ಒಲವೂ, ನಲವೂ, ಚೆಲುವಿನ ಗೆಲವೂ,
ಅಂದದಿ ಚೆಂದದಿ ಬರುವಾನಂದವು,
“ನಶ್ವರ! ನಶ್ವರ!” ಎಂಬರದೇಕೆ?
ನಶ್ವರವಲ್ಲವು ಶಾಶ್ವತ, ಗಿರಿಜೆ!
ಎಂದೋ ಎಂತೋ ಒಂದೆಡೆಯಂತೂ
ಗಿರಿಜೇ, ಮೇಳಿಸಿ ನಾವುಗಳು
ಎಂದೋ ಎಂತೋ ಎಲ್ಲಾದರಂತೂ
ನಮ್ಮೀ ಪ್ರಣಯವು ಫಲಿಸುವುದು!
ತರಳೇ, ನಿಶ್ಚಯ ಫಲಿಸುವುದು!

ಗಗನದ ಉಡುಗಳು ಮಿರುಗುವುದೇಕೆ?
ಅಗಲಿದ ಯಾರನೊ ಸೇರುವೆವೆಂದು!
ವನಗಳು ಬುವಿಯನು ಒಲಿಯುವುದೇಕೆ?
ವಿಯೋಗ ದುಃಖವ ಕಳೆಯುವೆವೆಂದು!
ಎಂದೋ ಎಂತೋ ಒಂದೆಡೆಯೆಂತೂ
ಅವರಾ ಬಯಕೆಯು ಲಭಿಸುವುದು;
ಎಂದೋ ಎಂತೋ ಎಲ್ಲಾದರಂತೂ
ಅಗಲಿದ ಇನಿಯನ ಸೇರುವುವು!
ಗಿರಿಜೇ, ನಿಶ್ಚಯ ಸೇರುವುವು!

ಯಾರನೊ ಹುಡುಕತಲಿರುವರು ಎಲ್ಲಾ;
‘ಯಾರನು’ ಎಂದರೆ ತಿಳಿದವರಿಲ್ಲ;
ಎಂದೋ ಯಾರನೊ ಅಗಲಿದೆವೆಂದು
ಅರಸುತಲಿರುವರು ಕಲ್ಪಗಳಿಂದ!
ಎಂದೋ ಎಂತೋ ಒಂದೆಡೆಯೆಂತೂ
ಗಿರಿಜೇ, ಮೇಳಿಸಿ ನಾವುಗಳು,
ಎಂದೋ ಎಂತೋ ಎಲ್ಲಾದರಂತೂ
ನಮ್ಮೀ ಪ್ರಣಯವು ಫಲಿಸುವುದು!
ತರಳೇ, ನಿಶ್ಚಯ ಫಲಿಸುವುದು!