ದೂರಾ! ಬಹು ದೂರಾ! ಹೋಗುವ ಬಾರಾ!
ಅಲ್ಲೀ ಇಹುದೆಮ್ಮಾ ಊರಾ ತೀರಾ!
ದೂರ ದೂರ ಹೋಗುವ ಬಾರ,
ಅಲ್ಲಿಹುದೆಮ್ಮಾ ಊರ ತೀರ.
ಚಲಜಲದಲೆಗಳ ಮೇಲ್ಕುಣಿದಾಡಿ
ಬಳಲಿಕೆ ತೊಳಲಿಕೆಗಳೆನೆಲ್ಲ ದೂಡಿ
ಗೆಲವಿನ ಉಲಿಗಳ ಹಾಡಿ
ಒಲುಮೆಯ ಮಾತಾಡಿ
ಹಕ್ಕಿಗಳಿಂಚರ ಕೇಳಿ
ಆನಂದವ ತಾಳಿ
ಹಿಮಮಣಿ ಕಣಗಣ ಸಿಂಚಿತ ಅಂಚಿನ
ಹಸುರಿನ ತೀರದ ಮೇಲಾಡಿ,
ಕಿಸಲಯಕಂಪನದಿಂಪನು ನೋಡಿ
ಕೂಡಿ ಆಡಿ ನೋಡಿ ಹಾಡಿ
ತೇಲಿ ತೇಲಿ ಹೋಗುವ ಬಾರ,
ಅಲ್ಲಿಹುದೆಮ್ಮಾ ಊರ ತೀರ.
ದೂರಾ! ಬಹುದೂರಾ! ಹೋಗುವ ಬಾರಾ!
ಅಲ್ಲೀ ಇಹುದೆಮ್ಮಾ ಊರಾ ತೀರಾ!