ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು, ನಲ್ಲೆ, ಸುಲಿಯ ಬಲ್ಲೆ!
ಮುತ್ತೊಂದುರೊಳೆ ಮೊಗೆದು ಮನದಣಿಯೆ ಸೊದೆಯಿಂಟಿ
ಆನಂದದಮರತೆಯ ಹೊಂದಬಲ್ಲೆ!

ಒಂದೆ ಆಲಿಂಗನದೊಳಿಹಪರಗಳೆರಡನೂ
ನೋಯಿಸದೆ ಒಲಿದು ನಾನಪ್ಪಬಲ್ಲೆ!
ಕಣ್ಣೊಂದು ನೋಟದೊಳೆ ಮಳೆಯಬಿಲ್ಲನು ನಗುವ
ನಿನ್ನ ಸೊಬಗೆಲ್ಲವನು ಕದಿಯಬಲ್ಲೆ!

ಸಂಯೋಗವೊಂದರೊಳು ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ!
ಮಲಗಿರುವ ಬಡಬಾಗ್ನಿ ನಾನೆನ್ನ ಕೆಣಕದಿರು:
ಗುಟುಕೊಂದರಲಿ ಕಡಲ ಕುಡಿಯಬಲ್ಲೆ!