ಮ|| ವಿದಳತ್ಕುಂದ ಶಶಾಂಕ ಶಂಖಧವಳಂ ಗಂಧೇಭ ದಾನಾಂಬು ಪೂ
ರ್ಣ ದರೀ ಸುಂದರ ಕಂದರಂ ಮೃಗಪತಿ ಪ್ರಧ್ವಾನ ಗರ್ಜದ್ಗುಹಂ|
ಮದಿರೋನ್ಮತ್ತ ನಿಳಿಂಪ ಕಿಂಪುರುಷ ಕಾಂತಾರಬ್ಧ ಸಂಗೀತಮೊ
ಪ್ಪಿದುದಲ್ತೇ ಸುರ ಸಿದ್ಧ ದಂಪತಿ ರತಿ ಶ್ರೀ ರಮ್ಯ ಹೈಮಾಚಳಂ|| ೭೨

ಕಂ|| ಲಳಿತೋತ್ಸವ ಧ್ವಜಾಂಶುಕ
ವಿಳಸನಮಂ ಮುಂದೆ ನಿನಗೆ ತೋರ್ಪಂತಿರೆ ಕ|
ಣ್ಗೊಳಿಸಿರ್ದುದು ನೋಡ ಹಿಮಾ
ಚಳ ಶಿಖರದ ಮೇಲೆ ಪಾಯ್ವ ಗಂಗಾಸ್ರೋತಂ|| ೭೩

ವ|| ಎಂದು ಗುಹ್ಯಕಂ ಹಿಮವನ್ಮಹೀಧರಮಂ ತೋಱುತ್ತುಂ ಬಂದು ಕೈಲಾಸ ಪರ್ವತಮಂ ಕಂಡು-

ಮ|| ಸ್ರ|| ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿ
ತ್ತಿದಳ್ ದಕ್ಷಾಧ್ವರಧ್ವಂಸಕನ ನೊಸಲ ಕಣ್ಣಾತನೊಳ್ ತನ್ನ ದೋರ್ಗ|
ರ್ವದಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತೆ
ತ್ತಿದೊಡಿತ್ತಂ ಮೆಚ್ಚಿ ಲಂಕಾಪತಿಗೆ ಬರವಂ ರಾಗದಿಂ ನೀಳಕಂಠಂ|| ೭೪

ಚಂ|| ತೊ ತೊಯೆಂಬ ಮಾತನಿನಿತಿಲ್ಲದೊಡಾಂ ತೊವೆಂ ದಲೆಂದೊಡಾ
ತೊಯೊಳೆ ಪೋಯ್ತು ಸೂರುಳನೆ ಸೂರುಳವೇವುವೊ ನಂಬೆನೆಂಬುದುಂ|
ಕಗೊರಲಾತನಾತ್ಮ ವಿಟತತ್ತ್ವಮನುಂಟೊಡೆತಾಗಿ ಮಾಡಿ ಬಾಂ
ದೊಯನೆ ಪೊತ್ತು ಗೌರಿಗೆ ಕವಲ್ದೊಗೆಯ್ಸಿದನೀ ಪ್ರದೇಶದೊಳ್|| ೭೫

ವ|| ಎಂದು ಗುಹ್ಯಕಂ ಕೈಲಾಸಶೈಲದೆಲ್ಲೆಡೆಗಳುಮಂ ವಿಕ್ರಮಾರ್ಜುನಂಗೆ ತೋಱುತ್ತುಂ ಬಂದು-

ಪ್ರಶ್ನೆಮಾಡಿದನು. ಗುಹ್ಯಕನು ಹೀಗೆಂದು ಹೇಳಿದನು. ೭೨. ಅರಳುತ್ತಿರುವ ಮೊಲ್ಲೆಯ ಹೂವಿನಂತಿರುವ ಚಂದ್ರನಂತೆಯೂ ಶಂಖದಂತೆಯೂ ಬೆಳ್ಳಗಿರುವುದೂ ಮದ್ದಾನೆಗಳ ಮದೋದಕದಿಂದ ತುಂಬಿದ ದರಿಗಳಿಂದ ಕೂಡಿ ಮನೋಹರವಾಗಿರುವ ಕಣಿವೆಗಳನ್ನುಳ್ಳುದೂ ಸಿಂಹದ ಅತಿಶಯವಾದ ಶಬ್ದದಿಂದ ಕೂಡಿದ ಗರ್ಜನೆಯನ್ನುಳ್ಳ ಗುಹೆಯನ್ನುಳ್ಳುದೂ ಮದ್ಯಪಾನದ ಅಮಲೇರಿದ ದೇವತೆಗಳ ಮತ್ತು ಕಿಂಪುರುಷಸ್ತ್ರೀಯರಿಂದ ಪ್ರಾರಂಭಿಸಲ್ಪಟ್ಟ ಸಂಗೀತವನ್ನುಳ್ಳುದೂ ದೇವತೆಗಳು ಮತ್ತು ಸಿದ್ಧದಂಪತಿಗಳ ರತಿಕ್ರೀಡೆಯ ವೈಭವದಿಂದ ಮನೋಹರವಾಗಿರುವುದೂ ಆದ ಇದು ಹಿಮವತ್ಪರ್ವತ ಎಂದು ಹೇಳಿದನು. ೭೩. ಅದೋ ನಿನಗೆ ಶುಭೋತ್ಸವಸೂಚಕವಾದ ಬಾವುಟದ ಬಟ್ಟೆಯ ವಿಲಾಸವನ್ನು ನಿನ್ನೆದುರಿಗೆ ತೋರುವಂತೆ ಹಿಮವತ್ಪರ್ವತದ ಶಿಖರದ ಮೇಲೆ ಹರಿಯುತ್ತಿರುವ ಗಂಗಾಪ್ರವಾಹವು ಕಣ್ಣನ್ನು ಆಕಷಿಸುತ್ತಿದೆ ನೋಡು. ವ|| ಎಂದು ಗುಹ್ಯಕನು ಹಿಮಾಲಯಪರ್ವತವನ್ನು ತೋರಿಸುತ್ತ ಮುಂದೆ ಬಂದು ಕೈಲಾಸಪರ್ವತವನ್ನು ಕಂಡು- ೭೪. ಇದು ಕೈಲಾಸಪರ್ವತ; ಪಾರ್ವತೀಪತಿಯ ವಾಸಸ್ಥಾನ, ದಕ್ಷಬ್ರಹ್ಮನ ಯಜ್ಞವನ್ನು ನಾಶಮಾಡಿದ ಈಶ್ವರನ ಹಣೆಗಣ್ಣು ಮನ್ಮಥನನ್ನು ಬೂದಮಾಡಿದುದು ಇದರಲ್ಲಿಯೇ, ಶಿವನ ಮುಂದೆ ತನ್ನ ಬಾಹುಬಲದ ಅಹಂಕಾರವನ್ನೂ ಅತಿಶಯವನ್ನೂ ಪ್ರಕಟಿಸುವ ಆಶೆಯಿಂದ ಈ ಪರ್ವತವನ್ನೇ ಬೇರಿನಿಂದ ಕಿತ್ತು ಹೊತ್ತು ಮೇಲಕ್ಕೆತ್ತಲು ಈಶ್ವರನು ತೃಪ್ತನಾಗಿ ಲಂಕಾಪತಿಯಾದ ರಾವಣನಿಗೆ ಸಂತೋಷದಿಂದ ಇಲ್ಲಿ ವರಪ್ರದಾನ ಮಾಡಿದನು. ೭೫. ನದಿ (ಗಂಗಾನದಿ)ಯೆಂಬ ಮಾತನ್ನು ತಕ್ಷಣ ಬಿಟ್ಟುಬಿಡು. ಹಾಗಿಲ್ಲವಾದರೆ ನಾನು ಖಂಡಿತವಾಗಿಯೂ ನಿನ್ನನ್ನು ಬಿಟ್ಟುಬಿಡುತ್ತೇನೆ ಎಂದು (ಗೌರಿಯು ಸವತಿಮಾತ್ಸರ್ಯದಿಂದ) ಹೇಳಿದಳು. ಶಿವನು ಆ ನಿನ್ನ ಪ್ರತಿಜ್ಞೆಯು ಆ ನದಿಯ ಜೊತೆಯಲ್ಲಿಯೇ ಹೋಯಿತು, ಎಂದನು. ಗೌರಿಯು ಆ ಪ್ರತಿಜ್ಞೆಯದೇನು ನಾನು ನಂಬುವುದಿಲ್ಲ ಎನ್ನಲು ವಿಷಕಂಠನಾದ ಈಶ್ವರನು ಆ ಗೌರಿಯನ್ನು ನಂಬಿಸುವುದಕ್ಕಾಗಿಯೂ ತನ್ನ ವಿಟವಿದ್ಯೆಯನ್ನು ಪ್ರದರ್ಶಿಸುವುದಕ್ಕಾಗಿಯೂ ಗಂಗೆಯನ್ನು ತಲೆಯಲ್ಲಿ ಮರೆಮಾಡಿ ಇಟ್ಟುಕೊಂಡು ಈ ಸ್ಥಳದಲ್ಲಿ ಕವಲೊಡೆದ ಬೇರೆಯ ನದಿಯನ್ನುಂಟುಮಾಡಿದನು. ಅಂದರೆ ತಲೆಯಲ್ಲಿಯೇ ಗಂಗೆಯನ್ನಿಟ್ಟುಕೊಂಡು ಅದನ್ನು ತೊರೆದುಬಿಟ್ಟ ಹಾಗೆ ಅದರ ಕವಲೊಡೆದ ಒಂದೆರಡು ಪ್ರವಾಹವನ್ನು ಹೊರಕ್ಕೆ ಬಿಟ್ಟನು. ವ|| ಎಂದು ಗುಹ್ಯಕನು ಕೈಲಾಸಪರ್ವತದ ಎಲ್ಲಾ ಸ್ಥಳಗಳನ್ನೂ ಅರ್ಜುನನಿಗೆ ತೋರುತ್ತ

ಉ|| ಸಾಳ ತಮಾಳ ಕಾನನಭರೋದ್ಧತ ಸಿಂಧುರಕಂಠಗರ್ಜನಾ
ಭೀಳಮನಂಬರೇಚರವಧೂಕರಪಲ್ಲವಸಂಚಳಲ್ಲತಾಂ|
ದೋಳಮನಾಶ್ರಿತಾದ್ರಿ ನದ ಕೂಳಮನತ್ಯಧರೀಕೃತಾನ್ಯ ಕು
ತ್ಕೀಳಮನಿಂದುಕಾಂತ ಸುಸಲೀಳಮನೆಯ್ದಿನಿಂದ್ರಕೀಳಮಂ|| ೭೬

ಮ|| ಕಮಳಾಂತರ್ಗತ ಗಂಧ ಬಂಧು ನಯದಿಂ ಬಂದಪ್ಪಿಕೊಳ್ವಂತೆ ಗಾ
ಳಿ ಮನಂಗೊಂಡಿರೆ ತೀಡೆ ಭೃಂಗರುತಿಗಳ್ ಮಾಂಗಲ್ಯಗೇಯಂಗಳಂ|
ದಮನಂದೀಯೆ ಮಡಲ್ತು ಪೂತ ಲತೆಗಳ್ ಕೆಯ್ಗೆಯ್ದು ಪೂನೀಡಲ್ಕ
ರ್ಘ್ಯಮನೀವಂತೆವೊಲಾದುದದ್ರಿ ಹರಿಗಂಗಿಷ್ಟಾರ್ಥಸಂಸಿದ್ಧಿಯಂ|| ೭೭

ವ|| ಆಗಳ್ ಗುಹ್ಯಕನಿಂದ್ರಸುತನನಿಂದ್ರಕೀಲನಗೇಂದ್ರದ ಚಂದ್ರಕಾಂತಶಿಲಾ ತಲದೊಳಿೞಪಿ ಬೀಳ್ಕೊಂಡು ಪೋದನಿತ್ತ ವಿಕ್ರಮಾರ್ಜುನಂ ಪರಂತಪಂ ತಪೋನಿಯಮ ನಿಯಮಿತನಾಗಿ-

ಮ|| ಸ್ರ|| ಭಸಿತಂ ಕರ್ಪೂರ ಕಾಳಾಗರು ಬಹುಳ ರಜಂ ವಲ್ಕಲಂ ಕಲ್ಪವೃಕ್ಷ
ಪ್ರಸವಂ ಯಜ್ಞೋಪವೀತಂ ಕನಕ ಕಮಳನಾಳೋತ್ಕರಂ ನಿಚ್ಚನಿಚ್ಚಂ|
ಪೊಸತೆಂಬಂತಾಗೆ ಪಾರ್ಥಂಗೊಸೆದು ತುಡಲುಡಲ್ ಪೂಸಲುಂ ಸಾಲ್ವಿನಂ ಸಾ
ಸಿತುದ್ಯದ್ಭಕ್ತಿ ಭಾರಾನತ ವನವನಿತಾವೃಂದಮಾನಂದದಿಂದಂ|| ೭೮

ಚಂ|| ಅದಿರದ ಚಿತ್ತಮಳ್ಕದ ಮನಂ ಬಗೆಗೊಳ್ಳದ ಮೋಹಮೆತ್ತಿ ಕ
ಟ್ಟಿದ ಜಡೆ ತೊಟ್ಟ ರತ್ನಕವಚಂ ಕೊರಲೊಳ್ ಸಲೆ ಕೋದ ಬಿಲ್ ಪ್ರಯ|
ತ್ನದೆ ಬಿಗಿದಿರ್ದೆರೞ್ದೊಣೆ ಮಿಸುಪ್ಪಸಿಖೇಟಕಮಿಂತಿವೊಂದುಂ ಗುಂ
ದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ|| ೭೯

ವ|| ಅಂತು ಪರಾಶರನಂದನನುಪದೇಶದೊಳ್ ತಪನಪ್ರಭಂ ತಪಂಗೆಯ್ಯಲ್ ತಗುಳ್ಪೊಡೆ-

ಬಂದನು. ೭೬. ಮುಂದೆ ಒತ್ತಾಗಿ ಬೆಳೆದ ತೆಂಗು ಮತ್ತು ಹೊಂಗೆಯ ಮರಗಳ ಕಾಡಿನಲ್ಲಿ ಎತ್ತರವಾಗಿ ಬೆಳೆದ ಮದ್ದಾನೆಗಳ ಕೊರಳಿನಿಂದ ಬರುತ್ತಿದ್ದ ಘೀಳಿಡುವಿಕೆಯಿಂದ ಭಯಂಕರವಾಗಿದ್ದರೂ ಆಕಾಶಗಾಮಿಗಳಾದ ಖೇಚರಸ್ತ್ರೀಯರ ಚಿಗುರಿನಂತಿರುವ ಕೈಗಳಿಂದ ಚಲಿಸಲ್ಪಟ್ಟ ಬಳ್ಳಿಗಳ ಉಯ್ಯಾಲೆಗಳನ್ನುಳ್ಳುದೂ (ತನ್ನ ಔನ್ನತ್ಯದಿಂದ) ಇತರ ಎಲ್ಲ ಪರ್ವತಗಳನ್ನೂ ಬಹು ಕೀಳನ್ನಾಗಿ ಮಾಡಿರುವುದೂ ಚಂದ್ರಕಾಂತಶಿಲೆಯ ಉಚ್ಚವೈಭವವನ್ನುಳ್ಳುದೂ ಆದ ಇಂದ್ರಕೀಲಪರ್ವತವನ್ನು ಅರ್ಜುನನು ಬಂದು ಸೇರಿದನು. ೭೭. ಕಮಲದ ಹೂವಿನಲ್ಲಿರುವ ವಾಸನೆಗೆ ಸ್ನೇಹಿತನಾದ ವಾಯುವು ವಿನಯದಿಂದ ಬಂದು ಆಲಿಂಗನ ಮಾಡಿಕೊಳ್ಳುವ ಹಾಗೆ ಆಹ್ಲಾದಕರವಾಗಿ ಬೀಸಲು ದುಂಬಿಯ ಶಬ್ದಗಳು ಮಂಗಳವಾದ್ಯದ ಸೊಗಸನ್ನುಂಟುಮಾಡುತ್ತಿರಲು ಹಬ್ಬಿ ಹೂವಿನಿಂದ ಕೂಡಿರುವ ಬಳ್ಳಿಗಳು ಅಲಂಕಾರ ಮಾಡಿಕೊಂಡು ಕೈಗೆ ನೀರನ್ನು ಕೊಡುವ ಹಾಗೆ ಹೂವನ್ನು ಕೊಡಲು ಅರ್ಜುನನಿಗೆ ಆ ಪರ್ವತವು ಇಷ್ಟಾರ್ಥಸಿದ್ಧಿಯನ್ನುಂಟು ಮಾಡುವ ಹಾಗೆ ಕಂಡಿತು. ವ|| ಆಗ ಗುಹ್ಯಕನು ಅರ್ಜುನನನ್ನು ಶ್ರೇಷ್ಠವಾದ ಇಂದ್ರಕೀಲಪರ್ವತದ ಚಂದ್ರಕಾಂತಶಿಲಾತಲದಲ್ಲಿ ಇಳಿಸಿ ಅವನ ಅಪ್ಪಣೆ ಪಡೆದು ಹೋದನು. ಈ ಕಡೆ ಶತ್ರುಗಳನ್ನು ಸುಡುವ ಸ್ವಭಾವವುಳ್ಳ ಅರ್ಜುನನು ತಪೋನಿಯಮ ನಿಷ್ಠನಾದನು. ೭೮. ಅರ್ಜುನನಲ್ಲುಂಟಾದ ಅತ್ಯತಿಶಯವಾದ ಭಕ್ತಿಯ ಭಾರದಿಂದ ನಮ್ರರಾದ ಅರಣ್ಯಾಭಿಮಾನಿ ದೇವತಾಸ್ತ್ರೀಯರ ಸಮೂಹವು ಅವನಿಗೆ ಪ್ರತಿನಿತ್ಯವೂ ಹೊಸಹೊಸದು ಎನ್ನುವ ಹಾಗೆ ಉಡಲು-ತೊಡಲು ಲೇಪನಮಾಡಿಕೊಳ್ಳಲು ಸಾಕಾಗುವಷ್ಟು ವಿಭೂತಿ, ಪಚ್ಚಕರ್ಪೂರ, ಕರಿಯ ಅಗರಿನ ಶ್ರೇಷ್ಠವಾದ ಧೂಳು, ಕಲ್ಪವೃಕ್ಷದ ತೊಗಟೆಯಿಂದ ಮಾಡಿದ ನಾರುಮಡಿ, ಹೊಂದಾವರೆಯ ದಂಟಿನ ನೂಲಿನ ಸಮೂಹದಿಂದ ಮಾಡಿದ ಜನಿವಾರ ಇವುಗಳನ್ನು ಒದಗಿಸಿಕೊಟ್ಟಿತು. ೭೯. ಚಂಚಲವಾಗದ ಬುದ್ಧಿ, ಭಯಪಡದ ಮನಸ್ಸು, ಹೃದಯವನ್ನು ಪ್ರವೇಶಿಸಿದ ಪ್ರೀತಿ (ವಿರಕ್ತಿ), ಎತ್ತಿಕಟ್ಟಿರುವ ಜಡೆ, ತೊಟ್ಟಿರುವ ರತ್ನಖಚಿತವಾದ ಕವಚ (ಮೈಜೋಡು), ಕತ್ತಿನಲ್ಲಿ ವಿಶೇಷವಾಗಿ ಪೋಣಿಸಿಕೊಂಡಿರುವ ಬಿಲ್ಲು, ಪ್ರಯತ್ನಪೂರ್ವಕವಾಗಿ ಬಿಗಿದುಕೊಂಡಿರುವ ಎರಡು ಬತ್ತಳಿಕೆ, ಪ್ರಕಾಶಮಾನವಾಗಿರುವ ಕತ್ತಿಗುರಾಣಿಗಳು ಇವು ಸ್ವಲ್ಪವೂ ಊನವಾಗಿರದೆ ನೆಲಸಿರಲು ನೋಡುವವರಿಗೆ ಅರ್ಜುನನು ಸೌಮ್ಯವಾಗಿಯೂ ಭಯಂಕರವಾಗಿಯೂ ಕಂಡನು. ವ|| ವ್ಯಾಸ ಮಹರ್ಷಿಯ ಉಪದೇಶದಿಂದ ಸೂರ್ಯನ ಕಾಂತಿಯನ್ನುಳ್ಳ ಅರ್ಜುನನು ತಪಸ್ಸು

ಚಂ|| ಕರಿಣಿಯ ಸೀಯನಪ್ಪ ಮೊಲೆವಾಲ್ಗೆ ತಗುಳ್ದುದು ತತ್ಕಿಶೋರ ಕೇ
ಸರಿ ಹರಿಪೋತಮಂ ಬೆದಱುತುಂ ಕರಿಪೋತಮವುಂಡುಗರ್ಚಿ ಕೇ|
ಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು ಕುರಂಗಯೂಧದೊಳ್
ಬೆರಸಿದುವಂದು ಪೆರ್ಬುಲಿಗಳಿಂದ್ರತನೂಜತಪಪ್ರಭಾವದಿಂ|| ೮೦

ವ|| ಮತ್ತಮಾ ಗಿರೀಂದ್ರಕಂದರದೊಳ್ ತಪಂಗೆಯ್ವ ತಪೋಧನರ ತಪಂಗಳೆಲ್ಲಮಾತನ ತಪೋಮಯಶಿಖಿಗಳಿಂ ಬೆಂದು ಬೆಂದ ನುಲಿಯಂತೇತರ್ಕಂ ಮುಟ್ಟಿಲ್ಲದೆ ಮುಟ್ಟಗಿಡೆ ದೇವೇಂದ್ರಂ ತನಗಾದ ಹೃತ್ಕಂಪದೊಳಮಾಸನಕಂಪದೊಳಂ ನರೇಂದ್ರತಾಪಸಂ ತನ್ನಿಂದ್ರತ್ವಮಂ ಕೊಳಲೆಂದು ತಪಂಗೆಯ್ದಪನೆಂಬ ಸಂಕೆಯೊಳ್ ತಪೋವಿಘಾತಂ ಮಾಡಿಮೆಂದು ತನ್ನ ನೆಚ್ಚಿನಚ್ಚರಸೆಯರು ಮನಾಱುಂ ಋತುಗಳುಮಂ ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇೞುಗಳ್-

ಚಂ|| ವನರುಹಗರ್ಬನೆಂಬವನ ಮುನ್ನಿನ ಗೆಯ್ದ ತಪಂ ತಿಲೋತ್ತಮಾಂ
ಗನೆಯಿನದಂತುಟಾದುದೆನೆ ಮತ್ತಿನ ಬೂತು ತಂಪಗಳೆಮ್ಮ ಪು|
ರ್ವಿನ ಕಡೆಯೊಂದು ಜರ್ವಿನೊಳೆ ತೀರ್ವುವವಲ್ಲದೆ ದೇವ ಬೆಂಬಲಂ
ಮನಸಿಜನೀಗಳಾಱು ಋತುವುಂ ನೆರವೆಂದೊಡೆ ಸೋಲದಿರ್ಪರಾರ್|| ೮೧

ವ|| ಎಂದು ದೇವಪ್ಸರೋವೃಂದಮೆನಿತಾನುಮಂದದಿಂ ಪುರಂದರನ ಪಕ್ಕದೆ ಪೂಣ್ದು ಬಂದು ಗಗನತಳಮೆಲ್ಲಂ ತಮ್ಮ ತೊಟ್ಟ ದಿವ್ಯಾಭರಣಕಿರಣಂಗಳೊಳ್ ತೊಳಗಿ ಬೆಳಗೆ ಬಂದು ಮಹೀತಳಕ್ಕವತರಿಸಿ ನದನದೀಪುಳಿನಪರಿಸರಪ್ರದೇಶಂಗಳೊಳಂ ಕದಳೀವನಂಗಳೊಳಂ ಕನಕಲತಾಮಂಟಪಂಗಳೊಳಮಿಡಿದೆಡೆಗೊಳ್ ಪೂತ ಮಲ್ಲಿಗೆಯ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ಗಗನಮನಜನಿತಶ್ರಮವನಾ ಗಜನಮನಯರಾಱಸಿ ಪಾಲ್ಗಡಲೊಳ ಮಮರ್ದಿನೊಳಂ ಪುಟ್ಟಿದ ಕಳ್ಳ ಸೊರ್ಕಿನೊಳಮುಂತೆ ನಡುಗುವ ಬಡನಡುಗಳ್ಗೆ ನಡುಕಮುಮನುಂತೆ ಪೊಡರ್ವ ಪುರ್ವುಗಳ್ಗೆ ಪೊಡರ್ಪುಮನುಂತೆ ಸೊಗಯಿಸುವ ಬೆಳರ್ವಾಯ್ಗಳ್ಗೆ ತನಿಗೆತ್ತುಮನುಂತೆ ಪೊಳೆವ ನಿಡಿಯಲರ್ಗಣ್ಗಳ್ಗೆ ಮಳಮಳಿಪ ನೋಟಮುಮನುಂತೆ ತೊದಳಿಸುವ ನುಡಿವ ನುಡಿಗಳ್ಗೆ ತೊದಳುಮನೆಕ್ಕೆಯಿಂ ತಳೆಯೆ ನೆಯೆ ಕೆಯ್ಗೆಯ್ದು ಮುನ್ನಮಾಱುಂ ಋತುಗಳುಮಂ ನಿಮ್ಮ ನಿಮ್ಮ ಸ್ವರೂಪಂಗಳುಮನಾತನಿರ್ದಲ್ಲಿಗೆ ಪೋಗಿ ತೋಱಮೆಂದಾಗಳ್-

ಮಾಡಲು ಪ್ರಾರಂಭಿಸಿದನು. ೮೦. ಇಂದ್ರಪುತ್ರನಾದ ಅರ್ಜುನನ ತಪಸ್ಸಿನ ಪ್ರಭಾವದಿಂದ ಸಿಂಹದ ಮರಿಗಳು ಹೆಣ್ಣಾನೆಯ ಸಿಹಿಯಾದ ಮೊಲೆಹಾಲಿಗಾಗಿ ಅದರ ಹಿಂದೆಯೇ ಹೋದುವು. ಆನೆಯ ಮರಿಗಳು ಸಿಂಹದ ಮರಿಗಳನ್ನು ಹೆದರಿಸುತ್ತ ಅವಡುಗಚ್ಚಿ (ತುಟಿಯನ್ನು ಕಚ್ಚಿಕೊಂಡು) ಹೆಣ್ಣು ಸಿಂಹದ ಕೆಚ್ಚಲನ್ನು ಹಿಡಿದುಕೊಳ್ಳುತ್ತ ಓಡಿದುವು. ಹೆಬ್ಬುಲಿಗಳು ಜಿಂಕೆಯ ಸಮೂಹದಲ್ಲಿ ಬೆರಸಿಕೊಂಡವು. (ಅರ್ಜುನನ ತಪಪ್ರಭಾವದಿಂದ ಕಾಡುಪ್ರಾಣಿಗಳೂ ತಮ್ಮ ಸಹಜವೈರವನ್ನು ತೊರೆದು ನಿರ್ಭಯದಿಂದ ಸ್ನೇಹದಿಂದಿದ್ದುವು ಎಂಬುದು ಅಭಿಪ್ರಾಯ) ವ|| ಮತ್ತು ಆ ಪರ್ವತಶ್ರೇಷ್ಠದ ಕಣಿವೆಗಳಲ್ಲಿ ತಪಸ್ಸು ಮಾಡುತ್ತಿದ್ದ ತಪೋಧನರ ತಪಸ್ಸುಗಳೆಲ್ಲವೂ ಆತನ ತಪ್ಪಸ್ಸಿನಿಂದುಂಟಾದ ಬೆಂಕಿಯಿಂದ ಸುಟ್ಟುಹೋಗಿ ಸುಟ್ಟ ಹಗ್ಗದಂತೆ ಉಪಯೋಗವಿಲ್ಲದೆ ನಿಷ್ಪ್ರಯೋಜನವಾದುವು. ದೇವೇಂದ್ರನು ತನಗುಂಟಾದ ಎದೆ ನಡುಕದಿಂದಲೂ ಪೀಠದ ನಡುಗುವಿಕೆ (ಆಸನ ಕಂಪನ)ಯಿಂದಲೂ ಮನುಷ್ಯತಪಸ್ವಿಯು ತನ್ನಿಂದ ಪದವಿಯನ್ನು ಅಪಹರಿಸಲು ತಪಸ್ಸು ಮಾಡುತ್ತಿದ್ದಾನೆಂಬ ಸಂದೇಹದಿಂದ ಅವನ ತಪಸ್ಸಿಗೆ ವಿಘ್ನಮಾಡಿ ಎಂದು ತನಗೆ ಪರಮಪ್ರೀತಿಪಾತ್ರರಾದ ಅಪ್ಸರಸ್ತ್ರೀಯರನ್ನೂ ಆರು ಋತುಗಳನ್ನೂ ಗಂಧರ್ವರನ್ನೂ ಕಾಮದೇವನನ್ನು ದಂಡನಾಯಕನನ್ನಾಗಿ ಮಾಡಿ ಹೇಳಿಕಳುಹಿಸಿದನು- ೮೧. ಎಲೈ ಇಂದ್ರದೇವನೇ ಹಿಂದೆ ಬ್ರಹ್ಮನು ಮಾಡಿದ ತಪಸ್ಸು ತಿಲೋತ್ತಮೆಯೆಂಬ (ಒಬ್ಬ) ದೇವವೇಶ್ಯೆಯಿಂದ ಹಾಗೆ ಆಯಿತು (ನಷ್ಟವಾಯಿತು) ಎನ್ನುವಾಗ ಉಳಿದ ಪ್ರಾಣಿಗಳ ತಪಸ್ಸು ನಮ್ಮ ಹುಬ್ಬಿನ ಕೊನೆಯ ಒಂದು ಅಲುಗಾಟದಿಂದಲೇ ಮುಗಿದುಹೋಗುತ್ತವೆ. ಅಲ್ಲದೆ ಈಗ ಮನ್ಮಥನ ಬೆಂಬಲವೂ ಆರುಋತುಗಳ ಸಹಾಯವೂ ಇರುವಾಗ ಸೋಲದಿರುವವರಾರಿದ್ದಾರೆ? ವ|| ಎಂದು ದೇವಲೋಕದ ಅಪ್ಸರಸ್ತ್ರೀಯರ ಸಮೂಹವು ಇಂದ್ರನ ಹತ್ತಿರ ಎಷ್ಟೋ ರೀತಿಯಲ್ಲಿ ಪ್ರತಿಜ್ಞೆಮಾಡಿ ಬಂದು ಆಕಾಶಪ್ರದೇಶವೆಲ್ಲವೂ ತಾವು ಧರಿಸಿದ್ದ ದಿವ್ಯವಾದ ಒಡವೆಗಳ ಕಾಂತಿಯಿಂದ ಪ್ರಕಾಶಿಸುತ್ತಿರಲು ಭೂಮಿಗೆ ಇಳಿದು ಬಂದು ಗಂಡು ಮತ್ತು ಹೆಣ್ಣು ನದಿಗಳ ಮರಲುದಿಣ್ಣೆಗಳಲ್ಲಿಯೂ ಬಾಳೆಯ ತೋಟಗಳಲ್ಲಿಯೂ ಹೊಂಬಣ್ಣದ ಲತಾಮಂಟಪಗಳಲ್ಲಿಯೂ ಒತ್ತಾಗಿ ಸೇರಿ ಹೂ ಬಿಟ್ಟಿರುವ ಲತಾಗೃಹಗಳಲ್ಲಿಯೂ ಹೂವಿನಗೊಂಚಲುಗಳಲ್ಲಿಯೂ ಆಕಾಶದಲ್ಲಿ ಸಂಚರಿಸಿದುದರಿಂದುಂಟಾದ ಬಳಲಿಕೆಯನ್ನು ಆನೆಯಂತೆ ನಡಗೆಯುಳ್ಳ ಅಪ್ಸರಸ್ತ್ರೀಯರು ಪರಿಹರಿಸಿಕೊಂಡರು. ಕ್ಷೀರಸಮುದ್ರದಲ್ಲಿ ಹುಟ್ಟಿದ ಅಮೃತದಿಂದ ಉತ್ಪನ್ನವಾದ ಸೊಕ್ಕಿನಿಂದ (ಮದ್ಯಪಾನದಿಂದ) ಕೂಡಿದವರಾಗಿ ಸುಮ್ಮನೆ ನಡುಗುತ್ತಿರುವ ಕೃಶವಾದ ನಡುಗಳಿಗೆ ಮತ್ತಷ್ಟು ನಡುಕವನ್ನುಂಟುಮಾಡಿಕೊಂಡು, ಕುಣಿಯುತ್ತಿರುವ ದೀರ್ಘವಾದ ಹುಬ್ಬುಗಳಿಗೆ ಮತ್ತಷ್ಟು ಕುಣಿತವನ್ನು, ಮೊದಲೇ ಸೊಗಯಿಸುವ ಬಿಳಿಯ ಬಾಯಿಗಳಿಗೆ ಹೊಸದಾದ ಅದಿರಾಟವನ್ನು, ಹೊಳೆಯುತ್ತಿರುವ ದೀರ್ಘವಾದ

ಕಂ|| ಆಱುಂ ಋತುಗಳ ಪೂಗಳು
ಮಾಱುಂ ಋತುಗಳ ಪೊದಳ್ದ ಚೆಲ್ವುಗಳುಮಣಂ|
ಬೇಱಲ್ಲದೊಂದು ಸೂೞು ಮೆ
ಯ್ದೋಱದುವೊಡನೊಡನೆ ನೆಲದೊಳಂ ಗಗನದೊಳಂ|| ೮೨

ಮೆಯ್ದೋಱದೊಡವಡನೆಯೆ
ಮೆಯ್ದೋಱಲ್ ಬಗೆದನಂಗಜಂಗಮಲತೆಗಳ್|
ಮೆಯ್ದೋಱುವಂತೆ ಮೆಲ್ಲನೆ
ಮೆಯ್ದೋಱದರಮರಗಣಿಕೆಯರ್ ವಂದಾಗಳ್|| ೮೩

ಸಮದ ಗಜಗಮನೆಯರ್ ಮುಗಿ
ಲ ಮೇಲೆ ನಡೆಪಾಡುವಾಕೆಗಳ್ ತಮಗೆ ಧರಾ|
ಗಮನಂ ಪೊಸತಪ್ಪುದಱಂ
ದಮರ್ದಿರೆ ನಡೆ ನಡೆದು ನಡೆಯಲಾಱದೆ ಸುೞದರ್|| ೮೪

ಕಂ|| ಮುಡಿಯ ಕುಚಯುಗದ ಜಘನದ
ಕಡುವಿಣ್ಪಿಂ ಮಣಲೊಳೞ್ದು ಬರೆ ಮೆಲ್ಲಡಿಗಳ್|
ನಡೆಯದ ಬೇವಸಮಂ ತಾಂ
ನಡೆಯಿಸುವಂತವರ್ಗಳೊಯ್ಯನೊಯ್ಯನೆ ನಡೆದರ್|| ೮೫

ಮ|| ಮುಡಿಯಂ ಸೋಗೆಯೆಗೆತ್ತು ಸೋಗೆ ನಡೆಯಂ ಪೆಣ್ಣಂಚೆಗೆತ್ತಂಚೆ ಮೆ
ಲ್ನುಡಿಯಂ ಕೋಗಿಲೆಗೆತ್ತು ಕೋಗಿಲೆ ಘನೋತ್ತುಂಗ ಸ್ತನದ್ವಂದ್ವದಿ|
ಟ್ಟೆಡೆಯಂ ಕೋಕಮೆಗೆತ್ತು ಕೋಕಮಳಕಾನೀಕಂಗಳಂ ಸೊರ್ಕಿದಾ
ಱಡಿಗೆತ್ತಾಱಡಿ ಸುತ್ತುತುಂ ಬರೆ ಬನಂ ಬರ್ಪಂತೆ ಬಂದಾಕೆಗಳ್|| ೮೬

ವ|| ಅಂತು ನರೇಂದ್ರತಾಪಸನಂ ಸೋಲಿಸಲೆಂದು ವಂದಾಕೆಗಳ್ ತಾಮೆ ಸೋಲ್ತು ಮುಂದು ಮುಂದನೆ ಸುೞಯೆ-

ಚಂ|| ಮಗಮಗಿಸುತ್ತುಮಿರ್ಪ ಮೃಗನಾಭಿಯ ನೀರ್ದಳಿವಲ್ಲಿ ಕಂಪನಾ
ಳ್ದುಗುೞ್ದಸುತ್ತುಮಿರ್ಪ ಪದದೊಳ್ ಪದವಟ್ಟು ಪೊದಳ್ದು ತೋರ ಮ|
ಲ್ಲಿಗೆಯ ತುಱುಂಬು ರಾಹು ತವೆ ನುಂಗಿದ ಚಂದ್ರನನೊಯ್ಯನೊಯ್ಯನಂ
ದುಗುೞ್ವವೊಲೊಪ್ಪಿರಲ್ ಬಲದೊಳುರ್ವಸಿ ದೇಸಿಗೆ ದೇಸಿಯಾಡಿದಳ್|| ೮೭

ಹೂವಿನಂತಿರುವ ಕಣ್ಣುಗಳಿಗೆ ಕೆಂಪಾಗಿ ಕದಡಿದ ನೋಟವನ್ನು ಈಗಾಗಲೆ ಸುಮ್ಮನೆ ತೊದಳಿನಿಂದ ನುಡಿಯುತ್ತಿರುವ ತೊದಳುಮಾತಿಗೆ ಮತ್ತಷ್ಟು ತೊದಳುವಿಕೆಯನ್ನು ಏಕಕಾಲದಲ್ಲಿ ಕೂಡಿಕೊಳ್ಳುವಂತೆ ಪೂರ್ಣವಾಗಿ ಅಲಂಕರಿಸಿಕೊಂಡು ನಡೆಯುತ್ತಿರಲು ಆರು ಋತುಗಳೂ ತಮ್ಮ ತಮ್ಮ ಸ್ವರೂಪಗಳಿಂದ ಆತನಿದ್ದ ಸ್ಥಳಕ್ಕೆ ಹೋಗಿ ತೋರ್ಪಡಿಸಿಕೊಂಡವು. ೮೨. ಆರು ಋತುಗಳ ಹೂವುಗಳೂ ಆರು ಋತುಗಳಲ್ಲಿ ವ್ಯಾಪಿಸಿರುವ ಸೌಂದರ್ಯವೂ ಸ್ವಲ್ಪವೂ ಬೇರೆ ಬೇರೆಯಾಗಿರದೆ ಒಟ್ಟಿಗೇ ಒಂದೇ ಸಲ ಭೂಮಿಯಲ್ಲಿಯೂ ಆಕಾಶದಲ್ಲಿಯೂ ಕಾಣಿಸಿಕೊಂಡವು. ೮೩. ಆರು ಋತುಗಳೊಡನೆಯೇ ತಾವೂ ಕಾಣಿಸಿಕೊಳ್ಳಬೇಕೆಂದು ಭಾವಿಸಿ ಮನ್ಮಥನ ಜಂಗಮಲತೆಗಳು ಕಾಣಿಸಿಕೊಳ್ಳುವ ಹಾಗೆ ಅಪ್ಸರಸ್ತ್ರೀಯರೂ ಬಂದು ನಿಧಾನವಾಗಿ ಕಾಣಿಸಿಕೊಂಡರು. ೮೪. ಮೋಡಗಳ ಮೇಲೆ ನಡೆದಾಡುವ ಸ್ವಭಾವವುಳ್ಳ ಆ ಮದಗಜಮನೆಯರು ನೆಲದ ಮೇಲೆ ನಡೆಯುವುದು ತಮಗೆ ಹೊಸದಾದುದರಿಂದ ಪಾದಗಳು ನೆಲಕ್ಕೆ ಹತ್ತಿಕೊಂಡಿರಲು ನಡೆದೂ ನಡೆದೂ ನಡೆಯಲಸಮರ್ಥರಾಗಿ ಸುತ್ತಾಡಿದರು. ೮೫. ತುರುಬಿನ, ಮೊಲೆಗಳ, ಪಿರ್ರೆಗಳ, ಅತಿಯಾದ ಭಾರದಿಂದ ಅವರ ಮೃದುವಾದ ಪಾದಗಳು ಮರಳಿನಲ್ಲಿ ಹೂತುಹೋಗಲು ನಡೆಯಲು ಅಭ್ಯಾಸವಿಲ್ಲದ ತಮ್ಮ ಆಯಾಸವನ್ನು ಪ್ರದರ್ಶಿಸುವಂತೆ ಮೆಲ್ಲಮೆಲ್ಲಗೆ ನಡೆದರು. ೮೬. ತುರುಬಿನ ಗಂಟನ್ನು ಹೆಣ್ಣು ನವಿಲೆಂದು ಭ್ರಾಂತಿಗೊಂಡು ಗಂಡುನವಿಲೂ, ನಡಗೆಯನ್ನು ಹೆಣ್ಣು ಹಂಸವೆಂದು ಭ್ರಮಿಸಿ ಗಂಡುಹಂಸವೂ, ಮೃದುವಾದ ಮಾತನ್ನು ಹೆಣ್ಣುಕೋಗಿಲೆಯೆಂದು ಭಾವಿಸಿ ಗಂಡುಕೋಗಿಲೆಯೂ ದಪ್ಪವೂ ಎತ್ತರವೂ ಆದ ಮೊಲೆಗಳ ಒತ್ತಡವನ್ನು ಕಂಡು ಚಕ್ರವಾಕದ ಜೋಡಿಯೆಂದು ಭ್ರಮಿಸಿ ಚಕ್ರವಾಕವೂ, ಮುಂಗುರುಗಳ ಸಾಲನ್ನು ಸೊಕ್ಕಿದ ಹೆಣ್ಣುದುಂಬಿಯೆಂದೇ ಭ್ರಮಿಸಿ ಗಂಡುದುಂಬಿಗಳೂ ಆ ಅಪ್ಸರೆಯನ್ನು ಸುತ್ತಿಕೊಂಡು ಬರುತ್ತಿರಲು ಅವರು ವನವೇ ಬರುವ ಹಾಗೆ ಬಂದರು. ವ|| ಹಾಗೆ ರಾಜತಪಸ್ವಿಯನ್ನು ಸೋಲಿಸುವುದಕ್ಕಾಗಿ ಬಂದ ಅವರು ತಾವೇ ಸೋತು ಅವನ ಮುಂದು ಮುಂದಕ್ಕೆ ಸುಳಿದಾಡಿದರು. ೮೭. ಗಮಗಮಿಸುವ ಕಸ್ತೂರಿಯ ನೀರನ್ನು ಚಿಮುಕಿಸುವುದರಿಂದ ವಾಸನಾಯುಕ್ತವಾಗಿ ಸುಟಗೊಂಡು ಅರಳುತ್ತಿರುವ

ಚಂ|| ಪದ ಕೊರಲಿಂಪನಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊದ
ರ್ಕೊದಳೆೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ ಜಾಣನಾಂತು ಮೆ|
ಚ್ಚಿದ ತೆಱದಾಸೆವಟ್ಟಲಸದೆತ್ತಿದವೋಲ್ ದೊರೆವೆತ್ತು ದೂಱದಾ
ಱದ ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆದಂತೆ ಪಾಡಿದಳ್|| ೮೮

ನಡು ನಡುಗಲ್ಕೆ ಪುರ್ವು ಪೊಡರಲ್ಕೆ ಕುರುಳ್ ಮಿಳಿರಲ್ಕೆ ಬಾಯ್ ಬೆಡಂ
ಗಿಡಿದೆಳಸಲ್ ತೆರಳ್ತು ತುಡುಕಲ್ಕೆ ತಗುಳ್ದುದು ಕೆಂದನೀಕೆ ಕ|
ನ್ನಡಿಪಳೊ ಪಾಡಿದೀ ನೆವದಿನೆಂಬಿನೆಗಂ ದನಿಯಿಂಪು ಬೀಣೆಯಂ
ಮಿಡಿದವೊಲಾಗೆ ಗಾನದೊಳೊಡಂಬಡೆ ಮೇನಕೆ ಮುಂದೆ ಪಾಡಿದಳ್|| ೮೯

ಒದವಿದ ಕೆತ್ತ ಕಂಕಣದ ಪುರ್ವಿನ ಜರ್ವು ಲಯಕ್ಕೆ ಲಕ್ಕ ಲೆ
ಕ್ಕದ ಗತಿ ನಾಟಕಾಭಿನಯಮಾಯ್ತೆನೆ ಗೇಯದೊಳೀಕೆ ಸೊರ್ಕನಿ|
ಕ್ಕಿದಳೆನೆ ಕಳ್ಗೆ ಚಕ್ಕಣಮೆನಿಪ್ಪುದು ಸಾಗೆನಿಸಲ್ಕೆ ಸಾಲ್ವ ಸ
ಗ್ಗದ ಪೊಸ ದೇಸಿಯೋಳಿಗಳನೊರ್ವಳೊಱಲ್ದು ನೆಱಲ್ದು ಪಾಡಿದಳ್|| ೯೦

ಉ|| ಆಡದ ಮೆಯ್ಗಳಿಲ್ಲ ನಿಡುಮೆಯ್ಗಳುಮಾಡಿದುವಂತೆ ಮೆಟ್ಟುವಳ್
ನೋಡಿದರೆಲ್ಲರಂ ಪಿಡಿದು ಮೆಟ್ಟಿದಳಿಟ್ಟಳಮಾಯ್ತು ದೇಸಿ ಕೆ|
ಯ್ಗೂಡಿದುದಿಲ್ಲ ಮಾರ್ಗಮೆನೆ ವಿಸ್ಮಯಮಾಗಿರೆ ತನ್ನ ಮುಂದೆ ಬಂ
ದಾಡಿದಳಾ ತಿಳೋತ್ತಮೆಯನೊಲ್ದನುಮಿಲ್ಲ ನರೇಂದ್ರತಾಪಸಂ|| ೯೧

ಹೂವಿನಲ್ಲಿ ಹದವರಿತು ಸೇರಿ ಅಗಲವಾಗುತ್ತಿರುವ ದಪ್ಪಮಲ್ಲಿಗೆಯ ದಂಡೆಯು ತುರುಬಿನ ಮೇಲೆ ಗ್ರಹಣಕಾಲದಲ್ಲಿ ರಾಹುವು ಚಂದ್ರನನ್ನು ನಿಧಾನವಾಗಿ ಹೊರಚೆಲ್ಲುವ ಹಾಗೆ ಸೊಗಸಾಗಿರಲು ಬಲಗಡೆಯಲ್ಲಿ ಊರ್ವಶಿಯ ದೇಶೀಯನೃತ್ಯಕ್ಕಿಂತಲೂ ಉತ್ತಮವಾದ ನೃತ್ಯವನ್ನಾಡಿದಳು. ೮೮. ಹದವಾದ ಶಾರೀರವು ಇಂಪಿನಿಂದ ಕೂಡಿಕೊಂಡಿರಲು ಕೊಂಕು ನಯ ಗಮಕಗಳಿಂದ ಸುರಣೆಗೊಂಡ ಮಧುರವಾದ ಮಾತು ತಂತಿಎಳೆದ ಹಾಗೆ ಶ್ರುತಿಯಲ್ಲಿ ಸೇರಿಕೊಂಡಿರಲು ಜಾಣತನದಿಂದ ಕೂಡಿ ತಾನೆ ಮೆಚ್ಚಿ ಆಸೆಗೊಂಡು ರಾಗವನ್ನು ಎತ್ತಿಕೊಂಡು ಹಾಗೆ ಸ್ವಲ್ಪವೂ ಆಯಾಸ ಪಡದೆ ಮಧ್ಯಮಸ್ವರದಿಂದ ಹೃದಯಸ್ಪರ್ಶಿಯಾಗಿರಲು ಸರಸ್ವತಿಯೇ ಬಾಯಿತೆರೆದ ಹಾಗೆ ಮೇನಕೆಯು ಹಾಡಿದಳು. ೮೯. ಸೊಂಟವು ನಡುಗುತ್ತಿರಲು ಹುಬ್ಬುಗಳು ಅದುರುತ್ತಿರಲು ಮುಂಗುರುಳು ಅಲುಗಾಡುತ್ತಿರಲು ಬಾಯಿಸೌಂದರ್ಯದಿಂದ ಕೂಡಿ ತವಕಪಟ್ಟು ಹಿಡಿದುಕೊಳ್ಳುವುದಕ್ಕೆ ಓಡಿಬಂದಿತು. ಹಾಡಿದ ಈ ನೆಪದಿಂದ ಇವಳು ರತಿಪ್ರೇಮವನ್ನು ಪ್ರತಿಬಿಂಬಿಸುತ್ತಿದ್ದಾಳೆಯೋ ಎನ್ನುವ ಹಾಗೆ ಧ್ವನಿಯ ಮಾಧುರ್ಯವು ವೀಣೆಯನ್ನು ಮೀಟಿದ ಹಾಗೆ ಹೊಂದಿಕೊಂಡಿರಲು ಮೇನಕೆಯು ಮುಂದೆ ಬಂದು ಹಾಡಿದಳು. ೯೦. ಉಂಟಾದ ಬಳೆಗಳ ಚಲನೆಯೂ ಹುಬ್ಬಿನ ಅಲುಗಾಟವೂ ತಾಳದ ಲಯಕ್ಕನುಗುಣವಾಗಿ ಲಕ್ಷಸಂಖ್ಯೆಯ ಗತಿಯನ್ನುಳ್ಳ ನಾಟಕಾಭಿನಯವಾಯಿತೆನ್ನುವ ಹಾಗೆ ಹಾಡುಗಾರಿಕೆಯಲ್ಲಿ ಈಕೆ ಸೊಕ್ಕವನ್ನುಂಟುಮಾಡಿದಳು (ಕಿಣ್ವವನ್ನಿಕ್ಕಿದಳು- ಮದ್ಯಪಾನ ಮಾಡುವುದರಿಂದುಂಟಾಗುವ ಮೈಮರೆಯುವಿಕೆ). ಇವಳ ಗೀತವು ಮದ್ಯಕ್ಕೆ ಚಾಕಣವನ್ನು ಬೆರಸಿದ ಹಾಗಿದೆ. ಹಾಗೆನಿಸಿಕೊಳ್ಳಲೂ ಸಾಕು ಎನ್ನಿಸಿಕೊಳ್ಳುವ ಸ್ವರ್ಗದ ಹೊಸದೇಸಿರಾಗಗಳ ಸಮೂಹವನ್ನು ಒಬ್ಬಳು ಅಪ್ಸರಸ್ತ್ರೀ ಪ್ರೀತಿಯಿಂದ ಸ್ಥಿರವಾಗಿ ಹಾಡಿದಳು.  ೯೧. ಶರೀರದ ಯಾವ ಭಾಗವೂ ಚಲಿಸದಿರಲಿಲ್ಲ ; ದೀರ್ಘವಾದ ಶರೀರವೂ ಹಾಗೆ ಪೂರ್ಣವಾಗಿ ಚಲಿಸಿತು. ಅವಳು ಪ್ರೇಕ್ಷಕರೆಲ್ಲರನ್ನು ಹಿಡಿದು ಮೆಟ್ಟಿದಳು; ಮಾರ್ಗಮಿಶ್ರವಿಲ್ಲದ ಇವಳ ದೇಶೀಯತೆ ಬಹು ರಮಣೀಯವಾಯಿತು; ಆದರೂ ಯಾರಿಗೂ ಅವಳು ಅನನಾಗಲಿಲ್ಲ ಎಂದು ಆಶ್ಚರ್ಯವಾಗುವ ಹಾಗೆ ತನ್ನ ಮುಂದೆ ನಾಟ್ಯವಾಡಿದ ತಿಲೋತ್ತಮೆಯನ್ನೂ ರಾಜತಾಪಸನಾದ ಅರ್ಜುನನು ಮೋಹಿಸಲಿಲ್ಲ. ವ|| ಹಾಗೆ ಆ ಅಪ್ಸರಸ್ತ್ರೀಯರು ಸಮೀಪದಲ್ಲಿಯೇ ಓಡಿಯಾಡಿಯೂ ಮನೋಹರವಾಗಿರುವ ಹಾಗೆ ಹಾಡಿಯೂ ಮನುಜಮಾಂಧಾತನಾದ ಅರ್ಜುನನನ್ನು ಸೋಲಿಸಲು ಅಶಕ್ತರಾಗಿ ಸಹಜಮನ್ಮಥನಾದ

ಇಲ್ಲಿಯ ಸೊರ್ಕು, ಚಕ್ಕಣ, ಸಾಗು ಎನ್ನುವ ಪದಗಳಿಗೆ ಸರಿಯಾದ ಅರ್ಥವಾಗಿಲ್ಲ. ಮದ್ಯಪಾನ ಮಾಡುವುದರಿಂದುಂಟಾಗುವ ಮೈಮರೆಯುವಿಕೆ, ಅಮಲೇರುವುದು ಎಂದು ಅರ್ಥವಾಗಬಹುದು.

ವ|| ಅಂತಾಕೆಗಳೆಡೆಯಾಡಿಯುಂ ಮನಂಗೊಳೆ ಪಾಡಿಯುಂ ಮನುಜಮಾಂಧಾತನಂ ಸೋಲಿಸಲಾಱದೆ ಸಹಜಮನೋಜನ ರೂಪಿಂಗಂ ಸುರತಮಕರಧ್ವಜನ ಸೌಂದರ್ಯಕ್ಕಂ ಗಂಧೇಭವಿದ್ಯಾಧರನ ಗಂಡಗಾಡಿಗಂ ತಾಮೆ ಸೋಲ್ತೆಯ್ದೆ ವಂದು-

ಕಂ|| ಬೂದಿ ಜೆಡೆ ಲಕ್ಕಣಂ ತಪ
ಕಾದುವೆರೞ್ದೊಣೆ ಶರಾಸನಂ ಕವಚಮಿವೆಂ|
ತಾದುವೊ ಮುತ್ತುಂ ಮೆೞಸುಂ
ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ|| ೯೨

ಚಂ|| ಕಡು ತಪದಿಂದೆ ನಿನ್ನ ಪಡೆವಾವುದೊ ಗಾವಿಲ ಸಗ್ಗಮಲ್ತೆ ಪೋ
ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮಲ್ತೆ ಸುಖಕ್ಕೆ ಪೇೞೊಡಂ|
ಬಡದವರಾರೊ ಪೆಂಡಿರೊಳಗಾರ್ ಪೆಱರಾಮೆ ದಲಾಮೆ ಬಂದು ಕಾ
ಲ್ವಿಡಿದಪೆವಿಂಬುಕೆಯ್ವೊಡಿವು ಮೆಲ್ಲಡಿಗಳ್ ಗಡ ಕರ್ಚು ಬೂದಿಯಂ|| ೯೩

ಕಂ|| ಕೋಕಿಳಕುಳಕಳ ಗಳನಿನ
ದಾಕುಳರವಮಿಂಪನಾಗಳುಂ ಪಡೆದುದು ನೋ|
ಡೀಕೆಗಳ ಚಳಿತ ಲುಳಿತ
ಭ್ರೂಕುಟಿಯೇ ಪರಮ ಸುಖದ ಕೋಟಿಯನೀಗುಂ|| ೯೪

ವ|| ಎಂದೆನಿತಾನುಂ ತೆಱದೊಳೞಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳುಂ ನುಡಿದುಂ ಕಾಲ್ವಿಡಿದುಮಚಳಿತಧೈರ್ಯನ ಮನಮಂ ಚಳಿಯಿಸಲಾಱದಚ್ಚರಸೆಯರಚ್ಚಿಗಂಗೊಂಡಂತಾಗೆಯುಂ ಗಂಧರ್ವರ್ ಗರ್ವಮನುೞದು ಪೋಗೆಯುಂ ಕಾಮದೇವನೇವಮಂ ಕೆಯ್ಕೊಂಡು ಸೀಂತಂತೆ ಮೊಗಮಾಡಿ ಪೋಗಿ ದೇವೇಂದ್ರನ ಮೊಗಮಂ ನೋಡಲ್ ನಾಣ್ಚಿರ್ದನಾಗಳಿಂದ್ರಂ ನರೇಂದ್ರತಾಪಸನ ಧೈರ್ಯಕ್ಕೆ ಮೆಚ್ಚಿ ಧರಾಮರವೇಷದೊಳಿಂದ್ರಕೀಲನಗೇಂದ್ರಮನಯ್ದೆವಂದು-

ಮ|| ಸ್ರ|| ಕಣಿಯಂ ಶೌರ್ಯಾಭಿಮಾನಕ್ಕೆಡಱದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬ
ಲ್ಕಣಿಯಂ ಕಲ್ಹಾರ ಸಾರಾಮೃತ ಶಶಿ ವಿಶದಾತ್ಮೀಯವಂಶಕ್ಕೆ ಚೂಡಾ|
ಮಣಿಯಂ ತೀವ್ರ ಪ್ರತಾಪ ದ್ಯುಮಣಿಯನೆರೆದರ್ಥಿವ್ರಜಂಗಳ್ಗೆ ಚಿಂತಾ
ಮಣಿಯಂ ಸಾಮಂತಚೂಡಾಮಣಿಯನಣಿಯರಂ ಬಂದು ಕಂಡಂ ಸುರೇಂದ್ರಂ|| ೯೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನಪ್ರಸನ್ನಗಂಭೀರವಚನರಚನ

ಚತುರಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಸಪ್ತಮಾಶ್ವಾಸಂ

ಅರ್ಜುನನ ರೂಪಕ್ಕೂ ಸುರತ ಮಕರ ಧ್ವಜನಾದ ಅವನ ಸೌಂದರ್ಯಕ್ಕೂ ಗಂಧೇಭವಿದ್ಯಾಧರನ ಪೌರುಷದ ಸೊಬಗಿಗೂ ತಾವೇ ಸೋತು ಅವನ ಸಮೀಪಕ್ಕೆ ಬಂದು ಅವನನ್ನೇ ಪ್ರಶ್ನಿಸಿದರು. ೯೨. ವಿಭೂತಿ ಮತ್ತು ಜಡೆಯ ಲಕ್ಷಣಗಳು ತಪಸ್ಸಿಗೆ ಹೊಂದಿಕೊಳ್ಳುತ್ತವೆ. ಆದರೆ ಎರಡು ಬತ್ತಳಿಕೆ ಬಿಲ್ಲು ಕವಚ ಇವು ಹೇಗೆ ಹೊಂದಿಕೊಳ್ಳುತ್ತವೆ? ಮುತ್ತನ್ನೂ ಮೆಣಸನ್ನೂ ಕೋದಂತಿರುವ ಈ ನಿನ್ನ ತಪಸ್ಸಿನ ರೀತಿ ಅದೆಂತಹುದು? ೯೩. ಎಲೋ ದಡ್ಡ, ತೀವ್ರವಾದ ತಪಸ್ಸಿನಿಂದ ನೀನು ಪಡೆಯಬೇಕಾದ ವಸ್ತು ತಾನೆ ಏನು? ಸ್ವರ್ಗವಲ್ಲವೇ, ಹೋಗು ಮೂರ್ಖ, ಮಾತನಾಡಬೇಡ. ಸ್ವರ್ಗದ ಫಲವೂ ಸುಖವೇ ಅಲ್ಲವೇ? ಸುಖಕ್ಕೆ ಒಪ್ಪದವರಾರಿದ್ದಾರೆ, ಸ್ತ್ರೀಯರಲ್ಲಿ ನಮಗಿಂತ ಸೌಂದರ್ಯವತಿಯರಾದವರು? ನಾವೇ ಅಲ್ಲವೇ (ಪರಮ ಸೌಂದರ್ಯವತಿಯರಾದವರು) ನಾವೇ ಬಂದು ನಿನ್ನ ಕಾಲನ್ನು ಹಿಡಿಯುತ್ತಿದ್ದೇವೆ. ಈ ಮೃದುವಾದ ನಿನ್ನ ಕಾಲುಗಳು ನಾವು ಆಶ್ರಯಿಸುವುದಕ್ಕೆ ಯೋಗ್ಯವಾದುವಲ್ಲವೇ? ಬೂದಿಯನ್ನು ತೊಳೆದುಕೊ. ೯೪. ಇಗೋ ಕೋಗಿಲೆಗಳ ಸಮೂಹದ ಕಂಠಧ್ವನಿ ಯಾವಾಗಲೂ ಮಾಧುರ್ಯವನ್ನು ಪಡೆದಿದೆ. ನೋಡು ಈ ಅಪ್ಸರೆಯರ ಚಲಿಸುತ್ತಿರುವ ವಕ್ರವಾದ ಹುಬ್ಬುಗಳ ತುದಿಗಳೇ ಸುಖದ ಪರಮಾವಯನ್ನುಂಟುಮಾಡುತ್ತವೆ. ವ|| ಎಂಬುದಾಗಿ ಎಷ್ಟೋ ರೀತಿಯ ಪ್ರೇಮದ, ಮದ್ದಿನ, ಚೆಲ್ಲಾಟದ, ಹುರುಡಿನ, ಕೋಪದ, ನೆಪದ ಪ್ರತಿಮಾತುಗಳನ್ನು ಆಡಿಯೂ ಕಾಲು ಹಿಡಿದೂ ಸ್ಥಿರಚಿತ್ತನಾದ ಅರ್ಜುನನ ಮನಸ್ಸನ್ನು ಕದಲಿಸಲಸಮರ್ಥರಾದರು. ಅಪ್ಸರಸ್ತ್ರೀಯರು ವ್ಯಸನಗೊಂಡವರಂತೆ ಅಸಮಾಧಾನವನ್ನು ಹೊಂದಿದರು. ಗಂಧರ್ವರು ತಮ್ಮ ಅಹಂಕಾರವನ್ನು ತೊರೆದರು. ಮನ್ಮಥನು ಅವಮಾನವನ್ನು ಹೊಂದಿ ಸೀಂತ ಹಾಗೆ ಮುಖವನ್ನು ಮಾಡಿಕೊಂಡು ಹೋಗಿ ದೇವೇಂದ್ರನ ಮುಖವನ್ನು ನೋಡಲು ನಾಚಿಕೆಗೊಂಡನು. ಆಗ ಇಂದ್ರನು ರಾಜತಾಪಸನಾದ ಅರ್ಜುನನ ಧೈರ್ಯಕ್ಕೆ ಮೆಚ್ಚಿ ಬ್ರಾಹ್ಮಣ ವೇಷದಲ್ಲಿ ತಾನೇ ಇಂದ್ರಕೀಲಪರ್ವತಕ್ಕೆ ಬಂದನು. ೯೫. ಶೌರ್ಯಾಭಿಮಾನಿಗಳಿಗೆ ಗಣಿಯೂ ಯುದ್ಧದಲ್ಲಿ ಪ್ರತಿಭಟಿಸಿದ

ಶತ್ರುಸೈನ್ಯಕೆ  ಬಹು ಶೂರನೂ, ಕಲ್ಹಾರ ಪುಷ್ಪದಂತೆಯೂ ಸಾರವತ್ತಾದ ಅಮೃತದಂತೆಯೂ, ಚಂದ್ರಮಂಡಲದಂತೆಯೂ ಸ್ವಚ್ಛವಾಗಿರುವ ತನ್ನ ವಂಶಕ್ಕೆ ತಲೆಯಾಭರಣವೂ ತೀಕ್ಷ್ಣವಾದ ಪ್ರತಾಪದಲ್ಲಿ ಸೂರ್ಯನೂ ಬೇಡುವ ಯಾಚಕವರ್ಗಕ್ಕೆ ಚಿಂತಾಮಣಿಯೂ ಸಾಮಂತಚೂಡಾಮಣಿಯೂ ಆದ ಅರ್ಜುನನನ್ನು ಇಂದ್ರನು ಬಂದು ಕಂಡನು.

ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಏಳನೆಯ ಆಶ್ವಾಸ.