕ ವಿಕಾಸಕ್ಕೂ ಬೇಕಾದುದು ಆಯಾ ದೇಶಭಾಷೆಯೆ. ಆದ್ದರಿಂದ ಆಯಾ ದೇಶ ಭಾಷೆಗಳ ವಿಷಯದಲ್ಲಿ ಆಯಾ ಪ್ರದೇಶಗಳು ಎಷ್ಟು ಶ್ರಮಿಸಿದರೂ ಸಾಲದಾಗಿದೆ; ಎಷ್ಟು ಪ್ರೋತ್ಸಾಹ ಕೊಟ್ಟರೂ ಎಂದಿಗೂ ಅತಿರೇಕ ಎನ್ನಿಸಿಕೊಳ್ಳಲಾರದು. ಸರಕಾರಗಳಾಗಲಿ, ವಿದ್ಯಾಭ್ಯಾಸ ಇಲಾಖೆಗಳಾಗಲಿ, ವಿಶ್ವವಿದ್ಯಾನಿಲಯಗಳಾಗಲಿ, ಇತರ ಸಾಂಸ್ಕೃತಿಕ ಸಂಸ್ಥೆಗಳಾಗಲಿ, ಕಡೆಗೆ ವ್ಯಾಪಾರ ವಾಣಿಜ್ಯಾದಿ ಸಂಸ್ಥೆಗಳಾಗಲಿ ದೇಶಭಾಷೆಗೇ ಮೊತ್ತಮೊದಲನೆಯ ಸ್ಥಾನ ಕೊಡಬೇಕು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದ ಬುಡದ ಬೇರಿಗೆ ಬೆನ್ನೀರೆರೆದಂತಾಗುತ್ತದೆ; ದೇಶದ ಮಕ್ಕಳು ತಾವರಿಯದ ಇತರ ಭಾಷೆಗಳ ಹೊರೆಯನ್ನು ಹೊತ್ತು, ಯಾವುದನ್ನೂ ಸರಿಯಾಗಿ, ಅರಿಯಲಾರದೆ, ಏನನ್ನೂ ಚೆನ್ನಾಗಿ ಅರಗಿಸಿಕೊಳ್ಳಲಾರದೆ, ಈಗಿರುವಂತೆಯೆ ಕುಂಟುತ್ತಾ ತಡವುತ್ತಾ, ನಿಂತವರು ನಿಲ್ಲಲಿ, ಬಿದ್ದವರು ಬೀಳಲಿ, ಸೋತವರು ಸೋಲಲಿ, ಪಯಣ ಹೊರಟ ನೂರರಲ್ಲಿ ತೊಂಬತ್ತೊಂಬತ್ತು ಹಿಂದುಳಿದು, ಆ ಕೊನೆಯ ಅದೃಷ್ಟಶಾಲಿಯೂ ಅರ್ಧಮಾತ್ರನಾಗಿ, ಏದುತ್ತಾ, ಗುರಿಯ ಬಳಿಸಾರುತ್ತಿರುವ ಇಂದಿನ ದುರ್ಗತಿಯನ್ನೇ ನಾವು ಪ್ರಗತಿ ಎಂದು ಕರೆದುಕೊಳ್ಳುತ್ತಾ ಆತ್ಮವಂಚಕರಾಗಿ ಸಾಗಬೇಕಾಗುತ್ತದೆ.

ನಮ್ಮ ಭರತವರ್ಷದ ಜನಜೀವನದಲ್ಲಿ ಬೇರೆಬೇರೆ ಭಾಷೆಗಳ ಸ್ಥಾನ ಹೇಗೆ ಇರಬೇಕು ಎಂಬುದನ್ನು ಅನೇಕ ವರ್ಷಗಳ ಹಿಂದೆಯೇ ನಮ್ಮ ಸ್ವಾತಂತ್ರ್ಯಶಿಲ್ಪಿ ಪೂಜ್ಯ ಮಹಾತ್ಮ ಗಾಂಧಿಜಿಯೆ ಉಳಿದವರಿಗೆ ಸಾಧ್ಯವಾಗದಿರಬಹುದಾದ ನಿಷ್ಪಕ್ಷಪಾತ ದೃಷ್ಟಿಯಿಂದಲೂ ವಿವಿಧ ಭಾಷಾಪ್ರದೇಶಗಳ ಮತ್ತು ಪೂರ್ಣರಾಷ್ಟ್ರದ ಸರ್ವಹಿತದೃಷ್ಟಿಯಿಂದಲೂ ಸ್ಪಷ್ಟವಾಗಿ ಸಾರಿದ್ದಾರೆ. ಅವರು ಇಡಿಯ ರಾಷ್ಟ್ರದ ವ್ಯವಹಾರಕ್ಕೆ ಹಿಂದಿಯನ್ನೂ ಪ್ರದೇಶಗಳ ವ್ಯಾವಹಾರಿಕ ಸಾಹಿತ್ಯಿಕ ವೈಜ್ಞಾನಿಕ ಆಧ್ಯಾತ್ಮಿಕಾದಿ ಸಕಲಕ್ಕೂ ಆಯಾ ದೇಶಭಾಷೆಗಳನ್ನೂ, ಆವಶ್ಯಕವಾಗಿ ಕೆಲವರಿಗೆ ಮಾತ್ರ ಬೇಕಾಗಿರುವ ರಾಯಭಾರ ಮೊದಲಾದ ಅಂತರರಾಷ್ಟ್ರಿಯ ವ್ಯವಹಾರ ಮತ್ತು ವೈಜ್ಞಾನಿಕ ವ್ಯಾಸಂಗಾದಿ ವಿಷಯಗಳಿಗಾಗಿ ಇಂಗ್ಲಿಷನ್ನೂ ನಿರ್ದೇಶಿಸಿದ್ದಾರೆ. ಅದು ಸರ್ವಸಮರ್ಪಕವೂ ಬಹುಜನಸಮ್ಮತವೂ ಆಗಿದೆ. ನಾವು ಆ ಮಾರ್ಗದರ್ಶನದಲ್ಲಿಯೆ ಮುಂದುವರಿಯುವುದು ಲೇಸು.

ನಮ್ಮ ವಿದ್ಯಾಭ್ಯಾಸಕ್ರಮದಲ್ಲಿ ಇಂಗ್ಲಿಷಿಗಿರುವ ಕೃತಕಪ್ರಾಮುಖ್ಯವನ್ನಂತೂ ಸ್ವದೇಶೀಯ ವಿದೇಶಿಯರಾದಿಯಾಗಿ ವಿದ್ಯಾಶಾಸ್ತ್ರಜ್ಞರೂ ಮನಃಶಾಸ್ತ್ರಜ್ಞರೂ ದೇಶಭಕ್ತರೂ ರಾಷ್ಟ್ರನಿರ್ಮಾಣಕರೂ ಪ್ರವೀಣರೂ ಪ್ರಾಧ್ಯಾಪಕರೂ ಎಲ್ಲರೂ ಖಂಡಿಸಿದ್ದಾರೆ, ಖಂಡಿಸುತ್ತಲೂ ಇದ್ದಾರೆ. ಆದರೆ ಆ ಸಂಕೋಲೆಯಿಂದ ನಾವಿನ್ನೂ ಬಿಡುಗಡೆ ಹೊಂದಲು ಸಾಧ್ಯವಾಗಿಲ್ಲ. ಸಂಕೋಲೆಯ ಭಾರವೆ ಅಭ್ಯಾಸವಾಗಿ ನಡೆ ಕಲಿತ ಕೆಲವರಿಗೆ ಅದರಿಂದ ಬಿಡುಗಡೆಹೊಂದುವ ಇಷ್ಟವೂ ಇಲ್ಲ. ಅಷ್ಟೆ ಅಲ್ಲ; ಹಾಗೆ ಸಂಕೋಲೆ ಹಾಕಿಕೊಳ್ಳದೆ ಕಲಿತ ನಡೆ ಶಿಷ್ಟಾಚಾರ ಸಮ್ಮತವಾಗುವುದಿಲ್ಲ ಎಂಬ ಹಾಸ್ಯಾಸ್ಪದವಾದ ಅಭಿಪ್ರಾಯವನ್ನುಳ್ಳವರಾಗಿದ್ದಾರೆ. ಹೊರಗಣ ಸಂಕೋಲೆಯಿಂದ ಬಿಡುಗಡೆಹೊಂದುವಷ್ಟು ಸುಲಭವಾದುದಲ್ಲ ಅಂತರ್ದಾಸ್ಯವಿಮೋಚನೆ.

ಆದರೂ ಈ ಇಂಗ್ಲಿಷ್ ಚಪ್ಪಡಿಯ ಭಾರಾಪಘಾತದಿಂದ ಜನಸಾಮಾನ್ಯರ ಬಹುಸಂಖ್ಯಾತ ಮಕ್ಕಳನ್ನು ಪಾರುಮಾಡಿ ರಕ್ಷಿಸದಿದ್ದರೆ ನಾವು ವಿದ್ಯಾಭ್ಯಾಸಕ್ಕಾಗಿ ವ್ಯಯಮಾಡುತ್ತಿರುವ ಕೋಟ್ಯಂತರ ರೂಪಾಯಿ ನೀರಿನಲ್ಲಿ ಮಾಡಿದ ಹೋಮವಾಗುತ್ತದೆ. ಸ್ವಾತಂತ್ರ್ಯ ಪೂರ್ವಕಾಲದಲ್ಲಿಯೆ ಗಾಂಧೀಜಿ ಹೀಗೆ ಹೇಳಿದ್ದರು: “ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡುಮಾಡಿದೆ; ಅವರ ನರಗಳನ್ನು ದುರ್ಬಲಗೊಳಿಸಿದೆ. ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ; ಪ್ರತಿಭಾನ್ವಿತವಾದ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ… ನಾನಿಂದು ಸರ್ವಾಧಿಕಾರಿಯಾಗಿದ್ದರೆ ಈ ಕೂಡಲೆ ಪರಭಾಷೆಯ ಮೂಲಕದ ವಿಧ್ಯಾಭ್ಯಾಸವನ್ನು ನಿಲ್ಲಿಸುತ್ತಿದ್ದೆ. ಹೊಸ ಸುಧಾರಣೆಗಳನ್ನು ಜಾರಿಗೆ ತರುವಂತೆ ಅಧ್ಯಾಪಕರಿಗೆ ಆಜ್ಞೆಮಾಡುತ್ತಿದ್ದೆ. ಇಷ್ಟವಿಲ್ಲದವರು ಕೆಲಸ ಕಳೆದುಕೊಳ್ಳುತ್ತಿದ್ದರು. ಪಠ್ಯ ಪುಸ್ತಕಗಳಿಗಾಗಿ ಕಾಯಬೇಕಾಗಿಲ್ಲ. ಅವು ಅನಂತರ ತಾವಾಗಿಯೇ ಬೆಳಕಿಗೆ ಬರುತ್ತವೆ… ಅಂತರರಾಷ್ಟ್ರೀಯ ರಾಜಕೀಯ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಆಂಗ್ಲಭಾಷೆ ಅತ್ಯಾವಶ್ಯಕ ಎಂದು ನನಗೆ ಗೊತ್ತು. ಆದ್ದರಿಂದ ಅದನ್ನು ಕೆಲವರು ಕಲಿತರೆ ಸಾಕು. ಅದು ಉತ್ತಮ ಆಲೋಚನೆಗಳ ಮತ್ತು ಉತ್ತಮ ಸಾಹಿತ್ಯದ ಅಕ್ಷಯನಿಧಿಯೂ ನಿಜ. ಹೆಚ್ಚು ಭಾಷೆಗಳನ್ನು ಕಲಿಯಲು ಸಾಮರ್ಥ್ಯ ಮತ್ತು ಅವಕಾಶ ಇರುವವರು, ಅದನ್ನು ಕಲಿತು, ಅದರಲ್ಲಿರುವ ಸಾರಸರ್ವಸ್ವವನ್ನು ದೇಶ ಭಾಷೆಗಳಿಗೆ ಇಳಿಸಲಿ… ಪರಭಾಷೆಯ ಮೂಲಕದ ಶಿಕ್ಷಣದಿಂದ ರಾಷ್ಟ್ರಕ್ಕೆ ಆಗುತ್ತಿರುವ ಜ್ಞಾನಹಾನಿ ಮತ್ತು ನೈತಿಕನಷ್ಟ ಅಷ್ಟಿಷ್ಟಲ್ಲ. ಆ ನಷ್ಟವೆಷ್ಟು ಎಂಬುದನ್ನು ಬಹುಶಃ ನಮಗಿಂತ ಮುಂದಿನ ಪೀಳಿಗೆಯವರು ಅರಿಯಬಲ್ಲರು.. ನಾವು ಆಂಗ್ಲಭಾಷೆಯ ಗದ್ಯದ ಮತ್ತು ಪದ್ಯದ ಅನೇಕ ಪುಸ್ತಕಗಳನ್ನು ಓದಬೇಕಾಗಿತ್ತು.. ಆ ಏಳು ವರ್ಷಗಳ ಕಾಲ ಗುಜರಾತಿಯನ್ನೂ, ಗುಜರಾತಿಯ ಮೂಲಕ ಇತರ ವಿಷಯಗಳನ್ನೂ ಕಲಿತಿದ್ದರೆ ನನ್ನ ನೆರೆಯವರಿಗೂ ಆ ತಿಳಿವನ್ನು ಸುಲಭವಾಗಿ ಹಂಚಬಹುದಾಗಿತ್ತು; ಗುಜರಾತಿ ಸಾಹಿತ್ಯವನ್ನೂ ಬೆಳೆಸಬಹುದಾಗಿತ್ತು. ಜನತೆಗೆ ಇನ್ನೂ ಹೆಚ್ಚಿನ ಸೇವೆ ಸಲ್ಲುತ್ತಿತ್ತು… ಪರಿಸ್ಥಿತಿ ಏನೇ ಇರಲಿ, ಈ ಕೂಡಲೆ ಶಿಕ್ಷಣ ಮಾಧ್ಯಮ ಬದಲಾವಣೆ ಹೊಂದಬೇಕು. ದೇಶಭಾಷೆಗಳಿಗೆ ಯೋಗ್ಯವಾದ ಸ್ಥಾನ ಲಭಿಸಬೇಕು. ಈ ಮಾರ್ಪಾಡಿನಿಂದ ಅಲ್ಪ ಸ್ವಲ್ಪ ಗೊಂದಲ ಕಳವಳ ತಲೆದೋರಿದರೂ ಅವೆಲ್ಲ ತಾತ್ಕಲಿಕವಾದುವು. ಆದರೆ ದಿನದಿನಕ್ಕೂ ಆಗುತ್ತಿರುವ ನಷ್ಟ ಒಟ್ಟುಗೂಡಿ ಕೊನೆಗೆ ಸರ್ವನಾಶ ಸಂಭವಿಸುವುದಕ್ಕಿಂತ ಸ್ವಲ್ಪಕಾಲ ಗೊಂದಲದ ಪರಿಸ್ಥಿತಿ ಸಂಭವಿಸಿದರೂ ಚಿಂತೆಯಿಲ್ಲ… ಈ ಶಿಕ್ಷಣ ಮಾಧ್ಯಮ ಪ್ರಶ್ನೆಯನ್ನು ವಿದ್ಯಾಪ್ರವೀಣರ ಎಂದರೆ Academicians ಎನ್ನಿಸಿಕೊಳ್ಳುವವರ ತೀರ್ಮಾನಕ್ಕೆ ಬಿಡುವುದು ಸರಿಯಲ್ಲವೆಂದೇ ನನ್ನ ಅಭಿಪ್ರಾಯ. ಹುಡುಗರಿಗೆ ಯಾವ ಭಾಷೆಯ ಮೂಲಕ ಪಾಠ ಹೇಳಿಕೊಡಬೇಕೆಂಬುದನ್ನು ಅವರು ಹೇಗೆ ನಿರ್ಣಯಿಸಿಯಾರು? ಪ್ರತಿಯೊಂದು ಸ್ವತಂತ್ರ ದೇಶದಲ್ಲಿಯೂ ಈ ಪ್ರಶ್ನೆ ಆದಿಯಲ್ಲಿಯೇ ನಿರ್ಧರವಾಗುತ್ತದೆ. ಹಾಗೆಯೆ ಯಾವ ವಿಷಯವನ್ನು ಕಲಿಸಬೇಕೆಂಬುದನ್ನೂ ಅವರು ನಿರ್ಧರಿಸಲಾರರು. ಆಯಾ ದೇಶದ ಅರಕೆ ಆವಶ್ಯಕತೆಗಳಿಗನುಗುಣವಾಗಿ ಅದನ್ನು ಗೊತ್ತುಪಡಿಸಬೇಕಾಗಿದೆ. ರಾಷ್ಟ್ರದ ಇಚ್ಛೆಯನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಿರುಗಿಸುವುದಷ್ಟೆ ಅವರ ಕರ್ತವ್ಯ. ಈ ದೇಶ ಸ್ವತಂತ್ರವಾದ ಕೂಡಲೆ ಶಿಕ್ಷಣಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗುಳಿಯುವುದಿಲ್ಲ..”

ಅಯ್ಯೋ ಪಾಪ, ಅವರು ಎಂತಹ ಅತಿ ಆಶಾವಾದಿ! ದೇಶ ಸ್ವತಂತ್ರವಾದ ಕೂಡಲೆ ಈ ಪ್ರಶ್ನೆ ಪ್ರಶ್ನೆಯಾಗುಳಿಯುವುದಿಲ್ಲ ಎಂದರು. ಸುಮಾರು  ಇಪ್ಪತ್ತು ವರ್ಷಗಳ ಹಿಂದೆಯೇ! ದೇಶ ಸ್ವತಂತ್ರವಾಗಿ ಹತ್ತು ವರ್ಷ ಕಳೆದುದಾಗಿದೆ. ಅವರ ಭಾಷಾನುಗುಣ ಪ್ರಾಂತರಚನೆಯ ಬುದ್ಧಿವಾದವನ್ನೆ ತಲೆಕೆಳಗು ಮಾಡಲೆಳಸಿ ಚಿತ್ರವಿಚಿತ್ರವಾಗಿ ವಾದಿಸಿದೆವು ನಾವು. ಆದರೂ ಅವರ ಆಶೀರ್ವಾದದಿಂದ ಅವರು ಹೇಳಿದಂತೆಯ ಕಡೆಗೂ ಆಗಿ, ರಾಷ್ಟ್ರಕ್ಷೇಮ ಭದ್ರವಾಯಿತು. ಹಾಗೆಯ ‘ದೇಶಭಾಷೆಗೆ ಪ್ರಥಮಸ್ಥಾನ ದೊರೆಯಬೇಕು; ದೇಶಭಾಷೆಯೆ ಶಿಕ್ಷಣಮಾಧ್ಯಮವಾಗಬೇಕು’ ಎಂದ ಅವರ ಹಿತಬೋಧನೆಯನ್ನು ನಮ್ಮಲ್ಲಿ ಕೆಲವರು ಇಂದು ಪ್ರಶ್ನಿಸಿ, ಅಲಕ್ಷಿಸಿ, ಅವರು ಮಹಾತ್ಮರಾದರೂ ವಿದ್ಯಾಭ್ಯಾಸಶಾಸ್ತ್ರಜ್ಞರಲ್ಲದ ಅವರ ಅಭಿಪ್ರಾಯ ಬರಿಯ ಭಾವೋಲ್ಲಾಸವೆ ಹೊರತು ಅನುಸರಣಯೋಗ್ಯವಾಗಲಾರೆಂದು ವಾದಿಸುತ್ತಿದ್ದಾರೆ. ಭಾಷಾಪ್ರಾಂತ ರಚನೆಯ ವಿಷಯದಲ್ಲಿ ಆದಂತೆಯೆ ಈ ವಿಷಯದಲ್ಲಿಯೂ ಕೊನೆಗೂ ಅವರು ಹಾಕಿರುವ ಗೆರೆಯ ಮೇಲೆಯೆ ನಾವು ನಡೆಯಬೇಕಾಗುತ್ತದೆ, ನಡೆದೂ ನಡೆಯುತ್ತೇವೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಆದರೆ ಜನತೆ ಬುದ್ಧಿಸೋಮಾರಿಯಾಗಿ ವರ್ತಿಸಿ, ಹತ್ತಿರದಲ್ಲಿರುವ ಮಂಗಳವನ್ನು ದೂರಕ್ಕೆ ತಳ್ಳಬಾರದು. ಕೋಟಿ ಕೋಟಿ ಭಾರತೀಯ ಮಕ್ಕಳ ಮನಶ್ಯಕ್ತಿಯ ವೃಥಾವ್ರಯದಿಂದ ರಾಷ್ಟ್ರಕ್ಕೆ ವರ್ಷ ವರ್ಷವೂ ಒದಗುತ್ತಿರುವ ಅಪಾರ ಧನ ಬುದ್ಧಿ ಧೈರ್ಯ ನಷ್ಟಗಳಿಂದಾಗುವ ಚೈತನ್ಯಹಾನಿಯನ್ನು ತಪ್ಪಿಸಬೇಕೆಂದು ಪ್ರಾರ್ಥಿಸುತ್ತೇನೆ.

ದೇಶಭಾಷೆಗಳ ಪರವಾಗಿ ಗಾಂಧೀಜಿ ಆ ಮಾತುಗಳನ್ನು ಹೇಳಿ ಇಪ್ಪತ್ತು ವರ್ಷಗಳ ಮೇಲಾಯಿತು. ಈ ಇಪ್ಪತ್ತು ವರ್ಷಗಳಲ್ಲಿ ಸೇತುವೆಯ ಕೆಳಗೆ ಎಷ್ಟೋ ನೀರು ಹರಿದುಹೋಗಿದೆ. ನಮ್ಮ ದೇಶಭಾಷೆಗಳ ಸ್ಥಿತಿ ಅಂದು ಇದ್ದಂತಿಲ್ಲ. ಬುದ್ಧಿಸಾಹಿತ್ಯ, ಭಾವಸಾಹಿತ್ಯ, ವಿಜ್ಞಾನಸಾಹಿತ್ಯಾದಿ ನಾನಾ ಪ್ರಕಾರಗಳಲ್ಲಿ ಅವು ಅದ್ಭುತವಾಗಿ ಮುಂದುವರಿದಿವೆ. ಕೇಂದ್ರದ ಸಾಹಿತ್ಯ ಅಕಾಡೆಮಿಯಂತಹ ಅಖಿಲಭಾರತ ಸಂಸ್ಥೆ ಆ ಪ್ರಗತಿಯನ್ನು ಗುರುತಿಸಿ ಅವುಗಳಿಗೆ ಅನೇಕ ವಿಧವಾಗಿ ಪ್ರೋತ್ಸಾಹ ನೀಡುತ್ತಿದೆ. ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಸಮಕಾಲೀನ ಭಾರತೀಯ ಸಾಹಿತ್ಯ’ (Contemporary Indian Literature) ಎಂಬ ಪುಸ್ತಕವನ್ನು ಸಾಕ್ಷಿಯಾಗಿಟ್ಟುಕೊಳ್ಳುವುದಾದರೆ ಎಲ್ಲ ದೇಶಭಾಷೆಗಳೂ, ಗ್ರಂಥಸಂಖ್ಯೆ ಪುಸ್ತಕಗಾತ್ರಗಳಲ್ಲಿ ಅಲ್ಲದಿದ್ದರೂ, ವೈವಿಧ್ಯದಲ್ಲಿ ಔನ್ನತ್ಯದಲ್ಲಿ ವಿಸ್ತಾರದಲ್ಲಿ ಗುಣದಲ್ಲಿ ಪ್ರಪಂಚದ ಇತರ ಯಾವ ಭಾಷೆಗಳಿಗೂ ಬಿಟ್ಟು ಕೊಡದ ರೀತಿಯಲ್ಲಿ, ಅವುಗಳಿಗೆ ಹೆಗಲೆಣೆಯಾಗಿ ಹೊಯ್‌ಕಯ್ಯಾಗಿ ಮುಂದುವರಿಯುತ್ತಿವೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.

ಇತರ ದೇಶಭಾಷಾಸಾಹಿತ್ಯಗಳ ನೇರ ಪರಿಚಯವಿಲ್ಲದ ನಾನು ಇದುವರೆಗೆ ಆಂಗ್ಲಭಾಷೆ ಆಕ್ರಮಿಸಿದ್ದ ಸಿಂಹಾಸನಕ್ಕೆ ಏರಲು ಅವು ಎಷ್ಟರಮಟ್ಟಿಗೆ ಅರ್ಹವಾಗಿವೆ ಅಥವಾ ಸಿದ್ಧವಾಗಿವೆ ಎಂಬುದನ್ನು ಆಯಾ ಭಾಷೆಗಳವರು ಹೇಳುವಷ್ಟು ಧೈರ್ಯವಾಗಿ ವಾಸ್ತವಿಕಜ್ಞಾನದಿಂದ ಹೇಳಲಾರೆ. ಆ ಸಮರ್ಥನೆ ಏನಿದ್ದರೂ ಅದು ಅವರಿಗೆ ಸೇರಿದ್ದು. ಆದರೆ ಕನ್ನಡದ ಸಾಮರ್ಥ್ಯದ ಮತ್ತು ಅರ್ಹತೆಯ ವಿಚಾರವಾಗಿ ನಾನು ಸಿದ್ಧವಾಣಿಯಿಂದ ನುಡಿಯಬಲ್ಲೆನೆಂಬ ಧೈರ್ಯವಿದೆ. ಅಧಿಕಾರವೂ ಇದೆ ಎಂಬುದನ್ನು ತಾವು ನನ್ನನ್ನು ಈ ಅಧ್ಯಕ್ಷಸ್ಥಾನಕ್ಕೆ ಆರಿಸಿರುವುದರಿಂದಲೆ ಸದ್ಯಕ್ಕಾದರೂ ಸಿದ್ಧಾಂತಪಡಿಸಿದ್ದೀರಿ.

ಲೋಕಸಾಹಿತ್ಯಸೃಷ್ಟಿಯಲ್ಲಿಯೂ ಭಾವಸಾಹಿತ್ಯಸೃಷ್ಟಿಯಲ್ಲಿಯೂ ಕನ್ನಡ ಇಪ್ಪತ್ತು ಮೂವತ್ತು ವರ್ಷಗಳಿಂದ ಯಾವ ಭಾಷೆಯಾದರೂ ಹೆಮ್ಮೆಪಟ್ಟುಕೊಳ್ಳುವಷ್ಟರಮಟ್ಟಿಗೆ ಬೆಳೆದಿದೆ ಮತ್ತು ಬೆಳೆಯುತ್ತಿದೆ. ನಮ್ಮಲ್ಲಿ ಕೆಲವರು ಈ ವಿಚಾರವಾಗಿ ಮಾತನಾಡುವಾಗ ನೀಚೋಹಂ ಬುದ್ದಿಯಿಂದಲೊ ದಾಸೋಹಂ ಭಾವದಿಂದಲೊ ಅಥವಾ ನೈಚ್ಯಾನುಸಂಧಾನವೆ ವಿನಯದ ಲಕ್ಷಣ ಎಂದು ಭ್ರಮಿಸಿಯೊ ತುಂಬ ಸಂಕೋಚದಿಂದ, ದೈನ್ಯದಿಂದ, ದರಿದ್ರರು ಶ್ರೀಮಂತರೆದುರು ಕುಗ್ಗಿ ಕುನಿದು ವರ್ತಿಸುವಂತೆ ಮಾತನಾಡುತ್ತಾರೆ. ಅತಿಯಾದ ಆತ್ಮಶ್ಲಾಘನೆ ಸುಸಂಸ್ಕೃತಿಗೆ ಸಲ್ಲದೆಂದು ಒಪ್ಪಿಕೊಂಡರೂ ಆತ್ಯಾವಹೇಳನ ಆತ್ಮ ತಿರಸ್ಕಾರ ಆತ್ಮತೇಜೋವಧೆಗಳು ಅದಕ್ಕಿಂತಲೂ ಹೆಚ್ಚಿನ ಅಪಾಯಕ್ಕೆ ನಮ್ಮನ್ನು ಗುರಿಮಾಡುತ್ತವೆ. ಪ್ರವರ್ಧಮಾನ ಜೀವಕ್ಕೆ ಆತ್ಮಪ್ರತ್ಯಯ ಅತ್ಯಂತಾವಶ್ಯಕ.

ನಮ್ಮ ವಾಙ್ಮಯ ಕಾವ್ಯ, ಮಹಾಕಾವ್ಯ, ಕವನ, ಕಥೆ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ, ಪ್ರಬಂಧ, ಜೀವನಚರಿತ್ರೆ, ನಾಟಕ ಮೊದಲಾದ ಭಾವೋಪಯೋಗಿಯಾದ ಶಕ್ತಿಸಾಹಿತ್ಯ ಪ್ರಕಾರಗಳಲ್ಲಿ ಉತ್ತಮ ಫಲಗಳನ್ನು ಸಾಧಿಸಿದ ಎಂಬಷ್ಟರಿಂದಲೆ ಆಗಿದ್ದರೆ ನಮ್ಮ ಆಶಾವಾದ ಅತಿರೇಕದ ದೋಷಕ್ಕೆ ಪಕ್ಕಾಗುತ್ತಿತ್ತು. ಏಕೆಂದರೆ ರಸಾನುಭವ ನಮಗೆ ಎಷ್ಟೇ ಪ್ರಿಯವಾಗಿದ್ದರೂ ಆಧುನಿಕ ಜೀವನದ ಲೌಕಿಕ ಬಹುಮುಖತೆಯಲ್ಲಿ ನಾವು ಇತರರೊಡನೆ ಸ್ಪರ್ಧಿಸಿ ಮುಂದುವರಿಯಬೇಕಾದರೆ ಶಕ್ತಿಸಾಹಿತ್ಯಕ್ಕಿಂತಲೂ ಸಮಧಿಕ ಪ್ರಮಾಣದಲ್ಲಿ ಲೋಕೋಪಯೋಗಿಯಾದ ಜ್ಞಾನಸಾಹಿತ್ಯ ಬೆಳೆಯಬೇಕು. ವಿಜ್ಞಾನ, ಯಂತ್ರವಿದ್ಯೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸಂಶೋಧನಾತ್ಮಕವಾದ ಪ್ರೌಢಗ್ರಂಥಗಳೂ ಪ್ರಸಾರಾತ್ಮಕವಾದ ಜನಪ್ರಿಯ ಪುಸ್ತಕಗಳೂ ಹೇರಳವಾಗಿ ರಚಿತವಾಗಬೇಕು. ಈ ಕೆಲಸವೂ ಕಳೆದ ಕೆಲವು ವರ್ಷಗಳಲ್ಲಿ ತಕ್ಕಮಟ್ಟಿಗೆ ನಡೆದಿದೆ. ಹುಟ್ಟನ್ನು ದೋಣಿಯೊಳಗಿಟ್ಟುಕೊಂಡು ಕೃತಕೃತ್ಯರಾದೆವೆಂದು ನೆಮ್ಮದಿಯಾಗಿ ಕುಳಿತುಕೊಳ್ಳುವಷ್ಟರಮಟ್ಟಿಗೆ ಎಂದು ಯಾರೂ ಹೇಳುವುದಿಲ್ಲ. ಮಾಡಿರುವ ಕೆಲಸಕ್ಕೆ ಸಾವಿರ ಮಡಿಯಿದೆ ಮಾಡಬೇಕಾಗಿರುವ ಕೆಲಸ. ಆದರೆ ನಾವು ಸಾಧಿಸಿರುವ ಕಾರ್ಯದಿಂದ ಒಂದು ವಿಷಯ ಗೊತ್ತಾಗುತ್ತದೆ: ನಮ್ಮ ಭಾಷೆ ವೈಜ್ಞಾನಿಕವಾದ ಯಾವ ಹಳೆಯ ಅಥವಾ ಹೊಸ ವಿಷಯವನ್ನೇ ಆಗಲಿ, ಶಾಸ್ತ್ರೀಯವಾದ ಎಂತಹ ಗಹನ ಅಥವಾ ಸೂಕ್ಷ್ಮ ವಿಚಾರವನ್ನೆ ಆಗಲಿ ಅಭಿವ್ಯಕ್ತಪಡಿಸಲು ಸಂಪೂರ್ಣ ಸಮರ್ಥವಾಗಿದೆ ಎಂದು.

ವಿದ್ಯಾರ್ಥಿಗಳಾಗುವ ನಮ್ಮ ಮಕ್ಕಳ ಮೇಲೆ ನಮಗೇನಾದರೂ ಕರುಣೆಯಿದ್ದರೆ ಮೊದಲು ಅವರ ಎದೆಯ ಮೇಲೆ ಪರಕೀಯರು ಹೇರಿಟ್ಟು ಹೋಗಿರುವ ಹೆಣಭಾರದ ಹೊರಭಾಷೆಯ ಚಪ್ಪಡಿಯನ್ನು ಕಿತ್ತೊಗೆಯಬೇಕು. ಅವರ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಭಾವತುಷ್ಟಿ ಮತ್ತು ಬುದ್ದಿಪುಷ್ಟಿಗಳೆರಡನ್ನೂ ಕನ್ನಡದ ತಾಯ್ಮೊಲೆಯ ಮೂಲಕವೆ ಅವರು ಹೀರಿಕೊಳ್ಳುವಂತೆ ಅವಕಾಶ ಕಲ್ಪಿಸಬೇಕು. ಅವರ ಬೆಳವಣಿಗೆಗೆ ಬೇಕಾಗಿರುವ ಒಂದು ಬಟ್ಟಲು ಹಾಲನ್ನು ಮಣಭಾರದ ಇಂಗ್ಲಿಷ್ ಕಡಾಯಿಯಲ್ಲಿ ಹಾಕಿಕೊಟ್ಟರೆ ಅವರು ಕುಡಿಯುವುದೆಂತು? ಆ ಕಡಾಯಿ ಚಿನ್ನದ್ದೆ ಆಗಿರಬಹುದು; ಮುತ್ತು ರತ್ನದ ಕೆತ್ತನೆಗಳಿಂದ ಶೋಭಿಸಿ ಲೋಕಪ್ರಸಿದ್ಧವೆ ಆಗಿರಬಹುದು; ಜಗತ್ತಿನ ಮಾರುಕಟ್ಟೆಯಲ್ಲಿ ಅದಕ್ಕೆ ಅನರ್ಘ್ಯವಾದ ಬೆಲೆಯೂ ಇರಬಹುದು. ಹಾಗೆಂದು ಪುಷ್ಟಿ ಬೇಕಾಗಿರುವ ನಮ್ಮ ದುರ್ಬಲ ಮಕ್ಕಳನ್ನು ಆ ವ್ಯಾಮೋಹಪೂತನಿಗೆ ಬಲಿಗೊಡುವುದೇನು? ಅನೇಕ ಮಕ್ಕಳು ಆ ಹೊಂಗಡಾಯಿಯ ಮೆಯ್ಯನ್ನೆ ತಬ್ಬಿ, ನೆಕ್ಕಿ, ಚಿನ್ನದ ಬಣ್ಣದ ಕಣ್ಣಿನ ತಳುಕನ್ನೆ ನಾಲಗೆಯ ತುಷ್ಟಿಯನ್ನಾಗಿ ಭ್ರಮಿಸಿ ವಂಚಿತರಾಗುತ್ತಾರೆ. ಅವರಲ್ಲಿ ಸ್ವಲ್ಪ ಹೆಚ್ಚುಬಲಿಷ್ಟರಾದವರು, ಅಥವಾ ಬದುಕಬೇಕು ಬಾಳಬೇಕು ಎಂಬ ಹೇರಾಸೆಯ ಕೆಚ್ಚಿಗೆ ತುತ್ತಾದವರು, ಹುಟ್ಟಿನಿಂದ ಬಲಿಷ್ಠರಲ್ಲದಿದ್ದರೂ ಆ ಕಡಾಯಿಯನ್ನು ಎತ್ತರಲಾರದೆ ಎತ್ತಿ ಮೈಮೇಲೆ ಹಾಕಿಕೊಂಡು ಅದರಡಿ ಸಿಕ್ಕಿ ಜಜ್ಜಿಹೋಗುತ್ತಾರೆ. ಆಗಲೂ ಹಿರಿಯರಾದ ನಮ್ಮಲ್ಲಿ ಕೆಲವರು ‘ಸತ್ತರೂ ಚಿಂತೆಯಿಲ್ಲ’ ‘ಚಿನ್ನದ ಅಡಿಯಲ್ಲಿ ಸಿಕ್ಕಿ ಸಾಯುವುದು ಪುಣ್ಯವಲ್ಲವೆ?’ ಎಂದು ಸಮಾಧಾನ ತಂದುಕೊಳ್ಳುತ್ತಾರೆ! ಮತ್ತೆ ಕೆಲವು ಮಕ್ಕಳು ತಂದೆ ತಾಯಿಯರು ಬೆನ್ನಿಗೆ ಕೈಕೊಟ್ಟು ನೂಕುವುದರಿಂದಲೊ, ಅವರು ಬೆರಳೆತ್ತಿ ತೋರುವ ದಿಗಂತದಲ್ಲಿ ಹೊಲೆಯುವ ಐ.ಎ.ಎಸ್. ಮೊದಲಾದ ಭವಿಷ್ಯ ವೈಭವದ ಆಕರ್ಷಣೆಯಿಂದಲೊ, ಅಥವಾ ಶ್ರೀಮಂತರಾಗಿದ್ದರೆ ಒದಗುವ ಪ್ರೈವೇಟ್ ಟ್ಯೂಷನ್ ಆದಿ ಪ್ರಚಂಡ ಪ್ರೋತ್ಸಾಹದಿಂದಲೊ ಪ್ರೇರಿತರಾಗಿ ಕಡಾಯಿಯನ್ನೆತ್ತಿ, ಅದರ ತಳದ ಹಾಲನ್ನು ಬಾಯಿಗೆ ಹೊಯ್ದುಕೊಳ್ಳುವ ಸಾಹಸದಲ್ಲಿಯೆ ಇದ್ದ ಶಕ್ತಿಯನ್ನೆಲ್ಲ ಕಳೆದುಕೊಂಡು, ಹಾಲಿನ ಅರ್ಧವನ್ನು ಮೈಮೇಲೆಯ ಚೆಲ್ಲಿಕೊಂಡು, ಉಳಿದರ್ಧದಿಂದಲೆ ತಾವೂ ತೃಪ್ತರಾಗಿ, ತಂದೆ ತಾಯಿಯರ ನಿರಾಧಾರ ತೃಪ್ತಿಗೂ ಕಾರಣರಾಗುತ್ತಾರೆ. ಎಲ್ಲಿಯೋ ಲಕ್ಷಕ್ಕೆ ಒಂದು ಮಗು ಶ್ರೀಕೃಷ್ಣನಂತೆ ಹಾಲಿನೊಡನೆ ಪೂತನಿಯ ಜೀವವನ್ನೆ ಹೀರಿ ಬೆಳೆದು, ಎಲ್ಲರ ಕಣ್ಣಿಗೂ ಬರುವಂತಾದಾಗ, ನಾವು ಶತಮಾನಕಾಲದಲ್ಲಿ ಇಡಿಯ ಭರತಖಂಡದ ವಿಸ್ತಾರದಲ್ಲಿ ಕೋಟಿಕೋಟಿ ಜನಸಂಖ್ಯೆಯಲ್ಲಿ ಅಂತಹ ನಾಲ್ಕಾರು ವಿಭೂತಿಪುರುಷರನ್ನೂ ಪ್ರತಿಭಾಶಾಲಿಗಳನ್ನೂ ತೋರಿ, ನಮ್ಮ ಇಂಗ್ಲಿಷ್ ಮಾಧ್ಯಮದ ಸಾರ್ಥಕತೆಯನ್ನು ಸಿದ್ಧಾಂತಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಮೋಹಾಂಧವೊ ಅವಿವೇಕವೊ ಅಜ್ಞಾನವೊ ದೇವರೆ ಬಲ್ಲ! ಅಥವಾ ‘ಕಮ್ಯೂನಿಸಂ’ಗೆ ಈ ಸಮಸ್ಯೆಯ ಪರಿಹಾರ ಮೀಸಲಾಗಿದೆ ಎಂದು ಕಣಿ ಹೇಳುವವರ ಆಶೆಯ ಮಾತಿನಲ್ಲಿ ಹುರುಳಿದೆಯೊ ಏನೊ ಯಾರಿಗೆ ಗೊತ್ತು!

ಭಾರತದ ವಿವಿಧ ಪ್ರದೇಶಗಳಲ್ಲಿ ಪ್ರತಿವರ್ಷವೂ ಪ್ರೌಢ ಪರೀಕ್ಷೆಗಳಿಗೆ ಕೂರುವ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ನೂರಕ್ಕೆ ಐದರಿಂದ ಹತ್ತರವರೆಗೆ ತೇರ್ಗಡೆಹೊಂದುವುದೂ ಕಷ್ಟವಾಗಿದೆ. ಹೀಗೆ ಅನುತೀರ್ಣರಾಗುವುದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಬಹುಮುಖ್ಯವಾದ ಮತ್ತು ಮೂಲಭೂತವಾಗಿರುವ ಕಾರಣ ಶಿಕ್ಷಣ ಮಾಧ್ಯಮದಿಂದ ಸಂಭವಿಸುತ್ತಿದೆ. ಆಂಗ್ಲ ಭಾಷೆಯಲ್ಲಿ ಸ್ವತಂತ್ರವಾಗಿ ಸರಿಯಾಗಿ ಎರಡು ವಾಕ್ಯ ಬರೆಯಲಾರದ ವಿದ್ಯಾರ್ಥಿ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ತತ್ವ್ತಶಾಸ್ತ್ರ ಭೌತಶಾಸ್ತ್ರಾದಿ ಪ್ರಗಲ್ಭ ವಿಷಯಗಳನ್ನು ಕರಿತು ಪ್ರೌಢಪ್ರಬಂಧಗಳನ್ನು ಬರೆಯುವುದಾದರೂ ಹೇಗೆ? ಅವನಿಗೆ ಒಂದು ವೇಳೆ ವಿಷಯ ಗೊತ್ತಿದ್ದರೂ ತನಗೆ ಬರದ ಭಾಷೆಯಲ್ಲಿ ಅದನ್ನು ಅಭಿವ್ಯಕ್ತಗೊಳಿಸಲಾರದೆ ತಪ್ಪುತಪ್ಪಾಗಿ ಬರೆಯುತ್ತಾನೆ. ಇಲ್ಲವೆ, ಲಾಟರಿಯಲ್ಲಿ ಗೆದ್ದ ಹಾಗೆ, ಕೆಲವು ಪ್ರಶ್ನೆಗಳಿಗೆ ಉತ್ತರ ಬರೆಸಿ, ಅದನ್ನು ಉರುಹೊಡೆದು, ಅದೃಷ್ಟವಶಾತ್ ಅವೇ ಪ್ರಶ್ನೆಗಳು ಅಥವಾ ಅವುಗಳಿಗೆ ದೂರಸಂಬಂಧಿಗಳಾದರೂ ಸರಿಯೆ, ಬಂದಿದ್ದರೆ ಬಾಯಿಪಾಠ ಮಾಡಿದುದನ್ನೆಲ್ಲ ಉತ್ತರ ಪತ್ರಿಕೆಗೆ ಇಳಿಸಿ, ಗೆದ್ದೆ ಎಂದುಕೊಳ್ಳುತ್ತಾನೆ. ಒಮ್ಮೊಮ್ಮೆ ತೇರ್ಗಡೆಹೊಂದುವುದಲ್ಲದೆ ಪ್ರಥಮವರ್ಗವನ್ನೂ ಗಳಿಸುವುದುಂಟು! ಅಂದರೆ ವಾಸ್ತವವಾಗಿ ನಮ್ಮ ಪರೀಕ್ಷೆ ಜ್ಞಾನದ ಪರೀಕ್ಷೆಯಲ್ಲ; ಜ್ಞಾಪಕಶಕ್ತಿಯ ಮತ್ತು ಅದೃಷ್ಟದ ಪರೀಕ್ಷೆಯಾಗಿದೆ.

ಹಿಂದೆ ಹತ್ತು ಮಕ್ಕಳು ಓದುತ್ತಿದ್ದಲ್ಲಿ ಈಗ ಸಾವಿರ ಓದುತ್ತಾರೆ. ಹಿಂದೆ ಮುಂದುವರಿದ ನಾಗರಿಕತೆಯ ಕೇಂದ್ರಗಳಾಗಿದ್ದ ನಗರಗಳಲ್ಲಿ ಮಾತ್ರ ವಿದ್ಯಾಸಂಸ್ಥೆಗಳಿರುತ್ತಿದ್ದರೆ ಈಗ ಜಿಲ್ಲೆ ಜಿಲ್ಲೆಯ ತಾಲೂಕುಗಳಲ್ಲಿ ಹೋಬಳಿಗಳಲ್ಲಿ ಹಳ್ಳಿಗಳಲ್ಲಿ ಹೈಸ್ಕೂಲುಗಳೂ ಕಡೆಗೆ ಕಾಲೇಜುಗಳೂ ಹುಟ್ಟಿಕೊಂಡಿವೆ. ಹಿಂದೆ ಅನುವಂಶಿಕವಾಗಿ ವಿದ್ಯಾರ್ಜನೆ ಮಾಡುತ್ತಿದ್ದ ಉತ್ತಮ ವರ್ಗಕ್ಕೆ ಸೇರಿದ ಮನೆತನಗಳ ಮಕ್ಕಳು ಮಾತ್ರ ಶಾಲೆಗಳಿಗೆ ಬರುತ್ತಿದ್ದರೆ ಈಗ ಹಳ್ಳಿಯ ಮಕ್ಕಳು ಬಡವರ ಮಕ್ಕಳು ರೈತರ ಮಕ್ಕಳು ಕೂಲಿಗಳ ಮಕ್ಕಳಾದಿಯಾಗಿ ಎಲ್ಲ ವರ್ಗದಿಂದಲೂ ಮಕ್ಕಳು ಓದುವುದಕ್ಕೆ ಬರುತ್ತಾರೆ. ಇಂಗ್ಲಿಷ್ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿರುವ ಪಟ್ಟಣಗಳಲ್ಲಿಯೆ ಶ್ರೀಮಂತರು ಮತ್ತು ಹೆಚ್ಚು ಸಂಬಳ ಬರುವ ಅಧಿಕಾರವರ್ಗದವರಂತೆ ಪ್ರೈವೇಟ್ ಟ್ಯೂಷನ್‌ನ ಕವಾಯಿತು ಕೊಡಲಾರದ ಮಧ್ಯವರ್ಗದ ಮತ್ತು ಜನಸಾಮಾನ್ಯರ ಮಕ್ಕಳು ಆ ಭಾಷೆಯನ್ನು ಬರೆಹದ ಮಾಧ್ಯಮವಾಗಿ ಉಪಯೋಗಿಸುವಷ್ಟು ಕಲಿಯಲು ಸಾಧ್ಯವಾಗಿಲ್ಲ ಎಂದ ಮೇಲೆ ಇನ್ನು ಆ ಸೌಕರ್ಯಗಳಾವುವೂ ಇಲ್ಲದೆ ಅದಕ್ಕೆ ವಿರುದ್ಧವಾದ ವಾತಾವರಣವೂ ಇರುವ ಗ್ರಾಮಾಂತರದ ಮಕ್ಕಳ ಆಂಗ್ಲಭಾಷಾಜ್ಞಾನ ಯಾವ ಮಟ್ಟದ್ದಾದೀತು? ಅವರು ಇಂಗ್ಲಿಷ್ ಮಾಧ್ಯಮದಲ್ಲಿ ಏನು ವಿದ್ಯೆ ಗಳಿಸಿಯಾರು? ಯಾವ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿಯಾರು? ಸಾವಿರಾರು ಮಕ್ಕಳು ಒಂದು ಎರಡು ಮೂರು ನಾಲ್ಕು ವರ್ಷ ಪರೀಕ್ಷೆಗಳಲ್ಲಿ ಸೋತು ನಿರಾಶರಾಗಿ, ನಿಷ್ಪ್ರಯೋಜಕರೂ ಸಮಾಜಕಂಟಕರೂ ಆಗಿ ಮುಯ್ಯಿ ತೀರಿಸಿಕೊಳ್ಳುತ್ತಾರೆ. ಈ ಕೃತಕ ಪರಿಸ್ಥಿತಿಯಿಂದ ನಮ್ಮ ಮಕ್ಕಳನ್ನು ಎಷ್ಟು ಬೇಗ ಪಾರುಮಾಡಿದರೆ ಅಷ್ಟೂ ಕ್ಷೇಮವಾಗುತ್ತದೆ ದೇಶಕ್ಕೆ.

ವಿದ್ಯಾಭ್ಯಾಸದ ಉನ್ನತ ಮಟ್ಟದಲ್ಲಿ ಬೋಧಕ ಭಾಷೆಯಾಗುವಷ್ಟು ಸಿದ್ಧವಾಗಿದೆಯೆ ನಮ್ಮ ಭಾಷೆ? ವಿಜ್ಞಾನ ಶಾಸ್ತ್ರಗಳಲ್ಲಿ ಉಪಯೋಗಿಸುವ ಪರಿಭಾಷೆಯ ಪದಗಳಿಗೆ ಸಮಾನಪದಗಳಿವೆಯೇ ಕನ್ನಡ ಮಾಧ್ಯಮದಲ್ಲಿ ಪಾಠ ಹೇಳುವ ಅಧ್ಯಾಪಕರಿದ್ದಾರೆಯೆ? ಸ್ನಾತಕೋತ್ತರ ವಿಶೇಷ ವ್ಯಾಸಂಗಕ್ಕೂ ಸಂಶೋಧನೆಗೂ ಇಂಗ್ಲಿಷ್ ಭಾಷೆಯಿಲ್ಲದೆ ಸಾಧ್ಯವಾಗುತ್ತದೆಯೆ? ಉನ್ನತ ಸಂಶೋಧನೆಯ ಮಟ್ಟದಲ್ಲಿ ಭಾರತೀಯ ವಿವಿಧ ವಿಶ್ವವಿದ್ಯಾನಿಲಯಗಳ ನಡುವೆ ಪರಸ್ಪರ ಸಂಪರ್ಕಕ್ಕಾಗಿ ಇಂಗ್ಲಿಷಲ್ಲದೆ ಇನ್ನಾವುದರಲ್ಲಿ ವ್ಯವಹರಿಸಲು ಸಾಧ್ಯ? ಬೇರೆ ಬೇರೆ ಪ್ರದೇಶಗಳ ವಿಶ್ವವಿದ್ಯಾನಿಲಯಗಳು ಉನ್ನತ ಜ್ಞಾನ ಪ್ರಾಸಾರ ಮತ್ತು ವಿನಿಮಯಕ್ಕಾಗಿ ಪ್ರಾಧ್ಯಾಪಕರನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಯಾವುದಾದರೊಂದು ಸಾಮಾನ್ಯ ಭಾಷೆ ಬೇಡವೆ? ಜ್ಞಾನ ವಿಜ್ಞಾನ ವಿಷಯಗಳಲ್ಲಿ ಅತ್ಯಂತ ಶ್ರೀಮಂತವಾಗಿರುವ ಇಂಗ್ಲಿಷನ್ನು ಬಿಟ್ಟರೆ ನಮಗೆ ನಷ್ಟವಲ್ಲವೆ? ನಮ್ಮ ಮಕ್ಕಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಗಳಲ್ಲಿ ಪ್ರಕಾಶಕ್ಕೆ ಬರಲು ಅನುಕೂಲವಾಗುವಂತೆ ಅವರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸದಿದ್ದರೆ ಅನ್ಯಾಯ ಮಾಡಿದಂತಾಗುವುದಿಲ್ಲವೆ?

ಈ ಪ್ರಶ್ನೆಗಳೆಲ್ಲ ಒಂದೆ ಜಾತಿಯವೂ ಅಲ್ಲ, ಒಂದೆ ಭೂಮಿಕೆಗೆ ಸೇರಿದವೂ ಅಲ್ಲ. ಇಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ನಾವು ಕೊಡಬಹುದಾದ ಉತ್ತರವನ್ನು ಎಲ್ಲ ಸಮಸ್ಯೆಗಳಿಗೂ ಅನ್ವಯಿಸಲಾಗುವುದಿಲ್ಲ. ಉದಾಹರಣೆಗೆ: ಅಂತರರಾಷ್ಟ್ರಿಯ ರಂಗಗಳಲ್ಲಿ ಪ್ರಕಾಶಕ್ಕೆ ಬರಲು ಇಂಗ್ಲಿಷ್ ಅತ್ಯಾವಶ್ಯಕ ಎಂದು ನಾವು ಒಪ್ಪಿಕೊಂಡ ಮಾತ್ರಕ್ಕೆ ಇಂಗ್ಲಿಷ್ ಆವಶ್ಯಕ, ಆದ್ದರಿಂದ ಎಲ್ಲರೂ ಇಂಗ್ಲಿಷ್ ಕಲಿಯಬೇಕು, ಆದ್ದರಿಂದಲೆ ಇಂಗ್ಲಿಷನ್ನು ಕಡ್ಡಾಯವಾಗಿ ಎಲ್ಲರ ತಲೆಯ ಮೇಲೂ ಹೇರಬೇಕು, ಎಂದು ಊಹಿಸುವುದು ಅವಿವೇಕದ ಪರಮಾವಧಿಯಾದೀತು. ಒಂದು ದೇಶ ತನ್ನ ಮಕ್ಕಳಿಗೆ ಭಾಷೆಗಳನ್ನು ಕಲಿಸುವಾಗ ಯಾವ ಯಾವ ಭಾಷೆ ಯಾರು ಯಾರಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ಏತಕ್ಕಾಗಿ ಬೇಕಾಗುತ್ತದೆ ಎಂಬುದನ್ನು ಗೊತ್ತು ಮಾಡಿಕೊಳ್ಳಬೇಕು. ಇಂಗ್ಲಿಷ್ ಆಗಲಿ ಹಿಂದಿಯಾಗಲಿ ನಮ್ಮ ಮಕ್ಕಳಿಗೆ ಬೇಕು ಎಂದು ಮಾತ್ರಕ್ಕೆ ಯಾರಿಗೆ? ಎಷ್ಟು? ಏಕೆ? ಎಂಬುದಾವುದನ್ನೂ ಪರಿಗಣಿಸದೆ ವರ್ತಿಸಿದರೆ, ತೇನ್‌ಸಿಂಗ್ ಹಿಮಾಲಯದ ಶಿಖರೋನ್ನತಕ್ಕೆ ಏರಿ, ತಾವೂ ಪ್ರಖ್ಯಾತರಾಗಿ ಭಾರತಕ್ಕೂ ಗೌರವ ತಂದರು; ನಮ್ಮ ಮಕ್ಕಳಿಗೂ ಅಂತಹ ಸದವಕಾಶ ಕಲ್ಪಿಸಿ ಕೊಡಬೇಕು; ಆದ್ದರಿಂದ ಎಲ್ಲ ಮಕ್ಕಳಿಗೂ ಪರ್ವತಾರೋಹಣವನ್ನು ಕಡ್ಡಾಯದ ಶಿಕ್ಷಣ ವಿಷಯವನ್ನಾಗಿ ಕಲಿಸಬೇಕು ಎಂದಷ್ಟೇ ಮೂರ್ಖತನವಾಗುತ್ತದೆ. ಎಲ್ಲ ಮಕ್ಕಳ ಸಾಮರ್ಥ್ಯವೂ ಸಮಾನವಾದುದಲ್ಲ. ಎಲ್ಲ ಮಕ್ಕಳ ಜೀವಿತೋದ್ದೇಶವೂ ಒಂದೆ ತೆರನಾದುದಲ್ಲ. ಸಂಸ್ಕಾರದಲ್ಲಿ ಶಕ್ತಿಯಲ್ಲಿ ಜೀವಿತೋದ್ದೇಶದಲ್ಲಿ ರುಚಿ ಅಭಿರುಚಿಗಳಲ್ಲಿ ದೇಹಬಲ ಮೇಧಾಶಕ್ತಿಗಳಲ್ಲಿ ಅನುಕೂಲ ಅವಕಾಶಗಳಲ್ಲಿ ಮಕ್ಕಳು ಭಿನ್ನ ಭಿನ್ನ ವರ್ಗಸನ್ನಿವೇಶಗಳಿಗೆ ಸೇರಿದವರಾಗಿರುತ್ತಾರೆ. ಜೊತೆಗೆ ಸಮಾಜದ ಮತ್ತು ದೇಶದ ಆವಶ್ಯಕತೆಗಳ ದೃಷ್ಟಿಯಿಂದಲೂ ಆರ್ಥಿಕ ಶಕ್ತಿಯ ದೃಷ್ಟಿಯಿಂದಲೂ ಸಾಧನಸಿದ್ಧತೆಗಳ ದೃಷ್ಟಿಯಿಂದಲೂ ನಮ್ಮಲ್ಲಿರುವ ಅಲ್ಪ ಸ್ವಲ್ಪದರಿಂದಲೆ ಪರಮಾವಧಿ ಪ್ರಯೋಜನವನ್ನು ಸಾಧಿಸುವ ಯೋಜನೆಯನ್ನು ಕೈಕೊಳ್ಳಬೇಕಾಗಿದೆ.

ಕರ್ಣಾಟಕದಲ್ಲಿ ಎರಡು ವಿಶ್ವವಿದ್ಯಾನಿಲಯಗಳಿವೆ. ಎರಡೂ ಬೋಧನೆ ಮತ್ತು ಸಂಶೋಧನೆಗಳ ಜೊತೆಗೆ ವಿದ್ಯಾಪ್ರಸಾರವನ್ನು ತಮ್ಮ ಕರ್ತವ್ಯಾಂಗವನ್ನಾಗಿ ಭಾವಿಸಿ ಪ್ರಚಾರೋಪನ್ಯಾಸಗಳನ್ನು ಕೈಕೊಂಡು ಜನಸಾಮಾನ್ಯರಲ್ಲಿ ಜ್ಞಾನ ಮತ್ತು ವಿಜ್ಞಾನವಿಚಾರಗಳನ್ನು ಪ್ರಸಾರ ಮಾಡುತ್ತಿವೆ. ವಿಷಯ ಯಾವುದೆ ಆಗಲಿ, ಪ್ರಾಚೀನವೆ ಆಗಲಿ ನವೀನವೆ ಆಗಲಿ, ಸಾಹಿತ್ಯವೆ ಆಗಲಿ ವಿಜ್ಞಾನವೆ ಆಗಲಿ, ಪಂಪಕಾಳಿದಾಸರೆ ಆಗಲಿ ಅಣುಶಕ್ತಿ ರೇಡಾರ್‌ಗಳೆ ಆಗಲಿ, ಅದನ್ನು ಸಮಗ್ರವಾಗಿ ಸಮರ್ಪಕವಾಗಿ ವಿದ್ವತ್ ಪೂರ್ವಕವಾಗಿ ಸಾಮಾನ್ಯರೂ ಗ್ರಹಿಸುವಂತೆ ವಿಶೇಷಜ್ಞರೂ ಒಪ್ಪಿಕೊಳ್ಳುವಂತೆ ಭಾಷಣ ಮಾಡಬಹುದೆಂಬುದನ್ನು ಅಧ್ಯಾಪಕವರ್ಗದವರು ಕಳೆದ ಮೂವತ್ತು ವರ್ಷಗಳಿಂದ ತೋರಿಸಿಕೊಟ್ಟಿದ್ದಾರೆ ಮತ್ತು ತೋರಿಸುತ್ತಿದ್ದಾರೆ. ಸ್ವತಂತ್ರ್ಯವ್ಯಕ್ತಿಗಳೂ ವಿಶ್ವವಿದ್ಯಾನಿಲಯ ಸಂಸ್ಥೆಗಳೂ ಪ್ರಕಟಿಸುವ ಕಿರುಹೊತ್ತಿಗೆಗಳನ್ನೂ ಹೆಬ್ಬೊತ್ತಗೆಗಳನ್ನೂ ಸಮೀಕ್ಷಿಸಿದರೆ ಕನ್ನಡ ಭಾಷೆಗೆ ಇಂಗ್ಲಿಷ್ ಅಥವಾ ಜರ್ಮನ್ ಅಥವಾ ರಷ್ಯನ್ ಭಾಷೆಗಳು ಏನೇನು ವೈಜ್ಞಾನಿಕ ವಿಷಯಗಳನ್ನು ಹೇಳಬಲ್ಲವೊ ಅದೆಲ್ಲವನ್ನೂ ಅಷ್ಟೆ ಸ್ಪಷ್ಟವಾಗಿ ನಿಷ್ಕೃಷ್ಟವಾಗಿ ಹೇಳುವ ಶಕ್ತಿ ಸಿದ್ಧವಾಗಿದೆ ಎಂಬುದು ಎಂತಹ ಸಂದೇಹಗ್ರಸ್ತನಿಗೂ ವಿದಿತವಾಗುತ್ತದೆ. ಉದಾಹರಣೆಗಾಗಿ ಮಾತ್ರ ಕೆಲವನ್ನಿಲ್ಲಿ ಹೆಸರಿಸುತ್ತೇನೆ, ಏಣು ಕೆಲಸ ನಡೆದಿದೆ, ಎಷ್ಟು ವಿವಿಧ ರೂಪದಲ್ಲಿ, ಎಂಬುದಕ್ಕೆ ದಿಕ್‌ಸೂಚಿಯಾಗಲಿ ಎಂದು: ಆರೋಗ್ಯ, ಅದರ ಜ್ಞಾನ ಮತ್ತು ಸಾಧನೆ; ಜೀವ ವಿಜ್ಞಾನ; ಪ್ರಾಣಿಶಾಸ್ತ್ರ; ಜಗತ್ತುಗಳ ಹುಟ್ಟು ಸಾವು; ಶಕ್ತಿ; ಪದಾರ್ಥ ವಿಜ್ಞಾನ; ಭೌತಶಾಸ್ತ್ರ; ರಸಾಯನ ಶಾಸ್ತ್ರ; ಪಂಚಾಂಗಗಳು ಮತ್ತು ಖಗೋಳ ಶಾಸ್ತ್ರ; ಬೀಜಗಣಿತ; ಬೀಜ ರೇಖಾಗಣಿತ; ಕಲನಶಾಸ್ತ್ರ; ಭೂವಿಜ್ಞಾನ; ಗಣಿತ ಶಾಸ್ತ್ರದ ಚರಿತ್ರೆ; ವಿಜ್ಞಾನಮಂಜರಿ; ಗೃಹ ವಿಜ್ಞಾನ; ನಕ್ಷತ್ರ ದರ್ಶನ; ಗಾಳಿಯಲ್ಲಿನ ಅಗೋಚರ ಶತ್ರುಗಳು; ಖಗೋಳ ಶಾಸ್ತ್ರ ಪ್ರವೇಶ; ವಿದ್ಯುಚ್ಛಕ್ತಿಯ ವೈಭವ; ಬೆಳಕು; ಶಬ್ದ ಪ್ರಪಂಚ; ಕೃತಕ ರೇಷ್ಮೆ; ಕಣ್ಣು ಮತ್ತು ಅದರ ರಕ್ಷಣೆ; ರಕ್ತ; ಕೀಟಗಳು; ಕಲ್ಲಿದ್ದಲು; ಅಲೆಗಳು; ಬಟ್ಟೆಗಳ ವೈಜ್ಞಾನಿಕ ಪರೀಕ್ಷೆ; ವಿಶ್ವವಿಸರಣ; ವ್ಯವಸಾಯದ ಮಣ್ಣುಗಳು; ಶಿಕ್ಷಣ ತತ್ತ್ವದರ್ಶನ; ಹೆರಿಗೆ ಮತ್ತು ಶಿಶುಪೋಷಣೆ; ಗ್ರಾಮ ನೈರ್ಮಲ್ಯ; ವಿದ್ಯುಚ್ಛಕ್ತಿಯ ಉಪಯೋಗ; ರೇಡಾರ್; ಪರಮಾಣು ಶಕ್ತಿ; ಲೋಹವಿದ್ಯೆ; ಖಗೋಲ ವಿಜ್ಞಾನ; ಜೀವದ ಉತ್ಪತ್ತಿ ಮತ್ತು ಪರಿವರ್ತನೆ; ವಿಜ್ಞಾನ; ಹಣ ಪ್ರಪಂಚ; ಇತ್ಯಾದಿ ಇತ್ಯಾದಿ.

ನಮ್ಮ ಭಾಷೆ ವಿದ್ಯಾಭ್ಯಾಸದ ಅತ್ಯುತ್ಪನ್ನ ಮಟ್ಟಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಲು ಸಮರ್ಥವಾಗಿದೆ ಎನ್ನುವುದರ ಬಗೆಗೆ ಯಾರೂ ಸಂದೇಃ ಪಡಬೇಕಾಗಿಲ್ಲ.

ಇಲ್ಲಿಯವರೆಗೆ ಪ್ರಕಟವಾಗಿರುವ ಪುಸ್ತಕಗಳಿಂದ ಮತ್ತು ಉಪನ್ಯಾಸಗಳಿಂದ ಇನ್ನೊಂದು ವಿಷಯ ಸ್ಪಷ್ಟವಾಗುತ್ತದೆ. ಅದು ಪರಿಭಾಷೆಯ ವಿಚಾರ. ಊರಿಗೊಂದು ಪ್ರದೇಶಕ್ಕೊಂದು ಕಾಲಕಾಲಕ್ಕೊಂದು ಪರಿಭಾಷೆ ಇರುವುದಾದರೆ ವಿಜ್ಞಾನವಾಗಲಿ ಯಾವ ಶಾಸ್ತ್ರವಾಗಲಿ ಅಸ್ತಿತ್ವಕ್ಕೆ ಬರುವುದು ಅಸಂಭವ; ಪ್ರಗತಿಹೊಂದುವುದಂತೂ ಸಾಧ್ಯವೆ ಇಲ್ಲ. ಆಕ್ಸಿಜನ್ ಎಂಬ ಅನಿಲ ಧಾರವಾಡದಲ್ಲಿ ‘ಪ್ರಾಣವಾಯು’ ವಾಗಿ, ಮೈಸೂರಿನಲ್ಲಿ ‘ಆಮ್ಲಜನಕ’ವಾಗಿ, ಇನ್ನೊಂದೂರಿನಲ್ಲಿ ‘ಅಗ್ನಿವಾತ’ವಾಗಿ ಪರಿಣಮಿಸಿದರೆ ಶಾಸ್ತ್ರಾಧ್ಯಯನದ ಗತಿ ಏನಾಗಬೇಕು? ಅಂತಹ ಅವಿವೇಕಕ್ಕೆ ಕರ್ಣಾಟಕವಾಗಲಿ ಭಾರತದ ಯಾವ ಪ್ರಾಂತವಾಗಲಿ ಹೋಗದಿರುವುದು ನಮ್ಮ ವಿದ್ಯಾರ್ಜನೆಯ ಹಿತದೃಷ್ಟಿಯಿಂದ ಅತ್ಯಂತಾವಶ್ಯಕ. ಅಂತರಾಷ್ಟ್ರೀಯವಾದ ವೈಜ್ಞಾನಿಕ ಪರಿಭಾಷೆಯನ್ನೆಲ್ಲ ಭಾಷಾಂತರಿಸುವುದು ವ್ಯರ್ಥಸಾಹಸ. ಅದರಿಂದ ಯಾವ ಪ್ರಯೋಜನವೂ ಇಲ್ಲ; ಗೊಂದಲಕ್ಕೆ ಮಾತ್ರ ಅವಕಾಶವಾಗುತ್ತದೆ. ಆದ್ದರಿಂದ ಎಲ್ಲ ಕಡೆಗೂ ಸರ್ವ ಸಮಾನವಾಗಿ ರೂಢಿಯಲ್ಲಿರಬಹುದಾದ ಎಲ್ಲಿಯೊ ಕೆಲವು ಪದಗಳ ಹೊರತು ಉಳಿದುದೆಲ್ಲವನ್ನೂ ಅಂತರರಾಷ್ಟ್ರೀಯವಾದ ಪರಿಭಾಷೆಯಿಂದಲೆ ವ್ಯವಹರಿಸುವುದು ಉಚಿತ. ಅಲ್ಲದೆ ಯಂತ್ರಗಳಿಗೆ ಸಂಬಂಧಪಟ್ಟ ಹಾಗೆ ಇರುವ ಸಾವಿರಾರು ಪರಿಭಾಷೆಯ ಪದಗಳು ಈಗಾಗಲೆ ಅವುಗಳ ಅಂತರರಾಷ್ಟ್ರೀಯ ರೂಪದಲ್ಲಿಯೆ ಭಾರತೀಯವಾಗಿ ಬಿಟ್ಟಿವೆ. ಒಂದು ಮೋಟಾರು ಕಾರನ್ನು ರಿಪೇರಿಮಾಡುವ ಮೆಕ್ಯಾನಿಕ್ ಅಥವಾ ನಡೆಸುವ ಡ್ರೈವರ್ ಅಥವಾ ಶುಚಿಗೊಳಿಸುವ ಕ್ಲೀನರ್, ಅವನಿಗೆ ಇಂಗ್ಲಿಷ್ ಭಾಷೆಯ ಗಂಧವೆ ಇಲ್ಲದಿದ್ದರೂ, ಯಂತ್ರದ ಭಾಗೋಪಭಾಗಗಳ ಸಾವಿರಾರು ಹೆಸರುಗಳನ್ನು, ಭಾಷಾಂತರದ ಗೊಡವೆಗೆ ಹೋಗದ,ಎ ಕಡೆಗೆ ಆ ಪದಗಳು ಅನ್ಯ ಭಾಷೆಯವೆಂಬುದನ್ನು ಅರಿಯದೆ ಅಥವಾ ಗಮನಿಸದೆ, ತನ್ನ ಕೆಲಸವನ್ನು ಸಮರ್ಪವಾಗಿ ನೆರವೇರಿಸಿಕೊಂಡು ಹೋಗುತ್ತಿಲ್ಲವೆ? ಷೇಕ್ಸ್‌ಪಿಯರ್ ಮಿಲ್ಟನ್ ಕಾರ್‌ಲೈಲಾದಿಗಳನ್ನೆ ಓದಿ, ಇಂಗ್ಲಿಷ್ ತಿಳಿದು, ಪರೀಕ್ಷೆಗಳಲ್ಲಿ ಇಂಗ್ಲಿಷಿನಲ್ಲಿಯೆ ಪ್ರಬಂಧಗಳನ್ನು ಬರೆದು ಪಾಸುಮಾಡಿ, ಆ ಅರ್ಹತೆಯ ತರುವಾಯವೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಸೇರಿ ಬಿ.ಇ. ಪಾಸುಮಾಡಿ, ತರುವಾಯ ಕಾರು, ಲಾರಿ, ಟ್ರಾಕ್ಟರ್ ಇತ್ಯಾದಿಗಳನ್ನು ನಡೆಸಬೇಕು ಎಂದು ನಾವು ತೀರ್ಮಾನಿಸಿದ್ದರೆ ಇಷ್ಟು ಹೊತ್ತಿಗೆ ನಮ್ಮ ದೇಶದಲ್ಲಿ ಒಂದು ನೂರಿನ್ನೊರೊ, ಹೆಚ್ಚು ಎಂದರೆ ಒಂದು ಐನೂರೊ ಅಂತಹ ಯಂತ್ರಗಳನ್ನು ಕಾಣುತ್ತಿದ್ದೆವಷ್ಟೆ! ಅಂತೆಯೆ ವಿವಿಧ ವಿಜ್ಞಾನಶಾಸ್ತ್ರಗಳಲ್ಲಿರುವ ಸಾವಿರಾರು ಪರಿಭಾಷಿಕ ಪದಗಳನ್ನು ನಾವು ಹಾಗೆ ಹಾಗೆಯೆ ನಮ್ಮ ನಮ್ಮ ಲಿಪಿಗಳಲ್ಲಿ ಬರೆದು ವ್ಯವಹರಿಸಿದ್ದೇ ಆದರೆ ವಿಜ್ಞಾನ ವಿದ್ಯೆಗೂ, ಕಾರ್ಯರಂಗದಲ್ಲಿ ಅದರ ಪ್ರಯೋಗಕ್ಕೂ, ಸೌಲಭ್ಯವುಂಟಾಗುತ್ತದೆ. ಕೇಂದ್ರಸರ್ಕಾರದ ವಿದ್ಯಾ ಇಲಾಖೆ ಹೊರಡಿಸಿರುವ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಪಟ್ಟಿಕೆಗಳಲ್ಲಿಯೂ ಈ ವಿವೇಕದ ಮಾರ್ಗವನ್ನು ಬಹುಮಟ್ಟಿಗೆ ಅನುಸರಿಸಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿರುವ ಪಠ್ಯಪುಸ್ತಕಗಳಲ್ಲಿಯೂ ಈ ತತ್ತ್ವೆ ಅಂಗೀಕೃತವಾಗಿದೆ. ಆದ್ದರಿಂದ ವೈಜ್ಞಾನಿಕ ಪರಿಭಾಷೆಗೆ ನಮ್ಮ ಭಾಷೆಗಳಲ್ಲಿ ಪದಗಳಿಲ್ಲ ಎಂಬ ಕೊರತೆ ಉದ್ಭವಿಸುವುದೆ ಇಲ್ಲ. ತನ್ನ ಭಾಷೆಯಲ್ಲಿಯೆ ವಿಜ್ಞಾನಾಧ್ಯಯನ ಮಾಡಿ ಹಿಂದಿ ಅಥವಾ ಇಂಗ್ಲಿಷನ್ನು ಸ್ವಲ್ಪಮಟ್ಟಿಗೆ ಕಲಿತ ಯಾವನಿಗಾದರೂ ಸಮಸ್ಯೆ ಭಾರತೀಯವಾಗಿಯೂ ಅಂತರರಾಷ್ಟ್ರೀಯವಾಗಿಯೂ ಪರಿಹಾರ ಹೊಂದುತ್ತದೆ.

ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಲನದ ಅಧ್ಯಕ್ಷ ಪೀಠದಿಂದ ಈ ವಿಷಯವಾಗಿ ಇಷ್ಟು ದೀರ್ಘವಾಗಿ ಸಮಾಲೋಚನೆ ಮಾಡಿದುದರ ಅರ್ಥ ಏನು? ಉದ್ದೇಶವೇನು? ಸಾಹಿತ್ಯದ ವಿಚಾರವಾಗಿಯೊ ಕವಿಕಾವ್ಯವನ್ನು ಕುರಿತೊ, ಪ್ರತಿಭೆ ರಸಾಸ್ವಾದಾದಿ ಅಲೌಕಿಕಾನುಭವಗಳನ್ನೊ ಸಾಹಿತ್ಯ ವಿಮರ್ಶೆಯ ಅಥವಾ ಕಾವ್ಯಮೀಮಾಂಸೆಯ ತತ್ತ್ವಗಳನ್ನೊ ಸ್ವಾರಸ್ಯವಾಗಿ ಪ್ರಸ್ತಾವಿಸುತ್ತಾ ಹೋಗದೆ ಭಾಷೆ, ಶಿಕ್ಷಣ ಮಾಧ್ಯ, ಪಾರಿಭಾಷಿಕ ಪದ ಸಮಸ್ಯೆ ಇತ್ಯಾದಿ ಶಿಕ್ಷಣಶಾಸ್ತ್ರ ಸಮ್ಮೇಳನೋಚಿತ ಎನಿಸಬಹುದಾದ ವಿಷಯಗಳ ಪ್ರವೇಶಕ್ಕೆ ಇಲ್ಲಿ ಅಗತ್ಯವೇನಿತ್ತು?

ಯಾರ ಮನಸ್ಸಿನಲ್ಲಾದರೂ ಅಂತಹ ಪ್ರಶ್ನಾರ್ಥಕಚಿಹ್ನೆ ಹೆಡೆಯೆತ್ತಿದ್ದರೆ ಅಥವಾ ಆಶ್ಚರ್ಯಚಿಹ್ನೆ ನಿಮಿರಿ ನಿಂತಿದ್ದರೆ ಅದಕ್ಕೆ ಉತ್ತರ ಇಷ್ಟೆ! ಕೇರಳದಲ್ಲಿ ಮಲೆಯಾಳಿಯಂತೆ ಆಂಧ್ರದಲ್ಲಿ ತೆಲುಗಿನಂತೆ ತಮಿಳುನಾಡಿನಲ್ಲಿ ತಮಿಳಿನಂತೆ ಕರ್ಣಾಟಕದಲ್ಲಿ ಕನ್ನಡ ಪ್ರಥಮಭಾಷೆಯಾಗದಿದ್ದರೆ, ಕನ್ನಡವೆ ಶಿಕ್ಷಣಮಾಧ್ಯಮವಾಗದಿದ್ದರೆ ಕನ್ನಡಿಗರ ಬಾಳು ಕುಂಠಿತವಾಗುತ್ತದೆ; ಕನ್ನಡಿಗರ ಏಳಿಗೆಗೆ ಧಕ್ಕೆ ಬರುತ್ತದೆ; ಕರ್ಣಾಟಕದ ರಚನೆ ಅರ್ಥವಿಹೀನವಾಗುತ್ತದೆ; ನಮ್ಮ ತಾಯಿಗೆ ನಮ್ಮ ಮನೆಯಲ್ಲಿಯೆ ವರಾಂಡದಲ್ಲಿ ಮಲಗಿಕೊಳ್ಳಲು, ತಾಣವೂ ಅಲ್ಲ, ನಿಲ್ದಾಣ ಕೊಡಬೇಕಾಗುತ್ತದೆ; ನಮ್ಮ ಜನಸಾಮಾನ್ಯರ ಸರ್ವಾಂಗೀಣವಾದ ನ್ಯಾಯಬದ್ಧವಾದ ವಿಕಾಸಕ್ಕೆ ಅಡಚಣೆ ಒದಗುತ್ತದೆ; ನಮ್ಮ ಸಾಹಿತ್ಯವೂ ಸಮೃದ್ಧವಾಗಿ ಪುಷ್ಟವಾಗಿ ಬಹುಮುಖವಾಗಿ ಸರ್ವತೋಮುಖವಾಗಿ ಬದುಕಿನ ಮತ್ತು ವಿದ್ಯೆಯ ಸರ್ವಶಾಖೆಗಳಲ್ಲಿಯೂ ಚೈತನ್ಯಮಯವಾದ ಜನಜೀವನದ ನೆಲದಿಂದ ಹೊಮ್ಮದೆ ಪ್ರದರ್ಶನಕ್ಕಾಗಿ ತೂಗುಹಾಕಿರುವ ಕುಂಡಗಳಲ್ಲಿ ಬೆಳೆಯುವ ಲಘುಮನೋರಂಜನೆಯ ವಸ್ತುವಾಗುತ್ತದೆ. ಅಂತಹ ದುಃಖದ ಅಮಂಗಳದ ದುರಂತದ ಪರಿಸ್ಥಿತಿಗೆ ಕಾರಣವಾಗುವವರೆಲ್ಲರೂ, ವ್ಯಕ್ತಿಗಳಾಗಲಿ ಸಂಸ್ಥೆಗಳಾಗಲಿ, ಚಿರಂತನವಾಗಿ ಶಾಪಗ್ರಸ್ತರಾಗುತ್ತಾರೆ: ಕವಿ ಪ್ರವಾದಿಯೂ ಆಗುತ್ತಾನೆ.