ಮಡಿಕೇರಿಯ ಸಿರಿಮಲೆಗಳ ಮೇಲೆ
ಬಾಲ ದಿನೇಶನ ಕೋಮಲ ಲೀಲೆ
ಹಸುರಿನ ಕೆನ್ನೆಗೆ ಹೊನ್ನಿನ ಮುತ್ತು
ಕೊಡುತಿತ್ತು.

ಜನವಿಲ್ಲದ ಕಿರುದಾರಿಯೊಳಾನು
ಮೆಲ್ಲನೆ ನಡೆದರೆ, ಪರ್ವತಸಾನು
ಅಲೆಯಲೆಯಲೆ ಮುಗಿಲಿಗೆ ಏರಿತ್ತು;
ಮೀರಿತ್ತು!

ಸುತ್ತಲು ಕಾಡಿನ ಹೂಗಳು ಕಣ್ಣಿಗೆ
ನಲಿನಲಿದುವು ಹೂಬಿಸಿಲಲಿ ನುಣ್ಣಗೆ;
ಖಗಗಾನವು ಮೌನವ ಕಡೆದಿತ್ತು;
ಮಿಡಿದಿತ್ತು.

ತಪ್ಪಲ ಮೇಯುವ ಮಂಜಿನ ಮುಂದೆ
ತೇಲುತಲಿದ್ದುದು ಹಿಂದೆ ಮುಂದೆ.
ನಡೆದೆನು ಕೊಡಗಿಗೆ ನಾ ಮನಸೋತು;
ಮೇಣೋತು.

ನಡೆದಿರೆ ದಾರಿಯ ತಿರುಗಣೆಯಲ್ಲಿ
ಪರ್ವತ ಕಾನನ ಕಂದರದಲ್ಲಿ
ಫಕ್ಕನೆ ಕಂಡಿತು ನನ್ನಯ ಕಣ್ಣು:
ಮುದ್ದಿನ ಮಲೆಹೆಣ್ಣು!

ಹೆಣ್ಣೆಂಬೆನೆ? ಅಲ್ಲಾ, ಕಿರುಹುಡುಗಿ!
ಕೊಡಗಿಗೆ ಕನ್ನಡಿಯೋ ಎನೆ ಬೆಡಗಿ!
ಐದು ವಸಂತಗಳಂದದ ಕೊಡಗಿ,
ಹೊಸ ಹೂ ಆ ಹುಡುಗಿ!

ಬೆಡಗಿನ ಕೊಡಗಿನ ಮಲೆಯಿಂದೊಯ್ಯನೆ
ಕಿರುದೊರೆಯುರುಳುವ ತೆರದಲಿ ರಯ್ಯನೆ
ಕಲ್ಲು ಹಾದಿಯಲಿ ಬಂದಳು ಚಿಮ್ಮಿ
ಮಿಗವರಿಯೊಲು ಹೊಮ್ಮಿ!

ನಿಂತಳು ಬೆರಗಾಗೆನ್ನನು ಕಂಡು:
ಅಂತು ನಿಲ್ಲುವುದು ದುಂಬಿಗೆ ಬಂಡು!
ಕಣ್ಣೊಳೆ ನಾನಾ ಚೆಲುವನು ಹೀರಿ
ನಿಂತೆನು ಎದೆಹಾರಿ!

ತುಂಬಿದ ಮೊಗ, ಮೈ; ತುಳುಕುವ ಕಣ್ಣು;
ಕೆನ್ನೆಗಳೆರಡೂ ಕಿತ್ತಿಳೆ ಹಣ್ಣು!
ಕೊಡಗಿಗೆ ಕನ್ನಡಿ ನಿನ್ನಯ ಕೆನ್ನೆ
ದಿಟವೈಸಲೆ ಚೆನ್ನೆ!
ಒಲ್ಮೆಯು ನಲ್ಮೆಯ ಚೆಲುವೂ ಬೆಡಗೂ
ನಿನ್ನಲಿವೆ; ಇದೆ ಎಲ್ಲಾ ಕೊಡಗೂ!
ಗಿರಿ ತಲಕಾವೇರಿಗಳಿನ್ನೇಕೆ?
ನೀನಿರೆ ಅವು ಬೇಕೆ?

ಮಲೆಗಳ ಕತ್ತಲೆ ಕವಲೊಡೆದಂದದಿ
ಜಡೆ ಕಂಗೊಳಿಸಿತ್ತೆರಡಾಗಂದದಿ.
ಕೇಳಿದೆನಾಕೆಯ “ಹೆಸರೇನಮ್ಮಾ?”
ನುಡಿದಳು “ಪೂವಮ್ಮ!”

ನುಡಿಸುವ ಹುಚ್ಚಿಗೆ ಹೆಸರನು ಕೇಳಿದೆ;
ಆಲಿಸಿ ಪರಮಾಹ್ಲಾದವ ತಾಳಿದೆ.
ದನಿಯೂ ಹೆಸರೂ ಎರಡೂ ಹೂವೆ!
ಅವಳಂತೂ ಹೂವೆ!

ಕೊಡಗದು ಹಿರಿಮಲೆಗಳ ಸಿರಿನಾಡು;
ಮೇಲಾಕಾಶವು, ಕೆಳಗಡೆ ಕಾಡು!
ಅಂತೆಯೆ ಇರುವುದು ನನ್ನಾ ಬೀಡು,
ನಚ್ಚಿನ ಮಲೆನಾಡು!

ಮಲೆನಾಡೆನಗಿದೆ ಹತ್ತಿರದಲ್ಲೆ,
ಅದರಿಂ ಕೊಡಗನು ಮರೆಯಲು ಬಲ್ಲೆ!
ಆದರೆ ಮರೆಯೆನು ನಿನಗಾಗಮ್ಮಾ
ಮುದ್ದಿನ ಪೂವಮ್ಮಾ!