ಜಗತ್ ಪ್ರಸಿದ್ಧ ಕವಿ ಹಾಗೂ ನಾಟಕಕಾರನೆಂದು ಹೆಸರಾದ ಷೇಕ್ಸ್‌ಪಿಯರನ ಸ್ಟ್ರಾಫರ್ಡ್ ಅಪಾನ್ ಏವನ್ ಎಂಬ ಊರು ಇರುವುದು ಇಂಗ್ಲೆಂಡಿನ ನಟ್ಟ ನಡೂ ಭಾಗದಲ್ಲಿ, ಈ ದಿನ ಷೇಕ್ಸ್‌ಪ್ರಿಯರ್ ಕಂಟ್ರಿ ಎಂದು ಕರೆಯಲಾದ ಈ ಪ್ರದೇಶ ವಾರ್‌ವಿಕ್, ಕೆನಿಲ್‌ವರ್ತ್ ಇತ್ಯಾದಿ ಐತಿಹಾಸಿಕ ಸ್ಮಾರಕಗಳಿಂದ ಅಪ್ಪಟ ಇಂಗ್ಲಿಷ್ ಮಾದರಿಯ ಮನೆಗಳ ಗ್ರಾಮಾಂತರ ಪರಿಸರದಿಂದ ಉದ್ದಕ್ಕೂ ಏರಿಳಿವ ಹಸುರಿನ ನಡುವೆ ಬಳುಕಿ ಹರಿಯುವ ಹೊಳೆಗಳಿಂದ ತುಂಬ ರಮ್ಯವಾಗಿದೆ. ಈ ಪರಿಸರದ ಮಧ್ಯೆ, ಏವನ್ ನದಿಯ ದಂಡೆಯ ಮೇಲಿರುವ ಈ ಊರು, ಷೇಕ್ಸ್‌ಪಿಯರನ ಜನ್ಮಭೂಮಿ; ಇಂಗ್ಲೆಂಡಿನ ನಾಟ್ಯಪ್ರತಿಭೆಯ ಉಗಮಸ್ಥಾನ; ರಾಯಲ್ ಷೇಕ್ಸ್‌ಪಿಯರ್ ನಾಟಕ ಕಂಪನಿಯ ತವರುಮನೆ; ಸಾಹಿತಿಗಳ ಹಾಗೂ ನಾಟಕಕಾರರ ತೀರ್ಥಕ್ಷೇತ್ರ; ಜಗತ್ತಿನ ಸಾಹಿತ್ಯಾಭಿಮಾನಿಗಳ ಮತ್ತು ಪ್ರವಾಸಿಗಳ ಅಯಸ್ಕಾಂತ ಕೇಂದ್ರ.

ನಾವು ಬರ್ಟನ್‌ದಿಂದ ಒಂದೂವರೆ ಗಂಟೆಗಳ ಕಾಲದ ಕಾರಿನ ಪಯಣದ ನಂತರ ಸ್ಟ್ರಾಫರ್ಡ್ ಅಪಾನ್ ಏವನ್ ಅನ್ನು ತಲುಪಿದಾಗ ಬೆಳಗಿನ ಹನ್ನೊಂದು ಗಂಟೆ. ವಾರಾಂತ್ಯದ ದಿನವಾದದ್ದರಿಂದ ಮತ್ತು ನಿರಭ್ರವಾದ, ಹೊಳೆವ ಬಿಸಿಲಿನ ದಿನವಾದುದರಿಂದ, ವಾಹನಗಳ ದಟ್ಟಣೆ ಹಾಗೂ ಪ್ರವಾಸಿಗಳ ಸಂಖ್ಯೆ ವಿಶೇಷವಾಗಿಯೇ ಇತ್ತು. ಅಂತೂ ಸಾಕಷ್ಟು ಸುತ್ತಾಡಿ, ಕಾರ್ ಪಾರ್ಕಿಂಗ್ ಫ್ಲಾಟ್‌ನ ಮೂರನೆಯ ಹಂತದಲ್ಲಿ ಕಾರನ್ನು ನಿಲ್ಲಿಸಿ, ಮಾಹಿತಿ ಕೇಂದ್ರಕ್ಕೆ ಬಂದೆವು. ಪ್ರತಿ ಹದಿನೈದು ನಿಮಿಷಗಳಿಗೆ ಒಮ್ಮೆ ಗೈಡ್ ಸಹಿತ ಸಂಚಾರಕ್ಕೆ ಕರೆದೊಯ್ಯುವ ಬಸ್ಸುಗಳು ಸಿದ್ಧವಾಗಿದ್ದರೂ, ಮಾಹಿತಿ ಕೇಂದ್ರದಿಂದ ಪಡೆದುಕೊಂಡ ಸಂಚಾರದ ನಕ್ಷೆ ಮತ್ತಿತರ ವಿವರಗಳಿಂದ, ನಡೆದೇ ನೋಡಲು ತೀರ್ಮಾನಿಸಿದೆವು. ಯಾಕೆಂದರೆ ನಮ್ಮ ಗಮನಕ್ಕೆ ಬಂದಂತೆ ಸ್ಟ್ರಾಫರ್ಡ್ ಅಪಾನ್ ಏವನ್ ಅಂಥ ದೊಡ್ಡ ಊರೇನೂ ಅಲ್ಲ. ಷೇಕ್ಸ್‌ಪಿಯರನ ಕಾಲದ ಸಾಧಾರಣವಾದ ಹಳ್ಳಿ, ಈಗ ಕೊಂಚ ವಿಸ್ತರಿಸಿ ಒಂದು ಟೌನ್ ಆಗಿದೆ. ಆದರೆ ಈ ಟೌನಿನೊಳಗೆ ಅಂದಿನ ಹಳ್ಳಿ ಕಳೆದುಹೋಗಿಲ್ಲ. ಅನ್ನುವುದೆ ಇಲ್ಲಿನ ಸ್ವಾರಸ್ಯ. ಷೇಕ್ಸ್‌ಪಿಯರನ ಮನೆ, ಆ ಮನೆಯಿರುವ ಬೀದಿ, ಅದರ ಆಸುಪಾಸು, ಅವತ್ತು ಹೇಗಿತ್ತೋ, ಇವತ್ತೂ ಹಾಗೆಯೇ ಉಳಿದುಕೊಂಡಿದೆ. ಬೀದಿಯ ಹೆಸರುಗಳು ಕೂಡ ಬದಲಾಗಿಲ್ಲ. ಹೈಸ್ಟೀಟ್, ಚಾಪೆಲ್ ಸ್ಟ್ರೀಟ್, ಹೆನ್ಲಿಸ್ಟ್ರೀಟ್ ಅವೇ ಹಳೆಯ ಬೀದಿಗಳು, ಮರದ, ಮಾಸಲು ಹೆಂಚಿನ ಛಾವಣಿಯ ಮನೆಗಳು. ಅದೇ ನಾಲ್ಕು ವರ್ಷಗಳ ಹಿಂದಿನ ಹಳೆಯ ನೆನಪು ಕದಲದಂತೆ ನಿಂತಿದೆ ಈ ಬೀದಿಗಳಲ್ಲಿ. ಹೈಸ್ಟ್ರೀಟ್ ಮುಖ್ಯವಾಗಿ ಅಂಗಡಿ ಸಾಲುಗಳ ಪೇಟೆ ಬೀದಿ. ಅದರ ಮುಂದುವರಿಕೆಯಾದ ಚಾಪೆಲ್ ಸ್ಟ್ರೀಟ್, ಹಿಂದಿನ ಕಾಲದ ಟಿಂಬರ್ ಮರಗಳ ಮನೆಗಳ ಸಾಲಿನಿಂದ ಕೂಡಿದ ಬೀದಿ. ಹೈಸ್ಟ್ರೀಟಿನಲ್ಲಿರುವ ಒಂದು ಕಟ್ಟಡದ ವಿಶೇಷವೇನೆಂದರೆ – ಟಿಂಬರ್ ಮರದ, ತ್ರಿಕೋನಾಕಾರದ ಮೂರು ಹೆಂಚಿನ ಛಾವಣಿಯ ಈ ಮನೆ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ, ಜಾನ್ ಹಾರ್ವರ್ಡ್ ಅವರ ತಾಯಿಯ ಮನೆ. ಮೂರಂತಸ್ತಿನ ಈ ಮನೆಗೆ ಈಗಲೂ ಹಾರ್ವರ್ಡ್ ಹೌಸ್ ಎಂದೇ ಹೆಸರು. ೧೫೯೬ರಲ್ಲಿ ಬೆಂಕಿಯ ಅಪಘಾತಕ್ಕೆ ಒಳಗಾದ ಈ ಮನೆಯನ್ನು ಮೊದಲಿನಂತೆಯೇ ಪುನರ್ ರಚಿಸಲಾಗಿದೆ. ಷೇಕ್ಸ್‌ಪಿಯರ್‌ನ ಮನೆ ಇರುವುದು ಹೆನ್ಲಿ ಸ್ಟ್ರೀಟ್‌ನಲ್ಲಿ. ತುಂಬ ವಿಸ್ತಾರವಾದ ಹಾಗೂ ಎತ್ತರವಾದ ಈ ಮನೆಯಲ್ಲಿ ಷೇಕ್ಸ್‌ಪಿಯರ್ ಹುಟ್ಟಿದ್ದು, ೧೫೬೪ರಲ್ಲಿ. ಅವನ ಬಾಲ್ಯದ ದಿನಗಳು ಕಳೆದದ್ದೂ ಇಲ್ಲಿಯೇ. ಅವನ ತಂದೆ ಜಾನ್ ಷೇಕ್ಸ್‌ಪಿಯರ್ ತುಂಬ ಅನುಕೂಲಸ್ಥ. ಮಾಂಸ ಮತ್ತು ಉಣ್ಣೆಯ ವ್ಯಾಪಾರಿ. ಸ್ಟ್ರಾಫರ್ಡ್‌ನ ಇತರ ಅನೇಕ ಮನೆಗಳಂತೆ, ಈ ಮನೆಯೂ ಟಿಂಬರ್ ಮತ್ತು ಓಕ್‌ಗಳನ್ನು ಅರ್ಧದಷ್ಟು ಬಳಸಿ ಕಟ್ಟಿದ ಕಟ್ಟಡ. ವಿಸ್ತಾರವಾದ ಈ ಮಹಡಿಯ ಮನೆಯ ನೆಲಕ್ಕೆ ನೀಲಿ-ಕಂದು ಬಣ್ಣದ ಚಪ್ಪಡಿ ಕಲ್ಲುಗಳನ್ನು ಹಾಸಲಾಗಿದೆ. ಗೋಡೆಗಳಿಗೆ ಟಿಂಬರ್ ಮರದ ಹಲಗೆಗಳನ್ನು ಅಳವಡಿಸಲಾಗಿದೆ. ಛಾವಣಿಗೆ ಮಾಸಲು ಬಣ್ಣದ ಕೆಂಪು ಹೆಂಚುಗಳನ್ನು ಹೊದಿಸಲಾಗಿದೆ. ಮನೆ ದೊಡ್ಡ ದೊಡ್ಡ ಕೋಣೆಗಳಿಂದ ವಿಸ್ತಾರವಾಗಿದೆ. ಕೋಣೆಗಳಲ್ಲಿ ಇಟ್ಟಿಗೆ ಕಲ್ಲುಗಳಿಂದ ನಿರ್ಮಿಸಲಾದ ಬೆಂಕಿಗೂಡು (Fire place) ಗಳಿವೆ. ಮಲಗುವ ಕೊಠಡಿಗಳಲ್ಲಿ ಒಡ್ಡೊಡ್ಡಾದ ಮಂಚಗಳು. ಸುಮಾರು ಐದಡಿ ಉದ್ದ, ಎರಡಡಿ ಎತ್ತರ, ಎರಡೂವರೆ ಅಡಿ ಅಗಲದ ಸಂದೂಕಗಳು. ಈ ಸಂದೂಕದ ಮೇಲೆ ಕೆತ್ತನೆ ಕೆಲಸಗಳು. ಹಳೆಯ ಕಾಲದ ದೊಡ್ಡ ಗಾತ್ರದ ಅಡುಗೆಯ ಪಾತ್ರೆಗಳು, ಜಾಲರಿಗಳು. ಮಹಡಿಯ ಮೇಲೂ ದೊಡ್ಡ ಕೊಠಡಿಗಳು. ಹಳೆ ಕಾಲದ ಕುರ್ಚಿ, ಟೇಬಲ್, ಮಂಚಗಳು. ಷೇಕ್ಸ್‌ಪಿಯರ್ ಹುಟ್ಟಿದ ಕೋಣೆ ಮಹಡಿಯ ಮೇಲಿದೆ. ಅಲ್ಲೂ ಇಟ್ಟಿಗೆ, ಕಲ್ಲುಗಳ ಬೆಂಕಿಯ ಗೂಡಿದೆ. ಆ ಕೊಠಡಿಯ ಅಗಲವಾದ ಕಿಟಕಿಯ ಮೇಲೆ ಸರ್ ವಾಲ್ಟರ್ ಸ್ಕಾಟ್, ಥಾಮಸ್ ಕಾರ‍್ಲೈಲ್, ಐಸ್ಯಾಕ್ ವಾಟ್ಸ್ ಮೊದಲಾದವರು ಬಂದು ಹೋದದ್ದರ ದಾಖಲೆ (ಅವರ ರುಜುವಿನ ಸಹಿತ) ಯನ್ನು ತೂಗುಹಾಕಲಾಗಿದೆ. ಹತ್ತೊಂಬತ್ತನೆಯ ಶತಮಾನದವರೆಗೂ ಷೇಕ್ಸ್‌ಪಿಯರನ ವಂಶಸ್ಥರೇ ಇಲ್ಲಿ ವಾಸವಾಗಿದ್ದರಂತೆ.

ಷೇಕ್ಸ್‌ಪಿಯರ್ ಜನಿಸಿದ ಈ ಮನೆಗೆ ಪ್ರವೇಶಿಸುವ ಮುನ್ನ ಇದಕ್ಕೆ ಹೊಂದಿಕೊಂಡಂತೆ ಷೇಕ್ಸ್‌ಪಿಯರನ ಜೀವನ ಹಾಗೂ ಸಾಧನೆಗಳಿಗೆ ಸಂಬಂಧಿಸಿದ ಒಂದು ಪ್ರದರ್ಶನಾಲಯವಿದೆ. ಇದರಲ್ಲಿ ಷೇಕ್ಸ್‌ಪಿಯರನ ಬದುಕಿನ ಹಲವು ಹಂತಗಳಿಗೆ ಸಂಬಂಧಿಸಿದ ಮಾಹಿತಿಗಳು ಸಚಿತ್ರವಾಗಿ, ಅಂಕಿ, ಅಂಶ, ದಾಖಲೆಗಳ ಸಹಿತ ನಿರೂಪಿತವಾಗಿವೆ. ಷೇಕ್ಸ್‌ಪಿಯರನ ಕೌಟುಂಬಿಕ ಹಾಗೂ ಸಾಹಿತ್ಯಕ ವೃತ್ತಾಂತಗಳೂ, ಅವನ ನಾಟಕಗಳ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಹೆಸರಾಂತ ನಟರ ಚಿತ್ರ ಸಹಿತ ವಿವರಗಳೂ, ಅವನ ಸಮಕಾಲೀನವಾದ ಇನ್ನೆಷ್ಟೋ ಸಂಗತಿಗಳೂ ಈ ಪ್ರದರ್ಶನಾಲಯದಲ್ಲಿವೆ. ಈ ಎಲ್ಲದರ ಮೂಲಕ ಹಾದು ಬಂದರೆ, ಷೇಕ್ಸ್‌ಪಿಯರನ ಮನೆಗೆ ಪ್ರವೇಶಿಸುವ ಮೊದಲಿನ ಹೂವಿನ ತೋಟ, ಅನಂತರ ಮನೆಯೊಳಕ್ಕೆ ಪ್ರವೇಶಿಸುವ ಹಿತ್ತಲ ಬಾಗಿಲಿದೆ. ಈ ಬಾಗಿಲ ಮೂಲಕ ಪ್ರವೇಶಿಸಿದರೆ, ಹಳೆಯಕಾಲದ ಪಿಂಗಾಣಿ ಪಾತ್ರೆಗಳೂ, ಗೋಡೆಯ ಮೇಲೆ ತೂಗುಹಾಕಿದ  ಕೆಲವು ಚಿತ್ರಗಳೂ ಕಣ್ಣಿಗೆ ಬೀಳುತ್ತವೆ. ಆದರೆ ಷೇಕ್ಸ್‌ಪಿಯರ್ ಆಗಲಿ, ಅವನ ಹೆಂಡತಿ ಮಕ್ಕಳಾಗಲಿ ಹೇಗಿದ್ದರು ಎಂಬುದನ್ನು ತಿಳಿಯಲು ಸಾಧ್ಯವಾಗುವ ಚಿತ್ರಗಳೊಂದೂ ಇಲ್ಲ. ಈಗ ದೊರೆಯುವ ಚಿತ್ರಗಳೇನಿದ್ದರೂ ಷೇಕ್ಸ್‌ಪಿಯರನ ಮೊಮ್ಮಕ್ಕಳ ಕಾಲಕ್ಕೆ ಸಂಬಂಧಿಸಿದವುಗಳು.

ಷೇಕ್ಸ್‌ಪಿಯರ್ ಈ ಮನೆಯಲ್ಲಿ ಇದ್ದದ್ದು, ಈ ಊರನ್ನು ಬಿಟ್ಟು  ಅವನು ಲಂಡನ್ನಿಗೆ ಹೋಗುವ ಕಾಲದವರೆಗೆ ಮಾತ್ರ. ಷೇಕ್ಸ್‌ಪಿಯರನ ಕಾಲದ ಗ್ರಾಮರ್  ಸ್ಕೂಲೊಂದು ಇನ್ನೂ ಇರುವುದಾದರೂ ಅವನ ಬಾಲ್ಯ ಜೀವನ ಹಾಗೂ ಶಿಕ್ಷಣದ ಯಾವ ವಿವರಗಳೂ ದೊರೆಯುವುದಿಲ್ಲ. ಆದರೆ ಅವನು ತನ್ನ ಬಾಲ್ಯ ಹಾಗೂ ಹರೆಯದ ದಿನಗಳನ್ನು ಕಳೆದದ್ದು ಈ ಮನೆಯಲ್ಲಿ. ೧೫೮೫ರ ಸುಮಾರಿಗೆ, ಅಂದರೆ ಅವನ ೨೧ನೆ ವಯಸ್ಸಿನ ವೇಳೆಗೆ ಆತ ಲಂಡನ್ನಿಗೆ ಹೋಗಿ, ಕೆಲವು ವರ್ಷಗಳಲ್ಲಿ ಸುಪ್ರಸಿದ್ಧ ನಾಟಕಕಾರನೆಂದು ಹೆಸರು ಮಾಡಿದ ಅನಂತರ ಮತ್ತೆ ತನ್ನ ಹುಟ್ಟೂರಿಗೆ ಹಿಂದಿರುಗಿದ್ದು ಕ್ರಿ.ಶ. ೧೫೯೭ರಲ್ಲಿ. ಅಂದಿನಿಂದ ತನ್ನ ಮರಣ ಕಾಲದವರೆಗೆ, ಅಂದರೆ ಕ್ರಿ.ಶ. ೧೬೧೬ರವರೆಗೆ ಸ್ಟ್ರಾಫರ್ಡ್ ಅಪಾನ್ ಏವನ್‌ದಲ್ಲಿ ಆತ ವಾಸಮಾಡಿದ್ದು, ಹೆನ್ಲಿ ಸ್ಟ್ರೀಟಿನ ಈ ಮನೆಯಲ್ಲಿ ಅಲ್ಲ; ಅವನು ತಾನೇ ಕಟ್ಟಿಸಿಕೊಂಡ ಬೇರೊಂದು ಮನೆಯಲ್ಲಿ. ಈಗ ಆ ಮನೆ ಇಲ್ಲ. ಕಾರಣಾಂತರದಿಂದ ಹದಿನೆಂಟನೆಯ ಶತಮಾನದಲ್ಲಿ ಆ ಮನೆ ನೆಲಸಮವಾಗಿ, ಅದರ ತಳಪಾಯದ ಗುರುತುಗಳನ್ನು ಮಾತ್ರ ಈಗ ಕಾಣಬಹುದು. ಆದರೆ ಅದರ ಪಕ್ಕದಲ್ಲೆ ‘ವಾಷ್ ಹೌಸ್’ ಎಂಬ ಕಟ್ಟಡದಲ್ಲಿ, ಷೇಕ್ಸ್‌ಪಿಯರ್ ವಾಸವಾಗಿದ್ದ ಮನೆಯ ಅಪರೂಪದ ಪೀಠೋಪಕರಣಗಳನ್ನು ಉಳಿಸಿಕೊಳ್ಳಲಾಗಿದೆ. ಇದಕ್ಕೆ ಈಗ ನ್ಯೂಪ್ಲೇಸ್ ಎಂದು ಕರೆಯಲಾಗುತ್ತಿದೆ.

ಷೇಕ್ಸ್‌ಪಿಯರನ ಮನೆಯನ್ನು ನೋಡಿಕೊಂಡು, ಇದೇ ಬಗೆಯ ಮನೆಗಳನ್ನೊಳಗೊಂಡ ಬೀದಿಯ ಮೂಲಕ ಏವನ್ ನದೀತೀರಕ್ಕೆ ಬಂದೆವು. ನದಿ ತೀರಾ ಅಗಲವಾಗೇನೂ ಇಲ್ಲ. ನದಿಯ ಎರಡೂ ಕಡೆ ವಿಸ್ತಾರವಾದ ಪಾರ್ಕುಗಳಿವೆ. ಪಾರ್ಕುಗಳಲ್ಲಿ ಮಕ್ಕಳಿಗೆ ಆಟದ ಸೌಕರ್ಯಗಳೂ, ನೆರಳನ್ನು ಚೆಲ್ಲುವ ಮರಗಳೂ ಇವೆ. ನದಿಯ ಇಕ್ಕೆಲದಲ್ಲೂ, ನೀರಿನಲ್ಲಿ ತಮ್ಮ ನೆರಳನ್ನು ನೋಡಿಕೊಳ್ಳುವಂತೆ ಬಾಗಿದ, ದಟ್ಟವಾದ ವಿಲ್ಲೋ ವೃಕ್ಷಗಳಿವೆ. ನದಿಯ ಮೇಲೆ ಹಾದು ಹೋಗಿರುವ ಮಧ್ಯಕಾಲೀನ ಮಾದರಿಯ ಎರಡು ಸೇತುವೆಗಳಿವೆ. ಕಳೆದ ಶತಮಾನದವರೆಗೂ, ಇಂಗ್ಲೆಂಡಿನ ವಾಣಿಜ್ಯೋದ್ಯಮದ ಸಾರಿಗೆ ವ್ಯವಸ್ಥೆಯ ಮಾಧ್ಯಮವಾದ ಈ ನದಿಯಲ್ಲಿ ಈಗ ಪ್ರವಾಸಿಗಳಿಗಾಗಿ ದೋಣಿ ವಿಹಾರದ ವ್ಯವಸ್ಥೆಯಿದೆ. ಒಂದು ಗಂಟೆಯ ಸಂಚಾರಕ್ಕೆ ಎರಡು ಪೌಂಡುಗಳು. ಬೆಳಗಿಂದ ಸಂಜೆಯವರೆಗೆ ಜನ ಈ ನದೀ ಜಲದಲ್ಲಿ ದೋಣಿಗಳಲ್ಲಿ ಕೂತು ವಿಹರಿಸುತ್ತಾರೆ. ನದಿಯ ತುಂಬ, ತೇಲುವ ದೋಣಿಗಳ ಅಕ್ಕಪಕ್ಕದಲ್ಲಿ ನಿರ್ಭಯವಾಗಿ ತೇಲುವ ಹಂಸೆಗಳು, ಬಾತುಕೋಳಿಗಳು, ಅವುಗಳಿಗೆ ಬ್ರೆಡ್ಡಿನ ಚೂರನ್ನೆಸೆದು ಖುಷಿಪಡುವ ಮಕ್ಕಳು. ನದಿಯ ಎರಡೂ ಕಡೆ ಪಾರ್ಕುಗಳ ತುಂಬ ಜನ. ಬಾಡಿಗೆ ಕುರ್ಚಿ ಹಾಕಿಸಿಕೊಂಡು ಆರಾಮವಾಗಿ ಕಾಲು ಚಾಚಿದವರು; ಜಮಾಖಾನ ಹಾಸಿಕೊಂಡು ಮರಮರಗಳ ಕೆಳಗೆ ಕೂತು ಮನೆಯಿಂದ ತಂದ ಉಪಹಾರ ಮಾಡುತ್ತ ಮಕ್ಕಳು ಮರಿಗಳೊಂದಿಗೆ ಕೂತವರು ; ವೇಗವಾಗಿ ಧಾವಿಸುವ ದೋಣಿಗಳನ್ನು ನೋಡುತ್ತ ನದೀ ದಡದ ಮೇಲೆ ನಿಂತವರು; ಪಾರ್ಕುಗಳ ಮೂಲೆಯಲ್ಲಿ ಮನೋರಂಜನೆಯ ಆಟಗಳನ್ನು ಪ್ರದರ್ಶಿಸುವ ಕಲೆಗಾರರು; ವಿವಿಧ ದೇಶದ ವಿವಿಧ ಬಣ್ಣದ, ವಿವಿಧ ವೇಷದ ಪ್ರವಾಸಿಗಳು. ಒಂದು ಬಗೆಯ ಸಂಕ್ಷಿಪ್ತ ವಿಶ್ವವೇ ಏವನ್ ನದಿಯ ತೀರದಲ್ಲಿ ಜಮಾಯಿಸಿತ್ತು.

ನಾವೂ ಮನೆಯಿಂದ ತಂದ ಪುಳಿಯೋಗರೆ, ಮೊಸರನ್ನ ಇತ್ಯಾದಿಗಳನ್ನು ಮರವೊಂದರ ಕೆಳಗೆ ಕೂತು ತಿಂದು ಮಧ್ಯಾಹ್ನದ ‘ಊಟ’ವನ್ನು ಮುಗಿಸಿದೆವು. ಅನಂತರ ನಾನೂ ಪ್ರಸಾದ್ ಇಬ್ಬರೂ ನದಿಯ ದಂಡೆಯ ಗುಂಟ ರಾಯಲ್ ಷೇಕ್ಸ್‌ಪಿಯರ್ ಥಿಯೇಟರ್ ಕಡೆಗೆ ಹೊರಟೆವು. ನದೀ ದಡಕ್ಕೆ ಜೋಡಿಸಿದಂತೆ ಹಲವು ಬಗೆಯ ಉಪಹಾರ ಗೃಹಗಳಲ್ಲಿ, ಅದೂ ಇದೂ ತಿನ್ನುತ್ತ ಪ್ರವಾಸಿಗಳು ಹಾಯಾಗಿ ಕೂತಿದ್ದರು. ನಾವು ವಿಲ್ಲೋ ಮರಗಳ ಪಕ್ಕದಲ್ಲಿ ನಡೆಯುತ್ತಾ, ನದಿಯಲ್ಲಿ ದೋಣಿ ಸಂಚಾರದ ಸಂಭ್ರಮದಲ್ಲಿದ್ದವರ ಕಡೆ ಕೈ ಬೀಸುತ್ತಾ ರಾಯಲ್ ಥಿಯೇಟರ್ ಬಳಿಗೆ ಬಂದೆವು. ಇದು ಅಂತರ್‌ರಾಷ್ಟ್ರೀಯ ಖ್ಯಾತಿಯ ರಂಗಮಂದಿರ. ವರ್ಷಾದ್ಯಂತವೂ ಈ ಭವ್ಯವಾದ ನಾಟಕಶಾಲೆಯಲ್ಲಿ ಷೇಕ್ಸ್‌ಪಿಯರ್‌ನ ಮತ್ತು ಇತರ ಸುಪ್ರಸಿದ್ಧರ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. ಷೇಕ್ಸ್‌ಪಿಯರ್‌ನ ನೆನಪಿಗಾಗಿ ಮೊದಲು ಈ ರಂಗಮಂದಿರವನ್ನು ಕ್ರಿ.ಶ. ೧೮೭೯ರಲ್ಲಿ ಚಾರ್ಲ್ಸ್ ಫ್ಲವರ್ ಎಂಬಾತ ಕಟ್ಟಿಸಿದ. ಈಗ ಜಗತ್ ಪ್ರಸಿದ್ಧವಾಗಿರುವ ಷೇಕ್ಸ್‌ಪಿಯರ್ ಉತ್ಸವ ಪ್ರಾರಂಭವಾದದ್ದೂ ಇಲ್ಲಿಯೇ. ಈ ಥಿಯೇಟರ್ ೧೯೨೬ರಲ್ಲಿ ಅಕಸ್ಮಾತ್ತಾಗಿ ಬೆಂಕಿಗೆ ಸಿಕ್ಕು ನಾಶವಾದಾಗ, ಜಗತ್ತಿನ ಎಲ್ಲ ಷೇಕ್ಸ್‌ಪಿಯರ್ ಅಭಿಮಾನಿಗಳು – ಅದರಲ್ಲೂ ಮುಖ್ಯವಾಗಿ ಅಮೆರಿಕನ್ನರು, ಹೊಸ ಕಟ್ಟಡವನ್ನು ಕಟ್ಟಿಸಿ ಅದನ್ನು ಷೇಕ್ಸ್‌ಪಿಯರನಿಗೆ ಅಂಕಿತ ಮಾಡಿದರು. ಈಗ ಅದನ್ನೆ ರಾಯಲ್ ಷೇಕ್ಸ್‌ಪಿಯರ್ ಥಿಯೇಟರ್ ಎಂದು ಕರೆಯಲಾಗುತ್ತಿದೆ. ಇದು ಪ್ರಾರಂಭವಾದದ್ದು ೧೯೩೨ರಂದು. ರಂಗ ಪ್ರದರ್ಶನಗಳಿಗೆ ಅಸಾಧಾರಣವಾದ ವ್ಯವಸ್ಥೆಗಳನ್ನು ಇದು ಕಲ್ಪಿಸಿಕೊಟ್ಟಿದೆ. ಇಲ್ಲಿ ಅಭಿನಯಿತವಾಗುವ ಷೇಕ್ಸ್‌ಪಿಯರನ ನಾಟಕಗಳನ್ನು ನೋಡಲು ಪ್ರಪಂಚದ ಎಷ್ಟೋ ದೇಶದ ರಂಗಾಸಕ್ತರು ಇಲ್ಲಿಗೆ ಬರುತ್ತಾರೆ. ನಾವು ಈ ಥಿಯೇಟರ್‌ನ ಮೊಗಸಾಲೆಗೆ ಪ್ರವೇಶಿಸಿದಾಗ ಒಳಗೆ ‘ಮ್ಯಾಕ್‌ಬೆತ್’ – ಮಧ್ಯಾಹ್ನದ ಮ್ಯಾಟಿನಿ ಷೋ ನಡೆಯುತ್ತಿತ್ತು. ಹೀಗಾಗಿ ನಾವು ಆ ಥಿಯೇಟರನ್ನು ಒಳಹೊಕ್ಕು ನೋಡಲು ಸಾಧ್ಯವಾಗಲಿಲ್ಲ. ನನಗೆ ಆ ಅವಕಾಶ ನಾನು ಇಂಗ್ಲೆಂಡಿಂದ, ಇಂಡಿಯಾಕ್ಕೆ ಹಿಂದಿರುಗುವ ಮುನ್ನ ಅಕ್ಟೋಬರ್ ತಿಂಗಳಲ್ಲಿ ಲಭ್ಯವಾಯಿತು. ಒಳಗಿನ ಭವ್ಯ ವಿಸ್ತಾರವನ್ನು ನಾನು ಷೇಕ್ಸ್‌ಪಿಯರ್‌ನ ಮಿಡ್ ‘ಸಮ್ಮರ್ ನೈಟ್ಸ್ ಡ್ರೀಂ’ ಎಂಬ ನಾಟಕವನ್ನು ವೀಕ್ಷಿಸಿದ ಸಂದರ್ಭದಲ್ಲಿ, ನೋಡಲು ಸಾಧ್ಯವಾಯಿತು. ರಾಯಲ್ ಷೇಕ್ಸ್‌ಪಿಯರ್ ಥಿಯೇಟರ್ ಜತೆಗೆ ಇಲ್ಲಿ ಇನ್ನೂ ಎರಡು ರಂಗಮಂದಿರಗಳಿವೆ. ಒಂದು ಸ್ವಾನ್ ಥಿಯೇಟರ್, ಮತ್ತೊಂದು ದಿ ಅದರ್ ಪ್ಲೇಸ್. ಈ ಮೂರು ನಾಟಕಶಾಲೆಗಳಲ್ಲಿ ದಿನವೂ ನಾಟಕಗಳ ಪ್ರದರ್ಶನ ಇರುತ್ತದೆ. ಷೇಕ್ಸ್‌ಪಿಯರನ ನಾಟಕಗಳ ಜೊತೆಗೆ ಜಗತ್ತಿನ ಬೇರೆ ಬೇರೆ ನಾಟಕಕಾರರ ನಾಟಕಗಳ ಪ್ರದರ್ಶನಗಳೂ ಉಂಟು. ಈ ಪ್ರದರ್ಶನಗಳನ್ನು ಕುರಿತ ಪುಸ್ತಿಕೆಯಲ್ಲಿ ಮೊದಲೆ ಮುಂಬರುವ ಮೂರು ತಿಂಗಳ ರಂಗಪ್ರದರ್ಶನದ ವಿವರಗಳು ದೊರೆಯುತ್ತವೆ. ಅವುಗಳಿಗೆ ಮುಂಗಡ ಟಿಕೆಟನ್ನು ಕಾಯ್ದಿರಿಸುವ ಬಗ್ಗೆ ಸೂಚನೆಗಳಿರುತ್ತವೆ. ಈ ವಿವರಗಳನ್ನು ನೋಡಿ ದೂರ ದೂರದ ಊರುಗಳಲ್ಲಿರುವವರು ದೂರವಾಣಿಯ ಮೂಲಕವೂ ಟಿಕೆಟ್‌ಗಳನ್ನು ಬುಕ್ ಮಾಡಬಹುದು.  ಈ ಥಿಯೇಟರ್‌ಗಳ ಕಡೆಗೆ ಕಣ್ಣಾಡಿಸುತ್ತ ನಾವು ಮತ್ತೆ ನದೀತೀರದ ದಾರಿಯನ್ನು ಹಿಡಿದು, ಪಾರ್ಕೊಂದರ ಮೂಲಕ ಷೇಕ್ಸ್‌ಪಿಯರನ ಸಮಾಧಿ ಇರುವ ಹೋಲಿ  ಟ್ರಿನಿಟಿ ಚರ್ಚಿನ ಕಡೆ ಹೊರಟೆವು. ಆಗಸ್ಟ್ ತಿಂಗಳ ಅಪರೂಪದ ಬಿಸಿಲ ದಿನ ಅದು. ಅಂದಿನ ಬಿಸಿಲಿನಲ್ಲಿ ಕೊಂಚ ತಾಪವೂ ಇದ್ದಂತಿತ್ತು. ಸದಾ ಛಳಿ-ಮಳೆ-ಗಾಳಿ-ಮಂಜುಗಳ ಶೈತ್ಯದಲ್ಲೇ ಕಾಲ ಹಾಕಬೇಕಾದ ಇಲ್ಲಿನ ಜನಕ್ಕೆ ಈ ಬಗೆಯ ಬಿಸಿಲು, ಒಂದು ರೋಮಾಂಚಕಾರಿಯಾದ ವರವೇ ಸರಿ. ಹೀಗಾಗಿ ಅನೇಕರು ತಮ್ಮ ಬನಿಯನ್‌ಗಳನ್ನೂ ಬಿಸಾಕಿ ಬರೀ ಚಡ್ಡಿಗಳಲ್ಲೆ ಓಡಾಡುತ್ತಿದ್ದರು. ಕೇವಲ ತೊಡೆಗಟ್ಟು – ಮೊಲೆಗಟ್ಟಿನ  ಮಹಿಳೆಯರು ಪಾರ್ಕಿನ ಹಸುರು ಹುಲ್ಲಿನ ಮೇಲೆ ಅಂಗಾತ ಬಿದ್ದುಕೊಂಡು ಸೂರ್ಯಾತಪವನ್ನು ಆಸ್ವಾದಿಸುತ್ತಿದ್ದರು. ಇವರ ನಡುವೆ ಹಾದು ನಾವು ಹೋಲಿ ಟ್ರಿನಿಟಿ ಚರ್ಚಿನ ಆವರಣವನ್ನು ಪ್ರವೇಶಿಸಿದಂತೆ ದಾರಿಯ ಎರಡೂ ಬದಿಯ ಗೋರಿಗಳ ಮೇಲಿನ  ಬರೆಹಗಳು ಕಣ್ಣನ್ನು ಸೆಳೆಯುವಂತಿದ್ದವು. ಎತ್ತರವಾಗಿ, ನೀಲಿಯಾಕಾಶಕ್ಕೆ ಚೂಪಾದ ಗೋಪುರವನ್ನೆತ್ತಿಕೊಂಡು, ನೆಲಕ್ಕೆ ಬೇರೂರಿ ಹರಸಿಕೊಂಡು ಚರ್ಚಿನ ಬಳಿಗೆ ಬಂದೆವು. “Welcome to the House of God” ಎಂಬ ಫಲಕವೊಂದು ನಮ್ಮನ್ನು ಸ್ವಾಗತಿಸಿತು. ‘ಭಗವಂತನ ಮನೆಗೆ ಸುಸ್ವಾಗತ’ ಎಂಬ ಫಲಕವನ್ನು ನೋಡಿ ನನ್ನ ಮನಸ್ಸು ತುಂಬಿ ಬಂದಿತು. ಥಟ್ಟನೆ ನಮ್ಮ ದೇಶದ ದೇವಾಲಯಗಳ ನೆನಪೂ ಬಂದಿತು. ನನ್ನ ದಕ್ಷಿಣಭಾರತ ಪ್ರವಾಸ ಕಾಲದಲ್ಲಿ ಅನೇಕ ದೊಡ್ಡ ದೊಡ್ಡ ದೇವಸ್ಥಾನಗಳ ಬಾಗಿಲಲ್ಲಿ ‘ವಿದೇಶಿಯರಿಗೆ ಪ್ರವೇಶವಿಲ್ಲ’ ಎಂಬ ಹಲಗೆಯನ್ನು ನೋಡಿ ನಾನು ತುಂಬ ವ್ಯಥೆಗೊಂಡಿದ್ದೆ. ದೇವರೆಂದರೆ ಯಾರೋ ಕೆಲವರಿಗೆ, ಅದೂ ಯಾವುದೋ ಒಂದು ಧರ್ಮಕ್ಕೆ ಸೇರಿದವರಿಗೆ ಮೀಸಲಾದದ್ದು ಎಂಬ ಮಡಿವಂತ ಪುರೋಹಿತಷಾಹಿಯ ಈ ಧೋರಣೆ, ದೇವರ ಕಲ್ಪನೆಯನ್ನು ಅವಮಾನಗೊಳಿಸುವಷ್ಟು ವಿಕೃತವೂ ಅನುದಾರವೂ ಆಗಿದೆ, ಎಂಬುದರ ಬಗ್ಗೆ ಯಾರೂ ಯೋಚನೆಯನ್ನೆ ಮಾಡುವುದಿಲ್ಲವಲ್ಲ ಎಂದು ಕಸಿವಿಸಿಗೊಂಡಿದ್ದೆ. ಹಾಗೆಯೆ ಮಧ್ಯಾಹ್ನದ ಮಹಾ ಮಂಗಳಾರತಿಯಾದ ಮೇಲೆ ಪೂಜಾರಿಗಳು ದೇವಸ್ಥಾನದ ಬಾಗಿಲು ಬಂದ್ ಮಾಡಿ, ಬೀಗ ಜಡಿದು, ಬೀಗದ ಕೈಯ್ಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹೋದರೆಂದರೆ ಮತ್ತೆ ದೇವಸ್ಥಾನದ ಬಾಗಿಲು ತೆರೆಯುವುದು ಸಂಜೆಗೇ. ಈ ಎಲ್ಲ ನಡವಳಿಕೆಗಳಿಗೆ ಹೋಲಿಸಿದರೆ ಸದಾಕಾಲ ಬಾಗಿಲು ತೆರೆದಿರಿಸಿ ಭಗವಂತನ ಮನೆಗೆ ಸುಸ್ವಾಗತ ಎಂದು, ದೇವರ ಮಕ್ಕಳಾದ ಮನುಷ್ಯರನ್ನು ಒಳಗೆ ಕರೆಯುವ ಈ ಪ್ರವೃತ್ತಿ ಎಷ್ಟೊಂದು ಉದಾರವಾದದ್ದು- ಅಂದುಕೊಳ್ಳುತ್ತ ನಾವು ಒಳಗೆ ಪ್ರವೇಶಿಸಿದೆವು. ಒಳಗೆ ಪ್ರಾರ್ಥನೆಗಾಗಿ ಸಾಲಾಗಿ ಜೋಡಣೆಗೊಂಡ ಪೀಠಗಳು; ಪ್ರಶಾಂತವಾದ ಮೌನವನ್ನು ಕದಡದಂತೆ ಅಲ್ಲಲ್ಲಿ ಕೂತ ಭಕ್ತರು. ಅವರ ನಡುವೆ ಹಾದು ಪೂಜೆಯ ವೇದಿಕೆಯ ಕಡೆ ನಡೆದೆವು. ಅಲ್ಲೊಬ್ಬ ಪಾದ್ರಿ, ಪೂಜಾ ವೇದಿಕೆಯ ಬದಿಗೆ ಇದ್ದ ಷೇಕ್ಸ್‌ಪಿಯರನ ಸಮಾಧಿಯ ದರ್ಶನಕ್ಕೆಂದು, ಮೂವತ್ತು ಪೆನ್ನಿಗಳ ಟಿಕೆಟ್‌ಅನ್ನು ನಮ್ಮ ಕೈಗೆ ನೀಡಿದ. ನಾವು ಟಿಕೆಟ್‌ಪಡೆದು ಮುಂದೆ ಹೋದೆವು. ಚರ್ಚಿನ ಮುಖ್ಯ ಪೂಜಾವೇದಿಕೆಯ ನೆಲಮಾಳಿಗೆಯೊಳಗಿದೆ ಷೇಕ್ಸ್‌ಪಿಯರನ ಗೋರಿ. ಕ್ರಿ.ಶ. ೧೬೧೬ರಲ್ಲಿ ತೀರಿಕೊಂಡ ಷೇಕ್ಸ್‌ಪಿಯರನನ್ನು ಹೀಗೆ ಚರ್ಚಿನ ಒಳಭಾಗದಲ್ಲಿ ಸಮಾಧಿ ಮಾಡಿರುವುದು ಒಂದು ವಿಶೇಷ ಗೌರವವೇ ಸರಿ. ಈ ಗೌರವ ಅವನು ದೊಡ್ಡ ಕವಿ ಎಂಬ ಕಾರಣಕ್ಕಿಂತ, ಆತ ಕೆಲವು ಕಾಲ ಈ ಧರ್ಮಾಧಿಕರಣದ ರೆಕ್ಟರ್ ಆಗಿದ್ದನೆಂಬ ಕಾರಣಕ್ಕೆ ಲಭ್ಯವಾಗಿರಬಹುದೇನೋ. ಯಾಕೆಂದರೆ ಷೇಕ್ಸ್‌ಪಿಯರನ ಕಾಲದಲ್ಲಿ ಅವನ ಸಮಕಾಲೀನತೆ ಅವನ ಮಹತ್ತನ್ನು ಈ ಹೊತ್ತಿನಂತೆ ಗುರುತಿಸಿರಲಿಕ್ಕಿರಲಿಲ್ಲವೆನ್ನುವುದು ಸಂಭವನೀಯವಾದ ಸಂಗತಿಯಾಗಿದೆ. ಅವನ ಗೋರಿಯ ಮೇಲಿನ ಗೋಡೆಯ ಮೇಲೆ ಕಮಾನಿನಾಕಾರದ ಗೂಡೊಂದರಲ್ಲಿ, ಈ ಹೊತ್ತು ಚಿತ್ರಗಳ ಮೂಲಕ ಪರಿಚಿತವಾಗಿರುವ ಷೇಕ್ಸ್‌ಪಿಯರನ ಪ್ರತಿಮೆಯೂ, ಅದರ ಕೆಳಗೆ ಲಿಖಿತವೂ ಇವೆ. ಷೆಕ್ಸ್‌ಪಿಯರನ ಗೋರಿಯ ಬದಿಗೆ, ಅವನ ವಿಧವಾಪತ್ನಿ ಆನಿಹಾತ್‌ವೇ ಮತ್ತು ಅವನಿಗೆ ತೀರಾ ಹತ್ತಿರದ ಅಳಿಯ ಮಗಳು ಮತ್ತು ಇತರರ ಗೋರಿಗಳೂ ಇವೆ.

ಷೇಕ್ಸ್‌ಪಿಯರನ ಸಮಾಧಿಗೆ ಕೈ ಮುಗಿದು, ನಿಶ್ಯಬ್ದವಾದ ಆ ‘ದೇವರ ಮನೆ’ಯಿಂದ ಹೊರಕ್ಕೆ ಬಂದು ಮತ್ತೆ ನದಿಯ ದಂಡೆಯ ಗುಂಟ ನಡೆದೆವು. ದಟ್ಟವಾದ ವಿಲ್ಲೋ ಮರಗಳು ನದೀ ಜಲದಲ್ಲಿ ತಮ್ಮ ಛಾಯೆಯನ್ನು ಚೆಲ್ಲುತ್ತಿದ್ದವು; ಪ್ರವಾಸಿಗಳನ್ನು ಕೂರಿಸಿಕೊಂಡ ದೋಣಿಗಳು ಉತ್ಸಾಹದಿಂದ ಮುನ್ನಡೆದಿದ್ದವು. ನೀರಿನ ಅಂಚಿನಲ್ಲಿ ಹಂಸದ ಜಾತಿಯ ಬೆಳ್ಳನೆಯ ಬಾತುಕೋಳಿಗಳು ಎದೆಯುಬ್ಬಿಸಿಕೊಂಡು ತೇಲುತ್ತಿದ್ದವು. ಇದೇ ಪರಿಸರದಲ್ಲಿ ಷೇಕ್ಸ್‌ಪಿಯರ್ ಹುಟ್ಟಿ ಬೆಳೆದು, ಇದೇ ನದೀ ಜಲದಲ್ಲಿ ಕಾಲು ಇಳಿಯಬಿಟ್ಟುಕೊಂಡು ಕೂತದ್ದನ್ನೂ, ಗಾಳ ಹಾಕಿ ಮೀನುಗಳನ್ನು ಹಿಡಿದದ್ದನ್ನೂ, ಇದೇ ನೀರಿನಲ್ಲಿ ಇಳಿದು ಈಜಾಡಿದ್ದನ್ನೂ, ದೋಣಿಯಲ್ಲಿ ಕೂತು ವಿಹರಿಸುತ್ತಾ ಕನಸು ಕಂಡದ್ದನ್ನೂ – ಕಲ್ಪಿಸಿಕೊಳ್ಳುತ್ತ, ಅದು ಹೇಗೆ ಈ ಹಳ್ಳಿಯ ಹುಡುಗ ತನ್ನ ಅದ್ಭುತ ಪ್ರತಿಭೆಯಿಂದ ಜಗತ್ತನ್ನೆ ಚಕಿತಗೊಳಿಸುವ ಮಹಾನ್ ನಾಟಕಕಾರನಾದ ಎಂದು ಆಶ್ಚರ್ಯಪಡುತ್ತ ನಿಧಾನವಾಗಿ ನಡೆದೆ. ಇಂಡಿಯಾದವರಾದ ನಮಗೆ, ಕಾಳಿದಾಸನ ಪರಿಚಯವಾಗುವುದಕ್ಕೆ ಮೊದಲೆ, ಈ ಷೇಕ್ಸ್‌ಪಿಯರ್ ನಮ್ಮ ಹೃದಯಕ್ಕೆ ಹತ್ತಿರವಾದದ್ದು ವಸಾಹತು ಷಾಹಿ ಸಂದರ್ಭದ ಪರಿಣಾಮವಾದ ಇಂಗ್ಲಿಷ್ ಶಿಕ್ಷಣದ ಮಹಿಮೆಯಿಂದ ಅನ್ನುವುದು ನಿಜವಾದರೂ, ಷೇಕ್ಸ್‌ಪಿಯರ್‌ನ ಜಗತ್ತಿಗೆ, ಆ ಮೂಲಕ ಪಶ್ಚಿಮದ ಮುಖಾಮುಖಿಗೆ ಈ ದೇಶದ ಮನಸ್ಸು  ತೆರೆದುಕೊಂಡದ್ದು ತುಂಬ ಒಳ್ಳೆಯದೇ ಆಯಿತು. ಷೇಕ್ಸ್‌ಪಿಯರನ ಸತ್ವ ನಿಜಕ್ಕೂ ಲೋಕಾಕರ್ಷಕವಾದದ್ದು. ಕಾಲ-ದೇಶ-ಭಾಷೆಗಳ ಗಡಿಯನ್ನು ದಾಟಿ ಎಲ್ಲರ ಕವಿಯಾದ ಈತನ ನಾಟಕಗಳು  ಭಾಷಾಂತರಗೊಳ್ಳದಿರುವ ಭಾಷೆಗಳೇ ಇಲ್ಲವೇನೋ ಈ ಜಗತ್ತಿನಲ್ಲಿ.

ಇಂಥ ಕವಿಯ ಜನ್ಮದಿನೋತ್ಸವವನ್ನು ಈ ಊರಿನಲ್ಲಿ ಪ್ರತಿ ವರ್ಷವೂ ಏಪ್ರಿಲ್ ೨೩  ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಷೇಕ್ಸ್‌ಪಿಯರನ ಸಾಹಿತ್ಯಾಭಿಮಾನಿಗಳಿಂದ ಅವನ ಕೃತಿಯನ್ನು ಕುರಿತ ಅಧ್ಯಯನ, ಸಂಶೋಧನೆಗಳನ್ನು ಕೈಕೊಂಡ ವಿಮರ್ಶಕರಿಂದ, ಸಂಶೋಧಕರಿಂದ, ಚರ್ಚೆ, ವಿಚಾರ ಸಂಕಿರಣ, ಕಾವ್ಯ ಗೋಷ್ಠಿ, ನಾಟಕ ಪ್ರದರ್ಶನ ಇತ್ಯಾದಿಗಳ ಮೂಲಕ ಅವನ ನೆನಪಿಗೆ ಗೌರವ ಸಲ್ಲಿಸಲಾಗುತ್ತದೆ. ಷೇಕ್ಸ್‌ಪಿಯರ್ ಉತ್ಸವವೆಂದು ಹೆಸರಿಸಲಾದ ಈ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಬಂದ ಪ್ರತಿಷ್ಠಿತ ವ್ಯಕ್ತಿಗಳು, ಸಾಹಿತ್ಯ, ಕಲೆ, ನಾಟಕ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಕ್ತಿಗಳು, ವರ್ಣರಂಜಿತವಾದ ಈ ಉತ್ಸವದಲ್ಲಿ ನಡೆದು ಟ್ರಿನಿಟಿ ಚರ್ಚಿನ ಒಳಭಾಗದಲ್ಲಿರುವ ಷೇಕ್ಸ್‌ಪಿಯರನ ಸಮಾಧಿಗೆ ಗೌರವ ಸಲ್ಲಿಸುತ್ತಾರೆ.

ಮತ್ತೆ ಸ್ವಲ್ಪ ಹೊತ್ತು ಷೇಕ್ಸ್‌ಪಿಯರನ ಈ ಊರ ನಡುವೆ ಸುತ್ತಾಡಿ, ಒಂದಷ್ಟು ಚಹಾ ಕುಡಿದು, ಮಧ್ಯಾಹ್ನ ಮೂರು ಗಂಟೆಯ ನಂತರ ಷೇಕ್ಸ್‌ಪಿಯರನ ಹೆಂಡತಿಯಾದ ಆನಿ ಹಾತ್‌ವೇಯ ಕಾಟೇಜಿನ ಕಡೆಗೆ ಕಾರಿನಲ್ಲಿ ಹೊರಟೆವು. ಸ್ಟ್ರಾಫರ್ಡ್ ಅಪಾನ್ ಏವನ್ನಿನ ಷೇಕ್ಸ್‌ಪಿಯರ್‌ನ ಮನೆಯಿಂದ ಆನಿ ಹಾತ್‌ವೇಯ ಕಾಟೇಜ್‌ಗೆ ಕೇವಲ ಒಂದೂವರೆ ಮೈಲಿ. ಆ ಕಾಟೇಜ್ ಇರುವ ಸ್ಥಳ ಷಾಟರಿ ಎಂಬ ಹಳ್ಳಿ. ಈಗ ಆ ಹಳ್ಳಿ ವಿಸ್ತಾರಗೊಂಡ ಸ್ಟ್ರಾಫರ್ಡ್‌ನ ಒಂದು ಭಾಗವೇ ಆಗಿದೆ. ಷೇಕ್ಸ್‌ಪಿಯರ್ ಒಲಿದು ಮದುವೆಯಾದದ್ದು ಈ ಹಳ್ಳಿಯ ಆನಿ ಹಾತ್‌ವೇ ಎಂಬಾಕೆಯನ್ನು. ಮದುವೆಯಾಗುವಾಗ ಷೇಕ್ಸ್‌ಪಿಯರ್‌ನ ವಯಸ್ಸು ಕೇವಲ ಹದಿನೆಂಟು; ವಧು ಮಾತ್ರ ಇವನಿಗಿಂತ ಎಂಟು ವರ್ಷ ದೊಡ್ಡವಳು. ಅಷ್ಟೆ ಅಲ್ಲ ಷೇಕ್ಸ್‌ಪಿಯರ್ ಈಕೆಯನ್ನು ಮದುವೆ ಮಾಡಿಕೊಂಡಾಗ ಆಕೆ ಮೂರು ತಿಂಗಳ ಗರ್ಭಿಣಿ. ಇದು, ಅಂದಾಗಲೀ, ಇಂದಾಗಲಿ ಈ ದೇಶದ ಸಂಸ್ಕೃತಿಯಲ್ಲಿ ಆಶ್ಚರ್ಯಪಡಬೇಕಾದ ಸಂಗತಿಯೇನಲ್ಲ. ಷೇಕ್ಸ್‌ಪಿಯರನ ಯೌವನದ ಪ್ರಣಯ ಹಾಗೂ ಸಾಹಿತ್ಯಕ ಸಂಬಂಧಗಳ ನೆನಪುಗಳನ್ನು ಹೆಣೆದುಕೊಂಡ ಆನಿ ಹಾತ್‌ವೇಯ ಕಾಟೇಜ್ ಈ ಹೊತ್ತಿಗೂ ದೂರದಿಂದಲೇ ಎದ್ದು ಕಾಣುವ ಒಂದು ವಿಶಿಷ್ಟ ರೀತಿಯ ಮನೆಯಾಗಿದೆ. ಹನ್ನೆರಡು ಕೋಣೆಗಳನ್ನುಳ್ಳ, ಈ ದೊಡ್ಡ ‘ಗುಡಿಸಲು ಮನೆ’, ಕಪ್ಪು ಹುಲ್ಲಿನ ಛಾವಣಿಯಿಂದ ಮತ್ತು ಅದರ ಮೂಲಕ ಎದ್ದುನಿಂತ ಎರಡು ಮಾಸಲು ಬಣ್ಣದ ಮಣ್ಣಿನ ಚಿಮಣಿಗಳಿಂದ, ನಾನೂರು ವರ್ಷಗಳ ಹಿಂದಿನ ಹಳ್ಳಿಯ ಜಮೀನ್ದಾರರ ಮನೆಯ ಮಾದರಿಯನ್ನು ಪ್ರದರ್ಶಿಸುತ್ತದೆ. ಹಿಂದೆಲ್ಲಾ ಮನೆಯ ಸುತ್ತ ಹೊಲಗಳಿದ್ದಿರಬೇಕು. ಈಗ ಮನೆಯ ಬದಿಗೇ ಜುಳು ಜುಳು ಹರಿಯುವ ಕಾಲುವೆಗಳಿವೆ. ಅದರ ಬದಿಗೊಂದು ತೋಟ. ಅಲ್ಲಿಯೂ ಏವನ್ ನದಿಗೆ ಸಂಬಂಧಿಸಿದ ಕಾಲುವೆಗಳ ನೀರಿನಲ್ಲಿ ಬಾತುಕೋಳಿಗಳು ಈಜುತ್ತವೆ. ಈ ತೋಟ ಈಗ ಒಂದು ಟೀ ಗಾರ್ಡನ್ ಆಗಿ ಪರಿವರ್ತಿತವಾಗಿ ಈ ಮನೆಗೆ ಲಗತ್ತಾದ ಸಣ್ಣ ಹೂವಿನ ತೋಟದ ಮೂಲಕ, ಮನೆಯ ಒಳಕ್ಕೆ ಹೋದರೆ ದಪ್ಪ ದಪ್ಪ ತೊಲೆಗಳ ಮತ್ತು ಕಂಬಗಳ ಹಾಗೂ ಗೋಡೆಗಳಿಗೆ ಜೋಡಿಸಲಾದ ಟಿಂಬರ್ ಮರದ ಹಲಗೆಗಳಿಂದ ಮನೆ ಅತ್ಯಂತ ಸುಭದ್ರವಾಗಿದೆ. ಕೆಳಗಿನ ಆರು ಕೋಣೆಗಳಲ್ಲಿ, ಒಂದು ಅಡುಗೆಯ ಮನೆ, ದೊಡ್ಡ ದೊಡ್ಡ ಒಲೆಗಳ ಮೇಲೆ ತೂಗು ಹಾಕಿದ ಹಿತ್ತಾಳೆ ಪಾತ್ರೆಗಳಿಂದ ಮತ್ತು ಬೆಂಕಿಗೂಡುಗಳಿಂದ ಕುತೂಹಲಕಾರವಾಗಿದೆ. ಮೆಟ್ಟಿಲೇರಿ ಹೋದರೆ ಮೇಲೆ ಬೆಡ್ ರೂಮುಗಳು; ದೊಡ್ಡ ದೊಡ್ಡ ಮರದ ಸಂದೂಕಗಳು; ರೂಕ್ಷವಾದ ಕುರ್ಚಿ ಟೇಬಲ್ಲುಗಳು; – ನಾಲ್ಕು ನೂರು ವರ್ಷಗಳ ಹಿಂದಣ ಮರಗೆಲಸದ ಪ್ರಾಯೋಜನಿಕ ದೃಷ್ಟಿಯ ಸಾಕ್ಷಿಯಾಗಿವೆ. ಮನೆಯ ಕೆಳಭಾಗದ ಮೊದಲ ಅಂತಸ್ತು ಷೇಕ್ಸ್‌ಪಿಯರನ ಕೃತಿಗಳ ಹಾಗೂ ಇನ್ನಿತರ ನೆನಪಿಗಾಗಿ ಕೊಂಡುಕೊಳ್ಳಬಹುದಾದ ವಸ್ತುಗಳ ಮಾರಾಟದ ಮಳಿಗೆಯಾಗಿದೆ. ಅದರೊಳಗಿಂದ ಹಾದು ಬಂದರೆ ವಿಸ್ತಾರವಾದೊಂದು ಹೂವಿನ ತೋಟವಿದೆ. ಈ ಮನೆ ಎಷ್ಟು ಹಳೆಯದೊ, ಈ ಹೂವಿನ ತೋಟವೂ ಅಷ್ಟೆ ಹಳೆಯದು. ಅಲ್ಲಿ ಆನಿ ಹಾತ್‌ವೇ ತಾನು ಬದುಕಿದ್ದಾಗ ನೆಟ್ಟು ಬೆಳೆಯಿಸಿದ ಹೂವಿನ ಗಿಡಗಳು  ಅದರದರ ಸ್ಥಾನದಲ್ಲಿ ಅಂದಿನಂತೆಯೆ ಇಂದೂ ಇವೆ ಎಂದು, ಈ ಕುರಿತ ಮಾಹಿತಿ ಪುಸ್ತಕದಲ್ಲಿ ಲಿಖಿತವಾಗಿದೆ.

ಸ್ಟ್ರಾಫರ್ಡ್ ಅಪಾನ್ ಏವನ್ನಿನ ಪರಿಸರದಲ್ಲಿ ಷೇಕ್ಸ್‌ಪಿಯರನ ಬದುಕಿನೊಂದಿಗೆ ಬೆಸೆದುಕೊಂಡ ಇನ್ನೂ ಎರಡು ಮನೆಗಳಿವೆ. ಒಂದು ವಿಲ್ಮಕೋಟ್ ಎಂಬಲ್ಲಿರುವ ಷೇಕ್ಸ್‌ಪಿಯರನ ತಾಯಿಯ ಮನೆ. ಇದನ್ನು ಮೇರಿ ಆರ್ಡೆನ್ಸ್ ಹೌಸ್ ಎಂದು ಕರೆಯಲಾಗಿದೆ. ಇನ್ನೊಂದು ಷೇಕ್ಸ್‌ಪಿಯರನ ಅಳಿಯನಾದ ಡಾ. ಜಾನ್ ಹಾಲ್ ಎಂಬಾತನ ಮನೆ. ಇದನ್ನು ಹಾಲ್ಸ್‌ಕ್ರಾಫ್ಟ್ ಎಂದು ಕರೆಯಲಾಗಿದೆ. ಷೇಕ್ಸ್‌ಪಿಯರನ ತಾಯಿ ಮೇರಿ ಅರ್ಡೆನ್ನಳ ಮನೆ, ಇಂಗ್ಲೆಂಡಿನ ಟ್ಯೂಡರ್ ಮನೆತನದ ರಾಜರ ಕಾಲದ ಒಂದು ಕೃಷಿಕರ ಮನೆಯ ಮಾದರಿಯಂತಿದೆ. ಷೇಕ್ಸ್‌ಪಿಯರನ ತಾಯಿ ಹುಟ್ಟಿ ಬೆಳೆದ, ಅವಳ ತೌರುಮನೆಯಿರುವ ವಿಲ್ಮ ಕೋಟ್, ಸ್ಟ್ರಾಫರ್ಡ್ ಅಪಾನ್ ಏವನ್ನಿನಿಂದ ಕೇವಲ ಮೂರು ಮೈಲಿ ದೂರದಲ್ಲಿದೆ. ಹತ್ತಿರದ ಆರ್ಡೆನ್ ಅರಣ್ಯದ ಟಿಂಬರ್ ಮರದಿಂದ ಕಟ್ಟಲಾದ ಈ ಮನೆಗೆ ಹೆಂಚು ಹೊದಿಸಿದ ಛಾವಣಿಗಳಿವೆ. ಈ ಮನೆಯಲ್ಲಿ ೧೯೩೦ ರವರೆಗೂ ಆರ್ಡೆನ್ನಳ ಮುಂದಿನ ತಲೆಮಾರಿನ ಬಂಧು- ಬಾಂಧವರು ವಾಸ ಮಾಡುತ್ತಿದ್ದರಂತೆ. ಈಗ ಇದು ಷೇಕ್ಸ್‌ಪಿಯರನ ಗ್ರಾಮಾಂತರ ಪರಿಸರದ ಒಂದು ಮ್ಯೂಸಿಯಂ ಆಗಿ ಪರಿವರ್ತಿತವಾಗಿ, ಟ್ಯೂಡರ್ ಅರಸು ಮನೆತನದ ಕಾಲದಿಂದ ಆಧುನಿಕ ಕಾಲದವರೆಗಿನ ಗ್ರಾಮಜೀವನದ ಕತೆಯನ್ನು ಕಟ್ಟಿಕೊಡುತ್ತದೆ. ಷೇಕ್ಸ್‌ಪಿಯರನ ಮಗಳಾದ ಸುಸಾನಳನ್ನು ಮದುವೆಯಾದ ಜಾನ್ ಹಾಲ್ ಎಂಬಾತನ ಮನೆ-ಹಾಲ್ಸ್ ಕ್ರಾಫ್ಟ್ – ಷೇಕ್ಸ್‌ಪಿಯರನ ಸಮಾಧಿಯಿರುವ ಟ್ರಿನಿಟಿ ಚರ್ಚಿನ ಹತ್ತಿರ ಇದೆ. ಷೇಕ್ಸ್‌ಪಿಯರನ ಮರಣದ ಅನಂತರ, ಷೇಕ್ಸ್‌ಪಿಯರ್, ‘ನ್ಯೂಪ್ಲೇಸ್’ನಲ್ಲಿ ಕಟ್ಟಿಸಿಕೊಂಡ ಹೊಸ ಮನೆಗೆ ಇವರಿಬ್ಬರೂ ಸ್ಥಳಾಂತರಗೊಳ್ಳುವ ವರೆಗೂ ಈ ಮನೆಯಲ್ಲಿಯೆ ವಾಸವಾಗಿದ್ದರೆಂದು ತೋರುತ್ತದೆ. ಈಗ ‘ಹಾಲ್ಸ್ ಕ್ರಾಫ್’ ಕೂಡ ಒಂದು ಮ್ಯೂಸಿಯಂ ಆಗಿದೆ. ಹದಿನಾರು ಹದಿನೇಳನೆಯ ಶತಮಾನಗಳ ಪೀಠೋಪಕರಣಗಳೂ, ವರ್ಣಚಿತ್ರಗಳೂ, ಷೇಕ್ಸ್‌ಪಿಯರನ ಕಾಲದ ವೈದ್ಯಕೀಯ ಪದ್ಧತಿಗಳನ್ನು ಪರಿಚಯಮಾಡಿಕೊಡುವ ಪ್ರದರ್ಶನಾಲಯವೂ ಈ ಮನೆಯ ಒಂದು ಭಾಗವಾಗಿದೆ. ಮನೆಯ ಸುತ್ತ ದೊಡ್ಡದೊಂದು ತೋಟವಿದೆ.

ಷೇಕ್ಸ್‌ಪಿಯರನಿಗೆ ಸಂಬಂಧಿಸಿದ ಈ ಎಲ್ಲ ಸ್ಮಾರಕಗಳನ್ನೂ ಮುಖ್ಯವಾಗಿ ಈ ಐದು ಮನೆಗಳನ್ನೂ, ಷೇಕ್ಸ್‌ಪಿಯರ್ ಜನ್ಮ ಭೂಮಿ ಟ್ರಸ್ಟ್ Shakspeare birth place Trust ಎಂಬ ಸ್ವತಂತ್ರ ವ್ಯವಸ್ಥೆಯೊಂದು ಸ್ವಾಧೀನಕ್ಕೆ ತೆಗೆದುಕೊಂಡು ನಿರ್ವಹಿಸುತ್ತದೆ. ಈ ಟ್ರಸ್ಟ್, ಇಂಗ್ಲೆಂಡಿನ ಪಾರ್ಲಿಮೆಂಟಿನ ಅನುಮೋದನೆಯಿಂದ ಶಾಸನಬದ್ಧವಾದ ಸ್ವಾಯತ್ತತೆಯನ್ನು ಪಡೆದುಕೊಂಡ ಒಂದು ಮಂಡಲಿಯಾಗಿದೆ. ಷೇಕ್ಸ್‌ಪಿಯರನ ಆಸ್ತಿ-ಪಾಸ್ತಿಗಳನ್ನು  ಸಂರಕ್ಷಿಸುವುದು, ಅವನ ಜೀವನ ಹಾಗೂ ಸಾಧನೆಗಳನ್ನು ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಯೋಜನೆಗಳನ್ನು ರೂಪಿಸುವುದು, ಷೇಕ್ಸ್‌ಪಿಯರನ ಕೃತಿಗಳ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಅಗತ್ಯವಾದ ಸಾಮಗ್ರಿಗಳನ್ನೂ ಅವಕಾಶಗಳನ್ನೂ ಒದಗಿಸುವುದು ಇತ್ಯಾದಿಗಳು ಈ ಟ್ರಸ್ಟಿನ ಆಶಯವಾಗಿವೆ. ಇದು ಸ್ವಯಂಸಂಪನ್ಮೂಲಗಳನ್ನು ರೂಢಿಸಿ ಕೊಂಡಿರುವುದರಿಂದ ಸರ್ಕಾರದ ಅನುದಾನದ ಹಂಗಿಗೆ ಒಳಗಾಗಿಲ್ಲ. ಷೇಕ್ಸ್‌ಪಿಯರ್ ಹುಟ್ಟಿದ ಸ್ಟ್ರಾಫರ್ಡ್ ಅಪಾನ್ ಏವನ್ನಿನ ಮನೆಯನ್ನು ಈ ಟ್ರಸ್ಟ್  ೧೮೪೭ರಲ್ಲಿಯೂ, ಷೇಕ್ಸ್‌ಪಿಯರ್ ಲಂಡನ್ನಿನಿಂದ ಹಿಂದಿರುಗಿ ಬಂದು ಕಟ್ಟಿಸಿಕೊಂಡ ‘ನ್ಯೂ ಪ್ಲೇಸ್’ನ ಮನೆಯನ್ನು ೧೮೬೨ರಲ್ಲಿಯೂ, ಷೇಕ್ಸ್‌ಪಿಯರನ ಹೆಂಡತಿಯಾದ ಆನಿ ಹಾತ್‌ವೇಯ ಕಾಟೇಜನ್ನು ೧೮೯೨ರಲ್ಲೂ,  ಷೇಕ್ಸ್‌ಪಿಯರನ ತಾಯಿ ಮೇರಿ ಆರ್ಡೆನ್ನಳ ಮನೆಯನ್ನು ೧೯೩೦ರಲ್ಲೂ ಷೇಕ್ಸ್‌ಪಿಯರನ ಅಳಿಯನಾಗಿದ್ದ ಡಾಕ್ಟರ್ ಜಾನ್ ಹಾಲ್‌ನ ‘ಹಾಲ್ಸ್‌ಕ್ರಾಫ್ಟ್ ಅನ್ನು ೧೯೪೯ರಲ್ಲೂ – ಈ ಟ್ರಸ್ಟ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಈ ಐದೂ ಮನೆಗಳನ್ನು ಸ್ಮಾರಕಗಳನ್ನಾಗಿ ಉಳಿಸಿದೆ. ಅಷ್ಟೆ ಅಲ್ಲ, ಈ ಎಲ್ಲ ಮನೆಗಳು ಅಂದು ಹೇಗಿದ್ದವೋ ಇಂದೂ ಹಾಗೆಯೇ ಕಾಣುವಂತೆ ‘ಸುಭದ್ರಗೊಳಿಸಿ’ ಉಳಿಸಿಕೊಂಡಿದೆ. ನಾಲ್ಕು ನೂರು ವರ್ಷಗಳ ಹಿಂದೆ ಷೇಕ್ಸ್‌ಪಿಯರ್ ಮತ್ತು ಆತನ ಬದುಕಿನೊಂದಿಗೆ ಬೆಸೆದುಕೊಂಡವರು, ಎಂಥ ಪರಿಸರದ ನಡುವೆ ಇದ್ದರೆಂಬ ಒಂದು ಸ್ಪಷ್ಟವಾದ ಜೀವನಚಿತ್ರವನ್ನು ಇಂದಿಗೂ ಈ ಮನೆಗಳು ಮೂಡಿಸುತ್ತವೆ. ಯಾವುದೇ ಆಧುನಿಕೀಕರಣದ ಮೂಲಕವೂ ಅಂದಿನ ವಾತಾವರಣವನ್ನು ಹದಗೆಡಿಸದೆ ಉಳಿಸಿಕೊಂಡಿರುವ ಕ್ರಮವನ್ನು, ಕವಿಗಳನ್ನು ಕುರಿತ ಸ್ಮಾರಕಗಳನ್ನು ನಿರ್ಮಿಸುವವರು ಅಗತ್ಯವಾಗಿ ಹೋಗಿ ನೋಡಬೇಕು. ಈ ಪ್ರತಿಯೊಂದು ಮನೆಗೂ ಲಗತ್ತಾಗಿರುವಂತೆ ಮಾಹಿತಿ ಕೇಂದ್ರಗಳೂ, ಒಬ್ಬ ಮಹತ್ವದ ಲೇಖಕನ ಬಗ್ಗೆ ತಿಳಿವಳಿಕೆ ನೀಡುವ ಪ್ರದರ್ಶನಾಲಯಗಳೂ ಇವೆ. ಈ ಒಂದೊಂದನ್ನೂ ನೋಡುವವರು ನಿರ್ದಿಷ್ಟವಾದ ಶುಲ್ಕವನ್ನು ತೆತ್ತು ಟಿಕೆಟ್ ಪಡೆದು ಪ್ರವೇಶಿಸಬೇಕಾಗುತ್ತದೆ.

ಸ್ಟ್ರಾಫರ್ಡ್ ಅಪಾನ್ ಏವನ್‌ನಲ್ಲಿ ಷೇಕ್ಸ್‌ಪಿಯರ್ ಸೆಂಟರ್ ಎಂಬ ಸಂಸ್ಥೆ ಯೊಂದಿದೆ. ಅತ್ಯಂತ ಆಧುನಿಕವಾದ ರಚನಾ ವಿನ್ಯಾಸವನ್ನುಳ್ಳ ಈ ಕಟ್ಟಡ ಷೇಕ್ಸ್‌ಪಿಯರ್ ಜನ್ಮಭೂಮಿ ಟ್ರಸ್ಟಿನವರ ಕೊಡುಗೆಯೇ. ಷೇಕ್ಸ್‌ಪಿಯರನ ನಾಲ್ಕುನೂರನೆ ಜನ್ಮ ದಿನೋತ್ಸವದ ನೆನಪಿಗಾಗಿ ಈ ಕೇಂದ್ರವನ್ನು ಜಗತ್ತಿನ ಷೇಕ್ಸ್‌ಪಿಯರ್ ಅಭಿಮಾನಿಗಳೆಲ್ಲರ ಉದಾರವಾದ ಕೊಡುಗೆಯಿಂದ, ೧೯೬೪ರಲ್ಲಿ ನಿರ್ಮಿಸಲಾಯಿತು. ಇದು ಷೇಕ್ಸ್‌ಪಿಯರನ್ನು ಕುರಿತು ಆಳವಾದ ಅಧ್ಯಯನ ನಡೆಸುವವರಿಗೆ ಅಗತ್ಯವಾದ ಆಕರ ಸಾಮಗ್ರಿಯನ್ನೂ ಮಾಹಿತಿಯನ್ನೂ ಒದಗಿಸುವ ನೆಲೆಯಾಗಿದೆ. ಇಲ್ಲಿ ವಿದ್ವಜ್ಜನರಿಗೆ ಪ್ರಿಯವಾಗಬಹುದಾದ ಗ್ರಂಥಭಂಡಾರವಿದೆ. ಇಲ್ಲಿ ಶ್ರೇಷ್ಠವಾದ ಕಲಾವಿದರಿಂದ ರಚಿತವಾದ ಚಿತ್ರಗಳೂ ಸಾಕಷ್ಟಿವೆ. ಜಾನ್ ಹಟ್ಟನ್‌ನು ಚಿತ್ರಿಸಿದ ಷೇಕ್ಸ್‌ಪಿಯರನ ನಾಟಕದ ವಿವಿಧ ಪಾತ್ರಗಳ ಚಿತ್ರಗಳು ಇಲ್ಲಿನ ಒಂದು ವಿಶೇಷ ಆಕರ್ಷಣೆ ಎನ್ನಬಹುದು.

ಷೇಕ್ಸ್‌ಪಿಯರನ ಜನ್ಮಭೂಮಿ, ಹಾಗೆ ಬಂದು ಹೀಗೆ ನೋಡಿ ಹೋಗಬಹುದಾದ ವಿಹಾರದ ಸ್ಥಳವಲ್ಲ. ಕಡೆಯ ಪಕ್ಷ ಮೂರು ನಾಲ್ಕು ದಿನಗಳಾದರೂ ಬೇಕು – ಷೇಕ್ಸ್‌ಪಿಯರನ ನಿಜವಾದ ನೆನಪುಗಳನ್ನು ನಮ್ಮ ಅಂತರಾಳಗಳಲ್ಲಿ ಮನೆ ಮಾಡುವುದಕ್ಕೆ. ಇಲ್ಲಿನ ನದೀತೀರದಲ್ಲಿ ಅಲೆದಾಡಬೇಕು; ನಾಲ್ಕುನೂರು ವರ್ಷಗಳ ಹಿಂದಿನ ಬೀದಿಗಳಲ್ಲಿ ಸುತ್ತಾಡಬೇಕು; ಷೇಕ್ಸ್‌ಪಿಯರ್‌ನಿಗೆ ಸಂಬಂಧಿಸಿದ  ಮನೆಗಳ ಸ್ಮಾರಕಗಳೊಳಗೆ ಪ್ರವೇಶಿಸಿ ಅವನು ಬಾಳಿ ಬದುಕಿದ ಪರಿಯನ್ನು ಕಲ್ಪಿಸಿಕೊಳ್ಳಬೇಕು; ಮೂರೂ ನಾಟಕ ಶಾಲೆಗಳಲ್ಲಿ ಪ್ರದರ್ಶಿತವಾಗುವ ನಾಟಕಗಳನ್ನು ನೋಡಿ ಆನಂದಿಸಬೇಕು; ವಿದ್ವದ್ ಗೋಷ್ಠಿಗಳಲ್ಲಿ ಹಾಗೂ ಉತ್ಸವಗಳಲ್ಲಿ ಪಾಲುಗೊಳ್ಳಬೇಕು. ಹೀಗೆ ಈ ‘ಬೇಕು’ಗಳ ಕನಸನ್ನು ಕಣ್ಣಲ್ಲಿ ತುಂಬಿಕೊಂಡು ನಾವು ಸ್ಟ್ರಾಫರ್ಡ್ ಅಪಾನ್ ಏವನ್ನನ್ನು ಬಿಟ್ಟುಹೊರಟಾಗ, ಆಗಲೇ ಸಂಜೆಯ ಸೂರ್ಯ ಪಡುವಣದ ಅಂಚನ್ನು ಸಮೀಪಿಸುತ್ತಿದ್ದ. ಒಂದೂವರೆ ಗಂಟೆಯ ಪಯಣದ ಹೆದ್ದಾರಿ ನಮ್ಮ ಎದುರಿಗೆ ಚಾಚಿಕೊಂಡಿತ್ತು.