ಅರಳಿತೀ ವನಸುಮವು ನಿನಗಾಗಿ, ಹರಿಯೇ;
ತ್ವರೆಯಿಂದ ಬಂದಿದನು ಸ್ವೀಕರಿಸು, ದೊರೆಯೇ.

ಹಗಲಿರುಳು ಮಳೆಬಿಸಿಲುಗಳಲಿ ವಿಕಸಿತಮಾಯ್ತು.
ನಿಗಮಗೋಚರ, ನಿನ್ನಡಿಯ ಹೊಂದಲೆಂದು;
ಅಗಲಿತೈ ಸಕಲ ಸೌಖ್ಯಂಗಳನು ನಿನಗಾಗಿ;
ಖಗರಾಜಗಮನ, ಒಲಿದಿದನು ನೀಂ ಧರಿಸು!

ಮಗಮಗಿಪ ವಾಸನೆಯು ಇದಕಿಲ್ಲದಿರಬಹುದು,
ಜಗವ ಮೋಹಿಸುವ ರೂಪಿಲ್ಲದಿರಬಹುದು;
ಸೊಗಯಿಪಾ ಪೆರ್ಮೆಯೊಂದಿದಕಿಲ್ಲದಾದೊಡೆಯು,
ನಗಧರನೆ, ಕರುಣೆಯಿಂದಿದನು ನೀಂ ಧರಿಸು!

ಸಂಪಗೆಯ ಸೊಂಪಿಲ್ಲ, ಕೇತಕಿಯ ಕಂಪಿಲ್ಲ,
ಪೆಂಪಿನಾ ಪಾದರಿಯ ಮಾಧುರ್ಯಮಿಲ್ಲ!
ಇಂಪುಬೆಡಗಿನಿತಿಲ್ಲದಾದೊಡೆಯು, ಮಾಧವನೆ,
ನೀಂ ಪೊರೆದಿದನು ಕೊರಳ ಹಾರದಲಿ ಧರಿಸು!