ಶ್ರೀಯುತ ಎಚ್. ಮುಜುಂದಾರರ “Lingering Look” ಎಂಬ ಚಿತ್ರವನ್ನು ನೋಡಿ ಬರೆದುದು.

ಕೊಳದಾ ತೀರದ ಕಲ್ಲಿನಮೇಲೆ
ಕುಳಿತಿಹ ರಮಣಿಯ ನೋಡಲ್ಲಿ!
ಕೊಡವಿದೆ ಅಂಕದ ಮೇಲಾಕೆಯ ಮನ
ದೂರದೊಳೆಲ್ಲಿಯೊ ಚರಿಸುತಿದೆ.
ಆಕೆಯ ನಟ್ಟಿಹ ನೋಟವ ನೋಡು:
ತೋರುವುದದರೊಳು ಚಿಂತೆಯ ಬೀಡು!

ಬಲವತ್ತರವಾದಾವುದೊ ಯೋಚನೆ
ಆಕೆಯ ಮನವನು ತುಂಬಿಹುದು.
ಬಡತನದಳಲೋ? ಮಕ್ಕಳ ಗೋಳೋ?
ಕಷ್ಟವೊ, ನಷ್ಟವೊ, ನಿಷ್ಠುರವೊ?
ಪ್ರೇಮದ ನೆನಪೋ, ಬಲ್ಲವರಾರು?
ಪ್ರಣಯದ ಭಂಗವೊ, ತಿಳಿದವರಾರು?

ಕೋಗಿಲೆಯುಲಿಯನು ಬೀರುವುದಲ್ಲಿ,
ಸರಸಿನ ಅಲೆಗಳು ಅಲೆಯುವುವು;
ಚೆಲುವಿನ ಕೆಂಪಿನ ಕಮಲಗಳೆಲ್ಲ
ತಂಬೆಲರೊಳು ನಲಿನಲಿಯುವುವು.
ಎಲ್ಲಿಹುದೋ ಮನದಾ ಸಂಚಾರ?
ತಿರುಗಾಡುವುದೆಲ್ಲಿಯೊ ಬಹುದೂರ!

ಆಕೆಯ ಭಾಗಕೆ ಕೋಗಿಲೆಯಿಲ್ಲ!
ತಾವರೆ ಹೂಗಳ ಕೊಳವಿಲ್ಲ!
ತಂಬೆಲರಿಲ್ಲಾ! ಪೊಸ ಹಸುರಿಲ್ಲ!
ಚಿಂತೆಯ ಹೊರತೇನೊಂದಿಲ್ಲ!
ಆಕೆಯ ನಟ್ಟಾ ನೋಟದೊಳೆಲ್ಲ
ಕರಗುತಲಳಿದುವು; ಬೇರೊಂದಿಲ್ಲ