ಒಂದು ದಿನ ಬೆಳಿಗ್ಗೆ ನಾಯಿಯ ಜತೆಗೆ ಹೊರಟೆ
ಹಕ್ಕಿಗಳ ಷಿಕಾರಿಗೆ. ವಿಸ್ತಾರವಾದ
ಜೊಂಡಿನ ಹರಹು; ನಡುನಡುವೆ ನೀರಲ್ಲಿ ಎಳೆ-
ಬಿಸಿಲ ಚಿನ್ನದ ಮೋಡಿ. ಕಲರವದ

ಹಕ್ಕಿಗಳ ವಾದ್ಯವೃಂದದ ಮೇಲೆ, ಎತ್ತರ-
ದಲ್ಲಿ ಬೆಳ್ಳಿರೆಕ್ಕೆಯ ಬಿಚ್ಚಿ ಹಾರುವ ಹಕ್ಕಿ
ಹಲವು; ಬಂದೂಕವೆತ್ತಿ, ಗುರಿನೋಡಿ, ಬಿಲ್ಲೆ-
ಳೆದು ಗುಂಡು ಹಾರಿಸಿದೆ ಬೆಳ್ಳನೆಯ ಹಕ್ಕಿ-

ಯೊಂದಕ್ಕೆ. ತತ್ತರಿಸಿ ಬಿಳಿಮುದ್ದೆಯಾಗಿ ದೊಪ್ಪನೆ
ಬಿತ್ತು ಅದೆಲ್ಲೊ ಹಬ್ಬಿರುವ ಜೊಂಡಿನ ನಡುವೆ
ತೆಪ್ಪಗೆ. ಅಪಘಾತಕ್ಕೆ ಬೆಚ್ಚಿದ ಹಾಗೆ ಇಡೀ
ಹಕ್ಕಿಗಳ ಹಿಂಡು ಹಾರಿತಾಕಾಶಕ್ಕೆ ಧಿಗ್ಗನೆ.

ಎಲ್ಲಿ ನಾ ಹೊಡೆದ ಹಕ್ಕಿ? ಹುಡುಕಬಹುದೇ ನಾನು
ಅದನ್ನು ಈ ನೀರು-ಜೊಂಡುಗಳ ಮಧ್ಯೆ? ಸನ್ನೆ-
ಮಾಡಿದ್ದೆ ತಡ ನುಗ್ಗಿತು ನಾಯಿ. ಅದು ಹುಡುಕಿ
ತಂದದ್ದು ನಾ ಹೊಡೆದ ಹಕ್ಕಿಯನ್ನಲ್ಲ ; ನಿನ್ನೆ-

ಯೋ ಮೊನ್ನೆಯೋ ಯಾರೋ ಹೊಡೆದ ಬೇರೊಂದು
ಹಕ್ಕಿಯನ್ನು ! ತಿಳಿಸಿ ಹೇಳುವುದು ಹೇಗೆ
ಇಂದು-ನಿನ್ನೆಯ, ತನ್ನ-ಪರರ ಭೇದಗಳನ್ನು ಈ ನನ್ನ
ನಾಯಿಗೆ ? ಅಥವಾ ಇದೆಲ್ಲವೂ ನಮ್ಮ ಭ್ರಮೆಯೆ ?