ಕಿಂಕರರ ಕಳುಹಿದೆನು ಕರೆತರಲು ರಮಣನನು
ಹೆಣ್ಣು ನಾನೆಂದೆಂಬ ಹೆಮ್ಮೆಯಲಿ ಬೆರೆತು;
ಹಲವು ದೂತಿಯರಿಹರು, ಹಲವು ಜಾತಿಯರವರು,
ಕೆಲಸ ಮಾಡುವರೆಂದು ಮಲೆತು ಮೈಮರೆತು.

ಯಾರಿಲ್ಲ ನನಗೆಣೆಯು, ಬೇರಿಲ್ಲ ಚೆಲುವಿನಲಿ,
ನನ್ನ ಚೆಲ್ವಿಗೆ ದಾಸ ಚೆನ್ನನೆಂದರಿತೆ;
ಚರರನೊಬ್ಬೊಬ್ಬರನೆ ದೊರೆಗೆ ಬಳಿಯಟ್ಟಿದೆನು,
ಹೋದವರು ಬರದಿರಲು ಹೊಮ್ಮಿದುದು ಕೊರತೆ.

ಮೊದಲಿಗಳು ಬನದಲ್ಲಿ ಮಾಮರವ ಕಂಡೊಡನೆ
ಹಣ್ಣುಗಳನುಣತೊಡಗಿ ಹಜ್ಜೆಯಿಡಲಿಲ್ಲ!
ರಸಿಕ ಎರಡನೆ ಕೆಳದಿ, ರವಗೈಯೆ ಕೋಗಿಲೆಯು
ಮುದದುಲಿಯನಾಲಿಸುತ ಮುಂಬರಿಯಲಿಲ್ಲ!

ಮೂರನೆಯ ಕಬ್ಬಿಗಿತಿ ಮೋಹಿಸುವ ಬನದಳಿರ
ಲಾವಣ್ಯದೈಸಿರಿಯಲೋಲಾಡಿಯಾಡಿ,
ನಾಲ್ಕನೆಯ ಭಾವುಕಿಯು ಸಿಲ್ಕಿ ಪೂಗಂಪಿನಲಿ
ತೊರೆದು ಕೈಗಜ್ಜವನು ತೊಳಲಿದಳು ಹಾಡಿ!

ತರಲಯದನೆಯವಳು ತಂಬೆಲರ ಸೊಂಕಿಂಗೆ
ತನುವುಬ್ಬಿ ತಲ್ಲಣಿಸಿದಳು ನನ್ನ ಜರೆದು;
ಜಾಣೆಯಾರನೆಯವಳು ರಾಣನರಮನೆಯೈದಿ
ಕೋಣೆಗಳ ಗುಣಿಸಿದಳು ಆಣತಿಯ ತೊರೆದು!

ಹೋದವರು ಬರದಿರಲು, ಕಾದು ಬಳಲಿದ ನಾನು
ಸಿಟ್ಟೆದ್ದು ಸಡಗರದಿ ಸಿಡುಕಿದೆನು ಒಮ್ಮೆ!
ರಂಜಿಸಿನ ಮುಳುಗುತಿರೆ, ಸಂಜೆಗೆಂಪೆಸೆಯುತಿರೆ,
ಹಿಂಜರಿದು ದೈನ್ಯದಲಿ ಅಂಜಿದುದು ಹೆಮ್ಮೆ!

ಅರಸಿ ಎಂಬುವ ಬಿಂಕ ವಿರಹದಲಿ ಲಯವಾಗೆ
ಅರಸನಭಿಸಾರಿಕೆಯು ಹೊರಟೆನರಮನೆಗೆ!
ಮರಳಿ ಕೆಳದಿಯರೆಲ್ಲ ಅರೆದಾರಿಯಲಿ ಬಂದು
ಬೇಡಿದರು ಮನ್ನಣೆಯ, ಬಾಗಿದರು ನನಗೆ!

ರಾಣಿ ಬಂದುದ ಕಂಡು ರಾಣನಾಡಿದನಿಂತು
“ಕಳುಹಿಸದೆ ಕಿಂಕರರ ನೀ ಬಂದುದೇಕೆ?”
ನಲ್ಲನಾಡಿದ ನುಡಿಗೆ ನಾಚಿಯೊರೆದೆನು ಬಾಗಿ:
“ದಾರಿಯೆಡೆ ಉಪವನವದಾರಿಗಿಹುದೇಕೆ?”