ಪೇರಲ ಮರದಡಿ ಹಣ್ಣನು ತಿನ್ನುತ
ಮಲಗಿರೆ ಹಸುರೊಳು ನೀ ಬಂದೆ;
ಕರಿ ಕುರುಳಿನ ಸುರಮೋಹವನೆರಚುತ
ಹೊಸ ವೈಯ್ಯಾರದಿ ನೀ ಬಂದೆ:
ನೋಡಿದೊಡೆನ್ನನು ದೂರದಿ ನಿಂತೆ;
ಮೂಡಿತು ಹೃದಯದೊಳೊಲವಿನ ಚಿಂತೆ!

ಬೆಳಗಿನ ಸೂರ್ಯನ ಕಾಂತಿಯು ನಾಡಿನ
ಮಧುವನಗಳ ಮೇಲೊರಗಿತ್ತು;
ನಿರ್ಜನ ದೇಶದ ಮೌನದ ಭಾರವು
ಹಕ್ಕಿಗಳುಲಿಯಿಂದೋಡಿತ್ತು.
ರಾತ್ರಿಯ ಗಗನದ ಚಂದಿರನಂತೆ,
ತರಳೆಯೆ, ಮೋಹಿಸಿ ದೂರದಿ ನಿಂತೆ!

ಮೊಗದೊಳು ಸೊಬಗಿನ ಸುಗ್ಗಿಯು ಬೆಳೆದು
ಕೈಬೀಸೆನ್ನನು ಕರೆದಿತ್ತು;
ತುಂಬಿಯು ತುಳುಕದ ತಿಳಿಗೊಳದಂತೆ
ಕಂಗಳ ಲೀಲೆಯು ಮೆರೆದಿತ್ತು.
ಹೃದಯದ ಬಾಳಿನ ಕಂಪುಸಿರಂತೆ
ಬದಿಕಿನ ಹೊಳೆಯನು ಹೀರುತ ನಿಂತೆ!

ನಿನ್ನಾ ಬಾಳಿನ ಹೂವನು ಮುಡಿಯದೆ
ಮುದ್ದಿಸಿಯನುಭವಿಸಪ್ಪದಲೆ
ಹೋಗುವೆಯೆಂದಾಗರಿತಿರಲಿಲ್ಲ;
ಸೊಬಗಿನ ಕುಸುಮವೆ ಉದುರಿದೆಯಾ?
ಹೂವೇ. ತರಳೆಯ, ಕೊಯ್ಯುವ ಮುನ್ನ
ಕೊಂಡೊಯ್ದಿತೆ ಬಿರುಗಾಳಿಯು ನಿನ್ನ!

ಪೇರಲ ಮರದಡಿ ಒಲಿದೆನು ಅಂದು;
ಒಲಿದಿಹೆ ನಾ ಮುಂದೆಂದೆಂದು.
ಎದೆದೋಟದೊಳಲರಿರದಿರಲೇನು?
ನಿನ್ನಾ ನೆನಪೇ ಸಿರಿಯಲರು.
ಚಲಿಸುವ ಮನಸಿಗೆ ನೀ ಹೂಬೇಲಿ!
ಧರ್ಮದ ದಾರಿಯೊಳೆಳೆಯುವ ಕಾಳಿ!

ಸುಮರಹಿತಾತ್ಮಾರಾಮವ ಕಂಡು
ತಲ್ಲಣಿಪುದು ಮನವಾಗಾಗ;
ನೆನೆಯಲು ನಿನ್ನನು, ಬಾಡಿದ ಹೂವೇ,
ತಲ್ಲಣ ತೊಲಗುವುದತಿ ಬೇಗ:
ಬೇರೆಯ ಹೂಗಳ ಮುಡಿಯೆನು ನಾನು;
ಮರೆಯಾದರು ಮುಡಿಪಾಗಿಹೆ ನೀನು!

ಪ್ರೇಮದ ಗೀತಿಕೆಯಂದದಿ ಬಂದೆ,
ಕೊಳಲನು ಊದುತ ಐತಂದೆ;
ಧರ್ಮಶ್ಲೋಕದ ತೆರೆದೊಳು ಹೋದೆ,
ನೀತಿಯ ವೀಣೆಯು ನೀನಾದೆ!
ಎಂದೋ ಕೇಳಿದ ಗೀತವು ಇಂದೂ
ಮೊರೆಯುವುದೆದೆಯೊಳು ಮುಂದೆಂದೆಂದೂ!