ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ?
ಸಡಗರದ ಮಾತುಗಳ ಬಿಂಕವೇಕೆ?
ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ?
ಸಂಪ್ರದಾಯದ ಮರುಳು ಲಜ್ಜೆಯೇಕೆ?

ನೇವುರದ ಗೆಜ್ಜೆಗಳ ಕಿಂಕಿಣಿಯ ದನಿ ನಿನ್ನ
ಸವಿಗೊರಲಿನಿಂಚರವ ಕೆಡಿಸದಿರಲಿ!
ಮಂತ್ರಗಳ ಜವನಿಕೆಯು, ದೊರೆ, ನಿನ್ನ ಸಿರಿಮೆಯ್ಯ
ಸೌಂದರ್ಯವನು ಮಬ್ಬುಗೈಯದಿರಲಿ!

ನಗ್ನತೆಗೆ ನಾಚದಲೆ ಸಿರಿದಳಿರ ತೆಕ್ಕೆಯಿಂ
ಮೂಡಿ ಸುಗ್ಗಿಯನೊಲಿವ ಹೂವಿನಂತೆ
ಸಿಂಗರದ ಹೊರೆಯುಳಿದು, ಮಂತ್ರಗಳ ಮರೆಯುಳಿದು
ಪ್ರೇಮದಾರತಿ ಹಿಡಿದು ತೇಲಿಬರುವೆ!