ಎದೆಯ ಬನಕೆ ಬಾರೊ ನೀ
ಗೋಪಬಾಲನೆ;
ಮುದದಿ ಶಶಿಯ ಕಿರಣ ನಿನ್ನ
ಕರೆಯುತಿರುವುದು.

ರಮ್ಯವೀ ಚಕೋರವು
ಬಯಸಿ ನಿನ್ನನೆ
ಹಾಡುತಿಹುದು ಸಲಿಲದಂತೆ
ಸುರಿವ ಗಾನವ.

ನಿನ್ನನಿದಿರು ನೋಡುತ
ಪೊನ್ನ ಸುಮಗಳು
ಜೊನ್ನ ಕಾಂತಿಯೆಂಬ ಜಲದಿ
ಮಿಂದು ನಿಂತಿವೆ.

ನಿನ್ನ ನೋಡೆ ಗಗನವು
ಕಾತರಿಸುತಿದೆ;
ನಿನ್ನನೊಲಿಯೆ ತಾರಕೆಗಳು
ಮಿಣುಕುತಿರುವುವು.

ನಿನ್ನ ಗೆಳೆಯನಾಗಲು
ಚರಿಪನನಿಲನು;
ನಿನಗೆ ಹರುಷವೀಯಲೆಂದು
ಧರಣಿ ನಲಿವಳು.

ಪರಮ ಪುರುಷ ಬಾರಲೈ;
ಮುದವ ತಾರೆಲೈ.
ಪರಮತನವನುಳಿದು, ಕಾಂತ,
ಕೃಪೆಯ ತೋರೆಲೈ!