ಅಂಗಳದವರೆಯ ಚಪ್ಪರದಡಿಯಲಿ
ಮೈಮರೆತೊರಗುವುದಾನಂದ!
ಮಲಗಿರೆ ನಡುವಗಲುರಿಬಿಸಿಲಲ್ಲಿ,
ಬೇಸಗೆ ಬಿಸಿಯುಸಿರಾಡುತಿರೆ,
ಹಸುರಾದೆಲೆಗಳ ಬಳ್ಳಿಯ ಕೆಳಗಡೆ
ತಂಪೊಳು ತೇಲುವುದೆನಿತಂದ!
ಬಣ್ಣದ ಹೂವಿನ ಹಕ್ಕಿಯು ಹಾರುತ
ಅವರೆಯ ಹೂವನು ಕುಡಿಯುತಿರೆ,
ಕೋಮಲಕಾಯದ ಬಣ್ಣದ ಚಿಟ್ಟೆಯು
ಕಣ್ಮನ ಮೋಹಿಸಿ ಹಾರುತಿರೆ,
ಹೊಳೆಯುವ ಕರಿಮೈ ಬಣ್ಣದ ದುಂಬಿಯು
ಹಾಡುತ ಝೇಂಕರಿಸಾಡುತಿರೆ,
ಕಬ್ಬದ ಹೆಣ್ಣನು ತಬ್ಬುತ ಒಬ್ಬನೆ
ಮುದ್ದಿಸಿ ಮುತ್ತಿಡೆ ಎನಿತಂದ!
ಹಗಲಿನ ಕನಸಿನ ಸೊಬಗಿನ ಊರಿನ
ಬನಗಳಲಲೆಯುವುದೆನಿತಂದ!
ಮೌನದ ಗೀತೆಯನಾಲಿಸಿಯಾಲಿಸಿ
ಕನಸಿನೊಳಲೆಯುವುದೇನಂದ!
ನೀರವ ವೀಣೆಯ ವೇಣುವನಾಲಿಸಿ
ಸೊಬಗನು ಹೀರುವುದೇನಂದ!
ಮಾಯೆಯ ನೆನೆನೆನೆದಣಕಿಸುತವಳನು
ಪೀಡಿಸಿ ಹಿಗ್ಗುವುದೆನಿತಂದ!
ಅಂಗಳದವರೆಯ ಚಪ್ಪರದಡಿಯಲಿ
ಮೈಮರೆತೊರಗುವುದಾನಂದ!