ಮುಳುಗುವ ಸಂಜೆಯ ಕೆಂಪಳಿಯೆ,
ಮೆಲ್ಲನೆ ಇರುಳಿಳಿಯೆ,
ತಾರೆಗಳಾಗಸದೊಳು ಹೊಳೆಯೆ,
ಜೀವದ ಸದ್ದಳಿಯೆ,
ಮನೆ ಮನೆಯಲ್ಲಿ
ಬೆಳಕನು ಚೆಲ್ಲಿ
ಹಣತೆಯ ಸೊಡರಿನ ಕುಡಿ ಸುಳಿಯೆ!

ದೇವರ ಚಿಂತೆಯೊಳೆದೆಯುಬ್ಬಿ
ಶಾಂತಿಯು ಮೈದೋರೆ;
ಭಕ್ತಿಯು ಬಳ್ಳಿಯವೊಲು ಹಬ್ಬಿ
ಪರಲೋಕವ ಸೇರೆ;
ಒಲಿದಳಿದವರು
ಒಯ್ಯನೆ ಬಹರು
ಒಲ್ಮೆಯ ತಳಿರೇಣಿಯ ತಬ್ಬಿ!

ಬರುವನು ಚನ್ನನು ಹಿರಿಯವನು,
ತರುಣನು ಬಲಶಾಲಿ;
ಸೋದರ ವಾಸುವು ಕಿರಿಯವನು
ಎನ್ನಯ ಕಣ್ಣಾಲ;
ಜೀವವ ಹಿಡಿದು
ದಾರಿಯ ನಡೆದು
ಬಳಲಿ ನೊಂದು ಬೆಂದುರಿದವನು!

ಹಿರಿಯರು, ಪೂಜ್ಯರು, ಮೇಣೆನಗೆ
ಬಾಳನು ಕೊಟ್ಟವರು;
ಮಣಿಯುತ ವಿನಯದೊಳೀಶನಿಗೆ
ಜೀವವ ಬಿಟ್ಟವರು!
ಸುಂದರಿ, ಚೆಲುವೆ,
ನನ್ನಾ ಚೆಲುವೆ

ಬರುವಳು ಶಾಂತಿಯ ಕೊಡಲೆನಗೆ!
ಮೆಲುನಡೆಯಿಕ್ಕುತ ಮೌನದಲಿ,
ಬೀಣೆಯ ದನಿಯಂತೆ,
ಬರುವಳು ರನ್ನೆಯು ದೈನ್ಯದಲಿ,
ತಿಂಗಳು ಬರುವಂತೆ!
ಕೈಯನು ಹಿಡಿದು
ಮೌನದಿ ನುಡಿದು
ನೋಡುವಳೆನ್ನಂ ಪ್ರೇಮದಲಿ!

ಬಾಳಿನ ಬಳಲಿಕೆ ಜಾರುವುದು,
ಭಯ ಕೆಲಸಾರುವುದು!
ನೆಚ್ಚೆದೆಯೊಳು ಮೈದೋರುವುದು,
ಹಿಗ್ಗುತ ಹಾರುವುದು!
ಬಾಳಿದರಂದು
ಬಳಿಗಿಳಿತಂದು
ನಲಿಯಲು ಸೊಗ ಮೊಗದೋರುವುದು