ಕೊಂಕಿಸಿ ಕೊರಲನು ಬಿಂಕದಿ ಬಳುಕುತ
ನಾಣನು ನಟಿಸುತ ಹೊಕೊಯ್ದು
ಮುದ್ದು ಚೆಲುವುಗಳ ಮುದ್ದೆಯ ತೆರದಲಿ
ಬಂದಳು ಮದನನ ನನೆಗೈದು!
ಹೂವೇ ಹೂಗಳ ಕೊಯ್ವಂತೆ,
ಮಾಲೆಯೆ ಮಾಲೆಯ ನೆಯ್ವಂತೆ,
ಚೆಲ್ವನು ಚೆಲ್ವೇ ಗೆಲ್ವಂತೆ
ಮೆರೆದಳು ಆ ಕಾಂತೆ!

ಬಳ್ಳಿಯ ಬಳಿಯಲಿ ನನ್ನೆದೆಯಾಸೆಯ
ಬೇಟವೆ ಬಾಲೆಯ ರೂಪಾಗಿ
ಮೋಹಿಸುವಂದದಿ ಸುಮಸಮ ಕೋಮಲೆ
ಕಣ್ಗೆಸೆದಳು ಸವಿಗನಸಾಗಿ!
ಲತೆಗಳ ಬಳಿಯಲಿ ಲತೆಯಾಗಿ,
ಸುಮಗಳ ಸಂಗದಿ ಸುಮವಾಗಿ,
ನಿಂತಳು ಚೆಲುವೆಯು ತಲೆಬಾಗಿ,
ನಿಂತಳು ನನಗಾಗಿ!