ಆದರೆ ಹಾಗಾಗುವುದಿಲ್ಲ. ನಮ್ಮ ಜನ ಹಾಗೆ ಆಗಗೊಡಲು ಬಿಡುವುದಿಲ್ಲ. ಒಂದು ವೇಳೆ ಕನ್ನಡಿಗರ ದೌರ್ಬಲ್ಯೋಪಮವಾದ ಅತ್ಯೌದಾರ್ಯದಿಂದಲೊ ಅತಿದಾಕ್ಷಿಣ್ಯದಿಂದಲೊ ಅವರು ಔದಾಸೀನ್ಯವನ್ನವಲಂಬಿಸಿದರೆ ತೆಲುಗು ತಮಿಳು ಮಲೆಯಾಳಿ ಮರಾಠಿ ಬಂಗಾಳಿ ಮೊದಲಾದ ಭಾರತೀಯ ಭಾಷೆಗಳ ನಮ್ಮ ನೆರೆಯ ಸಹೋದರರು ತಮ್ಮ ತಮ್ಮ ಭಾಷೆಗಳಿಗೆ ತಮ್ಮ ತಮ್ಮ ನಾಡುಗಳಲ್ಲಿ ಸರಿಯಾದ ಸ್ಥಾನಮಾನಗಳನ್ನು ಕಲ್ಪಿಸುವುದರಿಂದಲೆ ನಮ್ಮನ್ನು ಸರಿಯಾದ ದಾರಿಗೆ ಅನಿವಾರ್ಯವಾಗಿಯೆ ತಳ್ಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ನಾನು ಸಂಪೂರ್ಣ ಆಶಾವಾದಿಯಾಗಿದ್ದೇನೆ.

ಕನ್ನಡನಾಡಿನಲ್ಲಿ ಕನ್ನಡ ಆಡಳಿತದ ಭಾಷೆಯಾಗುತ್ತದೆ. ಕನ್ನಡನಾಡಿನ ಶಿಕ್ಷಣಕ್ರಮದಲ್ಲಿ ಕನ್ನಡ ಪ್ರಥಮಭಾಷೆಯಾಗುತ್ತದೆ. ವಿಧ್ಯಾಭ್ಯಾಸದ ಎಲ್ಲ ಮಟ್ಟಗಳಲ್ಲಿಯೂ ಕನ್ನಡ ಶಿಕ್ಷಣ ಮಾಧ್ಯಮವಾಗುತ್ತದೆ. ಪ್ರದೇಶ ಪ್ರದೇಶದ ಮತ್ತು ಪ್ರದೇಶ ಕೇಂದ್ರದ ವ್ಯವಹಾರ ಮಾತ್ರಕ್ಕಾಗಿ ಹಿಂದಿ ಉಳಿಯುತ್ತದೆ. ಹೊರ ಪ್ರಪಂಚದೊಡನೆಯೂ ಮತ್ತು ದಿನ ದಿನವೂ ವಿಸ್ತರಿಸುತ್ತಿರುವ ಜಗತ್ತಿನ ಯಂತ್ರವಿದ್ಯೆ ಜ್ಞಾನವಿಜ್ಞಾನಗಳೊಡನೆಯೂ ಸಂಬಂಧ ಸಂಪರ್ಕಗಳನ್ನಿಟ್ಟುಕೊಳ್ಳುವ ಸಲುವಾಗಿ, ಇಂಗ್ಲಿಷ್, ಪ್ರಪಂಚದ ಇತರ ಪ್ರಸಿದ್ದ ಭಾಷೆ ಗಳಂತೆಯೆ, ಐಚ್ಛಿಕಭಾಷೆಯಾಗಿ, ಮತ್ತು ಕೆಲವರ ಭಾಗಕ್ಕೆ ವಿಶೇಷ ಸಾಹಿತ್ಯಾಧ್ಯಯನ ವಿಷಯವಾಗಿಯೂ, ಮುಂದುವರಿಯುತ್ತದೆ.

ಕನ್ನಡ ಜನರ ಆಶೋತ್ತರಕ್ಕೂ ಮತ್ತು ಕರ್ಣಾಟಕ ಸಂಸ್ಕೃತಿಗೂ ಪ್ರತಿನಿಧಿಯಾದ ಕನ್ನಡ ಸಾಹಿತ್ಯಪರಿಷತ್ತು ಸದ್ಯಕ್ಕೆ ನಮ್ಮ ಅಭ್ಯುದಯಕ್ಕೆ ಆವಶ್ಯಕವಾದ ಭೌಗೋಳಿಕ ಚೌಕಟ್ಟನ್ನು ಸಾಧಿಸಿದೆ. ನವಮೈಸೂರು ರಾಜ್ಯದ ಆ ಚೌಕಟ್ಟಿನ ಮೇಲೆ ನಮ್ಮ ಸಂಸ್ಕೃತಿಯ ಆದರ್ಶದ ‘ಕರ್ಣಾಟಕ’ವನ್ನು ಕಟ್ಟಬೇಕಾಗಿದೆ. ಇದುವರೆಗೆ ಪರಿಷತ್ತಿನ ವಾರ್ಷಿಕ ಸಮ್ಮೇಲನ ಸ್ವಲ್ಪ ಹೆಚ್ಚು ಕಡಮೆ ಉತ್ಸವರೂಪದ ಪ್ರಚ್ಟನ್ನ ರಾಜಕೀಯ ಚಳುವಳಿಯಾಗಿಯೆ ಸಾಗುತ್ತಿತ್ತು. ಇನ್ನು ಮೇಲೆ ಈ ವಾರ್ಷಿಕ ಸಮ್ಮೇಲನ ಉತ್ಸವರೂಪಮಾತ್ರವಾಗಿ ಪರ್ಯವಸಾನ ಹೊಂದುವುದರಲ್ಲಿ ಔಚಿತ್ಯವಿಲ್ಲ. ಇದು ಸಾಹಿತ್ಯಕ್ಷೇತ್ರದ ಶ್ರಮ ಜೀವಿಗಳ ಮತ್ತು ಕಲಾಸಾಧಕರ ವಾರ್ಷಿಕ ಸಾಹಸಸಿದ್ಧಗಳ ಪರೀಕ್ಷೆಯ ನಿಕಷ ವೇದಿಕೆಯಾಗಿ ಪರಿಣಮಿಸಬೇಕು. ನಮ್ಮ ನೆರೆಯ ಸೋದರ ಭಾಷಾಸಾಹಿತ್ಯಗಳೊಡನೆ ಹೆಚ್ಚು ಸಂಪರ್ಕ ಬೆಳೆಸಲು ಪರಸ್ಪರ ಹೃದಯ ಪರಿಚಯದ ಮತ್ತು ಮೈತ್ರಿಸಾಧನೆಯ ರಂಗವಾಗಿ ಪರಿವರ್ತಿತವಾಗಬೇಕು. ಅಖಿಲ ಭಾರತೀಯವಾದ ಯಾವ ಮಹೋದ್ದೇಶದಿಂದ ಸಾಹಿತ್ಯ ಅಕಾಡೆಮಿ ಪ್ರೇರಿತವಾಗಿ ವಿವಿಧ ಕಾರ್ಯಗಳಲ್ಲಿ ಪ್ರವೃತ್ತವಾಗಿದೆಯೊ ಅದರ ಪ್ರಾದೇಶಿಕ ಪ್ರತಿನಿಧಿಯಾಗಬೇಕು. ಕರ್ಣಾಟಕದ  ವಿವಿಧ ಸಂಸ್ಥೆಗಳಲ್ಲಿ ವಿವಿಧ ಸಂಘಗಳಲ್ಲಿ ವಿವಿಧ ವ್ಯಕ್ತಿಗಳಲ್ಲಿ ರೂಪುಗೊಳ್ಳುತ್ತಿರುವ ಮತ್ತು ಅಭಿವ್ಯಕ್ತವಾಗುತ್ತಿರುವ ಪುರೋಗಾಮಿಗಳಾದ ಹೃದಯದ ಮತ್ತು ಬುದ್ಧಿಯ ಶಕ್ತಿಗಳನ್ನೆಲ್ಲಾ ಕ್ರೋಢೀಕರಿಸಿ, ಅವುಗಳನ್ನು ತಾತ್ಕಾಲಿಕತೆಯ, ವಿಫಲತೆಯ, ಅಲ್ಪಮನೋರಂಜನೆಯ, ವಿಕೃತ ಕಲ್ಪನೆಯ, ಶೀಘ್ರಕೀರ್ತಿಯ ಅಲ್ಪಪ್ರಯೋಜನದ ವ್ಯರ್ಥಸಾಹಸೋದ್ಯಮದಿಂದ ವಿಮುಖವನ್ನಾಗಿ ಮಾಡಿ, ರಕ್ಷಿಸಿ, ಮಹೋದ್ದೇಶದ ಹಾಗೂ ಚಿರಂತನ ಪ್ರಯೋಜನದ ಕಡೆಗೆ ತಿರುಗಿಸಿ ಶಿಷ್ಟ ಸಂಕಲ್ಪನಿಷ್ಠವನ್ನಾಗಿ ಮಾಡಬೇಕು.

ಈ ಮೂವತ್ತು ನಾಲ್ವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಾಧಿಸಿರುವ ಸಂಪತ್ತು, ಪರಿಷತ್ತು ಸಕಾರಣವಾಗಿ ನಿಸ್ಸಂಕೋಚವಾಗಿ ಹೆಮ್ಮೆಪಟ್ಟುಕೊಳ್ಳುವಷ್ಟು ವೈಭವಪೂರ್ಣವಾಗಿದೆ, ವೈವಿಧ್ಯಪೂರ್ಣವಾಗಿದೆ, ಶ್ರೀಮಂತವಾಗಿದೆ. ಲೋಕಸಾಹಿತ್ಯದ ವಿಚಾರವಾಗಿ ಹಿಂದೆ ಹೇಳಿದುದಕ್ಕಿಂತಲೂ ನೂರುಮಡಿ ಹೆಚ್ಚಾಗಿ ಹೇಳಬಹುದು ಭಾವಸಾಹಿತ್ಯದ ವಿಚಾರವಾಗಿ ಉದ್ದಾರಕ್ಕೆ ಎಲ್ಲೆ ಇದೆಯೆ? ಮಹಚ್ಚೇತನದ ಅಭೀಪ್ಸೆ ನಿಶ್ಯಕರವಾದುದಲ್ಲವೆ? “ಉತ್ಸರ್ಪಿಣೀ ಖಲು ಮಹಾತಾಂ ಪ್ರಾರ್ಥನಾ!” ಉದ್ಧಾರದ ಕೊನೆ ಮುಟ್ಟಿದೆವು ಎಂದುಕೊಳ್ಳುವುದೆ ಪತನಕ್ಕೆ ಮೊದಲ ಹೆಜ್ಜೆಯಾದೀತು! ಆದ್ದರಿಂದ ನಮ್ಮ ಉದ್ಧಾರದ ವಿಷಯದಲ್ಲಿ ಸ್ವಲ್ಪ ಅತೃಪ್ತಿಯಿರಬೇಕಾದ್ದು ಪ್ರಗತಿಗೆ ಆವಶ್ಯಕ. ಆದರೆ, ಆ ಅತೃಪ್ತಿ ಆತ್ಮಧಿಕ್ಕಾರದ ಮಟ್ಟಕ್ಕೇರಿ, ಸಾಧಿಸಿರುವ ಕಾರ್ಯದ ಅವಹೇಳನದ ರೂಪಕ್ಕೂ ತಿರುಗಿ, ದೋಷೈಕದೃಷ್ಟಿಯಾಗಿ, ಉತ್ತಮಾಂಶವನ್ನೆಲ್ಲ ಅಸೂಯಾಜನ್ಯವಾದ ನಿಂದಾಗ್ನಿಯಲ್ಲಿ ಹೋಮಮಾಡುವಂತಾದರೆ ಅಂತಹ ಅತೃಪ್ತಿಯನ್ನು ಮನೋವಿಕಾರಸಂಭೂತವಾದ ಒಂದು ರೋಗವನ್ನಾಗಿ ಭಾವಿಸಬೇಕಾಗುತ್ತದೆ. ಅಂತಹ ರೋಗದಿಂದ ವಿಮುಕ್ತರಾಗಿ ಪೂರ್ವಗ್ರಹದೂರವಾದ ಅವಿಕಾರಬುದ್ದಿಯಿಂದಲೂ ಅನೇಕ ಸಾಹಿತ್ಯಾಧ್ಯಯನದಿಂದ ಸಿದ್ಧವಾದ ನಿಷ್ಪಕ್ಷಪಾತ ವಿಮರ್ಶದೃಷ್ಟಿಯಿಂದಲೂ ಸಮೀಕ್ಷಿಸಿದರೆ ಕನ್ನಡ ಸಾಹಿತ್ಯ ಈ ಮೂವತ್ತು ನಾಲ್ವತ್ತು ವರ್ಷಗಳಲ್ಲಿ ಅದ್ಭುತವನ್ನೆ ಸಾಧಿಸಿದೆ ಎಂದು ಹೇಳಬೇಕಾಗುತ್ತದೆ.

ಬ್ರಿಟಿಷರ ರಾಜಕೀಯ ಅಧಿಕಾರದೊಡನೆ ಅವರ ಭಾಷಾಪ್ರಚಾರವಾಯಿತು. ಅದರ ಪರಿಣಾಮವಾಗಿ ಇಂಗ್ಲಿಷ್ ಸಾಹಿತ್ಯದ ಪ್ರಭಾವ ಅಖಿಲ ಭಾರತೀಯ ಜೀವನದ ಮೇಲೆ ತನ್ನ ಮುದ್ರೆಯೊತ್ತಿತು. ಇಂಗ್ಲಿಷ್ ಭಾಷೆಯ ಗವಾಕ್ಷದಿಂದ ಪ್ರಪಂಚದ ಇತರ ದೇಶಗಳ ಸಂಸ್ಕೃತಿ ಸಾಹಿತ್ಯಗಳೂ ಬೆಳಕು ಬೀರಿ ನಮ್ಮನ್ನು ಆಕರ್ಷಿಸಿದುವು. ಸರಕಾರದ ಕಡೆಯಿಂದ ಪ್ರೋತ್ಸಾಹವಿರದಿದ್ದರೂ, ಇಂಗ್ಲಿಷಿನ ಮೋಹಕ್ಕೆ ವಶರಾಗಿ ಪ್ರತಿಷ್ಠಾವಂತರಾದವರಿಂದ ತಿರಸ್ಕೃತವಾಗಿದ್ದರೂ ದೇಶಭಾಷೆಗಳು ಅಲ್ಲಲ್ಲಿ ಸಾಹಸದಿಂದ ತಲೆಯೆತ್ತಲು ಪ್ರಯತ್ನಿಸಿದುವು. ಆ ಪ್ರಯತ್ನವೂ ಇಂಗ್ಲಿಷ್‌ಕಲಿತ ಕೆಲವರಿಂದಲೆ ಬಹುಮಟ್ಟಿಗೆ ಆರಂಭವಾಯಿತೆನ್ನುವುದೂ ಕೃತಜ್ಞತೆಗೆ ಅರ್ಹವಾದ ಸಂಗತಿ. ಆಂಗ್ಲೇಯ ಸಾಹಿತ್ಯದ ವೈಭವಕ್ಕೂ ವೈವಿಧ್ಯಕ್ಕೂ ಪ್ರತಿಷ್ಠೆಗೂ ಮಾರುಹೋದ ದೇಶಭಾಷೆಗಳು ಅದನ್ನು ಅನುಕರಿಸಿಯೂ ಅನುಸರಿಸಿಯೂ ಬೆಳೆಯತೊಡಗಿದುವು. ಕೊನೆಕೊನೆಗೆ, ನಮ್ಮಲ್ಲಿ ವಿದ್ಯಾರ್ಜನೆಗೆ ತೊಡಗಿದವರು ಸಂಸ್ಕೃತ ಮತ್ತು ದೇಶಭಾಷೆಗಳಲ್ಲಿ ಹೈಮಾಚಲ ಸಿಂಹಾಸನಸ್ಥವಾಗಿರುವ ನಮ್ಮ ಪ್ರಾಚೀನ ಸಂಸ್ಕೃತಿ ಸಾಹಿತ್ಯಗಳ ಪರಿಚಯವಾಗುವುದಕ್ಕೆ ಮೊದಲೆ, ಅವರು ಭಾವವಶರಾಗಿ ಹೊಸದಕ್ಕೆ ಕಣ್ಣು ತೆರೆಯುವ ಅಪ್ರಬುದ್ಧ ತಾರುಣ್ಯದಲ್ಲಿ, ಇಂಗ್ಲಿಷ್ ಸಾಹಿತ್ಯದ ಸೊಗಸಿಗೂ ಸೌಂದರ್ಯಕ್ಕೂ ಪ್ರತಿಷ್ಠೆಗೂ ಮೋಹಿನೀಶಕ್ತಿಗೂ ಒಳಗಾಗಿ, ವಶರಾಗಿ, ಅದರ ಆಲ್‌ಪ್ಸ್ ಶಿಖರಗಳನ್ನೆ ಉತ್ತಮೋತ್ತಮ ಮತ್ತು ಉನ್ನತತಮಗಳೆಂದು ಭಾವಿಸುವಂತಾಯಿತು. ಆದರೆ, ರಾಜಕೀಯವಾದ ಸ್ವಾತಂತ್ರ್ಯಸಂಗ್ರಾಮ ಪ್ರಾರಂಭವಾದ ಮೇಲೆ ಪರಿಸ್ಥಿತಿ ಕ್ರಮಕ್ರಮೇಣ ಬದಲಾಯಿಸುತ್ತಾ ಹೋಗಿ ಸಾಹಿತ್ಯಸಂಸ್ಕೃತಿಯ ರಂಗಗಳಲ್ಲಿ ಋಜುದೃಷ್ಟಿ ಮೂಡತೊಡಗಿತು. ಭಾರತೀಯವಾದ ಯಾವ ದೇಶಭಾಷೆಯ ಆಧುನಿಕ ಸಾಹಿತ್ಯವನ್ನು ತೆಗೆದುಕೊಂಡರೂ ಅದರ ಬೆಳವಣಿಗೆಯಲ್ಲಿ ಈ ವಿವಿಧ ಪ್ರಭಾವಗಳ ತರಂಗತಾಡನದ ಅಚ್ಚೋತ್ತುಗಳನ್ನು ನಾವು ಗುರುತಿಸಬಹುದು. ಆಧುನಿಕ ಕನ್ನಡ ಸಾಹಿತ್ಯವೂ ಮೇಲೆ ಹೇಳಿದುದಕ್ಕೆ ನಿದರ್ಶನವಾಗುತ್ತದೆ.

ನಾನಿಲ್ಲಿ ವಿವರಕ್ಕೆ ಹೋಗುವುದಿಲ್ಲ. ಅದಕ್ಕೆ ಕಾಲಾವಕಾಶವೂ ಇಲ್ಲ. ಅಲ್ಲದೆ ಆ ವಿಚಾರಗಳು ಸಮ್ಮೇಲನದ ಬೇರೆಬೇರೆಯ ಗೋಷ್ಠಿಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪರಿಶೀಲನೆಗೆ ಬರುವುದರಿಂದ ಇಲ್ಲಿಯೂ ಬರುವ ಅಗತ್ಯವಿಲ್ಲ. ಆದರೆ ಒಂದೆರಡು ಸಾಮಾನ್ಯ ವಿಚಾರಗಳನ್ನು ಕುರಿತು ಸಂಕ್ಷೇಪವಾಗಿ ನಿರೂಪಿಸಲು ಅವಕಾಶ ಬೇಡುತ್ತೇನೆ.

ನಮ್ಮ ಸಾಹಿತ್ಯ ಹಿಂದೆ ಸಂಸ್ಕೃತ ಸಾಹಿತ್ಯದ ಛಾಯೆಯಾಗಿ ಬೆಳೆಯಿತು; ಇಂದು ಇಂಗ್ಲಿಷ್ ಸಾಹಿತ್ಯದ ಛಾಯೆಯಾಗಿ ಬೆಳೆಯುತ್ತಿದೆ ಎಂಬರ್ಥದ ಅಸಮಾಧಾನದ ಟೀಕೆ ಕೆಲವು ಕಡೆಗಳಲ್ಲಿ ಕೇಳಿಬರುತ್ತಿದೆ. ನಾವೂ ಇತರರಾರೂ ಮಾಡದ ಏನಾದರೊಂದು ಹೊಸತನ್ನು ಮಾಡಿ, ಇನ್ನಾರದ್ದೂ ಅಲ್ಲದೆ ನಮ್ಮದೇ ಆಗಿರುವ ಮೂಲಸೃಷ್ಟಿರೂಪದ ಕಾಣಿಕೆಗಳನ್ನು ಪ್ರಪಂಚಕ್ಕೆ ದಾನ ಮಾಡಿ ಕೀರ್ತಿಪಡೆಯಬೇಕೆಂಬುದೆ ಈ ಅಸಮಾಧಾನದ ಮೂಲೋದ್ದೇಶ, ಅಂತಹ ಆಶೆ ಅಂತಹ ಉದ್ದೇಶ ಇರುವುದೇನೂ ತಪ್ಪಲ್ಲ. ಆದರೆ ಈ ‘ಒರಿಜಿನಲ್’ (ಸ್ವತಂತ್ರಸೃಷ್ಟಿ) ಆಗಬೇಕೆಂಬ ಬುದ್ಧಿ ಅತ್ಯಹಂಕಾರದ ಮಟ್ಟಕ್ಕೇರಿ ಭ್ರಾಂತಿವಿಕಾರವಾಗುವ ಸಂಭವವೂ ಉಂಟು. ನಮ್ಮ ತಂದೆ, ಅವರ ತಂದೆ, ಅವರ ತಂದೆ ಎಲ್ಲರೂ ಹೀಗೆಯೇ ಕಾಲು ಹಾಕಿ ನಡೆಯುತ್ತಿದ್ದರೆಂದು ಮರಿ ಮಗನಾದವನು ಬೇರೆಯ ರೀತಿಯಲ್ಲಿ ಕಾಲು ಹಾಕಲು ತೊಡಗಿದರೆ, ಬಹು ಬೇಗನೆ ನಾಲ್ಕಾರು ಜನರ ಗಮನ ಸೆಳೆಯಬಹುದಾದರೂ, ಅಷಷ್ಟೇ ಬೇಗನೆ ಎಲ್ಲರ ನಗೆಗೂ ಈಡಾಗಬೇಕಾಗುತ್ತದೆ; ಅಲ್ಲದೆ ನಡೆಯುವುದರ ಉದ್ದೇಶಕ್ಕೆ ಭಂಗತಂದುಕೊಂಡಂತೆಯೂ ಆಗಬಹುದು. ಆದ್ದರಿಂದ ‘ಒರಿಜನಲ್’ ಆಗಬೇಕೆಂಬ ಆತುರದಿಂದ ಲೋಕ ಸಹಜ ಮತ್ತು ನಿಸರ್ಗಸಿದ್ಧವಾದ ಪ್ರಕಾರಗಳನ್ನು ಉಲ್ಲಂಘಿಸುವುದು ಬರಿಯ ವಿಕಾರಸೃಷ್ಟಿಗೆ ಅವಕಾಶವಾಗುತ್ತದೆ. ರೂಪಪರಿವರ್ತನೆಗೆ ಅಂತಃಪ್ರೇರಣೆಯ ವಿಕಾಸಾವಶ್ಯಕತೆಯ ಸಕಾರಣ ಪ್ರಚೋದನೆಯಿಲ್ಲದಿದ್ದರೆ ಅದು ಕ್ಷಣಿಕ ಕುತೂಹಲಕಾರಿಯಾದ ವಿಕಾರ ರಚನೆಯಾದೀತೆ ಹೊರತು ನೂತನ ಸೃಷ್ಟಿಯಾಗುವುದಿಲ್ಲ.

ಎಲ್ಲ ದೇಶದ ಎಲ್ಲ ಸಾಹಿತ್ಯಗಳಲ್ಲಿಯೂ, ಅತ್ಯಂತ ಸ್ವತಂತ್ರದ ಎಂದು ತೋರುವ ಸೃಷ್ಟಿಯಲ್ಲಿಯೂ, ಪರತಂತ್ರತೆ ಅನ್ಯಪರತಂತ್ರತೆ ಇದ್ದೆ ಇರುತ್ತವೆ. ಆದ್ದರಿಂದಲೆ ವಿಮರ್ಶಕನೊಬ್ಬನು ಹೇಳಿದ್ದಾನೆ: ‘ಜಗತ್ತಿನ ಮಹಾಕವಿಗಳನ್ನೆಲ್ಲ ಸಾಲಾಗಿ ನಿಲ್ಲಿಸಿ ನೋಡಿದರೆ ಏನು ಕಾಣುತ್ತದೆ? ಒಬ್ಬನ ಜೇಬಿನಲ್ಲಿ ಇನ್ನೊಬ್ಬನ ಕೈ!’ ಅರ್ಧ ಪರಿಹಾಸ್ಯಕ್ಕೆ ಹೇಳಿರುವಂತೆ ತೋರಿದರೂ ಈ ವಿಮರ್ಶೋಕ್ತಿಯಲ್ಲಿ ತುಮಬ ಸತ್ಯಾಂಶವಿದೆ. ಸಾಹಿತ್ಯ ಭೂಮಿಕೆಯಲ್ಲಿ ಮಾತ್ರವಲ್ಲ; ಎಲ್ಲ ಭೂಮಿಕೆಗಳಲ್ಲೂ ಮನುಷ್ಯ ಪರಸ್ಪರೋಪಜೀವಿ. ಆದರೂ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೊ ಒಂದು ರೀತಿಯಲ್ಲಿ ಅನನ್ಯಸಾಧಾರಣ; ಒಬ್ಬೊಬ್ಬನೂ ಇನ್ನೊಬ್ಬನಲ್ಲವಾಗಿರುಷ್ಟು ಮಟ್ಟಿಗೆ ವಿಶೇಷವ್ಯಕ್ತಿ; ಮನುಷ್ಯತ್ವದಿಂದ ಸರ್ವಸಾಧಾರಣನಾದರೂ ವ್ಯಕ್ತಿತ್ವದಿಂದ ವಿಶೇಷ; ಸಾಧಾರಣತೆಯ ಪರತಂತ್ರೆಯಲ್ಲಿ ವ್ಯಕ್ತಿತ್ವದ ವಿಶೇಷತೆಯನ್ನು ಪ್ರಕಟಿಸುವುದೆ ಅನನ್ಯಪರ ತಂತ್ರತೆ. ಅತ್ಯಂತ ಸ್ವತಂತ್ರ ಎನಿಸಿಕೊಳ್ಳುವ ನಮ್ಮ ಮೂಲ ಸೃಷ್ಟಿಯ ಪರಮಾವಧಿ ಈ ಅನನ್ಯಪರತಂತ್ರತೆಯೆ ವಿನಾ ಸಂಪೂರ್ಣ ಸ್ವಾತಂತ್ರ್ಯ ಎಂಬುದು ಇಲ್ಲವೆ ಇಲ್ಲ.

ಪಂಪ ಹರಿಹರ ಕುಮಾರವ್ಯಾಸ ರತ್ನಾಕರವರ್ಣಿ ಕಾಳಿದಾಸ ಮಿಲ್ಟನ್ ದಾಂತೆ ಷೇಕ್ಸ್ಪಿಯರ್ ಮೊದಲಾದ ಸ್ವತಂತ್ರಪ್ರತಿಭೆಯ ಉದ್ದಾಮ ಕವಿಗಳು ಅಲಂಕಾರ ವಸ್ತು ರೀತಿಗಳಲ್ಲಿ ಭಾವಾಂಶ ಚಿಂತನಾಶಂ ಕಲ್ಪನಾಂಶ ರೂಪಾಂಶಗಳಲ್ಲಿ ಇತರ ಭಾಷಾಸಾಹಿತ್ಯಗಳಿಗೆ ಮತ್ತು ಪೂರ್ವಕವಿಗಳಿಗೆ ಋಣಿಗಳಾಗಿದ್ದಾರೆ ಎಂದ  ಮಾತ್ರಕ್ಕೆ ಅವರ ಕೃತಿಗಳು ಬರಿಯ ಛಾಯೆಗಳೆ? ತಂದೆತಾಯಿಯರಿಗೆ ಋಣಿಯಾಗಿರುವ ಮಗನ ಮೈ ಬರಿಯ ಛಾಯೆಯೆ? ಅವನು ಸ್ವತಂತ್ರ ಜೀವಿಯಲ್ಲವೆ? ಅವನು ತನ್ನ ಕರ್ಮಸಂಸ್ಕಾರ ಆಸೆ ಆಶಯ ಜೀವಿತೋದ್ದೇಶಗಳಿಗೆ ಅನುಸಾರಿಯಾಗಿ ಬೆಳೆಯುವುದಿಲ್ಲವೆ? ಅವನಿಗೆ ವ್ಯಕ್ತಿಸ್ವಾತಂತ್ರ್ಯವಿಲ್ಲವೆ? ಲೋಕ ಅವನಿಂದ ನಿರೀಕ್ಷಿಸುವುದಾದರೂ ಏನನ್ನು? ಯೋಗ್ಯ ವ್ಯಕ್ತಿಯಾಗಿ ಬಾಳಿ ಬೆಳೆದು, ತನ್ನ ಪೂರ್ಣತ್ವವನ್ನು ಸಾಧಿಸುವುದರ ಜೊತೆಗೆ ತನ್ನ ವ್ಯಕ್ತಿ ವಿಶೇಷತ್ವದ ಪ್ರಭಾವದಿಂದ ಲೋಕ ಕಲ್ಯಾಣಕ್ಕೂ ಕಾರಣನಾಗಬೇಕು ಎಂದಲ್ಲವೆ? ಸಾಹಿತ್ಯದಲ್ಲಿಯೂ ಅಷ್ಟೆ: ಅಷ್ಟನ್ನು ಸಾಧಿಸುವ ಯಾವ ಕೃತಿಯೂ ತಾನು ‘ಛಾಯೆ’ ಯಾದೆನೆಂದು ನಾಚುವುದು ಬೇಡ. ಅಂತಹ ಕೃತಿರಚನೆ ಮಾಡಿದಾತನು ಕೃತಕೃತ್ಯನೆ ಹೌದು. ಕೃತಿಯ ಸಜೀವತ್ವಕ್ಕೆ ಅನಿವಾರ್ಯವಾಗಿ ಬೇಕಾದುದು ಸ್ವಾನುಭವ, ತನ್ನದೆ ಆದ ಹೃದಯಾನುಭವ. ಆ ಅನುಭವನೈಜತೆ ಒಂದಿದ್ದರೆ ಅದು ಸ್ವತಂತ್ರ ಸೃಷ್ಟಿಯೆ. ಆ ಅನುಭವ ಹಿಂದಾರೂ ಪಡೆಯದ ಅನುಭವವಾಗಿರಬೇಕು ಎಂದೂ ಅಲ್ಲ. ಅದು ಕೃತಿಕಾರನ ನಿಜವಾದ ಅನುಭವವಾಗಿರಬೇಕು ಅಷ್ಟೆ.

ಈ ದೃಷ್ಟಿಯಿಂದ ಸಮೀಕ್ಷಿಸಿದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅನುಕರಣ, ಅನುಸರಣ, ಛಾಯೆಗಳ ಜೊತೆಜೊತೆಗೆ ಸ್ವತಂತ್ರ ಸೃಷ್ಟಿಯೂ ವಿಪುಲವಾಗಿ ನಡೆದಿದೆ. ಸಾಹಿತ್ಯದ ಕೆಲವು ಪ್ರಕಾರಗಳಲ್ಲಂತೂ ಕನ್ನಡಿಗರು ಮಾತ್ರವಲ್ಲದೆ ಭಾರತೀಯರೂ ಹೆಮ್ಮೆಪಟ್ಟುಕೊಳ್ಳುವಂತಹ ಕೃತಿಗಳೂ ಮೈದೋರಿವೆ. ಅಷ್ಟೆಅಲ್ಲ: ಪೂರ್ಣಪರಿಣತ ಸ್ಥಿತಿಗೇರಿರುವ ಪ್ರಪಂಚದ ಯಾವ ಭಾಷೆಯ ಸಾಹಿತ್ಯಕ್ಕಾದರೂ ಕೋಡುಮೂಡಿಸುವ ಕೃತಿಗಳೂ ಕವನ, ಕಾದಂಬರಿ, ಸಣ್ಣಕತೆ, ನಾಟಕ, ಕಾವ್ಯ, ಮಹಾಕಾವ್ಯಾದಿ ಪ್ರಕಾರಗಳಲ್ಲಿ ಹೊರಹೊಮ್ಮಿವೆ. ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು; ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ.

ಎಂತಹ ಉತ್ಕೃಷ್ಟ ನಾಗರಿಕತೆಗೇರಿದ ಯಾವ ದೇಶದ ಎಷ್ಟು ಮುಂಬರಿದ ಸಾಹಿತ್ಯದಲ್ಲಾಗಲಿ ಹುಟ್ಟಿದುದೆಲ್ಲ ಬದುಕುವುದಿಲ್ಲ. ಕೆಲವು ಭಾಗ ಪತ್ರಿಕಾ ಸಾಹಿತ್ಯದಂತೆ ತನ್ನ ದಿನದ ಕರ್ತವ್ಯವನ್ನು ಮಾಡಿ ಮುಗಿಸಿ ಮಡಿಯುತ್ತದೆ. ಅದು ದೈನಂದಿನ ಆಯುಃಪರಿಮಾಣದ್ದು. ಕೆಲವು ಭಾಗಯಾವುದಾದರೊಂದು ಸಮಸ್ಯೆಯ ಪರಿಹಾರಕ್ಕಾಗಿಯೊ ಅಥವಾ ಯಾವುದಾದರೊಂದು ಹೊಸ ನೀತಿಯ ಪ್ರಚಾರಕ್ಕಾಗಿಯೊ ಹುಟ್ಟುತ್ತದೆ. ಆ ಉದ್ದೇಶ ನೆರವೇರಿದೊಡನೆಯೆ ಅದು ಮನಸ್ಸಿನಿಂದ ಮರೆಯಾಗುತ್ತದೆ. ಇನ್ನು ಸ್ವಲ್ಪಭಾಗ ತತ್ಕಾಲ ದೇಶ ಸನ್ನಿವೇಶದ ಪ್ರಭಾವದಿಂದ ಹೊಮ್ಮಿ, ಆ ಪರಿಸ್ಥಿತಿ ಸಜೀವವಾಗಿರುವ ತನಕ ಬಾಳಿ, ಕ್ರಮೇಣ ಜನಮನದಿಂದ ವಿಸ್ಕೃತವಾಗಿ ತರುವಾಯ ಸಾಹಿತ್ಯಚರಿತ್ರೆಯ ವಿಷಯವಾಗಿಯೊ ಅಥವಾ ಪಂಡಿತ ವಿಶೇಷಾಧ್ಯಯನದ ವಿಷಯವಾಗಿಯೊ ಉಳಿಯುತ್ತದೆ. ಎಲ್ಲಿಯೊ ಅಲ್ಪ ಸ್ವಲ್ಪ ಭಾಗ ಮಾತ್ರ ನಮ್ಮ ಚಿರಕಾಲಿಕ ಆಶೆ ಆದರ್ಶ ಆಕಾಂಕ್ಷೆ ಪ್ರಯೋಜನಗಳಿಗೆ ಸಂಬಂಧಪಟ್ಟು ನಮ್ಮ ನಿತ್ಯಜೀವನದ ನಿತ್ಯಪುರುಷಾರ್ಥಗಳಿಗೆ ನಿತ್ಯವೂ ನೀರೆರೆಯುವ ಹೊಂಗಿಂಡಿಗಳೊ ಹೊಂಗಡಗಳೊ ಆಗಿ ಪರಿಣಮಿಸಿ ನಿತ್ಯಸಾಹಿತ್ಯವಾಗಿರುತ್ತವೆ. ಈ ಎಲ್ಲ ಬಗೆಯ ಸಾಹಿತ್ಯಗಳೂ ಸಮಾನ ಸಾರ್ಥಕವಾದುವೆ. ನಿತ್ಯ ಸಾಹಿತ್ಯಕ್ಕೆ ಪತ್ರಿಕಾ ಸಾಹಿತ್ಯದ ಕೆಲಸಮಾಡಲು ಹೇಗೆ ಸಾಧ್ಯವಿಲ್ಲವೊ ಹಾಗೆಯೆ ಪತ್ರಿಕಾಸಾಹಿತ್ಯಕ್ಕೂ ನಿತ್ಯ ಸಾಹಿತ್ಯದ ಕೆಲಸಮಾಡಲು ಸಾಧ್ಯವಿಲ್ಲ. ಆದರೆ ತಮ್ಮ ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡಿದ  ಅವೆರಡೂ ಸಾರ್ಥಕವೆ. ಅದರ ಧರ್ಮ ಬೇರೆ; ಇದರ ಧರ್ಮ ಬೇರೆ. ಆದ್ದರಿಂದ ಅದರ ಕರ್ತವ್ಯಕರ್ಮ ಬೇರೆ; ಇದರ ಕರ್ತವ್ಯಕರ್ಮ ಬೇರೆ.

ಆದಕಾರಣ ನಾವು ಸಾಹಿತ್ಯಪ್ರಪಂಚವನ್ನು ಒಂದು ವೇದಿಕೆಯಂತೆ ಭಾವಿಸುವುದಕ್ಕಿಂತಲೂ ಒಂದು ಸೋಪಾನಪಂಕ್ತಿಯಂತೆಯೊ ಅಥವಾ ಒಂದು ಪರ್ವತಶ್ರೇಣಿಯಂತೆಯೊ ಭಾವಿಸಿದರೆ ಉತ್ತಮ. ಎಲ್ಲ ತರಹದ ಸಾಹಿತ್ಯವೂ ಸಮಾನ ಪ್ರಯೋಜನಕರವಾದುದೆಂದಾಗಲಿ ಸಮಾನ ಯೋಗ್ಯವಾದುದೆಂದಾಗಲಿ ನಿರೀಕ್ಷಿಸಿ, ಬೆಲೆಕಟ್ಟಿ, ಒಂದನ್ನು ಹೊಗಳಿ ಇನ್ನೊಂದನ್ನು ತೆಗಳುವುದು ಅನಾವಶ್ಯಕ. ಆಯಾ ಶ್ರೇಣಿಗೆ ಸೇರಿದ ಸಾಹಿತ್ಯ ತನ್ನ ಸ್ಥಾನ ತನ್ನಿಂದ ನಿರೀಕ್ಷಿಸುವುದನ್ನು ಮಾಡಿದರೆ ಅದು ಉತ್ತಮ ಸಾಹಿತ್ಯವೆ.

ವಿವಿಧ ಶ್ರೇಣಿಗೆ ಸೇರಿ ವಿವಿಧ ಸ್ಥಾನಗಳಲ್ಲಿ ನಿಂತಿರುವ ವಿವಿಧ ಸಾಹಿತ್ಯ ಕೃತಿಗಳಿಂದ ಯಾವುದಾದರೂ ಒಂದೇ ಪ್ರಯೋಜನವನ್ನು ಬಯಸುವುದೂ ತಪ್ಪು. ಹತ್ತೊಂಬತ್ತನೆಯ ಶತಮಾನದ ಪಾಶ್ಚಾತ್ಯ ವಿಮರ್ಶಕರಿಂದ ಪ್ರಣೀತವಾಗಿ ಭಾರತೀಯ ತರುಣರ ಮತ್ತು ಯುವಕರ ಮನಸ್ಸನ್ನು ಮೋಹಿಸಿದ ‘ಕಲೆಗಾಗಿ ಕಲೆ’ ಯಂತಹ ಸ್ವಾರಸ್ಯವಾದ ಯುರೋಪೀಯ ಸಿದ್ದಾಂತ ಭ್ರಾಂತಿಗಳಿಂದ ಆವಿಷ್ಟರಾಗದೆ ತೆರೆದ ಮನಸ್ಸಿನಿಂದಿರುವುದು ಲೇಸು. ರಸಾನುಭವವೇ ಕಾವ್ಯದ ಪರಮ ಪ್ರಯೋಜನವೆಂದು ಅದನ್ನು “ಸಕಲ ಪ್ರಯೋಜನಮೌಲಿಭೂತ” ಎಂಬುದಾಗಿ ವರ್ಣಿಸಿದ ನಮ್ಮ ಪ್ರಾಚೀನ ಕಾವ್ಯ ಮೀಮಾಂಸಕರ ಮತವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆ. ‘ಕಲೆಗಾಗಿ ಕಲೆ’ಯ ಸಿದ್ಧಾಂತಕ್ಕೆ ಕಣ್ಣು ಮುಚ್ಚಿಕೊಂಡು ದುಮುಕಿದರೆ ಅನರ್ಥವಾದೀತು. ಕಾವ್ಯ ಪ್ರಯೋಜನಗಳನ್ನು ಹೇಳುವಾಗ ನಮ್ಮ ಪ್ರಾಚೀನ ಆಲಂಕಾರಿಕರು ಪರಮಪುರುಷಾರ್ಥವಾದ ಮೋಕ್ಷವನ್ನು ಗಂತವ್ಯ ಮತ್ತು ಗಮ್ಯವನಾಗಿ ಗುರುತಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಕಲೆಯನ್ನಾಗಲಿ ಕಾವ್ಯವನ್ನಾಗಲಿ ನಮ್ಮ ಆತ್ಮದ ವಿಕಾಸದ ಮತ್ತು ಆಧ್ಯಾತ್ಮಿಕ ಉದ್ಧಾರದ ಒರೆಗಲ್ಲಿನ ಮೇಲೆ ಉಜ್ಜಿಯೆ ಬೆಲೆ ಕಟ್ಟಬೇಕಾಗುತ್ತದೆ: ಬರಿಯ ಮನೋಲ್ಲಾಸದ ಅಥವಾ ಸುಖಾಸ್ವಾದನೆಯ ದೃಷ್ಟಿ ಮಾತ್ರದಿಂದಲ್ಲ.

ಸಾಹಿತ್ಯ ಅನೇಕ ವಿಧವಾಗಿರುವಂತೆ ಅದರ ಪ್ರಯೋಜನಗಳೂ ಅನೇಕ ವಿಧವಾಗಿವೆ. ಸಮಾಜಸುಧಾರಣೆ, ನೀತಿಬೋಧೆ, ವಿಚಾರಪ್ರಚೋದನೆ, ಮತವಿಡಂಬನೆ, ಮತಪ್ರಶಂಸೆ, ಸ್ವಮತಶ್ಲಾಘನೆ, ಅನ್ಯಮತಖಂಡನೆ, ಸ್ವಜಾತಿ ಸಂಕೀರ್ತನೆ, ಪರಜಾತಿ ನಿಂದನೆ, ವೈಜ್ಞಾನಿಕ ದೃಷ್ಟಿಪ್ರಸಾರ, ರಾಷ್ಟ್ರೀಯತಾ ಪ್ರಚಾರ, ಸಮನ್ವಯ ಧರ್ಮೋಪದೇಶ, ಸರ್ವೋದಯ, ಸಮದರ್ಶನ ಮತ್ತು ಪೂರ್ಣದೃಷ್ಟಿಪ್ರದಾನ ಇತ್ಯಾದಿ ಇತ್ಯಾದಿಯಾಗಿ ಶಿಷ್ಟ ಮತ್ತು ದುಷ್ಟೋದ್ದೇಶಗಳಿಗನುಸಾರವಾಗಿ ಪ್ರಯೋಜನಗಳೂ ಅನೇಕವಾಗಿವೆ. ಜ್ಞಾನ ಛಂದೋಬದ್ಧವಾಗುವಂತೆ ಮೂರ್ಖತೆಯೂ ಛಂದೋಬದ್ಧವಾಗಬಲ್ಲದು. ಸೌಂದರ್ಯ ಛಂದೋಬದ್ಧವಾಗುವಂತೆ ವಿಕಾರವೂ ಆಗಬಲ್ಲುದು. ಸೊಗಸಾಗಿ ಛಂದೋಬದ್ಧವಾದ ಮಾತ್ರಕ್ಕೆ ಅದು ಪೂಜ್ಯ, ದಿವ್ಯ, ಗ್ರಾಹ್ಯ, ಶ್ರೇಷ್ಠ ಎಂದು ಸರ್ವಶ್ಲಾಘ್ಯವಾಗಲಾರದು. ಸಮಾಜವನ್ನಾಗಲಿ ದೇಶವನ್ನಾಗಲಿ ವ್ಯಕ್ತಿಯನ್ನಾಗಲಿ ಉತ್ತಮತೆಯ ಕಡೆಗೊಯ್ಯುವ ಊರ್ಧ್ವಮುಖಿಯಾದ ಉದ್ಧಾರಶಕ್ತಿ ಎಲ್ಲೆಲ್ಲಿ ಇರುತ್ತದೆಯೊ ಅದೆಲ್ಲವೂ ಗ್ರಾಹ್ಯ, ಸ್ವೀಕಾರಯೋಗ್ಯ. ಅದಕ್ಕೆ ವಿರುದ್ಧವಾಗಿ ಅಧೋಮುಖಿಯಾದುದು ನಮಗೆ ಎಷ್ಟೆ ಸ್ವಾರಸ್ಯವಾಗಿರಲಿ ತ್ಯಾಜ್ಯ ಮತ್ತು ಖಂಡನೀಯ. ಅದರ ದಮನಕ್ಕೆ ದಾಕ್ಷಿಣ್ಯ ಅಡ್ಡಬರಬಾರದು; ಏಕೆಂದರೆ ಅದರಿಂದ ಮಾನವೀಯತೆಗೆ ಹಾನಿ ಮತ್ತು ಆತ್ಮಶ್ರೀಗೆ ಗ್ಲಾನಿ.

ನಮಗೆ ನಾನಾ ಪ್ರಯೋಜನದ ಕೆಲಸಗಳಿಗೆ ಬೇಕಾಗುವ ನಾನಾರೀತಿಯ ಸಾಹಿತ್ಯದ ಆವಶ್ಯಕತೆಯಿದೆ. ಅದರಲ್ಲಿ ಸತ್ಯಕ್ಕೆ ಬಹುಮುಖ್ಯವೆಂದು ತೋರುವ ಮೂರನ್ನು ನಿವೇದಿಸುತ್ತೇನೆ.

ಮೊದಲನೆಯದಾಗಿ: ನಮ್ಮ ರಾಷ್ಟ್ರವನ್ನು ಸೆಕ್ಯೂಲರ್ ಸ್ಟೇಟ್ ಎಂದು ಸಾರಿದ್ದೇವೆ, ಎಂದರೆ ಧರ್ಮಬಾಹಿರ, ಮತವಿದ್ವೇಷಕರ, ನಾಸ್ತಿಕ ಅಥವಾ ಚಾರ್ವಾಕ ಎಂದರ್ಥವಲ್ಲ; ಸಮನ್ವಯರಾಷ್ಟ್ರ ಎಂದರ್ಥ. ಎಲ್ಲ ಮತಗಳೂ ಸತ್ಯದೆಡೆಗೆ ನಮ್ಮನ್ನು ಕೊಂಡೊಯ್ಯುವ ಬೇರೆ ಬೇರೆ ಪಥಗಳು. ಆದ್ದರಿಂದ ಯಾವ ಮತವಾಗಲಿ ಇನ್ನೊಂದು ಮತವನ್ನು ನಿಂದಿಸಲು ಕಾರಣವಿಲ್ಲ. ಎಲ್ಲ ಮತಗಳೂ ದೇವರೆಡೆಗೆ ದಾರಿಗಳೆ ಆಗಿರುವುದರಿಂದ ಮತಾಂತರಗೊಳಿಸುವಂತಹ ಅರ್ಧಬರ್ಬರ ಕ್ರಿಯೆಗಳಿಗೂ ಇಲ್ಲಿ ಅರ್ಥವಿಲ್ಲ; ಆದ್ದರಿಂದ ಸ್ಥಾನವಿಲ್ಲ. ಎಲ್ಲರೂ ತಮ್ಮ ತಮ್ಮ ದಾರಿಗಳನ್ನರಿತು ಭಕ್ತಿಯಿಂದ ಭಗವಂತನೆಡೆಗೆ ಸಾಗುವುದರ ಜೊತೆಗೆ, ಅನ್ಯಮತಗಳನ್ನು ಸಹಾನುಭೂತಿಯಿಂದ ಅರಿತು, ಇತರರ ಸಾಮಾಜಿಕ ಜೀವನದೊಂದಿಗೆ ಮೈತ್ರಿಯಿಂದ ಬೆರೆತು, ಭಾಗವಹಿಸಿ, ರಾಷ್ಟ್ರದ ಜನರಲ್ಲಿ ಸಹೋದರಭಾವವನ್ನೂ ಐಕಮತ್ಯದ ಬುದ್ಧಿಯನ್ನೂ ನೆಲೆಗೊಳಿಸಬೇಕು. ಈ ಕೆಲಸದ ಹೊರೆಯ ಮತ್ತು ಹೊಣೆಯ ಮುಕ್ಕಾಲು ಮೂರು ವೀಸ ಪಾಲು ಸಾಹಿತ್ಯದ್ದಾಗಿದೆ. ಆದ್ದರಿಂದ ಸಾಹಿತಿ ಅಥವಾ ಲೇಖಕನಾಗುವವನು ತನ್ನ ಸ್ವಂತಜೀವನದಲ್ಲಿ ಈ ವಿಶಾಲಮನೋಧರ್ಮವನ್ನು ಸ್ಥಾಪಿಸಿಕೊಳ್ಳುವುದು ಅಗತ್ಯ. ಏಕೆಂದರೆ ನಮ್ಮ ತೇಗಿನಲ್ಲಿ ಹೊರ ಬೀಳುವುದು ನಾವು ತಿಂದುದರ ವಾಸನೆ ತಾನೆ!

ಎರಡನೆಯದಾಗಿ: ನಮ್ಮ ರಾಷ್ಟ್ರವನ್ನು ರಿಪಬ್ಲಿಕ್ ಅಥವಾ ಸರ್ವ ಪ್ರಜಾಧಿಪತ್ಯ ಎಂದು ಘೋಷಿಸಿದ್ದೇವೆ. ಅದರ ಗುರಿ ಸರ್ವೋದಯ. ಎಂದರೆ ಎಲ್ಲರ ಏಳಿಗೆ. ಎಲ್ಲರೂ ಸಮ, ಎಲ್ಲರೂ ಸಮಾನ ಎಂಬುದು ತತ್ತ್ವಜ್ಞಾನ ರೂಪದಲ್ಲಿ ಬಹಳ ಹಿಂದಿನಿಂದಲೂ ಋಷಿವಾಣಿಯಾಗಿ ಬಂದಿದೆ. ಸಮತೆ ಮತ್ತು ಸಮದರ್ಶನ ಭಾರತೀಯರ ಧರ್ಮಜೀವನದ ಅಡಿಗಲ್ಲು. ಆದರೆ ನಾನೂ ನೀವೂ ಒಂದೆ ಎಂದು ಆಧ್ಯಾತ್ಮಿಕವಾಗಿ ಒಪ್ಪಿಕೊಳ್ಳುವುದಕ್ಕೂ ನನ್ನ ಜೇಬಿಗೆ ನೀವು ಕೈ ಹಾಕಿದಾಗ ಒದಗುವ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ! ಎಲ್ಲರೂ ದೇವರ ಮಕ್ಕಳೆ ಎಂದು ಹೇಳುತ್ತಾ ಆದಷ್ಟು ಲಾಭ ಸಂಪಾದಿಸಿ ಬಂಡವಾಳಗಾರನಾಗಿ, ತನ್ನ ಬಂಡವಾಳದ ರಕ್ಷಣೆಗಾಗಿ ‘ಇನ್ನೊಬ್ಬರ ಧನಕ್ಕೆ ಆಸೆಪಡಬಾರದು!’ ‘ದೇವರು ಕೊಟ್ಟುದರಲ್ಲಿಯೆ ತೃಪ್ತಿಯಿಂದಿರಬೇಕು!’ ‘ಸುಖಕ್ಕೆ ಮೂಲಕಾರಣ ಧನವಲ್ಲ ಮನ!’ಎಂದೆಲ್ಲ ಧರ್ಮೋಪದೇಶಮಾಡುವುದಕ್ಕೆ ದತ್ತಿಗಳನ್ನು ಬೇಕಾದರೂ ಬಿಟ್ಟು, ಸಾಮಾನ್ಯಜನಕ್ಕೆ ಧರ್ಮದ ಆಫಿಮು ತಿನ್ನಿಸುವ ಕಾಲ ಹಿಂದಾಯಿತು. ಈಗ ಜನ ಅರ್ಥಶಾಸ್ತ್ರ ರಾಜಕೀಯಶಾಸ್ತ್ರ ವಿಜ್ಞಾನಾದಿ ವಿಚಾರಗಳನ್ನು ಸ್ವಪಕ್ಷಸಮರ್ಥನೆಯ ಚುನಾವಣಾಪ್ರಚಾರದ ಭಾಷಣಗಳಿಂದಾದರೂ ಅರಿಯತೊಡಗಿದ್ದಾರೆ. ದೇಶದ ಜಮೀನುದಾರರೂ ಶ್ರೀಮಂತರೂ ಬಂಡವಾಳಗಾರರೂ ದಿನದಿನವೂ ಉಚ್ಚಕಂಠದಿಂದ ಘೋಷಿತವಾಗಿ ಮನೆಯ ಬಾಗಿಲೊಳಗೂ ನುಗ್ಗಿಬರುತ್ತಿರುವ ಈ ಹೊಸ ಹೊಸ ತತ್ತ್ವಗಳ ನ್ಯಾಯಕ್ಕೆ ಹೊಂದಿಕೊಳ್ಳಲಾರದೆ ಅದನ್ನು ಒಂದು ರೀತಿಯ ದರೋಡೆ ಎಂದೆ ಭಾವಿಸುತ್ತಾರೆ. ಅದು ದರೋಡೆಯಲ್ಲ; ಹಿಂದೆ ಧಾರ್ಮಿಕ ಉಪಾಯಗಳಿಂದ ಮಾಡಿದ್ದ ದರೋಡೆಯನ್ನು ಈಗ ಕಾರ್ಮಿಕ ಉಪಾಯಗಳಿಂದ ಹಂಚುವ ವಿಧಾನ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು. ಯಾವುದನ್ನು ಆಧ್ಯಾತ್ಮಿಕವಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾ ಬಂದಿದ್ದಾರೊ ಅದನ್ನು ಲೌಕಿಕವಾಗಿಯೂ ಸಾಧಿಸುವುದಕ್ಕೆ ಆವಶ್ಯಕವಾದ ಮಾನಸಿಕ ಹಿನ್ನೆಲೆಯನ್ನೂ ಹೃದಯದ ಪರಿವರ್ತನೆಯನ್ನೂ ಉಂಟುಮಾಡಬೇಕು. ಆ ದಿಕ್ಕಿನಲ್ಲಿ ಸಾಹಿತ್ಯ ಮಾಡಬೇಕಾಗಿರುವ ಕೆಲಸ ಅತ್ಯಂತ ಮಹತ್ತಾದುದಾಗಿದೆ.

ಮೂರನೆಯದಾಗಿ: ಮಾನವನ ಬ್ರಾಹ್ಮೀಪ್ರಜ್ಞಾವಿಕಾಸಕ್ಕೆ ಪೂರ್ವಭಿತ್ತಿ ರೂಪವಾಗಿರುವ ಪೂರ್ಣದೃಷ್ಟಿಯ ರಸಸ್ಯಂದಿಯಾದ ಪ್ರತಿಪಾದನೆ. ತತ್ತ್ವದ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಇದನ್ನು ಒಂದಲ್ಲ ಒಂದು ರೀತಿಯಲ್ಲಿ ವೇದೋಪನಿಷತ್ತುಗಳ ಕಾಲದಿಂದಲೂ ಸಾರುತ್ತಾ ಸಾಧಿಸುತ್ತಾ ಬಂದಿದೆ. ಅದನ್ನು ಆಯಾ ಯುಗದ ಧರ್ಮವಿಕಾಸದ ಸ್ವರೂಪಾನುಗುಣವಾಗಿ ಸಂಪೂರ್ಣವಾಗಿ ಸಾಧಿಸಿ, ಸಿದ್ಧಪುರುಷರಾಗಿ, ವಿಶ್ವಮಾನವರಾಗಿ, ಪೃಥ್ವೀತತ್ತ್ವಕ್ಕೆ ಪರಾಶಕ್ತಿಯ ಆವಾಹನೆ ಮಾಡಿ, ಅಲ್ಪಮಾನವ ಭೂಮಮಾನವನಾಗಿ ಪರಿವರ್ತನೆಹೊಂದುವುದಕ್ಕೆ ನೆರವಾಗಿ ಹೋದ ಋಷಿ ರಸ ಋಷಿವರೇಣ್ಯರೂ ಅನೇಕರಿದ್ದಾರೆ. ಈ ವಿಶ್ವಮಾನವ ರಚನೆಯೆ ನಮ್ಮ ಇತರ ಎಲ್ಲ ಉದ್ಧಾರೋದ್ಯಮಗಳ ಮತ್ತು ಸುಖ ಸಾಧನೆಯ ಸಾಹಸಗಳ ಅಂತರಾತ್ಮದಲ್ಲಿ ಅಡಗಿರುವ ಪ್ರಚ್ಛನ್ನ ಪ್ರೇರಣೆ. ಈ ಪೂರ್ಣದೃಷ್ಟಿ ದೇಶ ಕಾಲ ಪೂರ್ವ ಪಶ್ಚಿಮ ಮತ ಜಾತಿ ವರ್ಣ ಪಕ್ಷ ಪಂಥ ಸಿದ್ಧಾಂತಾದಿ ಎಲ್ಲ ತೆರನಾದ ಸೀಮೆಗಳನ್ನೂ ಉಲ್ಲಂಘಿಸಿ ಅತೀತವಾಗಿರುತ್ತದೆ, ಅನಿಕೇತನವಾಗಿರುತ್ತದೆ, ನಿತ್ಯವಾಗಿರುತ್ತದೆ. ಈ ಪೂರ್ಣದೃಷ್ಟಿ ಜನಾಂಗ ಜನಾಂಗಗಳ ನಡುವೆ ಗೋಡೆ ಕಟ್ಟಿಕೊಂಡ ನಿಂತಿರುವ ರಾಷ್ಟ್ರೀಯತೆಯನ್ನು ಉತ್ತರಿಸಿ, ಮಾನವನಿಂದ ಮಾನವನನ್ನು ಪ್ರತ್ಯೇಕಿಸುತ್ತಿರುವ ಕ್ಷುದ್ರಭೇದಗಳನ್ನು ಇಲ್ಲಗೈದು, ಶಾಶ್ವತವೂ ಸರ್ವ ಸಂಪೂರ್ಣತಾಸಿದ್ಧಿಕಾರವೂ ಆಗಿರುವ ನಿತ್ಯಶಾಂತಿಯ ಕಡೆಗೆ ಜಗತ್ತನ್ನು ಒಯ್ಯುತ್ತದೆ. ಸಕಲ ಪುರುಷಾರ್ಥಗಳ ಶಿಖರಪುರುಷಾರ್ಥಕ್ಕೆ ಜಗತೀಚೇತನಯನ್ನೇರಿಸುತ್ತದೆ. ಸಹೃದಯಾತ್ರಿ ಸಾಹಿತ್ಯಹೈಮಾಚಲ ಪರ್ವತಶ್ರೇಣಿಗಳಲ್ಲಿ ಈ ತುತ್ತತುದಿಯ ಶ್ರೇನಿಯ ಈ ಕೈಲಾಸಪವಿತ್ರ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಮಾನವತ್ವ ದೇವತ್ವದಲ್ಲಿ ಪದಾರ್ಪನ ಮಾಡಿ ಸಾರ್ಥಕ್ಯ ಹೊಂದುತ್ತದೆ.

ಆದರೆ ಸಾಹಿತಿ ಯಾವ ತತ್ತ್ವವನ್ನಾಗಲಿ ಆಲೋಚಿಸಿ ಅದನ್ನೊಂದು ಸಿದ್ಧಾಂತರೂಪಕ್ಕೆ ತಂದುಕೊಂಡು ಆಮೇಲೆ ಅದನ್ನು ಬುದ್ದಿಪೂರ್ವಕವಾಗಿ, ಪ್ರಯೋಜನವನ್ನು ಮೂರುಹೊತ್ತೂ ಮನಸ್ಸಿನ ಮುಂದೆ ಇಟ್ಟುಕೊಂಡು, ಬರೆಯತೊಡಗಿದರೆ ರಸಾತ್ಮಕವಾದ ಕೃತಿ ಮೂಡಲಾರದು. ಹಾಲು ಕೊಡುವ ಹೊಲಗದ್ದೆ ಕಾಡುಮೇಡುಗಳಲ್ಲಿ ಹುಲ್ಲು ಹಸುರು ಚಿಗುರು ಸೊಪ್ಪು ಹಣ್ಣುಕಾಯಿ ಮೊದಲಾದುವುಗಳನ್ನು ಮೇದು, ತಿಂದು, ಕೊಟ್ಟಿಗೆಗೆ ಬಂದು, ಮಲಗಿ ಮೆಲುಕುಹಾಕಿ, ಹೊತ್ತರೆಯಲ್ಲಿ ತನ್ನ ಕರುವಿಗೆ ಕೆಚ್ಚಲು ಸೊರಸುವಂತೆ, ಸಾಹಿತಿಯಾದವನು ತನ್ನ ಬುದ್ದಿಭಾವಮಯವಾದ ಚಿತ್ಕೋಶವನ್ನು ಅಧ್ಯಯನದಿಂದ, ವಿದ್ವಜ್ಜನ ಸಂಪರ್ಕದಿಂದ, ಲೋಕಾನುಭವದಿಂದ, ಸ್ವಂತ ಚಿಂತನ ಧ್ಯಾನ ಸಾಧನಾದಿಗಳಿಂದ ಸುಪುಷ್ಟವನ್ನಾಗಿ, ಸುವಿಸ್ತೃತವನ್ನಾಗಿ, ಶ್ರೀಮಂತವನ್ನಾಗಿ ಮಾಡಿಕೊಳ್ಳಬೇಕು. ಆ ಅನುಭವವೆಲ್ಲವೂ  ಸೇರಿ ಆತನ ಚೇತನೆಯಲ್ಲಿ ಒಂದು ಸಪ್ರಾಣ ಜ್ಯೋತಿಶ್ಯಕ್ತಿ, ಯಾವ ಗುಣವೂ ಅಲ್ಲದೆ ಎಲ್ಲ ಗುಣಗಳನ್ನೂ ಒಳಗೊಂಡು ಯಾವ ಗುಣವಾಗಿ ಬೇಕಾದರೂ ಮೈದೋರುವ ಸಾಮರ್ಥ್ಯವುಳ್ಳ ನಿರ್ಗುಣವಾದ ಒಂದು ಚಿತ್‌ತಪಸ್‌ಶಕ್ತಿ, ಆವಿರ್ಭಾವವಾಗುತ್ತದೆ. ಅದರಿಂದ ಹೊಮ್ಮುತ್ತದೆ ಉತ್ತಮ ಸಾಹಿತ್ಯ, ಉತ್ಕೃಷ್ಟ ರಸಕೃತಿ.

ಗೋವು ಮೇಯುವ ಯಾವುದೆ ಆಹಾರವಾಗಿರಲಿ ರಸಮಾರ್ಗಸಹಜವಾದ ಅದರ ಕೆಚ್ಚಲಿನಿಂದ ಬಂದಾಗಲೆ ಕ್ಷೀರವಾಗುತ್ತದೆ. ಬೇರೆ ದಾರಿಗಳಿಂದ ಬಂದಾಗ ಗೋಮಯವಾಗಬಹುದು, ವಮನವಾಗಬಹುದು, ನೆತ್ತರಾಗಬಹುದು, ಸ್ವೇದವಾಗಬಹುದು; ಆದರೆ ಅಮೃತವಾಗಲಾರದು. ಗೋಮಯಾದಿಗಳಿಗೂ ಬೇರೆ ಬೆಲೆ, ಬೇರೆ ಪ್ರಯೋಜನಗಳಿರುತ್ತವೆ. ಆದರೆ ಹಾಲಿನ ಬೆಲೆ ಹಾಗೂ ಅದರ ಪ್ರಯೋಜನವೇ ಬೇರೆ. ಹಾಗೆಯೆ ಸಾಹಿತಿಯ ತಾತ್ತ್ವಿಕ ಸಿದ್ಧಾಂತಗಳು ಏನೆ ಇರಲಿ, ಆತನ ರಾಜಕೀಯ ಸಾಮಾಜಿಕ ಮತೀಯ ಆರ್ಥಿಕಾದಿ ಅಭಿಪ್ರಾಯಗಳು ಆದರ್ಶಗಳೂ ಆಲೋಚನೆಗಳೂ ಏನೆ ಆಗಿರಲಿ, ಅವೆಲ್ಲವೂ ಗೋವಿನ ಆ ಪೀನಪಯೋಧರಸದೃಶವಾದ ಆತನ ರಸಮಯ ಚಿತ್ಕೋಶದಿಂದ ಹೊಮ್ಮಿ ಬಂದಲ್ಲದೆ ಅಂತವಸ್ತುವಾಗಿ ಪರಿಣಮಿಸುವುದಿಲ್ಲ. ಆ ರಸಮಯ ಚಿತ್ಕೋಶದಿಂದಲ್ಲದೆ ಬೇರೆ ದಾರಿಗಳಲ್ಲಿ ಬಂದುದೆಲ್ಲ ಗೋಮಯಾದಿಗಳಂತೆ ಅನ್ಯಪ್ರಯೋಜನಕಾರಿಗಳಾದ ಆರ್ಥಿಕ ರಾಜಕೀಯ ಮತೀಯಾದಿ ಭೂಮಿಕೆಗಳಲ್ಲಿ ಸಫಲಕೃತಿಗಳಾಗಬಹುದೆ ವಿನಾ ನಮಗೆ ‘ಯಂ ಲಬ್ದ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ’ ಎಂಬಂತಹ ಅಮೃತವೀಯಲಾರವು.

ಆದ್ದರಿಂದ ಎಲ್ಲ ವಿಧವಾದ ಲೋಕಾನುಭವಗಳನ್ನೂ ರಸಾನುಭವಕ್ಕೆ ಪರಿವರ್ತಿಸುವ ಚಿದ್ಯಂತ್ರರೂಪಿಯಾಗಿ ಸಾಹಿತ್ಯದ ಸವಾಧಾರಮೂಲದಂತಿರುವ ಸಾಹಿತಿ ಮೊದಲು ತನ್ನನ್ನು ತಾನೆ ರಚಿಸಿಕೊಳ್ಳುವುದು ಅತ್ಯಗತ್ಯ. ಉತ್ತಮ ಸಾಹಿತ್ಯಕೃತಿ ಒಂದು ಆಚಾರ್ಯಚೇತನದ ಜೀವಿತ ಸಮಸ್ತದ ಸಾರ ಸರ್ವಸ್ವ ಎಂದು ಮಹಾಕವಿಯೊಬ್ಬನು ವರ್ಣಿಸಿದ್ದಾನೆ. ಆ ಸಾರಸರ್ವಸ್ವ ಜೀವನಗೋಕ್ಷಿರೋಪಮ; ಲೋಕದ ಕಹಿಯೆಲ್ಲವನ್ನೂ ಪರಿಹರಿಸಿ ಅಥವಾ ಪರಿವರ್ತಿಸಿ ನಮ್ಮ ಹೃದಯಕ್ಕೆ ಅಮೃತಪಾನಮಾಡಿಸುತ್ತದೆ, ನಮ್ಮನ್ನು ಆಶಿಷ್ಠರನ್ನಾಗಿ ದೃಢಿಷ್ಠರನ್ನಾಗಿ ಬಲಿಷ್ಠರನ್ನಾಗಿ ಮೇಧಾವಿಗಳನ್ನಾಗಿ ಮಾಡುತ್ತದೆ. ‘ಯಸ್ಮಿತ್ ಸ್ಥಿತೋನ ದುಃಖೇನ ಗುರುಣಾಪಿ ವಿಚಾಲ್ಯತೇ’ ಎಂಬ ಆನಂದಸ್ಥಿತಿಗೆ ನಮ್ಮನ್ನು ಏರಿಸುತ್ತದೆ.

“ಸಂಸಾರದ ವಿಷವೃಕ್ಷದಿ ಹಣ್ಣೆರಡಿವೆ ಅಮೃತೋಪ:
ಕಾವ್ಯಾಮೃತದಾಸ್ವಾದನ ಮೇಣ್ ಸಜ್ಜನ ಸಲ್ಲಾಪ!”

ಎಂಬರ್ಥದ ಒಂದು ಸಂಸ್ಕೃತ ಸುಭಾಷಿತವೂ ಇದನ್ನೆ ಪ್ರತಿಪಾಧಿಸಿದೆ. ಸಂಸಾರವು ವಿಷವೃಕ್ಷದಂತಿದ್ದರೂ ಅದು ಆಸ್ವಾದ್ಯ; ಏಕೆಂದರೆ ಅದರಲ್ಲಿ ಎರಡಾದರೂ ಅಮೃತಸದೃಶವಾದ ಹಣ್ಣುಗಳಿವೆ: ಒಂದು ಸಜ್ಜನಸಲ್ಲಾಪ, ಇನ್ನೊಂದು ಕಾವ್ಯಾಮೃತಾಸ್ವಾದನ.

ಸಾಹಿತಿಗೆ ಕವಿಗೆ ರಸಋಷಿಗೆ ಅವಶ್ಯವಾಗಿ ಬೇಕಾಗಿರುವ ಈ ಸಿದ್ಧತೆ ವಾಸ್ತವವಾಗಿಯೂ ಒಂದು ದೀರ್ಘ ತಪಸ್ಯೆ. ಅವನ ಬದುಕಿನ ವೃಕ್ಷ ಮುಗಿಲತ್ತ ಆಕಾಶದೆತ್ತರಕ್ಕೆ ಬೆಳೆಯಬೇಕಾದರೆ ಅದರ ತಾಯಿಬೇರು ಆಳವಾಗಿ ಇಳಿದು, ಕವಲುಕವಲಾಗೊಡೆದು, ದಿಕ್ಕುದಿಕ್ಕಿಗೆ ಪ್ರಸರಿಸಿ, ಆಹಾರ ಸತ್ತ್ವಗಳನ್ನು ಹೀರಿಕೊಳ್ಳಬೇಕಾಗುತ್ತದೆ. ಆ ತಾಯಿಬೇರಿನ ಕವಲುಗಳಲ್ಲಿ ಮುಖ್ಯೋಪಕರಣಗಳಂತಿರುವ ಮೂರನ್ನು ನಾನು ನಮ್ಮ ಪ್ರವರ್ಧಮಾನ ತರುಣರ ಮುಂದಿಡಲು ಬಯಸುತ್ತೇನೆ. ಭಾರತೀಯವಾದ ಪ್ರಾಚೀನ ವಿದ್ಯಾಸಂಸ್ಕೃತಿಗಳ ಸಾರಗ್ರಾಹಿಯಾಗಿ ಒಂದು ಹೆಗ್ಗವಲು ಇಳಿಯಬೇಕಾಗುತ್ತದೆ; ಭಾರತೇತರವಾದ ಉದ್ದಾಮ ವಿದ್ಯಾಸಂಸ್ಕೃತಿಗಳ ಸಾರಗ್ರಾಹಿಯಾಗಿ ಇನ್ನೊಂದು; ಕರ್ನಾಟಕದ ಭಾಷೆ ವಿದ್ಯೆ ಕಲೆ ಸಂಸ್ಕೃತಿ ಇತ್ಯಾದಿಗಳ ಸಾರ ಮಾತ್ರವನ್ನಲದೆ ವಿವರಗಳನ್ನೆಲ್ಲ ಕೂಲಂಕಷವಾಗಿ ಅರಿಯುವ ಮತ್ತು ಅಭ್ಯಸಿಸುವ ಸಲುವಾಗಿ ಮತ್ತೊಂದು. ಈ ಮೂರನ್ನೂ ಸಾಧಿಸಲು ಸಹಾಯಕವಾಗಿ ಕನಿಷ್ಠಪಕ್ಷ ಮೂರಾದರೂ ಭಾಷೆಗಳು ಬೇಕಾಗುತ್ತವೆ. ಒಂದು ಅನಿವಾರ್ಯವಾಗಿಯೆ ಕನ್ನಡ; ಇನ್ನೊಂದು ಆವಶ್ಯಕವಾಗಿಯೆ ಸಂಸ್ಕೃತ; ಮತ್ತೊಂದು, ಸದ್ಯದ ನಮ್ಮ ಪರಿಸ್ಥಿತಿಯಲ್ಲಿ, ಇಂಗ್ಲಿಷ್. ಬಹುಶಃ ಕೆಲವು ಕಾಲದಮೇಲೆ, ವ್ಯಾಪ್ತಿಯಲ್ಲಿ ಶಕ್ತಿಯಲ್ಲಿ ಇಂಗ್ಲಿಷಿಗೆ ಹೆಗಲೆಣೆಯಾಗಿ ಪ್ರಪಂಚಕ್ಕೂ ನಮಗೂ ನಡುವೆ ಕಾಲುವೆಯಾಗಬಲ್ಲ ಹಾಗೂ ಸೇತುವೆಯಾಗಬಲ್ಲ ಇನ್ನಾವುದಾದರೂ ಒಂದು ವಿದೇಶೀಯ ಭಾಷೆ. ಕನ್ನಡದಲ್ಲಿ ಏನಾದರೂ ತೂಕವಾದ ಮತ್ತು ನಾಲ್ಕು ಕಾಲ ಬಾಳುವ ಸತ್ತ್ವವುಳ್ಳ ಸಾಹಿತ್ಯ ಸೃಷ್ಟಿ ಮಾಡಬೇಕೆಂದು ಬಯಸುವ ಯಾವ ತರುಣನಾಗಲಿ ಮೇಲೆ ಸೂಚಿಸಿದ ದೀಕ್ಷೆಯಿಂದ ದೂರನಾಗಿಯೂ ಕೃತಕೃತ್ಯನಾಗುತ್ತೇನೆ ಎಂದು ಭಾವಿಸಿದರೆ ಅದು ಅಸಾಧ್ಯ.

ಕೊನೆಯದಾಗಿ, ಸಾಹಿತ್ಯಸೃಷ್ಟಿಯ ಉತ್ಕರ್ಷಕ್ಕೂ ಸಹೃದಯ ರಸಾಸ್ವಾದನೆಗೂ ಅತ್ಯಾವಶ್ಯಕವಾಗಿರುವ ಒಂದು ವಿಚಾರದತ್ತ ತಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಮ್ಮ ಸಾಹಿತ್ಯ ತನ್ನ ಆಧುನಿಕ ಕಾಲಾವಧಿಯಲ್ಲಿ ನಾನಾಮುಖವಾಗಿ ಬೆಳೆದಿದೆ ಎಂಬುದೇನೊ ನಿಜ; ಆದರೆ ಸಾಹಿತ್ಯವಿಮರ್ಶೆಯ ಹಾಗೂ ಕಾವ್ಯಮೀಮಾಂಸೆಯ ಮುಖದಲ್ಲಿ ಮಾತ್ರ ಅದು ಇತರ ಮುಖಗಳಲ್ಲಿ ಮುಂದುವರಿದಂತೆ ಬೆಳೆದಿಲ್ಲ. ಈಗಾಗಲೆ ಸೃಷ್ಟಿಯಾಗಿರುವ ಸಾಹಿತ್ಯದ ಸ್ವರೂಪವನ್ನು ಜನತೆಗೆ ನಿರೂಪಿಸುವುದಕ್ಕೂ ಮುಂದೆ ಸೃಷ್ಟಿಯಾಗಲಿರುವ ಸಾಹಿತ್ಯವನ್ನು ಜನತಾಹೃದಯದ ದೃಷ್ಟಿಯಿಂದ ರೂಪಿಸುವುದಕ್ಕೂ ವಿಮರ್ಶೆ ನೆರವಾಗುತ್ತದೆ. ಸಾಹಿತ್ಯದ ಸ್ವರೂಪ, ಸಾಹಿತ್ಯದ ಉದ್ದೇಶ, ಸಾಹಿತ್ಯದ ಪ್ರಯೋಜನ, ಸಾಹಿತ್ಯಪ್ರಕಾರಗಳು, ಸಾಹಿತ್ಯಸತ್ವದ ವಿವಿಧಾಂಗಗಳು ಮೊದಲಾದ ಮೂಲತತ್ವ್ತಗಳನ್ನು ಕುರಿತು ಜಿಜ್ಞಾಸೆ ಸಾಹಿತಿಯ ದೃಷ್ಟಿ ರಚನೆಗೆ ಸಹಕಾರಿಯಾಗುತ್ತದೆ. ವಾಚಕನ ಅಥವಾ ಸಹೃದಯನ ದಿಕ್ಕಿನಿಂದಲೂ ಸಾಹಿತ್ಯವಿಮರ್ಶೆ ಆಧುನಿಕ ಸಾಹಿತ್ಯದ ಪರಿಚಯ ಮಾಡಿಕೊಡುವುದು ಅತ್ಯಗತ್ಯವಾಗಿದೆ. ಯಾರ ಅಭಿರುಚಿ ಹಳೆಯ ರೀತಿಯ ಸುಪರಿಚಿತ ಸಾಹಿತ್ಯ ಪ್ರಕಾರಗಳಿಂದಲೆ ಇದುವರೆಗೂ ತೃಪ್ತಿಪಡೆಯುತ್ತ ಬಂದಿದೆಯೊ ಅವರಿಗೆ ಹೊಸದು ಮೊದಮೊದಲು ವಿಲಕ್ಷಣವಾಗಿ ಅಗ್ರಾಹ್ಯವಾಗುತ್ತದೆ. ಆದರೆ ಹೊಸದರಲ್ಲಿ ಏನಾದರೂ ನಿಜವಾದ ಸತ್ತ್ಯಾಂಶ ರಸಾಂಶಗಳು ಇರುವ ಪಕ್ಷಕ್ಕೆ ಅದನ್ನು ತೋರಿಸಿಕೊಟ್ಟು ಅಭಿರುಚಿಯನ್ನು ಅಕೃಪಣವನ್ನಾಗಿ ಮಾಡಬೇಕಾದ ಕರ್ತವ್ಯ ವಿಮರ್ಶೆಯದು.

ಅಷ್ಟೇ ಅಲ್ಲ. ಹಳೆಯದರ ಹಳೆಯ ಪರಿಚಯವನ್ನೂ ಹೊಸತು ಮಾಡಿ  ಕೊಡುವ ಮತ್ತೊಂದು ಮಹತ್ತರ ಕಾರ್ಯ ಸಾಹಿತ್ಯಮೀಮಾಂಸಕನ ಮುಂದೆ ಗುರುತರವಾಗಿದೆ. ನಮ್ಮ ಕಾವ್ಯ ಪುರಾಣಗಳನ್ನು ಜನತೆ ಇದುವರೆಗೆ ಒಂದು ಶ್ರದ್ಧೆಯಿಂದ, ಒಂದು ಭಕ್ತಿಯಿಂದ, ಒಂದು ಗೌರವದಿಂದ, ಒಂದು ಪ್ರೀತಿಯಿಂದ ಓದುತ್ತಾ ಆಸ್ವಾದಿಸುತ್ತಾ ಪೂಜಿಸುತ್ತಾ ಬಂದಿದೆ. ಆ ಪವಿತ್ರ ಕಥೆಗಳಲ್ಲಿ ಬರುವ ಕಥಾನಯಕಾದಿ ಪಾತ್ರಗಳ ವಿಚಾರದಲ್ಲಿಯೂ ಅವರು ನಡೆದ ನಡೆ, ನುಡಿದ ನುಡಿ, ಮಾಡಿದ ಕೆಲಸ, ಬೋಧಿಸಿದ ಉಪದೇಶ ಇತ್ಯಾದಿಗಳ ವಿಚಾರದಲ್ಲಿಯೂ ಸಂಪ್ರದಾಯಸಿದ್ದವಾದ ಒಂದು ಸ್ವೀಕಾರಬುದ್ದಿ ಇದುವರೆಗೂ ನಮ್ಮ ಜನಸಾಮಾನ್ಯರಲ್ಲಿ ಅಸ್ಖಲಿತವಾಗಿತ್ತು. ಆದರೆ ಈಗ ವೈಜ್ಞಾನಿಕವಾದ ಒಂದು ವಿಚಾರದೃಷ್ಟಿ ಉದ್ದೀಪನವಾಗುತ್ತಿದೆ. ಎಲ್ಲ ನಂಬುಗೆಗಳನ್ನೂ, ಅವು ಎಷ್ಟೇ ಪ್ರಾಚೀನವಾಗಿರಲಿ, ಎಷ್ಟೇ ಪೂಜ್ಯವಾಗಿರಲಿ, ವಿಚಾರ ನಖದಿಂದ ಕೆರೆದುನೋಡುವ ಒಂದು ಸ್ವತಂತ್ರಮತಿ ಜನಸಾಮಾನ್ಯರಲ್ಲಿಯೂ ತನ್ನ ವೈಜ್ಞಾನಿಕ ಹಸ್ತಪ್ರಸಾರ ಮಾಡುತ್ತಿದೆ. ಆ ಕಥೆಗಳನ್ನೂ ಆ ಕಥೆಗಳಲ್ಲಿ ಬರುವ ದೈವೀಪಾತ್ರಗಳನ್ನೂ ಅಲ್ಲಿ ಸಂಭವಿಸು ಅದ್ಭುತ ಘಟನೆಗಳನ್ನೂ ನಂಬಲು ಆವಶ್ಯಕವಾದ ಒಂದು ಶಿಶುಸಹಜ ಮುಗ್ಧತೆ ಜನರಿಂದ ಮಾಯವಾಗುತ್ತಿದೆ. ಆ ಮೌಢ್ಯಭಂಗಿಯನ್ನು ನಾವು ಶ್ರದ್ಧೆ ಎಂದು ಕರೆರೂ ದಿನ ದಿನವೂ ಬೆಳಗುತ್ತಿರುವ ವೈಜ್ಞಾನಿಕ ದೃಷ್ಟಿಯ ವಿಚಾರದೀಪ್ತಿಯ ಮುಂದೆ ಅದಕ್ಕೆ ಉಳಿಗತಿಯಿಲ್ಲವೆಂದು ತೋರುತ್ತದೆ. ವಿಜ್ಞಾನಬುದ್ದಿಯ ಬಿಸಿಲಿನಲ್ಲಿ ಆ ಶ್ರದ್ಧೆ ಬತ್ತಿಹೋದಮೇಲೆ ಜನರು ಆ ಕಥೆಗಳನ್ನೂ ಆ ಪಾತ್ರಗಳನ್ನೂ ಆ ಘಟನೆಗಳನ್ನೂ ಕವಿಕಲ್ಪಿತ ಮಿಥ್ಯೆಗಳೆಂದೂ ಬರಿಯ ಕಲ್ಪನಾವಿಲಾಸದ ಒಂದು ಸೊಗಸಿಗಾಗಿ ಓದತಕ್ಕವೆಂದೂ ಅವುಗಳನ್ನೆಲ್ಲ ಈಸೋಫನ ಕತೆಗಳನ್ನೆಂತೊ ಅಂತೆ ಬಾಲಕರಿಗಾಗಿ ಮೀಸಲಿಡುತ್ತಾರೆ. ಹಾಗೇನಾದರೂ ಆದರೆ ಮಾನವ ಕುಲಕ್ಕೆ ಒಂದು ದೊಡ್ಡ ಅಪಘಾತ ಸಂಭವಿಸಿದಂತಾಗುತ್ತದೆ. ಆದರೆ ನಾವು ಈಗ ಹೋಗುತ್ತಿರುವ ಹಾದಿಯಲ್ಲಿಯೆ ಹೋಗುತ್ತಿದ್ದರೆ ಆ ಅಪಘಾತ ಅನಿವಾರ್ಯ. ಅಂತಹ ಅಪಘಾತದಿಂದ ನಮ್ಮ ಅನರ್ಘ್ಯರಸಭಂಡಾರದ ಕೃತಿಗಳನ್ನು ರಕ್ಷಿಸುವುದೆಂತು? ಅವುಗಳ ರಸಕೋಶದಲ್ಲಿರುವ ದರ್ಶನ ಜ್ಯೋತಿಯೂ ಶಕ್ತಿಯೂ ಮಾನವ ಹೃದಯಕ್ಕವತರಿಸಿ, ಅಲ್ಲಿ ಸುಪ್ತವಾಗಿರುವ ದೈವೀಪ್ರಜ್ಞೆಯ ಉನ್ಮೀಲನಕ್ಕೂ ಉನ್ಮೇಷನಕ್ಕೂ ಅವಕಾಶವೊದಗುವಂತೆ ಮಾಡುವುದು ಹೇಗೆ? ಭಾಷೆಗೆ ಲೋಕೋಪಯೋಗ ಮತ್ತು ಭಾವೋಪಯೋಗ ಎಂದು ಎರಡು ಪ್ರಯೋಜನಗಳಿವೆ ಎಂಬ ತತ್ತ್ವವನ್ನು ಪ್ರತಿಪಾದಿಸಿ ಅವುಗಳಲ್ಲಿರಬಹುದಾದ  ಮೌಢ್ಯಾಂಶವನ್ನು ತೊರೆದು ಜ್ಞಾನಾಂಶ ರಸಾಂಶ ದರ್ಶನಾಂಶಗಳನ್ನು ರಕ್ಷಿಸುವುದು ಸಾಧ್ಯವೆ? ಸಂಕೇತ, ಪ್ರತೀಕ ಮತ್ತು ಪ್ರತಿಮಾ ಈ ಮೂರಕ್ಕೂ ಇರುವ ವ್ಯತ್ಯಾಸವನ್ನು ಮನಶ್ಯಾಸ್ತ್ರೀಯವಾಗಿ ವಿವರಿಸಿ ಅವುಗಳಲ್ಲಿರುವ ನಿತ್ಯಾಂಶವನ್ನು ಸಹೃದಯರು ಗ್ರಹಿಸುವಂತೆ ಮಾಡಲು ಸಾಧ್ಯವೆ? ಪ್ರತಿಮಾವಿಧಾನದ ಮತ್ತು ದರ್ಶನ ಧ್ವನಿಯ ಸಿದ್ಧಾಮತಗಳನ್ನು ಮನೋವಿಜ್ಞಾನದ ಆಧಾರದ ಮೇಲೆ ತತ್ತ್ವಶಾಸ್ತ್ರೀಯವಾಗಿ ಪ್ರತಿಪಾದಿಸಿ ಆ ಮಹಾಕಾವ್ಯಪುರಾಣಗಳ ಕಥಾಪ್ರತಿಮೆಗಳಲ್ಲಿ ಕಾಲ ದೇಶ ಮತಾದಿ ಬದ್ಧವಾದ  ನಶ್ವರಾಂಶವನ್ನು ಮೀರಿ ಸಾರ್ವದೇಶಿಕ ಮತ್ತು ಸರ್ವಕಾಲಿಕವಾದ ನಿತ್ಯಸತ್ಯಗಳಿರುವುದನ್ನು ಸಹೃದಯ ಹೃದಯ ವೇದ್ಯವನ್ನಾಗಿ ಮಾಡಲೋಸುಗ ನವೀನದೃಷ್ಟಿಗೂ ನವದರ್ಶನಕ್ಕೂ ಹೊಂದಿಕೊಳ್ಳುವಂತೆ, ಆದರೆ ಮೂಲದ ಆಶಯಕ್ಕೂ ಅಲ್ಲಿಯ ಸೌಂದರ್ಯಕ್ಕೂ ಊನ ಬರದಂತೆ, ಅವುಗಳನ್ನು ಪೂರ್ಣವಾಗಿಯಾಗಲಿ ಆಂಶಿಕವಾಗಿಯಾಗಲಿ ಪರಿವರ್ತಿಸಬಹುದೆ?

ಇಂತಹ ಅನೇಕ ಪ್ರಶ್ನೆಗಳೂ ಸಮಸ್ಯೆಗಳೂ ನಮ್ಮೆದುರು ನಿಲ್ಲುತ್ತವೆ. ವಿಮರ್ಶೆ ಅವನ್ನೆಲ್ಲ ಎದುರಿಸಬೇಕಾಗುತ್ತದೆ. ಅವಕ್ಕೆಲ್ಲ ಪರಿಹಾರ ಹುಡುಕಬೇಕಾಗುತ್ತದೆ. ಸಾಧ್ಯಾಸಾಧ್ಯತೆಯನ್ನೂ ಔಚಿತ್ಯವಿವೇಕಗಳನ್ನೂ ವಿಚಾರ ಪೂರ್ವಕವಾಗಿ ಪರಿಶೀಲಿಸಬೇಕಾಗುತ್ತದೆ. ಅಂತಹ ಬಹುಮುಖವಾದ ಮತ್ತು ವ್ಯಾಪಕವಾದ ಕಾರ್ಯನಿರ್ವಹಣೆಯಲ್ಲಿ ವಿಮರ್ಶಕನಿಗೆ ಒಂದು ಗಂಭೀರವಾದ ಮತ್ತು ವಿಶಾಲವಾದ ಪೂರ್ವಸಿದ್ಧತೆ ಬೇಕಾಗುತ್ತದೆ. ನಾನಾ ಸಾಹಿತ್ಯಗಳ ತಲಸ್ಪರ್ಶಿಯಾದ ಪರಿಚಯದ ಜೊತೆಗೆ ಮನಶ್ಯಾಸ್ತ್ರ, ತತ್ತ್ವಶಾಸ್ತ್ರ ಮತ್ತು ಯೋಗವಿಜ್ಞಾನಗಳೂ ಆತನಿಗೆ ನೆರವಾಗುತ್ತವೆ. ಕುಶಾಗ್ರ ಬುದ್ದಿಯ ನಮ್ಮ ಪ್ರಾಚೀನ ಆಲಂಕಾರಿಕರ ಭಾರತೀಯ ಕಾವ್ಯಮೀಮಾಂಸೆಯ ಜೊತೆಗೆ ವಿಪುಲವಾಗಿ ಮತ್ತು ಪ್ರೌಢವಾಗಿ ಬೆಳೆದಿರುವ ಪಾಶ್ಚಾತ್ಯ ಸಾಹಿತ್ಯವಿಮರ್ಶೆಯ ಮತ್ತು ಕಾವ್ಯಮೀಮಾಂಸೆಯ ಜ್ಞಾನವೂ ನೆರೆಯಬೇಕಾಗುತ್ತದೆ. ಮುಂದಿನ ನಮ್ಮ ಸಾಹಿತ್ಯಜೀವನದಲ್ಲಿ ಅಧಿಕಾರಿಯಾದ ಅಂತಹ ವಿಮರ್ಶಕೋತ್ತಮನಿಗೆ ಒಂದು ಮಹತ್ತಾದ ಸ್ಥಾನವಿದೆ. ಆ ಸ್ಥಾನ ಎಂತಹ ಮಹೋನ್ನತಕವಿಯ ಸ್ಥಾನಕ್ಕೇನೂ ಕೀಳಾದುದಲ್ಲ.

ಮಹನೀಯರೆ, ಮಹಿಳೆಯರೆ, ಮಿತ್ರರೆ, ಈ ದೀರ್ಘ ಭಾಷಣಕ್ಕಾಗಿ ತಮ್ಮ ಕ್ಷಮೆಬೇಡುತ್ತೇನೆ. ತಮ್ಮ ತಾಳ್ಮೆಯನ್ನು ಇನ್ನೂ ಹೆಚ್ಚು ಶೋಷಿಸುವ ಸಾಹಸಕ್ಕೆ ನಾನು ಕೈಹಾಕುವುದಿಲ್ಲ. ಈ ಸಂದರ್ಭದಲ್ಲಿ ಆವಶ್ಯಕವೆಂದು ನನಗೆ ತೋರಿದ ಕೆಲವು ಮೂಲಸೂತ್ರರೂಪವಾದ ವಿಷಯಗಳನ್ನು ಕುರಿತು ಸಾಧ್ಯವಾದಷ್ಟು ಮಟ್ಟಿಗೆ ಸಂಗ್ರಹಗೈದು ಪರಿಶೀಲನೆಗಾಗಿ ತಮ್ಮ ಮುಂದೆ ಇಟ್ಟಿದ್ದೇನೆ.

ಈ ಗೌರವದ ಸ್ಥಾನಕ್ಕೆ ನನ್ನನ್ನು ಆರಿಸಿ ಆಶೀರ್ವದಿಸಿರುವುದಕ್ಕಾಗಿ ವಾಗ್ದೇವಿಯ ಮಕ್ಕಳಾಗಿರುವ ನನ್ನ ಸಹೋದರರೆಲ್ಲರಿಗೂ ನಮಸ್ಕರಿಸುವುದರ ಮೂಲಕ ಆ ತಾಯಿಗೆ ನನ್ನ ಅನಂತಾನಂತ ಸಾಷ್ಟಾಂಗ ಪ್ರಣಾಮಗಳನ್ನು ನಿವೇದಿಸುತ್ತೇನೆ. ಅಮ್ಮ ನನ್ನಲ್ಲಿ ಪ್ರಚೋದಿಸಿರುವ ಈ ‘ಅನಿಕೇತನ’ ಪ್ರಾರ್ಥನೆ ನಮ್ಮೆಲ್ಲರ ಅಭೀಪ್ಸೆಯಾಗಿ ಮೇಲೇರಿ ಆಕೆಯ ದಿವ್ಯಚರಣಗಳನ್ನು ಮುಟ್ಟಿ ಪೂಜಿಸುವ ಪುಷ್ಪರಾಶಿಯಾಗಲಿ ಎಂದು ಹಾರೈಸುತ್ತೇನೆ:

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,

ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು:
ಆಗು, ಆಗು, ಆಗು, ಆಗು!
ಓ ನನ್ನ ಚೇತನ,
ಆಗು ನೀ ಅನಿಕೇತನ!

* * *