ಕಂ|| ಶ್ರೀ ರಮಣೀರಮಣಂಗರಿ
ನಾರೀ ವೈಧವ್ಯ ದಿವ್ಯ ದೀಕ್ಷಾ ದಕ್ಷಂ|
ಗಾರೆಣೆ ಹರಿಗಂಗೀಗಡೆ
ಬಾರಿಸು ನೀಂ ನಿನ್ನ ಮಗನನಂಧನರೇಂದ್ರಾ|| ೧

ಕಾದುದು ಸರಣ್ಗೆವಂದರ
ನಾದುದು ಕಾಲಾಗ್ನಿಬಲವದರಿನೃಪತಿಗೆ ಕಾ|
ಪಾದುದು ನೆಲಕ್ಕೆ ತೋಳ್ವಲ
ವಿ ದೊರೆತೆನೆ ಮರುಳೆ ಹರಿಗನೊಳ್ ಪಗೆಗೊಳ್ವಾ|| ೨

ವ|| ಎಂದೆನಿತಾನುಂ ತೆಱದೊಳೆ ಸಾಱಯುಂ ಕೀಱಯುಂ ನುಡಿದೊಡೆ ಧೃತರಾಷ್ಟ್ರಂ ಮಗನಲ್ಲಿಗೆ ವಂದು ಜಡಿದು ನುಡಿದುಮೇಗೆಯ್ದು ಮೊಡಂಬಡಿಸಲಾಱದಿದೆ ಯುಷ್ಠಿರಂ ತಲೆಗವಿವನಲ್ಲದೆಯುಮೇವದೊಳ್ ತಲೆಗವಿದು ಸಿಗ್ಗಂ ಕೊಂಡಾಡಿ ನೆತ್ತಮನಾಡಿ-

ಕಂ|| ವ್ಯಾಳ ಗಜಂಗಳನಗ್ಗದ
ಸೂಳೆಯರೊಕ್ಕನಲನರ್ಘ್ಯ ವಸ್ತುಗಳನಿಳಾ|
ಪಾಳಂ ಸೇಲ್ತೊಡೆ ಜೂದಿನ
ಕೇಳಿಯನಾ ಕೇಳಿಯನಿತಳ್ ಮಾಣಿಸಿದರ್|| ೩

ವ|| ಮಾಣಿಸಿದೊಡೆ ಮಾಣದೆ ರಪಣಮಂ ತೋಱಯುಮೊತ್ತೆಯನುಗ್ಗಡಿಸಿಯುಮಾಡಿಮೆನೆ ಪೆಱತೇನುಮುಪಾಯಮಿಲ್ಲದೆಮ್ಮಾಳ್ವ ನೆಲನೊತ್ತೆಯೆಂದೊಡೆ ಬಗೆದು ನೋಡ್ ಗೆಲ್ದಿಂ ಬೞಯಂ ಮುದುಗಣ್ಗಳ್ ಮಗುೞ ಕುಡಿಸುವರೆಂಬ ಬಗೆಯೊಳಂ ವಿಕ್ರಮಾರ್ಜುನನುಂ ಭೀಮನುಂ ಯಮಳರುಮೆೞೆದುಕೊಳ್ವರೆಂಬ ಸಂಕೆಯೊಳಮಂತಲ್ತು ನಿನ್ನನ ನ್ನಿಯೊಳಂ ವರ್ಷಾವಯೊಳಲ್ಲದೆ ನೆಲನನೊತ್ತೆವಿಡಿಯೆನೆಂದೊಡೆ ಧರ್ಮಪುತ್ರಂ ಪನ್ನೆರಡು ವರುಷಂಬರಂ ನಾಡಂ ಪುಗರಣ್ಯದೊಳಿರ್ಪಂತುಮಜ್ಞಾತವಾಸಮೆಂದೊಂದು ವರುಷದೊಳಾರಾನು ಮಱದರಪ್ಪೊಡೆ ಮತ್ತಂ ದ್ರಾದಶಾಬ್ದಂಬರಂ ನಾಡ ದೆಸೆಯಂ ನೋಡದಂತಾಗೆಯೊಂದೆ ಪಲಗೆಯೊಳೆ ಗೆಲ್ಲಸೋಲಮಪ್ಪಂತು ನನ್ನಿ ನುಡಿದು ನೆಲನನೊತ್ತೆಯಿಟ್ಟಾಡಿ-

೧. ‘ಐಶ್ವರ್ಯಲಕ್ಷ್ಮೀಪತಿಯೂ ಶತ್ರುರಾಜಸ್ತ್ರೀಯರಿಗೆ ವೈಧವ್ಯದೀಕ್ಷೆಯನ್ನು ಕೊಡುವ ಶಕ್ತಿಯುಳ್ಳವನೂ ಆದ ಅರಿಕೇಸರಿಗೆ ಸಮಾನರಾದವರಾರು? ಕುರುಡ ದೊರೆಯೇ ನಿನ್ನ ಮಗನನ್ನು ಈ ಜೂಜಿನ ಕಾರ್ಯದಿಂದ ನಿವಾರಿಸುವವನಾಗು’. ೨. ಅರ್ಜುನನ ತೋಳಿನ ಬಲವು ಶರಣಾಗತರನ್ನು ರಕ್ಷಿಸಿತು. ಬಲಿಷ್ಠರಾದ ಶತ್ರುರಾಜರಿಗೆ ಕಾಲಾಗ್ನಿಯಾಯಿತು. ಭೂಮಿಗೆ ರಕ್ಷಣೆಯಾಯಿತು. ಅವನ ಬಾಹುಬಲವು ಇಂತಹುದು ಎಂದು ತಿಳಿದೂ ಹುಚ್ಚ! ಅರ್ಜುನನಲ್ಲಿ ಹಗೆಗೊಳ್ಳುತ್ತೀಯಾ? ವ|| ಎಂದು ಎಷ್ಟೋ ರೀತಿಯಲ್ಲಿ ಸಾರಿ ಸ್ಪಷ್ಟವಾಗಿ ಕೋಪದಿಂದಲೂ ಬಲಾತ್ಕಾರದಿಂದಲೂ ಭೀಷ್ಮರು ಹೇಳಿದರು. ಧೃತರಾಷ್ಟ್ರನು ಮಗನ ಹತ್ತಿರಕ್ಕೆ ಬಂದು ಗದರಿಸಿ ಬಯ್ದು ಹೇಳಿ ಏನೂ ಮಾಡಿದರೂ ಒಪ್ಪಿಸಲಾಗಲಿಲ್ಲ. ಧರ್ಮರಾಜನು (ಸಾಮಾನ್ಯವಾಗಿ) ತಲೆತಗ್ಗಿಸುವವನಲ್ಲವಾದರೂ ತನಗುಂಟಾದ ಸೋಲಿನಲ್ಲಿ ತಲೆತಗ್ಗಿಸಿ ನಾಚಿಕೆಯಿಂದ ಪಗಡೆಯಾಟವಾಡಿ- ೩. ಭಯಂಕರವಾದ (ತುಂಟಾದ) ಆನೆಗಳನ್ನೂ ಶ್ರೇಷ್ಠರಾದ ದಾಸಿಯರನ್ನೂ ಕುಟುಂಬಗಳನ್ನೂ ಬೆಲೆಯಿಲ್ಲದ ವಸ್ತುಗಳನ್ನೂ ಸೋತನು. ಜೂಜಿನಾಟವನ್ನು ಆ ಆಟಕ್ಕೆ ನಿಲ್ಲಿಸಿದರು. ವ|| ಹಾಗೆ ನಿಲ್ಲಿಸಿದರೂ ದುರ್ಯೋಧನನು ನಿಲ್ಲಿಸಲು ಇಷ್ಟಪಡದೆ ಪದಾರ್ಥಗಳನ್ನು ತೋರಿಸಿಯೂ ಒತ್ತೆಗಳನ್ನು ಕೂಗಿ ಹೇಳುತ್ತಲೂ ಆಡಿ ಎನ್ನಲು ಬೇರೆ ಉಪಾಯವಿಲ್ಲದೆ ಧರ್ಮರಾಜನು ‘ನಾವು ಆಳುತ್ತಿರುವ ರಾಜ್ಯವೇ ಒತ್ತೆ’ಯೆಂದೊಡನೆಯೇ ಯೋಚನೆಮಾಡಿ ಗೆದ್ದ ಬಳಿಕ (ಇದನ್ನು) ಈ ಮುದಿಕಣ್ಗಳು ಪುನ ಹಿಂದಕ್ಕೆ ಕೊಡಿಸಿಬಿಡುತ್ತಾರೆಂಬ ಯೋಚನೆಯಿಂದಲೂ ಅರ್ಜುನಭೀಮನಕುಳರು ಸೆಳೆದುಕೊಳ್ಳುತ್ತಾರೆಂಬ ಸಂದೇಹದಿಂದಲೂ ದುರ್ಯೋಧನನು (ಧರ್ಮರಾಜನನ್ನು ಕುರಿತು) ಹಾಗಲ್ಲ ನಿನ್ನ ಮಾತಿನಲ್ಲಿ ನಂಬಿಕೆಯಿಲ್ಲದಿಲ್ಲ. ಆದರೂ ವರ್ಷದ ಕಾಲನಿರ್ದಿಷ್ಟವಾದಲ್ಲದೆ ನಿನ್ನ ಭೂಮಿಯನ್ನು ಒತ್ತೆಯಾಗಿ ಸ್ವೀಕರಿಸುವುದಿಲ್ಲ ಎನ್ನಲು ಧರ್ಮರಾಜನು ‘ಹನ್ನೆರಡು ವರ್ಷದವರೆಗೆ ನಾಡನ್ನು ಪ್ರವೇಶಮಾಡದೆ ಕಾಡಿನಲ್ಲಿರುತ್ತೇವೆ. ಒಂದು ವರ್ಷ ಅಜ್ಞಾನತವಾಸ ಮಾಡುತ್ತೇವೆ. ಆ ಅಜ್ಞಾತವಾಸವೆಂಬ ಒಂದು ವರ್ಷದಲ್ಲಿ ಯಾರಾದರೂ ತಿಳಿದರಾದರೆ ಪುನ ಹನ್ನೆರಡು ವರ್ಷದವರೆಗೆ ರಾಜ್ಯದ ಕಡೆಗೆ ನೋಡುವುದಿಲ್ಲ. ಒಂದು ಹಲಗೆ(ಆಟ)

ಕಂ|| ಆ ಪಲಗೆಯುಮಂ ಸೋಲ್ತು ಮ
ಹೀಪತಿ ಚಲದಿಂ ಬೞಕ್ಕೆ ಸೋಲ್ತಂ ಗಡಮಾ|
ದ್ರೌಪದಿಯುಮನೇನಾಗದೊ
ಪಾಪದ ಫಳಮೆಯ್ದೆವಂದ ದೆವಸದೊಳಾರ್ಗಂ|| ೪

ವ|| ಅಂತು ದುರ್ಯೋಧನನಜಾತಶತ್ರುವಿನ ಸರ್ವಸ್ವಮೆಲ್ಲಮಂ ಗೆಲ್ದು ಗೆಲ್ದ ಕಸವರ ಮೆಲ್ಲಂ ಬಂದುದು ಪಾಂಚಾಳರಾಜತನೂಜೆ ಯೊರ್ವಳ್ ಬಂದಳಿಲ್ಲಾಕೆಯಂ ತನ್ನಿಮೆಂದು ಯುಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನಱದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ ದುಶ್ಶಾಸನನುಮಂ ಪೇೞ್ದೊಡವಂದಿರಾಗಳೆ ಬೀಡಿಂಗೆವರಿದು ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆನೆಯುಮೊತ್ತಂಬದಿಂದೊಳಗಂ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು-

ಮ|| ಮನದೊಳ್ ನೊಂದಮರಾಪಗಾಸುತ ಕೃಪ ದ್ರೋಣಾದಿಗಳ್ ಬೇಡವೇ
ಡೆನೆಯುಂ ಮಾಣದೆ ತೋೞ್ತೆ ತೊೞ್ತುವೆಸಕೆಯ್ ಪೋ ಪೋಗು ನೀನೆಂದು ಬ|
ಯ್ದೆನಿತಾನು ತೆಱದಿಂದಮುಟ್ಟುದುವರಂ ಕೆಯ್ವಂದು ದುಶ್ಶಾಸನಂ
ತನಗಂ ಮೆಲ್ಲನೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣೆಯಾ|| ೫

ವ|| ಅಂತು ಕೃಷ್ಣೆಯ ಕೃಷ್ಣಕಬರೀಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಣೋರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ ದುಶ್ಶಾಸನನುಮಂ ಕಣ್ಕೆತ್ತಿ ಕಿಱುನಗೆ ನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು ಕಣ್ಗಳಿಂ ನೆತ್ತರ್ ತುಳುಂಕೆ-

ಉ|| ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರಲ್ವ ನಾ
ಸಾಪುಟಮೆಕ್ಕೆಯಿಂ ಪೊಡರ್ವ ಪುರ್ವು ಪೊದಳ್ದ ಲಯಾಂತಕ ತ್ರಿಶೂ|
ಲೋಪಮ ಭೀಷಣ ಭ್ರುಕಟಿ ಮುನ್ನಮೆ ರೌದ್ರ ಗದಾಯುಧಂಬರಂ
ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ|| ೬

ಯಲ್ಲಿಯೇ ಗೆಲುವು ಸೋಲುಗಳನ್ನು ನಿಷ್ಕರ್ಷಿಸೋಣ’ ಎಂದು ಹೇಳಿ ರಾಜ್ಯವನ್ನು ಒತ್ತೆಯಿಟ್ಟು ಆಡಿ ೪. ಆ ಹಲಗೆಯನ್ನೂ ಸೋತನು. ಧರ್ಮರಾಜನು ಅಷ್ಟಕ್ಕೇ ಬಿಡದೆ ಬಳಿಕ ಹಟದಿಂದ ದ್ರೌಪದಿಯನ್ನೂ ಸೋತನು. ಪಾಪದ ಫಲ ಕೂಡಿಬಂದ ದಿವಸ ಯಾರಿಗೆ ಏನು ತಾನೇ ಆಗುವುದಿಲ್ಲ. ವ|| ಹಾಗೆ ದುರ್ಯೋಧನನು ಶತ್ರು ಹುಟ್ಟದೆಯೇ ಇರುವ (ಸರ್ವಸಖನಾದ) ಯುಷ್ಠಿರನ ಸರ್ವಸ್ವವನ್ನೂ ಗೆದ್ದು, ಗೆದ್ದ ಬೆಲೆಯುಳ್ಳ ವಸ್ತುಗಳೆಲ್ಲವೂ ಬಂದುವು. ದ್ರೌಪದಿಯೊಬ್ಬಳು ಮಾತ್ರ ಬಂದಿಲ್ಲ. ಆಕೆಯನ್ನು ತನ್ನಿಯೆಂದು ಧರ್ಮರಾಜನು ಕೊಟ್ಟ ಸತ್ಯವಾಕ್ಕಿನ ಬಲದಿಂದಲೇ ತನಗೆ ಆಜ್ಞೆಗೆ ಕೇಡಿಲ್ಲವೆಂದು ತಿಳಿದು ಉತ್ತಮವಲ್ಲದ ತುಂಟಾಟವಾಡಲು (ಚೇಷ್ಟೆ ಮಾಡಲು) ಯೋಚಿಸಿ ಕರ್ಣನ ಸೇವಕನಾದ ಪ್ರಾತಿಕಾಮಿಯೆಂಬುವನಿಗೂ ತನ್ನ ತಮ್ಮನಾದ ದುಶ್ಶಾಸನನಿಗೂ ಆಜ್ಞೆ ಮಾಡಿದನು. ಅವರು ಆಗಲೇ ಅವಳ ಅಂತಪುರಕ್ಕೆ ಓಡಿಹೋಗಿ ‘ರಸಜ್ವಲೆಯಾಗಿದ್ದೇನೆ ಮುಟ್ಟಕೂಡದು’ ಎಂದರೂ ಬಲಾತ್ಕಾರದಿಂದ ಒಳಗೆ ಪ್ರವೇಶಿಸಿ ದ್ರೌಪದಿಯನ್ನು ಭಯಪಡುವಂತೆ ಗದರಿಸಿ ಅವಳ ತುರುಬನ್ನು ಹಿಡಿದು ಆ ಮನೆಯ ಮಧ್ಯಭಾಗದಿಂದ ದುರ್ಯೋಧನನ ಸಭಾಮಂದಿರದ ಮಧ್ಯಭಾಗಕ್ಕೆ ಸೆಳೆದು ತಂದರು. ೫. ಭೀಷ್ಮಕೃಪ ದ್ರೋಣಾದಿಗಳು ಮನಸ್ಸಿನಲ್ಲಿ ದುಖಪಟ್ಟು ಬೇಡಬೇಡವೆಂದರೂ ಬಿಡದೆ ‘ದಾಸಿ, ನಡೆ, ನೀನು ತೊತ್ತಿನ ಕೆಲಸಮಾಡು ಹೋಗು, ಹೋಗು’ ಎಂದು ಎಷ್ಟೋ ರೀತಿಯಲ್ಲಿ ಬಯ್ದು ಉಟ್ಟ ಸೀರೆಯವರೆಗೆ ಕೈಹಾಕಿ ತನಗೆ ಮೃತ್ಯು ಸಮೀಪವಾಗಿರಲು ದುಶ್ಶಾಸನನು ದ್ರೌಪದಿಯ ತುರುಬನ್ನು ಹಿಡಿದು ಸೆಳೆದನು. ವ|| ಹಾಗೆ ದ್ರೌಪದಿಯ ಕಪ್ಪಾದ ಮುಡಿಯ ಗಂಟನ್ನು ನೀಚವಾದ ರೀತಿಯಲ್ಲಿ ಹಿಡಿದು ಸೆಳೆದು ಕಾಳಸರ್ಪವನ್ನು ಹಿಡಿದ ಪೆಚ್ಚನಂತೆ ಸುಮ್ಮನೆ ಬೆವರುತ್ತಿದ್ದ ದುಶ್ಶಾಸನನೂ ಕಣ್ಸನ್ನೆಮಾಡಿ (ಹಾಸ್ಯದಿಂದ) ಹುಸಿನಗೆನಗುವ ಅಹಿತರ ಮುಖವನ್ನೂ ತಮ್ಮಣ್ಣನ ಖಿನ್ನವಾದ ಮುಖವನ್ನೂ ಭೀಮನು ನೋಡಿದನು. ಕಣ್ಣಿನಲ್ಲಿ (ಕೋಪದಿಂದ) ರಕ್ತವು ತುಳುಕಿತು. ೬. ಕೋಪದ ಆಕ್ಯದಿಂದ ಎರಡು ತೊಡೆಗಳೂ ನಡುಗಿದುವು. ವೇಗದಿಂದ (ಭಯಂಕರವಾಗಿ) ಮೂಗಿನ ಹೊಳ್ಳೆಗಳು ಅರಳಿದುವು. ಪ್ರಳಯಕಾಲದ ಯಮನ ತ್ರಿಶೂಲಕ್ಕೆ ಸಮಾನವೂ ಭಯಂಕರವೂ ಆದ ಹುಬ್ಬು ಗಂಟಿಕ್ಕಿತು. ಮೊದಲೇ ಭಯಂಕರವಾದ ಭೀಮಸೇನನ ಅಗುಳಿಯಂತಿರುವ ತೋಳುಗಳು ಗದೆಯ ಕಡೆ ತಿರುಗಿ

ಮ|| ನೆಲನಂ ನುಂಗುವ ಮೇರುವಂ ಪಿಡಿದು ಕೀೞುಶಾಗಜೇಂದ್ರಂಗಳಂ
ಚಲದಿಂ ಕಟ್ಟುವ ಸಪ್ತ ಸಪ್ತಿಯನಿಳಾಭಾಗಕ್ಕೆ ತರ್ಪೊಂದು ತೋ|
ಳ್ವಲಮುಂ ಗರ್ವಮುಮುಣ್ಮಿ ಪೊಣ್ಮೆ ಮನದೊಳ್ ಕೋಪಾಗ್ನಿ ಕೆಯ್ಗಣ್ಮಿ ಕ
ಣ್ಮಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ|| ೭

ಕಂ|| ಪ್ರಕುಷಿತ ಮೃಗಪತಿ ಶಿಶು ಸ
ನ್ನಿಕಾಶರತಿ ವಿಕಟ ಭೀಷಣ ಭ್ರೂ ಭಂಗರ್|
ನಕುಲ ಸಹದೇವರಿರ್ವರು
ಮಕಾಲ ಕಾಲಾಗ್ನಿರೂಪಮಂ ಕೆಯ್ಕೊಂಡರ್|| ೮

ವ|| ಅಂತು ವಿಳಯಕಾಲಜಳನಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷ ವಿಕ್ಷೇಪದಿಂ ಬಾರಿಸೆ-

ಮ|| ಅನಿತೊಂದುರ್ಕಿನೊಳುರ್ಕಿ ಕೌರವ ಖಳರ್ ಪಾಂಚಾಳರಾಜಾತ್ಮಜಾ
ನನ ಪದ್ಮಗ್ಲಪನೈಕ ಕಾರಣಪರರ್ ತಾಮಾಗೆಯುಂ ಮತ್ತಮ|
ಣ್ಣನ ಕಣ್ಸನ್ನೆಗೆ ವಿಱಲಣ್ಮದೆ ಸಮಂತಿರ್ದರ್ ಪೃಥಾಪುತ್ರರಂ
ತಿನಿತೊಂದಾದೊಡಮೇಂ ಮಹಾಪುರುಷರಾಜ್ಞಾಲಂಘನಂಗೆಯ್ವರೇ|| ೯

ವ|| ಆಗಳ್ ದ್ರೌಪದಿ ತನ್ನ ಕೇಶಪಾಶಮಂ ದುಶ್ಶಾಸನಂ ಪಿಡಿದು ತೆಗೆದನೆಂಬ ಸಿಗ್ಗಗ್ಗಳಂ ಪೆರ್ಚೆ ಸಭೆಯೊಳಿಂತೆಂದಳ್-

ಕಂ|| ಮುಡಿಯಂ ಪಿಡಿದೆೞೆದವನಂ
ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನಂ|
ಮುಡಿಯಿಸುವಿನೆಗಂ ಮುಡಿಯಂ
ಮುಡಿಯೆಂ ಗಡ ಕೇಳಿವಿಗಳಾನ್ ನುಡಿ ನುಡಿದೆಂ|| ೧೦

ವ|| ಎಂಬುದುಂ ಭೀಮಸೇನನಾ ಮಾತಂ ಕೇಳ್ದು ಸೈರಿಸಲಾಱದೆ-

ಉ|| ಆಱದ ಕೋಪ ಪಾವಕನಿನಣ್ಣನ ನನ್ನಿಯನಿಲ್ಲಿ ವಿಱುವೆಂ
ವಿನೆನುತ್ತುಮಿರ್ಪ ಪದದಲ್ಲಿಯೆ ನೋಡೆ ಮರುಳ್ಗೆ ಧೂಪಮಂ|
ತೋಱದ ಮಾೞ್ಕೆಯಿಂ ದ್ರುಪದರಾಜಸುತಾ ವಚನಂಗಳಲ್ಲಿ ಮೆ
ಯ್ದೋ ಮರುತ್ಸುತಂ ನುಡಿದನಾ ಸಭೆಯೊಳ್ ನವ ಮೇಘನಾದದಿಂ|| ೧೧

ಶತ್ರುಗಳ (ಕತ್ತನ್ನು ಹಿಡಿಯುವಂತಾಯಿತು). ೭. ಭೂಮಿಯನ್ನು ನುಂಗುವ, ಮೇರುಪರ್ವತವನ್ನು ಹಿಡಿದು ಕೀಳುವ, ದಿಗ್ಗಜಗಳನ್ನು ಹಟದಿಂದ ಕಟ್ಟುವ, ಸೂರ್ಯನನ್ನು ಭೂಭಾಗಕ್ಕೆ ತರುವ, ಬಾಹುಬಲವೂ ಅಹಂಕಾರವೂ ಚಿಮ್ಮಿ ಹೊಮ್ಮಲು ಕೋಪದ ಬೆಂಕಿಯು ಮಿತಿಮೀರಿ ಹೂವಿನಂತಿದ್ದ ಕಣ್ಣಿನಲ್ಲಿ ಬಂದಿರಲು ಅರ್ಜುನನು ಕೋಪದಿಂದ ತನ್ನ ಗಾಂಡೀವವನ್ನು ನೋಡಿದನು. ೮. ವಿಶೇಷವಾಗಿ ಕೋಪಗೊಂಡಿರುವ ಸಿಂಹದ ಮರಿಗೆ ಸಮಾನರೂ ಅತ್ಯಂತ ವಿಕಟವೂ ಭಯಂಕರವೂ ಹುಬ್ಬಿನ ಗಂಟುಳ್ಳವರೂ ಆದ ನಕುಲ ಸಹದೇವರಿಬ್ಬರೂ ಅಕಾಲದಲ್ಲಿ ಬರುವ ಪ್ರಳಯಾಗ್ನಿರೂಪವನ್ನು ತಾಳಿದರು. ವ|| ಹಾಗೆ ಪ್ರಳಯಕಾಲದ ಸಮುದ್ರಗಳ ಹಾಗೆ ಎಲ್ಲೆಮೀರಲು ಯೋಚಿಸಿದ ತನ್ನ ನಾಲ್ಕು ತಮ್ಮಂದಿರ ಕೋಪಗೊಂಡ ಮುಖಗಳನ್ನು ನೋಡಿ ಧರ್ಮರಾಜನು ತಾನಾಡಿದ ಸತ್ಯದ ಕೇಡನ್ನು ಯೋಚಿಸಿದ್ದಾರೆಂದು ತಿಳಿದು ಕಣ್ಸನ್ನೆಯಿಂದಲೇ ನಿವಾರಿಸಿದನು. ೯. ಅಷ್ಟೊಂದು ಗರ್ವದಲ್ಲಿ ಉಬ್ಬಿ ದುಷ್ಟಕೌರವರು ದ್ರೌಪದಿಯ ಮುಖಕಮಲವು ಬಾಡುವುದಕ್ಕೆ ಮುಖ್ಯ ಕಾರಣರಾದರೂ ಅಣ್ಣನಾದ ಧರ್ಮರಾಜನ ಕಣ್ಸನ್ನೆಗೆ ಮೀರಲು ಸಮರ್ಥರಾಗದೆ ಪಾಂಡವರು ಸುಮ್ಮನೆ ಶಾಂತಿಯಿಂದಿದ್ದರು. ಮಹಾಪುರುಷರಾದವರು ಹಿರಿಯರ ಆಜ್ಞೆಯನ್ನು ದಾಟುತ್ತಾರೆಯೇ? ವ|| ಆಗ ದುಶ್ಶಾಸನನು ತನ್ನ ಕೂದಲಿನ ಗಂಟನ್ನು ಹಿಡಿದು ಸೆಳೆದನೆಂಬ ನಾಚಿಕೆಯು ವಿಶೇಷವಾಗಿ ಹೆಚ್ಚಲು ದ್ರೌಪದಿಯು ಸಭೆಯಲ್ಲಿ ಹೀಗೆಂದಳು.

೧೦. ಮುಡಿಯನ್ನು ಹಿಡಿದೆಳೆದವನನ್ನು ಕೊಂದು ಅವನ ಕರುಳಿನ ಜಡೆಯಿಂದ (ಸಮೂಹ) ನನ್ನ ಮುಡಿಯನ್ನು ಮುಡಿಯಿಸುವವರೆಗೂ ಆ ಮುಡಿಯನ್ನು ಪುನ ಮುಡಿಯುವುದಿಲ್ಲ; ಕೇಳಿ, ನೀವೆಲ್ಲ ಕೇಳಿ ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದಳು. ವ|| ಭೀಮಸೇನನು ಆ ಮಾತನ್ನು ಕೇಳಿ ಸೈರಿಸಲಾರದೆ- ೧೧. ಕಡಿಮೆಯಾಗದ ಕೋಪಾಗ್ನಿಯಿಂದ ಅಣ್ಣನ ಸತ್ಯವಾಕ್ಕನ್ನು ಮೀರಲೇ ಬೇಡವೇ ಎನ್ನುತ್ತಿದ್ದ ಸಮಯದಲ್ಲಿಯೇ ಮರುಳಿಗೆ ಧೂಪವನ್ನು ತೋರಿಸಿದ ರೀತಿಯಿಂದ ದ್ರೌಪದಿಯ ಮಾತುಗಳು ಅಲ್ಲಿ ಕಾಣಿಸಿಕೊಳ್ಳಲು ಭೀಮಸೇನನು

ಮ|| ಮುಳಿಸಿಂದಂ ನುಡಿದೊಂದು ನಿನ್ನ ನುಡಿ ಸಲ್ಗಾರಾಗದೆಂಬರ್ ಮಹಾ
ಪ್ರಳಯೋಲ್ಕೋಪಮ ಮದ್ಗದಾಹತಿಯಿನತ್ಯುಗ್ರಾಜಿಯೊಳ್ ಮುನ್ನವಿ|
ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞಕ್ಕಿ ಬಂಬಲ್ಗರು
ಳ್ಗಳಿನಾನಲ್ತೆ ವಿಳಾಸದಿಂ ಮುಡಿಯಿಪಂ ಪಂಕೇಜಪತ್ರೇಕ್ಷಣೇ|| ೧೨

ಮ||ಸ್ರ|| ಕುಡಿವೆಂ ದುಶ್ಶಾಸನೋರಸ್ಥಳಮನಗಲೆ ಪೋೞುರ್ದು ಕೆನ್ನೆತ್ತರಂ ಪೊ
ಕ್ಕುಡಿವೆಂ ಪಿಂಗಾಕ್ಷನೂರುದ್ವಯಮನುರು ಗದಾಘಾತದಿಂ ನುಚ್ಚು ನೂಱು|
ಗೊಡೆವೆಂ ತದ್ರತ್ನ ರಶ್ಮಿ ಪ್ರಕಟ ಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ತ್ರೇ|| ೧೩

ಮ|| ಮುಳಿಸಂ ಮಾಡಿಯುಮೇವಮಂ ಪಡೆದುಮಿನ್ನೀ ಪಂದೆಗಳ್ ಪ್ರಾಣದಿಂ
ದೊಳರಿನ್ನುಂ ತಲೆ ಮತ್ತಮಟ್ಟೆಗಳ ಮೇಲಿರ್ದಪ್ಪುವೆಂದಂತೆ ದಲ್|
ಮುಳಿಸಿಲ್ಲಣ್ಣನ ನನ್ನಿಯೆಂಬುದನೆ ಪೇೞೇವೇೞ್ದುವಿ ಕೌರವ
ರ್ಕಳನುಂತಿನ್ನೆಗಮುರ್ಚಿ ಮುಕ್ಕದೆ ಸಡಿಲ್ದೀ ಭೀಮನೇಂ ಮಾಣ್ಗುಮೇ|| ೧೪

ವ|| ಎಂದು ಪಾಂಚಾಳರಾಜತನೂಜೆಯ ಮನಮನಾ ನುಡಿದು ಮತ್ತಮಿಂತೆಂದಂ-

ಮ|| ಸುರಸಿಂಧುಪ್ರಿಯಪುತ್ರ ಕೇಳ್ ಕಳಶಜಾ ನೀಂ ಕೇಳ್ ಕೃಪಾ ಕೇಳ ಮಂ
ದರದಿಂದಂಬುಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹುಮಂ||
ದರದಿಂ ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂ
ರ್ವರುಮಂ ಕೊಲ್ವೆನಿದೆನ್ನ ಪೂಣ್ಕೆ ನುಡಿದೆಂ ನಿವಿ ಸಭಾಮಧ್ಯದೊಳ್|| ೧೫

ವ|| ಎಂದು ವಿಳಯಕಾಳಜಳಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊೞಗಿದಂತಾನುಂ ಗಜಱ ಗರ್ಜಿಸಿ ನುಡಿದು ಮಹಾಪ್ರತಿಜ್ಞಾರೂಢನಾದ ಭೀಮಸೇನನ ನುಡಿಯಂ ಕೇಳ್ದು ಕೌರವರ್ ಕಡಲ ನಡುವಣ ಪರ್ವತದಂತಳ್ಳಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯ ಧೃತರಾಷ್ಟ್ರಂಗಿಂತೆಂದಂ-

ಆ ಸಭೆಯಲ್ಲಿ ಹೊಸಗುಡುಗಿನ ಶಬ್ದದಿಂದ ಹೇಳಿದನು. ೧೨. ಕೋಪದಿಂದ ನೀನು ಆಡಿದ ಮಾತು ಸಲ್ಲಲಿ, ಯಾರು ಬೇಡವೆನ್ನುತ್ತಾರೆ. ಮಹಾಪ್ರಳಯಕಾಲದ ಉಲ್ಕೆಗೆ (ಬೆಂಕಿಯ ಕೊಳ್ಳಿ) ಸಮಾನವಾದ ನನ್ನ ಗದೆಯ ಪೆಟ್ಟಿನಿಂದ ಅತಿಭಯಂಕರವಾದ ಯುದ್ಧದಲ್ಲಿ ಮೊದಲು ದುಶ್ಶಾಸನನನ್ನು ಹೊರಳಿಸಿ ಹೊಟ್ಟೆಯನ್ನು ಸೀಳಿ ಹೆಣೆದುಕೊಂಡಿರುವ ಕರುಳಿನಿಂದ ಎಲೌ ಕಮಲದಳದ ಹಾಗೆ ಕಣ್ಣುಳ್ಳ ದ್ರೌಪದಿಯೇ ವೈಭವದಿಂದ ನಾನೇ ಮುಡಿಯಿಸುತ್ತೇನಲ್ಲವೇ? ೧೩. ದುಶ್ಶಾಸನನ ಎದೆಯನ್ನು ಅಗಲವಾಗಿ ಹೋಳುಮಾಡಿ ರಕ್ತವನ್ನು ಕುಡಿಯುತ್ತೇನೆ. ಮೇಲೆಬಿದ್ದು ದುರ್ಯೋಧನನ ಎರಡುತೊಡೆಗಳನ್ನೂ ಶ್ರೇಷ್ಠವಾದ ನನ್ನ ಗದೆಯ ಪೆಟ್ಟಿನಿಂದ ಒಡೆಯುತ್ತೇನೆ. ರತ್ನಕಾಂತಿಗಳಿಂದ ಪ್ರಕಾಶವಾದ ಅವನ ಕಿರೀಟವನ್ನು ನುಚ್ಚುನೂರಾಗುವಂತೆ ಪುಡಿಮಾಡುತ್ತೇನೆ. ದ್ರೌಪದಿ ಈ ನನ್ನ ಮಾತನ್ನು ನಂಬು, ನಂಬು; ಶತ್ರುಗಳನ್ನು ನೋಡಿ ನನ್ನ ಕಣ್ಣಿನಿಂದ ಕಿಡಿಯೂ ಕೆಂಡಗಳೂ ಚೆಲ್ಲುತ್ತಿವೆ. ೧೪. ನಮಗೆ ಇಷ್ಟು ಕೋಪವನ್ನುಂಟುಮಾಡಿದರೂ ದುಖವನ್ನು ಬರಿಸಿಯೂ ಇನ್ನೂ ಈ ಹೇಡಿಗಳು ಜೀವದಿಂದಿದ್ದಾರೆ. ಇನ್ನೂ ಅವರ ತಲೆಗಳು ಅವರು ಮುಂಡಗಳ ಮೇಲಿವೆ ಎನ್ನುವುದು ಕೋಪವಿಲ್ಲವೆಂದೇ ಅರ್ಥಮಾಡುವುದಿಲ್ಲವೇ? ಅಣ್ಣನ ಸತ್ಯವೆಂಬುದೊಂದು ಇಲ್ಲದಿದ್ದರೆ ಏನು ಹೇಳಿದರೂ ಈ ಕೆರಳಿದ ಭೀಮನು ಇಷ್ಟು ಹೊತ್ತಿಗೆ ಸುಲಿದು ಬಾಯಿಗೆ ಹಾಕಿಕೊಳ್ಳದೆ ಬಿಡುತ್ತಿದ್ದೇನೆ? ವ|| ಎಂದು ದ್ರೌಪದಿಯ ಮನಸ್ಸಮಾಧಾನವಾಗುವ ಹಾಗೆ ನುಡಿದು ಪುನ ಹೀಗೆಂದನು- ೧೫. ಭೀಷ್ಮರೇ ಕೇಳಿ, ದ್ರೋಣರೇ ಕೇಳಿ, ಕೃಪರೇ ಕೇಳಿ, ಮಂದರಪರ್ವತದಿಂದ ಕ್ಷೀರಸಮುದ್ರವನ್ನು ಕಲಕಿದ ನಾರಾಯಣನ ಹಾಗೆ ನನ್ನ ತೋಳೆಂಬ ಮಂದರದಿಂದ ಘೋಷಿಸುತ್ತಿರುವ ಶತ್ರುಸೇನಾಸಮುದ್ರವನ್ನು ಕಡೆದು ಮದಿಸಿರುವ ಈ ನೂರು ಕೌರವರನ್ನೂ ಒಟ್ಟಿಗೆ ಕೊಲ್ಲುತ್ತೇನೆ. ನಿಮ್ಮ ಈ ಸಭೆಯ ಮಧ್ಯದಲ್ಲಿ ಈ ನನ್ನ ಪ್ರತಿಜ್ಞೆಯನ್ನು ತಿಳಿಸಿದ್ದೇನೆ. ವ|| ಎಂದು ಪ್ರಳಯಕಾಲದ ಸಮುದ್ರಘೋಷದಂತೆ ಪರ್ವತವು ಅಪ್ಪಳಿಸಿದ ಭೂಮಿಯ ಗುಡುಗಿನಂತೆ ಆರ್ಭಟಿಸಿ ಗರ್ಜನೆಮಾಡಿ ನುಡಿದು ಮಹಾಪ್ರತಿಜ್ಞೆಯನ್ನು ಅಂಗೀಕರಿಸಿದ ಭೀಮಸೇನನ ಮಾತನ್ನು ಕೇಳಿ ಕೌರವರು ಸಮುದ್ರಮಧ್ಯದ ಪರ್ವತದಂತೆ ನಡುಗಿದರು. ಕೌರವರಲ್ಲಿ

ಚಂ|| ಭರತ ಯಯಾತಿ ಕುತ್ಸ ಪುರುಕುತ್ಸ ಪುರೂರವರಿಂದಮಿನ್ನೆಗಂ
ಪರಿವಿಡಿಯಿಂದೆ ಬಂದ ಶಶಿವಂಶಮದೀಗಳಿವಂದಿರಿಂದೆ ನಿ|
ತ್ತರಿಸುವುದಕ್ಕುಮೆಂದೆ ಬಗೆದಿರ್ದೊಡೆ ಕೀಲೊಳೆ ಕಿಚ್ಚು ಪುಟ್ಟಿ ಭೋ
ರ್ಗರೆದುರಿದಂತೆ ನಿನ್ನ ಮಗನಿಂದುರಿದತ್ತಿದನಾರೊ ಬಾರಿಪರ್|| ೧೬

ವ|| ಎಂದೞಲ್ದು ಧೃತರಾಷ್ಟ್ರನೊಳ್ ನುಡಿಯೆ ಕುಂಭಸಂಭವಾಶ್ವತ್ಥಾಮ ಕೃಪ ವಿದುರಾದಿಗಳ್ ನೀಮೆನಿತು ನುಡಿದೊಡಮಾನೆಯ ಕೋಡು ಬಾಗದೆಂಬಂತೆ ದುರ್ಯೋಧನನುದ್ವೃತ್ತತೆಯುಮಂ ಭೀಮಸೇನನ ಮಹಾಪ್ರತಿಜ್ಞೆಯುಮನಾರ್ಗಂ ಬಾರಿಸಲ್ಬಾರದು ಕೆಯ್ಗೞದ ಮನೆವಾೞ್ತೆ ಬುದ್ಧಿವೇೞಲೆಡೆಯಿಲ್ಲ ತಾಮುಂ ತಾಮುಮಱವರ್ ಬನ್ನಿಮೆಂದು ನಿಜನಿವಾಸಂಗಳ್ಗೆ ಪೋದರಾಗಳ್ ಭೀಮಸೇನಂ ಧರ್ಮಪುತ್ರಂಗೆಂದನುಪ್ಪಿಕ್ಕಿದೊಡೆ ತುಪ್ಪದ ಮೆಳ್ಪಡಿತೆಂಬಂತೆ ನಮ್ಮ ಕೆಮ್ಮನಿರ್ಪಿರವಿದೇ ಕಾರಣಂ ಬನ್ನಿ ಪೋಪಮೆಂದರಮನೆಯಂ ಪೊಱಮಟ್ಟು ಬರೆ ಧೃತರಾಷ್ಟ್ರಂ ದುರ್ಯೋಧನನೇಗೆಯ್ದುಮೊಡಂಬಡಿಸಲಾಱದಿರೆಯುಂ ದ್ರೌಪದಿ ಪರಸ್ತ್ರೀಯಂ ನಮ್ಮ ಮನೆಯೊಳಿರಿಸುವುದು ಚಿತಮಲ್ಲೆಂದು ಕೞಪಿದೊಡೆ ಪಾಂಚಾಳರಾಜತನೂಜೆವೆರಸು ಬಿನ್ನ ಬಿನ್ನನೆ ಪೊೞಲಂ ಪೊಱಮಡೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಸೈರಿಸಲಾಱದೆ ತಮ್ಮೊಳಿಂತೆಂದರ್-

ಕಂ|| ಏದೊರೆಯಂ ಯಮನಂದನ
ನೇದೊರೆಯಂ ಭೀಮಸೇನನೇದೊರೆಯಂ ಕಂ|
ಜೋದರನ ಮೈದುನಂ ತಾ
ಮೇದೊರೆಯರಮಳ್ಗಳವರ್ಗವಿ ಯಿರವಾಯ್ತೇ|| ೧೭

ಜೂದಾಡಿ ಸೋಲ್ತು ನನ್ನಿಗೆ
ಮೇದಿನಿಯಂ ಕೊಟ್ಟು ಪಾಂಡುನಂದನರೀಗಳ್|
ಪೋದೊಡಮೇನ್ ತಿಣುಕಾಗದೆ
ಪೋದಪುದೇ ನಮ್ಮ ನೃಪತಿಗವು ತವುದಲೆಯೊಳ್|| ೧೮

ಜೂದಿನ ಗೆಲ್ಲದೊಳಾದೀ
ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದು|
ಜ್ಜೋದನನದೇನದೇಂ ಮರು
ಳಾದನೊ ಬಡಿಗಂಡನಿಲ್ಲ ಪಾಲನೆ ಕಂಡಂ|| ೧೯

ಹಿರಿಯನೂ ಆದ ಭೀಷ್ಮನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು. ೧೬. ಭರತ ಯಯಾತಿ ಕುತ್ಸ ಪುರೂರವರಿಂದ ಹಿಡಿದು ಇಲ್ಲಿಯವರೆಗೂ ಕ್ರಮವಾಗಿ ನಡೆದುಬಂದ ಚಂದ್ರವಂಶವು ಈಗ ಈ ಕೌರವರಿಂದ ಮುಂದೆ ಅಭಿವೃದ್ಧಿಯಾಗುತ್ತದೆ ಎಂದು ಯೋಚಿಸುತ್ತಿರಲು ಅದಕ್ಕೆ ವಿರೋಧವಾಗಿ ಕೀಲಿನಲ್ಲಿಯೇ ಬೆಂಕಿಹುಟ್ಟಿ ಶಬ್ದಮಾಡಿ ಉರಿಯುವ ಹಾಗೆ ನಿನ್ನ ಮಗನಿಂದ ನಮ್ಮ ವಂಶವೇ ಸುಟ್ಟು ಹೋಗುತ್ತದೆ. ಇದನ್ನು ನಿವಾರಿಸುವವರು ಯಾರಿದ್ದಾರೆ? ವ|| ಎಂದು ದುಖಿಸಿ ಧೃತರಾಷ್ಟ್ರನಲ್ಲಿ ಹೇಳಲು, ದ್ರೋಣ ಅಶ್ವತ್ಥಾಮ ಕೃಪವಿದುರರೇ ಮೊದಲಾದವರು ನೀವೆಷ್ಟು ಹೇಳಿದರೂ ಆನೆಯ ಕೊಂಬು ಬಗ್ಗುವುದಿಲ್ಲ ಎನ್ನುವ ಹಾಗೆ ದುರ್ಯೋಧನನ (ಕೆಡೆದು ನಿಲ್ಲುವಿಕೆ) ತುಂಟತನವನ್ನೂ ಭೀಮನ ಮಹಾಪ್ರತಿಜ್ಞೆಯನ್ನೂ ಯಾರಿಗೂ ತಪ್ಪಿಸಲಾಗುವುದಿಲ್ಲ ; ಕೈಮೀರಿದ ಮನೆವಾರ್ತೆಗೆ ಬುದ್ಧಿಹೇಳಲು ಅವಕಾಶವಿಲ್ಲ; ಅವರವರೇ ತಿಳಿಯಲಿ ಬನ್ನಿ ಎಂದು ತಮ್ಮ ಮನೆಗಳಿಗೆ ಹೋದರು. ಆಗ ಭೀಮಸೇನನು ಧರ್ಮರಾಜನಿಗೆ ಹೇಳಿದನು. ಉಪ್ಪನ್ನು ಬಡಿಸಿದರೆ ತುಪ್ಪಕ್ಕೆ ಮೋಸ ಎನ್ನುವ ಹಾಗೆ ನಾವು ಸುಮ್ಮನಿರುವುದರಿಂದ ಏನು ಪ್ರಯೋಜನ, ಬನ್ನಿ ಹೋಗೋಣ ಎಂದು ಅರಮನೆಯಿಂದ ಹೊರಟರು. ಧೃತರಾಷ್ಟ್ರನು ದುರ್ಯೋಧನನನ್ನು ಏನು ಮಾಡಿಯೂ ಒಪ್ಪಿಸಲಾರದಿದ್ದರೂ ಪರಸ್ತ್ರೀಯಾದ ದ್ರೌಪದಿಯನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವುದು ಯೋಗ್ಯವಲ್ಲವೆಂದು ಕಳುಹಿಸಿದನು. ದ್ರೌಪದಿಯೊಡನೆ ಪಾಂಡವರು ದುಖದಿಂದ ಪಟ್ಟಣವನ್ನು ಬಿಟ್ಟು ಹೊರಟರು. ಪಟ್ಟಣದ ಜನರೆಲ್ಲರೂ ಒಟ್ಟುಗೂಡಿ ಅವರು ಆ ಸ್ಥಿತಿಯಲ್ಲಿ ಹೋಗುತ್ತಿರುವುದನ್ನು ನೋಡಿ ದುಖಪಟ್ಟು ಹೀಗೆಂದರು- ೧೭. ಧರ್ಮರಾಜನೆಂತಹವನು-ಭೀಮಸೇನೆಂತಹವನು, ಕೃಷ್ಣನ ಮೈದುನನಾದ ಅರ್ಜುನನು ಎಂಥವನು; ಅವಳಿಗಳಾದ ನಕುಲಸಹದೇವರೆಂಥವರು. ಅವರಿಗೂ ಈ ಸ್ಥಿತಿಯಾಯ್ತೆ? ೧೮. ಜೂಜಾಡಿ ಸೋತು ಸತ್ಯಕ್ಕಾಗಿ ರಾಜ್ಯವನ್ನು ಕೊಟ್ಟು ಪಾಂಡವರು ಹೋದರೇನು? ರಾಜನಾದ ದುರ್ಯೋಧನನಿಗೆ ಕೊನೆಯಲ್ಲಿ ಇದು ಸ್ಪಷ್ಟವಾಗದೆ ಹೋಗುತ್ತದೆಯೇ? ೧೯. ಜೂಜಿನ ಗೆಲುವಿನಿಂದ ಬಂದ ಈ ರಾಜ್ಯವನ್ನು ನೋಡಿ ಮುಂದಾಗುವ ಕಾರ್ಯವನ್ನು ಕಾಣದೆ ದುರ್ಯೋಧನನು ಅದೇತಕ್ಕೆ ಅತ್ಯಂತ ಹುಚ್ಚನಾದ? ಮೇಲೆತ್ತಿದ

ಎನಿತಾನುಮಂದದಿಂ ಜೂ
ದನಿಕ್ಕೆಯುಂ ದ್ರುಪದಸುತೆಯನೆೞೆದುಯ್ಯೆಯುಮಿಂ|
ತಿನಿತೊಂದಾದುದು ದುಶ್ಶಾ
ಸನನಿಂದಂ ಶಕುನಿಯೆಂಬ ಬೆಳ್ಪೊಱಸಿಂದಂ|| ೨೦

ವ|| ಎಂದಿರ್ದರಿರ್ದಲ್ಲಿಯೆ ತಂತಮ್ಮ ಕಂಡುದನೆ ನುಡಿಯೆಯುಂ ಕೆಲರವರ ಪೋಗಿಂಗೞಲ್ದು ಕಣ್ಣ ನೀರನಿಕ್ಕೆಯುಂ ಕೆಲರ್ ಪರಸಿ ಸೇಸೆಯನಿಕ್ಕೆಯುಂ ಪೊೞಲಂ ಪೊಱಮಟ್ಟು ಪುರದ ಬಾಹಿಗೆಯನೆಯ್ದುವಾಗಳ್ ಗಾಂಗೇಯ ದ್ರೋಣ ಕೃಪ ವಿದುರಾದಿಗಳ್ ಕೊಂತಿವೆರಸೆಯ್ದೆವಂದು ಕಿಱದತರಮಂ ಕಳಿಪುತ್ತುಂ ಬರೆ ಧರ್ಮಪುತ್ರನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಮೆಂದೊಡನಿಬರುಂ ಮನಂ ಬಂಸಿದ ಮೋಹದಿಂ ಗೞಗೞನೆ ಕಣ್ಣ ನೀರ್ಗಳಂ ಸುರಿದು-

ಚಂ|| ಪುಗುವುದರಣ್ಯಮಿರ್ಪಿರವು ಪನ್ನೆರಡಬ್ದಮದಲ್ಲದಲ್ಲಿ ಕೋ
ೞಗದ ವನೇಚರಾಪರ ದಾಯಿಗರತ್ತಣಿನಪ್ಪಪಾಯ ಕೋ|
ಟಿಗೆ ಪವಣಿಲ್ಲ ಕಲ್ಪಿಗೆಡೆಯಾವುದೊ ಪಾೞಯ ಬಟ್ಟೆದಪ್ಪಿ ಮುಂ
ನೆಗೞ್ದೆಡೆಯಿಲ್ಲ ಪೋಗು ಜಯಮಕ್ಕೆ ಶುಭಂ ನಿಮಗಕ್ಕೆ ಮಂಗಳಂ|| ೨೧

ವ|| ಎಂದೊಡಲ್ಲಿರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕೆಯಾಗಿಯುಂ ಪಾೞಗೆ ಗೆಂಟಾಗಿಯುಂ ನೆಗೞ್ವಮಲ್ಲೆಂದು ಪೊಡವಟ್ಟು ಕೊಂತಿಯಂ ವಿದುರನ ಮನೆಯೊಳಿರಲ್ವೇೞ್ದು ಸುಭದ್ರೆಯನಭಿಮನ್ಯುವರೆಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳಿಪಿ ನಿಜ ಪರಿಜನಂಬೆರಸು ಗಂಗೆಯಂ ಪಾಯ್ದದಱ ಪಡುವಣ ದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳ್ದು ಪೋಗೆ ವೋಗೆ-

ಚಂ|| ದೆಸೆ ಪಸುರೇಱ ಪಚ್ಚೆಯೊಳೆ ಮುಚ್ಚಿ ಮುಸುಂಕಿದ ಮಾೞ್ಕೆಯಾದುದಾ
ಗಸಮಳಿ ನೀಳ ನೀಳ ಗಳಕಂಠ ತಮಾಳ ವಿನೀಳನೀರದ|
ಪ್ರಸರ ವಿಭಾಸಿಯಾದುದು ಸವಿರನುದಾರ ಕದಂಬ ಕೇತಕೀ
ಪ್ರಸರ ರಜಸ್ವರ ಪ್ರಕಟ ಪಾಂಸುಳಮಾದುದು ಮೇಘಕಾಲದೊಳ್|| ೨೨

ಚಂ|| ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂ
ತರಮೆಸೆದೊಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಮೊ|
ಪ್ಪಿರೆ ಪೊಸ ವೇಟಕಾಱರೆರ್ದೆಗಳ್ ಪೊಸ ಕಾರ ಪೊಡರ್ಪುಗಂಡದೇಂ
ಕರಿತುವದೇಂ ಕಲಂಕಿದುವದೇಂ ಕುೞಗೊಂಡುವದೇಂ ಕನಲ್ದುವೋ|| ೨೩

ಕೊಡಚಿ (ಬಡಿ)ಯನ್ನು ಕಾಣದೆ ಹಾಲನ್ನು ಮಾತ್ರ ಕಂಡನಲ್ಲ. ೨೦. ವಿವಿಧರೀತಿಯಲ್ಲಿ ಜೂಜನ್ನಾಡಿಸಿದುದೂ ದ್ರೌಪದಿಯನ್ನು ಎಳೆದು ಸೆಳೆದುದೂ ಇವೆಲ್ಲ ಆ ದುಶ್ಶಾಸನನಿಂದ ಮತ್ತು ಶಕುನಿಯೆಂಬ ಬುದ್ಧಿಯಿಲ್ಲದ ಪೊರಸಿನಿಂದ ಉಂಟಾಯಿತು. ವ|| ಎಂದು ಇದ್ದವರು ಇದ್ದ ಕಡೆಯಲ್ಲಿಯೇ ತಾವು ತಾವು ನೋಡಿದುದನ್ನು ನುಡಿಯುತ್ತಿದ್ದರು. ಕೆಲವರು ಪಾಂಡವರು ಹಾಗೆ ಹೋಗುತ್ತಿರುವುದನ್ನು ನೋಡಿ ಅತ್ತು ಕಣ್ಣೀರನ್ನು ಸುರಿಸಿದರು. ಮತ್ತೆ ಕೆಲವರು ಹರಸಿ ಅಕ್ಷತೆಯನ್ನಿಕ್ಕಿದರು. ಪಟ್ಟಣವನ್ನು ಬಿಟ್ಟು ಹೊರಟು ಹೊರಭಾಗವನ್ನು ಸೇರುವಾಗ ಭೀಷ್ಮ ದ್ರೋಣ ಕೃಪ ವಿದುರರೇ ಮೊದಲಾದವರು ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು ಧರ್ಮರಾಜನು ‘ನಮಗೆ ಯೋಗ್ಯವಾದ ಉಪದೇಶಮಾಡಿ ಹಿಂತಿರುಗಿ’ ಎಂದನು. ಅವರೆಲ್ಲರೂ ಆಕರ್ಷಿತರಾಗಿ ಮನಸ್ಸಿನ ಪ್ರೀತಿಯಿಂದ ಗಳಗಳನೆ ಕಣ್ಣೀರನ್ನು ಸುರಿಸಿದರು. ೨೧. ನೀವು ಪ್ರವೇಶಮಾಡಬೇಕಾಗಿರುವುದು ಕಾಡು, ಇರಬೇಕಾದ ಕಾಲ ಹನ್ನೆರಡುವರ್ಷ; ಅದಲ್ಲದೆಯೂ ಅಲ್ಲಿ ಕ್ರೂರಮೃಗಗಳ, ಬೇಡನಾಯಕರ, ದಾಯಾದಿಗಳ ಕಡೆಯಿಂದ ಬರುವ ಅಪಾಯ ಸಮೂಹಕ್ಕೆ ಅಳತೆಯೇ ಇಲ್ಲ; ಬುದ್ಧಿ ಹೇಳುವುದಕ್ಕೆ ಅವಕಾಶವೆಲ್ಲಿದೆ? ಧರ್ಮಮಾರ್ಗವನ್ನು ಬಿಟ್ಟು ನೀವು ಇದುವರೆಗೆ ನಡೆದ ಸಂದರ್ಭವೇ ಇಲ್ಲ ; ಧರ್ಮರಾಜ! ನಿನಗೆ ಶುಭವಾಗಲಿ ಮಂಗಳವಾಗಲಿ ಹೋಗಿಬಾ ಎಂದು ಆಶೀರ್ವದಿಸಿದರು. ವ|| ಧರ್ಮರಾಜನು ‘ನಾವು ಅಲ್ಲಿದ್ದರೂ ನಿಮ್ಮ ಮನಸ್ಸಿಗೆ ಅಸಹ್ಯವಾಗುವ ಹಾಗೆಯೂ ಧರ್ಮಕ್ಕೆ ದೂರವಾಗಿಯೂ ನಡೆಯುವವರಲ್ಲ’ ಎಂದು ಹೇಳಿ ನಮಸ್ಕಾರ ಮಾಡಿ ಕುಂತಿಯನ್ನು ವಿದುರನ ಮನೆಯಲ್ಲಿರಹೇಳಿ ಸುಭದ್ರೆಯನ್ನು ಅಭಿಮನ್ಯುವಿನೊಡನೆ ದ್ವಾರಾವತಿಗೆ ಕೃಷ್ಣನ ಹತ್ತಿರಕ್ಕೆ ಕಳುಹಿಸಿ, ತಮ್ಮ ಪರಿವಾರದೊಡನೆ ಮುಂದಕ್ಕೆ ನಡೆದರು. ಗಂಗಾನದಿಯನ್ನೂ ದಾಟಿ ಅದರ ಪಶ್ಚಿಮದಿಕ್ಕಿನಲ್ಲಿರುವ ಕಾಮ್ಯಕವನದ ಮಾರ್ಗವನ್ನನುಸರಿಸಿ ಹೋದರು. ೨೨. ಮಳೆಗಾಲವು ಪ್ರಾರಂಭವಾಯಿತು. ದಿಕ್ಕುಗಳು (ಪಚ್ಚೆ ಪೈರುಗಳಿಂದ) ಹಸಿರುಹತ್ತಲು ಪಚ್ಚೆಯ ರತ್ನದಿಂದ ಹೊದಿಸಿದ ಹಾಗಾಯಿತು. ಆಕಾಶವು ದುಂಬಿಯಂತೆ ಶಿವನ ಕೊರಳಿನಂತೆ, ಹೊಂಗೆಯ ಮರದಂತೆ ಕಪ್ಪಗಿರುವ ಅತ್ಯಂತ ನೀಲ ಬಣ್ಣದ ಮೋಡಗಳ ಸಮೂಹದಿಂದ ಪ್ರಕಾಶಮಾನವಾಯಿತು. ಗಾಳಿಯು ವಿಸ್ತಾರವಾಗಿ ಹಬ್ಬಿರುವ ಕದಂಬ ಮತ್ತು ಕೇದಗೆ ಹೂವುಗಳ ಸಮೂಹದಿಂದ ಹೊರಗೆ ಚೆಲ್ಲುತ್ತಿರುವ ಪರಾಗದಿಂದ ಕೂಡಿದುದಾಯಿತು. ೨೩. ಕಪ್ಪಾಗಿರುವ ಮೋಡಗಳಿಂದ ಆಕಾಶವೊಪ್ಪಿರಲು ಹೆಣ್ಣುನವಿಲುಗಳಿಂದ ಕಾಡಿನ ಮಧ್ಯಭಾಗವ