ಕಾಯುತಿವೆ ಹಲವಾರು ಹರುಕುಗಡ್ಡದ ಹೊದರು,
ಇತ್ತ ಇನ್ನೊಂದಿಷ್ಟು ಬಿದಿರುಮೆಳೆಗಳ ಮಂಡೆ.
ಈ ಪಂಕ್ತಿಯಲ್ಲಿ ನಾನೂ ಒಬ್ಬ !
ನಡೆಯುತಿದೆ ಕೆಲಸ –
ಅರರೆ ! ಹೇಗೆ ಬಂದವನು
ಹೇಗಾಗಿ ಹೊರಗೆ ದಯಮಾಡಿಸಿದ !
ಮುಗಿದಿಲ್ಲ ಈಗಲೂ ಪವಾಡಗಳ ಕಾಲ !

ಇದು ಒಂದು ಯಂತ್ರಾಲಯ-
ಕತ್ತಿ, ಕತ್ತರಿ, ಬ್ರಷ್ಷು, ಮಿಷನ್ನು, ಸೋಪು ;
ನಿರ್ದಾಕ್ಷಿಣ್ಯವಾಗಿ ಮುಖದೆದುರು ತೆರೆದಿರುವ ಕನ್ನಡಿ.
ನಿಮ್ಮ ಮುಖವೇ ಹೀಗೆ ; ನೋಡಿಕೊಳಿ
ಬೇಕಿಲ್ಲ ಬೇರೆಯ ಮುನ್ನುಡಿ.
‘ಕ್ಷೌರಕೆ ಮೊದಲು’ ‘ಕ್ಷೌರದ ತುದಿಗೆ’
ಏನೆಂಥ ಗಾರುಡಿ !

ಬಗೆ ಬಗೆ ಸದ್ದು ಬೆಳೆದ ಹೊಲಗಳ ಮೇಲೆ ;
ಕತ್ತರಿಸಿದಂತೆ ಕೆಲಸಕ್ಕೆ ಬಾರದ ಪೈರು
ಉದುರುವುದು ಕೆಳಗೆ,
ಮಳೆಬರಲಿ, ಬರದಿರಲಿ, ಕೊರತೆಯೇ ಇಲ್ಲ ಈ ಬೆಳೆಗೆ !

ಬರಲೇ ಬೇಕು ಎಂಥ ತಲೆಯೂ ಇಲ್ಲಿ-
ಬಂದು ಒಪ್ಪಿಸಬೇಕು ಆಗಾಗ ತನ್ನ ವರದಿ.
ಆದರೊಂದೇ ಚಿಂತೆ :
ಇಷ್ಟೊಂದು ತಲೆ ಆಗಲೇ ಕಾದು ಕುಳಿತಿವೆಯಲ್ಲ,
ಇನ್ನು ಯಾವಾಗಲೋ ನನ್ನ ಸರದಿ !