ಶ್ರೀಯುತ ಎಚ್. ಮುಜುಂದಾರರ “Divine Flute” ಎಂಬ ಚಿತ್ರವನ್ನು ನೋಡಿ ಬರೆದುದು.

ಕೊಳಲನೂದಿ ಮೋಹಿಪುದನು
ಕಲಿಸು ಎನಗೆ, ಚೆನ್ನ;
ತಳಮಳಿಪುದು ಎನ್ನ ಎದೆಯ
ಕೊಳಲ ಗಾನ ನಿನ್ನ.

ನಲಿಯುತಿಹುದು ಉದಯ ಗಗನ
ಅರುಣರಾಗದಿಂದ;
ಕೊಳದಲೆಗಳು ಕುಣಿಯುತಿಹವು
ಗಾನದೊಲುಮೆಯಿಂದ.

ಪರವಿಹಗಳ ನಲಿಸುತಿಹುದು
ನಿನ್ನ ಕೊಳಲ ನಾದ;
ಪರವಿಹಗಳನೊಲಿಸುತಿಹುದು
ನಿನ್ನ ಗಾನಮೋದ.

ತಳಿತ ಚೂತದಡಿಯೆ ಮೊದಲ
ನುಡಿಯ ಕಲಿಸು, ಚೆನ್ನ;
ಕೊಳಲ ಕಲಿಸು ಬೇಗ ಎನಗೆ,
ಮೋಹಿಸುವೆನು ನಿನ್ನ.