ಬೃಂದಾವನಮಿಹುದೆನ್ನೀ ಹೃದಯದಿ
ಶ್ಯಾಮಸುಂದರನಲ್ಲಿಹನು!
ರಾಧೆಯನೊಡಗೂಡಲ್ಲಿ
ರಾಸಕ್ರೀಡೆಯನಾಡುವನು!

ಮಾಸಗಳೆಲ್ಲ ವಸಂತಗಳಲ್ಲಿ,
ವ್ಯಸನಗಳೆಲ್ಲಾನಂದಗಳಲ್ಲಿ.
ಕಾಲವು ಕಳೆಯದು ಅಲ್ಲಿ,
ಕಾಲನು ಬೆದರುವನಲ್ಲಿ;
ಅಂತಮನಂತ ಆಗುವುದಲ್ಲಿ!

ಸುಮಗಳು ತುಂಬಿಯ ಚುಂಬಿಪವಲ್ಲಿ
ಹಿಮಮಣಿ ಹಸುರೊಳು ರಂಜಿಪವಲ್ಲಿ.
ಗಾಯನ ಸಲಿಲವ ಚೆಲ್ಲಿ
ಖಗತತಿ ನಲಿಯುವವರಲ್ಲಿ;
ಮಾರುತ ಸರಸವನಾಡುವನಲ್ಲಿ!

ಇರವನೆ ಮರೆಯುವೆನೈಕ್ಯದೊಳಲ್ಲಿ
ಸದಸದ್ಗಳು ಒಂದಾಗುವವಲ್ಲಿ.
ಜ್ಞಾನವು ಭಕ್ತಿಯೊಳಲ್ಲಿ
ರಮಿಪುದು; ಪೂರ್ಣತೆ ಅಲ್ಲಿ
ನಲಿವುದು ನಿತ್ಯಾನಂದವ ಚೆಲ್ಲಿ!