ಬಾ ಕವಿತೆ, ಬಾ ಕೆಳದಿ,
ಬಾ ನನ್ನ ತರಳೆ,
ಬಾ ಚೆಲುವೆ, ಚಂಚಲೆಯೆ,
ಮಿಂಚುಗಣ್ಣೆರಳೆ!
ದಟ್ಟಬನಗಳ ಮಲೆಯ
ನಡುನೆತ್ತಿಯಲ್ಲಿ,
ತಣ್ಣೆಳಲ ತಣ್ಣೆಲರ
ಮಲೆನಾಡಿನಲ್ಲಿ,
ನಿರಿದಳಿರ ಹೊದರುಗಳ
ಬನಗತ್ತಲಲ್ಲಿ,
ಸದ್ದಿಲ್ಲದಡವಿಯಲಿ,
ಬೇರೊಂದು ಪೊಡವಿಯಲಿ,
ಮೈ ಮರೆತು ನಲಿಯುವಂ,
ಎದೆ ಮುಟ್ಟಿಯೊಲಿಯವಂ
ಏಕಾಂತದಲ್ಲಿ!
ಬಾ ಚೆಲ್ವೆ, ಬಾ ರಮಣಿ,
ಸವಿಗೊರಲಹೆಣ್ಣೆ;
ಬಾ ನೀರೆ, ಬಾ ಕವಿತೆ,
ಕಬ್ಬಿಗನಕಣ್ಣೆ!
ಸೌಂದರ್ಯವಿಹುದಿಲ್ಲಿ
ಸ್ವಾತಂತ್ರ್ಯವಿಹುದಿಲ್ಲಿ,
ಏಕಾಂತವಿಹುದಿಲ್ಲಿ
ಸಂಗೀತವಿಹುದಿಲ್ಲಿ
ಮಲೆನಾಡಿನಲ್ಲಿ!
ಪದ್ಧತಿಯ ಹೊರೆಯಿಲ್ಲ,
ಕಾಯಿದೆಯ ಕಟ್ಟಿಲ್ಲ,
ಶಾಸ್ತ್ರಗಳ ವಿಧಿಯಿಲ್ಲ,
ಕರುಬುವರ ಕಣ್ಣಿಲ್ಲ
ಬನ ಬೆಟ್ಟದಲ್ಲಿ!
ಇಲ್ಲಿ ಪ್ರೇಮವೆ ನೀತಿ,
ಇಲ್ಲಿ ಧರ್ಮವೆ ಪ್ರೀತಿ.
ಇಲ್ಲಿಯೊಲ್ಮೆಯೆ ಕಟ್ಟು,
ಇಲ್ಲಿ ಬೇಟವೆ ಗುಟ್ಟು,
ಮಾಡಿದುದೆ ಮಾಟ!
ಇಲ್ಲಿ ಕೇಳುವರಿಲ್ಲ,
ಆಡಿದುದೆ ಆಟ!


ಬಾ ಕವಿತೆ, ಬಾ ತರಳೆ,
ಬಾ ನನ್ನ ಚೆಲುವೆ;
ನೀನೆನ್ನ ಬಾಳುಸಿರು,
ಬಾ ನನ್ನ ಒಲವೆ!
ಇಲ್ಲಿ ಬದುಕೇ ಹುಚ್ಚು;
ಇಲ್ಲಿ ಎಲ್ಲವು ಹುಚ್ಚು;
ಮರಕೆ ಹೂವಿನ ಹುಚ್ಚು;
ಬನಕೆ ಹಸುರಿನ ಹುಚ್ಚು;
ಖಗಕೆ ಹಾಡಿನ ಹುಚ್ಚು;
ಮಿಗಕೆ ಕಾಡಿನ ಹುಚ್ಚು;
ಒಂದಕೊಂದರ ಹುಚ್ಚು;
ನನಗೆ ನಿನ್ನಯ ಹುಚ್ಚು;
ನಿನಗೆ ನನ್ನಯ ಹುಚ್ಚು;
ಹುಚ್ಚು, ಬರಿ ಹುಚ್ಚು!
ಇಲ್ಲಿ ಸೂರ್ಯೋದಯವು
ದಿವ್ಯಾವತರಣ!
ಇಲ್ಲಿ ಚಂದ್ರೋದಯವು
ಪ್ರಕೃತಿಯಾಭರಣ!
ಮಾತಾಡಿದರೆ ಕಬ್ಬ!
ನೋಡಿದರೆ ಹಬ್ಬ!


ಕವಿಯ ಹುಚ್ಚಿನ ಸವಿಯ
ನೀ ಬಲ್ಲೆಯೇನು?
ನಿನಗಿನಿತು ನೀಡುವೆನು
ಬಾ ಇಲ್ಲಿ ನೀನು!
ಕೊಬ್ಬಿ ನಳನಳಿಸುತಿಹ
ಬನದಳಿರ ಮೇಲೆ
ಹಬ್ಬಿ ತಳತಳಿಸುತಿಹ
ಎಳಬಿಸಿಲು ಬೀಳೆ
ನಾವಿಬ್ಬರೂ ಸೇರಿ
ಗುಡ್ಡ ಬೆಟ್ಟವನೇರಿ
ಕೈಮುಗಿದು ದೇವನಿಗೆ
ಬಿನ್ನಹವ ಮಾಡಿ,
ತಿರುಗಿ ನಲಿದಾಡುವಂ
ನಲ್ಮೆಯಲಿ ಕೂಡಿ.
ಬಲ್ಲಿದರ ಬಗೆಯಿಂದ
ನಾ ಸುಲಿದು ತಂದಿರುವ
ಅರಿವಿನಾ ಸೂರೆಯನು
ನಿನ್ನೆದೆಗೆ ಚೆಲ್ಲಿ
ಸ್ವರ್ಗ ಮರ್ತ್ಯಂಗಳನು
ವಿಶ್ವಬ್ರಹ್ಮಾಂಡವನು
ನಿನಗೀವೆನಿಲ್ಲಿ!
ಯೋಗಿಗಳ ಯೋಗವನು,
ಭೊಗಿಗಳ ಭೋಗವನು,
ಜ್ಞಾನಿಗಳ ಜ್ಞಾನವನು,
ಭಕ್ತರಾ ಭಕ್ತಿಯನು
ನಿನಗೀವೆನಿಲ್ಲಿ!
ಎಲ್ಲವಿದೆ ರಸಋಷಿಯ
ಕೈಬುಟ್ಟಿಯಲ್ಲಿ!


ಯಾವ ಮತದವನಲ್ಲ,
ಎಲ್ಲ ಮತದವನು;
ಯಾವ ಪಂಥವು ಇಲ್ಲ,
ಬಹು ಪಂಥವನು.
ಎಲ್ಲ ಬಿಡುವವನಲ್ಲ,
ಎಲ್ಲ ಹಿಡಿವವನಲ್ಲ.
ನಾನು ಉಮ್ಮರನಲ್ಲ,
ಚಾರ್ವಾಕನೂ ಅಲ್ಲ,
ನೀತಿಜಡನೂ ಅಲ್ಲ,
ನೀತಿಗೇಡಿಯು ಅಲ್ಲ,
ಬರಿ ಕನಸಿನವನಲ್ಲ,
ಬರಿ ಕೆಲಸದವನಲ್ಲ,
ಎಲ್ಲ ಬಿಡಲೂ ಬಲ್ಲೆ,
ಎಲ್ಲ ಹಿಡಿಯಲು ಬಲ್ಲೆ,
ಕೇಳೆನ್ನ ನಲ್ಲೆ!
ನನ್ನೊಡನೆ ನೀನಿರಲು
ವೈರಾಗ್ಯವಲ್ಲೆ!
ನಾವು ಕೊಲುವುದು ಬೇಡ,
ನಾವು ಕಳುವುದು ಬೇಡ,
ಸುಳ್ಳಾಡುವುದು ಬೇಡ,
ಅನ್ಯಾಯವೂ ಬೇಡ;
ಆದರೊಲಿವುದು ನಮ್ಮ
ಒಡನೆ ಹುಟ್ಟಿದ ದಮ್ಮ!
ನರಕ ಚುಂಬನದೊಳಿರೆ
ನರಕವೆಮಗಿರಲಿ!
ಬೇಟದಲಿ ಪಾಪವಿರೆ
ಪಾಪವೆಮಗಿರಲಿ!
ಹರಿಯ ಮರೆವುದು ಬೇಡ,
ತಿರೆಯ ಜರೆವುದು ಬೇಡ;
ಇರುವ ಬಾಳಿನ ಸೊದೆಯ
ಭಕ್ತಿಯಲಿ ಹೀರಿ,
ಬರುವ ಬದುಕಿನ ಸೊದೆಯ
ಧ್ಯಾನದಲಿ ಸೇರಿ,
ಇದನು ಹುಳಿಸದ ತೆರದಿ
ಅದನು ಹಳಿಸದ ತೆರದಿ,
ಎರಡು ಮುಳಿಯದ ತೆರದಿ
ಜೀವನವ ಹೊತ್ತು
ನಡೆಯುವಂ ಶಾಂತಿಯಲಿ
ತೆರುವುದನು ತೆತ್ತು!


ಕೆಲರಿಳೆಯ ಬಿಟ್ಟವರು,
ದೊಡ್ಡವರು ಅವರು!
ಕೆಲರೆದೆಯ ಸುಟ್ಟವರು,
ದೊಡ್ಡವರು ಅವರು!
ಅವರಿಗವರದೆ ಹಾದಿ,
ನಮಗೆ ನಮ್ಮದೆ ಹಾದಿ!
ಬಾ ಚೆಲುವೆ, ಬಾ ಕವಿತೆ,
ಬಾ ನನ್ನ ಹೆಣ್ಣೆ;
ಬಾ ಬಳಿಗೆ, ಬಾ ಎದೆಗೆ,
ಕಬ್ಬಿಗನ ಕಣ್ಣೆ!
ದೊಡ್ಡವರು ಅವರೆಲ್ಲ?
ದೊಡ್ಡವರೆ ಹೌದು!
ನಾವು ದೊಡ್ಡವರಲ್ಲ?
ಇರಬಹುದು! ಬಹುದು!
ಎದೆಯ ಬೇಯಿಸಿದವರು
ಹಿರಿಯರಾದರೆ ಏನು?
ಕಣ್ಣ ತೋಯಿಸಿದವರು
ಹಿರಿಯರಾಗರೆ ಏನು?
ಬೆಂಕಿ ಕೊಳೆಯನು ಸುಡುವು
ದೆಂದೆಂಬೆಯೇನು?
ನೀರು ಕೊಳೆಯನು ತೊಳೆದು
ಬಿಡಲಾರದೇನು?


ಬಾ ಕವಿತೆ, ಬಾ ಕೆಳದಿ,
ಬಾ ನನ್ನ ತರಳೆ;
ಬಾ ಚೆಲುವೆ, ಚಂಚಲೆಯೆ,
ಮಿಂಚುಗಣ್ಣೆರಳೆ!
ಬನದಳಿರ ಮರೆಯಲ್ಲಿ
ಬಗ್ಗಿಪುದು ಕೋಗಿಲೆಯು;
ಕೇಳು, ಕೇಳಲ್ಲಿ!
ಮಾಲೆ ಮಾಲೆಗಳಾಗಿ
ಹಬ್ಬಿಹವು ಬೆಟ್ಟಗಳು;
ನೋಡು ನೋಡಲ್ಲಿ!
ಪೂತ ನಂದಿಯ ಮರದಿ
ಬಂಡುಣಲು ಬಂದಿರುವ
ದುಂಬಿಗಳು ಮೊರೆಯುತಿವೆ
ಓಂಕಾರದಂತೆ!
ಹಿರಿಯ ತತ್ತ್ವದ ಚಿಂತೆ
ನಮಗೇತಕಂತೆ!
ಬಾ, ಇಲ್ಲಿ ಕುಳಿತುಕೋ
ಈ ಅರೆಯ ಮೇಲೆ,
ನಿನಗಿನಿತು ಹಾಡುವೆನು:
ಅದೆ ನಮ್ಮ ಲೀಲೆ.
ಬಾ ಇಲ್ಲಿ, ಬಳಿಗೆ ಬಾ!
ದೂರ ನಿಲ್ಲುವೆಯೇಕೆ!
ಬಾ ಚೆಲುವೆ, ಬಳಿಗೆ ಬಾ;
ತೊಡೆ ಸೋಂಕಿನಲಿ ಕುಳಿತು
ನನ್ನ ಹೆಗಲಿನ ಮೇಲೆ
ನಿನ್ನ ಕೈಗಳನಿಟ್ಟು,
ಬಾ ನಲ್ಲೆ, ಕುಳಿತುಕೋ
ಮೊಗದಲ್ಲಿ ಮೊಗವಿಟ್ಟು!
ಇಲ್ಲಿ ಒಲ್ಮೆಯೆ ಕಟ್ಟು,
ಮಾಡಿದುದೆ ಮಾಟ!
ಇಲ್ಲಿ ಕೇಳುವರಿಲ್ಲ,
ಆಡಿದುದೆ ಆಟ!


ಎಲ್ಲ ಕಾಮುಕರಿಲ್ಲಿ
ನಾಚಿಕೆಯದೇಕೆ?
ಇಲ್ಲಿ ಕರುಬುವರಿಲ್ಲ
ಹೆದರಿಕೆಯದೇಕೆ?
ಎಲ್ಲ ರಾಗಿಗಳಿಲ್ಲ,
ಎಲ್ಲ ಭೋಗಿಗಳಿಲ್ಲಿ:
ಆ ಮುಗಿಲು, ಆ ಬಾನು,
ಈ ಬೆಟ್ಟ, ಈ ಕಾನು,
ಈ ಹಕ್ಕಿ, ಆ ಮರವು,
ಅಲ್ಲಿ ಮೇಯುವ ಕರುವು
ಎಲ್ಲ ಕಾಮುಕರಿಲ್ಲಿ;
ಗುಟ್ಟು ನಾ ಬಲ್ಲೆ!
ಬರಿದೆ ನಾಚಿಕೆಯೇಕೆ?
ಬಾ ಬಳಿಗೆ, ನಲ್ಲೆ!
ನಮ್ಮ ಕೆಳಗಿಹ ಬಂಡೆ,
ಜಡತನವ ನಟಿಸುತಿಹ
ಈ ಕರಿಯ ಬಂಡೆ,
ಒಂದು ದಿನ ಬೇಟದಲಿ
ಬಳಿಯ ಬಂಡೆಯ ಕೂಡೆ
ತೊಡಗಿದುದ ಕಂಡೆ!
ಕೇಳದೋ! ಕೇಳಲ್ಲಿ:
ಬಾನು ಮುಗಿಲಿನ ಕೂಡೆ
ಸರಸವಾಡುತಿದೆ!
ನೋಡದೋ ನೋಡಲ್ಲಿ:
ಆ ಮರವನೀ ಮರವು
ಏಕೆ ಕಾಡುತಿದೆ?
ಇವರ ನಟನೆಯ ನಾನು
ಚೆನ್ನಾಗಿ ಬಲ್ಲೆ!
ಸಂಕೋಚವಿನ್ನೇಕೆ?
ಬಾ ಬಳಿಗೆ, ನಲ್ಲೆ!


ಬಾ, ಬಳಿಗೆ ಬಾ, ಕವಿತೆ,
ಕಬ್ಬಿಗನ ಕನ್ನೆ!
ಏನು ಹಾಡಲಿ ಹೇಳು
ರಸಋಷಿಯ ಚೆನ್ನೆ?
ಸಿಂಗರದ ಕಬ್ಬಗಳ
ಹಾಡಲೇ ಹೇಳು?
ದಿವ್ಯ ಕೀರ್ತನೆಗಳನು
ಮಾಡಲೇ ಹೇಳು?
ರಾಮಾಯಣವು ಬೇಕೆ?
ಭಾರತವು ಬೇಕೆ?
ಕಾವ್ಯವೊ, ಪುರಾಣಗಳೊ?
ಮೇಣು ವರ್ಣನೆಗಳೋ?
ತತ್ತ್ವ ತುಂಬಿದ ದಿವ್ಯ
ಕವನಗಳು ಬೇಕೆ?
ಭಾವ ತುಂಬಿದ ರಮ್ಯ
ಗಾನಗಳು ಬೇಕೆ?
ಮೇಣು ನಿನ್ನನೆ ಕುರಿತು
ಬಣ್ಣಿಸಲೆ ಹೇಳು?
ನಿನ್ನ ಚೆಲುವನೆ ಕುರಿತು
ಉಲಿಯಲೇ ಹೇಳು? –
ಮೌನದಲಿ ಕೇಳಿಬಹ
ಸಂಗೀತದಂತೆ,
ಕತ್ತಲಲಿ ಹೊಳೆವೇಕ
ನಕ್ಷತ್ರದಂತೆ,
ತಿಳಿಗೊಳದೊಳರಳಿರುವ
ಒಂದೆ ತಾವರೆಯಂತೆ,
ರಸಋಷಿಯ ಜೀವನದ
ರಸಯೋಗದಂತೆ
ನೀನಿರುವೆ, ಎಲೆ ಚೆಲುವೆ,
ಮಳೆಬಿಲ್ಲಿನಂತೆ! –
ವೈಯರವೀಂತೇಕೆ?
ಮುಗುಳುನಗೆ ಏಕೆ?
ಸುಗ್ಗಿವಳ್ಳಿಯ ತೆರದಿ
ಬಳುಕುತಿಹೆ ಏಕೆ?
ಬಾ ಇನ್ನು ಬಳಿಗೆ ಬಾ,
ಬಾ ನನ್ನ ಹೆಣ್ಣೆ;
ಬಾ ಚೆನ್ನೆ, ಬಾ ರನ್ನೆ,
ಬಾ ನನ್ನ ಕಣ್ಣೆ!
ಕಾಲ ಸುತ್ತುತಲಿಹುದು,
ಬಾಳು ಬತ್ತುತಲಿಹುದು,
ಬಾ ಬೇಗಮಾಡು!
ಸ್ವರ್ಗಸುಖಕಿಹಸುಖವೆ
ಕೀಲಿಕೈ, ಎಲೆ ಕವಿತೆ,
ಬಾ, ಬೇಗ ಕೂಡು!


ಸ್ವರ್ಗ ಸುಖದಲ್ಲೆನಗೆ
ಸಂದೇಹವಿಲ್ಲ;
ಮರ್ತ್ಯ ಸುಖದಲ್ಲೆನಗೆ
ದ್ವೇಷವೂ ಇಲ್ಲ!
ನಾವದನು ಸಾಯಿಸದೆ,
ಮೇಣಿದನು ಬೇಯಿಸದೆ,
ನಮ್ಮನೂ ನೋಯಿಸದೆ
ನಲಿಯುವಂ ಬಾ!
ನೋವೆ ಸಾಧನೆಯಲ್ಲ;
ನಲಿಯುವಂ ಬಾ!
ನಾಳೆ ನಾಳೆಗೆ ಇರಲಿ,
ನಿನ್ನೆ ನಿನ್ನೆಗೆ ಇರಲಿ,
ಇಂದಿಗಿರಲಿಂದೆ!
ನಾಳೆಯನೆ ನೋಳ್ಪರಿಗೆ,
ಇಂದನೇ ಕಂಬರಿಗೆ,
ಮುಂದೆ ಸೊಗವೊಂದೆ!
ಬಹು ಜನರು ಮಾಡಿದುದೆ
ಪಾಪವಾದರು ಪುಣ್ಯ;
ಬಹು ಜನರು ಸೇರಿದುದೆ
ನರಕವಾದರು ಸ್ವರ್ಗ!
ಎಲ್ಲ ಹೋದೆಡೆಯಲ್ಲಿ
ನಾವಿಬ್ಬರಿದ್ದಲ್ಲಿ
ನಮ್ಮ ವೈಕುಂಠ!
ಸತ್ತವರಿಗಿಹುದಲ್ಲಿ
ಅವರ ವೈಕುಂಠ!
ಬದುಕಿರುವ ನಮಗಿಲ್ಲಿ
ನಮ್ಮ ವೈಕುಂಠ!
ಸತ್ತವರು ನಾವಲ್ಲ,
ಭಯವೇಕೆ ಬಾ!
ಬಾಳಿನಲಿ ಹೊತ್ತಿಲ್ಲ
ಬಾ ಬೇಗ ಬಾ!

೧೦
ಅದೊ ಕೇಳು ಕೇಳಲ್ಲಿ,
ಕಾಮಳ್ಳಿ ಕೂಗುತಿದೆ
ಸಂಪಗೆಯ ಮರದಲ್ಲಿ!
ಯಾರನದು ಕರೆಯುತಿದೆ?
ನೀ ಬಲ್ಲೆಯೇನು?
ಹರಿಯ ಕರೆಯುವುದಲ್ಲ,
ವರನ ಕರೆಯುತ್ತಿಹುದು!
ನಾ ಬಲ್ಲೆ ನಾನು!
ಪ್ರೇಮದಿಂದಲೆ ಬಂದು,
ಪ್ರೇಮದಲ್ಲಿಯೆ ನಿಂದು,
ಪ್ರೇಮದಲ್ಲಿಯೆ ಸಂದು
ಹೋಗುವೆಮಗೆಲ್ಲ
ಪ್ರೇಮವೇ ಹರಿಯೆಂದು
ರಸಋಷಿಯೆ ಬಲ್ಲ!
ಕಾಮಳ್ಳಿಯದನರಿತೆ
ರಮಣನನು ಕೂಗುತಿದೆ!
ಅದರೊಲ್ಮೆಯಿನಿದನಿಯೆ
ಪ್ರಾರ್ಥನೆಯು ಅದಕೆ!
ಒಲ್ಮೆಯಿಂ ಕರೆಯದಿಹ
ಬದುಕೊಂದು ಬದುಕೆ?

೧೧
ಬುವಿಯ ಸೆರೆಮನೆಯೆಂದು,
ಸೆರೆಯನೊಡೆಯುವವೆಂದೆ,
ವೇದ ಗೀದಗಳೆಂಬ,
ಶಾಸ್ತ್ರಗೀಸ್ತ್ರಗಳೆಂಬ
ಗೋಡೆಗಳ ಕಟ್ಟಿ
ಸೆರೆಮನೆಯೊಳಿನ್ನೊಂದು
ಸೆರೆಮನೆಯ ಮಾಡಿದರೆ
ಮೊದಲ ಸೆರೆಮನೆಯೊಡೆದು
ಮುಕ್ತಿಯಹುದೇನು?
ಬಾಳು ಬಂಧನವೆಂದು,
ಬಂಧನವಳಿಯಲೆಂದು,
ನೀತಿ ಧರ್ಮಗಳೆಂಬ
ತಪಸು ಗಿಪಸುಗಳೆಂಬ
ನೇಣುಗಳ ಹೊಸೆದು,
ಬಂಧನಂಗಳ ಮೇಲೆ
ಬಂಧನಂಗಳ ಸುತ್ತಿ
ಮೊದಲ ಬಂಧನ ಹರಿದು
ಹೋಯಿತೆಂದೊದರಿದರೆ
ಮರುಳಲ್ಲವೇನು?
ಯಾರೊ ಮಾಡಿದ ಮನೆಯು
ನಮಗೆ ಸೆರೆಯಹುದೆಂದು
ನಾವು ಮಾಡಿದ ಸೆರೆಯೆ
ಮನೆಯಪ್ಪುದೇನು?
ಯಾರೊ ಕಟ್ಟಿದ ನೇಣು
ಸಂಕೋಲೆಯಾಗುವೊಡೆ
ನಾವು ಸುತ್ತಿದ ಮಿಣಿಯು
ಜನಿವಾರವೇನು?
ಅಯ್ಯೊ ಎಂದು ಬೇಡ
ಅವನ ಹಿರಿಸೆರೆಯಲ್ಲಿ
ನಮ್ಮ ಕಿರಿಸೆರೆಯು!
ಅಯ್ಯೊ ಎಂದೂ ಬೇಡ
ಅವನ ಕಟ್ಟಿನ ಮೇಲೆ
ನಮ್ಮ ಕಿರುಗಟ್ಟು!
ನಾನು ಪ್ರರ್ಥಿಸಲೊಲ್ಲೆ;
ನಾನು ಪ್ರೀತಿಸಬಲ್ಲೆ!
ಪ್ರೀತಿ ಎಂಬುದೆ ನಮಗೆ
ಪ್ರಾರ್ಥನೆಯ ಸಾರ!
ಎದೆಯ ಮೇಲೆದೆಯಿಟ್ಟು
ಬಾ ಬಳಿಗೆ ಬಾರ!
ನಮ್ಮ ಬಾಳಿನ ಸೊದೆಯ
ನಾ ಹೀರಬಲ್ಲೆ!
ಅದರ ಅಳಲಿನ ಸೊಗವ
ನಾ ಪಡೆಯಬಲ್ಲೆ!
ಸೆರೆಗೆ ಸೆರೆ ಮದ್ದಲ್ಲ,
ಓ ಮುದ್ದು ನಲ್ಲೆ!

೧೨
ಇನ್ನು ಹೇಳುವೆ ಕೇಳು:
(ನಾಸ್ತಿಕನು ನಾನಲ್ಲ!)
ಮುಂದನರಿತವರಾರು?
ಇಂದನರಿಯದವರಾರು?
ಮುಂದೆ ಬಂದರೆ ಬರಲಿ!
ಸಗ್ಗ ಸೊಗವನು ತರಲಿ!
ಇಂದಿದ್ದರೇನಂತೆ?
ನಾಳೆ ಇರಲೇನಂತೆ?
ನಮಗದೂ ಇರಲಿ!
ಬೇಡ ಎನ್ನುವರಲ್ಲ,
ಇಲ್ಲ ಎನ್ನುವರಲ್ಲ,
ನಮಗೆಲ್ಲ ಇರಲಿ!
ಯಾರಾದರೇನಂತೆ?
ನಿನ್ನೆಯೋ? ನಾಳೆಯೋ?
ತರುವವರು ತರಲಿ!
ಬೇಡವೆಂದವರಾರು?
ನಮಗೆಲ್ಲ ಇರಲಿ!
ಬರುವ ಸೊಗವೆಲ್ಲವೂ,
ಸಂತೊಷ, ಬರಲಿ!
ಬದುಕಿರಲು ಸಾವಿಲ್ಲ,
ಸಾವಿರಲು ಬದುಕಿಲ್ಲ.
ನಾವಿರಲು ಸಾವಿಲ್ಲ,
ಸಾವಿರಲು ನಾವಿಲ್ಲ!
ಇನ್ನಳುಕಲೇನು?
ಗುರುವೊಲ್ಮೆಯಾದರಿಗೆ
ಭಯವೆಂದರೇನು?
ಗುರುಮಂತ್ರ ದೀಕ್ಷಿತರು
ಯಾವುದೆಮಗೇನು?
ನಮಗಿರಲು ನಿರ್ಭರತೆ
ಹಿಂಜರಿವುದೇನು?

೧೩
ಸಾರ್ವಭೌಮಿಕ ತತ್ತ್ವ,
ತತ್ತ್ವಸಾರದ ಸತ್ತ್ವ,
ರಸ ಋಷಿಯ ದರ್ಶನಂ,
ಉತ್ತಮ ರಹಸ್ಯಮಿದು
ನಿನಗೊರೆವೆ ಕೇಳು:
ಅದು ನನ್ನಿ, ಇದು ನನ್ನಿ,
ಇಹುದೊಂದೆ ನನ್ನಿ,
ಚಲಿಸಲದು! ನಿಲ್ಲಲಿದು!
ನನ್ನಿಗಳ ನನ್ನಿ!
ಅದನುಳಿದರಿದು ಸೊನ್ನೆ;
ಇದನುಳಿದರದು ಸೊನ್ನೆ;
ಒಂದನುಳಿದೊಂದಿರದು,
ಓ ಎನ್ನ ಚೆನ್ನೆ!
ಕಂಡರದು ಕಾಣದಿದು,
ಕಂಡರಿದು ಕಾಣದದು,
ಎಂಬುದನು ಕಂಡಿಹುದು
ರಸಋಷಿಯ ಕಣ್ಣು!
ಕಣ್ಮುಚ್ಚಲಿದುವೆ ಅದು,
ಕಣ್ದೆರೆಯಲದುವೆ ಇದು!
ಗುರು ಕೊಟ್ಟ ಬಲ್ಮೆಯಿದು,
ಓ ಕವಿಯ ರನ್ನೆ!
ಒಂದೆ ಎರಡಂತಿಹುದು,
ಎರಡೆ ಒಂದಾಗಿಹುದು;
ಹುಟ್ಟಿದರು ಹುಟ್ಟಿಲ್ಲ,
ಅದನೊರೆಯೆ ಮಾತಿಲ್ಲ;
ನನ್ನಿ ಹೊಳೆವುದೆ ಹೊರತು
ಬೆಳೆಯಲಾರದು, ತರಳೆ!
ನನ್ನ ಕಣ್ಣಿನ ಮಿಂಚು
ಅದರಿದರ ಒಳಸಂಚು
ಕಂಡು ತಿಳಿ, ಕವಿತೆ!

೧೪
ಜನ್ಮ ಮುಂದಿರುವುದೇಂ?
ಇದ್ದರೇನಿರಲಿ!
ಹೋದವರು ಬರುವರೇಂ?
ಬಂದರೇಂ ಬರಲಿ!
ಇರುವವರು ಪೋಪರೇಂ?
ಪೋದರೇನಿರಲಿ!
ಬಾ ಕವಿತೆ, ಬಾ ಕೆಳದಿ,
ಬಾ ನನ್ನ ತರಳೆ,
ಬಾ ಚೆಲುವೆ, ಚಂಚಲೆಯೆ,
ಮಿಂಚುಗಣ್ಣೆರಳೆ!
ಎಲ್ಲ ನಶ್ವರವೆಂದು
ಇರುವುದನುಳಿವುದೇಕೆ?
ಕೆಲಹಣ್ಣು ಕಹಿಯೆಂದು
ಎಲ್ಲ ಹಳಿಯುವುದೇಕೆ?
ಕಹಿಯೆದೆಯೊಳಿಹ ಸಿಹಿಯು
ಸಿಕ್ಕಷ್ಟು ಸಿಗಲಿ!
ದುಃಖದೊಳಗಿಹ ಸುಖವು
ಬಂದಷ್ಟು ಬರಲಿ!
ಕಡಲು ರತ್ನದ ರಾಶಿ
ಎಂದರೆಮಗೇನು?
ಕೈಲೊಂದು ರನ್ನವಿರೆ
ಅದನೆಸೆವುದೇನು?
ಬಾ ಕವಿತೆ, ಬಾ ಚೆಲುವೆ,
ಬಾ ತರಳೆ, ಎನ್ನೊಲವೆ;
ಗುರುದೇವನನು ಭಜಿಸಿ
ಬೇಡವಾದುದು ತ್ಯಜಿಸಿ,
ಕೈಗೆ ಬಂದುದು ಭುಜಿಸಿ
ಬದುಕುವಂ ಬಾ!
ಭಕ್ತಿಯಲಿ, ಶಾಂತಿಯಲಿ,
ಒಂದಿನಿತು ಗೊಣಗುಡದೆ,
ನಶ್ವರದ ನಡುವೆಯಿಹ
ಶಾಶ್ವತವ ಸವಿಯುತ್ತ,
ದುಃಖಗಳ ಎದೆಯೊಳಿಹ
ಸುಖಗಳನು ಸುಲಿಯುತ್ತ,
ಇಹಪರಗಳೆರಡನೂ
ಪ್ರೇಮದಿಂ ಮುತ್ತುತ್ತ
ನಲಿಯುವಂ ಬಾ!
ಅವರು ಹಾಗೆಂದರೇಂ?
ಇವರು ಹೀಗೆಂದರೇಂ?
ನಮಗೇನು ಬಾ!
ನನ್ನ ಮುದ್ದಿನ ಹೆಣ್ಣೆ,
ಕಬ್ಬಿಗನ ಹಣೆಗಣ್ಣೆ,
ಬಾ ಚೆಲ್ವೆ, ಬಾ ತರಳೆ
ಬಾ ನನ್ನ ಚೆನ್ನೆ;
ಬಾ ಕೆಳದಿ, ಸುಂದರಿಯೆ,
ಬಾ ನನ್ನ ಹೆಣ್ಣೆ:
ದಟ್ಟ ಬನಗಳ ಮಲೆಯ
ನಡುನೆತ್ತಿಯಲ್ಲಿ,
ತಣ್ಣೆಳ ತಣ್ಣೆಲರ
ಮಲೆನಾಡಿನಲ್ಲಿ
ಮೈಮರೆತು ನಲಿಯುವಂ,
ಎದೆಮುಟ್ಟಿಯೊಲಿಯುವಂ,
ಏಕಾಂತದಲ್ಲಿ!
ಇಲ್ಲಿ ಪ್ರೇಮವೆ ನೀತಿ,
ಇಲ್ಲಿ ಧರ್ಮವೆ ಪ್ರೀತಿ,
ಇಲ್ಲಿ ಒಲ್ಮೆಯೆ ಕಟ್ಟು,
ಇಲ್ಲಿ ಬೇಟವೆ ಗುಟ್ಟು,
ಮಾಡಿದುದೆ ಮಾಟ!
ಇಲ್ಲಿ ಕೇಳುವರಿಲ್ಲ:
ಆಡಿದುದೆ ಆಟ!