ಪ್ರಿಯನ ನೆನೆ ಮನವೆ ನೀ
ಅನವರತ ಪ್ರಿಯನ ನೆನೆ.

ತೋರದಿರೆ ಮರೆಯದಿರು;
ಬಾರದಿರೆ ಜರೆಯದಿರು;
ತೋರಿ ತೋರದ ತೆರದಿ
ಬಂದು ಪೋಗುವನವನು!

ಕಂಬನಿಯ ಸುರಿಸುರಿದು
ಹಂಬಲಿಸು ಕರೆಕರೆದು,
ನಂಬಿದಾ ಭಕ್ತರಿಗೆ
ಕಂಬದೊಳೂ ತೋರುವನು!

ಪ್ರಿಯನ ನೆನೆಯುವ ಹೃದಯ-
ದೊಳು ಬಹುದು ನವ ಉದಯ;
ಆಗ ಮೈ ದೋರುವನು!
ನಿನ್ನನೇ ಸೇರವನು!