ಜನ್ಮವು ಬರಿದಾಯ್ತೇ, ಹಾ!
ನಾನರಿಯದೆ ಜೀವೇಶನನು?

ಅರಸಿದೆನೆಲ್ಲಿಯು ದೊರಕನು ನಲ್ಲನು;
ಇನಿಯನೆಲ್ಲಿ ತಾನಡಗಿಹನೊ?
ತಳಿರೊಳು ಸೊಗದಲಿ ಕುಳಿತಿಹ ಕೋಗಿಲೆ
ಜಗದೊಡೆಯನ ನೀ ಕರೆಯುವೆಯಾ?
ಯಾವ ಬಾಸೆಯಲಿ ಕರೆಯುವೆ ಹೇಳೈ;
ಅಂತೆ ಕರೆಯೆ ನಾನೆಳಸುವೆನು.

ಮಹಿಮನ ಮೈಮೆಯ ಮೊರೆವೆಯ, ತುಂಬಿಯೆ?
ಬೋಧಿಸು ಮುಗುದೆಗೆ, ಹಾಡುವೆನು.
ನಗುತಿಹೆ ಏತಕೆ, ನಲಿಯುವ ಹೂವೇ?
ನಿನಗೆ ದಯಾಂಬುಧಿ ದೊರೆತಿಹನೆ?
ಬೇಡುವೆ, ನಮಿಸುವೆ, ಎನ್ನೆರೆಯನ ನೀ
ಮೋಹಿಸಿದಂದವ ತಿಳುಹೆನಗೆ.

ಅಂಬರ ಚುಂಬಿತ ನಿಶ್ಚಲ ಗಿರಿಗಳೆ,
ತಲೆಯೆತ್ತೇನನು ನೋಡುವಿರಿ?
ಬಾಳಿನ ಗುರಿಯನು ಪಡೆದಿಹಿರೇನು?
ದೊರೆಯನು ನೀವರಿತಿಹಿರೇನು?
ಗಿರಿಗಳೊ? ಧ್ಯಾನದಿ ಕುಳಿತಿಹ ಋಷಿಗಳೊ?
ಗುಟ್ಟನು ಹೇಳದ ಮೌನಿಗಳೊ?

ಸುಂದರ ಗಗನವೆ, ನೀಲಾವರಣದಿ
ಜೀವೇಶನ ಮರೆಸಿಹೆಯೇನು?
ಕ್ಷಣವೊಂದೆ ಸಾಕು, ತೆರೆಮರೆಯನು ತೆರೆ:
ಕಣ್ಣೆದೆಗಳು ತಣಿವಂದದಲಿ
ಜೀವೇಶನ ನಾ ನೋಡುವೆನು!
ಬಯಕೆಯ ಬೇಗೆಯ ದೂಡುವೆನು!