ಸುಂದರ ದಿನ, ಸುಂದರ ಇನ,
ಸುಂದರ ವನ, ನೋಡು ಬಾ!
ಎಳಬಿಸಿಲೊಳು ತಿಳಿಗೊಳದೊಳು
ಜಲದಲೆಗಳು ನಲಿನಲಿಯಲು,
ನೋಡು, ಬಾ! ಕೂಡು, ಬಾ!
ಬೇಗ ಬಾ! ಬಾ! ಬಾ!
ತಣ್ಣೆಲರಲಿ ಹೂಗಳ ಬಳಿ
ಸೊಕ್ಕಿದ ಅಳಿ! ನೋಡು, ಬಾ!
ಹೊಸ ತಳಿರೊಳು ಇಂಗೊರಲೊಳು
ಕೋಗಿಲೆಗಳು ಸರಗೈಯಲು,
ಹಾಡು, ಬಾ! ಕೂಡು, ಬಾ!
ಬೇಗ ಬಾ! ಬಾ! ಬಾ!
ಜೊತೆಯಿಲ್ಲದೆ ನನ್ನೊಲಿದೆದೆ
ಕಂಪಿಸುತಿದೆ; ಕೂಡು, ಬಾ!
ಹೊಸ ಹಸುರೆಡೆ, ತಿಳಿಗೊಳದೆಡೆ,
ನಾ ನಿನ್ನೆಡೆ, ನೀನೆನ್ನೆಡೆ!
ಕೂಡು, ಬಾ! ಕೂಡು, ಬಾ!
ಬೇಗ ಬಾ! ಬಾ! ಬಾ!
Leave A Comment