ಮನೆಗಿನಿಯನೈತರಲು ಮೊಗದೋರೆ ನಾಚಿದೆನು;
ಕೆಳದಿಯರು ನಾಚದೆಯೆ ಸುಳಿದರವನೆದುರು!
ಚೆಲುವಿನಲಿ ಕೆಳದಿಯರ ಮೀರಿ ನಾನಿರ್ದರೂ
ನನ್ನ ಸೊಬಗನು ರಮಣನರಿಯಲಿಲ್ಲಾಹಾ!

ಸಖಿಯರೊಯ್ಯಾರದಲಿ ನಿರಿಯ ಚಿಮ್ಮುತ ಬಂದು
ನೋಟದಲಿ ಬೇಟವನು ಸೂಚಿಸಿದರು;
ಹೂಗಳ ಕೊಯ್ದಾಯ್ದು, ಕೋದು, ಹಾರವ ನೆಯ್ದು,
ನೂಪುರವ ದನಿಗೈದು ನಲಿದರಲ್ಲಿ!

ಇನಿಯನವರನಿಬರನು ಒಲಿದು ಬಂದಪ್ಪಿದನು;
ನನಗಪ್ಪುವಭಿಲಾಷೆ! ನಾಚಿಕೆಯು ಬಿಡದು!
ನಾಚಿಕೆಯನುಳಿದವರು ಸುಖವನನುಭವಿಸಿಹರು!
ನಾಚಿ ಕೆಟ್ಟೆನು ನಾನು! ನಾಚೆ ನಾನಿನ್ನು!