ಕುಣಿಯುವಂತೆ ಮತ್ತ ಶಿಖಿ
ಕುಣಿಯುತಿಹನು ನೋಡೆ, ಶಿಖಿ;
ನೋಡೆ ಸಖಿ, ಬಾರೆ ಸಖಿ,
ನೋಡೆ ಶಶಿಮುಖಿ.

ಮಳೆಯ ಹನಿಯು ತಳಿರಮೇಲೆ
ಮೆಲ್ಲನಡಿಯನಿಡುತ ಬೀಳೆ,
ಹಸುರಿನಿಂದ ಮೆರೆಯಲಿಳೆ,
ನಳನಳಿಸೆ ಬೆಳೆ; –

ಮುಗಿಲ ಮುಡಿದು ಮೈಯಲಿ,
ಕೊಳಲ ಹಿಡಿದು ಕೈಯಲಿ,
ಮಲರಗಣ್ಣ ಮುಗುಳನಗೆ
ಜಗದ ಬಗೆವುಗೆ; –

ಉಲಿಯನುಳಿದು ಖಗಗಳು
ಮೇವ ತೊರೆದು ಮಿಗಗಳು
ಕೊಳಲ ಕೇಳಿ, ಮುದವ ತಾಳಿ
ಮೈಯ ಮರೆತಿವೆ. –

ನೇಸರಿಂದು ಬಾನು ತಿರೆ
ಕುಣಿವುವವನು ಕುಣಿಯುತಿರೆ;
ಬನಗಳಿಹವು ತಳಿರ ಚೆಲ್ಲಿ
ಮೂಕ ಸುಖದಲಿ! –

ಸಾಮವೇದ ನಮೋ ಎನೆ
ಕೊಳಲ ನುಡಿವನು;
ಭರತಶಾಸ್ತ್ರ ನಮೋ ಎನೆ
ಅಡಿಯನಿಡುವನು!