ಏಕೆ ರಮಣಿ ಮರುಗುವೆ,
ಏಕೆ ಕೊರಗುವೆ?
ಆರಿಗಾಗಿ ಕಾಯುವೆ,
ಏಕೆ ನೋಯುವೆ?

ಹುಡುಕಿಯವನ ಬನಗಳಲಿ
ತಿರುಗಿ ತೊಳಲಿದೆ;
ಕೂಗಿ ಕರೆದು ಹೊಳೆಯ ಬಳಿ
ಬರಿದೆ ಬಳಲಿದೆ.
ಇನಿಯಗಾಗಿ ಕಾಯುತಿಹೆ!
ವಿರಹದಿಂದ ನೋಯುತಿಹೆ!

ಅವನಿಗಾಗಿ ಹೂಗಳನು
ಬನದೊಳಾಯ್ದೆನು;
ಅವನಿಗಾಗಿ ಮಾಲೆಯನು
ಮುದದಿ ನೆಯ್ದೆನು;
ಕೈಯ ಮಾಲೆ ಬಾಡುತಿದೆ!
ಎದೆಯೊಳಳಲು ಮೂಡುತಿದೆ!

ಸುತ್ತಲಿರುಳು ಕವಿಯುತಿದೆ!
ನಲ್ಲ ಬಾರನೆ?
ಚಿತ್ತವಳುಕಿ ನಡುಗುತಿದೆ!
ಮೊಗವ ತೋರನೆ?
ಬರುವತನಕ ಕಾಯುವೆನು!
ಹರುಷಕಾಗಿ ನೋಯುವೆನು!