ಕರೆಯುತ್ತಿದ್ದೇನೆ ನಾನು ಷಾರಯಾರ್ :
ಬಾ ನನ್ನ ಷಹಜಾದೆ. ಹೊತ್ತಿ
ಉರಿಯುತ್ತಿದೆಯಲ್ಲೆ ಈ ನಮ್ಮ
ಬಾಗ್ದಾದ್. ಕಪ್ಪು ಹೆಡೆಯೆತ್ತಿ

ದಟ್ಟ ಹೊಗೆ ನನಗು ನಿನಗೂ ನಡುವೆ ;
ಕಾಣದು ದಾರಿ. ಮನೆಮುರಿದು
ದೀಪಗಳಾರಿ, ಕಾಲಿಟ್ಟಲ್ಲಿ ರಕ್ತ, ಬಿಟ್ಟವ-
ರ‍್ಯಾರೆ ಹೀಗೆ ಮುಚ್ಚಳ ತೆಗೆದು

ಶೀಶೆಯೊಳಗಿದ್ದ ಪೆಡಂಭೂತ ಸಂ-
ತಾನಗಳ ಏಕಾಏಕಿ ಹೊರಕ್ಕೆ ?
ಎಲ್ಲಿ ಆ ಮಂತ್ರದುಂಗುರ, ಸಿಂದಬಾದನ ಹಡಗು,
ನಿನ್ನ ಕತೆಯಲಿ ಬರುವ ಕೀಲು ಕುದುರೆ ?

ಸಾವಿರದೊಂದು ಕಾರಿರುಳನ್ನು ಕತೆ
ಹೇಳುತ್ತಲೇ ಗೆದ್ದ ಷಹಜಾದೆ
ಹೇಳೆ, ಈ ರಾತ್ರಿಗೆಂದು ಕೊನೆ ? ಯಾವ
ಕತೆ ನಮ್ಮನ್ನೀಗ ಉಳಿಸಬಹುದೆ ?

(* ಷಹಜಾದೆಯನ್ನು ಮದುವೆಯಾಗಿ ಅವಳಿಂದ ಸಾವಿರದ ಒಂದು ಕತೆಗಳನ್ನು ಕೇಳಿದ ಚಕ್ರವರ್ತಿ ಷಾರ್‌ಯಾರ್.)