ನೆಗೞ್ದರಿಗನ ಸಾಹಸಮೊ
ರ‍್ಮೆಗೊರ‍್ಮೆ ಕೆಲದವರ ಮಾತಿನೊಳ್ ತನ್ನ ಮನಂ|
ಬುಗೆ ಮಂತ್ರಪದಕ್ಕುರಗಂ
ಸುಗಿವಂತೆವೊಲಗಿದು ಸುಗಿದು ತಲೆಗರೆದಿರ್ಪ|| ೪೩

ಅಱವಿಂತು ರಾಜಕಾರ್ಯದ
ತೆಱನೆನಗಱವಂತು ಮೊಗ್ಗೆ ದೇವರ ಮುಂದಾ|
ನಱಯೆಂ ಪಿರಿದುಂ ಗೞಪಲ್
ಮಱಸೊಂದಿದನಲ್ಲನಹಿತನೆೞ್ಚತ್ತಿರ್ದಂ|| ೪೪

ವ|| ಎಂದು ಬಿನ್ನಪಂಗೆಯ್ದು ಕಿರಾತದೂತಂ ಪೋಪುದುಮಾ ಮಾತೆಲ್ಲಮಂ ಕೇಳ್ದು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳ್-

ಚಂ|| ನುಡಿವೊಡೆ ರಾಜಕಾರ್ಯ ನಯಮೆತ್ತಬಲಾಜನದೊಂದು ಬುದ್ಧಿಯೆ
ತ್ತುಡುಪತಿವಂಶ ನೋಡುವೊಡಿದೊಂದಘಟಂ ಬಗೆವಾಗಳೆಂತು ಕೇಳ್|
ನುಡಿಯದೆ ಕೆಮ್ಮಗಿರ್ದೊಡಮಿರಲ್ಕಮಣವಿಯದೆ ನಿಮ್ಮೊಳೆನ್ನುಮಂ
ನುಡಿಯಿಸಿದಪ್ಪುವಾ ಕುರುಕುಳರ್ಕಳ್ ಗೆಯ್ದಪರಾಧಕೋಟಿಗಳ್|| ೪೫

ಕಂ|| ಆವಡವಿಗಳೊಳ್ ಪಣ್ಪಲ
ಮಾವಗಮೊಳವಲ್ಲಿಗಱಸಿ ಪರಿಪರಿದು ಕರಂ|
ತಾವಡಿಗೊಳ್ವೀ ಭೀಮನ
ಬೇವಸಮಿದು ನಿನ್ನ ಮನಮನೊನಲಿಸಿತಿಲ್ಲಾ|| ೪೬

ಉ|| ಪೋಗಿ ಸುಪರ್ವಪರ್ವತದ ಕಾಂಚನರೇಣುಗಳುಂ ಪರಾಕ್ರಮೋ
ದ್ಯೋಗದಿನೆತ್ತಿ ತಂದು ನಿನಗಿತ್ತದಟಂ ಬಡಪಟ್ಟು ಬೆಟ್ಟದೊಳ್|
ಪೋಗಿ ತೊೞಲ್ದು ನಾರ್ಗಳನುಡಲ್ ತರುತಿರ್ದೆಲೆ ಮಾಡಲಾರ್ತನಿ
ಲ್ಲಾಗಳೆ ಕೋಪಮಂ ನಿನಗೆ ಸಂಚಿತಶೌರ್ಯಧನಂ ಧನಂಜಯಂ|| ೪೭

ಕಂ|| ಕಾಯ ಕ್ಲೇಶದಿನಡವಿಯ
ಕಾಯಂ ಪಣ್ಣುಮನುದಿರ್ಪಿ ತಿಂದಗಲದೆ ನಿಂ|
ದೀ ಯಮಳರಾವ ತೆಱದಿಂ
ನೋಯಿಸರಯ್ ನಿನ್ನ ನನ್ನಿಕಾಱನ ಮನಮಂ|| ೪೮

ಇದ್ದ ರೀತಿಯನ್ನು ತಪ್ಪಿದ, ಸೇವೆಮಾಡುವ ವಿಷಯದಲ್ಲಿ ಕೆಟ್ಟಮಾತನಾಡಿದ ಎಂಬ ಈ ಚಾಡಿಮಾತುಗಳನ್ನೂ ಅವನ ಬೀಡಿನಲ್ಲಿ ಸ್ವಲ್ಪವೂ ಕೇಳಿಲ್ಲ. ೪೩. ಆದರೆ ಪ್ರಸಿದ್ಧನಾದ ಅರಿಕೇಸರಿಯ ಸಾಹಸವು ಒಂದೊಂದು ಸಲ ಪಕ್ಕದವರ ಮಾತಿನ ಮೂಲಕ ತನ್ನ ಮನಸ್ಸನ್ನು ಪ್ರವೇಶಿಸಲು ಮಂತ್ರಮುಗ್ಧವಾದ ಹಾರು ಹೆದರುವ ಹಾಗೆ ಹೆದರಿ ತಲೆಯನ್ನು ಬಗ್ಗಿಸಿಕೊಂಡಿರುತ್ತಾನೆ. ೪೪. ನನಗೆ ತಿಳಿದ ಸಮಾಚಾರವಿಷ್ಟು, ರಾಜಕಾರ್ಯದ ರೀತಿಯನ್ನು ತಿಳಿಯುವುದು ನನಗೆ ಸಾಧ್ಯವೇ? ಪ್ರಭುವಿನ ಮುಂದೆ ಹೆಚ್ಚಾಗಿ ಹರಟುವುದು ನನಗೆ ತಿಳಿಯದು; ಶತ್ರುವಾದ ದುರ್ಯೋಧನನು ಮೈಮರೆತಿಲ್ಲ ; ಎಚ್ಚರದಿಂದಿದ್ದಾನೆ. ವ|| ಎಂದು ಬಿನ್ನವಿಸಿ ಕಿರಾತದೂತನು ಹೋಗಲು ಆ ಮಾತೆಲ್ಲವನ್ನೂ ಕೇಳಿ ದ್ರೌಪದಿಯು ಧರ್ಮರಾಜನಿಗೆ ಹೀಗೆಂದಳು- ೪೫. ಹೇಳುವುದಾದರೆ ರಾಜಕಾರ್ಯದ ರೀತಿಯೆಲ್ಲಿ ಸ್ತ್ರೀಜನರ ಬುದ್ಧಿಯೆಲ್ಲಿ? ಎಲೈ ಚಂದ್ರವಂಶನಾದ ಧರ್ಮರಾಜನೇ ವಿಚಾರಮಾಡುವುದಾದರೆ ಈಗ ನಡೆದಿರುವ ಇದು (ಈ ಕೌರವರ ದುಶ್ಚೇಷ್ಟೆ) ವಂಶಕ್ಕೆ ಹೊಂದಿಕೊಳ್ಳದಿರುವ ವಿಷಯ (ಅಸಂಗತವಾದುದು) ಕೇಳು ಯೋಚನೆಮಾಡಿ ಹೀಗೂ ಮಾತನಾಡದೆ ಸುಮ್ಮನಿರಬೇಕೆಂದಿದ್ದರೂ ಇರುವುದಕ್ಕೆ ಅವಕಾಶಕೊಡದೆ ಆ ಕುರಕುಲದವರು ಮಾಡಿದ ಅಪರಾಧದ ಸಮೂಹಗಳು ನಿಮ್ಮಲ್ಲಿ ನನ್ನನ್ನು ಮಾತನಾಡುವಂತೆ ಮಾಡುತ್ತಿವೆ. ೪೬. ಯಾವ ಕಾಡುಗಳಲ್ಲಿ ಹಣ್ಣುಹಂಪಲುಗಳು ಯಾವಾಗಲೂ ಇರುತ್ತವೆ, ಅಲ್ಲಿಗೆ ಅದನ್ನು ಹುಡುಕಿಕೊಂಡು ಓಡಿ ಅಲೆಯುತ್ತಿರುವ ಈ ಭೀಮನ ಶ್ರಮವು ನಿನ್ನ ಮನಸ್ಸನ್ನು ಕೆರಳಿಸಿಲ್ಲವೇ? ೪೭. ಮೇರುಪರ್ವತಕ್ಕೆ ಹೋಗಿ ಪೌರುಷಪ್ರದರ್ಶನದಿಂದ ಚಿನ್ನದ ಕಣಗಳನ್ನು ನಿನಗೆ ತಂದುಕೊಟ್ಟು ಕೃಶವಾಗಿ ಬೆಟ್ಟದಲ್ಲಿ ತೊಳಲಿ ಉಡುವುದಕ್ಕೆ ನಾರುಗಳನ್ನು ತರುತ್ತಿರುವ ಶೌರ್ಯವನ್ನೇ ಕೂಡಿಟ್ಟ ಧನವಾಗಿ ಉಳ್ಳ ಪರಾಕ್ರಮಶಾಲಿಯಾದ ಧನಂಜಯನೂ (ಅರ್ಜುನನೂ) ನಿನಗೆ ಕೋಪವನ್ನುಂಟು ಮಾಡಲು ಶಕ್ತನಾಗಲಿಲ್ಲವೆ? ೪೮. ಶರೀರದ ಆಯಾಸದಿಂದ ಕಾಡಿನ ಕಾಯನ್ನೂ ಹಣ್ಣನ್ನೂ ಉದುರಿಸಿ ತಿಂದು ನಿಮ್ಮನ್ನು ಅಗಲದೆ

ಆ ದುಶ್ಶಾಸನನಿಂದೆನ
ಗಾದ ಪರಾಭವಮನೇನುಮಂ ಬಗೆಯದೊಡಿಂ|
ತಾದರಮೆ ತೊವಲ್ನಾರುಮ
ನಾದರದೇಂ ನಿನ್ನ ಮನಕೆ ಚಿಂತೆಯುಮಿಲ್ಲಾ|| ೪೯

ಎಮ್ಮಯ್ವರ ಬೇವಸಮಂ
ನೀಂ ಮನದೊಳ್ ನೆನೆಯೆಯಪ್ಪೊಡಂ ನಿನ್ನಿರವಂ|
ನೀಂ ಮರುಳೆ ಬಲೆಯದಂತುಂ
ಘುಮ್ಮೆಂಬಡವಿಯೊಳಡಂಗಿ ಚಿಂತಿಸುತಿರ್ಪಾ|| ೫೦

ಶಮಮನೆ ಕೆಯ್ಕೊಳ್ವೊಡೆ ಬಿ
ಲ್ಲುಮಂಬುಮಂ ಬಿಸುಟು ತಪಕೆ ನೀಂ ಬಗೆವೊಡೆ ವಿ||
ಕ್ರಮಮಂ ಪಗೆಯಂ ಕಿಡಿಸುವ
ಶಮದಿಂ ಮುನಿಗಾಯ್ತು ಸಿದ್ಧಿ ಭೂಪತಿಗಾಯ್ತೆ|| ೫೧

ತಪ್ಪುಮನೆ ನುಡಿಯೆನೆಂಬುದಿ
ದೊಪ್ಪದು ನಿನಗಹಿತರೆಯ್ದೆ ತಪ್ಪಿರ್ದರವರ್|
ತಪ್ಪಿದ ಬೞಕ್ಕೆ ತಪ್ಪಿದ
ತಪ್ಪೇಂ ಗಳ ನನ್ನಿಗೊಪ್ಪಮಲ್ಲದ ತಪ್ಪೇ|| ೫೨

ವ|| ಎಂದು ಪಾಂಚಾಳರಾಜತನೂಜೆಯ ಮಾತಿಂಗೆ ಬೆಂಬಲಂಬಾಯ್ದಂತೆ ಭೀಮಸೇನ ನಿಂತೆಂದಂ-

ಕಂ|| ನುಡಿಯದೆ ಪೆಱತಂ ದ್ರೌಪದಿ
ನುಡಿದಳ್ ತಕ್ಕುದನೆ ಕೇಳಿಮಿಂ ಕೇಳದಿರಿಂ|
ನುಡಿಯಲೆಡೆಯಿಲ್ಲ ನಿಮ್ಮಂ
ನುಡಿಯಿಸಿದಪುದೆನ್ನ ಮನದ ಮುನಿಸವನಿಪತೀ|| ೫೩

ನಾಲ್ಕುಂ ನೃಪವಿದ್ಯೆಯನಾ
ಡಲ್ ಕಲ್ತುಂ ನೆಯೆ ಕಲ್ತೆಯಿಲ್ಲಾಗದೆ ಸೋ|
ಲಲ್ಕೆ ನೃಪ ದೊರೆಯೆ ನೆಲನಂ
ವಲ್ಕಲವಸನಕ್ಕೆ ಮೆಯ್ಯನಾಂಪುದು ಪೆಂಪೇ|| ೫೪

ನಿಂತ ಈ ಯಮಳರೂ ಸತ್ಯಸಂಧಾನದ ನಿನ್ನಮನಸ್ಸನ್ನು ನೋಯಿಸುವುದಿಲ್ಲವೇ? ೪೯. ಆ ದುಶ್ಶಾಸನನಿಂದ ನನಗುಂಟಾದ ಅವಮಾನವೇನನ್ನೂ ಎಣಿಸದಿರುವ ನಿನಗೆ ಈ ತೊಗಲುನಾರುಗಳು ಆದರಕ್ಕೆ ಪಾತ್ರವಾದುವೇ? ಈ ಅನಾಸಕ್ತಿಯೇತಕ್ಕೆ? ನಿನ್ನ ಮನಸ್ಸಿಗೆ ಚಿಂತೆಯೇ ಇಲ್ಲವೇ? ೫೦. ನಮ್ಮಯ್ದುಜನಗಳ ಕಷ್ಟವನ್ನೂ ನೀನು ಮನಸ್ಸಿನಲ್ಲಿ ನೆನೆಯದಿದ್ದರೂ ಎಲೈ ಹುಚ್ಚೀ ನಿನ್ನ ಸ್ಥಿತಿಯನ್ನು ಯೋಚಿಸಿ ನೋಡು ಈ ಘುಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು ಚಿಂತಿಸುತ್ತಿರಬಹುದೇ? ೫೧. ನೀನು ಶಾಂತಿಗುಣವನ್ನೇ ಅಂಗೀಕರಿಸುವುದಾದರೆ ಬಿಲ್ಲನ್ನೂ ಬಾಣವನ್ನೂ ಬಿಸಾಡಿ ತಪಸ್ಸನ್ನೇ ಅಪೇಕ್ಷಿಸುವುದಾದರೆ ವಿಕ್ರಮವನ್ನೂ ದ್ವೇಷವನ್ನೂ ಹೋಗಲಾಡಿಸುವ ಶಾಂತಿಯಿಂದ ಋಷಿಗೆ ಸಿದ್ಧಿಯಾಗುತ್ತದೆಯೇ ವಿನಾ ರಾಜನಿಗೆ ಸಿದ್ಧಿಯಾಗುತ್ತದೆಯೇ (ಅಂದರೆ ಶಾಂತಿಯಿಂದ ಋಷಿಸಿದ್ಧಿಯಾಗುತ್ತದೆಯೇ ವಿನಾ ರಾಜಸಿದ್ಧಿಯಾಗುತ್ತದೆಯೇ?) ೫೨. ದೋಷವನ್ನೇ ಕುರಿತು ನಾನು ಮಾತನಾಡುವುದಿಲ್ಲವೆಂಬ ಮಾತು ಯೋಗ್ಯವಲ್ಲ ; ಶತ್ರುಗಳಾದವರು ತಪ್ಪು ಮಾಡಿದ್ದಾರೆ. ಅವರು ತಪ್ಪುಮಾಡಿದ ಬಳಿಕ ನೀನು ತಪ್ಪುಮಾಡಿದರೆ ಆ ತಪ್ಪು ನಿನ್ನ ಸತ್ಯಕ್ಕೆ ಒಪ್ಪದ ತಪ್ಪಾಗುತ್ತದೆಯೇ? ವ|| ಎಂಬುದಾಗಿ ಹೇಳಿದ ದ್ರೌಪದಿಯ ಮಾತಿಗೆ ಬೆಂಬಲ ಬರುವ ಹಾಗೆ ಭೀಮಸೇನನು ಹೀಗೆಂದನು- ೫೩. ದ್ರೌಪದಿಯು ಅನ್ಯಥಾ ನುಡಿಯದೆ ಯೋಗ್ಯವಾದುದನ್ನೇ ಹೇಳಿದಳು. ನೀವು ಕೇಳಿ, ಬಿಡಿ; ಇನ್ನು ಮಾತನಾಡುವುದಕ್ಕೆ ಅವಕಾಶವೇ ಅಲ್ಲ. ರಾಜನೇ, ನನ್ನ ಮನಸ್ಸಿನ ಕೋಪ ನನ್ನನ್ನೂ ಮಾತನಾಡುವ ಹಾಗೆ ಮಾಡುತ್ತದೆ. ೫೪. ರಾಜನಿಗೆ ಯೋಗ್ಯವಾದ ಸಾಮ, ದಾನ, ಭೇದ, ದಂಡಗಳೆಂಬ ನಾಲ್ಕುಪಾಯಗಳನ್ನೂ ತಿಳಿದಿದ್ದರೂ ನೀನು ಪೂರ್ಣವಾಗಿ ಕಲಿತವನಾಗಲಿಲ್ಲವಲ್ಲ ; ಭೂಮಿಯನ್ನು ಸೋಲುವುದುಚಿತವೇ?

ಉ|| ನನ್ನಿಗೆ ದಾಯಿಗಂಗೆಳೆಯನೊಪ್ಪಿಸಿದೆಂ ಗಡಿಮೆಂಬ ಮಾತುಗಳ್
ನಿನ್ನವು ಕೂರದರ್ ನೆಲನನೊಟ್ಟಜೆಯಿಂ ಕೊಳೆ ಕೊಟ್ಟು ಮುಟ್ಟುಗೆ|
ಟ್ಟಿನ್ನುಮರಣ್ಯದೊಳ್ ನಮೆದಪಂ ಯಮನಂದನನೆಂಬ ಬನ್ನಮುಂ
ಮುನ್ನಮೆ ಸೋಂಕಿ ಕಣ್ಮಲೆವ ಮಾತುಗಳೆಲ್ಲರ ಪೇೞ್ವ ಮಾತುಗಳ್|| ೫೫

ಕಂ|| ಸಲೆ ಸಂದಿರ್ಪತ್ತೊಂದುಂ
ತಲೆವರೆಗಂ ನಮಗೆ ಪರಿಭವಂ ಕೃಷ್ಣೆಯ ಮುಂ|
ದಲೆಯಂ ಪಿಡಿದೞೆವಲ್ಲಿಯೆ
ತಲೆವಿಡಿದರ್ ನಮ್ಮ ಬೀರಮಂ ಕೌರವರುಂ|| ೫೬

ಚಂ|| ಮಲೆ ಮಲೆದುರ್ಕಿ ಸೊರ್ಕಿ ಸಭೆಯೊಳ್ ಕುಲಂಪಾಸುಲನೀ ಶಿರೀಷ ಕೋ
ಮಲೆಯ ವಿಲೋಲ ನೀಲ ಕಬರೀಭರಮಂ ತೆಗೆವಾಗಳಲ್ಲಿ ಕೆ|
ಯ್ಯಲೆ ಸದೆದಂತೆ ಪತ್ತಿ ಬೆರಲಚ್ಚುಗಳಚ್ಚಿಱದಂತೆ ಕೊಂಕುಗಳ್
ತಲೆ ನವಿರೊಂದಿ ಮೂದಲಿಸುವಂತೆವೊಲಿರ್ದುವು ನಮ್ಮ ವೀರಮಂ|| ೫೭

ಮ|| ಅಸೀತೇಂದೀವರಲೋಲಲೋಚನೆಯನಂದಂತಾ ಸಭಾಮಧ್ಯದೊಳ್
ಪಸುವಂ ಮೋದುವವೋಲೆ ಮೋದೆಯುಮದಂ ಕಂಡಂತೆ ಪಲ್ಗರ್ಚಿ ಸೈ|
ಸಿರಿದೆಂ ನಿನ್ನಯ ನನ್ನಿಗಿನ್ನೆವರಮಾ ದುಶ್ಶಾಸನೋರಸ್ಥಳೋ
ಷ್ಣಸೃತಾಸೃಗ್ಜಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ|| ೫೮

ವ|| ಎಂದು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಪಗೆವರಿರ್ದ ದೆಸೆಯಂ ನೋಡಿ ತಳಲರ್ ಬಗೆದ ಭೀಮಸೇನನಂ ಧರ್ಮಪುತ್ರಂ ಕೋಪತಾಪದಿಂ ಮಸಗಿದ ಮದಗಜಮನೆ ಮಾಣಿಸುವಂತೆಂತಾನುಂ ಮೃದುವಚನಂಗಳಿಂ ಮುಳಿಸನಾಱಸುತಿರ್ದನಿರ್ಪನ್ನೆಗಂ-

ಚಂ|| ಕನಕ ಪಿಶಂಗ ತುಂಗ ಜಟಿಕಾವಳಯಂ ಕುಡುಮಿಂಚಿನೋಳಿಯಂ
ನೆನೆಯಿಸೆ ನೀಲ ನೀರದ ತನುಚ್ಛವಿ ಭಸ್ಮ ರಜೋವಿಲಿಪ್ತಮಂ|
ಜನ ಗಿರಿಯಂ ಶರಜ್ಜಳಧರಂ ಕವಿದಂತಿರೆ ಚೆಲ್ವನಾಳ್ದು ಭೋಂ
ಕನೆ ನಭದಿಂದಮಂದಿೞದನಲ್ಲಿಗೆ ವೃದ್ಧ ಪರಾಶರಾತ್ಮಜಂ|| ೫೯

ಶರೀರಕ್ಕೆ ನಾರುಮಡಿಯನ್ನು ಧರಿಸಿರುವುದು ಹಿರಿಮೆಯೇ? (ನಾರುಮಡಿಗೆ ಮೆಯ್ಯನೊಡ್ಡುವುದು ವೈಭವವೇ) ೫೫. ಸತ್ಯಕ್ಕಾಗಿ ದಾಯಾದಿಗಳಿಗೆ ರಾಜ್ಯವನ್ನೂ ಒಪ್ಪಿಸಿದೆವು ಎಂಬುದು ನೀವು ಹೇಳುವ ಮಾತುಗಳು. ಹಿತವಲ್ಲದವರು ರಾಜ್ಯವನ್ನು ಪರಾಕ್ರಮದಿಂದ ಕಿತ್ತುಕೊಳ್ಳಲು ಸಾಧನಸಾಮಗ್ರಿಗಳನ್ನೆಲ್ಲ ನೀಗಿಕೊಂಡು (ನಿಸ್ಸಹಾಯಕನಾಗಿ) ಧರ್ಮರಾಯನು ಕಾಡಿನಲ್ಲಿ ನವೆಯುತ್ತಿದ್ದಾನೆ ಎಂಬ ಅವಮಾನಕರವಾದ ಎಲ್ಲರೂ ಹೇಳುವ ಮಾತುಗಳು ನಮ್ಮನ್ನು ಮೊದಲೇ ಸೋಂಕಿ ಕಣ್ಣನ್ನು ಕೆರಳಿಸುವಂತಹವುಗಳಾಗಿವೆ.

೫೬. ಪ್ರಸಿದ್ಧವಾದ ನಮ್ಮ ಇಪ್ಪತ್ತೊಂದು ತಲೆಮಾರಿನವರೆಗೂ ನಮಗೆ ಅವಮಾನವಾದ ಹಾಗೆಯೇ ಆಯಿತು. ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದಾಗಲೇ ಕೌರವರು ನಮ್ಮ ಪರಾಕ್ರಮವನ್ನೂ ಸೆರೆಹಿಡಿದರು. ೫೭. ಅಹಂಕಾರದಿಂದ ಮಲೆತು ಉಬ್ಬಿ ಸೊಕ್ಕಿ ಆ ಕುಲಕಳಂಕನಾದ ದುಶ್ಶಾಸನನು ಸಭೆಯಲ್ಲಿ ಬಾಗೆಯ ಹೂವಿನಂತೆ ಕೋಮಲವೂ ಮೃದುವೂ ಚಂಚಲವೂ ಕರ್ರಗೂ ಇರುವ ಕೇಶರಾಶಿಯನ್ನು ಎಳೆದಾಗ ಕಯ್ಯಲ್ಲಿಯೇ ಹೊಡೆದ ಹಾಗೆ ಬೆರಳಿನ ಗುರುತುಗಳು ಅಂಟಿಕೊಂಡು ಮುದ್ರಿಸುವ ಹಾಗೆ ಇರುವ ಕೊಂಕಾದ ಮುಂಗುರುಳು ತಲೆಯ ಕೂದಲುಗಳೊಡನೆ ಸೇರಿ ನಮ್ಮ ವೀರ್ಯವನ್ನು ಮೂದಲಿಸುವಂತಿವೆ.

೫೮. ಕನ್ನೆ ದಿಲೆಯಂತೆ ಚಂಚಲವಾದ ಕಣ್ಣುಳ್ಳ ದ್ರೌಪದಿಯನ್ನು ಆ ದಿನ ಆ ಸಭಾಮಧ್ಯದಲ್ಲಿ ಪಶುವನ್ನು ಹೊಡೆಯುವ ಹಾಗೆ ಹೊಡೆದುದನ್ನು ಕಂಡು ನಿನ್ನ ಸತ್ಯಕ್ಕಾಗಿ ಹಲ್ಲುಕಚ್ಚಿಕೊಂಡು ಇಲ್ಲಿಯವರೆಗೆ ಸಹಿಸಿದೆನು. ಆ ದುಶ್ಶಾಸನನ ಎದೆಯ ಬಿಸಿರಕ್ತವನ್ನು ಪಾನಮಾಡಲು ನನ್ನ ಬಾಯಿ ಬಯಸಿ ಆತುರ ಪಡುತ್ತಿರುವಾಗ ನಾನು ಇನ್ನು ಸುಮ್ಮನೆ ಇರುತ್ತೇನೆಯೇ? ವ|| ಎಂದು ತನ್ನ ಗದಾದಂಡವನ್ನು ಭುಜಾಂಡದಲ್ಲಿ ಅಳವಡಿಸಿಕೊಂಡು ಶತ್ರುಗಳಿದ್ದ ಕಡೆಯನ್ನು ನೋಡಿ ಹೊರಡಲು ಯೋಚಿಸಿದ ಭೀಮಸೇನನನ್ನು ಧರ್ಮರಾಜನು ಕೋಪಾಗ್ನಿಯಿಂದ ಕೆರಳಿದ ಮದಗಜವನ್ನು ಸಂತೈಸುವಂತೆ ಹೇಗೋ ಮೃದುವಾದ ಮಾತುಗಳಿಂದ ಸಮಾಧಾನಮಾಡಿದನು. ಅಷ್ಟರಲ್ಲಿ- ೫೯. ಹೊಂಬಣ್ಣದ ಎತ್ತರವಾದ ಜಟೆಯ ಸಮೂಹವೂ ಕುಡಿಮಿಂಚಿನ ಸಮೂಹವನ್ನು ಜ್ಞಾಪಿಸುತ್ತಿರಲು ವಿಭೂತಿಯಿಂದ ಲೇಪಿಸಿದ ಕೃಷ್ಣಮೇಘದಂತಿದ್ದ ಶರೀರಕಾಂತಿಯು ಅಂಜನಾದ್ರಿಯನ್ನು ಶರತ್ಕಾಲದ ಮೋಡಗಳು ಕವಿದಂತಿರಲು ಸೌಂದರ್ಯದಿಂದ

ವ|| ಅಂತು ನಭೋವಿಭಾಗದಿಂ ಧರಾವಿಭಾಗಕ್ಕಿೞತಂದ ಕೃಷ್ಣದ್ವೈಪಾಯನನಂ ಕಂಡಜಾತ ಶತ್ರು ತನ್ನೇಱದ ಸಟಿತ ಶಿಳಾತಳದ ಪಟ್ಟಕದಿಂದಿೞದು ನಿಜಾನುಜಸಹಿತಮಿದಿರ್ವಂದು ಧರಾತಳನಿಷ್ಠ ಲಲಾಟಪಟ್ಟಂ ಸಾಷ್ಟಾಂಗವೆಱಗಿ ಪೊಡವಟ್ಟು ತದೀಯಾಶೀರ್ವಾದಮನಾಂತು ತಚ್ಛಿಳಾತಳದೊಳ್ ಕುಳ್ಳಿರಿಸಿ ವನಕುಸುಮಂಗಳಿಂದರ್ಘ್ಯಮೆತ್ತಿ ಸರೋವರಜಲಂಗಳಂ ಪದ್ಮಪತ್ರ ಪುಟಂಗಳಿಂ ತಂದು ಪದಪದ್ಮಂಗಳಂ ಕರ್ಚಿ ತತ್ಪಾದ ಪವಿತ್ರೋದಕಂಗಳನನಿಬರು ಮುತ್ತಮಾಂಗದೊಳ್ ತಳಿದುಕೊಂಡಿರ್ದಾಗಳ್ ಸತ್ಯವತೀನಂದನಂ ತನ್ನ ಮಕ್ಕಳ ಸಾಯಸಂಗಳ್ಗೆ ಮನ್ಯುಮಿಕ್ಕು ಕಣ್ಣನೀರಂ ನೆಗಪೆ ಮಹಾಪ್ರಸಾದಮೆಂದು ಧರ್ಮನಂದನನಿಂತೆಂದಂ-

ಉ|| ನೀಗಿದುದೀಗಳೆಮ್ಮ ವನವಾಸಪರಿಶ್ರಮವಿಗಳಾಳ್ದೆವಾ
ಸಾಗರ ಮೇಖಳಾವೃತ ಧರಿತ್ರಿಯನೀಗಳಂಡಗಿತೆಮ್ಮ ಹೃ
ದ್ರೋಗಮನೇಕ ಮಂಗಳಪರಂಪರೆಗಳ್ ದೊರೆಕೊಂಡುವೀಗಳೇ
ನಾಗದೊ ಪೇೞು ಭವಚ್ಚರಣಪದ್ಮನಿರೀಕ್ಷಣದಿಂ ಮುನೀಶ್ವರಾ|| ೬೦

ಕಂ|| ಆಪತ್ಪಯೋಯೊಳಗ
ತ್ಯಾಪತ್ತಿಂದುಳ್ಕಿಮುೞ ನಮೆವೆಮಗೆ ಶರಣ್|
ಪಾಪಹರ ನೀಮೆ ಬಗೆದೆಮ
ಗಾಪತ್ಪ್ರತಿಕಾರಮಾವುದೀಗಳೆ ಬೆಸಸಿಂ|| ೭೧

ವ|| ಎಂಬುದುಮಾ ಮುನೀಂದ್ರನಾಮುಮಂತೆಂದೆ ಬಂದೆವೆಂದು-

ಕಂ|| ಸುರರ್ಗಮೃತಮನುಂತೆ ಕಳಾ
ತರದಿಂದಿತ್ತಸಿಯನಾದ ಚಂದ್ರನವೋಲ್ ಭೂ|
ಭರಮಂ ನನ್ನಿಗೆ ದಾಯಿಗ
ರ್ಗಿರದಿತ್ತೆರಡರೊತ್ತೆ ನೀನೆ ಧನ್ಯನೆಯಲ್ತೇ|| ೬೨

ನೀಂ ಬೇಮಗೆ ಸುಯೋಧನ
ನೇಂ ಬೇಯೆ ಕೂಸುತನದೊಳಾದೊಡಮಿನ್ನೇ|
ನೆಂಬುದೊ ಪಿರಿದೈವರೊಳಂ
ಪಂಬಲ್ ಗುಣಪಕ್ಷಪಾತಮಪ್ಪುದು ನಿಮ್ಮೊಳ್|| ೬೩

ವ|| ಎಂದು ತನ್ನ ವರ್ತನಮುಂ ಮೋಹಮನುಂಟುಮಾಡೆ ಮತ್ತಮುಂತೆಂದಂ-

ಕೂಡಿ ವೃದ್ಧನಾದ ವ್ಯಾಸಮಹರ್ಷಿಯು ಇದ್ದಕ್ಕಿದ್ದ ಹಾಗೆ ಆ ದಿನ ಆಕಾಶದಿಂದ ಅಲ್ಲಿಗೆ ಇಳಿದು ಬಂದನು. ವ|| ಹಾಗೆ ಆಕಾಶಭಂಗದಿಂದ ಭೂಭಾಗಕ್ಕೆ ಇಳಿದು ಬಂದ ವ್ಯಾಸಮಹರ್ಷಿಯನ್ನು ನೋಡಿ ಧರ್ಮರಾಯನು ತಾನು ಏರಿದ್ದ ಸಟಿಕಶಿಲಾತಳಪೀಠದಿಂದ ಕೆಳಗಿಳಿದು ತನ್ನ ತಮ್ಮಂದಿರೊಡನೆ ಇದಿರಾಗಿ ಬಂದು ಭೂಮಿಯಲ್ಲಿಟ್ಟ ಮುಖಮಂಡಲವುಳ್ಳವನಾಗಿ ಸಾಷ್ಟಾಂಗ ನಮಸ್ಕಾರಮಾಡಿ ಅವನ ಹರಕೆಗಳನ್ನು ಪಡೆದು ಆ ಶಿಲಾಪಟ್ಟದಲ್ಲಿಯೇ ಅವನನ್ನು ಕುಳ್ಳಿರಿಸಿ ಕಾಡುಹೂವುಗಳಿಂದ ಅರ್ಘ್ಯವನ್ನು ಕೊಟ್ಟು ಕಮಲದೆಲೆಗಳಲ್ಲಿ ಸರೋವರದ ನೀರನ್ನು ತಂದು ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕವನ್ನು ಎಲ್ಲರೂ ತಲೆಯಲ್ಲಿ ಧರಿಸಿಕೊಂಡರು. ವ್ಯಾಸಮಹರ್ಷಿಯು ತನ್ನ ಮೊಮ್ಮಕ್ಕಳ ವಿಶೇಷವಾದ ಆಯಾಸ(ಶ್ರಮ)ಕ್ಕಾಗಿ ದುಖಮೀರಿ ಕಣ್ಣ ನೀರನ್ನು ತುಂಬಿಕೊಂಡರು. ಅವರು ಬಂದುದು ಪರಮಾನುಗ್ರಹವೆಂದು ಧರ್ಮರಾಜನು ಅವರನ್ನು ಕುರಿತು ಹೀಗೆಂದನು- ೬೦. ಎಲೈ ಮುನೀಶ್ವರನೇ ನಿಮ್ಮ ಪಾದಕಮಲದ ದರ್ಶನದಿಂದ ನಮ್ಮ ವನವಾಸದ ಆಯಾಸಗಳೆಲ್ಲವೂ ಮಾಯವಾದುವು. ಸಾಗರವೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ನಾವು ಈಗ ಆಳಿದವರಾದೆವು. ನಮ್ಮ ಹೃದಯಬೇನೆಗಳು ಅಡಗಿದುವು. ನಮಗೆ ಅನೇಕ ಶುಭಪರಂಪರೆಗಳುಂಟಾದವು. ಇನ್ನೇನುತಾನೆ ಆಗವು? ೬೧. ಆಪತ್ತುಗಳೆಂಬ ಸಮುದ್ರದಲ್ಲಿ ಅತಿಯಾದ ಅಪಾಯಗಳಿಂದ ಹೆದರಿ ಮುಳುಗಿ ಕೃಶವಾಗಿರುತ್ತಿರುವ ನಮಗೆ ಪಾಪ ಹೋಗಲಾಡಿಸುವ ನೀವೇ ಶರಣು(ಆಶ್ರಯ). ನೀವು ಯೋಚಿಸಿ ಈ ಆಪತ್ತಿಗೆ ಪರಿಹಾರವಾವುದೆಂಬುದನ್ನು ಈಗಲೆ ತಿಳಿಸಿ. ವ|| ಎನ್ನಲು ಆ ಋಷಿಶ್ರೇಷ್ಠನು ನಾವೂ ಅದಕ್ಕಾಗಿಯೇ ಬಂದಿದ್ದೇವೆ ಎಂದನು. ೬೨. (ಯಾವ ಪ್ರತಿಫಲವೂ ಇಲ್ಲದೆ) ಸುಮ್ಮನೆ ದೇವತೆಗಳಿಗೆ ತನ್ನ ಕಲಾಸಮೂಹಗಳಿಂದ ಅಮೃತವನ್ನು ಕೊಟ್ಟು ಕೃಶವಾದ ಚಂದ್ರನ ಹಾಗೆ ಸತ್ಯಕ್ಕಾಗಿ ದಾಯಾದ್ಯರಿಗೆ ಭೂಭಾರವನ್ನು ಕೊಟ್ಟು ಅಪಾಯಕ್ಕೊಳಗಾದ ನೀನೇ ಧನ್ಯನಲ್ಲವೇ? ೬೩. ಬಾಲ್ಯದಿಂದ ನಮಗೆ ನೀವೂ ಬೇರೆಯಿಲ್ಲ ಸುಯೋಧನನು ಬೇರೆಯಲ್ಲ ಈಗ ಹೇಳುವುದು ತಾನೆ ಏನಿದೆ. ನಿಮ್ಮ ಅಯ್ದು ಜನರಲ್ಲಿ ಗುಣಪಕ್ಷಪಾತದಿಂದ ನನ್ನ ಮೆಚ್ಚಿಗೆ (ನಿಮ್ಮಲ್ಲಿ) ಹೆಚ್ಚಾಗಿದೆ

ಕಂ|| ಪನ್ನೆರಡು ವರುಷದವಯು
ಮಿನ್ನೆಯಲ್ ಬಂದುದಹಿತನಿಳೆಯಂ ಕುಡನಾ|
ಸನ್ನಂ ಕಾಳೆಗಮಱಯಿರೆ
ಪನ್ನಗಕೇತನನ ಚಲದ ಕಲಿತನದಳವಂ|| ೬೪

ಅನವದ್ಯಂ|| ಪರಶುರಾಮನನಂಜಿಸಿ ಬೀರಕ್ಕಾಗರಮಾದ ನದೀಜನೇ
ದೊರೆಯನೇದೊರೆಯಂ ಗಳ ಕುಂಭಪ್ರೋದ್ಭವನಾತನ ಪುತ್ರನೇ|
ದೊರೆಯನೇದೊರೆಯಂ ಕೃಪನಂತಾ ಪಾೞಯೊಳಂಕದ ಕರ್ಣನೇ
ದೊರೆಯನಿಂತಿವರೊರ್ಬರಿನೊರ್ಬರ್ ಗರ್ವಿತರಗ್ಗಳಮಲ್ಲರೇ|| ೬೫

ಕಂ|| ಪ್ರಳಯದುರಿ ಕಾಳಕೂಟದ
ಗುಳಿಗೆ ಪುರಾಂತಕ ಲಲಾಟನೇತ್ರಾನಳನೊಂ|
ದಳವಿಗಮಗ್ಗಳಮವರ್ಗಳ
ಮುಳಿಸುಗಳುಂ ಮುಳಿದು ತುಡುವ ದಿವ್ಯೇಷುಗಳುಂ|| ೬೬

ವ|| ಅದು ಕಾರಣದಿಂದವರಂ ಗೆಲ್ವಾಗಳ್ ವಿಕ್ರಮಾರ್ಜುನನಲ್ಲದೆ ಗೆಲ್ಲನದಱಂದಾತಂಗೆ ದಿವ್ಯಾಸ್ತ್ರಂಗಳಂ ಪಡೆಯಲ್ವೇೞ್ಪುದದಂ ಪಡೆವುಪಾಯಮುಮಂ ಮಂತ್ರಮುಮನುಪದೇಶಂಗೆಯ್ಯಲ್ ಬಂದೆವೆಂದು ಯುಷ್ಠಿರಂಗೆ ವೇೞ್ದು ವಿಕ್ರಮಾರ್ಜುನಂಗೆ ಮಂತ್ರಾಕ್ಷರಂಗಳನುಪದೇಶಂಗೆಯ್ದು ಗುಹ್ಯಕನೆಂಬನಂ ಸ್ಮರಣಮಾತ್ರದೊಳ್ ಬರಿಸಿ ಸಾಹಸಾಭರಣನನಿಂದ್ರಕೀಲನಗೇಂದ್ರಮನೆಯ್ದಿಸಿ ಬರ್ಪುದೆಂದು ಪೇೞ್ವುದುಂ ಧರ್ಮಪುತ್ರನಾ ಮುನೀಂದ್ರಂಗೆ ಸಾಷ್ಟಾಂಗವೆಱಗಿ ಪೊಡವಡೆ ಪರಸಿ ಪಯೋಧರಪಥಕ್ಕೊಗೆದನಿತ್ತ ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ವೆನೆಂದಾಗಳ್ ಪಾಂಚಾಳರಾಜತನೂಜೆಯಿಂತೆಂದಳ್-

ಕಂ|| ಬಗೆಯದೆ ಮೆಯ್ಸೊಕಮಂ ಬಗೆ
ಪಗೆವರ ಕಡುವೆರ್ಚನೆನ್ನ ಪೂಣ್ಕೆಯನೆರ್ದೆಯೊಳ್|
ಬಗೆ ಮುನಿಯ ಮಂತ್ರಪದಮಂ
ಬಗೆ ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ|| ೬೭

ವ|| ಎಂದು ಬುದ್ಧಿವೇೞ್ದು ಮನದೆಱಕಂ ಮನೋವೇಗದಿಂ ಪರಿಯೆ ಸೈರಿಸಲಾಱದೆ-

ವ|| ಎಂದು ಹೇಳಿ ತನ್ನ ನಡತೆಯನ್ನೂ ಮೋಹವನ್ನೂ ಸ್ಪಷ್ಟಪಡಿಸುವ ಹಾಗೆ ಪುನ ಹೀಗೆಂದನು- ೬೪. ಇನ್ನೇನು ಹನ್ನೆರಡು ವರ್ಷದ ಗಡುವು ಮುಗಿಯುತ್ತ ಬಂದಿದೆ. ಶತ್ರುವಾದ ಕೌರವನು ರಾಜ್ಯವನ್ನು ತಾನಾಗಿ ಕೊಡುವುದಿಲ್ಲ. ದುರ್ಯೋಧನನ ಹಟದ ಮತ್ತು ಪರಾಕ್ರಮದ ಪ್ರಮಾಣವು ನಿಮಗೆ ತಿಳಿಯದೇ? ೬೫. ಪರಶುರಾಮನನ್ನು ಹೆದರಿಸಿ ಪರಾಕ್ರಮಕ್ಕೆ ಆವಾಸಸ್ಥಾನವಾದ ಭೀಷ್ಮನು ಸಾಮಾನ್ಯನೇ? ಕುಂಭಸಂಭವನಾದ ದ್ರೋಣನು ಸಾಮಾನ್ಯನೇ? ಅವನ ಮಗನಾದ ಅಶ್ವತ್ಥಾಮನೇನು ಸಾಮಾನ್ಯನೇ, ಕೃಪನೇನು ಸಾಮಾನ್ಯನೇ? ಅದೇ ಕ್ರಮದಲ್ಲಿ ಶೂರನಾದ ಕರ್ಣನು ಯಾರಿಗೆ ಸಮಾನನು? ಈ ಗರ್ವಿಷ್ಠರಾದ ಇವರಲ್ಲಿ ಒಬ್ಬರಿಗಿಂತೊಬ್ಬರು ಮತ್ತೂ ಶ್ರೇಷ್ಠರು. ೬೬. ಅವರ ಕೋಪಗಳೂ ಕೋಪಿಸಿಕೊಂಡು ಪ್ರಯೋಗಿಸುವ ದಿವ್ಯಾಸ್ತ್ರಗಳೂ ಪ್ರಳಯಕಾಲದ ಬೆಂಕಿ ಕಾಳಕೂಟವೆಂಬ ವಿಷದ ಗುಳಿಗೆ ಈಶ್ವರನ ಹಣೆಗಣ್ಣಿನ ಅಗ್ನಿ ಇವುಗಳ ಪ್ರಮಾಣಕ್ಕಿಂತ ಅತಿಶಯವಾದುವು. ವ|| ಆದ ಕಾರಣದಿಂದ ಅವರನ್ನು ಗೆಲ್ಲಬೇಕಾದರೆ ವಿಕ್ರಮಾರ್ಜುನನಲ್ಲದವನು ಗೆಲ್ಲಲಾರ. ಆದುದರಿಂದ ಅವನನ್ನು ದಿವ್ಯಾಸ್ತ್ರಗಳನ್ನು ಗೆಲ್ಲುವಂತೆ ಹೇಳಬೇಕು. ಅದನ್ನು ಪಡೆಯುವ ಉಪಾಯವನ್ನೂ ಮಂತ್ರವನ್ನೂ ಉಪದೇಶ ಮಾಡುವುದಕ್ಕಾಗಿಯೇ ಬಂದಿದ್ದೇವೆ ಎಂಬುದಾಗಿ ಧರ್ಮರಾಜನಿಗೆ ಹೇಳಿ ವಿಕ್ರಮಾರ್ಜುನನಿಗೆ ಮಂತ್ರಾಕ್ಷರಗಳನ್ನು ಉಪದೇಶಮಾಡಿದರು. ಗುಹ್ಯಕನೆಂಬುವನನ್ನು ಸ್ಮರಿಸಿಕೊಳ್ಳುವುದರಿಂದಲೇ ಬರಮಾಡಿ ಸಾಹಸಾಭರಣನಾದ ಅರ್ಜುನನನ್ನು ಇಂದ್ರಕೀಲಪರ್ವತವನ್ನು ಸೇರಿಸಿ ಬರುವುದು ಎಂದು ಹೇಳಿದರು. ಧರ್ಮರಾಜನು ಋಷಿಶ್ರೇಷ್ಠನಿಗೆ ಸಾಷ್ಟಾಂಗಪ್ರಣಾಮ ಮಾಡಿ ನಮಸ್ಕರಿಸಲು ವ್ಯಾಸನು ಆಶೀರ್ವದಿಸಿ ಆಕಾಶಪ್ರದೇಶಕ್ಕೆ ತೆರಳಿದನು. ಈಕಡೆ ಪರಾಕ್ರಮದಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಅಪ್ಪಣೆಯನ್ನು ಕೇಳುತ್ತಿದ್ದೇನೆ ಎಂದು ಹೇಳಿದಾಗ ದ್ರೌಪದಿಯು ಹೀಗೆಂದಳು- ೬೭. ನಿನ್ನ ಶರೀರಸೌಖ್ಯವನ್ನು ಚಿಂತಿಸದೆ ಶತ್ರುಗಳ ಹೆಚ್ಚಿನ ಅಭಿವೃದ್ಧಿಯನ್ನೂ ನನ್ನ ಪ್ರತಿಜ್ಞೆಯನ್ನೂ ಋಷಿಯ ಮಂತ್ರೋಪದೇಶವನ್ನೂ ಹೃದಯದಲ್ಲಿ ಚಿಂತಿಸು, ಅರ್ಜುನ ನಿನ್ನ ಇಷ್ಟಾರ್ಥಸಿದ್ಧಿಯಾಗಲಿ ವ|| ಎಂದು ಬುದ್ಧಿಹೇಳಿ ಮನಸ್ಸಿನ

ಉ|| ಬಳ್ವಳ ನೀಳ್ದ ಕಣ್ಮಲರ ತಳ್ತೆಮೆಯಿಂ ಕರೆಗಣ್ಮಿ ಬೆಳ್ಗಡ
ಲ್ಗಳ್ವರಿಯಲ್ಕಮಾಟಿಸಿದೊಡೊಯ್ಯನೆ ಮಂಗಳ ಭಂಗ ಭೀತಿಯಂ|
ತಳ್ವದೆ ಮಾಡೆ ಬಾಷ್ಪಜಳಮಂ ಕಳೆದೞ್ಕಱನೀಯೆ ಸಂಬಳಂ
ಗೊಳ್ವವೊಲಾ ತಳೋದರಿಯ ಚಿತ್ತಮನಿೞ್ಕುೞಗೊಂಡನರ್ಜುನಂ|| ೬೮

ವ|| ಅಂತು ಯಾತ್ರೋದ್ಯುಕ್ತನಾಗಿ ಗುಹ್ಯಕನ ಪೆಗಲನೇಱ ಗಂಧೇಭ ವಿದ್ಯಾಧರಂ ವಿದ್ಯಾಧರನಂತೆ ಗಗನತಳಕ್ಕೊಗೆದು ಮಹೇಂದ್ರಕೀಲಾಭಿಮುಖನಾದಾಗಳ್-

ಚಂ|| ಕಡವಿನ ಕಂಪಡಂಗಿದುದು ಜಾದಿಯ ಕಂಪೊದವಿತ್ತು ಸೋಗೆಯು
ರ್ಕುಡುಗಿದುದಂಚೆಯುರ್ಕು ಪೊಸತಾಯ್ತು ಮುಗಿಲ್ಗಳ ಕರ್ಪುಪೀ ನಮೋ|
ಗಡಿಸಿದುದಿಂದುಮಂಡಳದ ಕರ್ಪೆಸೆದತ್ತು ಘನಾಗಮಂ ಮೊದ
ಲ್ಗಿಡೆ ಶರದಾಗಮಂ ನೆಯೆ ಪರ್ಬೆ ಸಮಸ್ತ ಮಹೀವಿಭಾಗಮಂ|| ೬೯

ಅಳಿ ಬಿರಿದಿರ್ದ ಜಾದಿಯೊಳೆ ಪಲ್ಮೊರೆಯುತ್ತಿರೆ ಹಂಸೆ ಪೂತ ಪೂ
ಗೊಳದೊಳೆ ರಾಗಿಸುತ್ತಿರೆ ಶುಕಾವಳಿ ಬಂಧುರ ಗಂಧಶಾಳಿ ಸಂ|
ಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ ಸಾರೆ ಚಕೋರಮಿಂದುಮಂ
ಡಳ ಗಳಿತಾಮೃತಾಸವಮನುಂಡುಸಿರುತ್ತಿರೆ ಚೆಲ್ವು ಶಾರದಂ|| ೭೦

ಮ|| ಪುಳಿಯೊಳ್ ಕರ್ಚಿದ ಬಾಳ ಬಣ್ಣಮನೆ ಪೋಲ್ವಾಕಾಶಮಾಕಾಶಮಂ
ಡಳಮಂ ಪರ್ವಿದ ಬೆಳ್ಮುಗಿಲ್ ಮುಗಿಲ ಬೆಳ್ಪೊಳ್ಪೊಕ್ಕು ತಳ್ಪೊಯ್ಯೆ ಬ|
ಳ್ವಳ ನಿಳ್ದಿರ್ದ ದಿಶಾಳಿಶಾಳಿವನ ಗಂಧಾಂಧ ದ್ವಿರೇಫಾಳಿ ಕ
ಣ್ಗೊಳಿಸಿತ್ತೊರ್ಮೆಯ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ|| ೭೧

ವ|| ಆಗಳ್ ವಿಜಯಂ ತನ್ನ ವಿಜಯಶ್ರೀಯ ಬರವಿಂಗಿದಿರ್ವಂದಂತೆ ಬಂದ ಶರತ್ಕಾಲಶ್ರೀಯನುತ್ಕಂಠಿತಹೃದಯನಾಗಿ ಮೆಚ್ಚಿ ನೋಡುತ್ತುಂ ಬರ್ಪನ್ನೆಗಂ ಮುಂದೆ ಶಾರದ ನೀರದಂಗಳೆಲ್ಲಮೊಂದೆಡೆಗೆ ತೆರಳ್ದೊಟ್ಟಿ ಬೆಟ್ಟಾದಂತಿರ್ದ ನೀಹಾರಗಿರಿಯಂ ಕಂಡಿದಾವುದೆಂದು ಬೆಸಗೊಳೆ ಗುಹ್ಯಕನಿಂತೆಂದಂ-

ಪ್ರೀತಿಯು ಮನೋವೇಗದಿಂದ ಹರಿಯುತ್ತಿರಲು ಸಹಿಸಲಾರದೆ ೬೮. ಅತ್ಯಂತ ದೀರ್ಘವಾಗಿ ಬೆಳೆದಿರುವ ಹೂವಿನಂತಿರುವ ಕಣ್ಣುಗಳ ಮುಚ್ಚಿದ ರೆಪ್ಪೆಯಿಂದ ಎಲ್ಲೆ ಮೀರಿ ಬಿಳಿಯ ಕಾಂತಿ ಸಮುದ್ರವು ಹರಿಯುವುದಕ್ಕೆ ಬಯಸಲು ಅಮಂಗಳವಾಗುತ್ತದೆಯೆಂಬ ಭಯದಿಂದ ಕಣ್ಣೀರನ್ನು ಒರಸಿ ದ್ರೌಪದಿಯು ಒಂದು ಮುತ್ತನ್ನು ಕೊಡಲು (ಚುಂಬಿಸಲು) ಅವಳಿಂದ ದಾರಿಯ ಬುತ್ತಿಯನ್ನು ಪಡೆಯುವ ಹಾಗೆ ಆ ಕೃಶಾಂಗಿಯಾದ ದ್ರೌಪದಿಯ ಮನಸ್ಸನ್ನು ಅರ್ಜುನನು ಸೆಳೆದುಕೊಂಡನು. ವ|| ಹಾಗೆ ಪ್ರಯಾಣದಲ್ಲಿ ಯಕ್ಷನ ಹೆಗಲನ್ನೇರಿ ಗಂಧೇಭವಿದ್ಯಾಧರನಾದ ಅರ್ಜುನನು ವಿದ್ಯಾಧರನಂತೆ ಆಕಾಶಕ್ಕೆ ತೆರಳಿ ಮಹೇಂದ್ರಕೀಲದ ಕಡೆಗೆ ನಡೆದನು. ೬೯. ವರ್ಷಾಕಾಲವು ಕಳೆದು ಶರತ್ಕಾಲವು ಪ್ರಾಪ್ತವಾಗಲು ಕದಂಬಪುಷ್ಪಗಳ ವಾಸನೆಯು ಅಡಗಿಹೋಯಿತು. ಜಾಜಿಯ ವಾಸನೆಯು ಹೆಚ್ಚಿತು. ನವಿಲಿನ ವೈಭವವು ನಿಂತಿತು. ಹಂಸದ ವೈಭವವೂ ಹೊಸದಾಗಿ ಬಂದಿತು. ಮೋಡಗಳ ಕಪ್ಪು ಸಂಪೂರ್ಣವಾಗಿ ಹಿಂಜರಿಯಿತು. ಚಂದ್ರಮಂಡಲದ ಕಪ್ಪುಮಚ್ಚೆಯ ಪ್ರಕಾಶಮಾಯವಾಯಿತು. ೭೦. ದುಂಬಿಗಳು ಅರಳಿದ ಜಾಜಿಯಲ್ಲಿ ಝೇಂಕರಿಸಿದುವು. ಹಂಸಪಕ್ಷಿಯು ಸುಮಭರಿತವಾದ ಪುಷ್ಪಸರೋವರದಲ್ಲಿ ಸಂತೋಷಪಡುತ್ತಿತ್ತು. ಗಿಳಿಗಳ ಸಮೂಹವು ಮನೋಹರವಾದ ಸುಗಂಧದಿಂದ ಕೂಡಿದ ಬತ್ತದ ಸಮೂಹದಲ್ಲಿ ನುಗ್ಗಿ ನುಗ್ಗಿ ನಲಿದುವು. ಪಕ್ಕದಲ್ಲಿಯೇ ಚಕೋರ ಪಕ್ಷಿಯು ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತವೆಂಬ ಮಕರಂದವನ್ನುಂಡು ಶಬ್ದಮಾಡಿತು. ಇವುಗಳಿಂದ ಶರತ್ಕಾಲವು ಸುಂದರವಾಯಿತು. ೭೧. ಹುಳಿನೀರಿನಲ್ಲಿ ತೊಳೆದ ಕತ್ತಿಯ ನೀಲಿಯ ಬಣ್ಣವನ್ನೇ ಹೋಲುವ ಆಕಾಶ, ಆಕಾಶ ಪ್ರದೇಶವನ್ನು ಹಬ್ಬಿರುವ ಬಿಳಿಯ ಮೋಡ, ಮೋಡಗಳ ಬಿಳುಪು ಒಳಗೆಲ್ಲಾ ವ್ಯಾಪಿಸಿರಲು ವಿಸ್ತಾರವಾಗಿ ಹರಡಿದ್ದ ದಿಕ್ಕುಗಳ ಸಮೂಹ, ಶಾಳಿವನದ (ಬತ್ತದ ಗದ್ದೆಯ) ಸುವಾಸನೆಯಿಂದ ಸೊಕ್ಕಿರುವ ದುಂಬಿಗಳ ಸಮೂಹ ಇವುಗಳಿಂದ ಆಕರ್ಷಕವಾಗಿರುವ ಶರತ್ಕಾಲವು ಲೋಕಕ್ಕೆ ಕಣ್ಣು ಬರುವಂತೆ ಪ್ರಾಪ್ತವಾಯಿತು. ವ|| ಆಗ ಅರ್ಜುನನು ತನ್ನ ವಿಜಯಲಕ್ಷ್ಮಿಯ ಬರುವಿಕೆಯನ್ನು ಸ್ವಾಗತ ಮಾಡುವುದಕ್ಕೆ ಇದಿರಾಗಿ ಬಂದಂತೆ ಬಂದ ಶರತ್ಕಾಲಲಕ್ಷ್ಮಿಯನ್ನು ಸಂತುಷ್ಟ ಹೃದಯದಿಂದ ಮೆಚ್ಚಿ ನೋಡುತ್ತ ಬರುವಷ್ಟರಲ್ಲಿ ಮುಂದೆ ಶರತ್ಕಾಲದ ಮೋಡಗಳೆಲ್ಲ ಒಟ್ಟಾಗಿ ಸೇರಿ ಬೆಟ್ಟವಾದಂತೆ ಇದ್ದ ಹಿಮವತ್ಪರ್ವತವನ್ನು ನೋಡಿ ಇದು ಯಾವುದು ಎಂದು