ಹಾಡುವನು ಹಾಡುವನು
ಕೊಳಲನೂದುತ;
ಕುಣಿಯುವರು ಕುಣಿಯುವರು
ಮನವ ಮರೆಯುತ.
ಆದಿಯಂತ್ಯವಿಲ್ಲದೆ
ದಣಿವ ತಣಿವ ಕಾಣದೆ
ನಿತ್ಯದಾರಾಮದಿ
ಪ್ರೇಮ ಭಕ್ತಿ ತೋರುತ –
ವಿಶ್ವಮೌನವಾಂತಿದೆ
ಕಾಲದೇಶವೆಲ್ಲವು
ಭಾವದಾವೇಶದಿ
ನೋಡುತಿಹವು ಚಲಿಸದೆ. –
ಮೂಡಣದ ಗಗನದಲಿ
ರವಿಯದಯ ನಲಿಯುತಿದೆ;
ತಳಿರಿನೊಳು ತಂಬೆಲರು
ಲೀಲೆಯಾಡುತಿರುವುದು! –
ಹೊಸ ತಳಿರೊಳು ಹಿಮಮಣಿಗಳು
ಥಳ ಥಳಿಪವು ಮನಮೋಹಿಸಿ,
ಮೇಘದಿಂದ ಉದುರಿದ
ರತುನ ಸೇಸೆಯಂದದಿ! –
ಹಾಡುತಿರೆ ವಿಹಂಗಮ
ದಿವ್ಯ ಉದಯರಾಗವ
ನಸುನಗುತಿಹ ಪೊಸಚಿಗುರಿನ
ಕುಸುಮವಿಡಿದ ಹಸುರಮೇಲೆ –
ಸುಮಗಳನು ಕೊಯ್ದು ಕೊಯ್ದು
ಮಾಲೆಗಳ ನೆಯ್ದು ನೆಯ್ದು
ಬಳಸಿ ಬಂದು, ಬಳಿಯೆ ನಿಂದು
ಮಾಲೆ ಹಾಕಿ ಚುಂಬಿಸೆ! –
ಯುಗಯುಗಗಳು ನೆಗೆನೆಗೆವುವು!
ಕಲ್ಪಗಳು ಜಾರುವುವು!
ಕಮಲಜರು ಸಮೆಯುವರು!
ಪ್ರಳಯಗಳು ಕಳೆಯುವುವು! –
Leave A Comment