ಸೊಬಗಿನ ಸೆರೆಮನೆಯಾಗಿಹೆ ನೀನು;
ಚೆಲುವೇ, ಸರಸತಿಯೆ!
ಅದರಲಿ ಸಿಲುಕಿದ ಸೆರೆಯಾಳಾನು,
ನನ್ನೆದೆಯಾರತಿಯೆ!

ನಿನ್ನೆಳೆಮೊಗದಲಿ ನಸುನಗೆಯಾಗಿರೆ
ನನಗಿಹುದೊಂದಾಸೆ!
ನಿನ್ನಾಮುಡಿಯಲಿ ಹೂವಾಗಿರುವುದು
ನನಗಿನ್ನೊಂದಾಸೆ!

ತಾವರೆ ಬಣ್ಣದ ನಿನ್ನಾ ಹಣೆಯಲಿ
ಕುಂಕುಮವಾಗಿರಲೆನಗಾಸೆ!
ಬಳ್ಳಿಯನೇಳಿಪ ನಿನ್ನಾ ಕೈಯಲಿ
ಹೊಂಬಳೆಯಾಗಿರಲೆನಗಾಸೆ!

ಪದ್ಮವ ಮುಸುಕಿದ ಶೈವಲದಂತಿಹ
ಸೀರೆಯ ನಿರಿಯಾಗಿರುವಾಸೆ!
ಮನವನು ಸೆಳೆಯುವ ನಿನ್ನಸಿನಡುವಿಗೆ
ಕಟಿಬಂಧನವಾಗಿರುವಾಸೆ!

ನಿನ್ನಾ ಕೈಯಲಿ ಗಾನವ ಸೂಸುವ
ವೀಣೆಯು ನಾನಾಗುವುದಾಸೆ!
ನಿನ್ನೊಳು ನಾನು, ನನ್ನಳು ನೀನೂ
ಪ್ರೇಮದಿ ಲಯವಾಗುವುದಾಸೆ!

ಚೆಲುವೇ, ತರಳೆ, ಮುದ್ದಿನ ಹೆಣ್ಣೆ,
ನಿನ್ನವ ನಾನಾಗಿರುವಾಸೆ!
ಇನ್ನೇನುಸುರಲಿ? ಕಾಮನ ಕಣ್ಣೆ,
ನನಗಿಹುದೇನೇನೋ ಆಸೆ!