ನಾನಳಿದಮೇಲೆನ್ನ ಮರೆಯುವೆಯ ನೀನು?
ನಿನ್ನ ಹೃದಯವು ಪರರ ವಶವಾಗದೇನು?
ಮರೆತುಬಿಡು, ಮರೆತುಬಿಡು, ನೀ ಮರೆತೊಡೇನು?
ನಾ ಮರೆಯೆ! ನಾ ಮರೆಯೆ! ನಾ ನಿನ್ನ ಮರೆಯೆ!

ಮರೆಯುವೆಯ ನಾ ತೋರಿದೊಲುಮೆಯಾ ಪೆಂಪ?
ಮರೆಯುವೆಯ ನಾನಿತ್ತ ಚುಂಬನಗಳಿಂಪ?
ಮರೆತುಬಿಡು, ಮರೆತುಬಿಡು, ನೀ ಮರೆತೊಡೇನು?
ನಾ ಮರೆಯೆ, ನಾ ಮರೆಯೆ, ನಾ ನಿನ್ನ ಮರೆಯೆ!

ಮರೆತುಬಿಡು ಅಂದೆನ್ನ ನೋಡಿದಾ ಪರಿಯ!
ಎನಗಾಗಿ ನೀ ಕರೆದ ಕಂಬನಿಯ ಸರಿಯ!
ಎನ್ನ ಮಂದಸ್ಮಿತವ ನೀ ಮರೆತೊಡೇನು?
ನಾ ಮರೆಯೆ, ನಾ ಮರೆಯೆ, ನಾ ನಿನ್ನ ಮರೆಯೆ!

ಸೆರೆಗೊಳ್ಳುವುದು ನಿನ್ನ ಬೇರೊಂದು ಹೃದಯ;
ಇನಿಯ, ನಿನಗಾವುದು ಹೊಸ ಹರುಷದುದಯ;
ಆಗೆನ್ನ ನೆನೆಯದಿರು; ಮರೆತುಬಿಡು ನೀನು;
ನಾ ಮರೆಯೆ, ನಾ ಮರೆಯೆ, ನಾ ನಿನ್ನ ಮರೆಯೆ!

ಕೋಗಿಲೆಯ ಕೂಗೆನ್ನ ನೆನಪ ತರಬಹುದು,
ಬೀಸುತಿಹ ತಂಬೆಲರು ನೆನಪ ತರಬಹುದು;
ಹೊಸಬಳನು ನೋಡೆನ್ನ ಮರೆತುಬಿಡು ನೀನು;
ನಾ ಮರೆಯೆ, ನಾ ಮರೆಯೆ, ನಾ ನಿನ್ನ ಮರೆಯೆ!

“ನೀನೆನ್ನ ನಿಜ ಜೀವ, ನೀನೆ ನಾ” ನೆಂದೆ!
“ನಿನ್ನನಲ್ಲದೆ ಪರರ ಮೊಗ ನೋಡೆ” ಎಂದೆ!
ಮರೆತುಬಿಡು, ಮರೆ ಬೇಗ ಅದನೆಲ್ಲ, ಇನಿಯ;
ನಾ ಮರೆಯೆ, ನಾ ಮರೆಯೆ, ನಾ ನಿನ್ನ ಮರೆಯೆ!

ನಿನಗೆ ಮಂಗಳವಾಗಲಿನಿಯ, ಮರೆ ಎನ್ನ!
ಮುದ್ದಿಡುತ ಹೊಸಬಳನು ನೆನೆಯದಿರು ಎನ್ನ!
ಎನ್ನ ನೆನಪದು ಶೂಲ! ಮರೆತುಬಿಡು ನೀನು!
ನಾ ಮರೆಯೆ, ನಾ ಮರೆಯೆ, ನಾ ನಿನ್ನ ಮರೆಯೆ!