ಷಷ್ಠಿಯ ಅಕಾರದ ದೀರ್ಘತ್ವ

ಪಲವುನೊಡಗೂಡಿರೆ ಸಯ್ತಲಸದೆ ಪೇೞ್ವೆಡೆಯೊಳಂ ಸ್ವಪಾದಾಂತದೊಳಂ |

ಪಲವಾಱನೆಯ ವಿ[1]ಭಕ್ತಿಯೊಳಘೂಚ್ಚಾ[2]ರಣೆ ಯಥೇಷ್ಟಮುೞದೆಡೆಗಳೊಳಂ ||೨೦||

ನೃಪನಾ-ನೃಪ-ನಂದನನಾ ನೃಪ-ವಧುವರ್ ನೆರೆದು ಸು[3]ಖದೊಳಿರೆ ಕೈ[4]ಕೊಂಡ- |

ತ್ತಪರಿಮಿತ-ರಾಗಮೆರ್ದೆಯಂ ನೃಪ-ಬಾಂಧವರಾ ಸುಮಿತ್ರರಾ ಪ[5]ರಿಜನದಾ ||೨೧||

ವೈಕಲ್ಪಿಕವಾದುದಕ್ಕೆ ಉದಾಹರಣೆ

ನೃಪನ ನರಪಾಲ-ತನಯನ ನೃಪ-ವಧುವರ್ ನೆರೆದು ಸುಖದಿನಿರೆ ಕೈಕೊಂಡ-|

ತ್ತಪರಿಮಿತ-ರಾಗಮೇ[6]ರ್ದೆಯಂ ನೃಪತಿ-ಸನಾಭಿಗಳ ಬಂಧು-ಜನದಾ ಕೆಳೆಯಾ ||೨೨||

೨೦.*ಷಷ್ಠೀ ವಿಭಕ್ತಿಯಲ್ಲಿರುವ* ಹಲವನ್ನು ಒಟ್ಟುಗೂಡಿಸಿ ಹೇಳುವಡೆಗಳಲ್ಲಿಯೂ, ಪಾದಾಂತ್ಯದಲ್ಲಿಯೂ ಷಷ್ಠೀವಿಭಕ್ತಿ-ಪ್ರತ್ಯಯವು ಧೀರ್ಘವಾಗುವುದು; ಮಿಕ್ಕೆಡೆಗಲ್ಲಿ ಅನಿಯತವಾಗಿ ಹ್ರಸ್ವವಿರಬಹುದು, ಇಲ್ಲವೆ ದೀರ್ಘವಿರಬಹುದು.

೨೧. *ಉದಾಹರಣೆ-* ‘ನೃಪನಾ ನೃಪನಂದನನಾ’ ನೃಪವಧುಗಳು ನೆರೆದು ಸುಖವಾಗಿರುವಾಗ ‘ನೃಪಬಾಂಧವರಾ ಸುಮಿತ್ರರಾ ಪರಿಜನದಾ’ ಅಪರಿಮಿತ ಸಂತೋಷವು ಅವರ ಹೃದಯವನ್ನು ಆವರಿಸಿತು. *ಈ ದೀರ್ಘಾದೇಶ ಹೊಸಗನ್ನಡದಲ್ಲಿ ಕಾಣದು; ಹಳಗನ್ನಡದಲ್ಲಿ ಮೊದಮೊದಲ ಶಾಸನಗಳಲ್ಲಂತೂ ಅಧಿಕವಾಗ ಕಾಣಬರುತ್ತದೆ. ಇಲ್ಲ ಮೊದಲ ಶಬ್ದಗಳಲ್ಲೆಲ್ಲ ಹಲವು ಷಷ್ಠ್ಯಂತಗಳು ಕೂಡಿಬಂದಿವೆ; ಕಡೆಯದು ಪಾದಾಂತ್ಯವಾಗಿದೆ.*

೨೨. *ವೈಕಲ್ಪಕವಾಗಿ-ಹ್ರಸ್ವ-ದೀರ್ಘಗಳು ಷಷ್ಠಿಯಲ್ಲಿ ಬರುವುದಕ್ಕೆ ಉದಾಹರಣೆ-* ‘ನೃಪನ ನರಪಾಲತನಯನ’ ‘ನೃಪತಿಸನಾಭಿಗಳ’ ‘ಬಂಧುಜನದಾ’ ‘ಕೆಳೆಯಾ’ ಈ ಲಕ್ಷ್ಯದಲ್ಲಿ ಮೊದಲ ಮೂರು ದೀರ್ಘದ ಬದಲು ಹ್ರಸ್ವವಾಗಿದೆ; ಕಡೆಯ ಎರಡರಲ್ಲಿ ‘ಕೆಳೆಯಾ’ (=ಸ್ನೇಹಿತರ) ಎಂಬುದು ಪಾದಾಂತವಾದ್ದರಿಂದ ಅಲ್ಲಿ ಗುರು ಕಡ್ಡಾಯ; ಅದರ ಹಿಂದಿನ ‘ಬಂಧುಜನದಾ’ ಎಂಬಲ್ಲಿ ಮಾತ್ರ ಕಡ್ಡಾಯವಲ್ಲವಾದ್ದರಿಂದ ವೈಕಲ್ಪಿಕವಾದ ದೀರ್ಘವೇ ಬಂದಿದೆ. ಪದ್ಯದ ಅನುವಾದ ೨೧ನೆಯ ಪದ್ಯದಂತೆಯೇ.

ಸಂಬೋಧನೆಯಲ್ಲಿ ದೀರ್ಘ

ಸಂಭೋದನೆ ದೀರ್ಘೋಕ್ತಿಯೊಳಿಂಬಾಗಿರೆ ಬರ್ಕುಮದನೆ ಪಲವೆಡೆಗಳೊಳೆಂ- |

ದುಂ ಬ[7]ಲ್ಲವರಿಡದಿರ್ಕಾದಂ ಬಾಯೞದೂಳ್ವವೋಲ್ ಕರಂ ವಿ[8]ರಸತರಂ ||೨೩||

ನೃಪತೀ ಪರೋಪಕಾರೀ ವಿಪುಳಗುಣೀ ವಿಶದ-ಶಶ-ಧರಾಯತ-ಕೀರ್ತೀ |

ವ್ಯಪಗತ-ಭಯಾ ದಯಾಲೂ ರಿಪು-ವರ್ಗಮನಲೆದು ಗೆಲ್ವೆಯಾಗಾಹವದೊಳ್ ||೨೪||

ಪುನರುಕ್ತಿಯ ಯುಕ್ತತೆ

ಅೞಪಿದವರುಂ ವಿಭೀತರುಮೞಲ್ದರುಂ ಸಲೆ ವಿಯೋಗದಿಂ ನಿಜ-ಜನದಿಂ |

ಕೞಯೆ ವ[9]ರಾರ್ಥಿಗಳುಂ ಬಾ[10]ಯೞದೂಳ್ಗಿಂತಿದನೆ ಯುಕ್ತಪುನರುಕ್ತಿಕಮಂ ||೨೫||

ಪುಲಿ ಪುಲಿ ಪರಿ ಪರಿ ಪೋ ಪೋಗೆಲೆಯೆ[11]ಲೆ ಪೆಱಪಿಂಗು ಪಿಂಗು ನಿಲ್ ನಿಲ್ ಬಾ ಬಾ |

ಬ[12]ಲಿ ಮನಮನಂಜದಂಜದೆ ತೊಲತೊಲಗೀ ಮೆೞೆಗೆ ಪುಲಿಯದೆಂಬುದು ಮಾರ್ಗಂ ||೨೬||

೨೩. (ಸಾಮಾನ್ಯವಾಗಿ) ಸಂಬೋಧನ ಪ್ರಥಮೆಯ ವಿಭಕ್ತಿಪ್ರತ್ಯಯ ದೀರ್ಘವಾಗಿ ಬಂದಾಗ ಚೆನ್ನಾಗಿರುವುದು. ಆದರೆ ಅದನ್ನೇ ಹಲವೆಡೆಗಳಲ್ಲಿ ತಿಳಿದವರೆಂದೂ ಬಳಸಬಾರದು; ಹಾಗೆ ಮಾಡಿದರೆ ಗೋಳಿಟ್ಟು ಆರ್ತಧ್ವನಿಯಿಂದ ಕೂಗಿದಂತೆ ಅದು (ಕಿವಿಗೆ) ತುಂಬಾ ವಿರಸವಾಗುವುದು.

೨೪. ‘ನೃಪತೀ! ಪರೋಪಕಾರೀ! ವಿಪುಳಗುಣೀ! ನಿರ್ಮಲಚಂದ್ರನಂತೆ ಧವಳಕೀರ್ತೀ! ನಿರ್ಗತಭಯಾ! ದಯಾಲೂ! ನೀನು ಶತ್ರುವರ್ಗವನ್ನು ಯುದ್ಧದಲ್ಲಿ ಬೆನ್ನಟ್ಟಿ ಗೆಲ್ಲುವವನಾಗು!’ *ಇದು ಅನೇಕ ಸಂಬೋಧನ ವಿಭಕ್ತಿಪ್ರತ್ಯಯಗಳು ದೀರ್ಘವಾದಾಗ ಉಂಟಾಗುವ ವೈರಸ್ಯದೋಷಕ್ಕೆ ತಮ್ಮ ಉದಾಹರಣೆಯೆಂಬುದು ಸ್ವಷ್ಟ.*

೨೫. ಅತಿಯಾಸೆಯವರೂ ಅಂಜಿದವರೂ ತಮ್ಮ ಪ್ರಿಯಜನರ ಸಾವಿಂದ ಅವರನ್ನಗಲಿ ಶೋಕದಲ್ಲಿರುವವರೂ, ವರ ಬೇಡುವವರೂ ಗೋಗರೆದು ಒಂದು ಪದವನ್ನು ಪುನರುಕ್ತಿಮಾಡಿ ಉಗ್ಗಡಿಸುವುದು ಸಮಂಜಸವೇ ಆಗುತ್ತದೆ. *ಕೞ*ಯೆ=ಸತ್ತಾಗ. ವರಾರ್ಥಿ=ವರ ಬೇಡುವವನು. ಬಾಯೞ*ದು=ಬಾಯಿಬಿಟ್ಟಿ, ಗೋಗರೆದು, ಗೋಳಾಡುತ್ತ, ಊಳ್=ಕೂಗು, ಉಗ್ಗಡಿಸು.*

೨೬. ‘ಹುಲಿ ಹುಲಿ!’, ‘ಓಡು ಓಡು!’, ‘ಹೋಗು ಹೋಗು!’, ‘ಎಲೆ ಎಲೆ!’, ‘ಹಿಮ್ಮೆಟ್ಟು, ಹಿಮ್ಮೆಟ್ಟು!’, ‘ನಿಲ್ಲು, ನಿಲ್ಲು!,’ಬಾ, ಬಾ!,’ ‘ಮನಸ್ಸನ್ನು ಗಟ್ಟಿಮಾಡು; ಅಂಜದಿರು, ಅಂಜದಿರು!,’ ‘ತೊಲಗು, ತೊಲಗು!”, ‘ ಈ ಮೆಳೆಗೆ ಹುಲಿ!’ ಎನ್ನುವುದು ಸೂಕ್ತವಾದ್ದರಿಂದ ‘ಮಾರ್ಗವೆನಿಸುತ್ತದೆ.

ಬಹುವಿಶೇಷಣಗಳ ಯುಕ್ತಾಯುಕ್ತತೆ

ರೂಪಕದೊಳಂ ವಿ[13]ಶೇಷಾಳಾಪೋದ್ದೇಶದೊಳಮಲ್ಲದುೞದೆಡೆಗಳೊಳಂ |

ಚಾ[14]ಪಳ-ಮತಿಗಳ್ ವಿರಸ-ಸಮೀಪಮನಿಡದಿರ್ಕೆ ಬಹು-ವಿಶೇಷಣ-ಗಣಮಂ ||೨೭||

ಸುಭಟರ್ಕಳ್ ಕವಿಗಳ್ ಸುಪ್ರಭುಗಳ್ ಚೆ[15]ಲ್ವರ್ಕಳಭಿಜನರ್ಕಳ್ ಗುಣಿಗಳ್ |

ಅಭಿಮಾನಿಗಳತ್ಯುಗ್ರರ್ ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್ ||೨೮||

ಅಂತಧಿಕ-ವಿ[16]ಶೇಷಣ-ಗುಣಮಂ ತಡೆಯದೆ ಪೇೞ್ವೊಡಂ[17]ಕಚಾರಣೆಗಳೊಳಂ |

ಸಂತಂ ಪೇ[18]ೞು ೞದಾವೆಡೆಯಂತರದೊಳಮಾಗದೆಂದನತಿಶಯಧವಳಂ ||೨೯||

ಪ್ರಾಸವಿಚಾರ

ನುತ-ಶಬ್ದಾಲಂಕಾರದೊಳತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ |

ಕೃತ-ಕೃತ್ಯ-ಮಲ್ಲ-ವಲ್ಲಭ-ಮ[19]ತದಿಂದಡಱ ಪ್ರಪಂಚಮೀ ತೆಱನಕ್ಕುಂ ||೩೦||


[1] ವಿಭಕ್ತಿಯೊಳಲಘುಚ್ಚರನೆಯೆ ‘ಬ’.

[2] ರಣೆಯೊಳೆಥೆಷ್ಟಮಳಿದೆಡೆ ‘ಬ’.

[3] ಸುಖದಿನಿರೆ ‘ಷಾ’.

[4] ಕೈಕೊಂಡೆತ್ತ ‘ಅ’.

[5] ಪರಿಜನವಂ ‘ಕ’.

[6] ರಾಗವೆರ್ದೆಯಂ ‘ಮ’.

[7] ಬಲ್ಲವರಿಡದಿಕ್ಕೆಯದಂ ‘ಪಾ’

[8] ವಿರಸಕರಂ ‘ಪಾ’

[9] ಪರಾರ್ತಿಗಳುಂ ‘ಮ’, ಪರಾರ್ಥಿಗಳುಂ ‘ಸೀ’.

[10] ಬಾಯೞದೂಳ್ಗಿಂತಿದನೆ ‘ಮ, ಸೀ’.

[11] ಎಲೆ ‘ಮ’.

[12] ಪುಲಿ ‘ಮ,ಕ’.

[13] ವಿಶೇಷದೊಳಾಪೋದ್ದೇಶ ‘ಅ’.

[14] ಚಾಪಲ ‘ಮ’.

[15] ಚೆಲ್ವರ್ಕಳ-ಭಿನವರ್ಕಳ್ ‘ಬ’.

[16] ವಿಶೇಷಣ-ಗುಣಮಂ ‘ಪಾ’.

[17] ಡಂಕ….ಚಾರಣೆಗಳಂ ‘ಪಾ’.

[18] ಪೇೞ್ದುೞದಾವೆಡೆ ‘ಕ’.

[19] ಮತದಿಂದದಱಾ ‘ಮ,ಸೀ’.