ಇನಿಯನಿಹನು ಎಂಬುವುದನು ಬಲ್ಲೆ ನಾನು, ಹೇ ಸಖಿ.
ನಿನಗೆ ಸಂದೆಯ ಏಕೆ? ಬಿಡು, ಬಿಡು; ನಂಬು ನನ್ನನು, ಹೇ ಸಖಿ.
ಕನಸಿನೊಡವೆಯ ಒಲಿಯೆ ನಾನು ಮೂಢೆಯಲ್ಲ, ಸೋದರಿ.
ನನ್ನ ಒಲ್ಮೆಗೆ ಗುರಿಯ ಕನಸಿನ ವಸ್ತುವಲ್ಲ, ಸೋದರಿ.
ಮಂಜುವನದಿಂದವನ ಕೊಳಲಿನ ಚೈತ್ರಗಾನವ ಕೇಳಿಹೆ.
ಮಿಳಿರುವೆಳೆಯ ತಳಿರೊಳವನ ಸಿರಿಯ ಸೆರಗ ನೋಡಿಹೆ.
ನನ್ನ ಸೊಬಗಿದು ಯಾರದೆಲೆ ಸಖಿ! ನಲ್ಲನಿತ್ತುದೆ, ಹೇ ಸಖಿ.
ನನ್ನ ಕೆನ್ನೆಯೊಳವನ ಮುತ್ತಿನ ಮುದ್ರೆಯಿಹುದು ಹೇ ಸಖಿ.
ಅವನ ಕಂಡಿಹೆ, ಅವನನುಂಡಿಹೆ, ಅವನನಪ್ಪಿಹೆ, ಸೋದರಿ,
ಅವನ ಕೋಮಲಕಾಯದೊಲ್ಮೆಯ ಸವಿಯ ನೋಡಿಹೆ, ಸೋದರಿ!
ಇನಿಯನಿಹನು ಎಂಬುವುದನು ಬಲ್ಲೆ ನಾನು, ಹೇ ಸಖಿ!
ನಿನಗೆ ಸಂದೆಯ ಏಕೆ? ಬಿಡು, ಬಿಡು; ನಂಬು ನನ್ನನು, ಹೇ ಸಖಿ!