ಸ್ವಾಮಿ ವಿವೇಕಾನಂದರು ಜನ್ಮಧಾರಣೆಮಾಡಿ ಇಂದಿಗೆ ಒಂದು ಶತಮಾನವಾಗಿದೆ. ಅನಾದಿನಿಧನವೊ ಎಂಬಂತಿರುವ ಈ ಜಗತ್ತಿನ ಸುದೀರ್ಘತಮ ಜೀವಮಾನದಲ್ಲಿ ಒಂದು ಶತಮಾನ ಎಂಬುದು ಒಂದು ಕಣ್ಮಿಟುಕಿಗಿಂತಲೂ ಅಲ್ಪಾಲ್ಪವಾದ ಕಾಲಮಾನವೆನ್ನಬಹದುದಾದರೂ ಒಬ್ಬ ಮಾನವನ ಆಯುರ್ಮಾನದ ದೃಷ್ಟಿಯಿಂದ ಅದು ದೀರ್ಘಕಾಲವೆ ಆಗಿದೆ. ಅದರಲ್ಲಿಯೂ ಆಧ್ಯಾತ್ಮದ ಮತ್ತು ಧರ್ಮಸಮನ್ವಯದ ಭೂಮಿಕೆಯಲ್ಲಿ ಶ್ರೀರಾಮಕೃಷ್ಣ ವಿವೇಕಾನಂದಯುಗ ಎನ್ನಬಹುದಾದ ಈ ಶತಮಾನವಂತೂ ಪ್ರಗತಿಯಲ್ಲಿ ಹೋಲಿಸಿದರೆ ಹಿಂದಣ ಮಂದಗತಿಯ ಹತ್ತು ಶತಮಾನಗಳೂ ಸಾಧಿಸಲಾರದಿದ್ದುದನ್ನು ಸಾಧಿಸಿ, ತನ್ನ ಪ್ರಚಂಡ ವೇಗವನ್ನು ತಡೆಹಿಡಿಯಲಾರದೆ, ಹೆದರಿಕೆ ಹುಟ್ಟಿಸುವ ರಭಸದಿಂದ ಮುನ್ನುಗ್ಗುತ್ತಿದೆ. ಅದು ಸಾಧಿಸಿರುವ ಪ್ರಗತಿಯೋ ಬಹುಮುಖವಾಗಿದೆ, ಶಾಖೋಪಶಾಖೆಯಾಗಿದೆ; ಅದರ ಕಣ್ಣು ಸರ್ವತೋಮುಖವಾದ ಪೂರ್ಣತ್ವ ಸಿದ್ಧಿಯ ಮೇಲೆ ನೆಟ್ಟಿದೆ.

ಸಾವಿರದ ಎಂಟುನೂರ ಅರುವತ್ತುಮೂರನೆಯ ಜನವರಿ ತಿಂಗಳಲ್ಲಿ ನರೇಂದ್ರನಾಥ ದತ್ತನು ಕಲ್ಕತ್ತಾ ನಗರದಲ್ಲಿ ಈ ಲೋಕಕ್ಕೆ ಕಣ್ಣುತೆರೆದಂದು ಇದ್ದ ಭರತವರ್ಷದ ಮತ್ತು ಪ್ರಪಂಚದ ಸ್ಥಿತಿಗೂ ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದ ಜಗತ್ ಪ್ರಸಿದ್ಧನಾಗಿರುವ ಆತನ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವ ಭಾರತದ ಮತ್ತು ಪ್ರಪಂಚದ ಸದ್ಯದ ಸ್ಥಿತಿಗೂ ಆಗಿರುವ ಅದ್ಭುತ ವ್ಯತ್ಯಾಸವನ್ನು ಗಮನಿಸಿದರೆ ನಮ್ಮ ಕಲ್ಪನೆ ಕ್ಷಣಕಾಲ ತತ್ತರಿಸದಿರುವುದಿಲ್ಲ. ಈ ವ್ಯತ್ಯಾಸ ಯಾವ ಒಂದು ಕ್ಷೇತ್ರಕ್ಕು ಮೀಸಲಾದುದಲ್ಲ. ಆ ಅದ್ಭುತ ಪ್ರಗತಿ ಸರ್ವಕ್ಷೇತ್ರಗಳಲ್ಲಿಯೂ ತನ್ನ ನಿಷ್ಪಕ್ಷಪಾತತ್ವದ ಮುದ್ರೆಯನ್ನೊತ್ತಿದೆ. ಐತಿಹಾಸಿಕ, ರಾಜಕೀಯ, ವೈಜ್ಞಾನಿಕ, ಮತೀಯ, ಸಾಮಾಜಿಕಾದಿ ಎಲ್ಲ ರಂಗಗಳಲ್ಲಿಯೂ ದಿಗ್‌ಭ್ರಮೆಗೊಳಿಸುವ ಮುನ್ನಡೆ ತನ್ನ ಜಟಿಲಕರ್ಮದಲ್ಲಿ ಸಾಹಸಿಯಾಗಿರುವುದನ್ನು ಕಾಣುತ್ತೇವೆ.

ನಮ್ಮ ಭೂಗೋಲ ಅದರ ವಿಚಾರವಾಗಿರುವ ನಮ್ಮ ಜ್ಞಾನದ ದೃಷ್ಟಿಯಿಂದ ಅಂದಿಗಿಂತ ಇಂದು ವಿಪುಲವಿಸ್ತೃತವಾಗಿದೆ. ಆದರೆ ನಮ್ಮ ವಿಜ್ಞಾನದ ಸಿದ್ಧಿಯ ಮುಂದೆ ಅದು ಕಿಮ್ಮುಳ್ಚಿದಂತೆ ಅತ್ಯಂತ ಚಿಕ್ಕದಾಗಿಯೂ ಪರಿಣಮಿಸಿದೆ. ಅಂದು ಸರ್ವಕಾಲವೂ ಶಾಶ್ವತವೋ ಎಂಬಂತೆ ಸುದೃಢವಾಗಿ ಬಲಿಷ್ಠವಾಗಿ ತೋರುತ್ತಿದ್ದ ಚಕ್ರಾಧಿಪತ್ಯಗಳಲ್ಲಿ ಬಹುಪಾಲು ಇಂದು ನಾಮಾವಶೇಷವಾಗಿವೆ. ಉಳಿದುವು ನಾಮಾವಶೇಷವಾಗುವ ಹಾದಿಯಲ್ಲಿ ಬಹುದೂರ ಮುಂದೆ ಸಾಗಿ, ವಿನಾಶದ ಅಂಚಿನಲ್ಲಿ ತತ್ತರಿಸುತ್ತಿವೆ. ರಾಜ್ಯ, ರಾಜ, ಪ್ರಜೆ ಇತ್ಯಾದಿ ವಿಚಾರವಾದ ತತ್ತ್ವಗಳಂತೂ ಜನಮನದಲ್ಲಿ ಗುರುತು ಹಿಡಿಯಲಾಗದ ಮಟ್ಟಿಗೆ ತಲೆಕೆಳಗಾಗಿ ಪರಿವರ್ತನಗೊಂಡಿವೆ. ಧರ್ಮ, ಮತ, ದೇವರು ಮೊದಲಾದ ಭಾವನೆಗಳು ಇವುಗಳ ನಿತ್ಯ ನೈಜ ಮೂಲಭಿತ್ತಿಗಳಲ್ಲಿ ಸುಸ್ಥಿರವಾಗಿರುವಂತೆ ತೋರಿದರೂ ಅವು ಪ್ರಕಟವಾಗುತ್ತಿದ್ದ ರೀತಿ ರೂಪಗಳಲ್ಲಿ ಭೌತವೈಜ್ಞಾನಿಕ ಮನೋವೈಜ್ಞಾನಿಕ ಮತ್ತು ಸಮಾಜವೈಜ್ಞಾನಿಕವಾದ ಶಕ್ತಿಗಳ ಘರ್ಷಣಮಂಥನಗಳಿಗೆ ಸಿಕ್ಕಿ ಸಂಪೂರ್ಣವಾಗಿ ಬದಲಾವಣೆಗೊಂಡಿವೆ. ಮಾನವನ ರಾಜಕೀಯಪ್ರಜ್ಞೆ ರಾಷ್ಟ್ರೀಯ ಭಾವನೆಯಿಂದ ಬಹುಮಟ್ಟಿಗೆ ವಿಮುಕ್ತವಾಗಿ, ಅಂತರರಾಷ್ಟ್ರೀಯ ಭಾವನೆಯ ಕಡೆಗೂ ವಿಶ್ವದ ಐಕ್ಯತಾಭಾವನೆಯ ಕಡೆಗೂ ದೃಢಗಮನದಿಂದ ಸಾಗುತ್ತಿದೆ. ಅಂದಿನ ಒಡ್ಡರ ಬಂಡಿಯಲ್ಲಿ ಮುಗ್ಗರಿಸುತ್ತಾ ಜಟಕಾ ಹೊಡೆದು ತೊಕಡಿಸಿ ಸಾಗುತ್ತಿದ್ದ ಮನುಷ್ಯನಾಗರಿಕತೆ ಇಂದು ಜೆಟ್ ವಿಮಾನಗಳಲ್ಲಿ, ‘ಮಿಂಚಿನ ವೇಗ’ ಎಂಬ ರೂಪಕ ಅಕ್ಷರಶಃ ಸಾರ್ಥಕವಾಗುವಂತೆ, ಸಂಚರಿಸುತ್ತಿದೆ; ಅಂತರಿಕ್ಷದಲ್ಲಿ ಕ್ಷಿಪಣಿಯೇರಿ ಉಪಗ್ರಹರೂಪದಲ್ಲಿ ಚಂದ್ರ ಸೂರ್ಯ ತಾರಾ ಪ್ರದಕ್ಷಿಣೆಯ ಧೀರ ಸಾಹಸದತ್ತ ಅದು ಧಾವಿಸುತ್ತಿದೆ.

ಪೂರ್ವೋಕ್ತ ಶತಮಾನದ ಪರಿವರ್ತನೆಯ ಶಕ್ತಿ ಪ್ರವಾಹಕ್ಕೆ ಸ್ವಾಮಿ ವಿವೇಕಾನಂದರ ವ್ಯಕ್ತಿಜೀವನವೊ ತನ್ನ ಮಹತ್ತಾದ ಚಿತ್‌ತಪಸ್ಸಿನ ಕಾಣಿಕೆ ನೀಡಿ ಆ ಪ್ರವಾಹದ ಸ್ವರೂಪವನ್ನೂ ವೇಗವನ್ನೂ ದಿಕ್ಕನ್ನೂ ನಿರ್ಣಯಿಸುವುದರಲ್ಲಿ ಪ್ರಚೋದಿಸುವುದರಲ್ಲಿ ನಿಯಂತ್ರಿಸುವುದರಲ್ಲಿ ಇತರ ಯಾವ ಮಹಾನ್ ವ್ಯಕ್ತಿತ್ವಕ್ಕೂ ದ್ವಿತೀಯವಲ್ಲದ ಮಹೋನ್ನತ ಸ್ಥಾನದಲ್ಲಿ ನಿಂತು ವಿರಾಜಮಾನವಾಗಿದೆ.

ಸ್ವಾಮಿ ವಿವೇಕಾನಂದರ ಜನ್ಮಸ್ಥಾನವಾದ ಕಲ್ಕತ್ತಾ ನಗರವು ಅವರು ಜನ್ಮವೆತ್ತಿದ ಸಮಯದಲ್ಲಿ ಬ್ರಿಟಿಷರ ಇಂಡಿಯಾ ಚಕ್ರಾಧಿಪತ್ಯದ ಪ್ರತಿಷ್ಠಿತ ರಾಜಧಾನಿಯಾಗಿತ್ತು. ಇಂದು ಸ್ವತಂತ್ರಭಾರತದಲ್ಲಿ ವಿಭಜಿತ ವಂಗದೇಶದ ಒಂದು ಪ್ರಾಂತಭಾಗವಾದ ಕಿರಿಯ ರಾಜ್ಯದ ಮುಖ್ಯಪಟ್ಟಣ ಮಾತ್ರವಾಗಿದೆ. ಹಾಗಾಗುವುದಕ್ಕೆ ಕಾರಣ ಹೊರನೋಟಕ್ಕೆ ರಾಜಕೀಯವೆಂದು ತೋರಿದರೂ ಒಳಹೊಕ್ಕು ನೋಡಿದರೆ ಆ ಕಾರಣದ ಮೂಲ ಮತದ್ವೇಷ ಮತ್ತು ಮತ ಭ್ರಾಂತಿಗಳಲ್ಲಿ ಬೇರು ಬಿಟ್ಟಿರುವುದನ್ನು ಕಾಣುತ್ತೇವೆ. ಯಾವುದನ್ನು ಸ್ವಾಮಿ ವಿವೇಕಾನಂದರು ಕೊಲಂಬೊ ಇಂದ ಆಲ್ಮೋರದವರೆಗೆ ಮಾಡಿದ ತಮ್ಮ ಭಾಷಣಗಳಲ್ಲಿ ಸಾರಿ, ಎಚ್ಚರಿಸಿ, ಎಚ್ಚರಿಕೆಯಿತ್ತರೊ ಆ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಅಥವಾ ಉಪೇಕ್ಷಿಸಿದ ಅಥವಾ ಸಂಕುಚಿತವಾಗಿ ಅರ್ಥಮಾಡಿಕೊಂಡು ಸ್ವಾರ್ಥಕ್ಕಾಗಿ ವ್ಯಾಖ್ಯಾನಮಾಡಿ ಪ್ರಯೋಗಿಸಿದ ಕಾರಣಕ್ಕಾಗಿಯೆ ವಿಭಜನೆಯ ಶಸ್ತ್ರ ತನ್ನ ಕ್ರೂರ ಚಿಕಿತ್ಸೆಯನ್ನು ಕೈಗೊಳ್ಳಬೇಕಾಗಿ ಬಂದಿತು. ಮುಂದಾದರೂ ಅವರ ಮಂಗಳಮಯ ಸಮನ್ವಯ ಧರ್ಮವಾಣಿಗೆ ಜನಪ್ರಜ್ಞೆ ಕಿವಿಗೊಟ್ಟರೆ ರಾಜಕೀಯ ರೂಪದಲ್ಲಿ ವಿಕೃತಿಹೊಂದಿರುವ ಐಕ್ಯತೆ ಆಧ್ಯಾತ್ಮರೂಪದಲ್ಲಿ ಪುನಃಸ್ಥಾಪಿತವಾಗಿ ಮಾನವ ಕಲ್ಯಾಣಸಾಧನೆಗೆ ನೆರವಾಗಲಾರದೇನು?

ಅವರು ಸಂಭವಿಸಿದಂದು ದೇಶ ಪರಕೀಯರದಾಗಿತ್ತು; ಭಾರತೀಯರ ಸ್ವಾಭಿಮಾನ ಆಳರಸರ ಪದತಲದಲ್ಲಿ ಹೊಟ್ಟೆಬಟ್ಟೆಗಾಗಿ ಮೂಲಗಿಸಿ ಬಾಲವಲ್ಲಾಡಿಸುವುದರಲ್ಲಿಯೆ ತನ್ನ ಬದುಕಿನ ಸಾರ್ಥಕತೆಯನ್ನು ಸಾಧಿಸುವುದರಲ್ಲಿ ತೊಡಗಿತ್ತು. ಸ್ವಪ್ರತಿಷ್ಠಾ ಧುರಂಧರರೂ ಶೋಷಕವರ್ಗಕ್ಕೆ ಸೇರಿದವರೂ ಆಗಿದ್ದ ನೂರಾರು ರಾಜಮಹಾರಾಜರುಗಳು ಬ್ರಿಟಿಷ್ ಸಾರ್ವಭೌಮತ್ವದ ಆಸ್ಥಾನವೇದಿಕೆಯಲ್ಲಿ ವಿದೂಷಕ ಪಾತ್ರಧಾರಿಗಳಾಗಿ ಯಂತ್ರಾರೂಢ ಪುತ್ಥಳಿಗಳಂತೆ ಆಲಂಕಾರಿಕವಾಗಿ ಕಿಂಕರ ಕರ್ತವ್ಯ ಪರಾಯಣರಾಗಿದ್ದರು. ಜಾತಿ, ಮತ, ಧರ್ಮ, ಕುಲ, ಆಚಾರ ಮೊದಲಾದ ನೂರಾರು ಮೂಢಭಾವನೆಗಳ ಹೆಸರಿನಲ್ಲಿ ನಾಡೆಲ್ಲ ಛಿದ್ರಛಿದ್ರವಾಗಿ ತನ್ನ ಅನೈಕ್ಯತೆಯ ಮೂಗುದಾರದ ಹಗ್ಗವನ್ನು ವಿದೇಶೀಯರ ಕೈಗಿತ್ತು ಒದ್ದಾಡುತ್ತಿತ್ತು. ನಿರಕ್ಷರತೆ, ವಿದ್ಯಾವಿಹೀನತೆ, ಅಸ್ಪೃಶ್ಯತೆ, ಮೌಢ್ಯ, ಅಜ್ಞಾನಾದಿಗಳು ಎಂತಹ ಆಶಾವಾದಿಯನ್ನೂ ನಿರಾಶೆಯ ಕಗ್ಗವಿಗೆ ನೂಕುವಂತಿದ್ದುವು.

ಅವರ ಜನ್ಮದಿನದ ಶತಮಾನೋತ್ಸವದ ಇಂದು ದೇಶದ ಸ್ವತಂತ್ರವಾಗಿದೆ. ನಮ್ಮ ರಾಜಕೀಯವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಗಳಿಸಿಕೊಂಡಿದೆ. ಪಾಂಚವಾರ್ಷಿಕ ಯೋಜನೆಗಳ ಕೃಪೆಯಿಂದ ನಮ್ಮನ್ನು ಆವರಿಸಿ ಕೊಂಡಿರುವ ಬಹುಕಾಲದ ದಾರಿದ್ಯ್ರ ಹಿಮ್ಮೆಟ್ಟಿ ಓಡತೊಡಗಿದೆ. ರಾಜ್ಯಾಂಗದ ಕಾನೂನು ಜಾತಿಗಳ ಭೇದವನ್ನು ತೊಡೆದುಹಾಕಿದೆ. ಜೀವ, ಜಗತ್ತು, ಧರ್ಮ, ದೇವರು ಇತ್ಯಾದಿ ವಿಚಾರವಾದ ಭಾರತೀಯ ಭಾವನೆಗಳೆಲ್ಲ ಕಾಡುಕಲ್ಪನೆಗಳೆಂದು ಭಾವಿಸಿದ್ದ ವಿದೇಶೀಯರು ನಮ್ಮನ್ನು ತಮ್ಮ ಕ್ರೈಸ್ತಮತದಿಂದ ಉದ್ಧಾರಮಾಡಲು ಪ್ರಚಾರಕರನ್ನು ಕಳುಹಿಸುತ್ತಿದ್ದ ಅಂದಿನಪರಿಸ್ಥಿತಿಗೆ ಬದಲಾಗಿ ಇಂದು ನಮ್ಮ ಸನ್ಯಾಸಿಗಳೂ ದಾರ್ಶನಿಕರೂ ಅಮೇರಿಕವೆ ಮೊದಲುಗೊಂಡು ಪ್ರಪಂಚದ ನಾನಾ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಮತ್ತು ವೇದಾಂತದರ್ಶನದ ದೀವಿಗೆಯನ್ನು ಹೊತ್ತಿಸುತ್ತಿರುವ ಭವ್ಯತರ ದೃಶ್ಯವನ್ನು ಕಾಣುತ್ತಿದ್ದೇವೆ. ಸ್ವದೇಶದಲ್ಲಿ ಮತ್ತು ದೇಶಾಂತರಗಳಲ್ಲಿ ಅಂದಿಗೂ ಇಂದಿಗೂ ಆಗಿರುವ ಮತ್ತು ಆಗುತ್ತಿರುವ ಮಹಾ ಪರಿವರ್ತನೆಗೆ ಪ್ರವರ್ತಕನೂ ಮತ್ತು ಪ್ರವಾದಿಯೂ ಆಗಿ ಶ್ರೀರಾಮಕೃಷ್ಣರ ಆ ಮಹಾ ಶಿಷ್ಯನು ತನ್ನು ಅಲ್ಪಾಯು ಜೀವಮಾನವನ್ನೆಲ್ಲ ತೇದು ಸಮರ್ಪಿಸಿದ್ದಾನೆ ಎಂಬ ಸತ್ಯವನ್ನು ಕವಿ, ಸಾಹಿತಿ, ದಾರ್ಶನಿಕ, ರಾಜಕಾರಣಿ, ಕ್ರಾಂತಿಕಾರಿ ಎಂಬ ಭೇದವಿಲ್ಲದೆ ದೇಶವಿದೇಶಗಳ ವಿದ್ವಜ್ಜನ ಸರ್ವರೂ ಒಪ್ಪಿ ಒಕ್ಕೊರಲಿನಿಂದ ಸಾರಿದ್ದಾರೆ.

ಭಾರತದ ಪುನರುತ್ಥಾನದ ಪ್ರಥಮ ಮುಹೂರ್ತದಲ್ಲಿ ಸ್ವಾಮಿ ವಿವೇಕಾನಂದರ ಪಾಂಚಜನ್ಯ ಸದೃಶವಾದ ಧೀರ ಮತ್ತು ಶಕ್ತಿಸಂಚಾರಕ ಸಿದ್ಧವಾಣಿ ಏನು ಕೆಲಸ ಮಾಡಿತು ಎಂಬುದನ್ನು ಅಳೆಯಲಾದೀತೆ? ವ್ಯಕ್ತಿ ವ್ಯಕ್ತಿಗಳಲ್ಲಿ ಮತ್ತು ರಾಷ್ಟ್ರಸಮಗ್ರದಲ್ಲಿ ಸುರುಳಿಸುತ್ತಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯನ್ನು ಅವರು ಹೇಗೆ ಎಚ್ಚರಿಸಿ ಕಾರ್ಯಶೀಲವನ್ನಾಗಿ ಮಾಡಿದರು ಎಂಬುದನ್ನು ಅರಿಯಬೇಕಾದರೆ ಅವರ ಜೀವನ ಚರಿತ್ರೆಯ ಮುಂದೆ ಧ್ಯಾನಸ್ಥರಾಗಬೇಕಾಗುತ್ತದೆ; ಅವರ ಕೃತಿಗಳ ಅಧ್ಯಯನವೆ ನಮ್ಮ ತಪಸ್ಸಾಗಬೇಕಾಗುತ್ತದೆ. ನಮ್ಮ ರಾಷ್ಟ್ರದ ಸರ್ವತೋಮುಖವಾದ ಉದ್ಧಾರದ ಮಾತಂತಿರಲಿ. ಇತರ ದಾಸದೇಶಗಳ ಸ್ವಾತಂತ್ರ್ಯ ತೃಷೆಯ ಕೆರಳಿಕೆಗೂ ಅವರು ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೊ ಕಾರಣರಾದರೆಂಬ ಸಂಗತಿ ಆಯಾ ದೇಶ ನಾಯಕರ ಸ್ಪೂರ್ತಿಮೂಲಗಳಿಂದ ಗೊತ್ತಾಗುತ್ತದೆ. ನಮ್ಮ ದೇಶಕ್ಕೆ ಸದ್ಯದಲ್ಲಿ ಒದಗಿರುವ ಅಂತರರಾಷ್ಟ್ರೀಯವಾದ ಪ್ರಶಂಸೆಗೂ ಗೌರವಕ್ಕೂ ಶಂಕುಸ್ಥಾಪನೆ ಮಾಡಿದ ಮೊತ್ತಮೊದಲಿಗರೂ ಸ್ವಾಮಿ ವಿವೇಕಾನಂದರೆ. ತರುವಾಯ ಆ ದಿಕ್ಕಿನಲ್ಲಿ ನಡೆದು ಖ್ಯಾತನಾಮವಾಗಿರುವ ಅನೇಕರು ಅವರ ಹಿಂಬಾಲಕರೊ ಅಥವಾ ಅನುಯಾಯಿಗಳೊ ಆಗಿದ್ದಾರೆ.

ವಯಸ್ಸಿನಲ್ಲಿ ಸ್ವಾಮಿ ವಿವೇಕಾನಂದರಿಗೆ ಸ್ವಲ್ಪ ಹೆಚ್ಚು ಕಡಮೆ ಸಮಕಾಲೀನರಾಗಿ ಸುಪ್ರಸಿದ್ಧರಾಗಿರುವ ಮಹಾ ವ್ಯಕ್ತಿಗಳೆಲ್ಲರೂ ಅವರ ದಿವ್ಯಶಕ್ತಿಯುತ ಪ್ರಭಾವಕ್ಕೆ ಒಳಗಾಗಿ ಸ್ಫೂರ್ತಿಗೊಂಡವರಾಗಿದ್ದಾರೆ. ಅವರಿಗಿಂತಲೂ ಕಿರಿಯವರಾಗಿ ಈಗ ಜಗದ್ವಿಖ್ಯಾತರಾಗಿರುವರಂತೂ ಹೊರತಿಲ್ಲದೆ ಅವರ ತೇಜಸ್ಸಿನ ತೀರ್ಥವಾರಿಯಲ್ಲಿ ಮುಳುಗಿ ಮಿಂದು, ನವಚೇತನದ ದೀಕ್ಷೆವೆತ್ತು, ಅವರ ಹೆಸರನ್ನೆ ಮಂತ್ರವನ್ನಾಗಿ ಮಾಡಿಕೊಂಡು ಮುಂದುವರಿದವರಾಗಿದ್ದಾರೆ. ಇನ್ನೂ ಅಷ್ಟೇನೂ ಸುಪ್ರಸಿದ್ಧರಲ್ಲದ ಲಕ್ಷೋಪಲಕ್ಷ ಭಾರತೀಯರು ಅವರ ಪಾವನ ಜ್ಯೋತಿಯಿಂದ ತಮ್ಮ ಜೀವಪ್ರದೀಪಗಳನ್ನು ಹೊತ್ತಿಸಿಕೊಂಡು ಅವರ ತಪಃಕೃಪೆಯ ತೈಲದಿಂದಲೆ ನಿರಂತರವೂ ಪೋಷಿತರಾಗಿ ಧನ್ಯರಾಗಿದ್ದಾರೆ.

ನಿದರ್ಶನರೂಪವಾಗಿ ಮೂವರು ಮಹಾವಿಭೂತಿಗಳನ್ನೆ ತೆಗೆದುಕೊಳ್ಳಬಹುದು: ಮಹಾತ್ಮಾಗಾಂಧಿಜಿ,ಕವಿವರ್ಯ ರವೀಂದ್ರನಾಥ ಠಾಕೂರರು ಮತ್ತು ಮಹಾನ್ ತತ್ತ್ವವೇತ್ತ ಪೂರ್ಣಯೋಗಿ ಶ್ರೀ ಅರವಿಂದರು. ರವೀಂದ್ರರು ವಿವೇಕಾನಂದರಿಗಿಂತ ಎರಡು ವರ್ಷಕ್ಕೆ ಹಿರಿಯರು; ಗಾಂಧಿಜಿ ಆರು ವರ್ಷಕ್ಕೂ ಶ್ರೀ ಅರವಿಂದರು ಒಂಬತ್ತು ವರ್ಷಕ್ಕು ಕಿರಿಯವರು. ಈ ಮುವರೂ ಎಪ್ಪತ್ತೆಂಟು ಎಪ್ಪತ್ತೊಂಬತ್ತು ಎಂಬತ್ತು ವರ್ಷಗಳಕಾಲ ದೀರ್ಘಾಯುಗಳಾಗಿ ಬಾಳಿ ಕೀರ್ತಿವೆತ್ತವರು. ಆದರೆ ವಿವೇಕಾನಂದರು ತಮ್ಮಮೂವತ್ತೊಂಬತ್ತನೆಯ ವಯಸ್ಸಿನಲ್ಲಿಯೆ ಜಗತ್ತಿನ ಕರ್ಮಮಯ ಜೀವನದಲ್ಲಿ ಧರ್ಮಜಂಝೆಯಾಗಿ ಬೀಸಿ, ತಮ್ಮ ಜನ್ಮಧಾರಣೋದ್ದೇಶವನ್ನು ಪೂರೈಸಿ ಕಣ್ಮರೆಯಾದರು, ಲೋಕವಿಖ್ಯಾತರಾಗಿ ಮತ್ತು ಶಾಶ್ವತ ವಿಶ್ವಶಕ್ತಿಯಾಗಿ. ಅವರು ತೀರಿಕೊಂಡ ವಯಸ್ಸಿನಲ್ಲಿಯೆ ಉಳಿದ ಮೂವರಲ್ಲಿ ಯಾರೊಬ್ಬರಾದರೂ ತೀರಿಕೊಂಡಿದ್ದರೆ ಅವರು ಜಗತ್ತಿನ ಇತಿಹಾಸದ ದೃಷ್ಟಿಯಿಂದ ಅನಾಮಧೇಯರಾಗಿರುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ; ಅಥವಾ ಬಹು ಸಂಕುಚಿತ ಪ್ರದೇಶದಲ್ಲಿ ಸ್ಥಳೀಯವಾದ ಕೀರ್ತಿಶೇಷತೆಯನ್ನು ಮಾತ್ರ ಪಡೆದಿರುತ್ತಿದ್ದರೊ ಏನೋ? ಆದರೆ ದೇವರ ದಯದಿಂದ ಹಾಗಾಗಲಿಲ್ಲ. ಆ ಮೂವರೂ ಸ್ವಾಮಿ ವಿವೇಕಾನಂದರ ವಿದ್ಯುತ್ ಸದೃಶವಾದ ಜ್ಯೋತಿಃ ಪ್ರಭಾವಕ್ಕೆ ಒಳಗಾಗಿ, ಆ ಶಕ್ತಿಯಿಂದ ಸ್ಫೂರ್ತಿಗೊಂಡು, ತಮ್ಮ ತಮ್ಮ ಸ್ವಭಾವಸ್ವಧರ್ಮಸಹಜವಾದ ಕ್ಷೇತ್ರಗಳಲ್ಲಿ ಮುಂದುವರಿದು ಲೋಕಕ್ಕೆ ಮಂಗಳದಾಯಕರಾದರು. ಅಂದು ತಮ್ಮ ಮೇಲೆ ಉಂಟಾದ ಸ್ವಾಮಿ ವಿವೇಕಾನಂದರ ದಿವ್ಯಪ್ರಭಾವವನ್ನು ಕುರಿತು ಗಾಂಧೀಜಿ ಮತ್ತು ಶ್ರೀ ಅರವಿಂದರು ತಮ್ಮ ಕೃತಜ್ಞತೆಯನ್ನು ಮುಕ್ತಕಂಠದಿಂದ ಸಾರಿದ್ದಾರೆ; ರವೀಂದ್ರರು ವಯಸ್ಸಿನಲ್ಲಿ ಕಿರಿಯವನಾಗಿಯೂ ತಮ್ಮ ಊರಿನವನೆ ಆದವನಾಗಿಯೂ ಅಲ್ಲದೆ ತಮ್ಮ ನೂತನ ಧರ್ಮಪಂಥದಿಂದ ಹೊರಚಿಮ್ಮಿ ತಟಕ್ಕನೆ ಸದ್ಯೋಯಶನಾಗಿ ಲೋಕಲೋಚನೆಗಳನ್ನೆ ಆಕ್ರಮಿಸಿದಾತನ ಪ್ರಭಾವಕ್ಕೆ ತಾವು ಒಳಗಾದುದರ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯ ಮೌನ ತಾಳಿದ್ದರೂ ಅಲ್ಲಲ್ಲಿ ಆ ಮೌನವನ್ನು ಭೇದಿಸಿಕೊಂಡು ಅವರ ವಿಶಾಲ ಹೃದಯದ ಸಹಜಪ್ರಶಂಸೆ ವಾಗ್ರೂಪದಲ್ಲಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಆದರ್ಶದ ಅನುಸರಣೆಯ ಕ್ರಿಯಾರೂಪದಲ್ಲಿ ಬುಗ್ಗೆಚಿಮ್ಮಿರುವುದನ್ನು ಕಾಣುತ್ತೇವೆ. ಅವರ ವಿಶ್ವಮೈತ್ರಿಯ ಸಂದೇಶದಲ್ಲಿ ಮತ್ತು ಅಂತರರಾಷ್ಟ್ರೀಯತಾಭಾವನಾ ಪ್ರಚಾರದಲ್ಲಿ ಶ್ರೀರಾಮಕೃಷ್ಣ ಪರಮಹಂಸರ ದಿವ್ಯಸಂದೇಶದ ಮತ್ತು ಸ್ವಾಮಿ ವಿವೇಕಾನಂದರ ವೀರಕ್ರಮ ಪ್ರಚಾರದ ಸ್ಪಂದನಪ್ರಭಾವವನ್ನು ಇದಿರುಗೊಳ್ಳುತ್ತೇವೆ.

ಹೀಗೆ ಸ್ವಾಮಿ ವಿವೇಕಾನಂದರು ಹಿರಿಯರು ಕಿರಿಯರು ಸಮವಯಸ್ಕರು ಸ್ವಮತೀಯರು ಅನ್ಯಮತೀಯರು, ಸ್ವದೇಶಿಯರು ಪರದೇಶೀಯರು, ದೂರದವರು ಸಮೀಪದವರು ಎಂಬ ತಾರತಮ್ಯವಾಗಲಿ ಭೇದವಾಗಲಿ ಇಲ್ಲದೆ ಸಮಗ್ರಜಗತ್ತನ್ನೆ ತಮ್ಮ ಮಹಾವ್ಯಕ್ತಿತ್ವದ ವಿರಾಣ್‌ಮೈತ್ರಿಯಿಂದ ವಶಪಡಿಸಿಕೊಂಡಿದ್ದಾರೆ. ಅವರ ಪ್ರಭಾವ ಹಿಂದೆ ಎಂದೋ ಆಗಿಹೋದ ಐತಿಹಾಸಿಕ ವಿಷಯವಾಗಿಲ್ಲ; ಇಂದೂ ಜೀವಂತವಾಗಿ, ಸಶಕ್ತವಾಗಿ, ಕೋಟ್ಯಂತರ ಹೃದಯಗಳನ್ನು ನಡೆಸುತ್ತಿರುವ ಶಕ್ತಿ ಸ್ಫೂರ್ತಿ ಜ್ಯೋತಿಯಾಗಿ ಇದೆ. ಮತ್ತು ಮುಂದೆಯೂ ಹುಟ್ಟಿಬರುವ ಆಧಾರಧನೆಗಳಿಗೆ ಭಾಜನವಾಗಿ, ಸರ್ವಲೋಕ ಸರ್ವಕಾಲ ಪೂಜ್ಯವಾಗಿ ಇರುವುದರಲ್ಲಿ ಒಂದಿನಿತೂ ಸಂದೇಹವಿಲ್ಲ.

ಅಂತಹ ಮಹಾ ಜ್ಯೋತಿರ್ವಿಭೂತಿಯ ಶತಮಾನೋತ್ಸವದಲ್ಲಿ ಇಡೀ ಪ್ರಪಂಚವೇ ಮಗ್ನವೆಂಬಂತೆ ಭಾಗಿಯಾಗುತ್ತಿರುವಾಗ ಭರತವರ್ಷ ತನ್ನ ಸರ್ವಚೇತನದ ಗೌರವಸರ್ವಸ್ವದಿಂದಲೂ ಅದನ್ನು ಆಚರಿಸುತ್ತಿರುವುದೇನು ಒಂದು ಆಶ್ಚರ್ಯದ ವಿಷಯವೆ?

ಸರ್ವಭಾಷಾಮಯಿಯಾದ ಭಾರತಿ ತನ್ನೆಲ್ಲ ಜಿಹ್ವೆಗಳಿಂದಲೂ ಆ ಮಹಾ ಪುರುಷನ ವಾಣಿಯನ್ನೂ ಕೃತಿಯನ್ನೂ ಸಂಪುಟಗೊಳಿಸಿ ಅಭಿವ್ಯಕ್ತಿಮಾಡುವ ಆರಾಧನೆಯನ್ನು ನೋಂತಿದ್ದಾಳೆ. ಆ ಮಹಾಭಾರತೀಯ ಜಿಹ್ವೆಗಳಲ್ಲಿ ಒಂದಾದ ಕನ್ನಡಭಾಷೆಯೂ ತನ್ನ ಕೈಂಕರ್ಯವನ್ನು ಸಲ್ಲಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಈ ಹತ್ತು ಬೃಹತ್ತಾದ ಹೊತ್ತಗೆಗಳಲ್ಲಿ ಪ್ರಕಟವಾಗುತ್ತಿರುವ ಸ್ವಾಮಿಜಿಯ ಲೇಖನ ಭಾಷಣ ಪತ್ರ ಪ್ರಬಂಧಾದಿ ಸಮಸ್ತ ಕೃತಿಶ್ರೇಣಿಯೂ ಅದಕ್ಕೆತ್ತಿದ ಶಾಶ್ವತ ಆರತ್ರಿಕ ಸಾಕ್ಷಿಯಾಗಿದೆ.

ಸ್ವಾಮಿ ವಿವೇಕಾನಂದರು ಅನೇಕ ಮಹತ್ಸಾಧನೆಗಳನ್ನು ಸಾಧಿಸಿ ಹೋಗಿದ್ದಾರೆ. ಅದರಲ್ಲಿ ಪ್ರಥಮಸ್ಥಾನವನ್ನು ಗಳಿಸಲು ಅರ್ಹವಾದುದೆಂದರೆ ಶ್ರೀರಾಮಕೃಷ್ಣರಿಂದ ಅನುಷ್ಠಿತವೂ ಪ್ರಣೀತವೂ ಆಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಪ್ರಸಾರಮಾಡಿ, ಪೂರ್ವಪಶ್ಚಿಮ ದೇಶಗಳ ನಡುವೆ ಭವ್ಯವಾದ ಭಾವಸೇತುವೆಯನ್ನು ಬೀಸಿ, ವಿಶ್ವಮೈತ್ರಿಗೆ ಮತ್ತು ವಿಶ್ವಪ್ರಜ್ಞೆಗೆ ಅಂಕುರಾರ್ಪಣೆಮಾಡಿ, ಲೋಕಹೃದಯವನ್ನು ಸಂಕುಚಿತಬುದ್ದಿಯಿಂದ ಪಾರುಮಾಡಿದುದು. ಎರಡನೆಯದಾಗಿ, ಭಾರತೀಯ ಪ್ರಾಚೀನ ಸಂಪ್ರದಾಯದಲ್ಲಿದ್ದ ಸಾರವತ್ತಾದ ಮತ್ತು ಶಾಶ್ವತವಾದ ಅಂಶಗಳೊಂದನ್ನೂ ಬಿಡದೆ ಹೊಸಲೋಕದ ಹೊಸದೃಷ್ಟಿಗೆ ಹೊಂದಿಕೊಳ್ಳುವ ನವಸನ್ಯಾಸ ಸಂಪ್ರದಾಯವೊಂದನ್ನು ಸ್ಥಾಪಿಸಿ, ಅದರ ಶಾಖೋಪಶಾಖೆಗಳು ಪ್ರಪಂಚದ ಮೇಲೆಲ್ಲ ಹಬ್ಬುವಂತೆ ಮಾಡಿದುದು. ಮೂರನೆಯದಾಗಿ, ನರನಲ್ಲಿ ನಾರಾಯಣವನ್ನು ದರ್ಶಿಸುವ ಸಾಧನೆಯ ಮಾರ್ಗವೊಂದನ್ನು ಬೋಧಿಸಿ, ಜಗತ್ತಿನ ಹಿತವನ್ನೂ ಆತ್ಮದ ಮೋಕ್ಷವನ್ನೂ ಏಕಲಕ್ಷ್ಯನ್ನಾಗಿಸುವ ದರಿದ್ರನಾರಾಯಣ ಸೇವಾರೂಪದ ಧರ್ಮಸಾಧನೆಯನ್ನು ಲೋಕಕ್ಕೆ ಕಲಿಸಿದುದು.

ಈ ಮಹಾ ಮಂತ್ರತ್ರಯದ ದೀಕ್ಷೆಯನ್ನು ಅವರು ನಮ್ಮ ಜಗತ್ತಿನ ಕಲ್ಯಾಣಕ್ಕಾಗಿ ಉಪದೇಶಿಸಿದ್ದಾರೆ. ಆ ಉಪದೇಶದ ಅನುಷ್ಠಾನದಿಂದ ಮಾತ್ರವೆ ಸಾಧ್ಯವಾದೀತು ನಮ್ಮ ಲೋಕಕ್ಷೇಮ. ಆ ದ್ರಷ್ಟಾರ ವಿಭೂತಿಯ ಮಹೋನ್ನತ ಚಿತ್ತಪಸ್ಸಿನ ಶಕ್ತಿಗಂತೆ ಎಲ್ಲ ಭಾಷೆಗಳ ಆಲವಾಲಗಳಲ್ಲಿಯೂ ಪ್ರವಹಿಸಿ, ತಪ್ತ ನರಕೋಟಿಯ ಹೃದಯ ಹೃದಯವನ್ನೂ ಪ್ರವೇಶಿಸಿದರೆ ಜೀವ ಜೀವದ ಚೇತನ ಚೇತನದಲ್ಲಿರುವ ಅಜ್ಞಾನ ಅಂಧಕಾರ ನಿರಾಶೆಗಳೆಲ್ಲ ತೊಲಗಿ, ಅಲ್ಲಿ ವಿಶ್ವಮಾನವನ ಪ್ರತಿಷ್ಠಾಪನೆಯಾಗುತ್ತದೆ. ಏಕೆಂದರೆ ಹಿಂದೂ ಧರ್ಮದ ವೈಶಾಲ್ಯದ ಮತ್ತು ವೇದಾಂತ ತತ್ತ್ವದ ಗಂಭೀರತೆಯ ಪರಿಚಯ ಸರ್ವಸಾಮಾನ್ಯವೂ ಸರ್ವಸುಲಭ ಗ್ರಾಹ್ಯವೂ ಆಗಬೇಕಾದರೆ ಸ್ವಾಮಿಜಿಯ ಉಪನ್ಯಾಸಗಳನ್ನು ಬಿಟ್ಟರೆ ಬೇರಾವುದೂ ಇಲ್ಲ. ಸಂಕುಚಿತ ಮತಭಾವಗಳನ್ನು ಕತ್ತರಿಸಿ ಕೆಡಹಿ ಮನಸ್ಸಿನಲ್ಲಿ ಉದಾತ್ತ ಸಮನ್ವಯ ದೃಷ್ಟಿಯನ್ನು ಪ್ರಜ್ವಲಿಸುವ ಶಕ್ತಿ ಈ ಉಪನ್ಯಾಸಗಳಲ್ಲಿರುಂತೆ ಬೇರೆಲ್ಲಿಯೂ ಇಲ್ಲ.

ಇದುವರೆಗೆ ಸ್ವಾಮಿಯ ವಾಙ್ಮಯ ಶರೀರದಂತಿರುವ ಅವರ ಕೃತಿ ಸಮಷ್ಠಿಯ ಬಹುಭಾಗ ಜನಸಾಮಾನ್ಯರಿಗೆ ಅರ್ಥವಾಗದ ವಿದೇಶೀಯವಾದ ಇಂಗ್ಲಿಷ್ ಭಾಷೆಯಲ್ಲಿ ಬೀಗಮುದ್ರೆಯಾಗಿತ್ತು. ಭಾರತಾದ್ಯಂತ ಎಲ್ಲ ದೇಶಭಾಷೆಗಳೂ ಕೈಕೊಂಡಿರುವ ಈ ಶತಮಾನೋತ್ಸವ ಸಂದರ್ಭದ ಅನುವಾದೋದ್ಯಮದಿಂದ ಇಲ್ಲಿಯವರೆಗೆ ನಮ್ಮನ್ನು ಆವರಿಸಿದ್ದ ಆ ಕಬ್ಬಿಣದ ತೆರೆ ಮಾಯವಾಗುತ್ತದೆ. ಜನತೆಯ ಹೃದಯ ಆ ಮಹಾಪುರುಷನ ಹೃದಯಕ್ಕೆ ನೇರವಾಗಿ ಮುಖಾಮುಖಿಯಾಗಿ ನಿಂತು ಜ್ಯೋತಿಃಸಂಸ್ಪರ್ಶಿಯಾಗಿ ಉದ್ಧಾರವಾಗುತ್ತದೆ. ಏಕೆಂದರೆ ಸ್ವಾಮಿ ವಿವೇಕಾನಂದರ ತಪಃಪೂರ್ಣವಾದ ಶಕ್ತಿವಾಣಿಯಲ್ಲಿ ಆತ್ಮೋದ್ಧಾರಕವಾದ ವಿಭೂತಿ ಸ್ವಯಂಕ್ರಿಯಾಶೀಲವಾಗಿದೆ. ಅಲ್ಲಿ ಪತನಸಮಯದಲ್ಲಿ ನಮ್ಮನ್ನು ಕೈಹಿಡಿದೆತ್ತುವ ಔದಾರ್ಯವಿದೆ. ಹೃದಯ ದೌರ್ಬಲ್ಯದ ಸಮಯದಲ್ಲಿ ನಮ್ಮ ಕ್ಲೈಬ್ಯವನ್ನು ಕಿತ್ತೊಗೆದು ಕೆಚ್ಚನ್ನು ನೆಡುವ ಸಿಡಿಲಾಳ್ಮೆಯಿದೆ. ಬುದ್ಧಿಗೆ ಪುಷ್ಟಿಯಿದೆ, ಹೃದಯಕ್ಕೆ ತೃಪ್ತಿಯಿದೆ. ನಮ್ಮ ವ್ಯಕ್ತಿತ್ವಸಮಸ್ತವನ್ನೂ ಸರ್ವಾವಯವ ಸಂಪೂರ್ಣವಾಗಿ ವಿಕಾಸಗೊಳಿಸಿ ಪೂರ್ಣತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುವ ಪೂರ್ಣದೃಷ್ಟಿಯೂ ಇಲ್ಲಿ ಸಿದ್ಧಿಸುತ್ತದೆ. ಇದು ಅಮೃತದ ಮಡು; ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ: ಹೊಕ್ಕರೆ ಪ್ರಬುದ್ಧರಾಗುತ್ತೇವೆ.

* * *


[1] ಶತಮಾನೋತ್ಸವದ ಅಂಗವಾಗಿ ಮೈಸೂರು ಶ್ರೀರಾಮಕೃಷ್ಣಾಶ್ರಮವು ಹತ್ತು ಹೊತ್ತಗೆಗಳಲ್ಲಿ ಪ್ರಕಟಿಸಿರುವ ಸ್ವಾಮಿ ವಿವೇಕಾನಂದರ ಸಮಗ್ರಕೃತಿಗಳ ಭಾಷಾಂತರಕ್ಕೆ ಬರೆದ ಮುನ್ನುಡಿ: ೨-೫-೧೯೬೨.