ಕರೆಯುವನು ಬಾರೆ, ಸಖಿ, ಗೋಪ ಸುರುಚಿರ,
ಹರುಷದಿ ನಲಿಯುತ ಒಲುಮೆಯ ತೋರುತ!

ಗಹನ ಕುಸುಮ ಸರವ ಧರಿಸಿ ಲೀಲೆ ತೋರುತ
ಇಹಪರಗಳನಾಲಿಂಗಿಸುತೊಂದೆ ಕರದಲಿ!

ಎಲರು ಕುಸುಮಗಳಲಿ ನಲಿವ ತೆರದಿ ಎನ್ನ ಹೃದಯದಿ
ನಲಿಯುತಿಹನು, ನಲಿಯುತಿಹನು, ನಲಿಯುತಿರುವನು!

ನೀಲಗಗನಹಾಸದಿಂದ ಮೋಹಿಸಿರುವೆನು;
ಪೋಗುವೆನು, ಪೋಗುವೆನು, ಪೋಗುವೆನು ನಾ!

ಮೇಘರಹಿತ ನೀಲನಭದ ದಿವ್ಯಪಥದಲಿ
ನಲಿನಲಿದು ತೇಲಿಬಹ ಸೋಮನಂದದಿ!

ಮೃತ್ಯುತಾಳದಿಂದ ನಲಿವ ಜನ್ಮಗಾನ ಹಾಡುತ
ಸಾಂತತೆಗೆ ನಾಂತತೆಯನಿರದೆ ಮೋಹಪಡಿಸುತ!