ಎನಗಾವ ಬಹುಮಾನವನು ಕೊಡುವೆ ನೀನು?
ನಿನಗಾಗಿಯನುದಿನವು ಬಳಲುವೆನು ನಾನು!

ಅರಿವಿಗಾಗನುದಿನವು ಯತ್ನಿಸಿದವರಿಗೆಲ್ಲ
ಸರಸತಿಯು ಕೊಟ್ಟಿಹಳು ಕೀರ್ತಿಸುಖವ;
ಸಿರಿಗಾಗಿಯನವರತ ಹೋರಾಡಿದವರುಗಳಿ
ಗಿರದೆ ದಯಪಾಲಿಸಿಹಳಮಿತ ಧನವ!

ಅರಿಗಳನು ಕೆಣಕಿ ರಣರಂಗದಲಿ ಗೆಲಿದರಿಗೆ
ಧರೆಯ ಸಿರಿ ಕೊಟ್ಟಿಹಳು ದರ್ಪ ಸುಖವ!
ಧರೆಯನನುದಿನ ಬೇಡಿ ಹೊಲಗೆಲಸವೆಸಗುವರಿ
ಗಿರದೆ ದಯಾಪಾಲಿಸಿಹಳನ್ನ ಸುಖವ!

ಸಿರಿಯ ಸರಸತಿ ಧರಾರಮಣಿಯಿವರೆಲ್ಲರೂ
ಬರಿದೆ ವರವೀಯುವರು ತಮ್ಮನುಳಿದು;
ಪರಮಾತ್ಮ, ನಿನ್ನನೇ ಬಯಸುತಿಹ ಎನಗೆ ನೀ
ವರವೀಯೆ; ನೀನೆ ವರವಾಗಿ ಬರುವೆ!