ರಸಿಕನೆನ್ನಿನಿಯನತಿರಸಿಕನೌ, ಕೆಳದಿ,
ಕೂಡಲವನನು ಪೋಪೆ, ಬೇಗ ಸಿಂಗರಿಸು!

ಮನವ ಮೋಹಿಸುವಂತೆ ಬಾಚು ಬೈತಲೆಯ;
ಮುದ್ದು ಸೂಸುವ ತೆರದಿ ಮುಂಗುರಳ ತಿದ್ದು;
ಕುಂಕುಮವನಿನಿದಾಗಿ ನೊಸಲ ಮೇಲಿರಿಸು,
ಕೊರಳಿನಲಿ ಮುಡಿಯಲ್ಲಿ ಹೂವುಗಳ ಮುಡಿಸು!

ತಂಗಾಳಿ ಬೀಸೆ ಹೊಸ ತಳಿರೊಲೆಯುವಂತೆ
ನಿರಿಗೆದೆರೆಗಳ ರಚಿಸು ಮಿಳಿರುವಂತೆ!
ಎದೆ ಕೆಣಕುವ ತೆರದಿ ಮೇಲುದನು ಇರಿಸು;
ಬಿಂಕ ಮೆರೆಯುವ ತೆರದಿ ಕೊಂಕುಗೊಳಿಸು!

ಬಂಡುಣಿಗಳಲರಿನಲಿ ಝೇಂಕರಿಸುವಂತೆ
ನೇವುರದ ಗೆಜ್ಚೆಗಳು ದನಿಗೈಯಲಿ!
ರಸಿಕಮಣಿ ಎನ್ನಿನಿಯ ಬೆರಗಾಗುವಂತೆ
ಸೊಬಗು ಪೆಂಪವನೆದೆಯ ಸೆರೆಗೈಯಲಿ!