ಪ್ರಣಯದ ಗೀತೆಯೆ ನೀನಾಗಿರುವೆ,
ನಿನ್ನನು ರಚಿಸಿದ ಕವಿ ಯಾರು?
ಪುಣ್ಯದ ಮುದ್ದೆಯ ಸಗ್ಗದ ಸೊಬಗಿನ
ಬಣ್ಣದೊಳದ್ದುತ, ನಿತ್ಯತೆಯೊಲುಮೆಯ
ಕಂಪಿನೊಳೂಡುತ, ಭಾವದ ಚಾಣದಿ
ನಿನ್ನನು ಕೆತ್ತಿದ ಶಿಲ್ಪಿಯದಾರು?
ಬಿದಿ ತಾನೊಬ್ಬನೆ ಬೇಸರ ಕಳೆಯಲು ನಿನ್ನನು ಹಾಡಿದನು;
ಕಂಗಳಿಗಂದದ ಮಾದರಿದೋರಲು ನಿನ್ನನು ಮಾಡಿದನು.

ವೀಣೆಯ ವಾಣಿಯೆ ನೀನಾಗಿರುವೆ,
ನಿನ್ನನು ಬಾರಿಸಿದವರಾರು?
ತಳಿತಿಹ ವನದೊಳು ಹೀಲಿಯ ಕಂಗಳ
ಕೆದರಿದ ನವಿಲಿನ ಮುಕ್ತಿಯ ಬೆಡಗಿಗೆ
ಚೈತ್ರದ ಬಣ್ಣದ ಸಿರಿಯನು ಸೇರಿಸಿ
ನಿನ್ನನು ನೆಯ್ದಾ ರಸಋಷಿ ಯಾರು?
ಕಾಣದ ಊರಿನ ಮಾಯಾವೈಣಿಕ ಬಾರಿಸಿದನು ನಿನ್ನ;
ನೆಯ್ದನು ಸೃಷ್ಟಿಯ ರಾಗದ ಜಾಲವ ತಾ ನೆಯ್ಯುವ ಮುನ್ನ.

ಮುದ್ದಿನ ಮುದ್ದೆಯ ನೀನಾಗಿರುವೆ,
ಮುದ್ದನು ಮುದ್ರಿಸಿದವರಾರು?
ಕೂಸಿನ ಕೆನ್ನೆಯ ತಾಯಿಯ ಮುತ್ತನು,
ನಲ್ಲಳ ಕೆನ್ನೆಗಳಿನಿಯನ ಮುತ್ತನು,
ಎಲ್ಲರ ಹೃದಯದ ದೇವರ ಮುತ್ತನು
ಪೋಣಿಸಿ ನಿನ್ನನು ಮಾಡಿದರಾರು?
ಹೂಗಳ ಮೇಲಿಹ ಗಾಳಿಯ ಚುಂಬನವನು ಸುಲಿಗೆಯ ಮಾಡಿ
ಕಲ್ಪನೆ ನಿನ್ನನು ಕಡೆಯಿತು, ತರಳೆಯೆ, ನಗೆದಿಂಗಳ ಬೇಡಿ.

ಚೆಲುವಿನ ಗೆಲವೇ ನೀನಾಗಿರುವೆ,
ನಿನ್ನನು ಮೂರ್ತಿಸಿದವರಾರು?
ಉದಯಾಸ್ತಂಗಳ ಪೆಂಪನು ಆಯ್ದು,
ತಿಳಿಬೆಳುದಿಂಗಳ ಸೊಂಪನು ಹೊಯ್ದು,
ರಾತ್ರಿಯ ಕಪ್ಪಿನ ಹೆಪ್ಪನು ಹಾಕಿ
ನಿನ್ನೀ ಚೆಲುವನು ಮಥಿಸಿದರಾರು?
ನೀನವ್ಯಕ್ತದ ಗರ್ಭದೊಳುರಿಯುವ ಮಂಗಳದಾರತಿಯು;
ಸೃಷ್ಟಿಯ ಮುಂದಕೆ ಪ್ರೇಮದ ಶಕ್ತಿಯ ಮೂರುತಿಯು.

ಸೃಷ್ಟಿಯ ಮೋಹವೆ ನೀನಾಗಿರುವೆ,
ನಿನಗಾರಿತ್ತರು ಮೋಹವನು?
ಉದಯದ ಮೋಡಗಳಂಚಿನ ಮೇಲೆ
ನಲಿಯಲು ನಿನ್ನಯ ನಲ್ಮೆಯ ಲೀಲೆ
ಕಾಣಿಕೆ ಕೊಡುವುವು ತರುಲತೆ ತಮ್ಮ
ಹೂಗಳ ಫಲಗಳ ಮುಡುಪನು ತಂದು.
ಸ್ವರನೈವೇದ್ಯವ ಸುರಿವುವು ಖಗಗಳು ಮೋಹಕೆ ಮುರುಳಾಗಿ
ಸೃಷ್ಟಿಯ ಸೌಂದರವೆಲ್ಲಾ ನಿನ್ನೀ ಚೆಲುವಿಗೆ ಶರಣಾಗಿ!

ಜೀವಕೆ ಜೀವವೆ ನೀನಾಗಿರುವೆ,
ನಿನಗಾರಿತ್ತರು ಜೀವವನು?
ಶೂನ್ಯ ಸಮಾಧಿಯೊಳಿದ್ದಾ ಬ್ರಹ್ಮನ
ಚುಂಬಿಸಿ ಎಚ್ಚರಗೊಳಿಸಲು ನೀನು,
ನಿನ್ನಾ ಪ್ರೀತಿಯ ಮುತ್ತಿನ ಲೀಲೆಯೊ
ಳುದಿಸಿತು ವಿಶ್ವದ ಸಕಲೈಶ್ವರ್ಯ!
ಸೃಷ್ಟಿಯ ಬಾಳನು ರಕ್ಷಿಸುತಿರುವುದು ನಿನ್ನೊಲುಮೆಯ ಪಾಶ:
ನಿನ್ನಾ ಪ್ರೇಮವಿಲಾಸದ ನಾಶದೊಳಿದೆ ಜಗದ ವಿನಾಶ!