ಕರೆಯೆಂದು ಬರುವುದೋ? ನಾನರಿಯೆ ಅರಿಯೆ:
ಕಾಯುವೆನು ಕರೆ ಬರುವ ಪರಿಯಂತ, ದೊರೆಯೇ!

ತಂಬೆಲರು ತಳಿರಿನೆಡೆಯಾಡುತಿರಲಿನಿಯ,
ನೀನೆ ಬಂದೆಯೊ ಎಂದು ಹಾರುವುದು ಹೃದಯ;
ಸೊಬಗ ನೋಡಲು ನಾನು ಅರಳುತಿಹ ಅಲರ,
ಅಲರಿನೆದೆಯಲ್ಲಿ ನೀನಿಹೆಯೆಂದು ಮನವು
ಹಂಬಲಿಸಿ ಹುಡುಕುತ್ತ ಉಬ್ಬುವುದು, ದೇವ!

ಹೆಮ್ಮೆಯಲಿ ಮಧುಮಾಸವೈತರಲು, ರಮಣ,
ಗಿಳಿವಿಂಡುಗಳು ಹಾಡೆ, ಸೃಷ್ಟಿ ನಲಿದಾಡೆ,
ಎಲ್ಲೆಲ್ಲು ಸಂತಸವು ಮೈದೋರೆ, ಎನ್ನ
ಎದೆಯಲ್ಲಿ ವಿರಹದುರಿಯುರಿಯುವುದು, ಚೆನ್ನ,
ಬಾರದಿರೆ, ತೋರದಿರೆ ನೀನು ಮನದನ್ನ!

ಹಕ್ಕಿ ಹಾಡಲು ನಿನ್ನ ಕೊಳಲ ದನಿಯಂತೆ
ಚಿಮ್ಮುವುದು ಜುಮ್ಮೆಂದು ಸಂತಸದಿ ಜೀವ!
ಗಾಳಿಯಲಿ ತರಗೆಲೆಗಳಾಡುತಿಹ ಸದ್ದು
ತೋರುವುದು ಹಜ್ಜೆ ಸಪ್ಪಳದಂತೆ ಎನಗೆ:
ಎಂದಿಗೈತರುವೆಯೋ ನಾನರಿಯೆ, ಚೆನ್ನ!

ದನಗಳಂಬಾ ಎನಲು “ಗೋಪಾಲ ಬಂದಾ!”
ಎಂಬಂತೆ ಕೇಳುವುದು ಮುಗ್ಧೆಯೀ ಮನಕೆ;
ಯಾರು ಕರೆದರು ನೀನೆ ಕರೆದಂತೆಯಾಗಿ
ಬೆಚ್ಚುವೆನು, ನೋಡುವೆನು ಸುತ್ತಲೂ ತಿರುಗಿ;
ನಾಚುವುದು ಎನ್ನ ಮನ ಕಾಣದಿರೆ ನಿನ್ನ!

ನಿನಗಿಂತಲೂ ಹೆಚ್ಚು ಬಳಿಯಾದರಿಲ್ಲ!
ನಿನಗಿಂತಲೂ ದೂರವಾದವರು ಇಲ್ಲ!
ನಿನಗಿಂತಲೂ ಮಧುರವಾದವರ ಕಾಣೆ!
ನಿನ್ನ ಮೀರಿಹ ಮಾಯಗಾರನು ಕಾಣೆ!
ಏತಕಣಕಿಪೆ ಎನ್ನ? ಬಾ ಬೇಗ, ಚೆನ್ನ!